ಅಂಕಣ ಸಂಗಾತಿ

ಸಕಾಲ

ಹಳೆ ನೆನಪುಗಳು ಹೊಸ ವರುಷಕೆ‌ ವರ್ಗಾವಣೆಯಾದಂತೆ

ಹಳೆ ನೆನಪುಗಳು ಹೊಸ ವರುಷಕೆ‌ ವರ್ಗಾವಣೆಯಾದಂತೆ.

ಯಾವ ಮುನ್ನುಡಿ ಬರೆದರೆ ಹೊಸವರ್ಷ ಹೊಸದಾಗಿ ಪಾದಾರ್ಪಣೆ ಮಾಡುತ್ತೆ? ಏನೆಲ್ಲ ಸರಿದೂಗಿಸಿದರೆ ಹೊಸ ‌ವರ್ಷಕೆ ಸರಿಹೋಗುತ್ತೆ? ಪ್ರತಿ ತಿಂಗಳು ಕ್ಯಾಲೆಂಡರ್ ತಿರುವಿಹಾಕಿ ಅಲ್ಲಿಯ ದಿನಾಂಕಗಳಿಗೆ ಗುರುತು ಹಾಕಿ ಈ ದಿನ ಕಹಿಯೋ ಈ ದಿನ ಸಿಹಿಯೋ ಎಂಬ ನೆನಪುಗಳನ್ನು ಗುರುತಿಸಿದ್ದನ್ನು ನೋಡಿದಷ್ಟು ಮನಸ್ಸು ಒಮ್ಮೆ ನಕ್ಕು,ಇನ್ನೊಮ್ಮೆ ಕಣ್ಣೀರು‌ಹಾಕುವ ಕ್ಷಣಗಳು ಮರೆತರು ಮರೆಯಲಾಗದಂತಹುದು.ಯಾವ ವರ್ಷ ಅಥವಾ ಯಾವ ತಿಂಗಳು ಯಾರಿಗೂ ಅನಾಹುತ ಮಾಡಿಲ್ಲ.ಆದ್ರೆ ನಮ್ಮಗಳ ಭಾವನೆಗಳು ಬಿಕರಿಯಾಗಿ ೧೨ ತಿಂಗಳಲ್ಲಿ ಬದಲಾಗುವ ಋತುಮಾನಕ್ಕೆ ನಾವು ಒಗ್ಗಿದಂತಾಗಿದೆ.

ನನಗೂ‌‌ ಅಂತಲ್ಲ ನನ್ನಂತಹ ಕೋಟಿ ಜನರಿಗೂ ವರ್ಷದ ಪ್ರತಿ ದಿನಗಳು ಒಂದಲ್ಲ ಒಂದು ತಿರುವು ತರಲಿಕ್ಕೆ ಸಾಕು.ಹಾಗಂತ ಎಲ್ಲ ದುಃಖಮಯ, ಸುಖಮಯವಾಗಿರಬೇಕು‌ ಅಂತೆನಿಲ್ಲ.ಮೇ ತಿಂಗಳು‌ ನನ್ನ ಜೀವನದಲ್ಲಿ ಮರೆಯಲಾಗದ ತಿಂಗಳು.ನಾವಂದುಕೊಂಡಷ್ಟು ಸುಲಭವಾಗಿ ಜೀವನ ಸಿಗುತ್ತದೆ ಅಂತಾದರೆ‌ ಅದರ ಹಿಂದಿನ ಭಾವಗಳು,ಮನಸುಗಳು ಎಷ್ಟೊಂದು ಕಸರತ್ತು ನಡೆಸಿರಬೇಕು.ಒಂದು ಅಕಾಲಿಕ ಮಳೆ ಸುರಿದಾಗ ಏನೆಲ್ಲ ಸಂಭವಿಸಬಹುದೋ‌ ಅದೆಲ್ಲ ಒಮ್ಮೆಲೆ ಸುರಿದು ಬಂಜರು ಭೂಮಿ ನಿರ್ಮಾಣ ಮಾಡಿದಂತೆ.ಬೆಳೆಬೆಳೆಯದೆ ಕಳೆಗಳು ಬೆಳೆದು  ಬದುಕನ್ನು ನೀರಸ ಮಾಡಿದಂತೆ. ಅಹಿತಕರ ಘಟನೆಗಳು ಹುನ್ನಾರವಾಗಿ ಬೆನ್ನಹಿಂದೆ ನಡೆಯುತ್ತಿದ್ದರೂ ಏನು ಗೊತ್ತಿಲ್ಲದಂತೆ ಮುಖವಾಡಗಳು ನಮ್ಮ ಜೊತೆಗೆ ಬೆರೆಯುತ್ತಿರುವುದು ವಿಷಾದನೀಯ.ನಂಬಿಕೆಗಳು,

ವಿಶ್ವಾಸಗಳು,ಪ್ರಾಮಾಣಿಕತೆ,ಪ್ರೀತಿ,ಭರವಸೆ ಎಲ್ಲವೂ ಮುಖವಾಡವಾದರೆ ನಂಬುದು ಯಾರನ್ನು? ಜೀವಿಸುವುದಾದರೂ ಹೇಗೆ

ಹಳೆನೆನಪುಗಳು ಹೊಸವರುಷಕೆ‌ ವರ್ಗಾವಣೆಯಾದಂತೆ..ಈ ಹೊಸವರ್ಷದ ಆರಂಭವೆನಿಸಿದೆ.

ಅಬ್ವಾ! ಎನ್ನಿಸದೇ ಇರದು.ಅಂತು ಬಯಲಾದ ಬಯಲಿಗೆ ಮುಚ್ಚು ಮರೆಯಾಕೆ? ಪ್ರತಿ ತಿಂಗಳು ಅದರದ್ದೆ ಆದ ದಿನಗಳ ಲೆಕ್ಕದಲ್ಲಿ  ಎಲ್ಲವನ್ನೂ ಸೇರಿಸಿ ಮುಂದಕೆ‌ ಸಾಗುತ್ತಿದೆ.ಸಮಯ ಯಾರ‌ಸೊತ್ತು ಅಲ್ಲ.

ನನಗೀಗಿಗ ಬದುಕು ಇಷ್ಟೇ ಅನ್ನಿಸಿದೆ.ಪ್ರತಿವರ್ಷವೂ ಇದು ನಡೆಯುತ್ತದೆ ಬಹುಶಃ ಎಲ್ಲ ವರ್ಷಗಳಲ್ಲಿಯೂ ನಮ್ಮ ಬದುಕಿನಲ್ಲಿ ಏರಿಳಿತಗಳು ಸಹಜವೇ.. ಆದರೂ ಹೊಸ ವರುಷ ಬರುತ್ತಿದ್ದಂತೆಯೇ ನಮ್ಮಲ್ಲಿ ಆಶಾಭಾವನೆ ಮೂಡುವುದು ಮಾಮೂಲಿ.ಹೀಗಾಗಿ ಹೊಸವರುಷವನ್ನು ಸ್ವಾಗತಿಸಲು ಸಜ್ಜಾಗುವುದು ಕೇವಲ ಕ್ಯಾಲೆಂಡರ್ ಬದಲಿಸುವುದೇ ಹೊರತು ಮತ್ತೇನಿಲ್ಲ.ಕಳೆದ ಅಷ್ಟು ವರ್ಷಗಳ ಬಗ್ಗೆ ಮೆಲುಕು ಹಾಕುತ್ತಾ ಹೋದರೆ ಪಡೆದಿದ್ದು, ಕಳೆದುಕೊಂಡಿದ್ದು ಹೀಗೆ ದೊಡ್ಡ ಪಟ್ಟಿಯೇ ನಮ್ಮ ಮುಂದೆ ಬಂದು ನಿಂತು ಬಿಡುತ್ತದೆ. ಖುಷಿ, ಸಂತಸ, ನೋವು, ನಲಿವು ಎಲ್ಲವನ್ನು ಮೀರಿ ನಾವು ಬದುಕುತ್ತಿದ್ದೇವೆ. ಅದು ಅನಿವಾರ್ಯ. ಸಾಮಾನ್ಯವಾಗಿ ಕಷ್ಟಗಳು ವ್ಯಕ್ತಿಗತವಾಗಿ ಬರುತ್ತಿದ್ದವು.ಸಂಬಂಧಗಳಿಗೆ ಬೆಲೆಯಿಲ್ಲ.ಎಲ್ಲ ಸ್ವಾರ್ಥ ಸಾಧನೆಗಾಗಿ,ಯಾರ ಸಂಬಂಧ ಹಾಳಾದರೂ ಚಿಂತೆಯಲಿಲ್ಲ ಅವರಿಗೆ ಸುಖಸಿಕ್ಕರೆ ಸಾಕೆಂದು ಮಣ್ಣುಪಾಲು ಮಾಡುವ ಸಂಬಂಧಿಗಳು ನಕ್ಷತ್ರಕನಂತೆ ವರ್ಷದುದ್ದಕ್ಕೂ ನಮ್ಮ ಜೊತೆ ಹೇಳ ಹೆಸರಿಲ್ಲದೆ ಇರುವಂತವರು ಕೊರೋನಾಕ್ಕಿಂತ ಭಯಂಕರ ಅಂದರೆ ವಿಶೇಷವೆನಲ್ಲ.

ಕಳೆದ ಎರಡು ವರ್ಷಗಳನ್ನು ನಾವು ಕೊರೊನಾ ಭಯದಲ್ಲಿಯೇ ಸ್ವಾಗತಿಸಿದ್ದೇವೆ. ಈ ಬಾರಿ ಎಲ್ಲವೂ ಸರಿಹೋಯಿತು ಎಂದು ಕೊಳ್ಳುವಾಗಲೇ ಮತ್ತೆ ಭಯ ಆವರಿಸಲಾರಂಭಿಸಿದೆ. ನಿಧಾನವಾಗಿ ಸೋಂಕುಗಳು ಏರಿಕೆಯಾಗುತ್ತಿವೆ. ಹೊಸ ತಳಿಗಳು ಹುಟ್ಟಿಕೊಂಡು ಭೀತಿಯನ್ನು ತಂದೊಡ್ಡುತ್ತಿವೆ. ಆದ್ದರಿಂದ ಹೊಸವರ್ಷಾಚರಣೆ ಕೊರೊನಾ ಮಾರ್ಗಸೂಚಿಯೊಂದಿಗೆ ನಡೆಯುವುದು ಅನಿವಾರ್ಯವಾಗಿದೆ. ಸಂಕಷ್ಟ ಎದುರಿಸಿರುವ ಕಾರಣ. ನಮ್ಮೆಲ್ಲ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ಆರೋಗ್ಯವನ್ನು ಬೇಡುವಂತಾಗಿದೆ.ನಮ್ಮ ಸುತ್ತಮುತ್ತಲ ಜಗತ್ತು ಆರೋಗ್ಯವಾಗಿದ್ದರೆ ನಾವು ಆರೋಗ್ಯವಾಗಿರಲು ಸಾಧ್ಯ ಎನ್ನುವುದನ್ನು ಕೊರೊನಾದಂತಹ ಕಾಯಿಲೆ ತೋರಿಸಿಕೊಟ್ಟಿದೆ. ಪರಿಣಾಮ ಸ್ವಾರ್ಥ ಬದಿಗೊತ್ತಿ ಸುತ್ತಮುತ್ತಲಿನವರು ಆರೋಗ್ಯವಂತರಾಗಿದ್ದರೆ ಮಾತ್ರ ನಾವು ಆರೋಗ್ಯವಾಗಿರಲು ಸಾಧ್ಯ ಎಂಬುದನ್ನು ಕೊರೊನಾ ತೋರಿಸಿಕೊಟ್ಟಿದೆ.ಆದ್ರೆ ಇನ್ನೂ ಕೆಲವರು ಇದರಿಂದ ಪಾಠ ಕಲಿತಂತೆ ಕಾಣುವುದಿಲ್ಲ.ದುಷ್ಟ ಮನಸ್ಸನ್ನು ಬದಲಿಸಿಲ್ಲ ಆದರೂ ಯಾರಿಗಾಗಿ ದಿನ,ಸಮಯ ನಿಲ್ಲದು.ಅವರಿಗೂ ಒಂದು ಸಮಯ ಬರೆದಿರುತ್ತದೆ ಎಂದು ಹಿರಿಯರು ಹೇಳಿದ ನೆನಪು.

ಆದ್ದರಿಂದ ಹೊಸವರ್ಷದಲ್ಲಿ ಎಲ್ಲರೂ ಆರೋಗ್ಯವಾಗಿರಲಿ,ಕೆಟ್ಟ ಮನಸ್ಸು ಪರಿಸರ ಹಾಳುಮಾಡದಿರಲಿ ಎಂದು ಹಾರೈಸಿದರೆ ಒಳಿತೇನೋ.

ಹೊಸ ವರ್ಷದ ಹೊಸ್ತಿಲಲ್ಲಿ ನಿಂತು ಹಿಂತಿರುಗಿ ನೋಡಿದರೆ ೨೦೨೨ ಮನಸ್ಸನ್ನು ತುಂಬಾ ನೋಯಿಸಿದ ಕ್ಷಣವಿದು.ಹಾಗೇನೆ ಸಂತಸವನ್ನು ಕೊಟ್ಟ ಕ್ಷಣಗಳನ್ನು ನೆನೆದರೆ  ನೆಮ್ಮದಿ.ಮಳೆ ಚೆನ್ನಾಗಿ ಆಗಿದೆ.ಅತಿವೃಷ್ಠಿ, ಅನಾವೃಷ್ಠಿಯಿಂದ, ಪ್ರವಾಹದಿಂದ ಸಂಕಷ್ಟವೂ ಸಂಭವಿಸಿದೆ. ಒಂದಷ್ಟು ಹಿರಿಯರು ನಮ್ಮಿಂದ ದೂರವಾಗಿದ್ದಾರೆ.ರಾಜಕೀಯ ಜಿದ್ದಾ ಜಿದ್ದಿಗಳು, ಕೋಮು ಗಲಭೆ, ಹತ್ಯೆ, ಅಪಘಾತಗಳು ನಡೆದಿವೆ. ಸಾವು ನೋವುಗಳು ಆಗಿವೆ. ಅದರ ನಡುವೆ ಒಂದಷ್ಟು ಖುಷಿಯನ್ನು ಅನುಭವಿಸಿದ್ದೇವೆ. ನಾವು ಎಲ್ಲ ಕಾಲದಲ್ಲಿ ಎಲ್ಲವನ್ನೂ ಮೀರಿ ಬದುಕನ್ನು ಸಾಗಿಸಬೇಕಾಗಿದೆ. ಕೊರೊನಾ ಬಂದ ಬಳಿಕ ನಮ್ಮೆಲ್ಲ ಸಂಕಟ, ಸಾವು, ನೋವು, ದುಃಖ ದುಮ್ಮಾನ, ಈಡೇರದೆ ಉಳಿದು ಹೋದ ಬಯಕೆಗಳು ಹೀಗೆ ಎಲ್ಲ ನೋವು, ನಿರಾಸೆಗಳ ನಡುವೆಯೂ ಹೊಸವರ್ಷಕ್ಕೆ ಹೊಸ ನಿರೀಕ್ಷೆಯಲ್ಲಿಯೇ ಕಾಲಿಡಬೇಕಾಗಿದೆ.ಇನ್ನೇನು ಡಿಸೆಂಬರ್ ತಿಂಗಳು ಮುಗಿಯಿತು-ಬರುವುದೇ ಆಂಗ್ಲರ ಹೊಸ ವರ್ಷಾರಂಭ ಜನವರಿ ತಿಂಗಳಿಂದ. ಅದು ಈಗ ವಿಶ್ವವ್ಯಾಪಿಯಾಗಿದೆ. ಎಲ್ಲರೂ ಅಂದೇ ಹೊಸ ವರ್ಷವನ್ನು ಆಚರಿಸುತ್ತಾರೆ. ಅದರಲ್ಲೂ ಭಾರತೀಯರೇನೂ ಹೊರತಲ್ಲ.

ನಾವು ಸವೆಸಿ ಬಂದ ಅಷ್ಟು ವರ್ಷಗಳು ಅಮೂಲ್ಯವೇ. ಹೀಗಾಗಿ ಒಳ್ಳೆಯ ಕ್ಷಣಗಳನ್ನು ಮೆಲುಕು ಹಾಕುತ್ತಾ ನೋವುಗಳನ್ನು ಮರೆತು ಬಿಡೋಣ. ಪ್ರತಿದಿನವೂ ನಮ್ಮದು ಹೊಸ ಬದುಕು ಎನ್ನುವಂತೆ ಬದುಕೋಣ. ನಮ್ಮಲ್ಲಿರುವ ಆತ್ಮವಿಶ್ವಾಸಕ್ಕೆ ತುಕ್ಕು ಹಿಡಿಯದಂತೆ ನೋಡಿಕೊಳ್ಳುತ್ತ, ಭಾರತೀಯರಿಗೆ ಇದು ಹೊಸವರ್ಷದ ಆರಂಭವಲ್ಲ.ಯುಗಾದಿಯಿಂದ ನಮಗೆ ಚೈತ್ರದ ಚಿಗುರಿನೊಂದಿಗೆ ನಿಸರ್ಗ ಹಚ್ಚಸರಿರುಡುಗೆಯಲ್ಲಿ ನಳಿನಳಿಸುವಾಗ ಬೇವು ಬೆಲ್ಲದೊಂದಿದೆ ಆಚರಿಸುವುದಾಗಿದೆ.ಜನವರಿ ೧ ಮಾತ್ರ ಕ್ಯಾಲೆಂಡರ್ ತಿರುವಿಹಾಕುವುದಷ್ಟೇ ಹೊರತು ಮತ್ತೇನಿಲ್ಲ…

ಹಳೆಯ ವರ್ಷಕ್ಕೆ ನೆನಪಿನ ವಿದಾಯ ಹೇಳುತ್ತಾ ಹೊಸವರ್ಷ ಜನವರಿಯನ್ನು ಸ್ವಾಗತಿಸೋಣ.


ಶಿವಲೀಲಾ ಹುಣಸಗಿ

ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ

3 thoughts on “

  1. ಹೌದು, ಪ್ರೀತಿ, ವಿಶ್ವಾಸ, ನಂಬಿಕೆಗಳು, ಮುಖವಾಡವಾದರೆ ನಂಬುವುದು ಯಾರನ್ನು?
    ಸುಂದರ ಬರಹ

  2. ಪ್ರತಿ ವರ್ಷವೂ ಹಾಗೆ,ಹಳೆಯದನ್ನು ಮರೆತು ಹೊಸತನದ ಕಡೆ ಸಾಗಬೇಕೆನ್ನುವ ಭಾವ.
    ಸುಂದರ ಬರವಣಿಗೆ.

  3. ಸೋದರಿ ತಡವಾಯಿತು. ಕ್ಷಮಿಸಿ.
    ಅದು..ಇದು..ಓದು ಬರಹ
    ಇತ್ಯಾದಿಯಲ್ಲಿ ಹಳೆ ನೆನಪುಗಳೇ ಬಾರದಾಯಿತು. ಕಳೆದ ದಿನಗಳ ನೆನಪು‌ ಕೆಲವೊಂದು ಮಧುರ.. ಇನ್ನು ಕೆಲವು ಭಾರ. ಹೊಸ ವರ್ಷ ಬಂದಂತೆ ಕಳೆದು ಹೋಯಿತಲ್ಲ, ಒಂದು ವರ್ಷ ಎಂದಂತೆ. ಆದರೂ ಎಷ್ಟು ಹರುಷ ನೋಡಿ. ಮೋಡಿ ಹಾಕಿ ಬಿಡುತ್ತವೆ ಮನಸ್ಸಿನ ಪುಟಗಳು.‌ ಸ್ಫುಟವಾಗುತ್ತದೆ ಮತ್ತೆ‌‌ ಮುಂದಿನ ದಿನಕ್ಕೆ. ಬದುಕೇ ಹೀಗೆ ಅಲ್ಲವೆ? ಬದುಕಿಗೆ ಚೆಲುವು ಗೆಲುವು ಇರಬೇಕಾದರೆ…ಇಂಥ ಅನುಭಾವಿಕ ನುಡಿಗಳ ಮೆರಗು ಬೇಕು. ತುಂಬ ಸುಂದರ ಬರಹ ಓದಿ ಎದೆ ತುಂಬಿ ಬಂದಿತು. ಸರಳ ನುಡಿಯ ಆಕರ್ಷಕ ಶೈಲಿಯ ಬರಹಗಾರ್ತಿ ನೀವು. ನಿಮ್ಮ ಬರಹವನ್ನು ಓದುವುದೇ ಒಂದು ಆನಂದ!

    D.s.Naik sirsi

Leave a Reply

Back To Top