ಅಂಕಣ ಸಂಗಾತಿ

ಗಜಲ್ ಲೋಕ

ರತ್ನರಾಯಮಲ್ಲವರ ಲೇಖನಿಯಿಂದ

ಹೈತೋ ಅವರ ಗಜಲ್ ಗಳಲ್ಲಿ ಮಾನವೀಯ ಕಳಕಳಿ

ಹೈತೋ ಅವರ ಗಜಲ್ ಗಳಲ್ಲಿ ಮಾನವೀಯ ಕಳಕಳಿ

ಗಜಲ್… ಗಜಲ್ ಎಂದರೆ ಅದೇನೋ ಪುಳಕ ಮನದಲಿ. ಈ ಗಜಲ್ ಪ್ರೀತಿಸುವ ರಸಿಕರಿಗೆ ದಿಲ್ ಸೆ ಆದಾಬ್ ಅರ್ಜ್ ಹೈ.. ಪ್ರತಿವಾರ ಒಬ್ಬೊಬ್ಬ ಗಜಲ್ ಕಾರ ಕುರಿತು ಬರೆಯುತ್ತ ಗಜಲ್ ಗುಲ್ಜಾರ್ ನಲ್ಲಿ ಅಲೆದಾಡುತ್ತಿರುವೆ. ಆ ಗುಲ್ಜಾರ್ ನಲ್ಲಿ ಆಕರ್ಷಿಸಿದ ಗುಲ್ಶನ್ ನೊಂದಿಗೆ ನಿಮ್ಮ ಮುಂದೆ ಬರುತಿದ್ದೇನೆ, ನೀವು ನಿರೀಕ್ಷಿಸುತ್ತಿರುವ ಗಜಲ್ ಬೆಳದಿಂಗಳೊಂದಿಗೆ…

ನಮ್ಮ ಸ್ತ್ರೀ ಸಂಕುಲಕ್ಕೆ ಇವತ್ತಿಗೂ ಸಾಂತ್ವನ ಹೇಳುತಿದ್ದೇವೆ

ಅವಳ ಸೌಂದರ್ಯವನ್ನು ಮನಸಾರೆ ಅವಮಾನಿಸಿತಿದ್ದೇವೆ”

ಇಕಬಾಲ್ ಸಾಜಿದ್

         ಮೂರ್ತ ರೂಪದಲ್ಲಿ ಕಟ್ಟಿದ ಹಗ್ಗಕ್ಕಿಂತ ಅಮೂಲ್ಯವಾದ ಭಾವ ಬಂಧನದ ಹಗ್ಗ ಬಲು ಬಿಗಿಯಾಗಿರುತ್ತದೆ. ಭಾವನೆಗಳನ್ನು ಕಳೆದುಕೊಂಡಾಗ ಆ ಹಗ್ಗ ಉರುಳಾಗುತ್ತದೆ. ಒಬ್ಬರಿಗೊಬ್ಬರು ಹಗ್ಗ ಕಟ್ಟುವುದಕ್ಕಿಂತ ಭಾವ ಬಂಧದಿಂದ ಪರಸ್ಪರ ತಮ್ಮನ್ನು ತಾವು ಕಟ್ಟಿಕೊಂಡು ಸ್ವತಂತ್ರ ಅಸ್ತಿತ್ವ, ಅಸ್ಮಿತೆಯಿಂದ ಬಾಳುವುದೇ ನಿಜವಾದ ಹಾಗೂ ಸಾರ್ಥಕತೆಯ ಬದುಕು. ಇಲ್ಲಿ ‘ಪ್ರೀತಿ’ಯೆ ಬಾಳಿಗೆ ಅಮೃತ. ಪ್ರಕೃತಿಯಲ್ಲಿ ಪ್ರೀತಿಯಿಲ್ಲದೆ ಹೂವು ಕೂಡ ಅರಳುವುದಿಲ್ಲ. ಇದು ಭಯಂಕರ ಚಂಡಮಾರುತದಂತೆ ಬೆಚ್ಚಿಬೀಳಿಸುವ ವಿಕೋಪವಲ್ಲ.

ಬದಲಾಗಿ ಅನ್ಯಮನಸ್ಕ ಬೆರಳುಗಳು ಸುಮ್ಮನೇ

ರೇಡಿಯೋದ ತರಂಗಗಳಿಗಾಗಿ ತಡಕಾಡುತ್ತಿರುವಾಗ ಯಾವುದೋ ಒಂದು ತಿರುವಿನಲ್ಲಿ ಆಕಸ್ಮಿಕವಾಗಿ ಕಚ್ಚಿಕೊಂಡು ಅಸ್ಖಲಿತವಾಗಿ ಹಾಡುವ ಶುದ್ಧ ಹಾಡಿನಂತೆ!! ಇನ್ನೂ ಮುಂದುವರೆದು ಹೇಳುವುದಾದರೆ ಪ್ರೀತಿಯು ಹುಲಿಯಂತೆ ಗರ್ಜಿಸುತ್ತ

ತನ್ನ ಆಗಮನವನ್ನು ಡಂಗುರ ಹೊಡೆದು ಸಾರುವುದಿಲ್ಲ. ಮಾಗಿ ಕಾಲದ ಬೆಂಕಿಗೂಡಿನಂತೆ ಸಾವಧಾನವಾಗಿ ಬೆಚ್ಚಗೆಮಾಡುವ ತುಂಟಾಟದಂತೆ. ಇದರ ಹೊರತು ಮನುಷ್ಯನ ಜೀವನವೆ ಅದೂರಿ! ಈ ದಿಸೆಯಲ್ಲಿ ಅಮೇರಿಕನ್ ಕಾದಂಬರಿಕಾರ್ತಿ ಸಾರಾ ಡೆಸ್ಸೆನ್ ರವರು ಪ್ರೀತಿ ಕುರಿತು ಹೇಳಿದ ಮಾತುಗಳು ಅಕ್ಷರಶಃ ಸತ್ಯವಾಗಿದೆ. “There is never a time or place for true love. It happens accidentally, in a heartbeat, in a single flashing, throbbing moment”. ನಿಜವಾದ ಪ್ರೀತಿ ಯಾವಾಗ, ಎಲ್ಲಿ, ಹೇಗೆ ಉದಯಿಸುತ್ತದೆ ಎಂದು ಹೇಳಲಾಗದು. ಇದು ಆಕಸ್ಮಿಕವಾಗಿ ಹೃದಯ ಬಡಿತದಲ್ಲಿ ಅರಳುವ ಹೂವಾಗಿದೆ. ಇಂಥಹ ಪ್ರೀತಿಯನ್ನು ಹಾಸಿಕೊಂಡು, ಒದ್ದುಕೊಂಡಿರುವ ಕಾವ್ಯ ಕುಸುಮದಲ್ಲಿ ‘ಗಜಲ್’ ಮುಂಚೂಣಿಯಲ್ಲಿದೆ. ಗಜಲ್ ಅಂದರೇನೆ ಪ್ರೀತಿಯೆಂಬ ಜಾದು ಕೀ ಛಪ್ಪಿ. ಇಂದು ಕರುನಾಡಿನಾದ್ಯಂತ ಗಜಲ್ ಕಂಪು ತೀವ್ರವಾಗಿ ಪಸರಿಸಿದೆ, ಪಸರಿಸುತ್ತಿದೆ. ಅಸಂಖ್ಯಾತ ಬರಹಗಾರರು ಗಜಲ್ ಕೃಷಿಯಲ್ಲಿ ನಿರತರಾಗಿದ್ದಾರೆ. ಅಂತಹ ಕೃಷಿಕರಲ್ಲಿ ಗಜಲ್ ಗೋ ಅಬ್ದುಲ್ ಹೈ ತೋರಣಗಲ್ಲು ಇವರೂ ಒಬ್ಬರು.

         ಶ್ರೀ ಸೈಯದ್ ವಹಾಬ್ ಸಾಬ್- ಮೇಹಬೂಬ್ ಬೀ ದಂಪತಿಗಳ ಸುಪುತ್ರ ಕನ್ನಡ ಸಾರಸ್ವತ ಲೋಕದಲ್ಲಿ ‘ಹೈತೋ’ ಎಂದೆ ಚಿರಪರಿಚಿತರಾಗಿರುವ ಅಬ್ದುಲ್ ಹೈ.ತೋರಣಗಲ್ಲು ಬಳ್ಳಾರಿ ಜಿಲ್ಲೆಯ ಬಳ್ಳಾರಿ ನಗರದವರು. ಡಿಪ್ಲಮೋ ಇನ್ ಅಟೋ ಮೊಬೈಲ್ ಪದವೀಧರರಾದ ಇವರು ತಮ್ಮ ಕಾಲೇಜು ದಿನಗಳಿಂದಲೇ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಪಾರ ಆಸಕ್ತಿ ಹೊಂದಿದ್ದರೆಂಬುದು ತಿಳಿದು ಬರುತ್ತದೆ. ಇವರು ‘ವಿದ್ಯಾರ್ಥಿ ಯುವಜನ ಚಳುವಳಿ’ಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಬೆಳೆದಿದ್ದಾರೆ. ‘ಕರ್ನಾಟಕ ಸಮುದಾಯ ಸಾಂಸ್ಕೃತಿಕ ಸಂಘಟನೆ’ಯಲ್ಲಿ ೧೦ ಕ್ಕೂ ಹೆಚ್ಚು ಬೀದಿನಾಟಕ ಪ್ರದರ್ಶನಗಳಲ್ಲಿ ನಟ – ನಿರ್ದೇಶಕರಾಗಿ ತೊಡಗಿಸಿಕೊಂಡಿರುವುದು ಇವರ ಕಲೆಯ ಅಭಿರುಚಿಗೆ ಹಿಡಿದ ಕನ್ನಡಿಯಾಗಿದೆ. ಗಾಯನವನ್ನು ಹವ್ಯಾಸವಾಗಿ ರೂಢಿಸಿಕೊಂಡಿರುವ ಇವರು ಸಾಹಿತ್ಯ ಪ್ರಕಾರಗಳಾದ ಕಾವ್ಯ, ಕಥೆ, ನಾಟಕ, ವಿಮರ್ಶೆ, ಚಾರಿತ್ರಿಕ ಅಧ್ಯಯನ, ವೈಚಾರಿಕ ಲೇಖನಗಳೊಂದಿಗೆ ಗಜಲ್ ಗಳನ್ನು ಬರೆದಿದ್ದಾರೆ, ಬರೆಯುತ್ತಿದ್ದಾರೆ. ಇವರು ಕನ್ನಡ ಸಾರಸ್ವತ ಲೋಕಕ್ಕೆ ಹಲವಾರು ಮೌಲಿಕ ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅವುಗಳಲ್ಲಿ ‘ನೆನಪುಗಳಿವೆ ಅವೇ ಸಾಕು (ಕವನ ಸಂಕಲನ)’, ‘ಎರಡು ಬೀದಿ ನಾಟಕಗಳು’, ‘ಬಾಯ್ತೆರೆದ ಬಂದೂಕುಗಳು’, ಎಂಬ ಕ್ರಾಂತಿಗೀತೆಗಳ ಕೈ ಬರಹ ಸಂಕಲನ ಹಾಗೂ ‘ಆತ್ಮಧ್ಯಾನದ ನಾದ’ ಎಂಬ ಗಜಲ್ ಸಂಕಲನ.. ಮುಖ್ಯವಾಗಿವೆ. ಇವುಗಳೊಂದಿಗೆ ‘ನಕಾಬ್ ನೊಳಗಿನ ನಯನಗಳು’ ಎಂಬ ಕಥಾ ಸಂಕಲನ, ‘ತೋರಣಗಲ್ಲು ಚಾರಿತ್ರಿಕ ಕಥನ’, ‘ಗಜಲ್ ಸಂಕಲನ’ ಹಾಗೂ ‘ಕವನ ಸಂಕಲನ’.. ಈ ಎಲ್ಲ ಪುಸ್ತಕಗಳು ಪ್ರಕಟಣೆಯ ಹಂತದಲ್ಲಿವೆ. ಇವರ ಮಡದಿ ಶ್ರೀಮತಿ ವಾಹಿದಾ ಬೇಗಂ ರವರು ಪ್ರಾಥಮಿಕ ಶಾಲಾ ಉರ್ದು ಶಿಕ್ಷಕಿ ಹಾಗೂ ಉರ್ದು ಗಜಲ್ಕಾರರು. ಈ ದಂಪತಿಗಳಿಗೆ ನವಾಜ್ ಮತ್ತು ಆಯೇಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಇವರು ಕ್ರಮವಾಗಿ ಮೆಕನಿಕಲ್ ಇಂಜಿನಿಯರ್, ಡಿಪ್ಲಮೋ ಪ್ಯಾಷನ್, ಡಿಸೈನರ್ ಎಂಬುದು ಉಲ್ಲೇಖನೀಯ. ಪ್ರಸ್ತುತವಾಗಿ ಶ್ರೀಯುತರು ಜೆ.ಎಸ್ .ಡಬ್ಲ್ಯು ಸ್ಟೀಲ್ ಲಿಮೆಟೆಡ್ ನಲ್ಲಿ ಸಣ್ಣ ಗುತ್ತಿಗೆದಾರರಾಗಿ ಕಾರ್ಯವನ್ನು ನಿರ್ವಹಿಸುತಿದ್ದಾರೆ.

      ಕಲಿಯಲು ತುಡಿಯುವ ಮನಸ್ಸುಗಳಿಗೆ ಸದಾ ನೀರೆರೆದು ಪೋಷಿಸುವ ಗುಣ ಹೈತೋಅವರಲ್ಲಿದೆ. ಇದರೊಂದಿಗೆ ಪ್ರತಿಭೆಗಳನ್ನು ಗುರುತಿಸಿ ಅವರ ಪುಸ್ತಕಗಳಿಗೆ ಮುನ್ನುಡಿ, ಬೆನ್ನುಡಿ ಹಾಗೂ ಆಶಯ ನುಡಿ ಬರೆಯುತ್ತ ಬೆನ್ನು ತಟ್ಟುವ ಕ್ರಿಯೆಯಲ್ಲಿ ಸದ್ದಿಲ್ಲದಂತೆ ತೊಡಗಿಸಿಕೊಂಡಿರುವುದು ಇವರ ವ್ಯಕ್ತಿತ್ವದ ಹಿರಿಮೆಯಾಗಿದೆ. ಇವರು ‘ಕಾವ್ಯಮನೆ ಪ್ರಕಾಶನ’ದ ಅಡಿಯಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಟ್ಟಿರುವುದು, ಕಲ್ಪಿಸಿಕೊಡುತ್ತಿರುವುದು ಹಾಗೂ ನಾಡಿನ ಹೆಸರಾಂತ ಬರಹಗಾರರ ಕೃತಿಗಳನ್ನು ಪ್ರಕಟಿಸುತ್ತಿರುವುದು ಇವರೊಳಗಿನ ಪುಸ್ತಕ ಪ್ರೀತಿಯನ್ನು ಧ್ವನಿಸುತ್ತದೆ. ಈ ಪ್ರಕಾಶನದಿಂದ ಇಲ್ಲಿಯವರೆಗೆ ೦೭ ಪುಸ್ತಕಗಳು ಪ್ರಕಟವಾಗಿವೆ. ೨೦೧೭ ರಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ‘ಉತ್ತಮ ಪ್ರಕಾಶನ ಪ್ರಶಸ್ತಿ’ಯು ಇದಕ್ಕೆ ಲಭಿಸಿದೆ. ಇದರೊಂದಿಗೆ ಈ ಪ್ರಕಾಶನದಿಂದ ಪ್ರಕಟಗೊಂಡ ಹಲವು ಕೃತಿಗಳಿಗೆ ಸಾಹಿತ್ಯ ಅಕಾಡೆಮಿ ಹಾಗೂ ಇತರ ಪ್ರತಿಷ್ಠಿತ ಪ್ರಶಸ್ತಿ, ಪುರಸ್ಕಾರ ದೊರೆತಿರುವುದನ್ನು ಇಲ್ಲಿ ಸ್ಮರಿಸಬಹುದು. ಕಪಿಲಾ ಹುಮನಾಬಾದೆ ಅವರ‌ ‘ಹಣಾದಿ’ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,

ಕಟ್ಟಿಮನಿ ಪ್ರಶಸ್ತಿ,

ಪ್ರಜಾವಾಣಿ ಸಾಹಿತ್ಯ ಪ್ರಶಸ್ತಿ ಹಾಗೂ ಗುಲ್ಬರ್ಗಾ ವಿ.ವಿ. ನೀಡುವ ರಾಜ್ಯೋತ್ಸವ ಪ್ರಶಸ್ತಿ… ಇನ್ನೂ ಎನ್.ಎಸ್.ಚಾಂದ್ ಬಾಷಾ (ಕವಿಚಂದ್ರ) ಇವರಿಗೆ ‘ಚಿ.ಶ್ರೀನಿವಾಸರಾಜು ರಾಜ್ಯ ಪ್ರಶಸ್ತಿ’, ‘ಅವ್ವಾ ಪ್ರಶಸ್ತಿ’,

ಶ್ರೀಲಂಕಾ ಮತ್ತು ಇಟಲಿಯಲ್ಲಿ ಕಾವ್ಯವಾಚನ ಹಾಗೆ ಶ್ರೀಮತಿ ಸ್ನೇಹಲತಾ ಗೌನಳ್ಳಿಯವರಿಗೆ ದಕ್ಷಿಣ ಭಾರತದ ತೆಲಂಗಾಣಾ ರಾಜ್ಯದ ದ್ರಾವಿಡ ಗಜಲ್ ಪ್ರಶಸ್ತಿ..ಈ ಎಲ್ಲ ಗೌರವ ಲಭಿಸಿರುವುದು ಹೈತೋ ಅವರು ಮುನ್ನಡೆಸುತ್ತಿರುವ ಕಾವ್ಯ ಮನೆಯ ಸಾಹಿತ್ಯ ಹಾಗೂ ಸಾಂಸ್ಕೃತಿಕ ಒಲವನ್ನು ಪ್ರತಿಬಿಂಬಿಸುತ್ತದೆ. ಉತ್ತಮ ಸಂಘಟಕರಾದ ಶ್ರೀಯುತರು ಅನೇಕ ಸಂಘ, ಸಂಸ್ಥೆಗಳಲ್ಲಿ ಸಕ್ರೀಯವಾಗಿದ್ದಾರೆ. ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿಗಳಾಗಿಯೂ ಸೇವೆಯನ್ನು ಸಲ್ಲಿಸಿರುವ ಇವರು

‘ಬಂಡಾಯ ಸಾಹಿತ್ಯ ಸಂಘಟನೆ ಕರ್ನಾಟಕ’ದ ಕೇಂದ್ರ ಸಮಿತಿಯ ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿ ಜಿಲ್ಲೆಯ ಅಲ್ಪ ಸಂಖ್ಯಾತ ಪ್ರತಿನಿಧಿಯಾಗಿ ಕನ್ನಡದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಮಾಜಮುಖಿ ಹಲವು ಚಳುವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರು ನಾಡಿನ ಹಲವಾರು ಕವಿಗೋಷ್ಠಿ, ಗಜಲ್ ಗೋಷ್ಠಿ, ಉಪನ್ಯಾಸ, ಕಾರ್ಯಾಗಾರದಂತಹ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ, ಬೇರೆಡೆಗಳಲ್ಲೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತಮ್ಮ ಸಾಹಿತ್ಯಿಕ ಪ್ರೀತಿಯನ್ನು ಹಂಚಿದ್ದಾರೆ. ಇವರ ವೈವಿಧ್ಯಮಯ ಬರಹವು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಆಕಾಶವಾಣಿ ಧಾರವಾಡˌ ಬೆಂಗಳೂರು ಉತ್ತರ, ಹೊಸಪೇಟೆ ನಗರದ ದೂರದರ್ಶನಗಳಲ್ಲಿ ಶ್ರೀಯುತರ

ಸಂದರ್ಶನವು ಪ್ರಸಾರವಾಗಿದೆ. ಇವರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಗಮನಿಸಿ ರಾಜ್ಯದ ವಿವಿಧ ಸಂಘ, ಸಂಸ್ಥೆಗಳು ಗೌರವಿಸಿ ಪ್ರಶಸ್ತಿ ನೀಡಿ ಸತ್ಕರಿಸಿವೆ.‌ ಇವುಗಳಲ್ಲಿ ‘ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿ’, ‘ಸಿಂಪಿಲಿಂಗಣ್ಣ ರಾಜ್ಯ ಪ್ರಶಸ್ತಿ’, ‘ಭಾವೈಕ್ಯತಾ ವೇದಿಕೆಯ ಜಿಲ್ಲಾ ಪ್ರಶಸ್ತಿ’, ‘ಹೊನ್ಕಲ್ ಸಾಹಿತ್ಯ ಪ್ರಶಸ್ತಿ’… ಮುಂತಾದವುಗಳನ್ನು ಹೆಸರಿಸಬಹುದು.

     ಪ್ರೀತಿಯು ಜೀವನದ ಎಲ್ಲಾ ಭಾರ ಮತ್ತು ನೋವಿನಿಂದ ನಮ್ಮನ್ನು ಮುಕ್ತಗೊಳಿಸುವಂತೆ ಗಜಲ್ ಕಂಬನಿಯ ಕಡಲಿಗೆ ಅಮೃತದ ಧಾರೆಯನ್ನು ಹರಿಸುತ್ತದೆ. ಇದು ಯಾವಾಗಲೂ ತಾಳ್ಮೆ ಮತ್ತು ದಯೆಯಿಂದ ಕೂಡಿದ್ದು, ಯಾವತ್ತಿಗೂ ಅಸೂಯೆಪಡುವುದಿಲ್ಲ. ಜಂಭ ಅಥವಾ ಅಹಂಕಾರ ಇದರ ಹತ್ತಿರವೂ ಸುಳಿಯುವುದಿಲ್ಲ. ಪ್ರೀತಿಯು ಇತರ ಜನರ ಪಾಪಗಳಲ್ಲಿ ಸಂತೋಷಪಡುವುದಿಲ್ಲ, ಬದಲಿಗೆ ಸತ್ಯದಲ್ಲಿ ಸಂತೋಷವನ್ನು ಅರಸುತ್ತದೆ. ಇದು ಯಾವಾಗಲೂ ಕ್ಷಮಿಸಲು, ನಂಬಲು, ಭರವಸೆ ನೀಡಲು ಮತ್ತು ಏನೇ ಬಂದರೂ ಸಹಿಸಿಕೊಳ್ಳಲು ಸಿದ್ಧವಾಗಿರುತ್ತದೆ. ಪ್ರೀತಿಯ ಈ ವಿವಿಧ ಆಯಾಮಗಳ ಅನಾವರಣವೆ ಗಜಲ್. ವಿಷಯ ಏನೇ ಇದ್ದರೂ ಅಭಿವ್ಯಕ್ತಿಸುವ ಮಾರ್ಗವೆಂದರೆ ಒಲವಿನ ಚಾದರ್. ಗಜಲ್ ಎಂದಿಗೂ, ಯಾವತ್ತಿಗೂ ಅಸಭ್ಯ ಅಥವಾ ಸ್ವಾರ್ಥದ ಸೆಲೆಯಲ್ಲಿ ಚಿಗುರಲಾರದು. ಪ್ರೀತಿಯಿಂದ, ಪ್ರೀತಿಗಾಗಿ, ಪ್ರೀತಿಗೋಸ್ಕರ ಎನ್ನುವಂತೆ ಗಜಲ್ ರೂಪುಗೊಂಡಿದೆ. ಈ ದಿಸೆಯಲ್ಲಿ ಸುಖನವರ್ ಶ್ರೀ ಅಬ್ದುಲ್ ಹೈ. ತೋರಣಗಲ್ಲು ಅವರ ಗಜಲ್ ಗಳನ್ನು ಗಮನಿಸಿದಾಗ ಇವರ ಮನಸ್ಸು ಸಮಾಜದ ಪ್ರತಿಯೊಂದು ಘಟನೆಗಳಿಗೆ ಸ್ಪಂದಿಸಿರುವುದು ಮನದಟ್ಟಾಗುತ್ತದೆ. ಸಾಮಾಜಿಕ ವ್ಯವಸ್ಥೆಯ ವಿಷವರ್ತುಲದ ಬಗೆಗೆ ಗಜಲ್ ಕಾರರ ತಣ್ಣನೆಯ ಕ್ರೋಧ, ಮೌಲ್ಯಗಳ ಅಪಮೌಲ್ಯ ಕುರಿತು ಸಾತ್ವಿಕ ಸಿಟ್ಟು, ಜಾತಿ-ಧರ್ಮವೆಂಬ ಮುಳ್ಳುಗಳ ಬಗೆಗಿನ ಹೇಸಿಕೆ, ಸಮಾಜವನ್ನು ಪ್ರೀತಿಸುವ ಸಮತಾವಾದ,…. ಇವೆಲ್ಲವು ಇವರ ಗಜಲ್ ಗಳಲ್ಲಿ ಜೀವವನ್ನು ಪಡೆದುಕೊಂಡು ಉಸಿರಾಡುತ್ತಿವೆ.

ಇನ್ನೂ ಹಾಡಿರದ ಹಾಡೊಂದು ಹಾಡಬೇಕಿದೆ ಸಾಜನ್ 

ಬದುಕಿರದ ಬದುಕೊಂದು ಬದುಕಬೇಕಿದೆ ಸಾಜನ್”

ಎನ್ನುವ ಷೇರ್ ಓದುಗರನ್ನು ತಾತ್ವಿಕ ಚಿಂತನೆಯತ್ತ ಕೊಂಡೊಯ್ಯುತ್ತದೆ. ಇಲ್ಲಿಯ ‘ಸಾಜನ್’ ಎಂಬ ರದೀಫ್ ಬಹು ಆಯಾಮದ ಅರ್ಥವನ್ನು ಹೊಂದಿದೆ. ‘ಹಾಡಿರದ ಹಾಡು’, ‘ಬದುಕಿರದ ಬದುಕು’ ಎಂಬುವು ಅಂತರಂಗದ ಒಳನೋಟಗಳನ್ನು ಸೂಚಿಸುತ್ತ, ಜೀವನ ಎಂದರೆ ಕೇವಲ ಕಣ್ಣಿಗೆ ಕಾಣಿಸುವ ಘಟನೆಗಳ ಸರಮಾಲೆಯಲ್ಲ, ಇದೊಂದು ಬಿಯಾಂಡ್ ದಿ ವಿಷನ್ ಎಂದು ಅರುಹುತ್ತದೆ. ಈ ದಿಸೆಯಲ್ಲಿ ಮಾನವನ ಬದುಕು ತುಂಬಾ ಅನುಪಮವಾದುದು. ಏನೆಲ್ಲ ಕಲಿತರೂ ನಾವು ಇನ್ನೂ ಬದುಕುವುದನ್ನು ಕಲಿಯಬೇಕಿದೆ. ನಮ್ಮ ಬಾಳು ಯಾವತ್ತೂ ಕಲಿಸುವುದನ್ನು ನಿಲ್ಲಿಸುವುದಿಲ್ಲ. ಕಲಿಕೆ ಮುಗಿದಿದೆ ಎಂದರೆ ಪ್ರಾಣವಾಯು ನಮ್ಮಿಂದ ನಿರ್ಗಮಿಸಿದೆ ಎಂದರ್ಥ ಎಂಬುದನ್ನು ಈ ಷೇರ್ ಧ್ವನಿಸುತ್ತದೆ. 

     ಇತ್ತೀಚಿನ ದಿನಗಳಲ್ಲಿ ಖಿನ್ನತೆ ಎನ್ನುವುದು ಸಾಮಾನ್ಯ ಎನ್ನುವಷ್ಟರ ಮಟ್ಟಿಗೆ ಸಮಾಜವನ್ನು, ಅದರಲ್ಲೂ ಯುವ ಮನಸ್ಸುಗಳನ್ನು ವ್ಯಾಪಿಸಿಕೊಂಡಿದೆ. ಹಿಂದೆಂದಿಗಿಂತಲೂ ಇಂದು ತಮ್ಮ ಕಾವ್ಯ ಸೋತ ಮನಸುಗಳಿಗೆ ಸಾಂತ್ವನ ನೀಡುತ್ತ, ಜೀವನ ಶ್ರದ್ಧೆ ಮೂಡಿಸುವುದು ಪ್ರತಿಯೊಬ್ಬ ಕವಿ-ಕಲಾವಿದ-ಚಿಂತಕರ ಮೂಲ ಗುಣವಾಗಬೇಕಿದೆ. ಈ ನಿಟ್ಟಿನಲ್ಲಿ ಕೆಳಗಿನ ಷೇರ್ ಸಮಾಜಮುಖಿಯಾಗಿ ನಿಲ್ಲುತ್ತದೆ.

ಬದುಕಿನ ಹಾದಿಯಲ್ಲಿ ಸವಾಲುಗಳು ಸಾವಿರ ಸಾವಿರ

ಗೆಲ್ಲಲು ಸದಾ ಇರಬೇಕು ತನ್ಮಯತೆಯೆಂದು ಬಿಟ್ಟ

ಜೀವನ ಎನ್ನುವುದು ಹೋರಾಟ, ಸಂಘರ್ಷ, ಯುದ್ಧ… ಎಂದೆಲ್ಲ ಕರೆಯುತ್ತೇವೆ. ಆದರೆ ಇಲ್ಲೆಲ್ಲ ತಯಾರಿಗೆ ಕಾಲಾವಕಾಶವಿದೆ. ಆದರೆ ನಮ್ಮ ಬದುಕಿನಲ್ಲಿ…ಈ ನೆಲೆಯಲ್ಲಿ ಯೋಚಿಸಿದಾಗ ಮನುಷ್ಯನ ಬದುಕು ಎನ್ನುವುದು ಯುದ್ದದಾಚೆಗೆ ನಿಲ್ಲುತ್ತದೆ. ಗೋರಿಯವರೆಗಿನ ಪ್ರಯಾಣದಲ್ಲಿ ನಾವು ನಿತ್ಯ ನಿರಂತರವಾಗಿ ಸಮಸ್ಯೆ-ಸವಾಲುಗಳಿಗೆ ಎದೆಯೊಡ್ಡಿ ನಿಲ್ಲಲೆಬೇಕು.

       ಹಿಂದೆಂದಿಗಿಂತಲೂ ಇಂದು ದುಡ್ಡಿನ ವಹಿವಾಟು ಹೆಚ್ಚಾಗಿದೆ. ಎಲ್ಲಿ ಬೇಕಾದರೂ ದುಡ್ಡು ಸಾಲದ ರೂಪದಲ್ಲಿ ಸಿಗುತ್ತದೆ ಎನ್ನುವ ಧೈರ್ಯ, ವಿಶ್ವಾಸ ಹಾಗೂ ಭಂಡತನಕ್ಕೇನೂ ಬರವಿಲ್ಲ. ಆದರೆ ಕೊರತೆ ಇರುವುದು ಮಾತ್ರ ಪ್ರೀತಿಯ ಸಿಂಚನದಲ್ಲಿ. ಈ ದಿಸೆಯಲ್ಲಿ ಪ್ರೀತಿ ಹಂಚುವ ಗಜಲ್ ಗಳು ಸುಖನವರ್ ಶ್ರೀ ಅಬ್ದುಲ್ ಹೈ. ತೋರಣಗಲ್ಲು ಅವರಿಂದ ಹೆಚ್ಚು ಹೆಚ್ಚು ರಚನೆಯಾಗಲಿ, ಅವುಗಳು ಸಂಕಲನ ರೂಪ ಪಡೆದು ಸಹೃದಯ ಓದುಗರ ಮನವನ್ನು ತಣಿಸಲಿ ಎಂದು ಶುಭ ಕೋರುತ್ತೇನೆ.

ಬಲಿದಾನದ ಈ ಕರ್ಮದಲ್ಲಿ ನಾನು ಎಂದಿಗೂ ಒಂಟಿಯಾಗಿರುವುದಿಲ್ಲ

ನೀನು ಯಾವ ದಿನ ಬರುವುದಿಲ್ಲವೊ ಆ ದಿನ ನಿನ್ನ ನೆನಪುಗಳು ಬರುತ್ತವೆ”

ಜಲೀಲ್ ಮಾನಿಕಪುರಿ

     ಮನುಷ್ಯನ ಮನಸು ತಳಮಳಗಳ ಗೋದಾಮು. ಶಾಂತಿ, ನೆಮ್ಮದಿ ನಮ್ಮನ್ನು ಆವರಿಸಬೇಕಾದರೆ ಗಜಲ್ ನ ಪಾತ್ರ ಅನನ್ಯ. ಇಂಥಹ ಗಜಲ್ ಜನ್ನತ್ ನಲ್ಲಿ ವಿಹರಿಸುತ್ತಿರಬೇಕಾದರೆ ಹಲವು ಬಾರಿ ಕಾಲವನ್ನೂ ಶಪಿಸಿದ್ದೇನೆ. ಆದರೂ ಕಾಲದ ಮುಂದೆ ಮಂಡಿಯೂರಲೆ ಬೇಕಲ್ಲವೇ.. ಅನಿವಾರ್ಯವಾಗಿ ಇಂದು ನನಗೆ ಇಲ್ಲಿಂದ ನಿರ್ಗಮಿಸಲೆಬೇಕಿದೆ, ಮತ್ತೆ ಮುಂದಿನ ಗುರುವಾರ‌ ತಮ್ಮ ಮುಂದೆ ಬರುವೆ..ಹೋಗಿ ಬರುವೆ….


ರತ್ನರಾಯಮಲ್ಲ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top