ವಸುಂಧರಾ ಕದಲೂರು ಅವರ ಕವಿತೆ-ಯಾವ ಜರೂರತ್ತೂ ಇರುವುದಿಲ್ಲ…

ಕಾವ್ಯ ಸಂಗಾತಿ

ಯಾವ ಜರೂರತ್ತೂ ಇರುವುದಿಲ್ಲ…

ವಸುಂಧರಾ ಕದಲೂರು

ಕೆಂಬೂತದ್ದು ತಪ್ಪಿರುವುದಿಲ್ಲ
ಮಾತ್ಸರ್ಯದಲಿ ಹಂಗಿಸಿ
ನವಿಲ ರೂಪವನು ದೊಡ್ಡದು
ಮಾಡುವುದು ನಾವೇ.. ಹೋಲಿಸಿ

ಜೀವಮಾನದಲಿ ನವಿಲ
ಕಂಡಿರದ ಕೆಂಬೂತ
ಯಾವ ಸೊಬಗಿಗೆ ಕೊರಗಿ
ಅದೇಕೆ ಬಾಧೆ ಪಟ್ಟೀತು!

ಹೊಳಪು ಪುಕ್ಕದ ರಂಗು
ನರ್ತನದ ಕಾಲ್ನಡುಗೆ;
ಗರಿಗೆದರಿ ಕುಣಿವ ಖದರು
ಕೆಂಬೂತದ ನೆಮ್ಮದಿ ತೆಗೆದೀತೆ

ಮಯೂರಕೆ ಸೌಂದರ್ಯ ಕಿರೀಟ
ತೊಡಿಸಿ, ಕೆಂಬೂತಕೆ ಅಪರಾಧಿ
ಬೇಡಿ ತೊಡಿಸಿ; ಪಾತ್ರ ಕಟ್ಟಿ ನಮ್ಮ
ತಲೆಪರದೆ ಮೇಲೆ ಕುಣಿಸುವೆವು

ನವಿಲು ಕೆಂಬೂತ ಯಾವುದೂ
ಆಗದ ಮತ್ಸರದಿ ನಾವು ‘ಅಯ್ಯೋ,
ಕೆಂಬೂತ ನವಿಲಾಗಲಿಲ್ಲೆಂದು’
ಮೊಸಳೆ ಕಣ್ಣೀರಿಡುವೆವು

ಇದರ ಬಾಳು ಅದು ಬದುಕುವ
ಜರೂರತ್ತೆಂದೂ ಇರುವುದಿಲ್ಲ.
ಕಾರಣ…
ಹೆಣ್ಣು ಕೆಂಬೂತ ಇಷ್ಟ ಪಡುವುದು
ಗಂಡು ನವಿಲನ್ನೇನೂ ಅಲ್ಲ!


4 thoughts on “ವಸುಂಧರಾ ಕದಲೂರು ಅವರ ಕವಿತೆ-ಯಾವ ಜರೂರತ್ತೂ ಇರುವುದಿಲ್ಲ…

Leave a Reply

Back To Top