ಕಲಿತ ಶಿಕ್ಷಣಸಂಸ್ಥೆಯಿಂದ ಅಭಿನಂದನ ಹಾಗೂ ಎಂಟು ಕೃತಿಗಳ ಲೋಕಾರ್ಪಣ:

ಪುಸ್ತಕ ಸಂಗಾತಿ

 ಗ್ರಾಮೀಣ ಭಾಷಾ ಸೊಗಡಿನ ಬರಹಗಾರ

ಡಾ.ಬಾಳಾಸಾಬ ಲೋಕಾಪೂರ

     ಖ್ಯಾತ ಕಾದಂಬರಿಕಾರ, ಕಥೆಗಾರ, ವಿಮರ್ಶಕ , ಪ್ರಸಕ್ತ ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿಯ ಸದಸ್ಯರೂ ಆಗಿರುವ ಡಾ. ಬಾಳಾಸಾಹೇಬ ಲೋಕಾಪೂರ ಅವರ ಅಭಿನಂದನ ಹಾಗೂ ಎಂಟು ಕೃತಿಗಳ ಲೋಕಾರ್ಪಣ ಸಮಾರಂಭವನ್ನು ಅವರು ಕಲಿತ ಜಾಧವಜಿ ಶಿಕ್ಷಣ ಸಂಸ್ಥೆ ಅಥಣಿ ಇವರು ಹೆಮ್ಮೆಯ ವಿದ್ಯಾರ್ಥಿ ಎಂದು ಹಮ್ಮಿಕೊಂಡು ಗೌರವಿಸುತ್ತಿರುವುದು ಶ್ಲಾಘನೀಯ. ಸೋಮವಾರ ದಿ.೧೨ ರಂದು ಸಮಾರಂಭ ನಟೆಯಲಿದ್ದು, ಈ ಸುಸಂದರ್ಭದಲ್ಲಿ ಡಾ. ಬಾಳಾಸಾಹೇಬ ಲೋಕಾಪೂರ ಅವರ ಪರಿಚಯಾತ್ಮಕ ಲೇಖನ)

      ಕನ್ನಡ ಸಾಹಿತ್ಯ ಲೋಕವನ್ನು ಬೆಳಗಿದವರು ಹಲವಾರು ಸಾಹಿತಿಗಳಾದರೆ, ಗ್ರಾಮೀಣ ಭಾಷೆಯ ಸೊಗಡನ್ನು ಯಥಾವತ್ತಾಗಿ ಬರಹದಲ್ಲಿಳಿಸಿ , ವೈಚಾರಿಕ , ಸಾಹಿತ್ಯಿಕ ಕೃತಿಗಳನ್ನು ಕೊಟ್ಟವರು ಕೆಲವರು ಮಾತ್ರ. ಅಂಥವರಲ್ಲಿ ಖ್ಯಾತ ಕಾದಂಬರಿಕಾರ ಬಾಳಾಸಾಹೇಬ ಲೋಕಾಪೂರ ಅವರು ಒಬ್ಬರಾಗಿದ್ದು, ಉತ್ತರ ಕರ್ನಾಟಕದ ವಿರಳ ಕಾದಂಬರಿಕಾರರಲ್ಲಿ ಅಗ್ರಗಣ್ಯರಾಗಿದ್ದಾರೆ. ಸುಮಾರು ಮೂರುದಶಕಗಳಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡು ಕಥಾಸಂಕಲನ, ಕಾದಂಬರಿ, ವಿಮರ್ಶೆ ಹೀಗೆ ಸಾಹಿತ್ಯ ಪ್ರಕಾರಗಳಲ್ಲಿ ಅಚ್ಚಳಿಯದ ಸಾಧನೆ ಮಾಡಿದ್ದಾರೆ.

      ಕನ್ನಡ ಸಾಹಿತ್ಯ ಲೋಕದಲ್ಲಿ  ಉತ್ತರ ಕರ್ನಾಟಕದ ಕಾದಂಬರಿಕಾರರ ಸಾಲಿನಲ್ಲಿ ನಿಸರ್ಗದ ಮಿರ್ಜಿ ಅಣ್ಣಾರಾಯ, ದು. ನಿಂ.ಬೆಳಗಲಿಯವರೊಂದಿಗೆ ಕೇಳಿಬರುವ ಇನ್ನೊಂದು ಹೆಸರೇ ಡಾ.ಬಾಳಾಸಾಹೇಬ ಲೋಕಾಪೂರ. ಗ್ರಾಮೀಣ ಭಾಗದ ಸಮಕಾಲೀನ ಸಮಸ್ಯೆಗಳ ವಿಶ್ಲೇಷಣೆಯ ಸಾಹಿತ್ಯ ರಚಿಸುವ ಹವಾಸ್ಯವನ್ನಾಗಿಟ್ಟಕೊಂಡವರು. ಮೂರು ರಾಜ್ಯಗಳಲ್ಲಿ ಹರಿದು ಬೆಳಗಾವಿ ಜಿಲ್ಲೆಯ ಜೀವನದಿಯೂ ಆಗಿರುವ ಕೃಷ್ಣೆಯ ತಟದಲ್ಲಿರುವ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ಜೈನ ಕುಟುಂಬದ ತಂದೆ ತವನಪ್ಪ, ತಾಯಿ ಸಂಕವ್ಬ ಅವರ ಉದರದಲ್ಲಿ ಆರು ಜನ ಮಕ್ಕಳಲ್ಲಿ ಒಬ್ಬರಾಗಿ ಅಗಷ್ಟ ೧, ೧೯೫೫ ರಲ್ಲಿ ಜನಿಸಿದರು.

      ಜೈನಮತದ ರೈತಾಪಿ ಕುಟುಂಬದಲ್ಲಿ ಜನಿಸಿದ್ದರಿಂದ ಹಳ್ಳಿಯ ಪರಿಸರದ ಸೊಗಡು ಅವರಿಗೆ ಸಹಜವಾಗಿ ಗ್ರಾಮೀಣ ಭಾಷೆಯ ಸೊಗಡಿನ ಅಭಿರುಚಿಗೆ ಸಹಕರಿಸಿತು. ಹೀಗಾಗಿ ಗ್ರಾಮೀಣ ಬದುಕಿನ ಎಲ್ಲ ಮಜಲುಗಳು ಮತ್ತು ಮಗ್ಗಲುಗಳು ಪರಿಚಯವಾಗಿ ಕರಗತವಾದವು.

     ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಾದ ಶಿರಹಟ್ಟಿಯಲ್ಲಿ ಗುಡಿಗುಂಡಾರ ಹಾಗೂ ಶಾಲಾಕಟ್ಟಡದಲ್ಲಿ ಕಲಿತರು. ಪ್ರೌಢಶಾಲಾ ಶಿಕ್ಷಣವನ್ನು ಸಮೀಪದ ತೇರದಾಳ ಗ್ರಾಮದ ಜೈನ ಗುರುಕುಲದಲ್ಲಿ ಪೂರೈಸಿಕೊಂಡು. ಪಿಯುಸಿ ಶಿಕ್ಷಣವನ್ನು ಶ್ರವಣಬೆಳಗೊಳದ ಗೋಮಟೇಶ್ವರ ವಿದ್ಯಾಪೀಠ, ಅಥಣಿಯ ಜೆ.ಇ ಶಿಕ್ಷಣ ಸಂಸ್ಥೆಯಲ್ಲಿ , ಪದವಿ ಶಿಕ್ಷಣವನ್ನು ಶಿಕ್ಷಣಕಾಶಿ ಧಾರವಾಡದ ಕರ್ನಾಟಕ ಕಾಲೇಜ ಹಾಗೂ ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಭೂಗೋಳಶಾಸ್ತ್ರದಲ್ಲಿ ಪಡೆದರು. ಮುಂದೆ ಬಾಗಲಕೋಟಿಯ ಸಕ್ರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ೩೩ ವರುಷಗಳ ಸೇವೆ ಸಲ್ಲಿಸಿ ಇದೀಗ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.

ಬಾಲ್ಯದ ಶಿಕ್ಷಣ  ಜೈನ ಶಿಕ್ಷಣ ಸಂಸ್ಥೆಗಳಲ್ಲಿ ಆಗಿರುವುದರಿಂದ ಆ ಧರ್ಮದ ಸಂಸ್ಕಾರ, ಅಗಾಧ ಜ್ಞಾನ ದೊರೆತಿದೆ. ಸರ್ ಅವರೇ ಹೇಳುವಂತೆ ದ್ವಿತೀಯ ಪಿಯುಸಿಯಲ್ಲಿ ಇಂಗ್ಲೀಷ ವಿಷಯದಲ್ಲಿ ಫೇಲಾಗಿದ್ದರು. ಅದನ್ನವರು ” ವಿಷಯದಲ್ಲಿ ಮಾತ್ರ ಫೇಲಾದೆ ಆದರೆ ಬದುಕಿನಲ್ಲಿ ಅಲ್ಲ” ಎಂದುಕೊಂಡು ಮುನ್ನಡೆದವರು. ಫೇಲ್ ಕೂಡ ಲಾಭವಾಗಿದೆ ನನಗೆ ಎನ್ನುವ ಅವರು ಅದರಿಂದ ಸ್ವಲ್ಪ ದಿನಗಳ ಮಟ್ಟಿಗೆ ಕೃಷಿಯಲ್ಲಿ ತೊಡಗಿದೆ, ಇದು ನನಗೆ ಗ್ರಾಮೀಣ ಪ್ರದೇಶದ ಬದುಕನ್ನು ಹೇಗೆ ಎದುರಿಸಿ ಕಟ್ಟಿಕೊಳ್ಳಬೇಕೆಂಬ ಪಾಠ ಕಲಿಸಿದ್ದು, ನಾನೀವತ್ತು ಈ ಮಟ್ಟಿಗೆ ಬೆಳೆದು ನಿಲ್ಲಲ್ಲು ಸಾಧ್ಯವಾಗಿದೆ ಎನ್ನುತ್ತಾರೆ.

      ಸಾಹಿತ್ಯಿಕ ಪ್ರೇರಣೆ ಎಂದರೆ ” ಪುಸ್ತಕಗಳೇ ನನಗೆ ಮಾರ್ಗದರ್ಶಕ . ಬೇರೆ ಬೇರೆ ವ್ಯಕ್ತಿಗಳ ಪುಸ್ತಕ ಓದಿದೆ. ಕಾದಂಬರಿ ಕೊಂಡು ಓದುತ್ತಿದ್ದುದರಿಂದ, “ನನ್ನದೇ ಅಪಾರ ಅನುಭವಗಳಿರುವಾಗ ಅದನ್ನು ಹೊರಹಾಕಲು ಕಥೆ , ಕಾದಂಬರಿ ಬರಿತಾ ಹೋದೆ” ಎನ್ನುತ್ತಾರೆ” .

      ಇವರ ಮೊದಲ ಕಥಾಸಂಕಲನ “ಕವಣೆಗಲ್ಲು” ೧೯೯೪ ರಲ್ಲಿ ಹೊರಬಂದಿತು. ‘ ಹಾರುವ ಹಕ್ಕಿ ಮತ್ತು ಆಕಾಶ’, ‘ ತನು ಕರಗದವರಲ್ಲಿ’, ‘ಕಂಗಳು ತುಂಬಿದ ಬಳಿಕ’ , ‘ ಕೃಷ್ಣೆಯ ಒಡಲು ತುಂಬ’ ಮೊದಲಾದವುಗಳು ಕಥಾ ಸಂಕಲನಗಳಾದರೆ, ” ಬಿಸಿಲು ಪುರ” ಇವರ ಮೊದಲ ಕಾದಂಬರಿ. ” ಹುತ್ತ” ಹಾಗೂ ” ಕೃಷ್ಣೆ ಹರಿದಳು” ಶ್ರೇಷ್ಠ ಕಾದಂಬರಿ, ‘ ಉಧೋ, ಉಧೋ’ , ‘ ನೀಲಗಂಗಾ’ ( ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಮೂಡಿಬಂದಿದೆ)

    ‘ ಪ್ರತಿಫಲನ’, ‘ಸಮುಚಿತ’, ‘ ರಸಾಧಿಕ’ ಮೊದಲಾದ ವಿಮರ್ಶಾ ಕೃತಿಗಳಲ್ಲದೆ, ಭೃಮರಂಗೆ, ಕನ್ನಡದ ಕೇಲವು ಜೈನ ಶಾಸನ‌ ಕವಿಗಳು, ಆಧುನಿಕ ಕನ್ನಡದ ಕಥನ ಸಾಹಿತ್ಯದಲ್ಲಿ ಜೈನ ಸಂವೇದನೆ, ಪ್ರಾಕೃತಿಕ ಭೂಗೋಳ ಶಾಸ್ತ್ರ , ಭಾರತದ ಆರ್ಥಿಕ ಭೂಗೋಳ ಶಾಸ್ತ್ರ, ಜೈನ ಮಹಿಳೆ ( ಸಮಾಜೋ ಧಾರ್ಮಿಕ ಅಧ್ಯಯನ) ಇವು ಅವರ ಇತರೆ ಕೃತಿಗಳಾಗಿ ಮೂಡಿಬಂದಿವೆ.

         ಬಾಳಾಸಾಹೇಬ ಲೋಕಾಪೂರ ಅವರ ಸಾಹಿತ್ಯ ಕೃಷಿ ಅರಸಿ ಹತ್ತು ಹಲವು ಶ್ರೇಷ್ಠ ಮಟ್ಟದ ಪ್ರಶಸ್ತಿಗಳು ಬಂದಿವೆ. ‘ ಬಿಸಿಲು ಪುರ ‘ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಸಾಪ ದತ್ತಿನಿಧಿ ಪ್ರಶಸ್ತಿ, ಚಿಕ್ಕೋಡಿ ತವನಪ್ಪ ಸಾಹಿತ್ಯ ಪುರಸ್ಕಾರ, ಹಾವೇರಿಯ ಹಾವನೂರ‌ ಪ್ರತಿಷ್ಠಾನ ಪ್ರಶಸ್ತಿ ದೊರೆತಿವೆ. ‘ ತನುಕರಗದವರಲ್ಲಿ’ ಕಥಾಸಂಕಲನಕ್ಕೆ ಕಸಾಪ ದತ್ತಿನಿಧಿ ಪ್ರಶಸ್ತಿ, ‘ ಹುತ್ತ’ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಚದುರಂಗ ಕಾದಂಬರಿ ಪ್ರಶಸ್ತಿ ಮೈಸೂರು,  ‘ಕೃಷ್ಣೆ ಹರಿದಳು’ ಕಾದಂಬರಿಗೆ ಮಾಸ್ತಿ ಪುರಸ್ಕಾರ ಕೋಲಾರ ಮತ್ತು ಗಳಗನಾಥ ಕಾದಂಬರಿ ಪುರಸ್ಕಾರ ಹಾವೇರಿ,  ದು.ನಿಂ.ಬೆಳಗಲಿ ಕಥಾ ಸಾಹಿತ್ಯ ಪ್ರಶಸ್ತಿ, ಸಮಗ್ರ ಸಾಹಿತ್ಯಕ್ಕೆ ಶ್ರೀ ಗೋಮಟೇಶ್ವರ ವಿದ್ಯಾಪೀಠ ಸಾಹಿತ್ಯ ಪ್ರಶಸ್ತಿ,  ಮಹಾರಾಷ್ಟ್ರದ ಸಾಂಗಲಿಯಲ್ಲಿ ಆಚಾರ್ಯ ಬಾಹುಬಲಿ ಕನ್ನಡ ಸಾಹಿತ್ಯ ಪ್ರಶಸ್ತಿ, ‘ನೀಲಗಂಗಾ’ ಕಾದಂಬರಿಗೆ ಸಿಂಗಾರಿಗೌಡ ಪ್ರಶಸ್ತಿ ಮಂಡ್ಯ, ಸಮಗ್ರ ಸಾಹಿತ್ಯಕ್ಕೆ ” ವರ್ಧಮಾನ ಪ್ರಶಸ್ತಿ” ಮೂಡಬಿದಿರೆ , ” ಚಾವುಂಡರಾಯ ಪ್ರಶಸ್ತಿ ಕಸಾಪ ಬೆಂಗಳೂರು, ಜೈನ‌ಸಾಹಿತ್ಯಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪುರಸ್ಕಾರಗಳು ಸಂದಿವೆ.

     ಇವರ ಕಥೆ ಕಾದಂಬರಿಗಳಲ್ಲಿ ಭಾಷೆಯ ಮೋಡಿ, ಕಲಾತ್ಮಕತೆ ಇದೆ. ಗ್ರಾಮೀಣ ಸೊಗಡಿದೆ. ಗ್ರಾಮೀಣ ಅನುಭವ, ಜೈನ ಸಂವೇದನೆ ಹೆಚ್ಚು ಅನಿಸಿದರೂ ಎಲ್ಲವನ್ನೂ ಒಳಗೊಂಡ ಸಾಹಿತ್ಯ ಇವರದಾಗಿದೆ. ಕಾವೇರಿ ಕುರಿತು ಆ ಭಾಗದವರು ಬರೆದಷ್ಟು ನಮ್ಮವರು ಕೃಷ್ಣೆಯ ಕುರಿತಾಗಿ ಬರೆದಿಲ್ಲವೆಂಬ ಕೊರಗು ಇವರದಾಗಿದ್ದು, ಕೃಷ್ಣೆಯ ಕುರಿತಾಗಿ ಗಾಢವಾಗಿ ತುಂಬ ಅಭಿಮಾನ, ಗೌರವದಿಂದ ನಮ್ಮ ಜೀವನದಿ ಎಂಬ ಹೆಮ್ಮೆಯಿಂದ ಹೆಚ್ಚೆಚ್ಚು ಬರೆದುದ್ದನ್ನು ಕಾಣುತ್ತೇವೆ.

      ನವೋತ್ತರ ಕನ್ನಡದ ಪ್ರಮುಖ ಗದ್ಯ ಲೇಖಕರಲ್ಲಿ ಎದ್ದು ಕಾಣುವ ಹೆಸರಲ್ಲಿ ಇವರೂ ಒಬ್ಬರು. ಅವರ ಕಥೆ, ಕಾದಂಬರಿಗಳಲ್ಲಿಯ ಪಾತ್ರಗಳು ಗ್ರಾಮೀಣ ಭಾಗದ ನೋವು-ನಲಿವುಗಳು ಕಂಡವುಗಳಾಗಿದ್ದು, ಮನದಲ್ಲಿ   ಬಹುಕಾಲ ನಿಲ್ಲುವಂತೆ ಅನಾವರಣಗೊಳಿಸಿದ್ದಾರೆ. ಕಥಾ ವಸ್ತವೇ ವಿವಿದ ಮಾದರಿಯ ಕಥನಗಳ ಸ್ವರೂಪ ಮತ್ತು ಪರಿಣಾಮಗಳ ಶೋಧವಾಗಿರುವುದನ್ನು ಕಾಣಬಹುದು. ಗ್ರಾಮೀಣ ಪರಿಸರದ ಒಳಸುಳಿಗಳು, ತವಕ ತಲ್ಲಣಗಳು ಕಣ್ಣ್ ಮುಂದೆ ತಂದುನಿಲ್ಲಿಸುತ್ತದೆ. ಗ್ರಾಮೀಣ ದೇಶಿಯ ಭಾಷೆಯನ್ನಂತು ಅಪ್ರತಿಮವಾಗಿ ಬಳಸಿದ್ದಾರೆ. ಈ ಪರಿಸರದ ಕಾದಂಬರಿಕಾರರಾದ ಮಿರ್ಜಿ ಅಣ್ಣಾರಾಯ, ದು.ನಿಂ.ಬೆಳಗಲಿ, ಸತ್ಯಕಾಮ ಅವರ ಪ್ರಭಾವ ಗಾಢವಾಗಿ ಬೀರಿದೆ ಎನಿಸುತ್ತದೆ.

     ಇಂತಹ ಶ್ರೇಷ್ಠ ಕಾದಂಬರಿಕಾರ, ತಮ್ಮ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಎನ್ನುವ ಹೆಮ್ಮೆಯಿಂದ ಅಥಣಿಯ ಜಾಧವಜಿ ಶಿಕ್ಷಣ ಸಂಸ್ಥೆಯು ಸಾಹಿತ್ಯ ಸಾಂಸ್ಕೃತಿಕ ಸಂಘ ಹಾಗೂ ಅನುಪಮ ಪ್ರಕಾಶನದಡಿ ಇದೇ ಸೋಮವಾರ ದಿ. ೧೨ ಡಿಸೆಂಬರದಂದು ಮುಂಜಾನೆ ೧೧ ಗಂಟೆಗೆ ಅಥಣಿಯ ಜೆ.ಇ ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ” ಡಾ. ಬಾಳಾಸಾಹೇಬ ಲೋಕಾಪೂರ ಅಭಿನಂದನಾ ಸಮಾರಂಭ ಹಾಗೂ ಪುಸ್ತಕಗಳ ಬಿಡುಗಡೆ ಸಮಾರಂಭ ” ಎರ್ಪಡಿಸಿದೆ. ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ರಾಜಾಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ, ಖ್ಯಾತ ಸಾಹಿತಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ, ಧಾರವಾಡದ ಖ್ಯಾತ ಕವಿದಂಪತಿಗಳಾದ ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ.ಹೇಮಾ ಪಟ್ಟಣಶೆಟ್ಟಿ, ಡಾ. ಗುರುಪಾದ ಮರೆಗುದ್ದಿ, ಡಾ. ರಾಮ ಕುಲಕರ್ಣಿ, ಅರವಿಂದರಾವ ದೇಶಪಾಂಡೆ ಪಾಲ್ಗೊಳ್ಳಲಿದ್ದಾರೆ. ಈ ಸಮಯದಲ್ಲಿ ಕಥಾಲೋಕ, ಫಸಲು, ಹುತ್ತ ( ೩ನೇ ಮುದ್ರಣ), ‘ ನೀಲಗಂಗಾ’ ( ೨ನೇ ಮುದ್ರಣ), ಅಮಟೂರು ಬಾಳಪ್ಪ, ಅತ್ತಿಮಬ್ಬೆ, ಹೊಟೇಲ್ ಗೋದಾವರಿ ಹಾಗೂ ಪುರುಷಾವತಾರ ಈ ಎಂಟು ಕೃತಿಗಳು ಹಾಗೂ ” ಬಾಳಲೋಕ” ಎಂಬ ಅಭಿನಂದನ ಗ್ರಂಥ ಲೋಕಾರ್ಪಣೆಗೊಳ್ಳಲಿವೆ.

       ಅದೇ ದಿನ ಬೆಳಿಗ್ಗೆ ೯.೩೦ ಕ್ಕೆ ಡಾ. ಬಾಳಾಸಾಹೇಬ ಲೋಕಾಪೂರ ಸಾಹಿತ್ಯ ವಿಚಾರ ಸಂಕಿರಣ ನಡೆಯಲಿದ್ದು. ಹಂಪಿಯ ಡಾ.ವೆಂಕಟಗಿರಿ ದಳವಾಯಿ “ಸಣ್ಣಕಥೆ” ಕುರಿತು ಹಾಗೂ ಉಜಿರೆಯ ಡಾ. ರಾಜಶೇಖರ ಹಳೆಮನಿ ” ಕಾದಂಬರಿ” ಕುರಿತು ಮಾತನಾಡಲಿದ್ದು. ಎಸ್.ಎಂಬ ಪಾಟೀಲ ಉಪಸ್ಥಿತಿ, ಕಲಬುರ್ಗಿಯ ಡಾ. ಬಸವರಾಜ ಡೊಣೂರ ಅಧ್ಯಕ್ಷತೆ ವಹಿಸಲಿದ್ದಾರೆ.


    ರೋಹಿಣಿ ಯಾದವಾಡ.

Leave a Reply

Back To Top