ಶಾಲಿನಿ ಹುಬ್ಬಳ್ಳಿ-ಮೌನ ಬೇಲಿಯ ಮಾತು

ಕಾವ್ಯ ಸಂಗಾತಿ

ಮೌನ ಬೇಲಿಯ ಮಾತು+

ಶಾಲಿನಿ ಹುಬ್ಬಳ್ಳಿ

ಹಾದಿಯುದ್ದಕು ನೆಟ್ಟ ನೋಟವಿತ್ತು
ಬಿಸಿಲು ಬೆಳದಿಂಗಳಾಗಿ ನೆರಳ ಹರಡಿತ್ತು
ಕಾರ್ತೀಕ ಮಾಸದ ದೀಪಗಳ ಸಾಲಿನ
ಸುತ್ತಲು ಭರವಸೆಯೊಂದು ಹರಡಿತ್ತು,

ಒಪ್ಪ ಓರಣಗಳೇ ಬೆಪ್ಪಾದಂತೆ
ಮತ್ತೆ ಮತ್ತೆ ಒಪ್ಪುವಂತೆ ಕಾಣುವ
ಮುಖದ ಮಂದಹಾಸ,
ಮುಂಗುರುಳ ಪುಲಕವದು
ನಿಲ್ಲದು ಲವಲೇಶ, ಜೊತೆಗೆ
ತಿದ್ದಿ ತೀಡಿದರು ದಯೆ ತೋರದೆ
ಕಾಡುವ ಉಟ್ಟ ಸೀರೆಯ ನೆರಿಗೆಗಳು,

ಸಮಯದ ಸಲಿಗೆಗೆ ಸುಧೀರ್ಘ
ಗಳಿಗೆಗಳು ಸಿಕ್ಕರು ಸಿಗದೆ
ಒಂದು ಒಂಬತ್ತಾದಂತೆ
ತಪ್ಪಿದ ಲೆಕ್ಕದ ಎಣಿಕೆಗಳು,

ಹರಕೆ ಹಾರೈಗಳೆಲ್ಲ ಬರಿ ಯಾತನೆಗಳು,
ಕಾಯುವ ಗಳಿಗೆಗಳ‌‌ ಮಂಥನಕೆ
ಸಿಗಲೊಲ್ಲದ ನವನೀತ ಬಯಕೆಗಳು,

ಗಾಳಿಯ ಕಂಪನಕು ಮರೆತ
ಹೂ ಅರಳದೆ ನಿಂತಂತಿದೆ,
ಪಾತರಗಿತ್ತಿಯ ಬಣ್ಣದ ಚುಕ್ಕಿಗಳು
ಜಗ್ಗದ ಬಲೆಯೊಳು ಮಸುಕಾಗಿದೆ,

ದಿನದ ಗಳಿಗೆಯೆಲ್ಲ
ಶೃತಿಲಯಗಳದ್ದೆ ತಯಾರಿ,
ಹಾಡಲೇಬೇಕೆಂಬ ಹಾಡು
ಹಾಡದೆ ಉಳಿದಿದೆ,
ಭರವಸೆಯು ಬೆಳದಿಂಗಳ ಮೋಡದಲಿ
ಮರೆತು ನಿಂತಂತಿದೆ,

ಬಂದು ಹೋದವನ ದಾರಿ
ಮತ್ತೆ ಮತ್ತೆ ಕಣ್ಣಿಗಿಂಬಾಗುವವರೆಗು
ಕಾಣುವಂತೆ, ಬಾಗಿದ ಬೆನ್ನಿಗೆ
ನೋವಿನ ಕುಣಿಕೆ ಬಿಗಿದಂತೆ,

ಮನದ ಮುಂದಿನ ಹೊಸ್ತಿಲ ಬಳಿ
ಅವನ ಮೆಲು ಹೆಜ್ಜೆಯ ಸಪ್ಪಳ…


Leave a Reply

Back To Top