ಸಂಕ್ರಾಂತಿ ವಿಶೇಷ-ಸಂಕ್ರಾಂತಿ ಸೂರ್ಯ

ಕಾವ್ಯ ಸಂಕ್ರಾಂತಿ

ಸಂಕ್ರಾಂತಿ ಸೂರ್ಯ

ಅನಿತಾ ಪಿ. ತಾಕೊಡೆ

ಇರುಳು ಹಿರಿದಾಗಿ ಹಗಲು ಕಿರಿದಾದರೂ
 ದಕ್ಷಿಣಾಯಣದ ಪಥದ ತಿರುಗಿನಲಿ ಲೀನವಾದರೂ
ಹದವರಿತು ಹೆಜ್ಜೆಯಿಟ್ಟ ಭೂರಮೆಯ ಸೊಗಸುಗಾರ
ಅಣಿಯಾಗಿರುವನು ಉತ್ತರಾಯಣದ ಕಡೆಗೆ

 ದಾಟಿ ಬಂದ ಪರಿಧಿಯಲಿ
ಸೀಮಿತ ಅವಧಿಯಲಿ ಎಷ್ಟೊಂದು ಕೆಲಸಗಳಿತ್ತು
ಮೋಡ ಹನಿಗೂಡಬೇಕು ಬೀಸು ಗಾಳಿಯ ಕಡೆಗೆ ಹಾಯಬೇಕು
ಬೀಜವೊಡೆದು ಮಣ್ಣಿನೆದೆಯಲಿ ಚಿಗುರು ಮೊಳೆಯಬೇಕು
ಪಚ್ಚೆ ಪೈರಿನ ತೆನೆ ತುಂಬಿ ತೂಗಿ ಮಾಗಿ ಕಟಾವಿಗೆ ಬರಬೇಕು

ಅಗಣಿತ ಭಾರವನು ಹೊತ್ತು ಸಾಗುತ್ತಿರುವಾಗ
ಋತುಮಾನದ ಆಯತಪ್ಪಿ ಕಾರಿರುಳಿನ ಹಾದಿಗಳೇ ಹೆಚ್ಚಿತ್ತು
ಎಲ್ಲವನೂ ಆನಿಸಿ ನಿತ್ಯ ಪಥದಲಿ ಗುರಿಯೊಂದನೇ ಧ್ಯಾನಿಸಿ
ನಿಂತಿಹನು ಪುಷ್ಯ ಮಾಸದ ಮಕರ ಸಂಕ್ರಾಂತಿಯ ಹೊಸ್ತಿಲಲಿ

ಮನೆಮನೆಯಲಿ ಹೂವಿನ ಸಿಂಗಾರ ಅಂಗಳದಲಿ ರಂಗೋಲಿ 
ಎಳ್ಳು ಬೆಲ್ಲದ ಜೊತೆಗೆ ಸುಗ್ಗಿಯ ಹಿಗ್ಗಿನ ಕುಣಿತದ ಸಂಭ್ರಮ
ಆಗಸದಲಿ ಭಾವ ಬಣ್ಣಗಳ ಪತಂಗಗಳ ಮೇಳ
ಎಲ್ಲವೂ ಅವನಿಗಾಗಿ

ಏಗಿ ಬಾಗಿದರೂ ಕಳೆಗುಂದದ ಅವನ ತೇಜಸ್ಸನ್ನು ಕಂಡಾಗಲೆಲ್ಲ
ಅಜ್ಜಿ ಬಹುವಾಗಿ ಕಾಡುತ್ತಾಳೆ
‘ಆ ಸೂರ್ಯ ದೇವನಿಗೇ ಗ್ರಹಣ ಬಂದಿದೆ 
ನಮಗೇನು ಮಹಾ’ ಎಂದು ಬಹುವಾಗಿ ನೊಂದು
ಜಗದೊಡೆಯನ ಕಷ್ಟ  ತನ್ನದೆಂದುಕೊಂಡು  
ಅನ್ನಾಹಾರವನು ತ್ಯಜಿಸಿ ಗ್ರಹಣ ಕಳೆಯುವವರೆಗೆ ಕಾಯುತ್ತಾಳೆ 

ಅವನೆಂದರೆ ಹೋರಾಟ, ಅವನೆಂದರೆ ಆಧ್ಯಾತ್ಮ 
ಅದೆಷ್ಟೋ ಗ್ರಹಣಗಳ ಬೇಗೆಗೆ ಸಿಲುಕಿದರೂ ಸೋಲುವುದಿಲ್ಲ
ಈ ಸೃಷ್ಠಿಯಲಿ ಎಲ್ಲವೂ ಮುಕ್ತವಾಗಿರುವಾಗ
ಇನಿತು ಅವಕಾಶಗಳು ಸಾಕು; ಕಾಯವು ವೃತವಾಗಲು
ವಿಶಾಲವಾಗುವುದು ಹಾದಿ ಉತ್ತರಾಯಣದಂತೆ


ಅನಿತಾ ಪಿ. ತಾಕೊಡೆ

8 thoughts on “ಸಂಕ್ರಾಂತಿ ವಿಶೇಷ-ಸಂಕ್ರಾಂತಿ ಸೂರ್ಯ

  1. ಸಂಕ್ರಾಂತಿ ಹಬ್ಬದ ಶುಭಾಶಯಗಳು
    ಸಂಕ್ರಾಂತಿಗಯ ಒಳ್ಳೆಯ ಕವನ
    ಶುಭವಾಗಲಿ

  2. ಜಗದ ನಿರಂತರ ಚಟುವಟಿಕೆಗಳಿಗೆ ನವಚೈತನ್ಯ ನೀಡುತ್ತಿದ್ದರೂ ಅದರ ಯಾವ ಆಮಿಷಕ್ಕೂ ಅಂಟದೆ ಪೊರೆವ ಸೂರ್ಯದೇವನನ್ನು ನೆನೆದು ಗುಣಗಾನಿಸಿದ ನಿಮ್ಮ ಕವನ ಅರ್ಥಪೂರ್ಣ ಅನಿತಾ ಮೇಡಮ್, ಶುಭಾಶಯ…

  3. *ಸಂಕ್ರಾಂತಿ ಹಬ್ಬದ ಶುಭಾಶಯ*

    ದಿನಕರನು ತನ್ನ ರಥದ ಪಥ ಬದಲಿಸಿ ಚಲಿಸುತ್ತಿರಲು
    ಮಾಗಿಯ ಚಳಿಯಲಿ ಎಲ್ಲರು ಗಡ ಗಡ ನಡುಗುತ್ತಿರಲು
    ಮಾಮರದೆಲೆ ಮರೆಯಲಿ ಕೋಗಿಲೆಯ ಕುಹೂ ಕೇಳುತ್ತಿರಲು
    ನವಿಲೊಂದು ಗರಿಬಿಚ್ಚಿ ಕುಣಿಯುತ್ತಿರಲು
    ಭೂರಮೆ ಹಸಿರುಟ್ಟು ಶೋಭಿಸುತ್ತಿರಲು
    ಈ ಸೊಬಗ ಸವಿಯುತ್ತ
    ಮನದ ದುಗುಡ ದ್ವೇಷವ ಮರೆಯುತ
    ಸ್ನೇಹ ಭಾವದಿ ಬೆರೆಯುತ
    ಎಳ್ಳು ಬೆಲ್ಲ ಹಂಚುತ
    ಬನ್ನಿ ಜೊತೆಯಾಗೋಣ
    ನಾಡಿನ ಮೊದಲ ಹಬ್ಬ
    *ಮಕರ ಸಂಕ್ರಾಂತಿ* ಯ
    ಆಚರಿಸೋಣ

Leave a Reply

Back To Top