ಹರಿದಾಸ ಪರಂಪರೆಯ ಕನಕದಾಸರು
ಪುಷ್ಪ ಮುರಗೋಡ
ಪುಣ್ಯಭೂಮಿ ಕರ್ನಾಟಕದಲ್ಲಿ ಅನೇಕಾನೇಕ ಮಹಾನುಭಾವರು ಜನಿಸಿ ತಮ್ಮ ಲೋಕೋತರ ನಡೆ-ನುಡಿಗಳಿಂದ ಮರ್ತ್ಯಕ್ಕೆ ಮಾರ್ಗದರ್ಶನ ನೀಡಿದ್ದಾರೆ.ಅಂತಹ ಅಮೃತ ಶಕ್ತಿಗಳ, ಜ್ಯೋತಿರ್ಮಾಲೆಯಲ್ಲಿ, ಚಿರಸ್ತಾಯಿಯಾಗಿ ಪ್ರಜ್ವಲಿಸುತ್ತಿರುವ ಜ್ಯೋತಿ ಕನಕದಾಸರು .ಹಾವೇರಿ ಜಿಲ್ಲೆಯ ಬಾಡ ಗ್ರಾಮದವರು. ಭಗವತ್ ಸಾಕ್ಷಾತ್ಕಾರದಿಂದ ಸಂತೃಪ್ತರಾದ ಭಕ್ತವತ್ಸಲರು. ಸಮಾಜದ ಓರೆ ಕೋರೆಗಳನ್ನು ತಮ್ಮ ಕೀರ್ತನೆಗಳಿಂದ ನುಡಿಮುತ್ತುಗಳಿಂದ ಕಾವ್ಯಗಳಿಂದ ತಿದ್ದಿದವರು .ನಾವು ಬಸವೇಶ್ವರ, ಪುರಂದರದಾಸ, ಕನಕದಾಸ, ಮುಂತಾದ ಭಕ್ತಿ ಭಂಡಾರಿಗಳ ಜೀವನವನ್ನು ಅವಲೋಕಿಸಿದಾಗ ಅವರು ಮೊದಲು ತಮ್ಮ ಅಂತರಂಗದೊಡನೆ ಹೋರಾಡಿ ಆನಂತರ ಲೋಕದ ಲೋಪದೋಷಗಳೊಡನೆ ಹೋರಾಡಲು ಸಿದ್ದರಾದುದನ್ನು ಅರಿಯುತ್ತೇವೆ .
ಜನತೆಯ ಅಹಂಕಾರ, ಡಾಂಬಿಕತನ, ಭಕ್ತಿ ಶೂನ್ಯತೆ ,ಭೋಗ ಪ್ರವೃತ್ತಿ, ಮುಂತಾದವುಗಳನ್ನು ಕಟುವಾಗಿ ವಿಡಂಬನೆ ಮಾಡಿದ್ದಾರೆ. ಭಕ್ತಿ ನಿಷ್ಠೆಗಳಿಲ್ಲದೆ ಹೊರಗಿನ ಮಡಿಗೆ, ಆಚಾರಕ್ಕೆ ,ಪ್ರಾಧಾನ್ಯ ಕೊಡುವ ಕಪಟಿಗಳನ್ನು ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಟೀಕಿಸಿದ್ದಾರೆ. “ನೇಮವಿಲ್ಲದ ಹೋಮ ಇನ್ನೇತಕೆ; ರಾಮ ನಾಮವು ಇರದ ಮಂತ್ರವೇತಕೆ? ಎಂದು “ಜಪವ ಮಾಡಿದರೇನು ತಪವ ಮಾಡಿದರೇನು “ಕಪಟ ಗುಣ ವಿಪರೀತ ಕಲುಷವಿದ್ದವರು ,ಎಂದು ನುಡಿದು ಅಂತರಂಗ ಶುದ್ದಿಯನ್ನು ಒತ್ತಿ ಹೇಳಿದ್ದಾರೆ .”ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಮತ್ತು ಹಿಟ್ಟಿಗಾಗಿ “ಎಂಬ ಕೀರ್ತನೆ ಬಹಳ ಪ್ರಸಿದ್ಧವಾಗಿದೆ. ಕುಲದ ಹಮ್ಮಿನಿಂದ ಬೀಗುವವರನ್ನು ಕಂಡು ಕನಕದಾಸರು “ಕುಲಕುಲ ವೆನ್ನುತಿಹರು ;ಕುಲವಾವುದು ಸತ್ಯ ಸುಖವುಳ್ಳ ಮನುಜರಿಗೆ? ಕುಲ ಮುಖ್ಯವಲ್ಲ ,ಗುಣ ಮುಖ್ಯ, ಎಂಬುದನ್ನು ಹೇಳುತ್ತಾ “ಆತ್ಮ ಯಾವ ಕುಲ ಜೀವ ಯಾವ ಕುಲ! ತತ್ವ ಪಂಚೇಂದ್ರಿಯ ಕುಲವಾವುದು! ಆತ್ಮಾಂತರಾ ತ್ಮ ನೆಲೆಯಾದಿ ಕೇಶವ ಪ್ರೀತನಾದ ಮೇಲೆ ಯಾತರ ಕುಲವೋ ಆತ ನೊಲಿದ ಮೇಲೆ ಯಾತರ ಕುಲವಯ್ಯ! ಎಂದು ಸಾರಿದರು. ಮಾನವ ಕುಲದ ಒಳಿತಿಗಾಗಿ ತಂಬೂರಿ ಹಿಡಿದು ಮನೆ ಮನೆಯ ಬಾಗಿಲಿಗೆ ಹೋಗಿ ,”ಮುತ್ತು ಬಂದಿದೆ ಕೇರಿಗೆ” ಎಂದು ಹಾಡುತ್ತಾ, ನುಡಿಮುತ್ತುಗಳನ್ನು ಬಿತ್ತರಿಸಿದರು. ಭಕ್ತಿ ,ಜ್ಞಾನ ,ವೈರಾಗ್ಯ ,ಶೀಲ, ಮೊದಲಾದವನ್ನು ಬೋಧಿಸುವ ಅವರ ಹಾಡುಗಳಲ್ಲಿ ಅನುಕಂಪವಿದೆ. ಲೋಕದ ಹಿತ ಚಿಂತನೆ ಇದೆ .ಸರ್ವೋದಯ ದೃಷ್ಟಿ ಇದೆ. ಕವಿ ಶ್ರೇಷ್ಠರಾದ ಕನಕದಾಸರು ನಳ ಚರಿತ್ರೆ ,ಮೋಹನ ತರಂಗಿಣಿ, ಹರಿಭಕ್ತಿಸಾರ, ರಾಮ ಧ್ಯಾನ ಚರಿತೆ, ರಚಿಸಿದರು.” ಏನೂ ಇಲ್ಲದ ಎರಡು ದಿನದ ಸಂಸಾರ “ಜ್ಞಾನದಲ್ಲಿ ದಾನ ಧರ್ಮವ ಮಾಡಿರಯ್ಯ” ಎಂದು ಬೋಧಿಸಿದ್ದಾರೆ .”ಆರು ಹಿತವರು” ಎಂದು ನಂಬಬೇಡ “ಯಾರಿಗೆ ಯಾರಿಲ್ಲ ಆಪತ್ತು ಬಂದೊದಗಿದೊಡೆ ಭಗವಂತನೊಬ್ಬನೇ ನಮಗೆ ಆಪ್ತ” ಅವನಲ್ಲಿ ತುಂಬು ನಂಬಿಕೆಯನ್ನು ಇಡಬೇಕು. ಎನ್ನುವುದು ಕನಕದಾಸರ ಆಶಯವಾಗಿತ್ತು .”ಆವ ಬಲವಿದ್ದರೇನು, ದೈವ ಬಲವಿಲ್ಲದವಗೆ ,”ಸಜ್ಜನರ ಸಂಗಕ್ಕೆ ಅವರು ಬಹಳ ಮಹತ್ವ ನೀಡಿದ್ದಾರೆ. ಅಜ್ಞಾನಿಗಳ ಕೂಡ ಅಧಿಕ ಸ್ನೇಹಕ್ಕಿಂತ, ಸುಜ್ಞಾನಿಗಳ ಕೂಡ ಜಗಳವೇ ಲೇಸು ,ಎಂದು ಹೇಳುತ್ತಾ ಸತ್ಪುರುಷರ ಸಂಘದ ಮಹಿಮೆಯನ್ನು ತಿಳಿಸಿದ್ದಾರೆ.
“ತನು ನಿನ್ನದು ಜೀವನ ನಿನ್ನದು” “ತಲ್ಲಣಿಸದಿರು ಕಂಡ್ಯ ತಾಳು ಮನವೇ”” ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ” ” ನನ್ನಿಂದ ನಾನೇ ಜನಿಸಿ ಬಂದೆನೆ ದೇವ ” “ಬಾಗಿಲನು ತೆರೆದು ಸೇವೆಯನ್ನು ಕೊಡುಹರಿಯೇ” ಎಂಬ ಸಾರ್ಥಕ ರಚನೆಗಳಲ್ಲಿ ವ್ಯಕ್ತವಾಗುವ ಸರ್ವ ಸಮರ್ಪಣೆ, ಅನನ್ಯತಾ ಮನೋಭಾವ, ದೇವ ಶ್ರದ್ಧೆ ,
ಸೂಕ್ಷ್ಮ ಚಿಂತನೆಗಳು, ಕನಕದಾಸರನ್ನು ಮಾನವೀಯತೆಯ, ಮಟ್ಟವನ್ನು ಮೀರಿ ದೇವತ್ವದೊಳಗೆ ಬೆಳೆಸಿವೆ.
“ಬಟ್ಟೆ ನೀರೊಳಗೆ ಅದ್ದಿ ಒಣಗಿಸಿ ಇಟ್ಟುಕೊಂಡರೆ ಅದು ಮಡಿಯಲ್ಲ ಹೊಟ್ಟೆಯೊಳಗಿನ ಕಾಮ ಕ್ರೋಧಾದಿಗಳನ್ನು ಬಿಟ್ಟು ನಡೆದರೆ ಅದು ಮಡಿ “ಎಂದು ಹೇಳಿದ್ದಾರೆ. ವ್ಯಾಸರಾಯರ ಶಿಷ್ಯರಾದ ಕನಕದಾಸರು.
ಕನಕದಾಸ ಜಯಂತಿಯ ಶುಭಾಶಯಗಳು.