ರೂಪ ಮಂಜುನಾಥ-ಲಲಿತ ಪ್ರಬಂಧ.ವಾಟ್(ಸೊಪ್ಪು) ಕಂತೆ ಪುರಾಣ……

ಪ್ರಬಂಧ ಸಂಗಾತಿ

ವಾಟ್(ಸೊಪ್ಪು) ಕಂತೆ ಪುರಾಣ

ರೂಪ ಮಂಜುನಾಥ

ಅರೇ… ಯಾಕ್ ಕೇಳ್ತೀರಿ? ಇತ್ತೀಚೆಗೆ ಈ ವಾಟ್ಸಪ್ಪಿನ ಸಹವಾಸಕ್ಕೆ ಬಿದ್ದು ಈ ಮಸೊಪ್ಪು, ಸೊಪ್ಪಿನುಳಿ, ಸೊಪ್ಪಿನ ಬಸ್ಸಾರು, ಎಲ್ಲಾ ಮಾಡೋದ್ ಹೆಚ್ಚುಕಮ್ಮಿ ಬಿಟ್ಟೇಹೋಗಿದೆ. ಹೆಂಗಾಗುತ್ತೆ ನೀವಾದ್ರೂ ಹೇಳಿ, ೪-೫ ಕಂತೆ ಸೊಪ್ಪು ತಂದು ಸೋಸಿ,೩-೪ ಸರಿ ನೀರು ಬದಲಾಯ್ಸಿ ತೊಳ್ದೂ, ಸೊಪ್ಪೂ, ಈರುಳ್ಳಿ,ಹೆಚ್ಚೀ, ಬೆಳ್ಳುಳ್ಳಿ ಸುಲ್ದೂ ,ಖಾರ ರುಬ್ಬೀ, ಅಯ್ಯೋ……ಈ ರೇಜಿಗೇಗೆ ಒಂದು ಒಪ್ಪೊತ್ತೇ ಕಳ್ದೋಗುತ್ತೆ.ಇದ್ರ ಸಂದೀಲಿ,ಅಷ್ಟಕ್ಕೇ ಸುಮ್ನಿರ್ತಾರ್ಯೋ,
ಸೊಪ್ಪಿನ್ ಸಾರಿಗೆ ರಾಗಿಮುದ್ದೇ ಸೂಪರು ಅಂತ ಉಸುರೋರು ಬೇರೆ. ಸೈಕಲ್ ಗ್ಯಾಪಲ್ಲಿ ಬಾಳ್ಕದ ಮೆಣಸಿನ ಕಾಯಿ, ಸಂಡಿಗೇ ಹಪ್ಪಳ ಇದ್ರೆ ಸೊಪ್ಪಿನ್ ಸಾರ್ ಜೊತೆ ಊಟ ಮಾಡೋಕೆ ಚೆನ್ನಾ….. ಅಂತ ಮೆತ್ಮೆತ್ಗೆ ಲಿಸ್ಟು ಬೆಳೀತ್ಲೇ ಹೋಗೋದೇ. ಯಾವಾಳಿಗ್ಬೇಕು ಈ ರೇಜ್ಗೇಂತಾ!!!!ಹೌದಪ್ಪಾ ಅದೇನೋ ಗೊತ್ತಿರೋ ವಿಚಾರ್ವೇ! ಸೊಪ್ಪು ದೇಹದ ಆರೋಗ್ಯಕ್ಕೆ ಒಳ್ಳೇದೂಂತ. ಆದ್ರೆ ಮನಸ್ಸನ್ನ ಆಯಸ್ಕಾಂತದಂತೆ ಸೆಳೆಯೋ ಈ ವಾಟ್ಸಪ್ ಮುಂದೆ, ಈ ಟೈಮ್ ಕಿಲ್ಲಿಂಗ್ ಸೊಪ್ಪಿನ್ ಸಾರಿನ ರಾಮಾಯ್ಣಾ ಯಾರಿಗ್ ಬೇಕ್ ಹೇಳಿ? ಅದನ್ ಬ್ಯಾಲೆನ್ಸ್ ಮಾಡಕೇಂತ್ಲೇ, ಪಾಲಕ್ ಸೊಪ್ಪಿನ ಪೌಷ್ಟಿಕಾಂಶದ ನಾಲ್ಕ್ ಪಟ್ಟಿರೋ ಆರ್ಲಿಕ್ಸುನ್ನ ಒಂದ್ ಲೋಟ ಮಾಡ್ಕೊಂಡ್ ಕುಡುದ್ರಾಯ್ತಪ್ಪಾ! ನಮ್ ಟೀವೀಲಿ ಈ ವಿಚಾರ ಆರ್ಲಿಕ್ಸ್ ಕಂಪನಿಯೋರು ಆಗಾಗ ಬಂದು ಹೇಳ್ತಲೇ ಇರ್ತಾರೆ. ಪಾಪ, ಅವ್ರು ನಮ್ಮಂಥ ವಾಟ್ಸಪ್ ಫ್ರೀಕುಗಳಿಗೋಸ್ಕರವೇ ಏನೇನೋ ರಿಸರ್ಚ್ಗಳಲ್ಲಿ ವರ್ಷಾನುಗಟ್ಟಲೆ ಮುಳುಗಿ, ನಮ್ಮ ಕಾಳಜಿಯ ಸಲುವಾಗಿ ಹೊಸಹೊಸ ಆವಿಷ್ಕಾರ ಮಾಡ್ತಾ ಇರ್ತಾರೆ. ಪ್ರಯೋಜನ ಪಡೆದುಕೊಳ್ದೆ ಹೋದ್ರೆ ನಮ್ಗೇ ತುಂಬಾ ಲಾಸು ಕಣ್ರೀ!ಅವರಾದ್ರೂ, ಅಂದ್ರೆ ಈ ಆರ್ಲಿಕ್ಸ್ ಕಂಪನಿಯೋರೂ,ಸಗಟು ವ್ಯಾಪಾರದೋರು,ಚಿಲ್ಲರೆ ವ್ಯಾಪಾರದೋರೂ, ಈ ಆರ್ಲಿಕ್ಸುನ್ನ ಜನಸಾಮಾನ್ಯರು ಯಾರೂ ಕುಡೀದೋದ್ರೆ ಬದ್ಕೋದ್ ಹೆಂಗ್ರೀ? ಹಂಗ್ರೀ ಆದ್ರೆ ಜಸ್ಟ್ ಒಂದ್ ಲೋಟ ಆರ್ಲಿಕ್ಸ್ ಕುಡೀರೀ.ಅದೆಂತೆಂತದೋ ಮುಂಚೆ ಎಲ್ಲ ಕೇಳ್ದೇ ಇರೋ, ಪೌಷ್ಟಿಕಾಂಶಗಳೂ, ಖನಿಜಗಳೂ,ಪ್ರೋಟೀನು, ವಿಟಮಿನ್ ಎ ಬಿ ಸಿ ಡಿ….ಏಟೇಟೋ ನಂಬರುಗಳ ಸಮೇತ ಎಲ್ಲಾವನ್ನೂ ಒಂದು ಕಪ್ಪಿನಲ್ಲೇ ಅಡಗಿಸಿರೋ, ನೀವು ಕುಡಿದ ಕೂಡಲೇ ಕಬ್ಬಿಣದ ರಾಡನ್ನೂ ಲಟಕ್ ಅಂತ ಬಗ್ಗಿಸಿ, ಎಲ್ಲಿಂದೆಲ್ಲಿಗಾದರೂ ಛಂಗ್ ಅಂತ ಎಗರುವ, ೨೪೭ ಲವಲವಿಕೆಯಿಂದ ಇದ್ದು, ಹುರುಪು, ಉತ್ಸಾಹದಲ್ಲಿ ಹಾರಾಡುವಂಥ ಗೊಪ್ಪ ಪೇಯ ಆರ್ಲಿಕ್ಸು! ಈ ಸೋಪ್ಪಿನ್ ಕಂತೆ ಸಹ್ವಾಸ್ದಲ್ಲಿ ಕೂತ್ರೆ ಕಂತೆ ಕಂತೆ ವಾಟ್ಸಪ್ ಮೆಸೇಜುಗಳ ಸಂತೆ ಆಗೋಗಿ ಆಮೇಲೆ ಅದೆಲ್ಲಾ ಮ್ಯಾನೇಜ್ ಮಾಡೋದು ಅದೆಷ್ಟು ಕಷ್ಟಾಂತೀರೀ? ಅದೆಲ್ಲಾ ಅನುಭವಿಸಿದೋರ್ಗೇ ಗೊತ್ತು! ಈ ವಾಟ್ಸಪ್ ತೀಡ್ಕೋತಾ ಕೂತ್ರೆ ಹೊತ್ ಹೋಗಿದ್ದೇ ಗೊತ್ತಾಗೋದಿಲ್ಲ. ನಿಜ ಕಣ್ರೀ, ಒಂದ್ ಕಾಲ್ದಲ್ಲಿ ವಯಸ್ಸಾದೋರು,”ಅಯ್ಯೋ, ಏನ್ಮಾಡೋದು, ಮನೇಲಿ ಯಾರೂ ಏನೂ ಕೆಲ್ಸ ಹೇಳೋಲ್ಲ. ಮಾಡಕ್ಕೂ ಬಿಡೋಲ್ಲ. ಹೊತ್ ಕಳಿಯೋದ್ ಹೆಂಗೇ”, ಅಂತ ಅನ್ನೋರು.ಈಗ್ ಅವರ್ ಕೈಗೆ ಒಂದು ಆಂಡ್ರಾಯ್ಡ್ ಫೋನು ಕೊಟ್ಟು ವಾಟ್ಸಪ್ ಹಾಕಿ, ಒಂದ್ ಏಳೆಂಟು ಗ್ರೂಪಿಗೆ ಮೆಂಬರ್ಗಳ್ನ ಮಾಡಿ ನೋಡಿ, ಅವರಿಗೆ ಅವರ ವಯಸ್ಸು, ಸುಸ್ತು, ಮೈಕೈ ನೋವು, ಸೊಂಟ್ ನೋವು,ಅಯ್ಯೋ ವಯಸ್ಸಾಯ್ತು, ಅಯ್ಯೋ ಯಾರೂ ನಮ್ನ ಕೇರ್ ಮಾಡಲ್ಲಾ, ಇನ್ನೂ ಎಷ್ಟ್ ದಿನ ಈ ರೀತಿ ವೇಸ್ಟಾಗಿ ಬದ್ಕಿರೋದೂ, ನಮಗೇನೂ ಯಾರೂ ವಿಷಯ ತಿಳಿಸೋಲ್ಲ. ನಮಗೆ ನಮ್ ಸುತ್ತ ಏನ್ ನಡೀತಿದೇಂತ ಗೊತ್ತಾಗದೂ ಇಲ್ಲ, ಯಾರೂ ಹೇಳೋದೂ ಇಲ್ಲ. ಯಾರ್ಗೂ ನಮ್ ಜೊತೆ ಮಾತ್ ಬೇಕಿಲ್ಲಾ, ಇನ್ನೊಂದೂ ಮತ್ತೊಂದೂ ವಿಚಾರವಾಗಿ ಕಂಪ್ಲೇಂಟುಗಳೆಲ್ಲವೂ ಇದ್ಕಿದಂಗೇ ರೆಡ್ಯೂಸ್ ಆಗಿ ಅಜ್ಜಾಅಜ್ಜೀಸೆಲ್ಲಾ ವಾಟ್ಸೊಪ್ ತೀಡ್ಕೊಂತಾ ತಾವೇ ಸ್ವತಃ ಎಲ್ಲಾ ವಿಚಾರದಲ್ಲೂ ಮುಳುಗಿ ಟೈಮ್ ಪಾಸ್ ಮಾಡೇ ಬಿಡ್ತಾರೆ. ಯಾರಾದ್ರೂ ಸೈ, ವಾಟ್ಸಪ್ ನೋಡ್ತಾ ಕುಂತ್ರೆ ಇರೋ ಹೊತ್ತು ಸಾಲಲ್ಲ ಅಂತಾರೇ ವಿನಹ ಹೊತ್ತು ಕಳಿಯೋ ಕಷ್ಟಾನೇ ಯಾರಿಗೂ ಇಲ್ಲ. ಈ ವಾಟ್ಸಪ್ ಗ್ರೂಪುಗಳ ಹುಟ್ಟು, ನಾಮಕರಣದ ವಿಚಾರ ಒಳ್ಳೆ ಇಂಟರೆಸ್ಟಿಂಗಾಗಿರುತ್ತೆ ಕಣ್ರೀ. ಈಗಂತೂ ಯಾರೇ ಆಗ್ಲೀ ಅಟ್ಲೀಸ್ಟು ಒಂದಿಪ್ಪತು ಗ್ರೂಪುಗಳುಗಾದ್ರೂ ಮೆಂಬರುಗಳಾಗಿರ್ತಾರೆ. ಕನಿಷ್ಠ ಒಂದೆರಡಕ್ಕಾದ್ರೂ ಅಡ್ಮಿನ್ಗಳಾಗಿರ್ತಾರೆ. ಹೂನಪ್ಪಾ, ಅಡ್ಮಿನ್ ಗಳು ಅಂದ್ರೇನು ಸುಮ್ಮನೆಯೇ? ಅದೊಂದು ಘನತೆ ಹೊಂದಿದ, 247*365 ಗ್ರೂಪಿನ ಸಂದೇಶಗಳನ್ನೂ, ಚಟುವಟಿಕೆಗಳನ್ನು ಗಮನಿಸಬೇಕಾದ ನಿಯಂತ್ರಿಸಬಹುದಾದ ಗುರುತರ ಜವಾಬ್ದಾರಿ ಇರುವ ಸಮಾಚಾರ!ಒಂದು ಪ್ರೆಸ್ಟೀಜಿನ ಪ್ರಶ್ನೆ! ಯಾವಾಗ ಬೇಕಾದ್ರೂ ಗುಂಪಿನ ಬಾಗ್ಲಾ ಹಾಕ್ಬೋದು, ತೆಗೀಬೋದೂ, ಯಾರ್ನ ಬೇಕಾದ್ರೂ ಗುಂಪಿಗೆ ಆಡ್ ಮಾಡ್ಬೋದೂ,ಗುಂಪಿಂದ್ ಆಚಿಗಾಕ್ಬೋದೂ, ಏನ್ ಕಾನೂನು ಬೇಕಾದ್ರೂ ಜಾರೀಗ್ ತರೋ ಕೆಪಾಸಿಟಿ ಇರೋದೇ ಈ ಅಡ್ಮಿನ್ಗಳಿಗೆ.ಆಗಾಗ ಸ್ಟಾಂಡಿಂಗ್ ಇನ್‌ಸ್‌ಟ್ರಕ್ಷನ್ ಕೊಡ್ತಾ ಗತ್ತು ಗೈರತ್ತಲಿ ಗ್ರೂಪ್ ನ ನಡ್ಸೋ ಈ ಅಡ್ಮಿನ್ ಗಳ ಸಡಗರ ನೋಡೋಕೇ ಚೆನ್ನ. ಇನ್ನ ಈ ಅಡ್ಮಿನ್ ಗಳು ಗ್ರೂಪುಗಳಿನ್ನ ಸೃಷ್ಟಿಸಿ ನಾಮಕರಣ ಮಾಡೋ ಕ್ರಿಯೇಟಿವಿಟಿ ಇದೆಯಲ್ಲಾ , ಆ ಕಲೆಗೆ ನನ್ನ ಜೋಹಾರು!
ಬೆಳ್ಳಂಬೆಳಗ್ಗೆ ವಾಕ್ ಮಾಡೋ ಚಟ,ಹಠ ಇರೋರ್ದು ಒಂದು ಗ್ರೂಪು ಅದ್ರ ಹೆಸ್ರು ಫಿಟ್ನೆಸ್ ಫ್ರೀಕ್ಸ್, ಮಾರ್ನಿಂಗ್ ಮಂದಿ, ಅರ್ಲಿ ಬರ್ಡ್ಸ್.
ಕಾಫಿ ಟೀ ಪೇಯ ಪ್ರಿಯರದ್ದೇ ಒಂದು ಗ್ರೂಪು.ಕಾಟೀ ಕ್ಯಾಟ್ಸ್,ಕಾಫೀ ಕಲಿಗಳು, ಪೇಯಪ್ರಿಯರು, ಟೀ ಟೈಮ್ ಫ್ರೆಂಡ್ಸ್ ಮುಂತಾದ ಹೆಸರುಗಳ ಗುಂಪಿನ ಸದಸ್ಯರು. ಯಾವ ದರ್ಶಿನಿಯಲ್ಲಿ ಕಾಫಿ ಚೆನ್ನಾಗಿರತ್ತೆ, ಯಾವ ಹೋಟಲಿನಲ್ಲಿ ಟೀ ಸೂಪರು. ಇದೇ ಈ ಗುಂಪಿನ ಮುಖ್ಯ ಟಾಪಿಕ್ಕುಗಳು.
ಇನ್ನಂತೂ ಈ ಎಲ್ಲೆಲ್ಲೂ ಫುಡೀಗಳ ಗ್ರೂಪುಗಳು ವಿಪರೀತವಾಗಿಬಿಟ್ಟಿವೆ.ರುಚಿರುಚಿಯಾದ ವೆರೈಟಿ ತಿಂಡಿಗಳನ್ನ ಹುಡುಕುತ್ತಾ ತಿರುಗುವವರು. ವಾರಕ್ಕೆ ಎರಡು ಮೂರು ಬಾರಿಯಾದರೂ ಒಂದು ಹೊಸ ಜಾಗ ಹುಡುಕಿ ಹೊಟ್ಟೆ ಬಿರಿಯೆ ತಿಂದು, ಒಂದಷ್ಟು ತಿಂಡಿತಿನಿಸುಗಳ ಚಿತ್ರಗಳ್ನ ಜೊಲ್ಲುಸೋರುವಂತೆ ಪೋಸ್ಟ್ ಮಾಡಿ, ಒಂದಷ್ಟು ಜನಕ್ಕೆ ಹೊಟ್ಟೆ ಉರಿಸಿದ ಹೊರ್ತು, ಅವ್ರಿಗೆ ಆ ಹೋಟ್ಲಲ್ಲಿ ತಿಂದಿದ್ದು ಅರಗೋಲ್ಲ. ಇವರೊಂಥರಾ ಈ ಹೋಟಲಿನ ಪ್ರೊಮೋಟ್ ಮಾಡೋ ಫ್ರೀ ಆಡ್ ಮಂದಿ..ತಿಂಡಿಪೋತರು,ಹೊಟ್ಟೆಬಾಕರು, ಭೋಜನಪ್ರಿಯರು, ಟೇಸ್ಟ್ ಸೀಕರ್ಸ್, “ಈಟ್,ಜಸ್ಟ್ ಈಟ್”,ಪುಡ್ಡೀ ಬಡ್ಡೀಸ್, ಇಂಥ ಏನೋ ಹೆಸರುಗಳು.ಇವರುಗಳ ಗ್ರೂಪಿನಲ್ಲಿ ಬೆಳಗಾದ್ರೆ ಸಾಕು, ನೂರಾರು ಬಣ್ಣಬಣ್ಣದ ತಿಂಡಿತಿನಿಸುಗಳ ಚಿತ್ರಗಳೇ ತುಂಬಿತುಳುಕುತ್ತಾ ಇರುತ್ತದೆ.
ಇನ್ನು ಮತ್ತೊಂದು ಗುಂಪು ಡಯಟ್ ಅಂಡ್ ಜಿಮ್‌ ನ ಗ್ರೂಪು. ಇಲ್ಲೇನಿದ್ದರೂ ಸಾಲಡ್, ಸೂಪು, ಪ್ರೋಟೀನೂ,ನಾನ್ ಇವತ್ ಇಷ್ಟು ಸ್ಪೀಡಲ್ಲಿ ಇಷ್ಟ್ ವರ್ಕೌಟ್ ಮಾಡ್ದೆ, ಇಷ್ಟ್ ವೇಟ್ ಲೂಸ್ ಮಾಡ್ದೆ, ಬರೀ ಇಂಥ ವಿಚಾರಗಳೇ.ಬೀ ಫಿಟ್, ಫಿಟ್ ಅಂಡ್ ಫೈನ್, ಬಜರಂಗಬಲಿ ಗ್ಯಾಂಗ್,ಗರಡಿ ಗಮ್ಮತ್ತು ಇಂಥ ಹೆಸರುಗಳಿನ ಗ್ರೂಪುಗಳು.
ಮನೆ ಮುಂದಿನ, ಹಿಂದಿನ, ಮೇಲಿನ ಕೈತೋಟಗಳ್ನ ಮಾಡಿಕೊಂಡಿರುವವರ ಗ್ರೂಪುಗಳು. ಇವತ್ತು ಈ ಕಾಯಿ ಬಿಡ್ತೂ, ಈ ಹಣ್ ಬಿಡ್ತೂ, ಇದ್ರ ಮೊಗ್ ಆಯ್ತೂ, ಯಾಕೋ ಒಣಗೋಯ್ತೂ, ನಿಮ್ ಮನೇಲಿ ಚಿಗ್ರುತಾ?ಈ ಹೂವಿನ ಗಿಡದ ಕಡ್ಡಿ ಸಿಗುತ್ತಾ? ನಮ್ ಮನೆ ಫ್ಲವರ್ ವಾಸಲ್ಲಿ ಜೋಡಿಸಿರೋದೆಲ್ವೂ ನಮ್ಮನೆ ಹಿತ್ತಲಿನದೇ,ಇಂಥ ಪಾಟ್ ತಂದ್ವಿ, ಇಂಥ ಪ್ಲಾನ್ಟರ್ ಇಟ್ವೀ, ಹೀಗೆ, ಒಂದೊಂದು ಗಿಡದ ಅಲಂಕಾರವನ್ನೂ, ಬದಲಾವಣೆಯನ್ನೂ ಗ್ರೂಪಿಗೆ ಹಾಕೀ, ತಮ್ಮ ಹಸಿರ ಸಿರಿಯನ್ನು ಹಿಗ್ಗಿನಿಂದ ಹಂಚಿಕೊಳ್ಳುವ ಗ್ರೂಪುಗಳು.ಹಸಿರೇ ಉಸಿರು,ಪ್ಲಾಂಟ್ ಲವರ್ಸ್, ಗೋ ಗ್ರೀನ್,ಸೇವ್ ಅರ್ಥ್, ಇಂಥ ಹೆಸರುಗಳ ಇಟ್ಕೊಂಡಿರ್ತಾರೆ.
ಸಕ್ಕರೆ ಫ್ಯಾಕ್ಟ್ರೀ ಓನರ್ಗಳ ಗ್ರೂಪುಗಳೂ ಹುಟ್ಟಿಕೊಂಡಿವೆ.ಅಲ್ಲೇನಿದ್ದರೂ, ಅವರುಗಳೇನಿದ್ದರೂ ಸಿಹಿ ವಿಷಯಗಳಿಂದ ಮೈಲಿ ದೂರ. ಏನಿದ್ದರೂ ಬರೀ ಖಾರದ ವಿಚಾರಗಳೇ ಹರಿದಾಡಿತ್ತಿರುತ್ತವೆ.ಇದೆಲ್ಲಾ ಸಾಲ್ದೂಂತ ಯಾರು ಎಲ್ಲಿ ಹೋಗಿ ಟ್ರೀಟ್ಮೆಂಟ್ ತಗೋತಿದಾರೆ, ಅದು ಎಷ್ಟು ಎಫೆಕ್ಟೀವಾಗಿ ಕೆಲ್ಸ ಮಾಡ್ತಿದೇ? ಎಲ್ಲಿ ಶುಗರ್ ಫ್ರೀ ಸಿಹಿತಿಂಡಿಗಳು ಸಿಕ್ಕುತ್ತೆ?ಇಂಥ ಸಂದೇಶಗಳೇ. ನೋ ಸ್ವೀಟ್, ಜಸ್ಟ್ ಹಾಟ್, ದಿ ಹಾಟ್ ಪೀಪಲ್,ಶುಗರ್ ಮ್ಯಾನುಫಾಕ್ಚರರ್ಸ್,ಇಂಥ ಹೆಸರುಗಳಿನ ವಾಟ್ಸಪ್ ಗುಂಪುಗಳು ಇವರದ್ದು.
ಇನ್ನು ಚಾರಣಿಗರಾದರೆ ಆ ಬೆಟ್ಯ, ಈ ಗುಡ್ಡ, ಅಲ್ಲಿನ ಕಾಡು ಇಲ್ಲಿನ ಮೇಡು ಅಂತ ಎಲ್ಲ ಕಡೆ ಬೈನಾಕುಲರ್ಗಳ್ನ ಹಾಕಿ ಹುಡುಕೀ ಹುಡುಕೀ ಅನ್ವೇಷಣೆಗೆ ಸಜ್ಜಾಗುವುದೂ ಇತರರನ್ನೂ ಹೊರಡ್ಸುವುದು ಈ ಅಡ್ವೆಂಚರ್ ಪೀಪಲ್, ಟ್ರೆಕ್ ಫ್ರೀಕ್ಸ್, ರಾಕ್ ರಾಕರ್ಸ್, ಹೀಗೇ……
ಸುಮ್ನೆ ಒಂದ್ನಾಲ್ಕು ಗ್ರೂಪುಗಳ ಉದಾಹರಣೆ ಕೊಟ್ಟಿದ್ದಾಯ್ತು.ಹಿಂಗೇ,ಒಂದೇ ರೀತಿಯಾದ ವ್ಯವಹಾರ ಮಾಡುವವರು, ಸಾಹಿತ್ಯಾಸಕ್ತರೂ, ಪುಸ್ತಕ ಪ್ರೇಮಿಗಳೂ, ಪೆಟ್ ಲವರ್ಸು,ಡೇಟ್ ಮೇಟ್ಸ್, ಹಾಡುಗಾರರೂ, ನೃತ್ಯ ಮಾಡುವವರೂ,ಪಾಕಶಾಸ್ತ್ರ ಪ್ರೇಮಿಗಳೂ,ಹರಿದಾಸರ ಭಕ್ತರು,ವಚನಪ್ರಿಯ ಶರಣರೂ,ಶಾಲಾ ಜೊತೆಗಾರರೂ,ಎಲ್ಲಿಗಾದರೂ ಪ್ರಯಾಣ ಮಾಡಿ ಬಂದರೆ, ಅಲ್ಲಿ ಸಿಕ್ಕ ಸಹಪ್ರಯಾಣಿಕರೂ,ಟ್ರೆಕ್ಕಿಂಗ್ ಗ್ರೂಪು,ಹೀಗೆ ಯಾವುದೇ ವಿಷಯವಾಗಿ ಸಮಾನಾಸಕ್ತರ ಗುಂಪುಗಳು ಹುಟ್ಟಿಕೊಂಡು ನಮಗೆ ಯಾರೂ ಜೊತೆ ಇಲ್ಲಾ, ನಮ್ಮ ಆಸಕ್ತಿಗಳಿಗೆ, ಭಾವನೆಗಳಿಗೆ ಬೆಲೆಯಿಲ್ಲಾ, ಎಂದು ಕೊರಗುವವರಿಗೆ ಈ ಗುಂಪುಗಳು ಒಂದು ರೀತಿಯಾದ ಆತ್ಮೀಯತೆ ಮೂಡಿಸಿ ತೃಪ್ತಿ ಕೊಡುತ್ತವೆ ಎಂಬುದೇನೋ ಸತ್ಯವೇ. ಈ ಗುಂಪುಗಳಿಂದ ನಮ್ಮ ದೇಶದವರಲ್ಲದೇ ವಿದೇಶದವರದ್ದೂ ಪರಿಚಯವಾಗಿ, ಪರಿಚಯ ಸ್ನೇಹವಾಗಿ, ಕೆಲವರ ಜೊತೆ ಅದೆಷ್ಟು ಆತ್ಮೀಯತೆ ಬೆಳೆಯುತ್ತದೆಯೆಂದರೆ,ಯಾವ ಜನ್ಮದ ಮೈತ್ರಿಯೋ ಏನೋ,ಪ್ರತ್ಯಕ್ಷ ಕಂಡಿಲ್ಲದಿದ್ದರೂ ಒಡಹುಟ್ಟಿದವರ ಜೊತೆ ಬೆಳೆಯುವ ಬಾಂಧವ್ಯಕ್ಕಿಂತಲೂ ಬಿಗಿಯಾಗಿ ಸ್ನೇಹ, ವಿಶ್ವಾಸ ಬೆಳೆದುಬಿಡುತ್ತದೆ. ಈ ಬಂಧುತ್ವ ಕ್ರಿಯೇಟ್ ಮಾಡುವ ಈ ವಾಟ್ಸಪ್ ಎಂಬ ನಮ್ಮಪ್ಪನನ್ನ ಎಷ್ಟು ಹೊಗಳಿದರೂ ಸಾಲದು.ಈ ರೀತಿ ಬಂಧ ಬೆಳೆಸಿಕೊಂಡು ಅವರುಗಳ ಜೊತೆ ಸ್ವಲ್ಪ ಸಮಯ ಕಳೆಯೋದ್ರಿಂದ ಒಂಟಿಯಾಗಿರುವೆ ಎನ್ನುವ ಭಾವನೆಯಲ್ಲಿ ಕೊರಗುವ ಎಷ್ಟೋ ಜನರಿಗಿಷ್ಟು ನೆಮ್ಮದಿಯಂತೂ ಗ್ಯಾರಂಟಿ!
ಈಗೀಗ ಕೆಲವಾರು ವಿಶೇಷ ಬಿಸಿನೆಸ್ ಗ್ರೂಪುಗಳೂ ಹುಟ್ಟಿಕೊಂಡು, ಯಾರಿಗೂ ಬಂಡವಾಳ ಬೇಡ,ವ್ಯವಹಾರ ಮಾಡಲು ಸ್ಥಳ ಬೇಡ,ದೈಹಿಕ ಶ್ರಮವಂತೂ ಬೇಡವೇ ಬೇಡ.ಮೆಸೇಜುಗಳನ್ನ ಈ ಕಡೆಯಿಂದಾಕಡೆಗೆ, ಆ ಕಡೆಯಿಂದೀಕಡೆಗೆ ಹಾಕುತ್ತಲೇ ಲಕ್ಷಾಂತರ, ಕೋಟ್ಯಾಂತರ ದುಡ್ಡು ಕಮಾಯಿಸುವವರಿಗೇನೂ ಕಮ್ಮಿ ಇಲ್ಲ.
ಇನ್ನು ಮಕ್ಕಳು ಮನೆಯಲ್ಲಿಲ್ಲದೆ, ಒಂಟಿತನ ಕಾಡುವ ರಿಟೈರ್ಡ್ ಆಗದ, ಆಗಿರುವ ದಂಪತಿಗಳಿಗೆ ಈ ವಾಟ್ಸಪ್ ಒಂದು ವರದಾನವಾಗಿದೆ.50+ ವಾಯೇಜರ್ಸ್ ಗ್ರೂಪ್, 60+ ವಾಯೇಜರ್ಸ್ ಗ್ರೂಪು ಹೀಗೆ ಅವರವರ ವಯೋಮಾನದವರನ್ನು ಜೊತೆ ಮಾಡಿಕೊಂಡು ಎಲ್ಲೆಲ್ಲಿಗೆ ಬೇಕೋ ಎಲ್ಲೆಡೆ ಸುತ್ತುವವರಿಗೀಗ ಬಲು ಹೆಚ್ಚಾಗಿದ್ದಾರೆ. ಅದೊಂಥರ ಸಲೀಸು ಕಣ್ರೀ. ಗಂಡನಿಷ್ಟವಾಗೋ ಜಾಗ ಹೆಂಡತಿಗೆ ಸರಿ ಕಾಣಲ್ಲ, ಹೆಂಡತಿಗಿಷ್ಟವಾಗೋ ಊರು ಗಂಡನಿಗ್ ಬೇಡ. ಸೋ…..ನಿನ್ ಪಾಡಿಗ್ ನೀನ್ ಹೋಗು, ನನ್ ಪಾಡಿಗ್ ನಾನ್ ಹೋಗ್ತೀನಿ.ಅಂದ್ಮೇಲೆ, ಯಾವ ಲಟಾಪಟಿಯೂ ಇಲ್ಲದಂತೆ ಜೀವನ ಸಾಗಿಸಬಹುದು.ಈ ವಾಟ್ಸಪ್ಪು ಬೇಕಾದ್ ಅನುಕೂಲ ಮಾಡಿಕೊಡ್ಬೇಕೂಂದ್ರೂ,,ಗಂಟು ಚೆನ್ನಾಗಿ ಇಟ್ಕೊಂಡ್ರೇನೇ ಮಾತ್ರ! ಬಿಟ್ಟಿಯಾಗ್ ಆಗುತ್ತೇಂತ ಅಂದ್ಕೊಂಡ್ರೆ ಅದು ನಮ್ ಬೆಪ್ತನ ಅಷ್ಟೇ!
ಈ ಸೆಲ್ಫೋನು ಬಂದಿದ್ದ ಹೊಸದರಲ್ಲಿ ಏನ್ ಇನ್ಕಮ್ಮಿಂಗಿಗೂ ಚಾರ್ಜು, ಔಟ್ ಗೋಯಿಂಗಿಗೂ ಚಾರ್ಚು ಸೆಕೆಂಡಿಗಿಷ್ಟು, ನಿಮಿಷಕಿಷ್ಟೂಂತ ಸಿಕ್ಕಾಪಟ್ಟೆ ಹಾಕೋರು. ಹಾಗಾಗಿ, ಆಗೆಲ್ಲಾ ಜನಸಾಮಾನ್ಯರು ಏನಾದ್ರೂ ಕಮಾಯಿ ಇದ್ರೆ ಮಾತ್ರವೇ ಯಾರಿಗಾದ್ರೂ ಫೋನು ಮಾಡ್ತಿದ್ದಿದ್ದು. ಆಮೇಲೆ ಸ್ವಲ್ಪ ದಿನಕ್ಕೆ ಇನ್ಕಮಿಂಗ್ ಚಾರ್ಜು ರದ್ದಾದಾಗ, ಮಿಸ್ ಕಾಲುಗಳು ಬರೋಕೆ ಶುರುವಾದವು.ಈಗೀಗಂತೂ ಈ ಹಾಳಾದ್ ಅನ್ಲಿಮಿಟೆಡ್ ಪ್ಯಾಕುಗಳು ಹಾಳೂಮೂಳೂಂತ ಆಫರ್ ಗಳು ಬಂದ್ ಮೇಲಂತೂ ಜನ ನೇರವಾಗಿ ಮಾತಾಡೋಕಿಂತ್ಲೂ ಫೋನಲ್ಲಿ ಮಾತಾಡೋದೇ ಹೆಚ್ಚಾಗೋಗ್ಬಿಟ್ಟಿದೆ. ಅನ್ಲಿಮಿಟೆಡ್ ಪ್ಯಾಕು ಹಾಕಿಸ್ಕೊಂಡು ಅದ್ ಮುಗ್ಯೋವರ್ಗೂ ಸಮಯ ಸಿಕ್ದಾಗೆಲ್ಲಾ ಯಾರಾಗಾದ್ರೂ ಸರಿ ಕಿವಿ ಕಚ್ಚೋದೇ ಹುಚ್ಚಾಗಿಬಿಟ್ಟಿದೆ.
ವಾಟ್ಸೊಪ್ ಕಾಲುಗಳು ಬಂದ್ಮೇಲಂತೂ ಮತ್ತೂ ಸಲೀಸೂ. ಅಲ್ಲೇ ಚಾಟೂ ಮಾಡಿ , ಅಲ್ಲೇ ಡೈರೆಕ್ಟಾಗಿ ಕನೆಕ್ಟ್ ಆಗಿ ಇಬ್ಬರಿಗೂ ಸಾಕೂ ಎನಿಸುವಷ್ಟು ಮಾತಾಡ್ಕೋಬಹುದು. ಇನ್ನು ಈ ಗ್ರೂಪ್ ಚಾಟ್ ಬೇರೆ ಬಂದು ಗುಂಪುಗುಂಪೆಲ್ಲಾ ಹರಟೆಗೆ ಗಂಟೆಗಟ್ಟಲೆ ಯಾವ ಯೋಚನೆ ಇಲ್ದಂಗೆ ಕೂತೇಬಿಡಬಹುದು.
ಮೊನ್ನೆ ಒಂದಿನ ಸ್ವಲ್ಪೊತ್ತು, ಅಬ್ಬಬ್ಬಾಂದ್ರೆ ೨-೩ ಗಂಟೆ ವಾಟ್ಸಪ್ ಏನೋ ಅಡಚಣೆಯಿಂದ ತನ್ ಕಾರ್ಯವನ್ನ ಸ್ಥಗಿತ ಗೊಳಿಸ್ತು. ಜನರು ಅಂಡು ಸುಟ್ಟುಕೊಂಡ ಬೆಕ್ಕಂತೆ ಪರ್ದಾಡ್ಬಿಟ್ಟು. ಫೇಸ್ಬುಕ್ ನಲ್ಲಿ ಎಷ್ಟೊಂದು ಸಂದೇಶಗಳು. ನನ್ ವಾಟ್ಸಪ್ ಕೆಲ್ಸ ಮಾಡ್ತಿಲ್ಲ.ನಿಮ್ಮದು ಹೇಗೇ?ಹೀಗೆ ಜನ ಗಾಬರಿ ಮಾಡ್ಕೊಂಡು ವಿಷ್ಯ ತಿಳ್ಕೊಳ್ಳೋಕೆ ಮುಗಿಬಿದ್ದಿದ್ದೇ ಬಿದ್ದಿದ್ದು. ಅಷ್ಟರಲ್ಲಿ ವಾಟ್ಸಪ್ ಮಾಲೀಕ “ಮಾರ್ಕ್ ಜ಼ಕರ್ಬರ್ಗ್”, ಸ್ಕ್ರೂ ಡ್ರೈವರ್ನ ಇಟ್ಕೊಂಡ್ ಮೆಶೀನುಗಳ್ನ ರಿಪೇರಿ ಮಾಡ್ತಿದ್ ಚಿತ್ರ ಯಾರೋ ಒಬ್ರು ಕ್ರಿಯೇಟಿವ್ ಆಗಿ ಗ್ರಾಫಿಕ್ಸ್ ಮಾಡಿ ಹಾಕೇಬಿಟ್ರು.ಅಲ್ಲಾ ನಮ್ ಮನೆ ಕೆಲಸ್ದೋಳು ವಾಟ್ಸಪ್ ಫ್ರೀಕು.ನೂರಾರು ಟಿಕ್ ಟಾಕ್ ಮಾಡಿ, ತನ್ ಬಳಗಕ್ಕೆಲ್ಲಾ ಕಳ್ಸೋ ಸುಂದರಿ, ವಾಟ್ಸಪ್ ನಲ್ಲಿ ಜ಼ಕರ್ಬರ್ಗನ್ನ ತೋರ್ಸಿ,”ನೋಡೀ ಅಕ್ಕ ವಾಟ್ಸೊಪ್ಪು ಕೆಟ್ಟೋಗಿತ್ತಂತೆ, ಈವಯ್ಯಾ ಯಾರೋ ಇಂಗ್ಲೀಸೋನು ರಿಪೇರಿ ಮಾಡಿದ್ಮೇಕೆ ಸರಿ ಓತಂತೆ. ನನ್ ವಾಟ್ಸೊಪ್ ನಾಗೆ ನನ್ ಪ್ರೆಂಡು ಕಳ್ಸೌಳೇ”, ಅಂತ ನನ್ಗೆ ತೋರಿಸಿದ್ಲು. ನಾನು,”ಅಯ್ಯೋ. ಮಂಕ್ ಮೂದೇವೀ, ಆವಯ್ಯನ್ನೇನು ಸಾಮಾನ್ಯಾಂತ ಅನ್ಕಂಡಿದಿಯೇ? ಅವ್ರೇ ಈ ವಾಟ್ಸಪ್ ಓನರು ಕಣವ್ವಾ. ಒಂದ್ ನಿಮ್ಷುಕ್ಕೇ ಲಕ್ಷಾಂತರ ರೂಪಾಯಿಗಳ್ನ ಸಂಪಾದ್ನೆ ಮಾಡ್ತಾರೆ ಕಣೇ”, ಅಂದೆ. ಅದಕ್ಕವಳು,”ಅಯ್ಯಾ ಔದೇನಕ್ಕೋ……ಆವಯ್ಯುಂಗೆ ಆಟೊಂದು ಆದಾಯ ಇದ್ ಮೇಕೆ ಆವಯ್ಯ ನನ್ನಂತೋರ್ ನಾಕ್ ಜನ್ರುನ್ನ ಇಂತ ರಿಪೇರಿವುಕ್ಕೆಲ್ಲಾ ಕೆಲಸುಕ್ ಮಡಿಕೊಂಡು ಮಾರಾಜ್ನಂಗ್ ಇರಾದ್ ಬುಟ್ಟು ಇದೇನಕ್ಕಾ ಈ ಕೂಲಿ ಚಾಕ್ರಿ ಮಾಡ್ಕೊಂಡೌನಲ್ಲಾ ಕಂಜೂಸ್ ಮೂದೇವೀ”, ಅಂತ ಇಷ್ಟಗ್ಲ ಕಣ್ ಬಿಟ್ಕೊಂಡು ಆ ಮಾಲಕ್ಷ್ಮಿ ಪುತ್ರುಂಗೇ ಛೀಮಾರಿ ಹಾಕುದ್ಲಾ,”ಏ……ಸರ್ಯಾಗಿ ವಿಷ್ಯ ತಿಳ್ಕೊಳ್ದೇ, ಸುಮ್ನೆ ವಟವಟಾಂತ ಅನ್ಬೇಡ ಸುಮ್ನಿರೇ. ಅವರ್ಗೇನ್ ಬಂದಿದೆಯೇ ದಾಡೀ ಸ್ಕ್ರೂ ಡ್ರೈವರ್ ಇಟ್ಕೊಂಡ್ ರಿಪೇರಿ ಕೆಲ್ಸ ಮಾಡಕ್ಕೇ?ಅವ್ರು ನಾಕ್ ಜನ ಕೆಲ್ಸುಕ್ ಇಟ್ಕೊಳೋದು, ನಿನ್ ಹತ್ರ ಹೇಳುಸ್ಕೋಬೇಕಾದಷ್ಟು ಪೆದ್ದೂ ಅಂದ್ಕೊಂಡ್ಯಾ? ಅವರ್ ಕೆಳ್ಗೆ ಅದೆಷ್ಟ್ ಲಕ್ಷ್ ಜನ ಕೆಲ್ಸ ಮಾಡ್ತಿದಾರೋ, ಆ ಲೆಕ್ಕಾಚಾರ ಅವ್ರಿಗೂ ಗೊತ್ತಿದ್ಯೋ ಇಲ್ವೋ!
ಈ ತರದ್ ತರ್ಲೆ ಮಾಡಕ್ಕೇಂತಲೇ ಒಂದಿಷ್ಟು ಹೈಕ್ಳು ಇರ್ತಾರೆ. ಇದೆಲ್ಲಾ ಅವ್ರ ಕಿತಾಪತಿ.ಎಂತವರನ್ನಾದ್ರೂ ಸೈ, ಅವ್ರಿಗೆ ಹಿಂದ್ಕೂ ಮುಂದ್ಕೂ ಏನೇನಾರಾ ಅಂಟ್ಸಿ, ಫ್ಯಾನ್ಸಿ ಡ್ರಸ್ ಹಾಕಿ,ಯಾರ್ ತಲೆ ಯಾರ್ಗೋ ಇಟ್ಟು,
ನೋಡ್ದೋರ್ ಮುಂದೆ ನಗ್ಪಾಟುಲ್ನ ಮಾಡ್ತಾರೆ ಈ ಗ್ರಾಫಿಕ್ ಕಲ್ತಿರೋ ಮೂದೇವಿಗುಳು”,ಅಂತ ಬಿಡ್ಸಿ ಹೇಳಿದ್ನಮೇಲೆ “ ಆ…..ಅಂಗ್ರಾ!ಯಾಕೋ ಆ ಮೂದೇವಿಗುಳ್ಗೆ ಬ್ಯಾರೆ ಕೇಮೆ ಇರಕಿಲ್ವೇನೋ?”, ಅಂತ ಮೂತಿ ಮುಂದುಕ್ ಮಾಡ್ಕೊಂಡು ಮೂದಲಿಸಿದ್ಲು. ನಾನು”ನಿನ್ಗೆ ಟಿಕ್ ಟಾಕ್ ಮಾಡ ಖಯಾಲಿಲ್ವೇ, ಹಂಗೇ, ಒಬ್ಬೊಬ್ರಿಗೊಂದೊಂದು ಖಾಯ್ಲೆ.ಏನ್ಮಾಡನೇಳು ಈಗಿತ್ಲಾಗ್ ಬರ್ತಿರ ಯಾವ್ ಖಾಯ್ಲೇಗುಳ್ಗೂ ಜನ ಔಷ್ದಿ ಕಂಡ್ ಹಿಡ್ಯಕ್ಕಾಗ್ತಾ ಇಲ್ಲ. ವಿಧಿ ಇಲ್ದೇ ಈ ಖಾಯಿಲೇಗಳ್ ಜೊತೇಲೇ ಬದ್ಕು ಮಾಡದ್ನ ಕಲ್ತ್ಕೋಬೇಕು. ಊ….ಓಗೋಗು. ಮುಸ್ರೆ ತಿಕ್ಕೋಗು.ಈ ಹಾಳಾದ್ರ ಸಹ್ವಾಸುಕ್ ಬಿದ್ರೆ, ಕುಂತಿದ್ ತಾವ್ಲೇ ಒತ್ ಕಳ್ದೋಗಿ ಯಾವ್ ಕೆಲ್ಸಾನೂ ಸಾಗ್ದೇಯಾ ದಿನ ಓಡೊಂಟೋಯ್ತದೆ”ಅಂತ ಅವ್ಳಿಗೆ ಬಿಟ್ಟಿ ಉಪ್ದ್ಶ ಕೊಟ್ಟು, ಆ ಪಾಪದವಳ್ನ ಕೆಲ್ಸುಕ್ ಅಟ್ಟಿ ನಾನ ಬಲ್ ಸಾಚಾಳಂತೆ ವಾಟ್ಸೊಪ್ ಅಪ್ಡೇಟ್ ಮಾಡಕ್ಕೆ ಸದ್ ಮಾಡ್ದೆ ಕೂತ್ಕಂಡೇ.
ಈಗೀಗಂತೂ ಮೂರ್ನೇ ಕ್ಲಾಸು ಮುಗಿಸ್ದೋರೂ ವಾಟ್ಸೊಪ್ಪು ಬಳ್ಸಕ್ ಶುರು ಮಾಡಿ,ಅದ್ಯಾವ್ ವಿಷ್ಯಾನ್ ಹೆಂಗ್ ಅಂದಾಜ್ ಹಾಕ್ತಾರೇಂತ್ಲೇ ಗೊತ್ರಾಗ್ದಂಗಾಗೋಗಿದೆ ಕಣ್ರೀ. ಯಾಕ್ ಇಂಗಂದೇಂದ್ರೇ, ಈ ವಾಟ್ಸಪ್ ಗಳಲ್ಲಿ ಬರೋ ಮನೆಮದ್ದು, ನಾಟಿ ಔಷಧಿ,ಸೊಪ್ಪು ಸದೆಗಳಿಂದ ಪ್ರಯೋಜನಗಳ್ನ ನೋಡೀ ನೋಡೀ ಒಬ್ಬೊಬ್ರೂ ತಾವೇ ಸ್ವತಃ ಡಾಕ್ಟರ್ ಗಳಾಗಿ ಹೋಗಿದಾರೆ.ಆ ದಿನ ನನ್ ಗಂಡನಿಗೆ ಸ್ವಲ್ಪ ಮೊಣಕೈ ನೋವೆಂದು ಕೈಗೆ ಕ್ರೇಪ್ ಬ್ಯಾಂಡೇಜ್ ಹಾಕಿಕೊಂಡಿದ್ರು. ನಮ್ ಪಕ್ಕದ್ ಮನೆ ಹುಡುಗ ಇದನ್ ನೋಡಿ,”ಏನಾಯ್ತು ಅಂಕಲ್ “, ಅಂದ. ಅದಕ್ಕೆ ಅವರು,”ಏನಿಲ್ವೋ ಸ್ವಲ್ಪ ಮೊಣಕೈ ನೋವಿತ್ತು, ಅದಕ್ಕೆ”, ಅಂದ್ರು. ಅದಕ್ಕವ,”ಅಯ್ಯೋ ಅಂಕಲ್ ಆ ಬ್ಯಾಂಡೇಜೂ ಗೀಂಡೇಜೆಲ್ಲಾ ಹಾಕೊಂಡ್ರೆ ಮೂಳೆಗೆ ಮೂಮೆಂಟ್ ಇಲ್ದಂಗಾಗಿ, ಸವೆತ ಶುರುವಾಗುತ್ತಂತೆ. ಸುಮ್ನೆ ಶುಂಠೀನ ಗಂಧದ್ ತರ ಅರ್ದು, ಆ ನೋವಿರೋ ಹತ್ರ ಪಟ್ಟಿ ಹಾಕೊಳ್ರೀ, ಐದೇ ನಿಮ್ಷಕ್ಕೆ ಕಮ್ಮಿ ಆಗುತ್ತೆ. ಬೇಕಿದ್ರೆ ಮಾಡ್ ನೋಡಿ”, ಅಂತ ಬಲ್ ಕಾನ್ಫಿಡೆಂಟಾಗಿ ಫೀಸೂ ತಗೊಳ್ದೇ ಟ್ರೀಟ್ಮೆಂಟ್ ಕೊಟ್ಟೇಬಿಟ್ಟ. ನನ್ಗೆ ಶಾಕು! ಅವ್ನು ಎಂಟ್ನೇ ಕ್ಲಾಸು ಹುಡ್ಗಾ! ನಾನು,”ಲೋ ಮಗಾ, ಈಟೊಂದೆಲ್ಲಾ ಅದ್ಯಾವಾಗ, ಅದ್ಯಾವ್ ಮೆಡಿಕಲ್ ಕಾಲೇಜಿಗ್ ಓಗಿ ಇಸ್ಯ ತಿಳ್ಕಂಡೋ ಗುರುವೇ”, ಅಂದೆ. ಅದಕ್ಕವ,”ಏ….ಇದೇನ್ ಆಂಟೀ ವಾಟ್ಸೊಪ್ ನಲ್ಲಿ ದಿನಕ್ ಇಂತವು ಏಸೋಂದ್ ವಿಷ್ಯ ಬತ್ಲೇ ಇತ್ತವೆ. ನೀವ್ ಇಂತವೆಲ್ಲಾ ನೋಡಕಿಲ್ಲಾನ್ರೀ ಅಂಗಾರೇ.ಮತ್ತೆ ಈ ಫೋನಾದ್ರೂ ಯಾತ್ಕೋ, ಏನೂ ನೋಡಿದಿದ್ ಮ್ಯಾಕೇ….”, ಅಂತ ವಕ್ರವಾಗಿ ನಕ್ಕು ನಾನು ಯೂಸ್ಲೆಸ್ ಅನ್ನೋ ಹಂಗೆ ಕೇವಲವಾಗಿ ಉತ್ತರ ಕೊಟ್ಟ.” ಹೂ…..ಬಿಡೋ, ನಾನು ಯೂಸ್ಲೆಸ್ ಅಂತ ಯಾವಗಿಂದ್ಲೋ ಗೊತ್ತು. ನೀನೊಬ್ಬ ಸರ್ಟಿಫಿಕೇಟ್ನ ಕೊಟ್ಟಿರ್ಲಿಲ್ಲ ಅಷ್ಟೇ”, ಅಂತ ನನ್ ಗಂಡನ್ ಕಡೆ ಕಿರುಗಣ್ಣಲ್ಲೇ ನೋಡ್ದೆ, ಅವರಾಗಲೇ ಆ ಮೂದೇವಿಗೆ ಹೈಫೈ ಕೊಟ್ಟು,”ಸಖತ್ತಾಗಿ ಹೇಳ್ದೆ ಮಗಾ”, ಅಂದು ಆ ಸಂದರ್ಭದ ಸೆಲಿಬ್ರೇಷನ್ ನಲ್ಲಿದ್ದರು.ಯಾರಾದ್ರೂ ನನ್ ಬಗ್ಗೆ ಕೇವಲ್ವಾಗಿ ಮಾತಾಡಿದ್ರೆ, ಅಬ್ಬಾ ನನ್ ಪತಿರಾಯರಿಗೆ ಅದೇನ್ ಖುಷೀನೋ, ಹೂ ಕಣ್ರಪ್ಪಾ, ಬಗಲ್ ಮೇ ದುಷ್ಮನ್!
ಆದ್ರೂ ಏನ್ರೀ ಈ ವಾಟ್ಸಪ್ ಸಂದೇಶಗಳು, ಯಾವ್ ವಯ್ಸಿನ್ ಜನ್ರನ್ನಾದ್ರೂ ಸರೀ ಮರುಳ್ ಮಾಡಿಬಿಡ್ತಾವೆ!
ಮೊನ್ನೆ ನಮ್ ಆಪ್ತರೊಬ್ಬರು ಅಂಚೇ ಕಛೇರಿಯಲ್ಲೆ ಕೆಲಸ ಮಾಡುವವರು, ನಮ್ಮ್ ಮನೇಗಂತ ಒಂದಷ್ಟು ಬಸಳೇ ಸೊಪ್ಪು ಕಳ್ಸಿ, ವಾಟ್ಸಪ್ಪಿನಲ್ಲಿ “ಆರ್ಗಾನಿಕ್ ಸೊಪ್ಪು ಕಳ್ಸಿದೀನಿ ರೂಪಾ ಬಳಸ್ಕೊಳ್ಳೀ”, ಅಂತ ಸಂದೇಶ ಹಾಕಿದ್ರು.ಹೆಂಗಸರ ಸಂಭಾಷಣೆ ಅಲ್ವೇ? 👍ಹಾಕಿ, ಮುಗಿಸಿದ್ರೆ ನಮ್ ಹೆಂಗಸ್ ಜಾತೀಗೇ ಅವ್ಮಾನ! ಸೋ, ನಾನು,”ತುಂಬಾ ಥ್ಯಾಂಕ್ಸು ಜಲಜಾ.ಅದೂ ಆರ್ಗ್ಯಾನಿಕ್ ಅಂದ್ಮೇಲ್ ಸ್ಪೆಷಲ್ಲಾಗಿ ಥ್ಯಾಂಕ್ಸಪ್ಪಾ.ನಿಮ್ಮನೇಲಿ ಇದೆಲ್ಲಾ ಬೆಳೆಯೋವಷ್ಟೇನೂ ಜಾಗವಿಲ್ಲಾ, ಎಲ್ಲಿಂದ್ ತಂದ್ರೀ”, ಅಂತ ಸಂದೇಶಿಸಿದೆ. ಅದಕ್ಕೆ ಜಲಜ,”ಏ…ಸ್ ಯು ಆರ್ ರೈಟ್. ಇದು ನಮ್ ಮನೇದಲ್ಲ , ಆಫೀಸಲ್ಲಿ ಬೆಳೆಸಿದ್ದೆ”, ಅಂದ್ರು. ನಾನು,”ಆ…..ಇದೇನ್ ಜಲ್ಜಾ, ಆಫೀಸಲ್ಲಿ ಕೆರ್ಕೊಳ್ಳೋಕೇ ಪುರ್ಸೊತ್ತಿರೋಲ್ಲಾಂತ ಇದ್ದೋಳು ಈ ಸೊಪ್ಪುಸದೇಂತ ಬೆಳ್ಸೋವಷ್ಟು ಪುರ್ಸೊತ್ತು ಮಾಡ್ಕೊಂಡಿದೀಯಲ್ಲಾ, ಇದೆಲ್ಲಾ ಹೆಂಗ್ ಅಮ್ಮೀ”, ಅಂತ ಮತ್ತೆ ಮೆಸೇಜು ಹಾಕಿದೆ. ಅದಕ್ಕೆ ಈ ವಿಚಾರವಾಗಿ ಡೀಟೈಲ್ ಸಂದೇಶ ಟೈಪು ಮಾಡೋಳ್ ಯಾರೂಂತ ಅಲ್ಲಿಂದಲೇ ವಾಟ್ಸಪ್ಪು ಕಾಲು ಜಲ್ಜ ಮಾಡಿಯೇ ಬಿಟ್ಳು.”ಹೂ ರೂಪಾ, ಬಿಡುವಿಲ್ಲದಷ್ಟು ಕೆಲ್ಸ ಕಾರ್ಯ ಅಂತ ಕೂರ್ತಿದ್ದೋರ್ಗೆ, ಈ ಹಾಳ್ ವಾಟ್ಸಪ್ಪು ಬಂದು,ಪತ್ರ, ಟೆಲಿಗ್ರಾಮ್, ಗ್ರೀಟಿಂಗ್ಸು,ಪೇಮೆಂಟು, ಹಾಳೂ ಮೂಳೂಂತ ಮುಕ್ಕಾಲು ಕೆಲ್ಸವೆಲ್ಲಾ ಅದ್ರಲ್ಲೇ ಆಗೋಗಿ, ನಮ್ ಕೆಲ್ಸಾನೂ ಖೋತಾ, ಹಿಂಗೇ ಆದ್ರೆ ನಮ್ ಇಲಾಖೇನೇ ಗೋತಾ.ಇದ್ರ ಮಧ್ಯೆ ಸುಮ್ನೆ ಕೂತ್ ಕೂತ್ ಸೊಂಟ ನೋಯಿಸಿಕೊಳ್ಳೋ ಬದ್ಲು, ಆಫೀಸಿನ ಹಿಂದೆ ಬೇಕಾದಷ್ಟು ಜಾಗ ಇದೆಯಲ್ಲಾ ಅಲ್ಲಿ ಟೈಮ್ ಇದ್ದಾಗ್ ಹೋಗಿ ತರಕಾರಿ, ಸೊಪ್ಪುಸೆದೆ ಬೆಳಿಸ್ತೀವಿ.ಈ ವಾಟ್ಸೊಪ್ಪಿನ ಆರ್ಭಟದಲ್ಲಿ ನಾವು ತಣ್ಣಗೆ ನಮಿಗ್ ಬೇಕಿದ್ ಕೆಲ್ಸ ಪುರುಸೊತ್ತಾದಾಗ ಸ್ವಲ್ಪ ಮಾಡ್ಕೊಂಡು ತೆಪ್ಪಗೆ ಸಂಬ್ಳ ಎಣಿಸ್ಕೊಂಡು ಹೊತ್ ಕಳೀತಿದ್ದೀವಿ.ಈಗ್ಲೂ ಅಂತಾ ಕೆಲ್ಸವೇನಿಲ್ಲಾ. ಅದಕ್ಕೇ ಇಲ್ಲೇ ಸೊಪ್ ಬಿಡುಸ್ತಲೇ ನಿಮ್ ಜೊತೆ ವಾಟ್ಸಪ್ ಕಾಲ್ನಲ್ಲಿದೀನಿ.”, ಅಂತ ಆಫೀಸಲ್ಲಿ ಫ್ರೀಯಾಗಿದ್ದೋಳು ಸೊಪ್ಪನ್ನ ಬೆಳೆದ್ ಕತೆ ಹೇಳಿದ್ಳು.ಇದೂ ಸಲೀಸೇ ಅಲ್ವಾಂತ ನಾನಂದ್ಕೊಂಡೆ. ನೋಡ್ರೀ ಈ ವಾಟ್ಸೊಪ್ ಸಾವಾಸ್ದಲ್ಲಿ ನಮ್ಗೆ ಟೈಮೇ ಸಾಲ್ತಿಲ್ಲಾಂತ ನಾವು ಬೊಂಬಡಾ ಹೊಡೀತಿದ್ರೆ, ಇವ್ರುಗಳು ವಾಟ್ಸಪ್ ಬಂದ್ ಮೇಲೆ ಪುರ್ಸೊತ್ತಾಗಿರೋದೂ! ಜೀವನವೇ ಹಾಗಲ್ಲವೇ? One man’s food is another man’s poison ಅಂತ ಯಾರೋ ಪುಣ್ಯಾತ್ಮ ಸುಮ್ನೇ ಹೇಳಿಲ್ಲ ಕಣ್ರೀ!
ಈ ವಾಟ್ಸೊಪ್ ನಿಂದ ಇನ್ನೂ ನಾವು ವಾಟ್ ವಾಟ್ ಕರ್ಮ ನೋಡ್ಬೇಕೋ? ಆ ನಮ್ ಮೇಲಿರೋ ಡ್ಯಾಡೇ ಬಲ್ಲ.
ಇವತ್ ಬೆಳ್ಬೆಳಗ್ಗೇಲೇ ಸೊಪ್ಪಮ್ಮೋ ಸೊಪ್ಪೂ ಅಂತ ನಮ್ ಬೀದಿಗ್ ಬರೋ ಸೊಪ್ನೋಳು ಸೊಪ್ ಮಾರ್ತಾ ನಮ್ ಮನೆ ಮುಂದೆ ಬಂದ್ಳಾ! ನನ್ಮಗ,” ಮೆಂತೆ ಸೊಪ್ಪಿನ ಬಾತ್ ಮಾಡಿ ಮಮ್ಮೀ”, ಅಂತ ತಿನ್ನೋ ಬಯಕೆ ಹೇಳ್ಕೊಂಡಿದ್ದ. ಸರಿ, ನಾನು ಆಚೆ ಹೋಗಿ,ಸೊಪ್ಪಮ್ಮೋ ಅಂತ ಕೂಗ್ತಿದ್ದೋಳ್ನ ಸೊಪ್ಪಮ್ಮಾ ಬಾರಮ್ಮಾ ಅಂತ ಕೂಗ್ದೆ. ಅವ್ಳು ಮಂಕ್ರಿ ತಗೊಂಡು ಬಂದು ನಮ್ ಮನೆ ಮುಂದೆ ಇಳಿಸಿದ್ಲಾ!”ಎಲ್ಲಿ ನಾಕ್ ಕಂತೆ ಮೆಂತೆ ಸೊಪ್ ಕೊಡಮ್ಮಾ”, ಅಂದೆ. ಅದಕ್ಕವಳು”ಅಯ್ಯೋ, ಮೆಂತೆಸೊಪ್ಪು ಆಗೋಗದೆ ಕನಕ್ಕೋ.ಒಂದ್ ಕೆಲ್ಸ ಮಾಡಕ್ಕೋ.ನನ್ ಪೋನ್ ನಂಬರ್ ಮಡಿಕೊಂಡಿರಕ್ಕೋ,ನಿಂಗ್ ಯಾದಾದ್ರೂ ಸೊಪ್ ಬೇಕಾದಾಗ ನನ್ ನಂಬರ್ಗೆ ವಾಟ್ಸೊಪ್ ಮಾಡಕ್ಕಾ, ಅಂಗೇ ಬತ್ತಾ ಇಡ್ಕಂಡೇ ಬತ್ತೀನಿ. ಇಕಳಕ್ಕಾ ನನ್ ನಂಬರು”, ಅಂತ ನನ್ ಫೋನ್ ನಂಬರ್ ಕೇಳಿ, ಪಟಪಟ ತನ್ ಪೋನೊತ್ತಿ ಮಿಸ್ ಕಾಲ್ ಮಾಡಿ,”ಮಿಸ್ ಕಾಲು ಕೊಟ್ಟಿವ್ನಿ ಕನಕ್ಕೋ.ಒಳಿಕ್ಕೋಗಿ ಸೇವ್ ಮಾಡ್ಕಳಿ”, ಅಂದು ಸೊಪ್ಪಿನ್ ಮಂಕ್ರಿ ಎತ್ಕೊಂಡ್ ಕಾಲ್ ಕಿತ್ಲು. ನಾನು,”ಯವ್ವೀ ಯವ್ವೀ , ಏನ್ ಕಾಲ ಬಂತಪ್ಪಾ. ಸೊಪ್ಪಿನೋಳಿಗೂ ವಾಟ್ಸೊಪ್ಪು, ಉಪ್ಪಿನೋನಿಗೂ ವಾಟ್ಸೊಪ್ಪು ಮಾಡೋ ಕಾಲ ಬಂತಲ್ಲಾ!”ಅಂತ ಬಾಯ್ ಮೇಲೆ ಕೈ ಇಟ್ಕೊಂಡ್ ಅವ್ಳನ್ ನೋಡ್ತಿದ್ರೆ, ಅವ್ಳು ಓಗ್ತಾ ಓಗ್ತಾ ತನ್ ಪೋನಲ್ಲಿ ಯಾರ್ಗೊ,”ಅಕ್ಕೋ ಪುದೀನಸೊಪ್ಪು ನಾಕ್ ಕಂತೆ ಬೇಕೂಂತ ತಾನೇ ನೀನು ವಾಟ್ಸೊಪ್ಪು ಮಾಡಿದ್ದೂ? ಇಕಾ ನಿಮ್ ಮನೆ ತಿರುವ್ನಾಗೇ ಇವ್ನಿ, ಒಂದೈದ್ ನಿಮುಸ್ದಾಗೆ ನಿಮ್ ಮನೆ ತಲ್ಬಾಗ್ಲು ತಾವ್ ಇತ್ತೀನಿ”, ಅಂತ ಮಂಕ್ರಿ ಎತ್ಕಂಡು ಸೋಪ್ಪಮ್ಮಾ ಸೋಪ್ಪೂ ಅಂತ ಕೂಗ್ಕೊಂಡು ಒಂಟೇ ಓದ್ಲು.
ಒಟ್ನಲ್ಲಿ ಈ ವಾಟ್ಸೊಪ್ ನಿಂದಂತೂ,ಅಫೇರ್ ಇಟ್ಕೊಂಡಿರೋ ಯಂಗ್ ಪೀಪಲ್ಗೆ ಬಲೇ ಅನುಕೂಲ.ಎದ್ರೆ ಬಿದ್ರೆ ಯಾರಾದ್ರೂ ಇದ್ರೆ ಗುಟ್ಟಾಗಿ ಗಂಟಗಟ್ಟಲೆ ಚಾಟುಗಳೂ,ಯಾರೂ ಇಲ್ದೋದ್ರೆ ಕಾಲುಗಳೂ ಮಾಡ್ಕೊಂಡು ಸೀಕ್ರೆಟ್ ವಿಚಾರಗಳಿದ್ದಾಗ ಸರ್ರಂತ ಡಿಲೀಟ್ ಮಾಡ್ಕೊಂಡು ಮನೆಯೋರ್ಗೆ ಯಾರ್ಗೂ ಸಿಕ್ಕಾಕಿಕೊಳ್ದಂಗೆ, ಯಂಗೆಂಗ್ ಬೇಕಾದ್ರೂ, ಸೇಫಾಗಿ ಆಟಾಡ್ಕೊಂಡ್ ಆರಾಮ್ ಸೆ ಇರಬಹುದು.
ಈ ವಾಟ್ಸೊಪ್ಪು ಬಂದ್ ಮೇಲೆ ಶಾನೆ ಜನ್ಕೆ ಬಲ್ ತಾಳ್ಮೆ ಬಂದೋಗದೆ ಕಣ್ರೀ. ನೀವ್ ನೋಡ್ರೀ, ಇತ್ತಿತ್ಲಾಗ್ ಟ್ರಾಫಿಕ್ ಜಾಮಾಗ್ಲೀ, ಬಸ್ಸು ಟ್ರೈನು ಲೇಟಾಗ್ ಬರ್ಲೀ, ಹೋಟ್ಲಾಗೆ ತಿಂಡಿ ಸಪ್ಲೈ ಮಾಡದೂ ಏಟೊತ್ತಾರಾ ಆಗ್ಲಿ,ಜನಸಾಮಾನ್ಯರು ಶಿರಬಾಗಿಸಿ ವಾಟ್ಸೊಪ್ ತೀಡೋದೋ,ಅಲ್ಲಿನ ಸಂದೇಶ, ವಿಡಿಯೋಗಳ್ನ ನೋಡ್ತಲೋ,ಸಂದೇಶ ಕಳಿಸೋದೋ ,ಮತ್ತೊಂದೋ ಮಾಡಿಕೊಂಡು ಶಾಂತ ರೀತಿಯಲ್ಲಿ ಬಿಸಿಯಾಗಿದ್ದುಕೊಂಡು ಸಮಯ ಕಳೀತಾರೆ ಹೊರ್ತು ರೊಚ್ಚಿಗೇಳೋ ಮಾತೇ ಇಲ್ಲ. ಸೋ, ವಾಟ್ಸಪ್….ದಿ ಅಂಬಾಸಿಡರ್ ಆಫ್ ಪೀಸ್ ಅಂತ, ವಾಟ್ಸಪ್ ಗೆ ಬಿರುದು ಕೊಟ್ಟರೂ ತಪ್ಪಿಲ್ಲ.

ಹಿಂದಿನ ವಾರ ವೀಕೆಂಡು ಮಕ್ಕಳಿಗೆ ಸ್ವಲ್ಪ ನಗರದ ಜೀವನದಿಂದ ಚೇಂಜ್ ಸಿಗಲಿ, ಎಲ್ಲಾದ್ರೂ ಚಿಕ್ಕಮಗಳೂರಿನ ಕಡೆಯ ರೆಸಾರ್ಟ್ನ ಕಡೆ ಹೋಗಿದ್ದು ಬರೋಣವೆಂದು ನನ್ನ ಫ್ರೆಂಡ್ ಹಾಗೂ ಅವರ ತಂಗಿ ಸಂಸಾರ ಪ್ಲಾನ್ ಹಾಕಿತ್ತಂತೆ.ಅವಳ ತಂಗಿಯ ಹದಿಮೂರು ವರ್ಷದ ಮಗ, ಜಪ್ಪಯ್ಯಾ ಎಂದರೂ ಅದಕ್ಕೆ ಒಪ್ಪದೆ ಬಿಲ್ಕುಲ್ ಬರಲಾರೆನೆಂದು ಹಠ ಹಿಡಿದು ಕೂತನಂತೆ.ಕಾರಣ ಕೇಳಿದಾಗ,”ಮಾಮ್, ಅಲ್ಲೆಲ್ಲಾ ಸರ್ಯಾಗಿ ಟವರ್ ಇರಲ್ಲ.ವಾಟ್ಸಪ್ಪು ಅಂಡ್ ಮಿಕ್ನಾದವು ಇಲ್ದೋದ್ರೆ ಟೈಮ್ ಹೆಂಗೆ ಪಾಸ್ ಮಾಡ್ಲೀ, ಐ ಕಾಂಟ್ ಕಮ್”, ಅಂತ ರೆಸಾರ್ಟ್ ಸ್ಟೇ ಗೆ ಸೊಪ್ಪು ಹಾಕದೆ ಮುಖ ದಪ್ಪನಾಗಿ ಮಾಡಿಕೊಂಡು ಜಾಗ ಖಾಲಿ ಮಾಡಿದನಂತೆ! ಯಪ್ಪಾ ಯಪ್ಪಾ ಏನಪ್ಪಾ ಈ ವಾಟ್ಸೊಪ್ ಮಾಡಿರ ಮಾಯೇ ಮಾರ್ರೇ!
ಹೂ ಕಣ್ರೀ,ಯೇನಾರಾ ಈ ವಾಟ್ಸೊಪ್ಪುನ ಬೋದ್ರೂನೂವಾ, ಈ ವಾಟ್ಸಪ್ಪಿನಿಂದ ನನಗಂತೂ ಬಲು ಒಳ್ಳೇದಂತೂ ಆಗಿದೆ ಕಣ್ರೀ. ಯಾವ ವಿಚಾರವೇ ಇರಲಿ,ಒಂದೇ ಕತ್ತಿಯ ಎರಡು ಅಲಗಿನಂತೆ, ಎರಡು ದೃಷ್ಟಿಕೋನಗಳಂತೂ ಇದ್ದೇ ಇರುತ್ತದೆ.ಒಂದಾನೊಂದು ಕಾಲದಲ್ಲಿ ಅಷ್ಟೋ ಇಷ್ಟೋ ಏನೂ, ಸಾಕಷ್ಟು ಪ್ರತಿಭಾನ್ವಿತರಾದ ಬರಹಗಾರರೂ,ಹಾಡುಗಾರರೂ ,ನೃತ್ಯ ಮಾಡುವವರು,ಲಲಿತ ಕಲೆಗಳನ್ನ ತಿಳಿದವರು ಇದ್ದರೂ ಬೆಳಕಿಗೆ ಬರಲು ಯಾವ ಮಾಧ್ಯಮವೂ ಇಲ್ಲದೆ, ಎಲೆಮರೆಯ ಕಾಯಿಗಳಾಗಿ, ಅಲ್ಲೇ ಹಣ್ಣಾಗಿ ಕೊನೆಗೆ ಕಳೆತು, ತಮ್ಮ ಪ್ರತಿಭೆ ಕೊಳೆತು, ಬೆಳಕಿಗೆ ಬರದೇ ಮಣ್ಣಾಗಿದ್ದಾರೆ. ಆದರೆ, ಈ ವಾಟ್ಸಪ್ ಬಂದ ಮೇಲಂತೂವಾ ನನ್ನಂಥ ಪುಡಿ ಕವಿಗಳು, ಬಡ್ಡಿಂಗ್ ಬರಹಗಾರರು, ಚಿಕ್ಪುಟ್ ಕಲಾವಿದರಿಗೂ ಕೂಡಾ ಒಂದಿಬ್ಬರು ಅಭಿಮಾನಿಗಳು ಹುಟ್ಟುಕೊಂಡು, ನಮ್ಮ ಸಾಸಿವೆ ಕಾಳಿನಷ್ಟಿರುವ ಪ್ರತಿಭೆಯನ್ನು ಗುರುತಿಸಿ ಚಪ್ಪಾಳೆ ತಟ್ಟಿದರೆ, ಹುರಿದುಂಬಿಸಿದರೆ,ಅರೇ….ಆ ಪ್ರೋತ್ಸಾಹ ನಮ್ಮಗಳಿಗೆ ನೀಡುವ ಉತ್ಸಾಹವೇ ಬೇರೆ ಲೆವೆಲ್ಲಿನದು ಕಣ್ರೀ. ಆ ಸುಖ ನಾವೇನೇ ಒಡವೆ ಧರಿಸಿದರೂ, ಏನೇ ಬೆಲೆಬಾಳುವ ಸೀರೆ ಉಟ್ಟರೂ ಸಿಗಲಾರದಂಥದ್ದು. ಇದು ನನ್ನ ಭಾವನೆ! ಈ ಅನುಭವ ಹಲವಾರು ಪ್ರತಿಭಾನ್ವಿತರಿಗೂ ಆಗಿಯೇ ಇರುತ್ತದೆ ಎಂದೇ ನನ್ನ ಅನಿಸಿಕೆ. ಬಾವಿಯೊಳಗಿರುವ ಕಪ್ಪೆಗಳಂತಿದ್ದ ನಮ್ಮ ಬದುಕು ಈಗ ವಾಟ್ಸಪ್ಪಿನ ಕೃಪೆಯಿಂದ ಅರ್ಥ ಪಡೆದುಕೊಂಡಿದೆ. ವ್ಯರ್ಥವಾಗಿ ಕಾಲ ಕಳೆಯದೆ, ಮತ್ತಷ್ಟು ಕಲೆ ಹಾಗು ಬರಹಗಳತ್ತ ನಮ್ಮನ್ನ ತೊಡಗಿಸಿಕೊಳ್ಳಲು ಬೆನ್ನುತಟ್ಟಿ ಜೊತೆಯಾಗಿದೆ.ಈ ವಾಟ್ಸಪ್ಪಿನ ನಿರಂತರ ಸಾಂಗತ್ಯದಲ್ಲಿ ಕಣ್ಣು ಮಂಕಾಗುತ್ತಿದೆ.ಜೊತೆಗೆ ವಿಜ್ಞಾನ ಹೇಳುವಂತೆ ಹಲವಾರು ಸೈಡ್ ಎಫೆಕ್ಟ್ಗಳಿವೆ ಎನ್ನುವುದು ನಿಜವಾದರೂ,
ಏನು ಮಾಡಿದರೂ ಮಾಡದಿದ್ದರೂ ದಿನ ಕಳೆದಂತೆ ಕಣ್ಣು ಮಂಜಾಗುತ್ತದೆ, ದೇಹ ಸೋಲುತ್ತದೆ,ಹಾಗಿದ್ದಾಗ ಆದ್ರಾಗಲಿ ಬಿಡಿ, ಏನಾದರೂ ಮಾಡಿಯೇ ಮಣ್ಣಾಗೋಣ, ಎಂದು ಮನಸ್ಸು ಹೇಳುತ್ತದೆ.
ಆ ಎಫೆಕ್ಟ್ ಗಳಿಗೂ ಮಿಗಿಲಾಗಿ,ನಿಮ್ಮೆಲ್ಲರ ಪರಿಚಯ,ನಿಮ್ಮ ಮಾರ್ಗದರ್ಶನದಲ್ಲಿ ಬೆಳೆಯುವ ಅವಕಾಶ, ನಿಮ್ಮ ಹಾರೈಕೆ, ಪ್ರೋತ್ಸಾಹಗಳನ್ನು ಕೊಟ್ಟು, ಈ ವಾಟ್ಸಪ್ಪ್
ನಮ್ಮ ಬದುಕಿಗೆ ಸಾರ್ಥಕತೆ ನೀಡಿದೆ.

ಜೈ ಸೆಲ್ಫೋನಾಂಬೆ! ಜೈ ವಾಟ್ಸಪ್ಪೇಶ್ವರಿ! ಎಲ್ಲಾ ವಾಟ್ಸಪ್ ಗುರುಗಳಿಗೂ, ಸ್ನೇಹಿತರಿಗೂ, ಬಂಧುಗಳಿಗೂ ನನ್ನ ಅನಂತ ವಂದನೆಗಳು. ಹಾಗೇ ಈ ಬರಹವನ್ನು ವಾಟ್ಸಪ್ ಮುಖಾಂತರ ಓದಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ನಮಸ್ಕಾರಗಳು.


ರೂಪ ಮಂಜುನಾಥ ಹೊಳೆನರಸೀಪುರ.

One thought on “ರೂಪ ಮಂಜುನಾಥ-ಲಲಿತ ಪ್ರಬಂಧ.ವಾಟ್(ಸೊಪ್ಪು) ಕಂತೆ ಪುರಾಣ……

  1. ಅದ್ಭುತವಾಗಿದೆ ನಿಮ್ಮ ಬರಹ. ಆದರೆ ಓದಲು ಸಹನೆ (ಸಮಯ) ಬೇಕಷ್ಟೇ. ಕಣ್ಣಿನ ಸಮಸ್ಯೆ ಇರುವುದರಿಂದ.
    ಹೀಗೇ ಮುಂದುವರಿಯಲಿ ನಿಮ್ಮ ಪಯಣ.

Leave a Reply

Back To Top