ಭಾರತಿ ನಲವಡೆ-ಸಂಕ್ರಾಂತಿಯ ಸಡಗರ

ಲೇಖನ

ಸಂಕ್ರಾಂತಿಯ ಸಡಗರ

ಭಾರತಿ ನಲವಡೆ

ಸವಿ ಸುಗ್ಗಿಗೆ  ಕಳೆ ತಂದಿದೆ ಸಡಗರದ ಸಂಕ್ರಾಂತಿ

ಮನಮನಗಳ ಬೆಸೆದು ದ್ವೇಷವ ಅಳಿಸಿ ತಂದಿದೆ ಶಾಂತಿ

ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡುವ

ಪ್ರೀತಿ ವಿಶ್ವಾಸದಿ ಬೆರೆತು ನಾವು ಬಾಳುವ

ಎಂಬಂತೆಕಳಚಿದ  ಮಾನವೀಯ ಬಾಂಧವ್ಯಗಳ ಕೊಂಡಿಯನ್ನು ಪುನಃ ಬೆಸೆವ ಸುಗ್ಗಿಯ ಸಭ್ರಮದ ಹಬ್ಬವಾಗಿದೆ.

ಹೆಂಗಳೆಯರು ರಂಗು ರಂಗಿನ ಹೊಸ ಉಡುಪುಗಳನ್ನು ಧರಿಸಿ ಜಡೆಗೆ ಹೂ ಮಾಲೆಗಳ ಅಲಂಕರಿಸಿದರೆ,ಹೊಸದಾಗಿ ಮದುವೆಯಾದ ಮಹಿಳೆಯರು ತನ್ನ ಮದುವೆಯಾದ ವರ್ಷದಿಂದ ಐದು ವರ್ಷಗಳ ಕಾಲ ಮುತ್ತೈದೆಯರಿಗೆ ಬಾಳೆಹಣ್ಣುಗಳನ್ನು ಕೊಡುವ ಸಂಪ್ರದಾಯವಾಗಿದೆ.ಉತ್ತರ ಕರ್ನಾಟಕದಲ್ಲಿ ಶೇಂಗಾಹೋಳಿಗೆ,ಮಾದಲಿ,ಐದು ತರಹದ ತರಕಾರಿಗಳ ಮಿಶ್ರಣದ ಪಲ್ಯ,ಸಜ್ಜಿರೊಟ್ಟಿ,ಮೊಸರು,ಚಟ್ನಿಗಳನ್ನು ತಯಾರಿಸಿ ಸೂರ್ಯನಿಗೆ ನೈವೇದ್ಯ ಮಾಡಿ ಸವಿಯುವ ಸಡಗರ ಹಬ್ಬದ ಸಂತಸವನ್ನು ದ್ವಿಗುಣಗೊಳಿಸುತ್ತದೆ.

ಪುಷ್ಯ ಮಾಸದಲ್ಲಿ ಬರುವ ಮಕರ ಸಂಕ್ರಾಂತಿಯನ್ನು “ಉತ್ತರಾಯಣ ಪುಣ್ಯಕಾಲ”ಎಂದು ಕರೆಯುತ್ತಾರೆ.ಹೀಗೆ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸುವ ಈ ಸಂಧಿಕಾಲಕ್ಕೆ ಸಂಕ್ರಾಂತಿ ಅಥವಾ ಸಂಕ್ರಮಣ ಎಂದು ಕರೆಯುತ್ತಾರೆ.ಮಳೆ,ಬೆಳೆ ಇಳೆಗೆ ಚೇತನವೀವ ಭಾಸ್ಕರ  ಸರ್ವರಿಗೂ ಸಿದ್ದಿ ಬುದ್ದಿ ಸಮೃದ್ಧಿಗಳನ್ನು ನೀಡಬಲ್ಲವನೆಂಬ  ನಂಬಿಕೆ ಅಚಲವಾಗಿದೆ.

ಈ ಹಬ್ಬದಲ್ಲಿ ದನಕರುಗಳ ಮೈ ತೊಳೆದು ಶೃಂಗರಿಸಿ ಬೀದಿಗಳಲ್ಲಿ ಹೊತ್ತಿಸಿದ ಬೆಂಕಿಯನ್ನುನೆಗೆದು ದಾಟಿಸುವ ಪದ್ಧತಿ ಇದೆ.ಇದನ್ನು “ಕಿಚ್ಚು ಹಾಯಿಸುವದು”ಎನ್ನುತ್ತಾರೆ.ಅವುಗಳ ಮೈ ಮಲಿನ ಕ್ರೀಮಿಗಳು ಬೆಂಕಿಯ ಶಾಖಕ್ಕೆ ಬಿದ್ದು ಸಾಯುತ್ತವೆ ಎಂಬ ವೈಜ್ಞಾನಿಕವಾದ ಮನೋಭಾವ ಸಂಪ್ರದಾಯಕೆ ನಿಖರತೆಯನ್ನು ಸಾರುತ್ತದೆ. ಗಾಳಿಪಟಗಳ ಚಿತ್ತಾರ ಸೂರ್ಯನ ಪಯಣವನ್ನು ಸ್ವಾಗತಿಸಿದರೆ ಮನೆಮುಂದಿನ ಅಂಗಳದಲ್ಲಿ ಹೆಂಗಳೆಯರ ರಂಗೋಲಿಯ ಬಿತ್ತರ ಹಬ್ಬದ ಸಂಭ್ರಮದ ಸೂಚಕವಾಗಿದೆ.

ಕಬ್ಬು,ಕಡಲೆ,ಬೆಲ್ಲ ,ಎಳ್ಳು ಬೆಲ್ಲ ಇವುಗಳನ್ನು ತಟ್ಟೆಯಲ್ಲಿಟ್ಟು ಮನೆಮನೆಗೆ ಹಂಚುವ ಸಂಪ್ರದಾಯವು ಬಹುದಿನಗಳ ವೈರತ್ವ ತೊಡೆದು ಬಾಂಧವ್ಯವನ್ನು ಹೊಸೆಯುತ್ತದೆ.

ಹೀಗೆ ಸವಿ ಸಂಕ್ರಾಂತಿಯ ಸಡಗರ ಮನಮನಗಳಲಿ ಎಳ್ಳು ಬೆಲ್ಲದ ಸವಿಯ ಅಚ್ಚಾಗಿಸಿ ಒಳಿತ ಬಯಸುವ ದಾರಿಯ ಮೆಚ್ಚುವ ಸರ್ವರ ಸುಖದ ಕೆಚ್ಚಾಗಿಸುವಂತೆ ಬದುಕ ಸವೆಸುವ ಸಂದೇಶ ನೀಡುವ ಹಬ್ಬವಾಗಿದೆ ಅಲ್ಲವೇ?


One thought on “ಭಾರತಿ ನಲವಡೆ-ಸಂಕ್ರಾಂತಿಯ ಸಡಗರ

Leave a Reply

Back To Top