ಹಮೀದಾ ಬೇಗಂ ದೇಸಾಯಿ ಕವಿತೆ-ಬಣ್ಣದ ಬದುಕಿನಲಿ

ಕಾವ್ಯ ಸಂಗಾತಿ

ಬಣ್ಣದ ಬದುಕಿನಲಿ

ಹಮೀದಾ ಬೇಗಂ ದೇಸಾಯಿ

ಬದುಕಿನಲ ಬಣ್ಣವಿದೆಯೇ
ಗೋಚರವೇ..ಅಗೋಚರವೇ..

ತಾಯ ಗರ್ಭದಲಿ ಕಂಡದ್ದು
ಸುರಕ್ಷೆಯ ಮಂದ ಕೃಷ್ಣ ಬಣ್ಣ
ಹುಟ್ಟಿ ಕಣ್ತೆರೆದಾಗ ನೋಡಿದ್ದು
ಸುತ್ತ ಮುತ್ತಲ ವಿವಿಧ ಬಣ್ಣ…
ಬೆಳೆದಂತೆ ಸೃಷ್ಟಿಯ ಸೊಬಗ ಬಣ್ಣ
ಬದುಕಿನಲಿ ಮೂಡಿತ್ತು ಮಳೆಬಿಲ್ಲ ಬಣ್ಣ..
ಸ್ನೇಹದಿ ನಂಬುಗೆಯ ಮಲ್ಲಿಗೆ ಬಣ್ಣ
ಒಲವಿನೊಸಗೆಯಲಿ ನಕ್ಕ ಕೆಂಗುಲಾಬಿ ಬಣ್ಣ…
ನಯವಂಚಕರ ಇಬ್ಬಗೆಯ ಬಣ್ಣ
ಕಾಲೆಳಯುವವರ ಕಾಡಿಗೆ ಬಣ್ಣ…

ಹೊಗಳುಭಟ್ಟರ ಪೊಳ್ಳು ನುಡಿಯ ಬಣ್ಣ
ದುಡಿವ ಕೈಗೆ ಸವೆದು ಹರಿದ ನೋಟಿನ ಬಣ್ಣ..
ಉಪಕೃತರ ಮರೆತವರ ಕಪ್ಪು ಹೊಗೆಬಣ್ಣ
ಜಂಭದಲಿ ತೇಲುವವರ ಹುಸಿ ಬಣ್ಣ
ಇನ್ನೆಷ್ಟು ಬೇಕು ಬದುಕಿನಲಿ ಬಣ್ಣ…?
ಸಾಕು ಬದುಕಲು ತೃಪ್ತಿ ಶಾಂತಿಯ ಶುಭ್ರ ಶ್ವೇತ ಬಣ್ಣ…


Leave a Reply

Back To Top