ಕರ್ನಾಟಕ ರಾಜ್ಯೋತ್ಸವ ವಿಶೇಷ

ಸರಕಾರಿ ಕನ್ನಡ ಶಾಲೆ ಬಲಪಡಿಸುವುದು ಹೇಗೆ?

ನಾರಾಯಣ ರಾಠೋಡ

ಸರಕಾರಿ ಕನ್ನಡ ಶಾಲೆ ಬಲಪಡಿಸುವುದು ಹೇಗೆ?

ಸರಕಾರಿ ಶಾಲೆ ಎಂದರೆ ಎಲ್ಲರ ಮನದಲ್ಲೂ ಅಸಡ್ಡೆ, ಅಲ್ಲದೇ ಬೇರೆಯವರು ತಮ್ಮ ಮಕ್ಕಳಿಗೆ ದಾಖಲು ಮಾಡಿಸಿದರೂ ಅವರ ಮನಸ್ಸಿಗೆ ನೋವಾಗುವಂತೆ ಕನ್ನಡ ಶಾಲೆಯೇ ಅಯ್ಯೋ ಪಾಪ…..! ಎಂದು ಮುದಲಿಸುವವರು ತಾವೂ ಈ ಹಿಂದೆ ಕನ್ನಡ ಶಾಲೆಯಲ್ಲಿಯೇ ಕಲಿತಿದ್ದೇವೆ ಎಂಬುದನ್ನು ಮರೆತುಬಿಟ್ಟಿರುತ್ತಾರೆ. ತಮ್ಮ ಮಕ್ಕಳು ವಿಷಯಗಳನ್ನು ಎಷ್ಟು ಅಥೈ೯ಸಿಕೊಂಡಿದ್ದಾರೆ ಎನ್ನುವುದಕ್ಕಿಂತ ಪಟಪಟನೆ ಇಂಗ್ಲಿಷ್ ನಲ್ಲೇ ತಮ್ಮ ಮಕ್ಕಳು ಮಾತಾಡುತ್ತಾರೆಎನ್ನುವುದೇ ಮುಖ್ಯ ವಾಗುತ್ತದೆ.ಇಲ್ಲಿ ಎಷ್ಟೋ ಪಾಲಕರಿಗೆ ಇಂಗ್ಲಿಷ್ ಕೂಡ ಒಂದು ಭಾಷೆ ಅಷ್ಟೇ, ಎಂಬುದು ಯಾರಿಗೂ ತಿಳಿದಿಲ್ಲ ಅದೊಂದು ದೊಡ್ಡ ವಿಜ್ಞಾನ ಎಂದು ತಿಳಿದಿದ್ದಾರೆ. ಅದನ್ನು ಕಲಿತು ಬಿಟ್ಟರೆ ಈ ಪ್ರಪಂಚವನ್ನೇ ಗೆದ್ದಂತೆ ಎಂದು ಭಾವಿಸುತ್ತಾರೆ, ಆದರೆ ಅದೆಷ್ಟೋ ಜನ ನಮ್ಮ ಮಧ್ಯದಲ್ಲೇ ಕನ್ನಡ ಮಾಧ್ಯಮದಲ್ಲಿ ಓದಿ ಔನ್ನತ್ಯವನ್ನು ಪಡೆದಿರುವ ವಿಚಾರ ಗಣನೆಗೆ ತೆಗೆದುಕೊಳ್ಳುವುದಿಲ್ಲ.ಸರಿ ವಿಷಯಕ್ಕೆ ಬರೋಣ, ಕನ್ನಡ ಶಾಲೆಗಳನ್ನು ಬಲಪಡಿಸಬೇಕೆಂದರೆ. ಮೊದಲು ಸರಕಾರ ಶಾಲಾ ಕಟ್ಟಡಗಳನ್ನು ಸುಸಜ್ಜಿತಗೊಳಿಸಬೇಕು. ಶಾಲಾ ಆವರಣ, ಆಟದ ಮೈದಾನ, ಗ್ರಂಥಾಲಯ, ಬೋಧನಾ ಕೋಣೆ, ಪ್ರಯೋಗಾಲಯಗಳು, ಮೂಲಭೂತ ಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರು, ಸಾರಿಗೆ ಸೌಕಯ೯, ಮುಖ್ಯವಾಗಿ ಕಾಲಕಾಲಕ್ಕೆ ಶಿಕ್ಷಕರ ನೇಮಕಾತಿ, ಅದೂ ಹೇಗಿರಬೇಕೆಂದರೆ, ನೇಮಕಾತಿ ಶಿಕ್ಷಕನ ಸಾಮರ್ಥ್ಯವನ್ನು ಅಳೆಯುವಂತಿರಬೇಕು ಇದರ ಅಥ೯ ಮುಖ್ಯ ವಾಗಿ ಶಿಕ್ಷಕನಿಗೆ ಬೋಧನಾ ಕೌಶಲ್ಯತೆ ಇದೆಯೇ? ಮಕ್ಕಳ ಮಾನಸಿಕತೆಯನ್ನು ಅಥ೯ ಮಾಡಿಕೊಳ್ಳುವ ಗುಣವಿದೆಯೇ? ಪ್ರೇರೇಪಣೆ, ವಿಷಯದತ್ತ ಗಮನಸೆಳೆಯುವಿಕೆ, ಬೋಧನಾ ಸಾಮಗ್ರಿ ಗಳನ್ನು ಉಪಯೋಗಿಸುವ ಸಾಮರ್ಥ್ಯ, ತೊಡಗಿಸಿಕೊಳ್ಳುವಿಕೆ, ಭಾಷಾಸ್ಪಷ್ಠತೆ, ವಿಷಯ ಪ್ರೌಢಿಮೆ, ಒಬ್ಬ ಶಿಕ್ಷಕನಿಗಿರಬೇಕಾದ ಸಾಮಾನ್ಯ ಜ್ಞಾನ, ಪ್ರಚಲಿತ ವಿಷಯಗಳ ಜ್ಞಾನ, ಶಾಲಾ ಆಡಳಿತದ ಜ್ಞಾನ, ತಾನು ಕಲಿಸಬೇಕಾಗಿರು ತರಗತಿ ವಿಷಯಗಳ ಪರಿಜ್ಞಾನ, ಇವೆಲ್ಲವುಗಳು ಆಧುನಿಕ ಶಿಕ್ಷಕನಿಗೆ ಅಗತ್ಯವಾಗಿ ಬೇಕಾಗುತ್ತದೆ. ಅಷ್ಟಾದರೆ ಸಾಲದು ಸರಕಾರಿ/ ಖಾಸಗಿ ದೇಶದ ಎಲ್ಲ ಶಾಲೆಗಳಲ್ಲಿಯೂ ಏಕಮೇವ ಶಿಕ್ಷಣ ಇದರ ಅಥ೯ ಒಂದೇ ಪಠ್ಯಕ್ರಮ ಇರಬೇಕಾಗುತ್ತದೆ [: ಸಂವಿಧಾನದ ಆಶಯವೂ ಅದೇ ಅಲ್ಲವೆ?. ಆದರೆ ವಾಸ್ತವವಾಗಿ ಏನಾಗಿದೆ? ಕೇಂದ್ರ ಪಠ್ಯಕ್ರಮ, ರಾಜ್ಯ ಪಠ್ಯಕ್ರಮ, ಆಂಗ್ಲ ಮಾಧ್ಯಮ, ರಾಜ್ಯ ಭಾಷಾ ಮಾಧ್ಯಮಗಳೆಂದು ಶಿಕ್ಷಣದಲ್ಲಿ ಭೇದ ಕಲ್ಪಿಸಿದೆ. ಸರಕಾರಿ ಶಾಲೆ ಕೇವಲ ಬಡ ಹಾಗೂ ಕೆಳಗಿನ ವಗ೯ದವರಿಗೆ ಮಾತ್ರ ಸೀಮಿತ ಎನ್ನುವಂತಾಗಿದೆ ಏಕೆ ಹೀಗೆ? ಎಂಬ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ. ಆದ್ದರಿಂದ ಮೊದಲು ಏಕಪ್ರಕಾರದ ಶಿಕ್ಷಣ ವ್ಯವಸ್ಥೆ, ತಂದರೆ ಶಿಕ್ಷಣ ದಲ್ಲಿ ಭೇದವೂ ಇರದು.

ಅಷ್ಟೇ ಅಲ್ಲ ಎಲ್ಲ ಸರಕಾರಿ ನೌಕರರು ತಮ್ಮ ಪ್ರತಿಷ್ಠೆ ಹಾಗೂ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ತಮ್ಮ ಮಕ್ಕಳು ಓದುತ್ತಿದ್ದಾರೆ, ಎಂಬ ಪರಿಕಲ್ಪನೆಯಿಂದ ಹೊರಬರಬೇಕು. ಮೇಲೆ ಹೇಳಿದ ಮೂಲಭೂತ ಸೌಕರ್ಯಗಳನ್ನು ಸರಕಾರಿ ಶಾಲೆಗಳಿಗೆ ನೀಡಿದ್ದಾದರೆ ಎಲ್ಲ ಸರಕಾರಿ ನೌಕರರು, ರಾಜಕಾರಣಿಗಳು, ಸಿರಿವಂತರು, ತಮ್ಮ ಮಕ್ಕಳನ್ನು ಸಹಜವಾಗಿ ಸರಕಾರಿ ಶಾಲೆಗಳಿಗೆ ಕಳಿಸುವುದಲ್ಲದೆ ಅವುಗಳ ಶ್ರೇಯೋಭಿವೃದ್ಧಿಗೂ ಕಾಳಜಿ ವಹಿಸಬಹುದು.


ನಾರಾಯಣ ರಾಠೋಡ ಉಪನ್ಯಾಸಕರು

Leave a Reply

Back To Top