ಆತ್ಮಾನುಬಂಧದ ಸಖಿ-ರಾಘವೇಂದ್ರ ಡಿ. ತಳವಾರ ಪುಸ್ತಕ ವಿಮರ್ಶೆ

ಪುಸ್ತಕ ಸಂಗಾತಿ

ಆತ್ಮಾನುಬಂಧದ ಸಖಿಯೊಡನೆ ಸಹೃದಯ ಸಂವಾದ (ಪುಸ್ತಕ ವಿಮರ್ಶೆ)

ತನುಶ್ರೀ ಪ್ರಕಾಶನ ಸಂಸ್ಥೆಯ ಹತ್ತನೇ ಪ್ರಕಟಣೆಯಾಗಿ ಶ್ರೀ ರಾಘವೇಂದ್ರ ಡಿ. ತಳವಾರ ಇವರ ಚೊಚ್ಚಲ ಕವನ ಸಂಕಲನ “ಆತ್ಮಾನುಬಂಧದ ಸಖಿ” ಓದುಗರ ಕೈಸೇರಿದೆ. ಇದಕ್ಕಾಗಿ ಪ್ರಕಾಶಕರಿಗೆ ಮತ್ತು ಕೃತಿಕಾರರಿಗೆ ಅಭಿನಂದನೆಗಳು. ಶ್ರೀ ರಾಘವೇಂದ್ರ ತಳವಾರರು ಎಂ.ಎಸ್ಸಿ. ಪದವೀದರರಾಗಿದ್ದು ಪ್ರಸ್ತುತ ಭಾರತೀಯ ಆಡಳಿತ ಸೇವಾ ಪರೀಕ್ಷೆಗಳಿಗಾಗಿ ತಯಾರಿ ನಡೆಸುತ್ತಿದ್ದಾರೆ. ಇವರು ದಾರವಾಹಿ ನಟರು, ‘ಅಕ್ಷರ ದಾಸೋಹ’ ಎಂಬ ಸ್ಪರ್ಧಾತ್ಮಕ ಮಾಸ ಪತ್ರಿಕೆಯ ಪ್ರಧಾನ ಸಂಪಾದಕರು ಆಗಿದ್ದು, ಸ್ಪರ್ಧಾತ್ಮಕ ಪರಿಕ್ಷೆಗಳ ಕುರಿತು ಆಸಕ್ತರಿಗೆ ಮಾರ್ಗದರ್ಶನ ಮಾಡುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದು, ತಮ್ಮ ಬಿಡುವಿನ ವೇಳೆಯಲ್ಲಿ ಅವರ ನೋವು  – ನಲಿವು, ನಷ್ಟಗಳನ್ನು, ಸುಖ – ಸಂತೋಷಗಳನ್ನು ಅಭಿವ್ಯಕ್ತಿಸುವ ಹಾಗೂ ತಮ್ಮ ಮನಸ್ಸಿನ ಅಂತರಾಳದ ತುಮುಲಗಳಿಗೆ ಬಿಡುಗಡೆ ನೀಡುವ ಮತ್ತು ಆ ಮೂಲಕ ತಾವೂ ಸಹ ಬಿಡುಗಡೆ ಪಡೆಯುವ ಪ್ರಯತ್ನವಾಗಿ ಅವರ “ಆತ್ಮಾನುಬಂಧದ ಸಖಿ” ಕವನ ಸಂಕಲನ ಮೂಡಿ ಬಂದಿದ್ದು ಪ್ರಕಟಣಾ ಪೂರ್ವದಲ್ಲಿಯೇ ತುಮಕೂರಿನ ಪ್ರತಿಷ್ಠಿತ ‘ಗುರುಕುಲ ಕಲಾ ಪ್ರತಿಷ್ಠಾನ’ದ ವತಿಯಿಂದ ‘ಗುರು ಕುಲ ಸಾಹಿತ್ಯ ಕೇಸರಿ’ ಎಂಬ ಪ್ರಶಸ್ತಿಯನ್ನೂ ಈ ಕೃತಿ ದಕ್ಕಿಸಿಕೊಂಡಿದೆ.

ಕವಿ ರಾಘವೇಂದ್ರ ತಳವಾರರು ಓದು, ವೃತ್ತಿ – ಪ್ರವೃತ್ತಿಗಳಿಗೆ ಸಂಬಂಧಿಸಿ ಸಾಹಿತ್ಯದ ಯಾವುದೇ ನಿಕಟ ವಾತವರಣವು ಲಭ್ಯವಾಗದ, ಯಾವುದೇ ಸಾಹಿತ್ಯಿಕ ಹಿನ್ನೆಲೆ, ಪ್ರಭಾವ – ಪ್ರೇರಣೆಗಳಿಲ್ಲದ, ವಿಜ್ಞಾನದ ಹಿನ್ನೆಲೆಯ ಒಬ್ಬ ಗ್ರಾಮೀಣ ಕವಿ ಪ್ರತಿಭೆ. ತಾನು ಕಂಡ – ಉಂಡ ಅನುಭವ ಮತ್ತು ನೋವುಗಳನ್ನು ತನ್ನದೇ ಭಾಷೆಯಲ್ಲಿ ಯಾವ ಕಾವ್ಯ ನಿಯಮಗಳ ಹಂಗು ಇಲ್ಲದೇ ತನಗೆ ಕಂಡಂತೆ ಕಾಣಿಸಿರುವುದು ಈ ಕೃತಿಯ – ಕೃತಿಕಾರನ ವಿಶೇಷ.

ಓದುಗರಿಗೆ ಇದು ಕವಿಯ ಚೊಚ್ಚಲ ಕೃತಿ ಎನಿಸುವುದಿಲ್ಲ. ಕವಿ, ಈ ಕೃತಿಯ ಪ್ರಾರಂಭದಲ್ಲಿ  ತಮಗೆ ಮಾರ್ಗದರ್ಶನ ಮಾಡಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಮನದಾಳದ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಇದು ಕವಿಯ ವಿನಯವಂತಿಕೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಕೃತಿಯ ಮೊದಲಲ್ಲಿ ಓದುಗರ ಭಾವದ ಬೆಸುಗೆಯನ್ನು ಬಯಸುವ ಕವಿಗಳು ತಮ್ಮ ಮಾತನ್ನು ಆರಂಭಿಸುವುದೇ ಬದುಕು ಎಂದರೇನು? ಎಂಬ ಆದಿಮ ಪ್ರಶ್ನೆಯಿಂದ. ಇಲ್ಲಿ ವರ್ತಮಾನದಲ್ಲಿ ಬದುಕುವ, ಬದುಕನ್ನು ಆಸ್ವಾದಿಸುವುದರ ಮತ್ತು ನಮ್ಮ ಹೃದಯಗಳನ್ನು ಪ್ರೀತಿ ವಿಶ್ವಾಸಗಳಿಂದ ತುಂಬಿಕೊಳ್ಳುವುದರ ಅವಶ್ಯಕತೆ ಮತ್ತು ಮಹತ್ವವನ್ನು ಕುರಿತಾಗಿ ರಾಘವೇಂದ್ರ ತಳವಾರರು ಓದುಗರ ಗಮನವನ್ನು ಸೆಳೆಯುತ್ತಾರೆ.

ಕವನದ ಸಾಲುಗಳನ್ನು ಗಮನಿಸುವುದಾದರೆ, ಇವು ಪದ್ಯದಂತೆ ಓದುವವರಿಂದ ಪದ್ಯವಾಗಿಯೂ, ಗದ್ಯದಂತೆ ಓದುವವರಿಂದ ಗದ್ಯವಾಗಿಯೂ ಓದಿಸಿಕೊಳ್ಳುತ್ತವೆ. ಪದ್ಯದಂತೆ ಹಾಡಿದರೂ ಗದ್ಯದಂತೆ ಓದಿದರೂ ಅರ್ಥ ಮತ್ತು ಭಾವದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಕವಿಯು ಕಾವ್ಯ ನಿಯಮಗಳ ಬಂಧವನ್ನು ಮೀರಿ ಕೃತಿ ರಚಿಸಿದ್ದಾರೆ. ಇದು ಈ ಕೃತಿಯ ವಿಶೇಷವೂ ಹೌದು. ಇಲ್ಲಿನ ಕವಿತೆಗಳಲ್ಲಿ ಪ್ರಾಸ ಸಹಜವಾಗಿ ಮೂಡಿ ಬಂದಿದ್ದು, ಪ್ರಾಸ ತರಲೇಬೇಕೆಂಬ ಒತ್ತಡಕ್ಕೆ ಕವಿ ಎಲ್ಲಿಯೂ ಸಿಲುಕಿಕೊಳ್ಳುವುದಿಲ್ಲ.

ಇಲ್ಲಿನ ಕವನಗಳನ್ನು ಅಪ್ಪನ ಮೌಲ್ಯ – ಅಮ್ಮನ ವಾತ್ಸಲ್ಯ, ಹುಸಿಮನಸ್ಸು – ಸಿಹಿಗನಸು, ಅನುರಾಗ – ಅನುಭವ, ಬದುಕು – ಬವಣೆ- ಭರವಸೆ, ಸಮಾಜ – ಸುವಿಚಾರ, ಭಾವದುಸಿರ ಭಾವಬರಹ ಎಂಬ ಆರು ಉಪ ಶೀರ್ಷಿಕೆಗಳ ಅಡಿಯಲ್ಲಿ ವಿಂಗಡಿಸಿ, ಪ್ರತಿ ವಿಭಾಗದ ಪ್ರಾರಂಭದಲ್ಲಿ ನಿವೇದನಾ ರೂಪದ ಸಂದೇಶವನ್ನು ಕೊಟ್ಟಿರುವುದು ಈ ಕೃತಿಗೆ ಒಂದು ವಿಶೇಷ ಮೆರುಗನ್ನು ನೀಡಿದೆ.

“ಆತ್ಮಾನುಬಂಧದ ಸಖಿ” ಎಂಬ ಶೀರ್ಷಿಕೆಯು ಯುವ ಕವಿಯೊಬ್ಬನ ಪ್ರೇಮ ಕವಿತೆಗಳ ಸಂಗ್ರಹ ಎಂಬುದಾಗಿ ಅವಳ ಲಜ್ಜೆ, ಎದೆಯ ಸಿಂಹಾಸಿನಿ ರತ್ನಮಂಜರಿ, ಮನದ ಬನದ ಹೂವು, ಮೂಗು ಮುರಿದು ಹೋದಾಕಿ, ಭಾವ ನಾದ, ಅವಳು, ಯಾರವಳು ಮುಂತಾದ ಕವಿತೆಗಳ ಮೂಲಕ ಮೇಲ್ನೋಟಕ್ಕೆ ಕಂಡರೂ ಕೃತಿಯ ಮುಖ ಪುಟವನ್ನು ಹಾಗೂ ಗೆಲ್ಲಬೇಕು ನೀವು ಗೆಲ್ಲಬೇಕು, ನೆನ್ನೆ – ಇಂದು – ನಾಳೆ, ಬಾಳು, ಚೇತನರು, ದೇವರಲ್ಲಿ ನಾನಿಡುವೆ ಅಹವಾಲು, ವರವೊಂದು ಕೊಡು ನನಗೆ, ಗಾಳಿದೀಪ ಮುಂತಾದ ಪದ್ಯಗಳನ್ನು ಗಮನಿಸಿದಾಗ ಕವಿಯ ಒಳ ಮನಸ್ಸಿನಲ್ಲಿರುವ ಸುಪ್ತ – ಗುಪ್ತ ಆಧ್ಯಾತ್ಮಿಕ ಅನುಭಾವದ ಒಂದು ‘ಟಚ್’ ಈ ಕವಿತೆಗಳನ್ನು ಆವರಿಸಿರುವುದು ನಮ್ಮ ಗಮನಕ್ಕೆ ಬರುತ್ತದೆ. ರಾಘವೇಂದ್ರ ತಳವಾರರ ಆಧ್ಯಾತ್ಮಿಕತೆಯನ್ನು ತಮ್ಮ ಮಾತಾ ಪಿತೃಗಳ ಕುರಿತು ಅವರು ರಚಿಸಿರುವ ಕವನಗಳಲ್ಲಿನ ಪ್ರೀತಿ ಮತ್ತು ಭಕ್ತಿಯ ರೂಪದಲ್ಲಿಯೂ ಸುಲಭವಾಗಿ ಗುರುತಿಸುವುದು ಸಾಧ್ಯ.

ಕೃತಿಯ ಉಪ ಶೀರ್ಷಿಕೆ “ಸ್ನೇಹ ಪ್ರೀತಿ ವಾತ್ಸಲ್ಯ ಸಾಧನೆಗಳೊಂದಿಗೆ ಎಲ್ಲರ ಬದುಕಾಗಲಿ ಸಂತೋಷ ಸುಖಿ” ಇದರ ಅರ್ಥ ಮತ್ತು ಮಹತ್ವವನ್ನು ವಿವರಿಸುವ ಅಗತ್ಯವಿಲ್ಲ. ಕವಿಯ ಹೃದಯ ಈ ಉಪಶಿರ್ಷಿಕೆಯ ಮೂಲಕ ತನ್ನಿಂತಾನೇ ಓದುಗರ ಮುಂದೆ ತೆರೆದುಕೊಳ್ಳುತ್ತದೆ. ಇದನ್ನು ಮಾನ್ಯ ಡಾ. ರಾಕೇಶ್ ರವರು ಈ ಕೃತಿಯ ಮುನ್ನುಡಿಯಲ್ಲಿ “ಕಾವ್ಯವೆನ್ನುವುದು ಆತ್ಮ ಅನುಭವಿಸುವ ಕನಸು, ಸಖ್ಯತೆ, ಕಾಣ್ಕೆ, ಮಮತೆ ಮುಂತಾದ ಸ್ತ್ರೀ ಸಂವೇದನೆಗಳನ್ನು ‘ಸಖಿ’ಯ ಪ್ರತಿಮಾತ್ಮಕತೆಯಲ್ಲಿ ಕಂಡಿರುವುದು ಕಾವ್ಯ ಪರಿಭಾಷೆಗೆ ಬೆಳದಿಂಗಳ ಹೊಳಪನ್ನೇ ಶೀರ್ಷಿಕೆ ಧಾರೆಯೆರೆದಂತಿದೆ” ಎಂಬುದಾಗಿ ಬಹಳ ಅರ್ಥಗರ್ಭಿತವಾಗಿ ವಿವರಿಸಿದ್ದಾರೆ.

ಪ್ರಸ್ತುತ ಕೃತಿಯ ಆತ್ಮಾಭಿಮಾನಿ, ನಂಬಿಕೆ, ಹೃದಯ ವೈಶಾಲ್ಯತೆ, ನಾನು ನಾನಾಗಿ, ಕನಸೊಂದಿರಬೇಕು, ಮರೆತು ಬಿಡಿ, ಬದುಕು ಬರವಸೆ, ಗೆಲ್ಲಬೇಕೆ ? ನೀವು ಗೆಲ್ಲಬೇಕೆ?, ಸೋತವರು – ಗೆದ್ದವರು, ಗೆಲುವು, ಮತ್ತೊಂದು ಅವಕಾಶ, ಬಾಳ ಸ್ಪೂರ್ತಿ, ಯುವ ಭಾರತ, ಯುವದಿನ ಮುಂತಾದ ಕವನಗಳು ಓದುಗರನ್ನು ಮೋಟಿವೇಟ್ ಮಾಡುವ ಕೆಲಸವನ್ನು ಬಹಳ ಯಶಸ್ವಿಯಾಗಿ ಮಾಡುತ್ತವೆ.

ಉಳಿದಂತೆ,

 ‘ಅಗ್ನಿಪಥ’ ಕವಿತೆಯ

ಸೀತೆ ಒಮ್ಮೆ ಅಗ್ನಿ ಪರೀಕ್ಷೆ ಎದುರಿಸಿದಳು,

ಈ ತಾಯಿಯ ದಾರಿ ಎಲ್ಲವೂ ಆಗ್ನಿಯೇ” ಎಂಬ ಸಾಲುಗಳಲ್ಲಿ ವ್ಯಕ್ತವಾಗಿರುವ ನೋವು,

ಹೃಯದ ವೈಶಾಲ್ಯತೆ” ಎಂಬ ಕವಿತೆಯ

ನೋಯಿಸಿದವರ ಕ್ಷಮಿಸಿಬಿಡು

ನೊಂದವರಿಗೆ ಪ್ರೀತಿ ಕೊಡು

ಇದೇ ಮನುಜ ಧರ್ಮದ ತತ್ತ್ವ

ಪ್ರೀತಿಯೇ ಎಲ್ಲ ಸಂಬಂಧಗಳ ಸತ್ವ” ಎಂಬ ಸಾಲುಗಳಲ್ಲಿರುವ ಕವಿಯ ಹೃದಯ ವೈಶಾಲ್ಯತೆ,

ಮರೆತು ಬಿಡು” ಎಂಬ ಕವಿತೆಯ

ಮರೆಯುವುದು ಹೇಗೆಂದು ಹೇಳಿಕೊಡಿ. . . . . . . .

ನನ್ನೊಳಗಿನ;

ಋಣಾತ್ಮಕತೆಯ ಮರೆತು

ಧನಾತ್ಮಕತೆಯೆಡೆಗೆ ನಡೆವಂತೆ

ದ್ವೇಷ ಅಸೂಯೆಗಳ ಮರೆತು

ಪ್ರೇಮದ ಪ್ರತಿರೂಪ ನಾನಾಗುವಂತೆ” ಎಂಬ ಸಾಲುಗಳಲ್ಲಿರುವ ಆತ್ಮ ವಿಮರ್ಶೆ,

ನಾನು ನಾನಾಗಿ” ಎಂಬ ಕವಿತೆಯ

ನಾನು ಹಾಲು ಆಗದಿದ್ದರೇನಂತೆ,

ಸುಣ್ಣದ ನೀರಾಗಿ ಬಳಸಿದವರ ಮನೆಯ ಬೆಳಕಾಗುವೆ”,

ನಾನು ವಿಶೇಷ ಆಗದಿದ್ದರೇನಂತೆ,

 ಪ್ರತಿದಿನವೂ ವಿಕಾಸವಾಗುವೆ”,

ನಾನು ಪ್ರಸಿದ್ದಿ ಆಗದಿದ್ದರೇನಂತೆ ಜ್ಞಾನ ಸಮೃದ್ಧನಾಗುವೆ” ಎಂಬು ಸಾಲುಗಳಲ್ಲಿನ ಕವಿಯ ವಿಧೇಯತೆ,

ವಿಮರ್ಶಕಿ” ಕವಿತೆಯ

ಮುನ್ನುಡಿಯನ್ನು ಮಾತ್ರ ಓದಿ,

 ಮುನ್ನಡೆಯದೇ

 ನನ್ನ ಬಾಳನ್ನು ವಿಮರ್ಶಿಸಿದ ನಿನ್ನ ಪರಿ ಸರಿಯೇ?” ಎಂಬ ಸಾಲುಗಳಲ್ಲಿನ ನೋವು ತುಂಬಿದ ಪ್ರಶ್ನೆ,  ಇವು ಓದುಗರನ್ನು ಮತ್ತೆ ಮತ್ತೆ ಕಾಡದೇ ಇರಲಾರವು.

ಈ ಕೃತಿಯು ಒಬ್ಬ ಪ್ರೇಮಿಯನ್ನು, ಪ್ರೇಮಿಯ ವಿರಹವನ್ನು, ಸಂತನೊಬ್ಬನ ವಿಶ್ವಪ್ರೇಮವನ್ನು, ಒಬ್ಬ ವೈರಾಗಿಯನ್ನು, ಒಬ್ಬ ಮೋಟಿವೇಷನಲ್ ಮಾತುಗಾರನನ್ನು, ಒಬ್ಬ ವಿದೇಯ ವಿದ್ಯಾರ್ಥಿಯನ್ನು, ಬಹುಮುಖೀ ವ್ಯಕ್ತಿತ್ವದ ಕವಿಯನ್ನು, ಮಾತೃ ಪ್ರೇಮಿಯನ್ನು, ಕಾಯಕ ನಿಷ್ಠ ಪ್ರಜೆಯನ್ನು ಓದುಗರ ಮುಂದೆ ಅನಾವರಣ ಮಾಡುತ್ತಾ ಸಾಗುತ್ತದೆ. ಇದು ಕವಿಯ ಬಹುಮುಖಿ ವ್ಯಕ್ತಿತ್ವದ ಅನಾವರಣವೂ ಹೌದು.

ಇಷ್ಟೆಲ್ಲ ವಿಶಿಷ್ಟತೆಗಳನ್ನು ಹೊಂದಿದಾಗ್ಯೂ ಎಲ್ಲ ಚೊಚ್ಚಲ ಕೃತಿಗಳಲ್ಲಿ, ಪ್ರಾಥಮಿಕ ಬರಹಗಳಲ್ಲಿ  ಮತ್ತು ಬರಹಗಾರರಲ್ಲಿ ಇರಬಹುದಾದ ಸಾಮಾನ್ಯ ಮಿತಿ ಹಾಗೂ ಲೋಪಗಳಿಂದ ಈ ಕೃತಿ ಸಂಪೂರ್ಣವಾಗಿ ಮುಕ್ತವಾಗಿದೆ ಎಂದು ಹೇಳಲು ಬರುವುದಿಲ್ಲ. ಈ ಕೃತಿ ಸಮಕಾಲೀನ ವಿದ್ಯಮಾನಗಳ ಕುರಿತು, ಸಾಮಾಜಿಕ ಸಂವೇದನೆಗಳ ಕುರಿತು ಸಂಪೂರ್ಣವಾಗಿ ಮೌನ ವಹಿಸಿದೆ. ಅನುಭವ ಮತ್ತು ಅನುಭಾವಗಳ ಮತ್ತು ಭಾಷಾ ಪ್ರೌಡಿಮೆ, ವಿಷಯ ಪ್ರಭುದ್ಧತೆಗಳ ಗೈರು ಹಾಜರಿ ಕೃತಿಯ ಕೆಲವು ಕವನಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ ಇದನ್ನು ಸರಿದೂಗಿಸುವ ಅಥವಾ ಸಮರ್ಥಿಸಿಕೊಳ್ಳುವ ಜವಾಬ್ದಾರಿ ರಾಘವೇಂದ್ರ ತಳವಾರರ ಮೇಲಿದೆ.

ಕವಿ ಶ್ರೀ ರಾಘವೇಂದ್ರ ತಳವಾರರ ಸಾಹಿತ್ಯಿಕ ಮತ್ತು ವೈಯಕ್ತಿಯ ಜೀವನಗಳೆರಡು ಸಮೃದ್ಧವಾಗಲಿ, ಅವರ ಸಾಹಿತ್ಯ ಕೃಷಿ ನಿರಂತರವಾಗಿರಲಿ ಮತ್ತು ಅವರ ಎಲ್ಲಾ ಆಸೆ ಆಕಾಂಕ್ಷೆಗಳು ನೆರವೇರಲಿ ಎಂದು ಆಶಿಸುತ್ತಾ ಓದುಗ ಸಹೃದಯ ಬಾಂಧವರು ಕೃತಿಯನ್ನು ಕೊಂಡು – ಓದಿ ಕೃತಿಕಾರರನ್ನು ಪ್ರೋತ್ಸಾಹಿಸುಬೇಕೆಂದು ಕೋರುವೆ. ನಮಸ್ಕಾರಗಳು.  (ಪ್ರತಿಗಳಿಗಾಗಿ ಸಂಪರ್ಕಿಸಿ : ೮೧೦೫೨೪೨೭೩೨)


– ಶ್ರೀ ವರುಣ್ ರಾಜ್ ಜಿ.

Leave a Reply

Back To Top