ಸುಜಾತ ಹೆಬ್ಬಾಳದ ಕವಿತೆ-ಅರಿವು

ಕಾವ್ಯ ಸಂಗಾತಿ

ಅರಿವು

ಸುಜಾತ ಹೆಬ್ಬಾಳದ

ಮುಂಜಾನೆಯ ಚುಮುಚುಮು ಚಳಿಗೆ
ಕಾವು ಕೊಟ್ಟಂತೆ
ಬಿಸಿಬಿಸಿ ಕಾಫಿ
ಗಂಟಲೊಳಗಿಳಿಸಿಕೊಳ್ಳುತ್ತಾ
ಹೆಜ್ಜೆಹಾಕುತ್ತಿದ್ದೆ
ಹಿತ್ತಲಿನ ಸುತ್ತ
ಪ್ರಕೃತಿಯ ಸವಿಯುತ್ತಾ
ಅಚಾನಕ್ಕಾಗಿ ಉದುರಿ ಬಿತ್ತೊಂದು ತರಗೆಲೆ,
ಕಾಂಪೌಂಡಿಗಂಟಿ ಬೆಳೆದ ನೆರೆಮನೆಯವರ ಮಾವಿನಮರದಿಂದ
ದೇವರ ಕರೆಗೆ ಓಗೊಟ್ಟಂತೆ
ಜೀವನಯಾತ್ರೆ ಮುಗಿಸಿ
“ಛೇ , ಎಷ್ಟು ಕಸ ಈ ಮರದಿಂದ “
ಎಂದು ಶಪಿಸುತ್ತ
ಎಲೆಗಳ ಕಸದ ರಾಶಿಗೆ ಬೇಸರಪಟ್ಟು
ದಿನನಿತ್ಯದ ಈ ಕಸದ ಜಂಜಾಟದಿಂದ
ಮುಕ್ತಿ ಪಡೆಯಲು
ಕಡಿಸಲೇಬೇಕೆಂದುಕೊಂಡೆ ಗೆಲ್ಲುಗಳನು ಪಕ್ಕದಮನೆಯವರಿಗೆ ದೂರಿ
ಯೋಚನಾ ಲಹರಿ ಚದುರಿಸುವಂತೆ ಆಟ ಮುಗಿಸಿ ಓಡಿಬಂದ ಮಗ
ಎಲೆಗಳ ಮಧ್ಯೆ ಏನೋ ಹುಡುಕಾಡುವಾಗ
ಜೋರು ದನಿಯಲ್ಲಿ ಬೈದೆ
“ಥೂ ಗಲೀಜು ,ಕಸದಲ್ಲಿ ಏನು ಕೆಲಸ ?ಬಾಯಿಲ್ಲಿ “
ಬಿಡದೆ ಪಟ್ಟು ಹುಡುಕಿದ ಹಣ್ಣನ್ನೆತ್ತಿ
ಖುಷಿಯಿಂದ ಕಣ್ಣರಳಿಸಿ ಹೇಳಿದ
“ಕಸವಷ್ಟೇ ಏಕೆ ! ಹಣ್ಣನ್ನೂ ಕೊಡುವ ಈ ಮರ ನಂಗೆ ಪ್ರೀತಿ
ಸವಿದಿದ್ದೀಯಾ ಇದರ ರುಚಿ ?”
ತಕ್ಷಣ ನನ್ನ ಕೋಪ ತಣ್ಣಗಾಯಿತು
ಬುದ್ಧನೇ ತಲೆಮೇಲೆ ಕೈಯಿಟ್ಟ ಅನುಭವ
ಮಾವಿನಮರದಡಿ ಅರಿವು !
ಮಗನ ಬರಸೆಳೆದು ಮುತ್ತಿಟ್ಟು ಹೌದೆಂದು ಮುಗುಳ್ನಕ್ಕೆ
ಹಣ್ಣನ್ನು ಮನಸಾರೆ ಸವಿದೆವು ಇಬ್ಬರೂ ಮನೆಯ ಒಳಗಿಂದ ಶ್ರವಣ ಸಮಸ್ಯೆಯ ಅಪ್ಪನು ದಿನವೂ ಕೇಳುವ ಪುನರಾವರ್ತಿತ ಪ್ರಶ್ನೆಗಳಿಗೆ
ಇಂದು ಯಾಕೋ ಕೋಪ ಬರಲೇ ಇಲ್ಲ


Leave a Reply

Back To Top