ಕಾವ್ಯ ಸಂಗಾತಿ
ಬದುಕು ಒಳಕಲ್ಲು
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಬದುಕು
ಒಳಕಲ್ಲು…
ಬಗೆಬಗೆ ಆಕಾರ ಮುಳ್ಳು
ಗುನ್ನಗಳ ಗುಂಡುಕಲ್ಲು
ತದೇಕ ತಿರುತಿರುವಿ ಹದಗೈದು
ಮೆದುವಾದ ಹುದುಗಲು
ಜಿಹ್ವಾರುಚಿಮೊಗ್ಗುಗಳಿಗೆ
ಆಹ್ಲಾದ ಸ್ವಾದ!
ಪಾಕಶಾಸ್ತ್ರಕಿಲ್ಲ
ಲಿಂಗಭೇದ
ಹೆಣ್ಣಾಗಲಿ ಗಂಡಾಗಲಿ
ಪ್ರಾವೀಣ್ಯ ಪ್ರಮುಖ
ಆದಾಗ್ಯೂ ಹೆಣ್ತನದ
ಮನಸು ಮುಖ್ಯ
ಸವಿರುಚಿಗೆ
ದಿನಕೊಂದೊಂದು
ಥರ ಚಟ್ನಿ ಸಾಂಬಾರು
ಒಮ್ಮೆ ತೆಂಗು ಇನ್ನೊಮ್ಮೆ
ಸವಿ ಸವಿ ನೆಲಗಡಲೆ
ಮತ್ತೊಮ್ಮೆ ಹಾಗಲ ಕಹಿ
ಇಲ್ಲ ಬೇಡದ ಮೆಂತ್ಯ ರುಚಿ
ಮರುದಿನ ಬಾಯಿ ಉರಿಗೆ
ಅಚ್ಚ ಹಸಿರು ಮೆಣಸಿನಕಾಯಿ
ಸೀಮೆ ಅಥವ ನಾಟಿ ಬದನೆ ಹೀಗೆ
ಒಂದೆ ವಾರದ ಏಳು ದಿನಗಳಲಿ
ಸಮಸ್ತ ಏರುಪೇರುಗಳ
ಆಯಾಮ ಅನುಭವ!
ಹಬ್ಬ ಹರಿದಿನ ಭಾನುವಾರ
ಮಕ್ಕಳ ಹೆಬ್ಬಯಕೆಯಾಹಾರ
ಬದುಕ ಒಳಕಲ್ಲು
ಈ ಎಲ್ಲಕು ಪ್ರಮುಖ ಹಲ್ಲು!
ಒಳಕಲ್ಲು
ತನ್ನ ಗುಳಿಯೊಳಗೆ
ಹೊರಳಿ ಹೊರಳಿ ಸುತ್ತಿ
ರುಬ್ಬಿ ನುಣ್ಣಗರೆದರೆದು
ಪರಿಧಿಯಿಂದಾಚೆ ಹೊಮ್ಮಿದೆಲ್ಲವ
ಮತ್ತೆ ಮತ್ತೆ ಒಳಮೈಗಮುಕಿ
ಕರುಣೆಯಿಲ್ಲದೆ ಇನ್ನೂ ಅರೆದು
ಅದರ ರೂಪರೇಖೆ ಹೊಳಪಿಸಿ
ಅಡುಗೆಗೆ ಅಣಿಗೊಳಿಸಿ
ಎಲ್ಲ ಈಗ ಹೊರಹಾಕಿ
ತನ್ನ ಗುಂಡುಕಲ್ಲನು
ಅರೆವ ಕಲ್ಲಾಗಷ್ಟೆ
ಉಳಿಸುವುದು
ಜಗದ ಸೋಜಿಗ!
ಈಗ ಅಂಥ ಬದುಕ
ಗುಂಡುಕಲ್ಲು ಮಾಯ
ಬದಲಿಗೆ ಎಲ್ಲ ಯಾಂತ್ರಿಕ
ಹೆಜ್ಜೆ ಹೆಜ್ಜೆಗು ಘನಘೋರ
ಸದ್ದುಗದ್ದಲ
ಅಯೋಮಯ!
Iduve jeevanada savi, chennagi rachisiddeeri dactrae super….