ಅಂಕಣ ಸಂಗಾತಿ

ಸಿನಿ ಸಂಗಾತಿ

ಕುಸುಮ ಮಂಜುನಾಥ್

ಹದಿಹರೆಯದ ಮಕ್ಕಳ ಪ್ರಣಯ ಪ್ರಸಂಗಗಳು

“ಗಂಟು ಮೂಟೆ

ಇತ್ತೀಚಿಗೆ ಬೆಂಗಳೂರಿನ ಶಾಲೆಗಳಲ್ಲಿ ಹೈಸ್ಕೂಲ್ ಮಕ್ಕಳ ಬ್ಯಾಗ್ ನಲ್ಲಿ ಗರ್ಭ ನಿರೋಧಕ ಮಾತ್ರೆ, ಕಾಂಡೊಮ್ ಸಿಗರೇಟ್ ದೊರೆತದ್ದು ಕಳವಳದ ಸುದ್ದಿ ಆಯಿತು .ಹದಿಹರೆಯದ ಮಕ್ಕಳಿಗೆ ಲೈಂಗಿಕ ಶಿಕ್ಷಣ ಕೊಡಬೇಕೆಂಬ ತಜ್ಞರ ಅಭಿಪ್ರಾಯ ಈಗ ಮತ್ತೆ ಮುನ್ನೆಲೆಗೆ ಬಂದಿದೆ ..
ಈ ಸಂದರ್ಭದಲ್ಲಿ ನಾನು ನೋಡಿದ ಚಿತ್ರ “ಗಂಟು ಮೂಟೆ “ಪ್ರಸ್ತುತನಿಸುತ್ತದೆ ಹದಿಹರೆಯದ
ಮಕ್ಕಳ ಭಾವನೆಗಳ ಕುರಿತಂತೆ ಈ ಚಿತ್ರ.
ಹಾಗೆಂದು ಇದು ಹರೆಯದ ಮಕ್ಕಳು ಹೇಗಿರಬೇಕೆಂಬ ಸಂದೇಶ ಹೊತ್ತಿದೆ ಎಂದು ಭಾವಿಸಬಾರದು .ಇಲ್ಲಿ ಯಾರಿಗೂ ಯಾವ ರೀತಿಯ ಹೇರಿಕೆ ಇಲ್ಲ ಹದಿಹರೆಯದ ಮಕ್ಕಳ ನಡುವಳಿಕೆಯ ಸಹಜ ಚಿತ್ರಣ ಮಾತ್ರ ಈ ಸಿನಿಮಾದಲ್ಲಿ ಕಾಣಬಹುದಾಗಿದೆ, ಹಾಗಾಗಿಯೇ ಮೆಚ್ಚು ಗೆ ಪಡೆಯುತ್ತದೆ.
ಚಿತ್ರದ ನಾಯಕಿ “ಮೀರಾ ದೇಶಪಾಂಡೆ” ಯುವತಿ ಸ್ವತಂತ್ರ ಅಭಿಪ್ರಾಯ ಹೊಂದಿದ ಸೂಕ್ಷ್ಮ ಮನಸ್ಸಿನ ಗಟ್ಟಿಗಿತ್ತಿ ಹುಡುಗಿ. ಬೆಟ್ಟದ ತುದಿಯಲ್ಲಿ ಕುಳಿತು ಅವಳು ಸ್ವಗತದಂತೆ ಮಾತನಾಡುತ್ತಾ ತನ್ನ ಜೀವನದ ಹಿಂದಿನ ಘಟನೆಗಳನ್ನು ಮೆಲುಕುಹಾಕುತ್ತಾಳೆ. ವಿಶ್ಲೇಷಣೆ ಮಾಡುತ್ತಾಳೆ. ಅವಳ ಜೀವನ ಯಾನ ನಮ್ಮ ಮುಂದೆ ಬಿಚ್ಚಿಡುತ್ತಾಳೆ, 90ರ ದಶಕದಲ್ಲಿ ನಡೆಯುವ ಕಥೆ ಇದಾಗಿದೆ.
ಬಾಲ್ಯದಿಂದಲೂ ಸಿನಿಮಾಗಳೆಂದರೆ ಮೀರಳಿಗೆ ಬಹಳ ಪ್ರೀತಿ ಆ ವಯಸ್ಸಿನಲ್ಲಿಯೇ ಒಬ್ಬಂಟಿಯಾಗಿ ಸಿನಿಮಾ ನೋಡುವ ಪ್ರಯತ್ನವನ್ನು ಮಾಡಿರುತ್ತಾಳೆ. ಅಲ್ಲಿ ಅವಳಿಗಾಗುವ ಅನುಭವ ಗಾಯದಂತೆ ಮನಸ್ಸಿನಾಳದಲ್ಲಿ ನಿಲ್ಲುತ್ತದೆ ಮತ್ತೆ ಹರೆಯಕ್ಕೆ ಬಂದಾಗ ಅವಳು ಸಲ್ಮಾನ್ ಖಾನ್ ಸಿನಿಮಾ ನೋಡಿ ಅವನ ಅಭಿಮಾನಿಯಾಗುತ್ತಾಳೆ ಅಷ್ಟೇ ಅಲ್ಲ ಸಲ್ಮಾನ್ ಖಾನ್ ನಂತೆ ಕೂದಲನ್ನು ಹೊಂದಿರುವ ತನ್ನ ಸಹಪಾಟಿ “ಮಧು”ವಿ ನಲ್ಲಿ ಸಲ್ಮಾನ್ ಖಾನ್ ನ್ನು ಕಾಣುತ್ತಾಳೆ. ಅವನೆಡೆಗೆ ಆಕರ್ಷಿತಳಾಗುತ್ತಾಳೆ ಅವನನ್ನು ಪ್ರೀತಿಸಲು ಪ್ರಾರಂಭಿಸುತ್ತಾಳೆ. ಮಧು ಸಹ ಅವಳಿಂದ ಆಕರ್ಷಿತನಾಗುತ್ತಾನೆ ,ಅವಳನ್ನು ಪ್ರೀತಿಸಲು ಪ್ರಾರಂಭಿಸುತ್ತಾನೆ.ಸಿನಿಮಾದ ಹೀರೋವಿಗೆ ಮದುವನ್ನು ಪ್ರತಿ ಗಳಿಗೆ ಯಲ್ಲಿಯೂ ಹೋಲಿಕೆ ಮಾಡುತ್ತಾಳೆ ಮೀರಾ!!!


ತನಗೆ ಎದುರಾಗುವ ಸಂಕಟದ ಸಂದರ್ಭದಲ್ಲಿ ಮಧು ತನ್ನ ಸಿನಿಮಾದ ನಾಯಕನಂತೆಯೇ ಬೆಂಬಲಕ್ಕೆ ಬರುವನೆಂಬ ನಿರೀಕ್ಷೆ ಮಾಡುತ್ತಾಳೆ. ಅವಳ ನಿರೀಕ್ಷೆಗಳು ಸುಳ್ಳಾಗುತ್ತದೆ ಕ್ರಮೇಣ ತನ್ನ ಸೋಲು ತನಗಾಗುವ ಅವಮಾನ ಇವೆಲ್ಲವುಗಳಿಂದ ಹೊರಗೆ ಬರಲು ತಾನೊಬ್ಬಳೇ ಪ್ರಯತ್ನಿಸಬೇಕೆಂಬ ಮನವರಿಕೆ ಯಾಗುತ್ತದೆ ಅವಳಿಗೆ.
ಮೀರಾ ಓದಿನಲ್ಲಿ ಮುಂದು ತರಗತಿಯ ಟಾಪರ್ ಅವಳು .ಆದರೆ ಮಧುವಿಗೆ ಇತರೆ ವಿಷಯಗಳಲ್ಲಿ ಆಸಕ್ತಿ ಹೆಚ್ಚು.
ಬೋರ್ಡ್ ಪರೀಕ್ಷೆಯಲ್ಲಿ ಮಧು ಅನುತ್ತೀರ್ಣನಾಗುತ್ತಾನೆ ,ಮತ್ತೆ ಮತ್ತೆ ಉಂಟಾಗುವ ಸೋಲಿಗೆ ವಿಚಲಿತನಾಗಿ ಸಾವಿಗೆ ಶರಣಾಗಿ
ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.
ಅವನ ಸಾವು ಮೀರಾಳಿಗೆ ದೊಡ್ಡ ಅಘಾತವನ್ನುಂಟು ಮಾಡುತ್ತದೆ ,ಅವನೊಂದಿಗಿನ ಒಡನಾಟಗಳ ನೆನಪಿನಲ್ಲಿ ಅವನನ್ನು ಮರೆಯಲಾಗದೆ ಒದ್ದಾಡುತ್ತಾಳೆ ,ತನ್ನ ಪ್ರೀತಿಯನ್ನು ಮರೆತು ತನ್ನನ್ನು ಒಂಟಿಯನ್ನಾಗಿಸಿದ ಮಧುವಿನ ಬಗ್ಗೆ ಅವನ ದುರ್ಬಲ ಮನಸ್ಸಿನ ಬಗ್ಗೆ ಗಾಢವಾಗಿ ಆಲೋಚಿಸುತ್ತಾಳೆ, ಅವನ ನೆನಪುಗಳ ಗಂಟು ಮೂಟೆ ಹೊತ್ತು ಸಾಗುತ್ತಾಳೆ.
ತನ್ನ ಸಿನಿಮಾದ ನಾಯಕನಂತೆ ತನಗೆ ಸದಾ ಜೊತೆಯಾಗಿ ನಿಲ್ಲದ ಮದುವನ್ನು ಮರೆಯಲಾಗದೆ ತೊಳಲಾಡುತ್ತಾಳೆ. ಆದರೆ ಅವನಿಲ್ಲದೆ ತನ್ನ ಬಾಳ ಪಯಣವನ್ನು ಮುಂದುವರಿಸಲು ಅವಳು ಗಟ್ಟಿ ನಿರ್ಧಾರ ಮಾಡುವುದರೊಂದಿಗೆ ಚಿತ್ರ ಮುಗಿಯುತ್ತದೆ.
ಸಿನಿಮಾದ ನಿರ್ದೇಶಕಿ ರೂಪ ರಾವ್ ತಮ್ಮ ಚೊಚ್ಚಲ ಪ್ರಯತ್ನದಲ್ಲಿ ಒಂದು ಉತ್ತಮ ಚಿತ್ರ ನೀಡಲು ಸಫಲರಾಗಿದ್ದಾರೆ ಹೆಣ್ಣು ಮನಸ್ಸಿನ ಭಾವನೆಗಳ ಆಲೋಚನೆಗಳ ಅನಾವರಣ ಇಲ್ಲಿ ಕಾಣಬಹುದಾಗಿದೆ .ಸ್ವತಃ ತಾವೇ ಕಥೇ ಚಿತ್ರಕಥೆ ನಿರ್ದೇಶನ ನಿರ್ಮಾಣ ಮಾಡಿರುವುದರಿಂದ ತಮ್ಮ ಆಲೋಚನೆಗಳನ್ನು ಸಿನಿಮವಾಗಿಸುವ ಸಂಪೂರ್ಣ ಸ್ವಾತಂತ್ರ್ಯ ಅವರಿಗೆ ಸಿಕ್ಕಿದೆ.
90ರ ದಶಕದ ಕಾಲಘಟ್ಟದ ಚಿತ್ರೀಕರಣ ಶಾಲೆಯ ವಾತಾವರಣ ಬಹಳ ಅಚ್ಚುಕಟ್ಟಾಗಿ ಮೂಡಿದೆ 90ರ ದಶಕದವರಿಗೆ ತಮ್ಮ ಹಿಂದಿನ ದಿನಗಳ ನೆನಪು ಮಾಡಿಸುತ್ತದೆ ಈ ಸಿನಿಮಾ.
ಹದಿಹರೆಯದ ಮಕ್ಕಳ ಪ್ರಣಯ ಪ್ರಸಂಗಗಳು ಚಿತ್ರದಲ್ಲಿ ಬಹಳಷ್ಟು ಇವೇ ,ಯುವ ಪ್ರೇಮಿಗಳ ಮೊದಲ ಚುಂಬನ ,ಮೊದಲ ಸ್ಪರ್ಶ ,ಮೊದಲ ಆಲಿಂಗನ, ಮೊದಲ ಜಗಳ ಎಲ್ಲವನ್ನು ಚಿತ್ರದಲ್ಲಿ ಕಾಣಬಹುದಾಗಿದೆ ಚುಂಬನ ದೃಶ್ಯಗಳು ಅತಿಯಾಯಿತೇನೋ ಎನಿಸುವಂತಿವೆ.
ಹದಿಹರೆಯದ ದಿಟ್ಟ ಮನಸ್ಸಿನ ಆತ್ಮವಿಶ್ವಾಸದ ನಾಯಕಿ ಮೀರಾಳ ಪಾತ್ರದಲ್ಲಿ ತೇಜು ಬೆಳವಾಡಿ ಮೊದಲ ಚಿತ್ರದಲ್ಲೇ ಪಳಗಿದ ನಾಯಕಿಯಂತೆ ನಟಿಸಿದ್ದಾರೆ ಭರವಸೆ ಮೂಡಿಸುತ್ತಾರೆ ,ಭಾವನೆಗಳ ಏರಿಳಿತಗಳನ್ನು ತಮ್ಮ ಮುಖದಲ್ಲಿ ಸ್ಪಷ್ಟವಾಗಿ ಅವರು ಪ್ರದರ್ಶಿಸಿದ್ದಾರೆ.
ಹುಚ್ಚು ಕೋಡಿ ವಯಸ್ಸಿನ ಹುಡುಗನ ಪಾತ್ರದಲ್ಲಿ ಮಧು (ನಿಶ್ಚಿತ್ ಕರೋಡಿ )ಚೆನ್ನಾಗಿ ಅಭಿನಯಿಸಿದ್ದಾರೆ.
. ಚಿತ್ರ ಮಧ್ಯದಲ್ಲಿ ಸ್ವಲ್ಪ ನಿಧಾನಗತಿಯಲ್ಲಿ ಸಾಗಿದಂತೆ ಭಾಸವಾಗುತ್ತದೆ, ಚಿತ್ರದ ಅಭಿವ್ಯಕ್ತಿ ಸೂಕ್ಷ್ಮತೆಗೆ ಪೂರಕವಾಗಿ ಸಂಗೀತ ಸಂಯೋಜನೆ ಇದೆ .ಸಂಭಾಷಣೆಗಳಿಗೆ ಬಹಳಷ್ಟು ಕಡೆ ಹಿನ್ನೆಲೆ ಸಂಗೀತವಿಲ್ಲ ಅದು ಚಿತ್ರದ ಸಹಜತೆಗೆ ಪೂರಕವಾಗಿದೆ .ಸೂಕ್ಷ್ಮ ಭಾವನೆಗಳ ಅಭಿವ್ಯಕ್ತಿಗೆ ಚಿತ್ರದಲ್ಲಿ ಅವಕಾಶ ಹೆಚ್ಚಿದ್ದು ಕ್ಯಾಮೆರಾದ ಕಣ್ಣುಗಳಿಗೆ ಕ್ಲೋಸ್ ಅಪ್ ದೃಶ್ಯಗಳ ಹೆಚ್ಚಾಗಿವೆ, ಛಾಯಾಗ್ರಹಣ ಸಹಜ ಸುಂದರವಾಗಿದೆ.
ನಾಯಕಿ ಮೀರ ಹಾಗೂ ಸಹಪಾಠಿಗಳ ಗುಂಪು ಕ್ಲಾಸ್ ಗೆ ಚಕ್ಕರ್ ಹೊಡೆದು ಕಾಂಪೌಂಡ್ ದಾಟುವ ದೃಶ್ಯವಾಗಲಿ ಗೆಳೆಯರೊಂದಿಗೆ ಸಿಗರೇಟ್ ಸೇದಲು ಕೇಳುವ ದೃಶ್ಯವಾಗಲಿ, ಶಾಲೆಗೆ ಚಕ್ಕರ್ ಹೊಡೆದು ಸಿನಿಮಾ ನೋಡಲು ಹೋಗುವುದಾಗಲೀ ಎಲ್ಲವೂ ಯಥಾಗರ್ಭಿತವಾಗಿ ಚಿತ್ರಿತವಾಗಿದೆ.
ಇವೆಲ್ಲ ಹರೆಯದ ಮಕ್ಕಳಲ್ಲಿ ಸಹಜ ಎಂಬಂತೆ ಚಿತ್ರಿತವಾಗಿದೆ ಹೊರತುa ಅದೊಂದು ದೋಷವೆಂಬಂತೆ ಬಿಂಬಿಸುವ ಪ್ರಯತ್ನವನ್ನು ನಿರ್ದೇಶಕಿ ಮಾಡಿಲ್ಲದಿರುವುದು ವಿಶೇಷವೆನಿಸುತ್ತದೆ .ಆ ದೃಷ್ಟಿ ಕೋನದಲ್ಲಿ ಚಿತ್ರ ನೋಡುತ್ತಾ ಹೋದಾಗ ಹರೆಯದ ಮನಸ್ಸುಗಳ ತಹತಹಿಕೆಯನ್ನು ಪೋಷಕರು ಅರ್ಥಮಾಡಿಕೊಳ್ಳಬೇಕೆಂದು ಭಾಸವಾಗುತ್ತದೆ.
ಒಟ್ಟಾರೆಯಾಗಿ ಕನ್ನಡದ ಮಟ್ಟಿಗೆ ಹೊಸ ವಸ್ತುವನ್ನು ಹೊಂದಿದ ಉತ್ತಮ ಹೊಸ ಪ್ರಯತ್ನದಂತೆ ಚಿತ್ರ ಗೋಚರಿಸುತ್ತದೆ. ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ಲಭ್ಯವಿದೆ..

ತಾರಾಗಣ- ತೇಜು ಬೆಳವಾಡಿ ,ನಿಶ್ಚಿತ್ ಕರೋಡಿ, ಯುಕ್ತಿ ಭಾರ್ಗವರಾಜು ,ಶರತ್ ಗೌಡ ಇತರರು
ಚಿತ್ರಕಥೆ ,ನಿರ್ದೇಶನ -ರೂಪ ರಾವ್
ಸಂಗೀತ -ಅಪರಾಜಿತ್
ಬಿಡುಗಡೆ- 18 ಅಕ್ಟೋಬರ್ 2019


ಕುಸುಮ ಮಂಜುನಾಥ್

ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕುಸುಮಾ ಮಂಜುನಾಥ್ ರವರು ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿ ಯನ್ನು ಹೊಂದಿದ್ದಾರೆ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ “ಸಾಧನ ವಿದ್ಯಾ” ಮಾಸ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ನಾಲ್ಕೈದು ವರ್ಷಗಳು ಕೆಲಸ ಮಾಡಿದ ಅನುಭವವಿದೆ. ರೋಟರಿ ಸಹಯೋಗದಲ್ಲಿ ಸಾಕ್ಷರತಾ ಮಿಷನ್ ಕಾರ್ಯಕ್ರಮದಡಿ ಕೂಲಿ ಕಾರ್ಮಿಕರಿಗೆ ಅಕ್ಷರ ಕಲಿಸುವ ಸೇವೆ ಮಾಡಿದ್ದಾರೆ. ಕಥೆ ,ಕವನ, ಲೇಖನ ಬರೆಯುವುದು ಇವರ ಹವ್ಯಾಸ. ಹಲವು ಬ್ಲಾಗ್ ಗಳಲ್ಲಿ ,ನಿಯತ ಕಾಲಿಕೆಗಳಲ್ಲಿ ಇವರ ಲೇಖನ ಪ್ರಕಟವಾಗಿದೆ. ಸಂಗೀತ ಕೇಳುವುದು ,ಪತ್ರಿಕೆ ಓದುವುದು ಇವರ ಇತರೆ ಹವ್ಯಾಸ.

Leave a Reply

Back To Top