ಕಾವ್ಯ ಸಂಗಾತಿ
ನಾನೆಂದರೆ
ಗೋನವಾರ ಕಿಶನ್ ರಾವ್
ಸ್ವರ, ಸ್ವತಂತ್ರ ಸ್ವಯಂಪ್ರಭೆ
ಒಂದೇ ಗತಿ ಯೂ ಹೌದು
ಎರಡು ಗತಿಯೂ ಹೌದು
ಆಗಾಗ ಕೂಗಿ ಕರೆವಾಗ
ರಾಗದಿ ಪಾಡಲು ಮೂರು ನಾನು.
ಗಾಳಿಯಷ್ಟು ಹಗುರ ಮೋಡದದಷ್ಟು
ಚಂಚಲ ಮಳೆಯಷ್ಟು ಮುಕ್ತ
ಹಿರಿಯಣ್ಣ.
ನಾನೆಂದರೆ ಅಸ್ವರ ಅಪಸ್ವರ ವೇನಲ್ಲ
ಆಸರೆ ಬೇಕು ಅಣ್ಷನ ಪ್ರಭೆ ಬೇಕು
ಒಡಹುಟ್ಟಿದವರು ಒಡನಾಡಿಗಳು
ಅಗೊಮ್ಮೆ ಈಗೊಮ್ಮೆ ಅಲ್ಲಿ ಇಲ್ಲಿ
ಅಗತ್ಯ ಇದ್ದಾಗ ಅಷ್ಟಿಷ್ಟು ಸ್ವತಂತ್ರ್
ತಮ್ಮನಲ್ಲವೆ ನಾನು
ಒಡಹುಟ್ಟಿದವರೂ ಹೌದು
ಅವಳಿ ಜವಳಿ
ಉಭಯ ಅಣ್ಣಂದಿರ ಹರಕೆ ಹಾರೈಕೆ.
ಯೋಗ ಬೇಕು ವಾಹಕನಾಗುವ
ಆರಂಭಕೆ ನಾನು ಓಂಕಾರ
ಅಂತ್ಯ ಬೆನ್ನಿಗೆ ಬಿದ್ದವ ಅವನಿಗೆರಡು
ಮೇಲೊಂದು ಕೆಳಗೊಂದು
ಕಡೇ ಹುಟ್ಟು ಕಡಲೆ ಬೆಲ್ಲ
ಮರಳಿನಲಿ ಆರಂಭ ಶಿಲೆಯಲೂ
ನಾನು ಲೋಹದಲಿ ನಾನು ಬಿಳಿಹಾಳೆ
ಗಲಗು, ಸೀಸ, ಶಾಯಿ ಕಲ್ಲಚ್ಚು ಮೊಳೆ.
ಈಗೆಲ್ಲ ಮಟಾಮಾಯ ಬೆರಳ ಸಹಾಯ
ಮಂತ್ರ ತಂತ್ರ ಯಂತ್ರ ಹೌದೌದು
ಅಣ್ಣತಮ್ಮಂದಿರುಗಳು ಅಂಗೈ ಕನ್ನಡಿ
ಜಂಗಮವಾಣಿ.
ಗೋದಾವರಿಯಲ್ಲಿದ್ದೆ,ಕಾವೇರಿಯಲಿ
ಇರುವೆ ಕೃಷ್ಣೆಯವರೆಗಿರುವೆ ತುಂಗೆ
ಭದ್ರೆಯರ ಸಂಗಮದ ಬಿಂದು.ಮಸ್ತಕವೂ
ನಾನೆ ಪುಸ್ತಕವು ನಾನೆ ಅಗೋಚರಗೋಚರ
ಆಡು ಮಾತು ನಾನೇ ಹಾಡು ಮಾತು ನಾನೇ
ಸರ್ವಂತರಯಾಮಿ.
ಪಂಪ ನಂದಿವಾಹನನ ಅಣ್ಣ, ತಂಬೂರಿಧರ,
ರಾವ,ಪೈ,ಪುಟ್ಟಪ್ಪ, ನಾದಲೀಲೆ, ಮಂಕುತಿಮ್ಮ,
ಅಡಿಗ ನಾಡಿಗ, ಹಂಪ,ಚಂಪ, ಹೀಗೆ ಅವರು
ಇವರು. ಅವಧ ಆದಿ,ಅರಬ್ಬಿ,ಅಕ್ಷಯ,ಅವ್ಯಯ,
ನಾನು,ನೀನು ಅವರು ಅವನು ಅವಳು
ಎಲ್ಲೆಲ್ಲೂ ನಾನೇ ನಿನ್ನಲ್ಲೂ ನಾನೆ.
ನಾನೂ ಇರುವೆ ಇಲ್ಲದಿರೆ ಅಳಿವಿಲ್ಲ,
ಉಳಿವಿಲ್ಲ ಸಾವಿಲ್ಲ ಬದುಕಿಲ್ಲ ಬೆದಕಿಲ್ಲ
ಅನುಸ್ವಾರ ಅಷ್ಟೇ !