ಜಯಶ್ರೀ ಭ ಭಂಡಾರಿ-ಗಜಲ್

ಕಾವ್ಯ ಸಂಗಾತಿ

ಗಜಲ್

ಜಯಶ್ರೀ ಭ ಭಂಡಾರಿ

ಪ್ರಶಸ್ತಿಯ ಆಶೆಗಾಗಿ ಅವರಿವರಿಗೆ ದುಂಬಾಲು ಬೀಳುವೆಯಾ ನೀನು
ಆಸಕ್ತಿಯ ತೃಷೆಗೆ‌ ಓದದೇ ಸಾಹಿತ್ಯ ರಚನೆ ಕೇಳುವೆಯಾ ನೀನು.

ಪುರಸ್ಕಾರ ಬಹುಮಾನ ಪ್ರತಿಭೆ ಅರಸಿ ಬಂದರೆ ಗೌರವವಲ್ಲವೇ ಗೆಳತಿ
ತಿರಸ್ಕಾರ ಭಾವದಿ ಅಳಿಸಿ ಲೋಕ ನೇಗಾಡಿಕೊಂಡು ಆಳುವೆಯಾ ನೀನು.

ಗೀಚಿದ್ದೆಲ್ಲ ಕವನವಲ್ಲ ಬರೆದಿದ್ದೆಲ್ಲ ಲೇಖನವಲ್ಲ ಅರ್ಥೈಸಿಕೊಂಡು ನಡೆ
ತೋಚಿದ್ದು ಬರಹಕಿಳಿಸಿ ಸಾಹಿತಿ‌ ಎಂದವರ ಸಾಲಿನಲಿ ತಾಳುವೆಯಾ ನೀನು

ಆಮೀಷದಿ ಒಲಿದು ಬರುವ ಪ್ರಶಸ್ತಿಗಳಿಗೆ ಯಾವುದೇ ಮಾನದಂಡಗಳಿಲ್ಲ.
ಮೀನಾಮೇಷ ಮಾಡದೆ ಅರುಹಿ ಶಿಸ್ತಿನಲಿ ನಿನ್ನಾತ್ಮದಿ ಏಳುವೆಯಾ ನೀನು.

ದೇವಿ ಶಾರದೆಯ ಕೃಪಾಕಟಾಕ್ಷ ಎಲ್ಲರಿಗೂ ಸಿಗದು ಜಯ ಹೇಳುತಿಹಳು .
ದೀವಿಗೆ ಆರದೆ ಬೆಳಗಲು ತೈಲದಿ, ಅಕ್ಕರದ ಅಗಾಧ ಸಾಧನೆಗೆ ಉಳುವೆಯಾ ನೀನು


Leave a Reply

Back To Top