ಪುಸ್ತಕ ಸಂಗಾತಿ
‘ಮೌನ ಕಾರಣ
‘ಎಸ್.ಆರ್.ಎನ್. ಮೂರ್ತಿ
ಬುದ್ಧ ದ್ಯಾನಸ್ಥ ಸ್ಥಿತಿಯ ಸಂಕಲನ: ‘ಮೌನ ಕಾರಣ‘
–
ಮೂಲತಃ ಹಾಸನದ ಗೋರೂರು ಬಳಿಯ ಸೀಗೂರಿನವರಾದ ಎಸ್.ಆರ್.ಎನ್. ಮೂರ್ತಿಯವರು ಕೃಷಿ ಹಿನ್ನಲೆ ಉಳ್ಳ ಕುಟುಂಬದಿಂದ ಬಂದವರು. ಸದ್ಯ ಕೈಗಾ ಅಣುಸ್ಥಾವರದಲ್ಲಿ ಉದ್ಯೋಗಿಯಾಗಿದ್ದಾರೆ.
ಕೈಗಾ ಸಾಹಿತ್ಯ ಸಂಗಮ ಎಂಬ ಸಾಹಿತ್ಯಿಕ ವೇದಿಕೆಯ ಸಂಚಾಲಕರಾಗಿದ್ದು ಸಾಹಿತ್ಯದ ಗೀಳನ್ನು ಇಟ್ಟುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಅವರು ಕಾವ್ಯದ ಹಾದಿಯಲ್ಲಿ ಪಯಣ ಕೈಗೊಂಡು ಓದುಗರ ಕೈಗೆ “ಮೌನ ಕಾರಣ” ಕಾವ್ಯ ಸಂಕಲನವನ್ನು ಇರಿಸಿದ್ದಾರೆ..
ಸುತ್ತಲಿನ ಹಸಿರು ಪರಿಸರವನ್ನು ಗಹನವಾಗಿ ಪ್ರೀತಿಸುವ ಇವರಿಗೆ ಕಾವ್ಯ ಕಟ್ಟುವುದರೊಂದಿಗೆ ನಿಸರ್ಗವನ್ನೂ ದಿವ್ಯ ಪ್ರೇರಣೆಯಾಗಿಸಿಕೊಂಡಿದ್ದಾರೆ. ಗೋರೂರು ರಾಮಸ್ವಾಮಿ ಅಯ್ಯಂಗಾರ್, ಕುವೆಂಪು,ಬೇಂದ್ರೇ,ಕಾರಂತ ರಂತಹ ಕನ್ನಡದ ಕವಿಗಳಿಮದ ತುಂಬಾ ಪ್ರಭಾವಿತರಾಗಿದ್ದಾರೆ. ಇವರ ಕವಿತೆಗಳಲ್ಲಿ ಭಾವನಾತ್ಮಕತೆ ಮತ್ತು ವಾಸ್ತವತೆಯ ಹದವಾದ ಮಿಶ್ರಣವನ್ನು ಕಾಣಬಹುದು.
ಇವರ ಅಕ್ಷರಗಳ ಪ್ರೇರಣೆ ನನಗೆ ಸುಂದರ ಮುಖಪುಟವನ್ಬು ವಿನ್ಯಾಸ ಮಾಡಲು ಸಾಧ್ಯವಾಗಿಸಿತು.
ತನ್ನಲ್ಲಿ ಕಾವ್ಯ ಕಟ್ಟುವಿಕೆ ಹುಟ್ಟಿಕೊಂಡಿರುವ ಬಗ್ಗೆ ಕವಿ ಈ ರೀತಿಯಾಗಿ ಹೇಳಿಕೊಂಡಿದ್ದಾರೆ.. ನನ್ನೂರ ವಾತಾವರಣ, ಆಷಾಢದ ಗಾಳಿ, ಶ್ರಾವಣದ ಮಳೆ,ಗಲ್ಲಿಗಳಲ್ಲಿ ಹರಿಯುವ ನೀರು, ಕೆಸರು, ಮಳೆಯಲ್ಲಿ ನೆನೆಯುತ್ತಾ ಬರುವ ದನಕರುಗಳ ದೃಶ್ಯ, ಕೃಷಿಕರು, ಕೆಸರಿನಲ್ಲಿ ಆಟ ಆಡುವ ಮಕ್ಕಳು…. ಹೀಗೆ ಇವರ ಕಾವ್ಯ ಹುಟ್ಟಲು ಕಾರಣ ವೆನ್ನುತಾ ‘ ಮೌನಕಾರಣ’ ವನ್ನು ನಮ್ಮ ಮುಂದೆ ಇರಿಸಿದ್ದಾರೆ.
ಈ *ಮೌನಕಾರಣ’ ದೊಳಗೆ ಪ್ರೇಮ ಕವಿತೆ, ದೇಶಭಕ್ತಿ ಗೀತೆ ಪ್ರಕೃತಿ ವರ್ಣನೆ, ಮಕ್ಕಳ ಕವಿತೆ ಭಕ್ತಿಗೀತೆ, ಶೋಷಿತರ ಧ್ವನಿ ಹೀಗೆ ವಿವಿಧ ವಸ್ತುಗಳ ಮೇಲೆ ಕವಿತೆಗಳು ಹೆಣೆದುಕೊಂಡಿವೆ. ಎಲ್ಲ ಕವಿತೆಗಳು ವಿಭಿನ್ನತೆಯನ್ಬು ಹೊಂದಿವೆ. ಉತ್ತಮ ಕವಿತೆಗಳಾಗಿ ಮೂಡಿಬಂದಿವೆ.
ಕವಿತೆ ಹೊಸೆಯುವ ಕವಿಯ ಆಪ್ತತೆಯನ್ನು ಅಕ್ಷರಗಳಲ್ಲಿ ಜೀವಂತವಾಗಿರಿಸಿದ್ದಾರೆ. ಓದುಗ ಬಳಗವನ್ನು ಅನುಭೂತಿಗೆ ಒಯ್ಯುವ ಆತ್ಮಾನುಸಂಧಾನದ ಭಾಷೆಯ ಅತ್ಯಂತ ಸೂಕ್ತ ಬಳಕೆ ಇವರ ಧನಾತ್ಮಕ ಅಂಶವಾಗಿದೆ. ಮನಸ್ಸಿನಲ್ಲಿ ತೋಚಿದ್ದನ್ನು ಬರೆಯಲು ಕವಿತೆ ಸಶಕ್ತ ಮತ್ತು ಸೂಕ್ಷ್ಮ ಮಾಧ್ಯಮವನ್ನಾಗಿ ಮಾಡಿಕೊಂಡು ಈ ಕಾವ್ಯದ ಕಟ್ಟನ್ಬು ನೀಡಿದ್ದಾರೆ. ಇವರ ಈ ಕಾವ್ಯ ಕಟ್ಟುವ ವಿಶೇಷ ಶೈಲಿಗೆ ಬೆನ್ನು ತಟ್ಟಬೇಕು. ಪಕ್ವವಾದ ಫಲದಲ್ಲಿ ಮಾತ್ರ ಸವಿರುಚಿ ಇರುವ ಹಾಗೆ ಕಾವ್ಯ ಪಕ್ವಗೊಂಡಲ್ಲಿ ಮಾತ್ರ ಮೌನ ಕಾರಣ ಹೊರ ಬರಲು ಸದ್ಧಿಲ್ಲದೇ ಕಾರಣವಾಗಿದೆ.
ಇದೆಲ್ಲದರ ಪ್ರಸ್ತಾವನೆ ಎಸ್.ಆರ್.ಎನ್. ಮೂರ್ತಿಯವರ ಕುರಿತು ಬರೆಯುವಾಗ ಮೂಡಿತು.
ಮೂರ್ತಿಯವರ ಮುಖದ ತುಂಬಾ ಸದಾ ಮಂದಸ್ಮಿತವನ್ನು ತುಂಬಿಕೊಂಡಂತೆ ಇಲ್ಲಿರುವ ಬಹುತೇಕ ಕವನಗಳು ಸೌಮ್ಯ ಸ್ವಭಾವದವು . ಬುದ್ಧ ಧ್ಯಾನಸ್ಥ ಕವಿತೆಗಳಾಗಿವೆ. ಪಾರದರ್ಶಕ ಮನಸ್ಸಿನಿಂದ ‘ಮೌನ ಕಾರಣ’ ದಲ್ಲಿ ಬಹುತೇಕ ಕವಿತೆಗಳು ಬದುಕಿನ ಮಗ್ಗಲುಗಳಲ್ಲಿ ಅನುಭವಿಸಿದ ಅನುಭವವನ್ನು ಹೊರಹೊಮ್ಮವಲ್ಲಿ ಗೆದ್ದಿವೆ.
‘ಮೌನ ಕಾರಣ’ ದೊಳಗೆ ಸುಮಾರು 71 ಕವಿತೆಗಳಿವೆ.. ಇವುಗಳಲ್ಲಿ ಅಂತರ್ಗತ ಮಾತುಗಳಿವೆ. ಬಂಧನವಿದೆ. ಮೌನ ಹೃದಯದ ತಾಳ್ಮೆ ,ತಟಸ್ಥ, ಮಂದಹಾಸ ಸಮಾನತೆ, ಜೀವಂತಿಕೆ ಮುಂತಾದ ಕವಿತೆಗಳಲ್ಲಿ ಅಡಗಿವೆ. ಸಂಗತ ಭಾವ ಸರಳತನದಲ್ಲಿಯೇ ತೇಜ ಗೊಂಡಂತಿವೆ. ಇವರ ಕವಿತೆಯ ಸಾರ್ಥಕತೆ ಇರುವುದು ಓದುಗರ ಹೃದಯ ಗೆದ್ದಾಗ ಮಾತ್ರ.
ಕವಿತೆ ಬೆನ್ನ ಮೇಲಿನ ಸವಾರಿ ಕೂಸುಮರಿಯಂತೆ. ಬಹುತೇಕ ಕವಿತೆಗಳು ಓದಿಸಿಕೊಳ್ಳುವ ಸಹೃದಯತೆಗೆ ವಗ್ಗಿಕೊಂಡಿವೆ. ಈ ಸಂಕಲನ ಸಮನ್ವಯದಲ್ಲಿ ಹೆಣೆಗೆಗೊಂಡಿದೆ. ತಮ್ಮದೇ ಸ್ವಾಭಿಮಾನದ ಕವಿತೆಗಳಲ್ಲಿ ಕನಸು ಸೀಳಿ ಕಾಡಿಸಿ ಮೈ ಮರೆಯದಂತೆ ಸದಾ ಎಚ್ಚರವಿರುವ ಭಾವದಲ್ಲಿ ಮೊಳಕೆ ಹೊಡೆದಿವೆ.
ಈ ಕವನಗಳ ಗುಚ್ಚದಲ್ಲಿ ಚಂದನ ಅಕ್ಷರಗಳನ್ನು ಪೋಣಿಸುವ ಮೂಲಕ ಕಾವ್ಯಾಸಕ್ತರಿಗೆ ಮೃಷ್ಟಾನ್ನ ಭೊಜನ ಉಣಬಡಿಸಿದ್ದಾರೆ.
ಕವಿತೆ ಎಂದಿಗೂ ಶಬ್ದಗಳ ನಡುವೆ ಬಂಧಿಯಲ್ಲ. ಕವನ ಕವಿಯ ನಯನದಿಂದ ಒಡಮೂಡಿದ ಭಾವನೆಗಳು. ಇವರ ಕವಿತೆಗಲ್ಲಿ ಹಲವು ಪದಪುಂಜಗಳು ಭಾವನೆಯನ್ನು ಹುಟ್ಟು ಹಾಕುತ್ತವೆ. ಮನಕ್ಕೆ ತಂಪು ನೀಡುತ್ತವೆ. ಶೋಷಣೆ ಮತ್ತು ಅನ್ಯಾಯಗಳ ವಿರುದ್ಧ ಧ್ವನಿ ಯಾಗುತ್ತವೆ. ಇವರ ಮೌನದ ಹಾದಿಯ ಆರಂಭದಲ್ಲಿಯೇ ಇವರ ಕ್ರಿಯಾಶೀಲತೆ ಕಾರ್ಯ ಕ್ಷಮತೆಯನ್ನು ‘ಗಜಮುಖ ಗಾತ್ರ’ ಮೊದಲ ಕಾವ್ಯದ ಮೂಲಕ ಪ್ರಮಾಣಿಕವಾಗಿ ಅನಾವರಣ ಗೊಳಿಸಿದ್ದಾರೆ. ‘ನಾ ನಿನ್ನ ಹಿಂದೆ’, ಮತ್ತು ನನ್ನೆದೆಯ ನಾಡವಳು’ ಕಾವ್ಯಗಳಲ್ಲಿ ತಮ್ಮ ಶ್ರುತಿ ಪಟಲದಲ್ಲಿ ಹಾಸು ಹೊಕ್ಕಾಗುವಂತೆ ಪ್ರೀತಿಗೆ ಕುಸುಮವನ್ನು ಮೂಡಿಸಿ ಪ್ರಜ್ವಲಿಸಿದ್ದಾರೆ. ‘ಕನ್ನಡದ ಗುಡಿ’ ಕಾವ್ಯದಲ್ಲಿ ಸಾಹಿತ್ಯ ಸಂಸ್ಕೃತಿ, ಕನ್ನಡ ತಾಯಿಯ ವರ್ಣನೆ ಮನಮೋಹಕವಾಗಿದೆ. ‘ನನ್ನ ತಂಗಿ’ ಕವಿತೆ ಹೃದಯ ಸ್ಪರ್ಶ ವಾಗಿಸುತ್ತದೆ. ಅಣ್ಣ- ತಂಗಿಯ ಸಂಬಂಧ ಗಟ್ಟಿಗೊಳಿಸುತ್ತದೆ. ಬೇಂದ್ರೆ ಕವಿತೆ ಬಹಳಷ್ಟು ಅರ್ಥಪೂರ್ಣವಾಗಿದೆ.. ” ಹಚ್ಚೋಣ ಬನ್ನಿ..” ಎಂಬ ಕವಿತೆ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದಿದೆ. ಹೀಗೆ ಹಲವು ಕವಿತೆಗಳಲ್ಲಿ ಮಹಿಳೆಯರ ಬದುಕು ಭವಣೆ ಭವಿಷ್ಯ ಮತ್ತು ವರ್ತಮಾನಗಳ ತಲ್ಲಣಗಳು ಹೀಗೆ ಎಲ್ಲ ಸ್ತರಗಳ ಕವಿತೆಗಳನ್ನ ಅಕ್ಷರಗಳ ಮೂಲಕ ಅಚ್ಚುತ್ತಿದ್ದಾರೆ. ಜೊತೆಗೆ ಅವರಲ್ಲಿ ಅಡಗಿರುವ ಭಾವನಾತ್ಮಕ ಅಕ್ಷರ ಪ್ರೀತಿ ಹೊರ ಸೂಸುವಂತಿದೆ. ಪ್ರತಿ ಕವಿತೆಯಲ್ಲಿಯೂ ನಾವಿನ್ಯತೆ ಇದೆ. ಯಾವುದೇ ಗೊಂದಲಗಳಿಲ್ಲದೆ ಸಾಗುವ ಕವಿಹೃದಯಗಳನ್ನು ತಟ್ಟುವ ತಾಕತ್ತು ಮೂರ್ತಿಯವರ ‘ಮೌನ ಕಾರಣ’ ಸಂಕಲನದಲ್ಲಿ ಅಡಕವಾಗಿವೆ.
‘ಮೌನ ಕಾರಣ’ ಸಂಕಲನ ಚಿಂತನ ಮಂಥನಕ್ಕೆ ಅವಕಾಶ ಕಲ್ಪಿಸಿದೆ. ಅತ್ಯಂತ ಸೂಕ್ಷ್ಮತೆಯಿಂದ ಹೆಣೆದ ಕವಿತೆಗಳು ಕವಿಯ ಅಂತರಾಳದ ಅಂತರಂಗದಲ್ಲಿ ಬಚ್ಚಿಟ್ಟುಕೊಂಡಿದ್ದ ಕಾವ್ಯಗಳು ಈ ಸಂಕಲನದಲ್ಲಿ ಅನಾವರಣಗೊಂಡಿವೆ. ಕವಿ ಹೃದಯದ ಮನಸ್ಸು ಪ್ರತಿಬಿಂಬಿಸಿದೆ. ಕಾವ್ಯ ಸಂಕಲನ ಮತ್ತಷ್ಟು ಓದಿಸಿಕೊಂಡು ಹೋಗುತ್ತದೆ. ಈ ಸಂಕಲನದಿಂದ ಕವಿಯು ಹೊಸದೊಂದು ಭರವಸೆ ಮೂಡಿಸಿದ್ದಾರೆ. ಮನೆಮನಗಳಲ್ಲಿ ಜತನ ಮಾಡಿಟ್ಟುಕೊಳ್ಳಬೇಕಾದ ಕಾವ್ಯ ಕೃತಿ ಇದು.
ಈ ಕೃತಿಗೆ ಮತ್ತಷ್ಟು ಪುಷ್ಟಿ ನೀಡುವಂತೆ ವನರಾಗ ಶರ್ಮಾ ಅವರ ಮುನ್ನುಡಿ ಇದೆ..ಅಂಕಣಕಾರ ಸಂತೋಷಕುಮಾರ ಮೆಹೆಂದಳೆ ಅವರ ಬೆನ್ನುಡಿ ಮೂರ್ತಿಯವರ ಜೊತೆಯಾಗಿ ನಿಂತಿವೆ.
ಎಸ್ ಆರ್ ಎಸ್ ಮೂರ್ತಿಯವರು ಕವಿಯಾಗಿ ಬರೆಯುವುದರ ಜೊತೆಗೆ ಕಾವ್ಯದ ಪರಾಮರ್ಶೆ ಮಾಡುವ ಜಗಲಿಯಲ್ಲಿ ಗಟ್ಟಿಯಾಗಿ ನಿಲ್ಲುವ ಪ್ರಯತ್ನ ಮಾಡಿರುತ್ತಾರೆ. ತಮ್ಮ ಅಕ್ಷರಗಳ ಮೂಲಕ ಭಾವಜೀವಿಯ ಶೈಲಿಯಲ್ಲಿ ಕವಿಯಾಗಿರುವ ಇವರಿಂದ ಕನ್ನಡದ ಕಾವ್ಯ ಪರಂಪರೆ ಉಜ್ವಲವಾಗಲಿ. ಇನ್ನಷ್ಟು ಕೃತಿಗಳನ್ನು ಓದುಗರ ಕೈಗೆ ನೀಡಲೆಂದು ಹಾರೈಸುವೆ.
——————-
ಬೆಂಗಳೂರಿನ ಸಂಜೆ ಪಭ್ಲಿಕೇಷನ್ಸ್ ಪ್ರಕಾಶನ ಉತ್ತಮ ಗುಣಮಟ್ಟದಲ್ಲಿ ಪ್ರಕಟಿಸಿದ ಈ ಕವನ ಸಂಕಲನ 104 ಪುಟಗಳನ್ನು ಹೊಂದಿದ್ದು 140 ರೂ ಮುಖ ಬೆಲೆಯನ್ನು ಹೊಂದಿದೆ.. ಪುಸ್ತಕಗಳಿಗಾಗಿ ಕವಿ ಎಸ್.ಆರ್.ಎನ್.ಮೂರ್ತಿಯವರನ್ನು ಸಂಪರ್ಕಿಸಬಹುದು.
ಮೊ.ನಂ.82778 04341
ನಾಮದೇವ ಕಾಗದಗಾರ