ಸಂಕ್ರಾಂತಿ ವಿಶೇಷ-ಸಂಕ್ರಾಂತಿ ಸಂಭ್ರಮ

ಕಾವ್ಯ ಸಂಕ್ರಾಂತಿ

ಸಂಕ್ರಾಂತಿ ಸಂಭ್ರಮ

ಶಿವಲೀಲಾ ಹುಣಸಗಿ ಸಂಕ್ರಾಂತಿ ಸಂಭ್ರಮಕೆ

ಸಂತಸದ ಉಡುಗೊರೆ

ಒಕ್ಕೊರಲಿನ ಒಕ್ಕುವಿಕೆ

ಮನೆಯಂಗಳದ ಅಂಬರಕೆ

ನೋವು ನಲಿವಿನ

ತಳಿರು ತೋರಣ

ಎಳ್ಳು ಬೆಲ್ಲದ‌ ಸಮ್ಮಿಶ್ರಣ

ಸಂಕ್ರಮಣದ ಶುಭಾರಂಭ…

ಮುಂಜಾವು ಕರಿಯೆಳ್ಳ ಸ್ನಾನ,ಪೂಜೆ ಎಳ್ಳಿನ ಹೋಳಿಗೆ, ಲಾಡು,ಪೂಜೆ ಪುನಸ್ಕಾರ ಎಲ್ಲವೂ ಮನಗೆ ಖುಷಿಯೋ ಖುಷಿ. ಲಂಗದಾವಣಿ, ಲಂಗಾಬೌಜು ಧರಿಸಿ ಎರಡ ಹೆರಳ ಹರಣೆದು ಕೈತುಂಬ ಬಣ್ಣ ಬಣ್ಣದ ಬಳೆ ತೊಟ್ಟು ಝಣ್ ಝಣ್ ಗೆಜ್ಹೆಸದ್ದಿನಲಿ ಬಟ್ಟಲತುಂಬ ಎಳ್ಳು,ಬೆಲ್ಲ,ಪುಟಾಣಿ, ಹುರಿಗಡಲೆ,ಕಾಯಿ ತುಂಬಿಕೊಂಡು ಗೆಳತಿಯರ ಗುಂಪಿನೊಂದಿಗೆ ಮನೆಮನೆಗೆ ಹೋಗಿ “ತಿಳಗುಳ್ ಗೇಯಾ ಗೊಡ್ಗೊಡ್ ಬೊಲಾ”, ಎಳ್ಳು ಬೆಲ್ಲ ತಿಂದು ಸಿಹಿಸಿಹಿ ಮಾತಾಡಿ ಅನ್ನುತ್ತ ಕೊಟ್ಟು ನಮಸ್ಕರಿಸಿ ಅವರು ಕೊಡೊ ತಿಂಡಿ,ದುಡ್ಡು ತಗೊಂಡು ಕುಣಿಯುತ್ತ ಓಡಾಡುವ ಸಮಯ ನೆನೆದು ಮನಸ್ಸು ಇನ್ನೂ ಮಕ್ಕಳಾಗಿಯೇ ಇರಬೇಕಿತ್ತು‌ ಅನ್ನಿಸದೇ ಇರಲಿಲ್ಲ.

ಸಂಕ್ರಾಂತಿ ಹಬ್ಬ ಹಳ್ಳಿಗರ ಮಧ್ಯೆಯೇ ಸೃಷ್ಟಿಯಾದ ಹಬ್ಬ ಸಂಕ್ರಾಂತಿ ಜಾನುವಾರುಗಳಿಗೆ ಮೀಸಲಾದ ವಿಶೇಷ ಹಬ್ಬ.ಕಿಚ್ಚು ಹಾಯಿಸುವುದು ದನಕರುಗಳನ್ನು ಬೆಂಕಿಯಲ್ಲಿ ಜಿಗಿಸುವುದು .ಹಳ್ಳಿಗಳಲ್ಲಿ ಗೌಡಕಿ ಮಾಡುವವರು,ಅಥವಾ ಮುಂದಾಳತ್ವ ವಹಿಸಿಕೊಂಡವರು ವರ್ಷದ ಕೊನೆಯಲ್ಲಿ ಜಗಳವಾಡಿದವರನ್ನು ಒಂದೆಡೆ ಸೇರಿಸಿ ,ಅವರಿಂದ ಇವರಿಗೆ ,ಇವರಿಂದ ಅವರಿಗೆ ಎಳ್ಳು ಬೆಲ್ಲ ಕೊಡಿಸಿ ರಾಜಿ ಮಾಡಿಸುತ್ತಿದ್ದರಂತೆ ನಮ್ಮ ಅಮ್ಮ ಆಗಾಗ ಹೇಳುತ್ತಿದ್ದಳು.

ಸಂಕ್ರಾಂತಿ ದಿನದಿಂದ ಸೂರ್ಯನು ದಕ್ಷಿಣದಿಂದ ಉತ್ತರ ದಿಕ್ಕಿಗೆ ಸ್ವಲ್ಪ ಸ್ವಲ್ಪ ಸಂಚರಿಸಲುಶುರುವಿಡುತ್ತಾನೆ. ಸಂಕ್ರಾಂತಿಯ ಮರುದಿನದಿಂದಲೇ ಹಗಲು ದೀರ್ಘವಾಗುತ್ತದೆ. ರಾತ್ರಿಯ ಅವಧಿ ಸಹಜವಾಗಿಯೇ ಕಡಿಮೆಯಾಗುತ್ತದೆ. ಉತ್ತರಾಯಣ ಪುಣ್ಯಕಾಲ ಬರೋದು ವರ್ಷದಲ್ಲಿ ಒಂದು ದಿನಮಾತ್ರ. ಅಂದು ಸ್ವರ್ಗದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆಯಿದೆ.ಸಂಕ್ರಾಂತಿ ಸೂರ್ಯಾರಾಧನೆಯ ಹಬ್ಬವಾಗಿದೆ. ಮಕರ ಸಂಕ್ರಾಂತಿ ಪ್ರಸಿದ್ದವಾಗಿರುವ ಸುಗ್ಗಿಯ ಕಾಲದ ಹಬ್ಬ.ಇದನ್ನು ಪೊಂಗಲ್  ಎಂದು ಕರೆಯಲಾಗುತ್ತದೆ. ಪೊಂಗಲ್ಎಂದರೆ ಅಕ್ಕಿ ತುಪ್ಪ,  ಹಾಲು,  ಸಕ್ಕರೆ ಅಥವಾ ಬೆಲ್ಲಗಳಿಂದ ಮಾಡಿದ ಸಿಹಿ ಖಾದ್ಯ. ಸುಗ್ಗಿಯ ಉತ್ಪನ್ನಗಳಿಂದ ಮಾಡಿದ ಇದನ್ನು ಸೂರ್ಯದೇವನಿಗೆ ನೈವೇದ್ಯಮಾಡಲಾಗುವುದು.

ಎಳ್ಳು, ಸಕ್ಕರೆ – ಅಚ್ಚುಗಳನ್ನು ನೆರೆಯವರಿಗೆ ಬಂಧು ಮಿತ್ರರಿಗೆ ಹಂಚುವ ನಲ್ಮೆಯ ಸಾಮಾಜಿಕ ಸಂಪ್ರದಾಯ ಈ ಹಬ್ಬದ ಒಂದು ವಿಶೇಷ. ದನಕರುಗಳಿಗೆ ಮೈ ತೊಳೆದು – ಭೂತಪೀಡೆಗಳಿಂದ ಅವುಗಳನ್ನು ರಕ್ಷಿಸುವ ಸಲುವಾಗಿ – ಬೀದಿಗಳಲ್ಲಿ ಹೊತ್ತಿಸಿದ ಬೆಂಕಿಯನ್ನು ನೆಗೆದು ದಾಟಿಸುವುದು ಉಂಟು.ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸುವ ಸಂಧಿ ಕಾಲಕ್ಕೆ ಸಂಕ್ರಾಂತಿ ಅಥವಾ ಸಂಕ್ರಮಣ ಎಂದು ಹೆಸರು ಸೌರಮಾನದ ಪ್ರಕಾರ ಸೂರ್ಯನು ಮೇಷಾದಿ ಹನ್ನೆರಡು ರಾಶಿಗಳನ್ನು ಪ್ರವೇಶಿಸುವಾಗಲೂ ಸಂಕ್ರಾಂತಿ ಬರುತ್ತದೆ. ಆದರೆ ಅವುಗಳಲ್ಲಿ ಕರ್ಕಾಟಕ ಸಂಕ್ರಾಂತಿ ಹಾಗೂ ಮಕರ ಸಂಕ್ರಾಂತಿಗಳು ದಕ್ಷಿಣಾಯನ, ಉತ್ತರಾಯಣಗಳ ಪ್ರಾರಂಭದ ದಿನಗಳಾದ್ದರಿಂದ ವಿಶೇಷ ಮಹತ್ವವುಳ್ಳವುಗಳಾಗಿವೆ.

ಸಂಕ್ರಾಂತಿ ಒಂದು ವಿಧದಲ್ಲಿ ಸೂರ್ಯಾರಾಧನೆ. ಸೂರ್ಯ ಆತ್ಮಾ ಜಗತಃ ತಸ್ಥುಷಶ್ಚ ಸೂರ್ಯದೇವ ವಿಶ್ವದ ಆತ್ಮ; ಜಗತ್ತಿನ ಕಣ್ಣು; ಮಳೆ ಬೀಳಲು, ಬೆಳೆ-ಬೆಳೆಯಲು, ಇಳೆ ಬೆಳಗಲು ಸೂರ್ಯನೇ ಕಾರಣ ಆ ಸವಿತೃ ದೇವನ ದಿವ್ಯ ತೇಜಸ್ಸು ನಮಗೆ ಸಿದ್ದಿ ಬುದ್ದಿ ಸಮೃದ್ದಿಗಳನ್ನು ನೀಡಬಲ್ಲದು.ಉತ್ತರಾಯಣ ಪುಣ್ಯ ಕಾಲ : ಸಾಮಾನ್ಯವಾಗಿ ಪುಷ್ಯ ಮಾಸದಲ್ಲಿ ಬರುವ (ಜನವರಿ 13 ಅಥವಾ 14 ರಂದು) ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯಕಾಲವೆಂದು ಕರೆಯುತ್ತಾರೆ. ಕೇವಲ ಬದುಕುವುದಕ್ಕೆ ಮಾತ್ರವಲ್ಲ ಸಾಯುವುದಕ್ಕೂ ಉತ್ತರಾಯಣ ಪುಣ್ಯಕಾಲ ಶ್ರೇಷ್ಠವೆಂದು ಹೇಳಲಾಗಿದೆ. ಅದಕ್ಕಾಗಿಯೇ ಭೀಷ್ಮ ದೇಹ ತ್ಯಜಿಸಲು, ಉತ್ತರಾಯಣದ ಕಾಲದವರೆಗೂ, ಶರಶಯ್ಯೆಯಲ್ಲಿ ಹರಿಸ್ಮರಣೆ ಮಾಡುತ್ತಾ ಕಾದಿದ್ದರು. ಉತ್ತರಾಯಣ, ದೇವತೆಗಳ ಕಾಲ, ದಕ್ಷಿಣಾಯನ ಪಿತೃಗಳ ಕಾಲವಾಗಿರುತ್ತದೆ. ಆದ್ದರಿಂದ ಯಜ್ಞ ಯಾಗಾದಿಗಳಿಗೆ, ಸಮಸ್ತ ದೇವತಾ ಕಾರ್ಯ ಶುಭಕಾರ್ಯಗಳಿಗೆ ಉತ್ತರಾಯಣ ಕಾಲ ಶ್ರೇಷ್ಠವಾಗಿದೆ.

ಕೃಷಿಕರ ಮನೆಯಲ್ಲಿ ದನಕರುಗಳ ಜಾಗಕ್ಕೆ ಟ್ರಾಕ್ಟರ್ ಬಂದು ನಿಂತಿದೆ.ಕಾರಣ ನಮ್ಮ ಜೀವನದಲ್ಲಿ ಬದಲಾದ ಬೆಳವಣಿಗೆ.ಪ್ರತಿ ಮನೆಯಲ್ಲಿ ಒಂದು ಹಸುವಾದರೂ ಹಿಂದೆ ಇರುತ್ತಿತ್ತಂತೆ.ಹಾಲು ಹೈನಕೆ ಬರ ಬಾರದಿರಲೆಂದು.ಈಗೆಲ್ಲ ಅಲ್ಪಸ್ವಲ್ಪ ಅಲ್ಲಲ್ಲಿ ಉಳಿದಿದೆ.ನಮ್ಮ ಸಂಕ್ರಾಂತಿಯಲ್ಲಿ ಸಂಸ್ಕೃತಿ ಸಂಪ್ರದಾಯಗಳ – ಜೊತೆ ಸಮೃದಿ ಐಶ್ವರ್ಯಗಳು , ಸಂಭ್ರಮ , ಸೊಬಗು ತುಂಬಿರಬೇಕು. ಸಂಕ್ರಾಂತಿಯಂದು ದನಕರುಗಳ ಮೈ ತೊಳೆದು,ಕೊರಳಿಗೆ ಗೆಜ್ಜೆ ಕಟ್ಟಿ ಕೊಂಬಿಗೆ ಬಣ್ಣ ಬಳಿದು ,ಟೇಪು ಕಟ್ಟಿ , ಹೂವು ಮುಡಿಸಿ , ತರಹೇವಾರಿ ಬಲೂನ್ ಕಟ್ಟಿ ಶೃಂಗಾರ ಮಾಡುತ್ತಿದ್ದರು ಚಳಿಗಾಲದಲ್ಲಿ ಸಾಮಾನ್ಯವಾಗಿ  ಒಡೆದಿರುತ್ತದೆ . ದೇಹದಲ್ಲಿಕೊಬ್ಬಿನ ಅಂಶಕಡಿಮೆಯಾಗಿರುತ್ತದೆ . ಸಂಕ್ರಾಂತಿಯಂದು ಎಳ್ಳು , ಬೆಲ್ಲ , ಕೊಬ್ಬರಿಯನ್ನು ತಿಂದರೆ ಕಳೆದು ಹೋದ ಕೊಬ್ಬಿನ ಅಂಶ ಬೇಗನೆ ಸಿಗುತ್ತದೆ.ಎಳ್ಳು ಬೆಲ್ಲ ಕೊಬ್ಬರಿಯಲ್ಲಿ ಅತ್ಯಧಿಕ ಕೊಬ್ಬಿನ ಅಂಶವಿರುವುದರಿಂದ ಸಂಕ್ರಾಂತಿಯ ನೆಪದಲ್ಲಿ ಈ ಮಿಶ್ರಣವನ್ನು ತಿನ್ನುತ್ತಾರೆ.ಆಗ ದೇಹದ ಚರ್ಮ ತಂತಾನೇ ಸರಿ ಹೋಗುತ್ತದೆ.

ಸಂಕ್ರಾಂತಿ ದಿನದಿಂದ ಸೂರ್ಯನು ದಕ್ಷಿಣದಿಂದ ಉತ್ತರ ದಿಕ್ಕಿಗೆ ಸ್ವಲ್ಪ ಸ್ವಲ್ಪ ಸಂಚರಿಸಲುಶುರುವಿಡುತ್ತಾನೆ. ಸಂಕ್ರಾಂತಿಯ ಮರುದಿನದಿಂದಲೇ ಹಗಲು ದೀರ್ಘವಾಗುತ್ತದೆ. ರಾತ್ರಿಯ ಅವಧಿ ಸಹಜವಾಗಿಯೇ ಕಡಿಮೆಯಾಗುತ್ತದೆ. ಉತ್ತರಾಯಣ ಪುಣ್ಯಕಾಲ ಬರೋದು ವರ್ಷದಲ್ಲಿ ಒಂದು ದಿನಮಾತ್ರ. ಅಂದು ಸ್ವರ್ಗದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆಯಿದೆ.ಸೂರ್ಯನು ಇದೇ ಜನವರಿ 13 ರಂದು ರಾತ್ರಿ 12 ಗಂಟೆ 57 ನಿಮಿಷಕ್ಕೆ ನಿರಯಣ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಈ ವೇಳೆಗೆ ರಾತ್ರಿಯಾಗಿದ್ದರಿಂದ ಜನವರಿ 14ರಂದು ಮಕರ ಸಂಕ್ರಾತಿಯನ್ನು ಆಚರಿಸಲಾಗುತ್ತದೆ. 14ರಂದು ಹಗಲು ಪೂರ್ತಿ ಅಂದರೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಪುಣ್ಯ ಕಾಲವಿರುತ್ತದೆ. ಈ ಪುಣ್ಯ ಕಾಲದಲ್ಲಿ ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ, ಎಳ್ಳು ದಾನ ಮಾಡಬೇಕು. ದೇವಸ್ಥಾನಗಳಲ್ಲಿ ಎಳ್ಳೆಣ್ಣೆ ದೀಪ ಹಚ್ಚಬೇಕು. ಮಾಡಿದ ದಾನ, ಜನ್ಮ ಜನ್ಮದಲೂ ಸದಾ ನಮಗೆ ಸಿಗುವಂತೆ ಸೂರ್ಯನು ಅನುಗ್ರಹಿಸುತ್ತಾನೆ. ಇದಕ್ಕಾಗಿಯೇ ಎಳ್ಳು – ಬೆಲ್ಲ ಹಂಚುವ ಪ್ರಕ್ರಿಯೆ ಬದುಕಿನ ಸಂಕಷ್ಟ ದೂರಾಗಲೆಂದು ಹಾರೈಸುವ ಹಬ್ಬಕೆ ಶುಭವಾಗಿ..


7 thoughts on “ಸಂಕ್ರಾಂತಿ ವಿಶೇಷ-ಸಂಕ್ರಾಂತಿ ಸಂಭ್ರಮ

  1. ಸಂಕ್ರಾಂತಿ ಆಚರಿಸಿದಷ್ಟೆ ಸಂತೋಷವಾಯಿತು.ನಿನ್ನ ಬರವಣಿಗೆಯ ಸಾಲುಗಳು ಓದಿ. ಸೂಪರ್

  2. ಸಂಕ್ರಾಂತಿಯ ಸಡಗರ ಕುರಿತು ತುಂಬಾ ಚೆನ್ನಾಗಿ ಬರೆ ದಿರುವಿರಿ.ಅಭಿನಂದನೆಗಳು

  3. ಸಂಕ್ರಾಂತಿ ಹಬ್ಬದ ಲೇಖನ ಅತ್ಯಂತ ಸುಂದರವಾಗಿ ಮೂಡಿ ಬಂದಿದೆ.
    ಯಶೋದಾ ಭಟ್ಟ ದುಬೈ

  4. ಅತೀ ಸುಂದರ ಸುಲಲಿತ ಲೇಖನ… ಓದುವುದರೊಂದಿಗೆ ಕಣ್ಣಮುಂದೆ ಸುಂದರ ಚಿತ್ರಣ ಮಾತ್ರವಲ್ಲದೆ ಆದ ಮನೋಲ್ಲಾಸ ಅಪಾರ.ಅಭಿನಂದನೆಗಳು ಸಾಹಿತ್ಯ ದ ಮೃಷ್ಟಾನ್ನ ಭೋಜನ ಉಣಿಸಿದ ತಮಗೆ ಶರಣು ಶರಣು .

  5. ಸಂಕ್ರಾಂತಿ ಹಬ್ಬದ ಕುರಿತು ತುಂಬಾ ಚೆನ್ನಾಗಿ ಬಣ್ಣಿಸಿದ್ದೀರಿ.

Leave a Reply

Back To Top