ಕಾವ್ಯ ಸಂಗಾತಿ
ಪ್ರಕೃತಿಯ ಸಂಭ್ರಮ
ಪುಷ್ಪ ಮುರಗೋಡ

[ ಸೂರ್ಯೋದಯಕೆ ಮುಂಚೆ
ಅರುಣೋದಯವಾಗಿದೆ
ಪೂರ್ವ ದಿಸೆಯಲಿ ರೋಮಾಂಚನಕಾರಿ ದೃಶ್ಯ ನಿರ್ಮಾಣವಾಗಿದೆ
ಚಿನ್ನದ ಬಣ್ಣದ ಮುತ್ತು ರತ್ನಗಳನ್ನು ಉದುರಿಸುವಂತಿದೆ
ಬಿಳಿಯ ಪರದೆಯ ಮೇಲೆ
ವಜ್ರದ ಕುಂಚ ಹಿಡಿದಂತಿದೆ
ಹೃದಯಂಗಮ ದೃಶ್ಯ ಕಂಗಳ ತಣಿಸಿದೆ
ಪ್ರಕೃತಿ ಮಾತೆಯ ಸಂಭ್ರಮ
ತಿಳಿಸಿದೆ ಎನ್ನ ಮನ.
ಸುಂದರ ಸೂರ್ಯ ಕಿರಣಗಳ ಆಗಮನ
ಗಿಳಿ ಕೋಗಿಲೆಗಳ ಸುಮಧುರ ಗಾಯನ
ಅರಳಿದ ಮಲ್ಲಿಗೆ ಸಂಪಿಗೆ ಗಮಗಮ
ಹಸಿರಿನಿಂದ ಕಂಗೊಳಿಸುವ ತಾಯಿಯ ಮಡಿಲಲಿ ಹಗುರ ಗೊಳುತಿದೆ ಮೈಮನ ಪ್ರಕೃತಿ ಮಾತೆಯ ಸಂಭ್ರಮ ತಣಿಸಿದೆ ಎನ್ನ ಮನ.
ಚಿಗುರೊಡೆದ ಮರಗಳು
ಮುದ ನೀಡುವ ಹೊಲಗಳು
ಸಂತಸದಿ ಮರದಿಂದ ಮರಕೆ
ಹಾರುವ ಕೆಂಪು ನಯನದ
ರತ್ನ ಪಕ್ಷಿಗಳು.
ಜಗತ್ತನ್ನೇ ಮರೆತು ನೀರಲಿ
ಆಡುವ ಮೀನುಗಳು
ಪ್ರಕೃತಿ ಸೌಂದರ್ಯ ಸವಿಯುತ
ನೃತ್ಯ ಮಾಡುವ ನವಿಲುಗಳು
ಪ್ರಕೃತಿ ಮಾತೆಯ ಸಂಭ್ರಮ ತಣಿಸಿದೆ ಎನ್ನ ಮನ.
ಸದಾ ಹೊಸತನು ಸೂಸುವ
ಪ್ರಕೃತಿ ಮಾತೆಯ ಮಡಿಲಲಿ
ಹಳತನು ಮರೆಯೋಣ
ಗಿಳಿ ಕೋಗಿಲೆಯಂತೆ ಗಾನ ಗೈಯೋಣ
ಮೀನಿನಂತೆ ಜಗತ್ತನ್ನೇ ಮರೆತು
ಒಳಿತೆಂಬ ನದಿಯಲಿ ಆಡೋಣ
ಭೇದಭಾವ ಮರೆತು ಒಂದಾಗಿ
ಪ್ರಕೃತಿ ಮಾತೆಯ ಸಂಭ್ರಮ ಸವಿಯೋಣ ಸವಿಯೋಣ.



