ಅಂಕಣ ಸಂಗಾತಿ
ಶಿಕ್ಷಣ ಲೋಕ
ಡಾ.ದಾನಮ್ಮ ಝಳಕಿಯವರು ಬರೆಯುತ್ತಿದ್ದಾರೆ
ಶಿಕ್ಷಣ ಕ್ಷೇತ್ರದ ವೃತ್ತಿಪರ ಸವಾಲುಗಳು
ಶಿಕ್ಷಣ ಕ್ಷೇತ್ರದ ವೃತ್ತಿಪರ ಸವಾಲುಗಳು
ಕಮಲಾ 7 ನೆಯ ತರಗತಿ ಓದುವ ಪುಟ್ಟ ಬಾಲಕಿ, ನಮ್ಮ ಮನೆಯ ಕೆಲಸದ ರಾಮವ್ವಳ ಮಗಳು. ಅಂದು ಭಾನುವಾರ ತಾಯಿಯ ಜೊತೆ ನಮ್ಮ ಮನೆಗೆ ಬಂದಿದ್ದಳು. ನನ್ನ ಮಗಳು ಅವಳೊಂದಿಗೆ ಮಾತಾಡುತ್ತಿರುವನ್ನು ಗಮನಿಸಿದೆನು. ಕಮಲಾ ನನ್ನ ಮಗಳು ಅಕ್ಷತಾಳೊಂದಿಗೆ ಮಾತನಾಡುತ್ತಾ, ನಿಮ್ಮ ಶಾಲೆಯಲ್ಲಿ ಏನೇನು ಇದೆ ಎಂದು ಕೇಳುತ್ತಿದ್ದಳು. ಆಗ ನನ್ನ ಮಗಳು ತನ್ನ ಶಾಲೆಯಲ್ಲಿ ಈಜು ಕೊಳ, ಮೈದಾನ, ಕುದುರೆ ಸವಾರಿ, ಚೆಸ್, ಕೇರಂ, ವ್ಹಾಲಿಬಾಲ್, ಬಾಸ್ಕೇಟ್ ಬಾಲ್, ಪ್ರಯೋಗಾಲಯಗಳು, ಪ್ರತಿ ವಿಷಯಕ್ಕೆ ಇಬ್ಬರು ಶಿಕ್ಷಕರು, ಉತ್ತಮ ಡೆಸ್ಕುಗಳು, ಶುದ್ಧ ಕುಡಿಯುವ ನೀರು, ಉತ್ತಮ ಶೌಚಾಲಯಗಳು ಇತ್ಯಾದಿ ಹೀಗೆ ದೊಡ್ಡ ಪಟ್ಟಿಯನ್ನೇ ನೀಡುತ್ತಿದ್ದಳು. ಅದನ್ನು ಕೇಳಿದ ಕಮಲಾ ನಮ್ಮ ಶಾಲೆಯಲ್ಲಿ ಅದೆಲ್ಲ ಇಲ್ಲ ಆದರೆ ನಮ್ಮ ಟೀಚರ್ ಬಾಳ ಒಳ್ಳೆಯವರು ನಮಗೆ ತಿಳಿಯುವ ಹಾಗೆ ಪಾಠ ಮಾಡ್ತಾರೆ ಎಂದು ಹೇಳುತ್ತಿದ್ದುದನ್ನು ಕಂಡೆನು. ಆಗ ನನ್ನ ಮನದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿಪರ ಸವಾಲುಗಳು ಹಾಗೂ ಪರಿಹಾರಗಳ ಬಗ್ಗೆ ಆಲೋಚನೆಗಳು ಪ್ರಾರಂಭವಾದವು.
ನಮ್ಮ ಊರಿನಲ್ಲಿಯೂ ಒಂದು ಮಾದರಿ ಶಾಲೆ ಇದ್ದರೆ ಏನೆಲ್ಲಾ ಪ್ರಗತಿ ಸಾಧಿಸಬಹುದು. ಶಾಲೆಗೆ ಬೇಕಾದ ಎಲ್ಲ ರೀತಿಯ ಭೌತಿಕ ಸೌಲಭ್ಯಗಳು ಕನಿಷ್ಠ ಮಟ್ಟದಲ್ಲಿ ದೊರೆತರೂ ಶಿಕ್ಷಣದಲ್ಲಿ ಸುಧಾರಣೆ ತರಬಹುದು. ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡು ಈ ದಿಸೆಯಲ್ಲಿ ಆರ್ಥಿಕವಾಗಿ, ಯೋಜನಾಬದ್ಧವಾಗಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದರೂ ನಿರೀಕ್ಷಿತ ಫಲ ದೊರೆಯುತ್ತಿಲ್ಲ. ಇದಕ್ಕೆ ಕಾರಣಗಳೇನು? ನಮ್ಮ ಶಿಕ್ಷಣ ಕ್ಷೇತ್ರಕ್ಕೆ ಎಲ್ಲಿ ಕೊರತೆಯಾಗಿದೆ? ಆರ್ಥಿಕ ಸಮಸ್ಯೆಯೇ? ಚಿಂತನೆಯಲ್ಲಿಯೇ ದೋಷವಿದೆಯೆ? ಪೋಷಕರ ನಿರ್ಲಕ್ಷ್ಯವೇ? ವೃತ್ತಿಯಲ್ಲಿ ಬದ್ಧತೆ ಇಲ್ಲದಿರುವುದೇ ? ನೂರಾರು ಪ್ರಶ್ನೆಗಳು ನಮ್ಮ ಮುಂದೆ ಏಳುತ್ತವೆ.
ಮೇಲೆ ತಿಳಿಸಿದ ಶಾಲೆ ಒಂದು ಆದರ್ಶ ಮಾದರಿ ಶಾಲೆ ಎಂದಿಟ್ಟುಕೊಳ್ಳೋಣ. ಭಾರತದಲ್ಲಿ ನೂರಕ್ಕೆ ಎಂಬತ್ತರಷ್ಟು ಶಾಲೆಗಳು ಮೇಲೆ ಹೇಳಿದ ಕನಿಷ್ಠ ಸೌಲಭ್ಯಗಳನ್ನು ಹೊಂದಿಲ್ಲದ ಶಾಲೆಗಳೇ. ಇಂತಹ ಒಂದು ಮಾದರಿ ಆದರ್ಶ ಶಾಲೆಯನ್ನೇ ಗಮನದಲ್ಲಿಟ್ಟುಕೊಂಡು ಶಿಕ್ಷಣಕ್ಷೇತ್ರ ಇಂದು ಎದುರಿಸುತ್ತಿರುವ ವೃತ್ತಿಪರ ಸವಾಲುಗಳನ್ನು ಅರ್ಥಮಾಡಿಸಲು ಪ್ರಯತ್ನಿಸಬಹುದು.
ಈ ಹಿನ್ನೆಲೆಯಲ್ಲಿ ಸವಾಲುಗಳನ್ನು ನಾವು ಎರಡು ರೀತಿಯಲ್ಲಿ ಗಮನಿಸಬಹುದು.
1. ಭೌತಿಕ ಸವಾಲುಗಳು
2. ಶೈಕ್ಷಣಿಕ ಸವಾಲುಗಳು
1. ಭೌತಿಕ ಸವಾಲುಗಳು
ಕಟ್ಟಡ, ಪಾಠೋಪಕರಣಗಳು, ಪೀಠೋಪಕರಣಗಳು, ಗ್ರಂಥಾಲಯಗಳು, ಪ್ರಯೋಗಾಲಯಗಳು, ಮೈದಾನ, ಶೌಚಾಲಯಗಳು, ಶುದ್ಧ ಕುಡಿಯು ನೀರು, ಕಂಪೌಂಡ ಇತ್ಯಾದಿಗಳು ಶಾಲೆಯ ಅತ್ಯಂತ ಅವಶ್ಯಕ ಸೌಲಭ್ಯಗಳ ಪೂರೈಕೆಯು ಶಿಕ್ಷಣದ ವೃತ್ತಿಪರತೆಗೆ ಪೂರಕವಾಗಿವೆ ಈ ಸೌಲಭ್ಯಗಳು ಇಂದು ಸರಕಾರಿ ಶಾಲೆಗಳಲ್ಲಿ ಅನೇಕ ಯೋಜನೆಯಡಿಯಲ್ಲಿ ಉತ್ತಮವಾಗಿ ಸಿಗುತ್ತಿರುವದನ್ನು ಕಾಣಬಹುದು. ನಾವು ಓದುತ್ತಿರುವಾಗಿನ ಸರಕಾರಿ ಶಾಲೆಗಳು ಹಾಗೂ ಇಂದಿನ ಸರಕಾರಿ ಶಾಲೆಗಳನ್ನು ಹೋಲಿಕೆ ಮಾಡಿ ನೋಡಿದಾಗ ಇವತ್ತು ಅನೇಕ ಭೌತಿಕ ಸೌಲಭ್ಯಗಳು ದೊರೆಯುತ್ತಿರುವುದು ಅತ್ಯಂತ ಸಂತೋ಼ದ ವಿಷಯ. ನೂರಕ್ಕೆ ನೂರರಷ್ಟು ಸೌಲಭ್ಯ ಅಲ್ಲದಿದ್ದರೂ ಭಾಗಶಃ ಭೌತಿಕ ಸೌಲಭ್ಯಗಳು ದೊರೆತಿರುವದನ್ನು ಕಾಣಬಹುದಾಗಿದೆ.
ಇವತ್ತು ತರಗತಿ ಕೋಣೆಗಳು, ಶೌಚಾಲಯ, ಶುದ್ಧ ಕುಡಿಯುವ ನೀರು ಹಾಗೂ ಕಂಪೌಂಡಗಳು ಎಲ್ಲ ಶಾಲೆಗಳಲ್ಲಿ ಇರುವದನ್ನು ಗಮನಿಸಬಹುದಾಗಿದೆ. ಆದರೆ ಪ್ರಯೋಗಾಲಯಗಳು, ಗ್ರಂಥಾಲಯ ಕೊಠಡಿಗಳು ಹಾಗೂ ಸುಸಜ್ಜಿತ ಮೈದಾನಗಳ ಕೊರತೆ ಕೆಲವು ಶಾಲೆಗಳಲ್ಲಿ ಇಲ್ಲದಿರುವದನ್ನು ಕಾಣಬಹುದಾಗಿದೆ. ಆದರೆ ಈ ಸಾವಲನ್ನು ಪರಿಹರಿಸಲು ನಮ್ಮ ಸರಕಾರಿ ಶಾಲೆಯ ಶಿಕ್ಷಕರು ಅನೇಕ ಮಾರ್ಗಗಳನ್ನು, ಕಂಡುಕೊಂಡಿದ್ದಾರೆ. ಗ್ರಂಥಾಲಯ ಕೊಠಡಿ ಇಲ್ಲದಿರುವದರಿಂದ ಗ್ರಂಥಾಲಯದ ಪುಸ್ತಕಗಳನ್ನು Reading Corner ಮೂಲಕ ಮಕ್ಕಳಿಗೆ ಪೂರೈಸುತ್ತಿದ್ದಾರೆ. ನಗರಗಳ ಶಾಲೆಗಳಲ್ಲಿ ಮೈದಾನದ ಕೊರತೆ ಇರುವದರಿಂದ ಮಕ್ಕಳನ್ನು ಸಮೀಪದ ಮೈದಾನಗಳಿಗೆ ಕರೆದುಕೊಂಡು ಹೋಗಿ ಆಟವಾಡಿಸುವುದು ಇಲ್ಲವೇ ಒಳಾಂಗಣ ಆಟಗಳಾದ ಕೇರಂ ಚೆಸ್ ದಂತಹ ಆಟಗಳನ್ನು ಆಡಿಸುವ ಮೂಲಕ ಪರಿಹಾರವನ್ನು ಕಂಡುಕೊಂಡಿದ್ದಾರೆ ಅಲ್ಲದೇ ಪ್ರಯೋಗಾಲಯ ಇಲ್ಲದಿರುವದರಿಂದ ತರಗತಿಯ ಕೋಣೆಗಳಲ್ಲಿಯೇ ಮಕ್ಕಳಿಗೆ ಸಣ್ಣ ಸಣ್ಣ ಪ್ರಯೋಗಗಳನ್ನು ಮಾಡುವುದರ ಮೂಲಕ ಪರಿಕಲ್ಪನೆಗಳನ್ನು ಅನುಕೂಲಿಸುತ್ತಿದ್ದಾರೆ. ಹೀಗೆ ಭೌತಿಕ ಸವಾಲುಗಳಿಗೆ ಶಿಕ್ಷಕರು ತಮ್ಮದೇ ಆದ ಪರಿಹಾರ ಕಂಡುಕೊಳ್ಳುವ ಮೂಲಕ ವೃತ್ತಿಪರತೆಯಲ್ಲಿ ಹಿಂದೆ ಬಿದ್ದಿಲ್ಲ ಎಂದು ಹೇಳಬಹುದು.
2. ಶೈಕ್ಷಣಿಕ ಸವಾಲುಗಳು
ಶೈಕ್ಷಣಿಕ ಸವಾಲುಗಳಲ್ಲಿ ಪ್ರಮುಖವಾದವುಗಳೆಂದರೆ, ಸಾಮರ್ಥ್ಯ ಆಧಾರಿತ ಶಿಕ್ಷಣ, ಪರೀಕ್ಷಾ ಪದ್ಧತಿ, ವಿಷಯ ಪ್ರಸ್ತುತತೆ, ಶಿಕ್ಷಕರ ಕೊರತೆ, ಇತ್ಯಾದಿ ಪ್ರಮುಖ ಅಂಶಗಳು ಶೈಕ್ಷಣಿಕ ಸವಾಲುಗಳಾಗಿವೆ.
ಸಾಮರ್ಥ್ಯ ಆಧಾರಿತ ಕಲಿಕೆಯ ಬಗ್ಗೆ ಚರ್ಚಿಸಬೇಕೆಂದರೆ, ತರಗತಿಯಲ್ಲಿಯ ಪ್ರತಿ ವಿದ್ಯಾರ್ಥಿಯು ಭಿನ್ನವಾಗಿರುತ್ತದೆ. ಅವರು ಬಂದಿರುವ ಪರಿಸರವೂ ಭಿನ್ನವಾಗಿರುತ್ತದೆ. ಪ್ರತಿ ದಿನದ ಅವರ ಮನಸ್ಥಿತಿ ಭಿನ್ನ, ಅವರು ಕಲಿಯುವ ಆಸಕ್ತಿ ಭಿನ್ನ. ಈ ಭಿನ್ನತೆಗಳನ್ನು ಗಮನಿಸಿ ಅನುಕೂಲಿಸುವ ವಿಧಾನವನ್ನು ಶಿಕ್ಷಕರು ಕಂಡುಕೊಳ್ಳಬೇಕಾಗುತ್ತದೆ. ಇದರೊಂದಿಗೆ ಮಕ್ಕಳ ಗೈರು ಹಾಜರಾತಿಯು ಸಾಮರ್ಥೈ ಆಧಾರಿತ ಕಲಿಕೆಗೆ ಅಡೆತಡೆಯನ್ನು ಒಡ್ಡುತ್ತಿರುತ್ತದೆ. ಆದಾಗ್ಯೂ ಇಂದಿನ ಶಿಕ್ಷಕರು ಅಥವಾ ಸುಗಮಕಾರರು ತಮ್ಮದೇ ಆದ ಅನೇಕ ವಿಧಾನಗಳ ಮೂಲಕ ಸಮರ್ಥವಾಗಿ ಪರಿಕಲ್ಪನೆಗಳನ್ನು ಅರ್ಥೈಸುವ ಮೂಲಕ ಮಕ್ಕಳ ಮನ ಗೆದ್ದಿದ್ದಾರೆ ಅದರೊಂದಿಗೆ ಮಕ್ಕಳ ಕಲಿಕೆ ಅಂತರವನ್ನು ಕಡಿಮೆ ಮಾಡಲು 2022-23 ನೇ ಸಾಲಿನಲ್ಲಿ ಬಂದ ಕಲಿಕಾ ಚೇತರಿಕೆ ಸಂತೋಷದಾಯಕ ಕಲಿಕೆಗೆ ಪ್ರೇರಣೆ ನೀಡುತ್ತಿದೆ.
ಈ ಹಿಂದೆ, ಅರ್ಥ ವಾರ್ಷಿಕ, ವಾರ್ಷಿಕ ಪರೀಕ್ಷೆಗಳ ಮೂಲಕ ಇಡೀ ವರ್ಷದ ಮಕ್ಕಳ ಕಲಿಕೆಯನ್ನು ಒರೆಹಚ್ಚುವ ಹಾಗೂ ಉತ್ತೀರ್ಣ ಅನುತ್ತೀರ್ಣ ಎಂದು ಘೋಷಿಸುವ ಪದ್ಧತಿ ವೃತ್ತಿಪರರಿಗೆ ಶೈಕಣಿಕ ಸವಾಲಾಗಿತ್ತು. ಆದರೆ ಇಂದು ರೂಪಣಾತ್ಮಕ ಕಲಿಕೆಯ ಮೂಲಕ ಪ್ರತಿ ದಿನದ ಕಲಿಕೆಯ ಪ್ರಗತಿಯನ್ನು ಪರಿಗಣಿಸುವ ವಿಧಾನ ಹಾಗೂ ಸಂಕಲನಾತ್ಮಕ ಮೂಲಕ ಇಡೀ ಕಲಿಕೆಯನ್ನು ಒರೆಹಚ್ಚುವ ವಿಧಾನವು ಈ ಸವಾಲನ್ನ ಪರಿಹರಿಸಿದೆ. ಅಲ್ಲದೇ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯವನ್ನು ಸಹ ಕಡಿಮೆ ಮಾಡಿದೆ.
ಅನೇಕ ಪರಿಕಲ್ಪನೆಗಳನ್ನು ಮಕ್ಕಳಿಗೆ ಅರ್ಥೈಸುವುದು ವೃತ್ತಿಪರರಿಗೆ ಒಂದು ಸವಾಲೇ ಆಗಿತ್ತು ಎನ್ನಬಹುದು. ಆದರೆ ಈಗ TALP, ನಿಷ್ಠಾ ಹಾಗೂ ವಿಷಯಾಧಾರಿತ ತರಬೇತಿಗಳು ತಂತ್ರಜ್ಞಾನ ಹಾಗೂ ವಿಷಯಗಳ ಆಳ ಜ್ಞಾನವನ್ನು ಶಿಕ್ಷಕರಿಗೆ ನೀಡುವ ಮೂಲಕ ಶಿಕ್ಷಕರ ಜ್ಞಾನವನ್ನು ನವೀಕರಿಸುತ್ತಿರುವದನ್ನು ಕಾಣಬಹುದಾಗಿದೆ, ಇದರಿಂದ ಈ ಸವಾಲನ್ನು ಸಹ ವೃತ್ತಿಪರರು ನಿಭಾಯಿಸಿ, ಉತ್ತಮವಾಗಿ ವಿಷಯ ಪ್ರಸ್ತುತತೆಯನ್ನು ಮಾಡುತ್ತಿದ್ದಾರೆ ಆದ್ದರಿಂದಲೇ ಕಮಲಾ ಎಂಬ ಪುಟ್ಟ ಮಗು ತನ್ನ ಶಿಕ್ಷಕರ ಬಗ್ಗೆ ಹೆಮ್ಮೆಯಿಂದ ಹೇಳುತ್ತಿದ್ದುದನ್ನು ನೆನಪಿಸಿಕೊಳ್ಳಬಹುದು.
ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳಿಗೆ ಅನೇಕ ವಿಷಯಗಳ ತೊಂದರೆಯಾಗುತ್ತಿರುವದನ್ನು ಸಹ ನಾವು ಅನೇಕ ಕಡೆಗಳಲ್ಲಿ ಕಾಣಬಹುದಾಗಿತ್ತು ಆದರೆ ಈದೀಗ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಮೂಲಕ ಈ ಸಮಸ್ಯೆಯೂ ಸಹ ಕಡಿಮೆಯಾಗಿದೆ.
ಒಟ್ಟಾರೆಯಾಗಿ ಶಿಕ್ಷಣದಲ್ಲಿ ಭೌತಿಕ ಹಾಗೂ ಶೈಕ್ಷಣಿಕ ಸವಾಲುಗಳಿಂದ ಪರಿಹಾರ ಕಂಡುಕೊಳ್ಳುವ ಮೂಲಕ ವೃತ್ತಿಪರರು ಸಮರ್ಥವಾಗಿ ಶೈಕ್ಷಣಿಕ ಚಟುವಟಿಕೆಗಳನ್ನು ನಿಭಾಯಿಸುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಆದಾಗ್ಯೂ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತೆ ಭೌತಿಕ ಸೌಲಭ್ಯಗಳನ್ನು ಹೆಚ್ಚಿಸಬೇಕಾಗಿದೆ.
ಡಾ.ದಾನಮ್ಮ ಝಳಕಿ
ಡಾ.ದಾನಮ್ಮ ಝಳಕಿ ಯವರು ಪ್ರಸ್ತುತ ಶ್ರೀಮತಿ ಸೋಮವ್ವ ಚ ಅಂಗಡಿಯ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾಗಿದ್ದು ಶಿಕ್ಷಣದಲ್ಲಿ ಇವರು ನಡೆಸಿದ ಹಲವು ಸಂಶೋದನಾ ಲೇಖನಗಳು ರಾಷ್ಟ್ರೀಯ ಅಂತರರಾಷ್ಟ್ರೀಯ ಸಂಸ್ತೆಗಳಿಂದ ಪ್ರಕಟಗೊಂಡಿವೆ.ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿಗೂ ಬಾಜನರಾಗಿದ್ದಾರೆ.ಶಿಕ್ಷಣ ಮಾತ್ರವಲ್ಲದೆ ಸೃಜನಶೀಲ ಸಾಹಿತ್ಯ ರಚನೆಯಲ್ಲು ಇವರು ತಮ್ಮ ಛಾಪು ಮೂಡಿಸಿರುವ ಇವರ ಹಲವಾರು ಬರಹಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ