ಅಂಕಣ ಬರಹ
ಕ್ಷಿತಿಜ
ಭಾರತಿ ನಲವಡೆ
ಆತ್ಮೀಯತೆಯ ಬಂಧ
ಆತ್ಮೀಯತೆಯ ಬಂಧ
ನಮ್ಮ ಕಷ್ಟ ನೋವು ನಲಿವುಗಳಿಗೆ ಆಸರೆಯಾಗುವ ವ್ಯಕ್ತಿಯನ್ನು ‘ಇವರು ನನ್ನ ಆತ್ಮೀಯರು’ ಎಂದು ಅವರ ಪರಿಚಯವನ್ನು ಮತ್ತೊಬ್ಬರೊಂದಿಗೆ ಹೇಳಿಕೊಳ್ಳುತ್ತೇವೆ.ಮನ ಮನಗಳಲ್ಲಿ ಬೆಸೆದ ಪ್ರೀತಿ ವಿಶ್ವಾಸಗಳೇ ಆತ್ಮೀಯತೆಯ ಅಡಿಪಾಯವಾಗಿವೆ.
ಆತ್ಮೀಯತೆಯು ಸ್ನೇಹ ಸಂಬಂಧವನ್ನು ಬೆಸೆವ ಮಾನಸಿಕ ಶಾಂತಿ ಸಾಂತ್ವನ ಹೊಸೆವ ಬಂಧವಾಗಿದೆ.
ಹೆತ್ತವರ ಮಕ್ಕಳ ಪ್ರೀತಿವಾತ್ಸಲ್ಯದಲ್ಲಿ ಆತ್ಮೀಯತೆಯ ಅಂಶ ಶೈಶವಾವಸ್ಥೆಯಿಂದ ತಾಯಿಯ ಅಪ್ಪುಗೆ ತಂದೆಯ ಕೈ ಹಿಡಿದು ಅಂಬೆಗಾಲಿಕ್ಕುತ್ತ ನಡೆಯುವ ನಡೆಯಿಂದ ಅಜ್ಜಿಯ ಕಥೆಯ ಕೌತುಕದಿಂದ ಅಜ್ಜನ ಕೋಲಿನ ಕುದುರೆಯಾಟದಿಂದ ಸಹೋದರಿಯರ ಜೊತೆ ಒಡನಾಟ ಹೀಗೆ ಕುಟುಂಬದಿಂದ ಪ್ರಾರಂಭವಾಗುತ್ತದೆ. ಶಾಲೆಗೆ ಹೋದಾಗ ಅಲ್ಲಿ ಶಿಕ್ಷಕರು ಸಹಪಾಠಿಗಳು ನೆರೆಹೊರೆ ಹೀಗೆ ಆತ್ಮೀಯತೆಯ ಹರವು ಆಳವಾಗುತ್ತ ಸಾಗುತ್ತದೆ.ಒಮ್ಮೆ ನಮ್ಮ ಶಾಲೆಯ ಮುದ್ದು ವಿದ್ಯಾರ್ಥಿನಿ ಸದಾ ನಗುತ್ತಿದ್ದ ರಮ್ಯ ಸಪ್ಪೆ ಮುಖದಿಂದ ತರಗತಿಗೆ ಬಂದು ಕುಳಿತಳು. ಕಾರಣ ಕೇಳಿದಾಗ ನಿರುತ್ತರ. ಸ್ವಲ್ಪ ಹೊತ್ತಿನ ನಂತರ ಎಲ್ಲ ಮಕ್ಕಳು ಟೀಚರ್ ನಾಳೆ ರಮ್ಯಳ ಹುಟ್ಟು ಹಬ್ಬವೆಂದು ನೆನಪಿಸಿ ಅವಳ ಮುಖದಲ್ಲಿ ನಗೆ ಅಲೆಯನ್ನುಂಟು ಮಾಡಲು ಯತ್ನಿಸಿದರು.ಅವಳು ಯಾವುದೇ ಪ್ರತಿಕ್ರಿಯೆ ನೀಡದೇ ಪೆಚ್ಚಾಗಿದ್ದಳು.ಕೆಲ ನಿಮಿಷಗಳ ನಂತರ ರಮ್ಯಳ ತಾಯಿ ಕೈಯಲ್ಲಿ ಡಬ್ಬ ಹಿಡಿದು ತರಗತಿಯ ಬಾಗಿಲಲ್ಲಿ ನಿಂತು ಇದನ್ನು ರಮ್ಯಳಿಗೆ ಕೊಡಿ ಇವತ್ತು ಅವಳು ಹಠದಿಂದ ತಿಂಡಿ ತಿನ್ನದೇ ಬಂದಿದ್ದಾಳೆ.ಎಂದಳು ಆಗ ನಾನು ಕಾರಣ ಕೇಳಿದಾಗ” ತನ್ನ ಜನುಮ ದಿನಕ್ಕೆತಾನು ಹೇಳಿದ ಬಣ್ಣದ ಫ್ರಾಕ್ ನ್ನು ಕೊಡಿಸಲಿಲ್ಲ ಬೇರೆ ಬಣ್ಣದ್ದನ್ನು ತಂದಿದ್ದಕ್ಕೆ ಹೀಗೆ ಮಾಡಿದಳು ತಂದೆಯ ಅತಿ ಸಲುಗೆ ಇದಕೆ ಕಾರಣ.ನನ್ನ ಮಾತನ್ನು ಕೇಳುವದಿಲ್ಲ” ಎಂದಳು.ಅದಕ್ಕೆ ನಾನು” ನೀವು ತಾಯಿ, ನಿಮ್ಮ ಮಗಳಿಗೆ ಆತ್ಮೀಯತೆಯಿಂದ ತಿಳಿಹೇಳಿದರೆ ಅವಳು ಹಠ ಮಾಡುವದಿಲ್ಲ “ಎಂದಾಗ “ಆಯ್ತು ಮೇಡಂ ನೀವು ಅವಳಿಗೆ ತಿಳಿಹೇಳಿ”ಎಂದು ಹೇಳಿ ಹೊರಟಳು.ನಂತರ ಆತ್ಮೀಯತೆಯಿಂದ ಅವಳೊಬ್ಬಳನ್ನೇ ಕರೆದು ಅವಳಿಗೆ ಹೆತ್ತವರ ಕನಸು ಅದನ್ನು ನನಸು ಮಾಡಲು ಮಕ್ಕಳ ಪ್ರಯತ್ನ.ಅವರ ಮನನೋಯಿಸಬಾರದೆಂದು ಹೇಳಿದಾಗ ನಗುತ ಸಂತಸದಿಂದ ತಲೆಯಾಡಿಸುತ ಹೋದಳು.
ನಿಜ, ಮಕ್ಕಳು ಹಠಮಾರಿಗಳಾಗಲು ಪಾಲಕರ ಅತೀ ವ್ಯಾಮೋಹವೇ ಕಾರಣ.
ಹೆತ್ತವರಿಗೆ ಹೆಗ್ಗಣಮುದ್ದು ಎಂಬಂತೆ ಅವರು ಕೇಳಿದ ವಸ್ತುಗಳನ್ನು ಕೇಳಿದ ವೇಳೆಗೇನೆ ಕೊಡಿಸುವ ಮಾತು ಕೊಟ್ಟು ಅನಿವಾರ್ಯ ಕಾರಣಗಳಿಂದ ಅದು ಸಾಧ್ಯವಾಗದೇ ಇದ್ದಾಗ ಅಮ್ಮ ಅಪ್ಪ ಮಾತು ತಪ್ಪಿದರು.ಅದನ್ನೇ ದೊಡ್ಡ ಅಪರಾಧವೆಂಬಂತೆ ತಮ್ಮ ಹಠದಿಂದ ಬಿಂಬಿಸುವ ಮಕ್ಕಳ ಮನೋಧೋರಣೆಗೆ ಏನು ಉತ್ತರ?
ಮಕ್ಕಳೊಂದಿಗೆ ಆತ್ಮೀಯತೆಯಿಂದ ನಡೆದುಕೊಂಡು ಅವರಿಗೆ ತಿಳಿಹೇಳಬೇಕಾದ ಅನಿವಾರ್ಯತೆ ಇದೆ.ಇಂದಿನ ದಿನಗಳಲ್ಲಿ ತಾಯಿಮಕ್ಕಳ ಪ್ರೀತಿಯಲ್ಲಿ ಆತ್ಮೀಯತೆಯ ಅಂಶ ಧಾರಾಳವಾಗಿದ್ದರೂ ಮಕ್ಕಳು ಪ್ರೌಢವಯಸ್ಸಿಗೆ ಬಂದಂತೆ ಸ್ವಾವಲಂಬಿಗಳಾಗುತ್ತ ಹೆತ್ತವರಿಂದ ದೂರ ಸರಿಯುತ್ತ ತಮ್ಮದೇ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾರೆ.ಕೆಲವು ಮಕ್ಕಳಿಗೆ ಹೆತ್ತವರಲ್ಲಿ ಸಹಜ ಪ್ರೀತಿ ಇದ್ದರೂ ಆತ್ಮೀಯತೆ ಇರುವುದಿಲ್ಲ.ಕುಟುಂಬದಲ್ಲಿ ಪತಿಪತ್ನಿಯರಲ್ಲಿ ಭಿನ್ನಾಭಿಪ್ರಾಯ,ಮನಸ್ತಾಪ ಬಿರುಕು ಕಾಣಿಸಿದರೆ ಹೊರನೋಟಕ್ಕೆ ಹೊಂದಿಕೊಂಡಂತೆ ಕಂಡರೂ ಅವರಲ್ಲಿ ಆತ್ಮೀಯತೆ ಇರುವದು ಅಪರೂಪ.ಕುಟುಂಬದಲ್ಲಿ ಪರಿಚಿತ ವರ್ಗದಲ್ಲಿ ತಮ್ಮತನ ಬಿಡದೆ ಒಬ್ಬೊಬ್ಬರಿಗೂ ಒಂದೊಂದು ತೆರನಾದ ಮುಖವಾಡ ಧರಿಸಿ ಬೆರೆಯುವದು ಅನಿವಾರ್ಯ.ಇಲ್ಲಿ ಸ್ನೇಹಿತರು ದೊರೆತರೂ ಆತ್ಮೀಯರು ದೊರಕುವದು ದುಸ್ತರವಾದ ಸಂಗತಿಯಾಗಿದೆ. ತಮ್ಮ ಮಕ್ಕಳಲ್ಲಿ ನಡೆ ನುಡಿಯ ವ್ಯತ್ಯಾಸ ಕಂಡುಬಂದಾಗ ಅದರ ಕಾರಣ ತಿಳಿದು ಒಂದು ವೇಳೆ ಅದು ತಪ್ಪಾಗಿ ಕಂಡು ಬಂದರೆ ರೇಗಾಡದೇ ಆತ್ಮೀಯತೆಯಿಂದ ನಗುನಗುತ ತಿದ್ದಿ ಬುದ್ಧಿ ಹೇಳಿ ಮತ್ತೆ ಸಹಜವಾಗಿಯೇ ಇದ್ದು ಆ ಕ್ಷಣದಿಂದಲೇ ಅದನ್ನು ಮರೆತು ಮುಂದಿನ ಅವರ ಜೀವನದ ಗುರಿಯ ಕುರಿತು ಮಾತನಾಡಿದಾಗ ಮಕ್ಕಳ ವಿಚಾರ ತಿಳಿದುಬರುತ್ತದೆ.ಪ್ರೌಢಾವಸ್ಥೆಗೆ ಬಂದಾಗ ಮಕ್ಕಳ ಸ್ನೇಹಿತರು, ಅವರ ಸಹವಾಸ ಅವರು ಒಳ್ಳೆಯ ಹವ್ಯಾಸ ಹೊಂದಿದ್ದಾರೋ ? ಹೇಗೆ ಎಂಬುದರ ಕುರಿತು ನಿಗಾ ಇಡಬೇಕಾಗುತ್ತದೆ.ಈ ವಯಸ್ಸಿನಲ್ಲಿ ಹೆತ್ತವರಲ್ಲಿ ಹೇಳಲಾಗದ ಕೆಲವು ವಿಷಯಗಳನ್ನು ಮಕ್ಕಳು ತಮ್ಮ ಸ್ನೇಹಿತರಲ್ಲಿ ಹೇಳಿಕೊಳ್ಳವದುಂಟು.”ಗೆಳೆತನವನ್ನು ನಿಧಾನವಾಗಿ ಬೆಳೆಸಿ ಆತ್ಮೀಯರಾಗಿರಿ,ಆಮೆಲೆ ಆ ಬಂಧನದಿಂದ ಕಳಚಿಕೊಳ್ಳಬೇಡಿರಿ”ಎನ್ನುತ್ತಾನೆ ತತ್ವಜ್ಞಾನಿ ಸಾಕ್ರಟೀಸ್.ಆತ್ಮೀಯತೆಯನ್ನು ಕಳಚಿಕೊಳ್ಳುವುದೆಂದರೆ ನಮ್ಮ ಅಥವಾ ಅವರ ಸಹವಾಸದಲ್ಲಿ ಏನಾದರೂ ದೋಷ ಕಂಡಿರಬೇಕು.ಪ್ರಸ್ತುತ,ಸನ್ನಿವೇಶಗಳನ್ನು ನೋಡಿದಾಗ ಕಷ್ಟಪಟ್ಟು ಬೇರೆಡೆ ವಿದ್ಯಾಬ್ಯಾಸಕ್ಕೆಂದು ಕಳಿಸಿದಾಗ ಕೆಲವೊಮ್ಮೆ ಮಕ್ಕಳು ಕೆಟ್ಟ ಹವ್ಯಾಸ ಹೊಂದಿದ ಮಕ್ಕಳ ಸ್ನೇಹ ಮಾಡಿ ಮೋಜು ಮಸ್ತಿಯಲ್ಲಿ ಸಮಯ ಕಳೆದು ಮಾದಕ ವ್ಯಸನಿಗಳಾಗಿ ಸಮಾಜ ಘಾತುಕ ಶಕ್ತಿಗಳಾಗಿ ಖಿನ್ನತೆಯಲ್ಲಿ ಅಂತ್ಯಕಾಣುತ್ತಾರೆ.”ಅನುದಿನವು ನಾವು ಸಂರ್ಕಿಸುವ ಜನರೊಡನೆ ಅನುಕಂಪ,ಕರುಣೆಯಿಂದ ಮಾತನಾಡೋಣ,ನಮ್ಮ ಮಾತು ನಮ್ಮ ಜೀವನದ ಕತ್ತಲೆಯನ್ನು ಹೋಗಲಾಡಿಸಿ ಸುಂದರ ಸುಖೀರಾಜ್ಯಕ್ಕೆ ಬೆಳಕಿನ ಹಾದಿ ತೋರಿಸುವಂತಿರಬೇಕು”ಎಂದು ಐಸಾಕ್ ವಾಟ್ಸ ಹೇಳಿದ್ದಾನೆ.
ಕುಟುಂಬದಲ್ಲಿ ಅಥವಾ ನೆರೆಹೊರೆಯವರ ನೋವುಗಳಿಗೆ ನಮ್ಮಿಂದೇನನ್ನು ಕೊಡಲಾಗದಿದ್ದರೂ ನಾವು ಹೇಳುವ ಆತ್ಮೀಯತೆಯ ಆತ್ಮಸ್ಥೈರ್ಯದ ಮಾತುಗಳು ನೊಂದ ಮನಕೆ ಸಂಜೀವಿನಿಯಂತೆ ಮುನ್ನಡೆವ, ಬದುಕುವ ಛಲವನ್ನು ಹುಟ್ಟುಹಾಕುತ್ತವೆ.ಯಾವುದೇ ಪರೀಕ್ಷೆಯಲ್ಲಿ,ಸ್ಪರ್ಧೆಯಲ್ಲಿ ಮಕ್ಕಳು ಅಪೇಕ್ಷಿತವಾದ ಸ್ಥಾನ ಪಡೆಯದಿದ್ದರೆ ಅಥವಾ ಮಕ್ಕಳಿಗೆ ತಮ್ಮ ಸಾಮರ್ಥ್ಯದ ಬಗ್ಗೆ ಖೇದವೆನಿಸಿದರೆ ಅದನ್ನು ಪಾಲಕರಾದ ನಾವು ಅರಿತು ಆತ್ಮೀಯತೆಯಿಂದ ಸಮಾಲೋಚನೆ ಮಾಡಿ “ಆದದ್ದು ಆಯಿತು! ಮುಂದಿನದ್ದನ್ನು ಉತ್ತಮವಾಗಿ ಮಾಡು ಅದು ನಿನ್ನಿಂದ ಸಾಧ್ಯವಾಗುತ್ತದೆ”ಎಂದು ಧನಾತ್ಮಕವಾದ ಪ್ರೋತ್ಸಾಹ ನೀಡಬೇಕು.ಕವಿ ಬೇಂದ್ರೆಯವರು ಹೇಳುವಂತೆ”ಒಲವಿನಲ್ಲಿ ಬೆಳಿ,ಒಲವಿನಲ್ಲಿ ಉಳಿ,ಒಲವೇ ಬಾಳ ಚೆಲುವು”ಎಂಬಂತೆ ಪ್ರೀತಿ, ಒಲವನ್ನು ಪಡೆದ ಮಕ್ಕಳು ಧನ್ಯರು.ಆದರೆ ಅತೀಯಾದರೆ ಅಮೃತವು ವಿಷ ಎಂಬಂತೆ ಮಕ್ಕಳ ಬಗ್ಗೆ ಪಾಲಕರ ಅತೀ ಶಿಸ್ತು, ಅತೀ ಪ್ರೀತಿ, ನಂಬಿಕೆ ಕೂಡ ಮಕ್ಕಳು ದಾರಿ ತಪ್ಪಲು ಕಾರಣವಾಗುತ್ತವೆ.
ಕುಟುಂಬದಲ್ಲಿ ತಂದೆ ತಾಯಿ ಕುಟುಂಬದ ಹಿರಿಕಿರಿಯರಿಗೆ ತೋರಿಸುವ ಪ್ರೀತಿ,ಕರುಣೆ,ಗೌರವ ಈ ಗುಣಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತವೆ.
ಸದಾ ಮೊಬೈಲ ಟಿ.ವಿ ವಾಟ್ಸಾಪನಲ್ಲಿ ಮುಳುಗಿರುವ ನಮ್ಮ ಮಕ್ಕಳು ಮನೆಗೆ ಬಂದ ಅತಿಥಿಗಳನ್ನು ಆತ್ಮೀಯತೆಯಿಂದ ಮಾತನಾಡಿಸುವದಿರಲಿ,ಕಣ್ಣೆತ್ತಿಯೂ ನೋಡುವದಿಲ್ಲ.ಇಂತಹ ಸನ್ನಿವೇಶದಲ್ಲಿ ಪಾಲಕರು ಮಕ್ಕಳಲ್ಲಿಸತ್ಕರಿಸುವ, ಸಂತೈಸುವ ಗುಣಗಳನ್ನು ಬೆಳೆಸಬೇಕಿದೆ.
ಅರಿಯದೇ ಮಾಡಿದ ತಪ್ಪು, ಅದನ್ನೆ ಒತ್ತಿ ಒತ್ತಿ ಹೇಳದೇ ಆತ್ಮೀಯವಾಗಿ ಮತ್ತೆಮತ್ತೆ ಮಾಡದಂತೆ ತಿಳಿಸಿ ಹೇಳಲು ಮನೆಯು ನಂದನವಾಗುವಲ್ಲಿ ಅಚ್ಚರಿ ಪಡಬೇಕಿಲ್ಲ ಬದಲು ಸಂತಸದ ಜೇನುಗೂಡಾಗುವದಂತೂ ಸತ್ಯ
ಭಾರತಿ ನಲವಡೆ
ಶ್ರೀಮತಿ ಭಾರತಿ ಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಮಂಗಳವಾಡದಲ್ಲಿ ಸಹಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು
2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.
ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ
ರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾ ಸಾಹಿತ್ಯ ಪುರಸ್ಕಾರ 2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ
6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆ ಸಲ್ಲಿಸುತ್ತಿದ್ದಾರೆ
ಈ ಲೇಖನ ತುಂಬಾ ಚೆನ್ನಾಗಿದೆ ಟೀಚರ
ಲೇಖನ ಚನ್ನಾಗಿ ಆಗಿದೆ.
ಈ ಲೇಖನ ಚೆನ್ನಾಗಿ ಆಗಿದೆ ಟೀಚರ್
ನಿಮಗೆ ಶುಭಾಶಯಗಳು. ಇನ್ನು ಎತ್ತರಕ್ಕೆ ಬೆಳೆಯಲಿ ನಿಮ್ಮ ಪಯಣ
ನಿಮಗೆ ಶುಭಾಶಯಗಳು. ಇನ್ನು ಎತ್ತರಕ್ಕೆ ಬೆಳೆಯಲಿ ನಿಮ್ಮ ಪಯಣ