ಅಂಕಣ ಸಂಗಾತಿ

ಸಿನಿ ಸಂಗಾತಿ

ಕುಸುಮ ಮಂಜುನಾಥ್

ಲಾಸ್ಟ್ ಆರ್ಡರ್(ಕಿರುಚಿತ್ರ)

ಅದು ರಾತ್ರಿಯ ಸಮಯ ,ನಗರದ  ನೈಟ್ ಲೈಫ್ ನ ದೃಶ್ಯ ,ಅಲ್ಲೊಬ್ಬ ಯುವತಿ ಸ್ಕೂಟರ್ ನಲ್ಲಿ ಹೋಗುತ್ತಿದ್ದಾಳೆ, ಬೆನ್ನಿಗೆ ದೊಡ್ಡದೊಂದು ಝೊಮ್ಯಾಟೋ ದ ಚೀಲ ಝೊಮ್ಯಾಟೋದ ಫುಡ್ ಡೆಲಿವರಿ ಮಾಡುವ ಹುಡುಗಿ ಆಕೆ, ಆಹಾರ ತಲುಪಿಸುವ ತರಾತುರಿಯಲ್ಲಿದ್ದಾಳೆ. ಹೋಟೆಲ್ ಗೆ ಹೋಗಿ ಆರ್ಡರ್ ಮಾಡಿದ ಆಹಾರ ತೆಗೆದುಕೊಂಡು ಗ್ರಾಹಕರಿಗೆ ತಲುಪಿಸುವ ಆತುರದಲ್ಲಿದ್ದಾಳೆ , ಮುಖದಲ್ಲಿ ಒತ್ತಡ ಕಾಣುತ್ತಿದೆ.,,!!

       ಇಡಿ ಕಿರು ಚಿತ್ರ ಸಾಗುವುದು ಅವಳ ವೃತ್ತಿಯ ದರ್ಶನದಲ್ಲಿ ಅವಳು ಕೆಲಸ ಮಾಡುವ ಪರಿ. ಅಲ್ಲಿನ ವಾತಾವರಣ ಇವೆಲ್ಲ ನಮ್ಮ ಕಣ್ಣು ಮುಂದೆ  ಕಾಣುತ್ತಿರುತ್ತದೆ . ಎರಡು, ಮೂರು ಕರೆಗಳನ್ನು ಆಕೆ ಮುಗಿಸಿದ್ದಾಳೆ ,ರಾತ್ರಿ  10 ಗಂಟೆಯ ಸಮಯ ಮನೆಯಿಂದ ಅವಳ ಅಮ್ಮನ ಕರೆ , ಅಮ್ಮನಿಗಾಗಿ ಇನ್ಸುಲಿನ್ ಕೂಡ ಅವಳೇ ತೆಗೆದುಕೊಂಡು ಹೋಗಬೇಕು ಅಂದಿನ ಅವಳ ಕೊನೆಯ ಆರ್ಡರ್ ಈ ಚಿತ್ರದ ಸ್ವಾರಸ್ಯ.

         ಈ ಕಿರು ಚಿತ್ರದ ಹೆಸರೇ ಹೇಳುವಂತೆ ‘ಲಾಸ್ಟ್ ಆರ್ಡರ್ ‘ ಅವಳ ಅಂದಿನ ಕೊನೆಯ ಕರೆ ಚಿತ್ರಕ್ಕೆ ಬಹಳ ಮುಖ್ಯ .ಅಂದಿನ ಅವಳ ಕೊನೆಯ ಆರ್ಡರ್ ಪಾರ್ಸೆಲ್ ತಲುಪ ಬೇಕಾಗಿರುವುದು ಒಂದು ಹೋಟೆಲ್ಲಿಗೆ , ಅದು ಮಹಿಳೆ ಒಬ್ಬಳ ಕರೆ. ಬೇಗ ಪಾರ್ಸೆಲ್ ತಲುಪಿಸಬೇಕೆಂದು ತಾಕೀತು , ಜೊತೆಗೆ ನೀರು ಬಾಟಲ್ ಸಿಗರೇಟ್ ಸಹ ತರಲು ಆಗ್ರಹ.

          ಒಂದೆಡೆ ಸಮಯದ ಅಭಾವ ,ಮತ್ತೊಂದೆಡೆ ಗಾಡಿ ಚಲಾವಣೆಯ ಕಷ್ಟ, ಬೈಕ್ ನಲ್ಲಿ ಹಿಂಬಾಲಿಸುತ್ತಿರುವ ವ್ಯಕ್ತಿಯಿಂದಲೂ ತಪ್ಪಿಸಿಕೊಳ್ಳಬೇಕಾದ ಪರಿಸ್ಥಿತಿ, ಬೇಗ ಹೋಟೆಲ್ ತಲುಪಿ ಲಿಫ್ಟಿನಲ್ಲಿ ಹೋಗಿ ಕೋಣೆಯ ಬಾಗಿಲು ಮುಂದೆ ನಿಂತು ಬೆಲ್ ಮಾಡುತ್ತಾಳೆ, ಅವಳು ಬಾಗಿಲು ತೆಗೆದ ವ್ಯಕ್ತಿಯನ್ನು ನೋಡಿ ಒಂದು ಗಳಿಗೆ ಅವಳಿಗೆ ಆಘಾತ..!!! ಆ ವ್ಯಕ್ತಿ ಯೂ  ಆ ಗಳಿಗೆಯಲ್ಲಿ ಅವಳನ್ನು ನೋಡಿ ತಬ್ಬಿಬ್ಬುಗೊಳ್ಳುತ್ತಾನೆ…!!

          ಈ ದೃಶ್ಯದ ಆರಂಭದಲ್ಲಿ ಅವಳ ಮನೆಯ ಫ್ಲಾಷ್ ಬ್ಯಾಕ್ ದೃಶ್ಯ ನೋಡಬಹುದು. ಅಲ್ಲಿ ಬೆಳಗ್ಗೆ ಅವಳು ಕೆಲಸಕ್ಕೆ ಹೊರಡುವ ತರಾತುರಿಯಲ್ಲಿದ್ದಾಳೆ , ಯುನಿಫಾರ್ಮ್ ಧರಿಸಿ ಹೆಲ್ಮೆಟ್ ಹಾಕಿಕೊಳ್ಳುತ್ತಿರುವಾಗ ಅವಳ ತಮ್ಮ ಬಾಗಿಲಿಗೆ ಬರುತ್ತಾನೆ , ಕಾಲೇಜಿಗೆ ಫೀಸ್ ಕಟ್ಟಲು ಅಕ್ಕನನ್ನು ಹಣ ಕೇಳುತ್ತಾನೆ , ಆ ಹುಡುಗಿ “ಈಗ ಇಲ್ಲ ನಾಳೆ ಹೊಂದಿಸಿ ಕೊಡುತ್ತೇನೆ “ಎಂದು ಹೇಳಿ ಅಲ್ಲಿಂದ ತನ್ನ ಕೆಲಸಕ್ಕೆ ಹೊರಡುತ್ತಾಳೆ.

          ಅಂದಿನ ಅವಳ ಕೊನೆಯ ಆರ್ಡರ್ ನಿಂದ ಬರಬೇಕಾಗಿದ್ದ ಬಾಕಿ ಹಣವನ್ನು ಅವಳು ಪಡೆಯುವುದಿಲ್ಲ!! ಬದಲಾಗಿ ಬಾಗಿಲು ತೆಗೆದ ವ್ಯಕ್ತಿಗೆ ಹಣವನ್ನು ಇರಿಸಿಕೊಳ್ಳಲು ಹೇಳುತ್ತಾಳೆ.  ಆ ವ್ಯಕ್ತಿಗೂ ಇವರಿಗೂ ಇರುವ ಸಂಬಂಧವೇನು ಅವಳೇಕೆ ಅವನಿಂದ ಬಾಕಿ ಹಣ ಪಡೆಯಲಿಲ್ಲ? ಅವಳೇಕೆ ಅವನ ಕೆನ್ನೆಗೆ ಹೊಡೆದಳು? ಅಲ್ಲಿಂದ ಹೋಗುವ ಅವಳ ಕಣ್ಣಿನಲ್ಲಿ ತುಂಬುವ ನೀರು ಏನನ್ನು ಸೂಚಿಸುತ್ತದೆ? ಇವೆಲ್ಲಕ್ಕೆ ಉತ್ತರ ಪಡೆಯಬೇಕಾದರೆ ಈ ಕಿರುಚಿತ್ರ ಲಾಸ್ಟ್ ಆರ್ಡರ್ ನೋಡಬೇಕು.

              ಸತ್ಯ ಹೆಗಡೆ ಸ್ಟುಡಿಯೋಸ್ ನ ಈ ಕಿರುಚಿತ್ರ ಬಹಳ ಆ ಮಾರ್ಮಿಕವಾಗಿದ್ದು ಮನಮಿಡಿಯುವಂತಿದೆ ಈ ಕಿರುಚಿತ್ರ ನಗರದ ರಾತ್ರಿ ಜೀವನದ (ನೈಟ್ ಲೈಫ್) ನ ಪರಿಚಯ ಮಾಡಿಸುತ್ತದೆ .ಮಧ್ಯಮ ವರ್ಗದ ಜನರ ಹಣಕಾಸಿನ ಪರಿಸ್ಥಿತಿ ತುತ್ತಿನ ಚೀಲ ತುಂಬಲು ಅವರು ಪಡುವ ಕಷ್ಟ ನಿಯತ್ತಿನಿಂದ ಸಂಪಾದಿಸಿದ ಹಣ ಪೋಲಾದರೆ ಆಗುವ ದುಃಖ ಇವೆಲ್ಲವುಗಳ ಪರಿಣಾಮಕಾರಿ ಚಿತ್ರಣ ಇಲ್ಲಿದೆ.

               ಹೊಟ್ಟೆಪಾಡಿಗಾಗಿ ಹೊರ  ದುಡಿಯಲು ಹೊರಡುವ ಹೆಣ್ಣು ಮಕ್ಕಳು ಈ ನಗರಗಳಲ್ಲಿ ಡೆಲಿವರಿ ಗರ್ಲ್ ಆಗುತ್ತಾರೆ ಪೆಟ್ರೋಲ್ ಬಂಕ್ ಗಳಲ್ಲಿ ಕೆಲಸ ಮಾಡುತ್ತಾರೆ, ಬಾರ್ ಗಳಲ್ಲಿ ಸರ್ವಿಸ್ ಗರ್ಲ್ ಗಳಾಗುತ್ತಾರೆ. ಸವಾಲಸೆಯುವಂತಹ ಅವರ ಕೆಲಸಗಳು ಅತಿಯಾದ ಶ್ರಮವನ್ನು ಬಯಸುತ್ತದೆ, ಅವೆಲ್ಲವನ್ನು ಅವರು ಆತ್ಮ ವಿಶ್ವಾಸದಿಂದಲೇ ನಿಭಾಯಿಸುತ್ತಾರೆ.

              ಅಂತಹದೊಂದು ಛಲಗಾತಿಯ ದರ್ಶನ ನಾವಿಲ್ಲಿ ಮಾಡಬಹುದು ಇಂದಿನ ಆ ಹುಡುಗಿಯರ ಪರಿಸ್ಥಿತಿಯ ಯತಾಚಿತ ಚಿತ್ರಣ ಇಲ್ಲಿ ಅನಾವರಣಗೊಂಡಿದೆ. ಅವಳಿಗೆ ಎದುರಾಗುವ ಚಿಕ್ಕ ಚಿಕ್ಕ ತೊಡಕುಗಳು ಎಲ್ಲವನ್ನು ಸೂಕ್ಷ್ಮವಾಗಿ ತೋರಿಸಿದ್ದಾರೆ ಹೆಣ್ಣಾದ ಅವಳು ಈ ವೃತ್ತಿಯಲ್ಲಿ ಅನುಭವಿಸುವ ತೊಂದರೆಗಳನ್ನು ಚೆನ್ನಾಗಿ ಚಿತ್ರಿಸಿದ್ದಾರೆ.

           ದುಡಿಮೆಗಾಗಿ ಹೊರಬರುವ ಸ್ವಾಭಿಮಾನಿ ಹೆಣ್ಣು ಮಕ್ಕಳ ಬವಣೆ ಕಂಡಾಗ ತಮ್ಮ ಪರಿಸ್ಥಿತಿಯನ್ನು ಅವರು ನಿಭಾಯಿಸುವ ಪರಿಯನ್ನು ಕಂಡಾಗ ಹೆಮ್ಮೆ ಮೂಡುತ್ತದೆ.

          ತನ್ನ ನಿಯತ್ತಿನ ದುಡಿಮೆಯಿಂದ ತನ್ನ ತಾಯಿ ತನ್ನ ತಮ್ಮ ತನ್ನ ಕುಟುಂಬದ ಆರ್ಥಿಕ  ಹೊಣೆಯನ್ನು ನಿಭಾಯಿಸುವ ಅವಳ ನಡೆ ಇಲ್ಲಿ ಕಾಣಬಹುದಾಗಿದೆ.

          ಈ ಹುಡುಗಿಯ ಕಥೆಯೊಂದಿಗೆ ನಗರದ ಇಂತಹ ಹೆಣ್ಣು ಮಕ್ಕಳ ಪರಿಸ್ಥಿತಿ ಮನೋಬಲ ಅವರಿಗೆದುರಾಗುವ ಸವಾಲುಗಳು ಸಹೋದ್ಯೋಗಿಗಳಿಂದ ,ಪುರುಷರಿಂದ ಆಗುವ ಕಿರಿಕಿರಿ ಎಲ್ಲವನ್ನು ಇಲ್ಲಿ ಕಾಣಬಹುದು ನಾಯಕಿ ಗ್ರಾಹಕರ ಬಳಿ ಫೈವ್ ಸ್ಟಾರ್ ಕೊಡಿ ಎಂದು ಕೇಳುವುದು ಅವಳ ಬಗ್ಗೆ ಕರುಣೆ ಮೂಡಿಸುತ್ತದೆ.

        ಚಿತ್ರದ ಕೊನೆಯ ಭಾಗ ಕ್ಲೈಮ್ಯಾಕ್ಸ್ ನಲ್ಲಿ ನಾವು   ಕ್ರೈಂ ನ ನಿರೀಕ್ಷೆಯಲ್ಲಿದ್ದರೆ ನಮ್ಮ ನಿರೀಕ್ಷೆ ಹುಸಿಯಾಗುತ್ತದೆ ಅಲ್ಲಿ ಬರುವುದು ಭಾವನಾತ್ಮಕ ವಿಷಯವಾಗಿದೆ, ಅನಿರೀಕ್ಷಿತವಾಗಿದೆ.

           ಸಣ್ಣ ಸಣ್ಣ ವಿಷಯಗಳು ಚಿತ್ರದಲ್ಲಿ ಗುಣಾತ್ಮಕವಾಗಿ ಬಿಂಬಿಸಲ್ಪಟ್ಟಿದೆ. ಛಾಯಾಗ್ರಹಣ ಸಿನಿಮಾ, ಸಂಕಲನ ಶಬ್ದ ಗ್ರಹಣ ಅಚ್ಚುಕಟ್ಟಾಗಿದೆ ನಿರ್ದೇಶನ ಬಹಳ ಚೆನ್ನಾಗಿದೆ .ನಾಯಕಿಯಾಗಿ ಅಭಿನಯಿಸಿರುವ ಕಲಾವಿದೆ ರಮ್ಯಕೃಷ್ಣಪೂರ್ತಿ ಅಂಕಗಳಿಸುತ್ತಾಳೆ.

           ಈ ಕಿರು ಚಿತ್ರ ನೋಡಿ ಮುಗಿಸಿದಾಗ ಒಂದು ವಿಷಾದ, ಒಂದು ಹೆಮ್ಮೆ ಒಟ್ಟೊಟ್ಟಿಗೆ ಮೂಡುತ್ತದೆ.

            ಪ್ರಶಾಂತ್ ಗೌಡ ನಿರ್ದೇಶನದ ಲಾಸ್ಟ್ ಆರ್ಡರ್ ಕಿರುಚಿತ್ರ ಚಿಕ್ಕದಾದರೂ ಅದು ನೀಡುವ ಸಂದೇಶ ಹಿರಿದದ್ದು,  ಗಾಢವಾದದ್ದು..

ಪಾತ್ರವರ್ಗ-ರಮ್ಯಕೃಷ್ಣ ,ರಕ್ಷಿತ್ ಕರಿಯಣ್ಣ ,ವೀಕ್ಷಿತ್ ಗೌಡ ,ವಿಕಾಸ್ ಪುಷ್ಪಗಿರಿ ,ಖುಷಿ ಶಿವಮೊಗ್ಗ

ಶಬ್ದ ವಿನ್ಯಾಸ -ಹಿನ್ನೆಲೆ ಸಂಗೀತ -ಕರಣ್

ಸಂಕಲನ -ತಿಲಕ್ ಕುಮಾರ್, (ವಾಗ್ಮಿನೇ ಸ್ಟುಡಿಯೋಸ್)

ಛಾಯಾಗ್ರಹಣ -ಅಚ್ಚದ್ ಬಿ .ಎಸ್

ನಿರ್ಮಾಣ -ಶ್ರೀಮತಿ ಶಿಲ್ಪ ಹೆಗಡೆ (ಸತ್ಯ ಹೆಗಡೆ ಸ್ಟುಡಿಯೋಸ್)

ನಿರ್ದೇಶನ -ಪ್ರಶಾಂತ್ ಗೌಡ

ಇದನ್ನು ನೀವು ಯೂಟ್ಯೂಬಲ್ಲಿ ಉಚಿತವಾಗಿ ನೋಡಬಹುದು


ಕುಸುಮ ಮಂಜುನಾಥ್

ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕುಸುಮಾ ಮಂಜುನಾಥ್ ರವರು ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿ ಯನ್ನು ಹೊಂದಿದ್ದಾರೆ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ “ಸಾಧನ ವಿದ್ಯಾ” ಮಾಸ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ನಾಲ್ಕೈದು ವರ್ಷಗಳು ಕೆಲಸ ಮಾಡಿದ ಅನುಭವವಿದೆ. ರೋಟರಿ ಸಹಯೋಗದಲ್ಲಿ ಸಾಕ್ಷರತಾ ಮಿಷನ್ ಕಾರ್ಯಕ್ರಮದಡಿ ಕೂಲಿ ಕಾರ್ಮಿಕರಿಗೆ ಅಕ್ಷರ ಕಲಿಸುವ ಸೇವೆ ಮಾಡಿದ್ದಾರೆ. ಕಥೆ ,ಕವನ, ಲೇಖನ ಬರೆಯುವುದು ಇವರ ಹವ್ಯಾಸ. ಹಲವು ಬ್ಲಾಗ್ ಗಳಲ್ಲಿ ,ನಿಯತ ಕಾಲಿಕೆಗಳಲ್ಲಿ ಇವರ ಲೇಖನ ಪ್ರಕಟವಾಗಿದೆ. ಸಂಗೀತ ಕೇಳುವುದು ,ಪತ್ರಿಕೆ ಓದುವುದು ಇವರ ಇತರೆ ಹವ್ಯಾಸ.

Leave a Reply

Back To Top