ಕಾವ್ಯ ಸಂಗಾತಿ
ಗಜಲ್
ಎ. ಹೇಮಗಂಗಾ
ನಿನ್ನ ಧ್ವನಿ ನನ್ನ ಆವರಿಸಿ ಕಾಡುತಿದೆ ಹೇಗೆ ಬಾಳಲಿ ನೀನಿಲ್ಲದೇ
ನಿನ್ನ ನಗು ಕಿವಿಯಲಿ ರಿಂಗಣಿಸುತಿದೆ ಹೇಗೆ ಬಾಳಲಿ ನೀನಿಲ್ಲದೇ
ನೀರವ ಇರುಳಲಿ ಒಣಗಿದ ಎಲೆಗಳ ನಡುವೆ ಮರ್ಮರ ಸದ್ದು
ನೀ ಬಂದೆಯೆಂಬ ಭ್ರಮೆ ಮೂಡಿಸುತಿದೆ ಹೇಗೆ ಬಾಳಲಿ ನೀನಿಲ್ಲದೇ
ಚುಕ್ಕಿ, ಚಂದಿರನಿಲ್ಲದ ಆಗಸ ನೋಡಲು ಚೆಂದವಿಹುದೇ
ಒಡೆಯನಿಲ್ಲದ ಮನೆ ಭಣಗುಡುತಿದೆ ಹೇಗೆ ಬಾಳಲಿ ನೀನಿಲ್ಲದೇ
ಬಾಡಿ ಬಸವಳಿದಿಹ ಬದುಕಲಿ ಸೊಗವೆಲ್ಲಿದೆ ನಗುವೆಲ್ಲಿದೆ
ದುರ್ಭರ ಪಾಡು ಹೃದಯ ಹಿಂಡುತಿದೆ ಹೇಗೆ ಬಾಳಲಿ ನೀನಿಲ್ಲದೇ
ಇನ್ನೆಷ್ಟು ಕಾಲ ಕಾಯಬೇಕು ನಾ ನಿನ್ನಾಗಮನಕೆ ಹೇಳು ನಲ್ಲ
ಕಸುವಿಲ್ಲದ ಜೀವ ಕುಸಿಯುತಿದೆ ಹೇಗೆ ಬಾಳಲಿ ನೀನಿಲ್ಲದೇ
ಚೆಂದ ಮೇಡಮ್.
ಬಹಳ ಸುಂದರ ಗಝಲ್ .ಸುಲಲಿತವಾಗಿ ಮೂಡಿದ್ದು ನೇರವಾಗಿ ಮನಮುಟ್ಟುತ್ತದೆ.ಅಭಿನಂದನೆಗಳು