ಕಾವ್ಯ ಸಂಗಾತಿ
ನಿತ್ಯ ಮುನ್ನುಡಿ ಕವಿತೆ
ಸ್ಮಿತಾ ರಾಘವೇಂದ್ರ
ಈ ದಿನ ಹೊಸದೊಂದು ಕವಿತೆಗೆ ಮುನ್ನುಡಿಯಾದರೂ ಬರೆಯಲೇ ಬೇಕು
ಮುನ್ನೆಲೆಗೆ ಬಂದು ಕಾಡುವ ವಿಚಾರಗಳ ನಡುವೆಯೂ .
ಅರೇ,!ಎಷ್ಟು ಚಂದದ ಸಾಲೊಂದು ಹುಟ್ಟಿದೆ
ಈ ಕೋಗಿಲೆಯ ಉಲಿಗೆ
ಇಂದು ಹುರುಪಿದೆ ನೊಡು.
ಸುತ್ತುವ ಸಾಲುಗಳಿಗೀಗ
ಹೊಸ ಭಾವಗಳ ಅಲಂಕಾರ
ಉಪಹಾರದ ಗಡಿಬಿಡಿಯಲ್ಲಿ
ಉಪಯೋಗಿಸಲಾಗದೇ ಉಳಿದ ಅಕ್ಷರ.
ಮೈಮುರಿದು ಏಳುವಾಗಿನ ತೀವ್ರತೆ
ಅಲ್ಲಲ್ಲಿ ನಿಂತು ಅತುತ್ಸಾಹದಲಿ ಹೊಕ್ಕ
ನಿರುತ್ಸಾಹ.
ಪಾತ್ರೆಗಳ ಲಗುಬಗೆಯಲಿ ಗಲಬರಿಸಿ
ಅಂಗಿಗೆ ಅಂಗೈ ಒರೆಸಿಕೊಂಡು-
ಉಳಿದ ಹನಿಗಳ ತಾಕಿದ ಹಾಳೆ ಆರ್ದ್ರ
ಊಟದ ತಯಾರಿಯಲ್ಲಿ ಮನಸು ಮಗ್ನ.
ಸ್ನಾನದ ಮನೆಯಲ್ಲಿ ಮತ್ತೆ ನೆನಪಾಗುವ
ಅದೇ ಭಾವಗಳ ಮುಂದುವರಿದ ಭಾಗ
ಕನ್ನಡಿಯ ಮುಂದೆ ಅರಳಿ ಮರಳುವಾಗ
ಅಡುಗೆ ಮನೆಯಿಂದ-
ಸೀದ ವಾಸನೆಯೊಂದು ಮೂಗಿಗೆ ರಾಚಿ,
ಮುದ್ದಾದ ಸಾಲುಗಳೆಲ್ಲ ಈಗ ಕಮಟು.
ಸಿಡಿಮಿಡಿಯ ಮನಸು
ಇಳಿವ ಕಣ್ಣಾಲಿಗಳನೂ ತಡೆದು ಎದೆಯೊಳಗೊಂದು ಕಾರ್ಮೋಡ-
ಕರಗಿಸಲೊಂದು ಸಮಾಧಾನ,
ಇರಲಿ ರಾತ್ರಿಯವರೆಗೂ ಸಮಯವಿದೆ
ಏನಾದರೊಂದು ಗೀಚಲೇ ಬೇಕು.
ದಿನದ ಕಟ್ಟ ಕಡೆಯ ದೋಸೆ ಹಿಟ್ಟಿನ ಹದ ಮುಗಿಸಿ
ಬಿಡುಗಡೆಯ ನಿಟ್ಟುಸಿರು
ಮುದಗೊಂಡ ಮಂದ ಬೆಳಕಿನಲಿ
ಲಹರಿಗೆ ಬಂದ ಸಾಲು ತಡಕಾಡುವಾಗ
ಹೆಪ್ಪು ಹಾಕಿದ ಪಾತ್ರೆಯ “ಧಡಾರ್ “ಸದ್ದು.
ಸಿಕ್ಕ ಸಾಲುಗಳ ಮರೆತು ಬೆಳಗಿನ ಚಿಂತೆ.
ರಾತ್ರಿ ಕೈ ಮೀರುತ್ತಿದೆ,
ಬೆಳಿಗ್ಗೆ ಬೇಗ ಏಳಬೇಕಿದೆ,
ಮನಸು ದೇಹ ಎರಡರದೂ
ಕಳ್ಳ ಪೋಲೀಸ್ ಆಟ.
ನಾಳೆ ನೋಡೋಣ ಎನ್ನುವಲ್ಲಿಗೆ ಕವಿತೆ ಪೂರ್ಣಗೊಳ್ಳುತ್ತದೆ.
ಏನ್ ಸೊಗಸು ಈ ಭಾವ ಲಹರೀದ್ದೂ…..