ಮೂಗು ಹಿಡಿದು ಕೂತಾಗ -ಬಿ.ಟಿ.ನಾಯಕ್ ಕಥೆ               

ಕಥಾ ಸಂಗಾತಿ

ಮೂಗು ಹಿಡಿದು ಕೂತಾಗ

ಬಿ.ಟಿ.ನಾಯಕ್

ನಾನು ಬೆಳಗ್ಗೆ ಏದ್ದು ಮುಖ ತೊಳೆದುಕೊಂಡು ಮೇಲ್ಮಾಳಿಗೆಗೆ ಹೋಗಿ ಹಗುರವಾದ ವ್ಯಾಯಾಮ ಮಾಡೋದು ನನಗೆ ರೂಢಿಯಾಗಿ ಬಿಟ್ಟಿದೆ.  ದೈನಿಕವಾಗಿ ಏನಾದರೂ ತೊಂದರೆ ಬಂದರೂ, ಅದನ್ನು ಪಕ್ಕಕ್ಕೆ ಸರಿಸಿ, ನಾನು ವ್ಯಾಯಾಮದ ಸಮಯ ಅದಕ್ಕೆಂದೇ ಮೀಸಲಿಡುತ್ತೇನೆ.  ಸೂರ್ಯ ನಮಸ್ಕಾರ, ಪ್ರಾಣಾಯಾಮ ಮಾಡೋದರಿಂದ ದೇಹ ಮತ್ತು ಮನಸ್ಸು ಹಗುರವಾಗುತ್ತದೆ ಏಂದು ಕೂಡಾ ಅನುಭವಿಸಿದ್ದೇನೆ.  ಹಾಗಾಗಿ, ಪ್ರತಿ ನಿತ್ಯ ಅವು ನನ್ನ ಕಾಯಕವಾಗಿಬಿಟ್ಟಿವೆ.  ಅಲ್ಲದೇ, ಮೇಲ್ಮಾಳಿಗೆ ಮೇಲೆ ಸಾಕಷ್ಟು ಗಾಳಿ, ಬೆಳಕು ಇದ್ದು ವ್ಯಾಯಾಮಕ್ಕಾಗಿ ಪ್ರಶಸ್ತವಾದ ಸ್ಥಳವಾಗಿದೆ. ಅಲ್ಲದೇ, ಅಲ್ಲಿ ನನಗೆ ಯಾವ ತರಹದ ಅಡೆ ತಡೆಗಳಿಲ್ಲ.

ಒಂದು ದಿನ ಯಥಾ ಪ್ರಕಾರ ನಾನು ಪ್ರಾಣಾಯಾಮ ಕ್ರೀಯೆಗಳನ್ನು ಮಾಡುತ್ತಾ ಇರುವಾಗ, ನನ್ನ ಶ್ರೀಮತಿ ಕೂಗಿದ ಧ್ವನಿ ಅಲ್ಪ ಸ್ವಲ್ಪ ಕೇಳಿಸಿದಂತೆ ಅನಿಸಿತು. ಆಗ ನನಗೆ ನಾನೇ ಪ್ರಶ್ನೆ ಹಾಕಿಕೊಂಡೆ. ಆಕೆ ನನ್ನನ್ನು ಏಕೆ ಕೂಗಬೇಕು? ಕಾರಣವಿಲ್ಲದೆ ಕೂಗಲು ಆಕೆ ಏನು ಹುಚ್ಚಿಯೇ ? ಆಕೆ ಕೂಗಲು ಸಾಧ್ಯವಿಲ್ಲ ಎಂದು ಅಲ್ಲಗಳೆದುಬಿಟ್ಟೆ. ನಾನು ನನ್ನ ಪ್ರಾಣಾಯಾಮ ಕ್ರೀಯೆಗಳನ್ನು ಮುಂದುವರಿಸಿ ಮಗ್ನನಾದೆ. ಆಗ, ಮತ್ತೆ ಮತ್ತೇ ಅದೇ ರೀತಿ ಕೂಗುವ ಧ್ವನಿ ಕೇಳಿಸಿತು.
ಅರೇ ! ಇದು ನನ್ನ ಶ್ರೀಮತಿಯದೇ ಏಂದು ಮನದಟ್ಟಾಯಿತು.
‘ಏನು ಇವಳಿಗೆ ತೊಂದರೆ ? ಏಂದು ಧ್ವನಿ ಬಂದ ಕಡೆಗೆ ಲಕ್ಷ್ಯ ಕೊಟ್ಟೆ. ಆಗ ಪ್ರಾಣಾಯಾಮಗಳನ್ನು ಅಲ್ಲಿಗೆಯೇ ನಿಲ್ಲಿಸಿ, ಮಾಳಗೆಯ ತುದಿಗೆ ಬಂದು ;
‘ಏನೇ…ಅದು ಯಾಕೆ ಹಾಗೆ ಗಂಟಲು ಹರಿಯುವ ಹಾಗೆ ಕೂಗುತ್ತಿಯಾ ?’
ಅಷ್ಟರಲ್ಲಿ, ಆಕೆಯೇ ಏದುಸಿರು ಬಿಡುತ್ತಾ ಮೇಲ್ಮಾಳಿಗೆಗೆ ಬಂದಳು. ಬಂದವಳೇ ;
‘ಏನ್ರೀ, ನೀವು ಇಲ್ಲಿ ಮೂಗು ಹಿಡಿದುಕೊಂಡು ಕೂತರೆ ಅಲ್ಲಿ ನನಗೆ ಪ್ರಾಣ ಸಂಕಟವಾಗ್ತಿದೆ’.
‘ನಿನಗೇನೇಯೇ ತೊಂದರೆ ?’ ಸ್ವಲ್ಪ ಕೋಪಗೊಂಡೆ.
‘ಅಯ್ಯೋ, ಆ ತರಕಾರಿ ಮಾರುವಳ ಹತ್ತಿರ ತರಕಾರಿ ಖರೀದಿಸಿದ್ದೇನೆ, ದುಡ್ಡು ಕೊಡದೆಯೇ ಅವಳು ಹೋಗ್ತಾಳೇಯೇ ?’
‘ನಿನ್ನಲ್ಲಿ ದುಡ್ಡಿಲ್ಲವಾ ?’
‘ಇದ್ದರೇ, ಇಲ್ಲಿಯವರೆಗೆ ಏದುಸಿರು ಬಿಡ್ತಾ ಬರೋದು ನನಗೇನು ಆಪೇಕ್ಷೇನಾ ?’
‘ಸರಿ ಸರಿ…ವಾದ ಬೇಡ’ ಎಂದು ಒಳ ಉಡುಪಿನ ಜೋಬುನಲ್ಲಿದ್ದ ಹಣ ತೆಗೆದು ಅವಳಿಗೆ ಐವತ್ತು ರೂಪಾಯಿ ಕೊಟ್ಟು ಕಳಿಸಿದೆ. ಆಮೇಲೆ, ಪುನಃ ಪ್ರಯಾಣಾಯಾಮ ಮೊದಲಿನಿಂದ ಪ್ರಾರಂಭಿಸಿದೆ. ಸ್ವಲ್ಪ ಹೊತ್ತಿನ ನಂತರ ಲಘು ವ್ಯಾಯಾಮಕ್ಕೆ ಬ್ರೇಕ್ ಹೇಳಿ ಕೆಳಕ್ಕೆ ಬಂದೆ.
ಬಂದವನೇ, ಮೊದಲು ನನ್ನ ಶ್ರೀಮತಿಗೆ ಹೀಗೆ ಹೇಳಿದೆ;
‘ನೋಡು ನಾನು ವ್ಯಾಯಾಮ ಮಾಡುವಾಗ ಒಂದು ಗಮನದಲ್ಲಿ ಇರ್ತೇನೆ. ದಯಮಾಡಿ ಕೆಟ್ಟ ಧ್ವನಿಯಿಂದ ಕೂಗಬೇಡ ಕಣೇ. ಬೇಕಾದ್ರೇ ನಿನಗೆ ಐವತ್ತು ನೂರು ಹಣ ಕೊಟ್ಟಿರುತ್ತೇನೆ. ಆ ಹಣವನ್ನು ನಿನ್ನಲ್ಲಿ ಇಟ್ಟುಕೋ ಏನಾದರೂ ಖರೀದೀ ಮಾಡಿಕೊ. ನನ್ನ ತಂಟೆಗೆ ಬರಬೇಡ’ ಎಂದೇ.
‘ಅಯ್ಯೋ ನೀವು ಹಾಗೆ ದುಡ್ಡು ಕೊಟ್ಟರೆ ನನಗೇನು ತೊಂದರೆ ? ಆಗ ನಿಮ್ಮ ತಂಟೆಗೆ ನಾನೇಕೆ ಬರಲಿ ?’ ಎಂದು ಹೇಳಿ ಸುಮ್ಮನಾದಳು. ಅವತ್ತಿನ ದಿನಚರಿ ಅಲ್ಲಿಗೆ ಮುಗಿಯಿತು.

ಮಾರನೇ ದಿನ ಯಥಾ ಪ್ರಕಾರ ನಾನು ಮೇಲ್ ಮಾಳಿಗೆಯ ಮೇಲೆ ವ್ಯಾಯಾಮ, ಪ್ರಾಣಾಯಾಮ ಕ್ರೀಯೆಗಳನ್ನು ಮಾಡ್ತಾ ಇದ್ದೆ. ಮಧ್ಯದಲ್ಲಿ ನನ್ನ ಶ್ರೀಮತಿ ಕೂಗಿದ ಹಾಗೆ ಇವತ್ತೂ ಕೇಳಿಸಿತು. ಆದರೇ, ಅವಳಿಗೆ ನಿನ್ನೆ ಹಣ ಕೊಟ್ಟಿದ್ದೇನಲ್ಲ. ಮತ್ಯಾಕೆ ಈ ಕೂಗು ? ‘ಇಲ್ಲ.. ಇಲ್ಲ ಇದು ನನ್ನ ಭ್ರಮೆಯೇ ಇರಬೇಕು’ ಎಂದು ನನ್ನ ಕಾಯಕ ಮುಂದುವರೆಸಿದೆ. ಆದರೇ, ಆಮೇಲೆ ಸ್ಪಷ್ಟವಾಗಿ ನನ್ನ ಶ್ರೀಮತಿಯ ಪರಿಚಯದ ಗಂಟಲಿನ ‘ಧ್ವನಿ’ ಕೇಳಿಸಿತು. ತಕ್ಷಣ ನನಗೆ ಸಿಟ್ಟು ಮೂಡಿತು. ನಾನು ಇಲ್ಲಿ ವ್ಯಾಯಾಮ ಮಾಡುವದು ಅವಳಿಗೆ
ಇಷ್ಟವಿಲ್ಲವೇ ಅಥವಾ ಇಲ್ಲಿ ನಾನು ವೃಥಾ ಸಮಯ ಕಳೆಯುತ್ತೇನೆ ಎಂದು ಭಾವಿಸಿದ್ದಾಳೆಯೇ ? ಎಂದು ನನಗೆ ಅನುಮಾನ ಮೂಡಿತು.
ಹಾಗಾಗಿ, ಕಡು ಕೋಪದಿಂದಲೇ ವ್ಯಾಯಾಮ ಅರ್ಧಕ್ಕೆ ನಿಲ್ಲಿಸಿ, ಹಲ್ಲು ಗಿಂಜುತ್ತಾ ಕೆಳಗೆ ಇಳಿದು ಬಂದೆ. ಬಂದವನೇ;
‘ಏನೇ.., ಹಾಗೆ ಮತ್ತೆ ಮತ್ತೇ ಕೂಗ್ತಿಯ. ಸ್ವಲ್ಪವಾದ್ರೂ ಅರಿವು ಬೇಡ್ವಾ ?’
‘ಅಯ್ಯೋ, ನೀವು ಬರೋವರ್ಗೆ ಹೂವು ಮಾರೋವ್ನು ಇಲ್ಲೇ ಕುಳಿತಿರೋದಕ್ಕೆ ಅವನೇನು ನಮ್ಮ ಬೀಗನಾ ?’
‘ಅವನಿಗೆ ಆಮೇಲೆ ಬರಲಿಕ್ಕೆ ಹೇಳಬೇಕಿತ್ತು.’
‘ನಮ್ಮೊಬ್ಬರ ಮನೆನಾ ಅವ್ನಿಗಿರೋದು. ಮಾರ್ತಾ ಮಾರ್ತಾ ಹೋಗ್ತಾ ಇರ್ತಾನೆ. ಅವನು ಬಂದಾಗ ದುಡ್ಡು ಕೊಟ್ಟು ಕೊಳ್ಳೋದಪ್ಪ’ ಎಂದಳು ಶ್ರೀಮತಿ.
‘ಯಾಕೆ ನಿನ್ನ ಹತ್ತಿರ ದುಡ್ಡಿಲ್ವಾ ?’
‘ಅಲ್ಲಾರೀ..ಇದ್ರೇ ನಿಮ್ಮನ್ಯಾಕೆ ಕೂಗುತ್ತಿದ್ದೆ ? ಅಲ್ಲಾ ಇಷ್ಟು ಕೂಡಾ ನಿಮ್ಮ ತಲೆಗೆ ಏಕೆ ಬರುತ್ತಿಲ್ಲ ?’
‘ಏನ್ಕಣೇ, ನಾನು ಪ್ರಶ್ನೆ ಕೇಳಿದ್ರೇ, ನನಗೆಯೇ ಮರುಪ್ರಶ್ನೆ ಹಾಕ್ತೀಯಾ. ನೀನು ಏಂದೂ ಸುಧಾರಿಸೋದಿಲ್ಲ. ಸಿಟ್ಟು ಇನ್ನೂ ಹೆಚ್ಚಾಗಿ ‘ಎಷ್ಟು ದುಡ್ಡು’ ಎಂದು ಕೇಳಿ, ಅಷ್ಟು ಅವಳಿಗೆ ಕೊಟ್ಟು ಮೇಲಕ್ಕೆ ಹೋಗದೇ ನನ್ನ ರೂಮು ಸೇರಿಕೊಂಡೆ.

ಸ್ವಲ್ಪ ಸಮಯದ ನಂತರ ಶ್ರೀಮತಿ ಕಾಫಿ ತೆಗೆದುಕೊಂಡು ಬಂದು ಕೊಟ್ಟು ನನಗೆ ಸಮಾಧಾನ ಹೇಳಿದಳು.
‘ಏನು ಮಾಡೋದ್ರೀ, ನೀವು ಕೊಟ್ಟ ದುಡ್ಡು ಹಾಗೆಯೇ ಹೋಗಿ ಬಿಟ್ಟವು. ನೀವು ನನಗೆ ಒಂದು ಐದನೂರು ಕೊಟ್ಟುಬಿಡಿ , ನಿಮಗೆ ಪದೇ ಪದೇ ನಾನು ಕೇಳೋಲ್ಲ ‘ ಎಂದಳು.
ಅವಳು ಹೇಳೋದು ಕೂಡಾ ಸರಿ ಎಂದನಿಸಿ ಅವಳಿಗೆ ಐದು ನೂರು ರೂಪಾಯಿ ಆಗಲೇ ಕೊಟ್ಟು ಬಿಟ್ಟೆ. ನನಗೆ
ಈಗ ನನ್ನ ಮುಂಜಾನೆಯ ವ್ಯಾಯಾಮ ಮತ್ತು ಪ್ರಾಣಾಯಾಮಕ್ಕೆ ಧಕ್ಕೆ ಇಲ್ಲ ಎಂದಂದುಕೊಂಡು ತತ್ಕಾಲ ನೆಮ್ಮದಿಗೊಂಡೆ.

ಯಥಾವತ್, ಮಾರನೇ ದಿನ ಬೆಳಗ್ಗೆ ಎದ್ದು ಮುಖ ತೊಳೆದುಕೊಂಡು ಶ್ರೀಮತಿಗೆ ಒಂದು ಮಾತು ಹೇಳಿ ಹೋದರಾಯಿತು ಎಂದು ಅವಳ ಹತ್ತಿರ ಹೋಗಿ;
‘ನಾನು ಮೇಲಕ್ಕೆ ಹೋಗ್ತಾ ಇದ್ದೇನೆ ಕಣೇ, ಏನಾದ್ರೂ ಹೇಳೋದು ಕೇಳೋದಿದ್ಯಾ ?’ ತಿವಿದ ಹಾಗೆ ಕೇಳಿದಾಗ ಅವಳು ;
‘ಅಯ್ಯೋ, ಬೋರಿನ ಮೋಟಾರು ಆಫ್ ಆಗಿದೆ. ಅದನ್ನು ಆನ್ ಮಾಡಿ ಮೇಲಕ್ಕೆ ಅದೆಷ್ಟು ಹೊತ್ತಾದರೂ ಪರವಾಗಿಲ್ಲ ಹೋಗಿ’ ಏಂದು ಅಪ್ಪಣೆ ಕೊಟ್ಟಳು. ‘ಸರಿ’ ಎಂದು ಆಫ್ ಆಗಿದ್ದ ಮೋಟಾರ್ ಆನ್ ಮಾಡಿ ಮೇಲಕ್ಕೆ ಹೋದೆ.
ನನ್ನ ಪೂರ್ವ ವ್ಯಾಯಾಮಗಳು ಮುಗಿದವು, ಆಮೇಲೆ ಪ್ರಾಣಾಯಾಮ ಪ್ರಾರಂಭ ಮಾಡಿದೆ. ನಾನು ಆಗ ಪ್ರಾಣಾ
ಯಾಮಗಳನ್ನು ಬಹಳೇ ಆನಂದಿಸುತ್ತಿದ್ದೆ. ಆದರೇ , ಮಧ್ಯದಲ್ಲಿ ಮತ್ತೇ ಅದೇಕೋ ನನ್ನ ಶ್ರೀಮತಿಯ ಕೂಗು ಕೇಳಿಸಿತು;
ನನ್ನ ಜೀವಕ್ಕೆ ಸುಖವಿಲ್ಲ ಎಂದಂದುಕೊಂಡು ನನ್ನಷ್ಟಕ್ಕೆ ನಾನೇ ಮರುಗಿಬಿಟ್ಟೆ. ಅವಳಿಗೆ ಸಾಕಷ್ಟು ದುಡ್ಡು
ಕೊಟ್ಟು ಬಂದಿದ್ದೇನೆ. ಏಕೆ ಮತ್ತೇ ಇವಳ ಕೂಗು ? ನಾನು ಯೋಚಿಸಿದೆ ಏನೂ ಹೊಳೆಯಲಿಲ್ಲ. ಆಗ ನನಗನಿಸಿದ್ದು ‘ನನ್ನ ನಸೀಬು
ಚೆನ್ನಾಗಿಲ್ಲ’ ಎಂದು. ಅಲ್ಲದೇ ಪ್ರಾಣಾಯಾಮ ಭಾಗ್ಯ ನನಗಿಲ್ಲ, ಅವಳಿಗೆ ಬೇಕಿಲ್ಲ. ಥೂ ನನ್ನ ಕರ್ಮದಿಂದ ಅದೇನು ಕಾಡಾಟ ಏನೋ ಏಂದು ಪ್ಯಾಕಪ್ ಆಗಿ ಬಿಟ್ಟೆ.
ಅನಿವಾರ್ಯವಾಗಿ ಅರ್ಧಕ್ಕೆ ಪ್ರಾಣಾಯಾಮಗಳನ್ನು ನಿಲ್ಲಿಸಿ ಕೆಳಕ್ಕೆ ಇಳಿದೆ . ಮತ್ತೇ ಅದೇ ಕೋಪ ನಾನು ಪ್ರದರ್ಶಿಸಿದೆ;
‘ಏನೇ ನಿನ್ನ ಕಷ್ಟ ? ನನಗ್ಯಾಕೆ ಕಾಡ್ತೀಯಾ ? ಅದೆಷ್ಟು ಜನ್ಮಕ್ಕೆ ನನಗಾಗಿ ಕಾದಿದ್ದಿಯಾ ನೀನು ?
‘ಅಯ್ಯೋ.., ಮನೇಲಿ ವಿದ್ಯುತ್ ಇಲ್ಲಾರೀ. ಹಾಗಾಗಿ, ನಲ್ಲಿಯಲ್ಲಿ ನೀರಿಲ್ಲ, ಮಿಕ್ಸಿ ಹಾಕಬೇಕು, ನೀರು ಕಾಯಿಸಬೇಕು. ಇದೆಲ್ಲ
ನನ್ನೊಬ್ಬಳ ಸಮಸ್ಯೆಯೇ ? ನಿಮಗೆ ಇದ್ಯಾವುದು ಸಮಸ್ಯೆನೇ ಅಲ್ವಾ ?’ ಏಂದು ಆಕೆ ಕೆಂಡ ಕೋಪದಲ್ಲಿ ಮೂದಲಿಸದೇ ಬಿಡಲಿಲ್ಲ.
‘ಏನು ಕರ್ಮಾನೋ ಏನೋ’ ಎಂದು ಗೊಣ ಗುಟ್ಟುತ್ತ ನಾನು ಕೆಳ ಮಾಳಿಗೆಗೆ ಹೋದೆ. ಅಲ್ಲಿ ಪ್ಯಾನಲ್ ಬಾಕ್ಸ್ ಓಪನ್ ಮಾಡಿ ಫ್ಯೂಸ್ ತೆಗೆದು
ನೋಡಿದೆ, ಅದು ಸರಿಯಾಗಿತ್ತು. ಇನ್ನು ಪಕ್ಕದ ಮನೆಗಳಲ್ಲಿ ವಿದ್ಯುತ್ ಇದೆಯೋ ಇಲ್ಲವೋ ಏಂದು ವಿಚಾರಿಸಿದಾಗ, ಅವರು ಐಷಾರಾಮಿಯಾಗಿ ವಿದ್ಯುತ್ ಅನುಭವಿಸುತ್ತ ಆನಂದ ಪಡುತ್ತಿದ್ದರು. ಅವರನ್ನು ನೋಡಿ ನನಗೆ ಸಂಕಟವಾಯ್ತು ಏಂದು ಬೇರೆ ಹೇಳ ಬೇಕಿಲ್ಲ.
‘ಅಯ್ಯೋ, ಏನಪ್ಪಾ ನನ್ನ ಗತಿ’ ಎಂದುಕೊಂಡು ಪರಿಚಯದ ಎಲೆಕ್ಟ್ರಿಷಿಯನ್ ಗೆ ಫೋನ್ ಮಾಡಿದೆ.
‘ ಅಣ್ಣ ಶ್ರೀನಿವಾಸ, ಎಲ್ಲಿದ್ದೀಯ ?’
‘ ನಾನು ಆಚೆ ಇದ್ದೀನಿ ಸಾರ್. ಏನು ತೊಂದರೆ ಇತ್ತಾ ?’
‘ ಬರೀ ತೊಂದರೆಯಲ್ಲಪ್ಪ, ನಾನು ನಡು ನೀರಿನಲ್ಲಿ ಮುಳುಗುವ ಹಾಗಿದೆ. ಸ್ವಲ್ಪ ಬೇಗ ಬಂದುಬಿಡು. ಮನೆಯಲ್ಲಿ ವಿದ್ಯುತ್ ಇಲ್ಲ. ಏನಾಗಿದೆಯೋ ಗೊತ್ತಿಲ್ಲ’ ಎಂದೇ. ಅದಕ್ಕವನು;
‘ಸಾರ್, ನಾನು ಬರೋದು ಕೊಂಚ ಸಮಯ ಹಿಡಿಯುತ್ತೆ, ಸಧ್ಯಕ್ಕೆ ನನ್ನ ಶಿಷ್ಯನೊಬ್ಬನನ್ನು ಕಳಿಸುತ್ತೇನೆ’ ಎಂದ.
‘ಸರಿಯಪ್ಪ ಅಷ್ಟು ಮಾಡಿ ಪುಣ್ಯ ಕಟ್ಟಿಕೋ ‘ ಎಂದು ಫೋನ್ ಇಟ್ಟೆ.
ಕೆಲವು ಸಮಯದ ನಂತರ ಒಬ್ಬ ಹುಡುಗ ಬಂದ. ಎಲ್ಲಾ ಕೂಲಂಕುಷವಾಗಿ ನೋಡಿದ. ಆಮೇಲೆ ನನಗೆ ಹೇಳಿದ;
‘ಸಾರ್, ವಿದ್ಯುತ್ ಕಂಬಗಳಲ್ಲಿರುವ ಖಟೌಟ್ ಗಳು ಸುಟ್ಟು ಕರಕಲಾಗಿವೆ. ಅವುಗಳ ರಿಪೇರಿ ಅಣ್ಣನೇ ಮಾಡಬೇಕು, ನನಗೆ ಸರಿ ಹೊಂದುವುದಿಲ್ಲ’ ಎಂದ.
ಆಗ ಶ್ರೀನಿವಾಸನಿಗೆ ಮತ್ತೇ ಫೋನ್ ಮಾಡಿದೆ, ವಿಷಯ ಅರಿತ ಆತ ಆದಷ್ಟು ಬೇಗ ಬರುವುದಾಗಿ ಹೇಳಿದ.
ಸುಮಾರು ಹನ್ನೊಂದು ಗಂಟೆಗೆ ಶ್ರೀನಿವಾಸ ಬಂದ. ಎಲ್ಲವನ್ನೂ ಪರಿಶೀಲಿಸಿದ. ಆಮೇಲೆ ಹೇಳಿದ;
‘ಸಾರ್, ಖಟೌಟಗಳಲ್ಲದೇ ಪ್ಯಾನೆಲ್ ಗಳೂ ಸುಟ್ಟಿವೆ. ಹೊಸ ಪ್ಯಾನೆಲ್ ಹಾಕಬೇಕು ಸಾರ್.’ ಎಂದ.
‘ಹೌದಾ, ಅಂದಾಜು ದುಡ್ಡು ಎಷ್ಟಾಗಬಹುದು ?’
‘ಮೂರುವರೆ ಸಾವಿರ ಅಥವಾ ಇನ್ನೂ ಹೆಚ್ಚಿಗೆ ಆಗಬಹುದು. ಸಧ್ಯಕ್ಕೆ ಮೂರುವರೆ ಸಾವಿರ ನನ್ನ ಕೈಗೆ ಕೊಟ್ಟುಬಿಡಿ, ನಾನು ಎಲ್ಲಾ ಸಾಮಾನುಗಳನ್ನು ತಂದು ಹಾಕಿ ಮುಗಿಸುತ್ತೇನೆ’ ಎಂದು ಹೇಳಿದ.
‘ಆಯಿತಪ್ಪ’ ಎಂದು ತಲೆ ಹಾಕಿ, ಕೇಳಿದಷ್ಟು ದುಡ್ಡು ಕೊಡುವದೊಂದೇ ಕೆಲಸ ಎಂದಂದುಕೊಂಡು ಕೊಟ್ಟು ಬಿಟ್ಟೆ.
ಆಮೇಲೆ, ಎಲ್ಲಾ ಮುಗಿದು, ಮನೆಯೊಳಗೇ ವಿದ್ಯುತ್ ಬರುವದರೊಳಗೆ ಮಧ್ಯಾನದ ಒಂದು
ಗಂಟೆಯಾಯಿತು. ವಿದ್ಯುತ್ ಹರಿಸಿ, ಮೇಲಿನ ನೀರಿನ ಟ್ಯಾಂಕ್ ತುಂಬಿಸಿ, ನಾನು ಮತ್ತು ಶ್ರೀಮತಿ ಸ್ನಾನ
ಮಾಡುವದರಲ್ಲಿ ಮಧ್ಯಾಹ್ನದ ಎರಡೂವರೆ ಗಂಟೆಯಾಗಿ, ಊಟಕ್ಕೆ ಕುಳಿತಾಗ ನಾಲ್ಕು ಗಂಟೆಯಾಗಿತ್ತು !
ಬಹುಷಃ ಮುಂದಿನ ನಾಲ್ಕು ದಿನದ ವ್ಯಾಯಾಮ ಈ ದಿನವೇ ನನಗಾಗಿದೆ ಎಂದನಿಸಿತು. ಮಾರನೆಯ ದಿನ ಸೇರಿ ಎರಡು ಮೂರು ದಿನ ಮೇಲಕ್ಕೆ ಹೋಗಲೇ ಇಲ್ಲ. ಆದರೇ, ಒಂದು ವಿಚಿತ್ರವೆಂದರೇ, ಶ್ರೀಮತಿ ನನ್ನ ಬಳಿ ಕೂಗುತ್ತ ಇಂದಿಗೂ ಬಂದೇ ಇಲ್ಲ. ಅದೇ ನನಗೆ ನೆಮ್ಮದಿ.


ಬಿ.ಟಿ.ನಾಯಕ್

16 thoughts on “ಮೂಗು ಹಿಡಿದು ಕೂತಾಗ -ಬಿ.ಟಿ.ನಾಯಕ್ ಕಥೆ               

  1. ತುಂಬಾ ಹಾಸ್ಯಮಯವಾದ ಲೇಖನ. ಓದಿ ಖುಷಿ ಆಯ್ತು. ಅಭಿನಂದನೆಗಳು ಸಾರ್

    1. ನಿಮ್ಮ ಅನಿಸಿಕೆ ಹಿಡಿಸಿತು. ಧನ್ಯವಾದಗಳು.

  2. ಸಂಸಾರದಲ್ಲಿಯ ದಿನಚರಿಯ ಪ್ರೇಮಕಲಹ ಮನೋಲ್ಲಾಸನೀಡಿತು.sir

  3. ಅವು ಇದ್ದರೇ ಚಂದ ಮತ್ತು ಸೊಗಸು ಅಲ್ವೇ ? ಧನ್ಯವಾದಗಳು.

    1. ಶ್ರೀಯುತ ಜೆ.ಹೀರಾಲಾಲ್, ತಮ್ಮ

      ಅನಿಸಿಕೆ ಕೇಳಿ ಸಂತೋಷವಾಯಿತು. ಧನ್ಯವಾದಗಳು.

  4. ಮುದ್ದಣ ಮನೋರಮೆಯರ ಸಲ್ಲಾಪ ನೆನಪಾಯ್ತು. ಸಂಸಾರದಲ್ಲಿ ಸಹಜ ಸಹಕಾರ ಅನಿವಾರ್ಯ. ಇದರಿಂದ ಫ್ಯುಜ್ ಸುಡುವುದಿಲ್ಲ!

    1. ಶ್ರೀ ಮದನ್ ಮೋಹನ್ ರಾವ್ ಅನವರು ಮುದ್ದಣ ಮನೋರಮೆಯವರ ಸಲ್ಲಾಪ ನೆನಪು ತಂದರು. ಅವರ ಅನಿಸಿಕೆ ತುಂಬಾ ಹರ್ಷ ತಂದಿತು. ಧನ್ಯವಾದಗಳು.

  5. ಗಂಡ-ಹೆಂಡತಿಯ ಹಾಸ್ಯಮಯ ಸಂಭಾಷಣೆ ಸೊಗಸಾಗಿ ಮೂಡಿಬಂದಿದೆ. ಅಭಿನಂದನೆಗಳು.

    1. ಸರ್ ತಮ್ಮ ಅನಿಸಿಕೆಗೆ ಕಾಯುತ್ತಿದ್ದೆ ಮತ್ತು ಹೊಂದಿದೆ. ಧನ್ಯವಾದಗಳು.

  6. ಲೇಖನ ತುಂಬಾ ಚೆನ್ನಾಗಿದೆ. ಎಲ್ಲಾ ತರಹದ ಬರವಣಿಗೆಗೆ
    ನೀವು ಸಿದ್ದ ಹಸ್ತರು. ಲೇಖನ ಹಾಸ್ಯಮಯಗಿದೆ.

    1. ತಮ್ಮ ಅನಿಸಿಕೆ ನನಗೆ ಪ್ರೋತ್ಸಾಹ. ಧನ್ಯವಾದಗಳು ಪ್ರಕಾಶ್ ಕುಂದಾಪುರ ಅವರೇ.

Leave a Reply

Back To Top