ಅನುವಾದ ಸಂಗಾತಿ-ಉರ್ದು ಕವಿತೆ,ಎಲ್ಲಿಂದ ಬಂದನೋ…

ಕಾವ್ಯ ಸಂಗಾತಿ

ಎಲ್ಲಿಂದ ಬಂದನೋ..

ಉರ್ದು ಮೂಲ : ನಾಸೀರ್


ತೆಲುಗು : ಗೀತಾಂಜಲಿ (ಡಾ|| ಭಾರತಿ)


ಕನ್ನಡಾನುವಾದ : ಧನಪಾಲ‌ ನಾಗರಾಜಪ್ಪ

ನಾಸೀರ್ ಪರಿಚಯ

ಇವರು ಪೂರ್ಣ ಸೈಯದ್ ನಾಸೀರ್ ರಾಜಾ ಕಜ್ಮಿ. ನಾಸೀರ್ ಎಂಬುವುದು ಇವರ ಕಾವ್ಯನಾಮ. ಸ್ವಾತಂತ್ರ್ಯಪೂರ್ವ ಭಾರತದ ಪಂಜಾಬ್ ರಾಜ್ಯದ ಅಂಬಾಲದಲ್ಲಿ 08 ಡಿಸೆಂಬರ್ 1925ರಂದು ಜನಿಸಿದರು. ಓರ್ವ ಖ್ಯಾತ ಉರ್ದು ಸಾಹಿತಿ, ಪತ್ರಕರ್ತರಷ್ಟೇ ಅಲ್ಲದೇ ಪಾಕಿಸ್ತಾನ್ ರೆಡಿಯೋದ ಲಾಹೋರಿನ ಸಿಬ್ಬಂದಿಯ ಸಂಪಾದಕರಾಗಿಯೂ ಕೆಲಸ ಮಾಡಿದರು. ಗಜಲ್ ಕಾವ್ಯ ಪ್ರಕಾರದಲ್ಲಿ ಬಹುದೊಡ್ಡ ಸಾಧಕರು. ಬರ್ಗ್-ಈ-ನಾಯಿ, ದೀವಾನ್, ಪೆಹ್ಲಿ ಬಾರಿಶ್, ಹಿಜ್ರ್ ಕಿ ರಾತ್ ಕಾ ಸಿತಾರಾ ಮತ್ತು ನಿಶಾತ್-ಈ-ಖ್ವಾಬ್ – ಇವು ಇವರ ಕೆಲವು ಪ್ರಕಟಿತ ಕವನ ಸಂಕಲನಗಳು. 02 ಮಾರ್ಚ್ 1972ರಂದು ಲಾಹೋರಿನಲ್ಲಿ ತೀರಿಕೊಂಡರು. ಇವರ ಸಾವಿನ ಸ್ಮರಣಾರ್ಥವಾಗಿ 2013ರಲ್ಲಿ ಪಾಕಿಸ್ತಾನದ ಅಂಚೆ ಇಲಾಖೆ 15 ರೂಪಾಯಿಗಳ ಮುಖಬೆಲೆಯ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ.

ಎಲ್ಲಿಂದ ಬಂದನೋ…

ಕಳೆದಹೋದ ದಿನಗಳ ಗುರುತುಗಳನು ಹೊತ್ತುಕೊಂಡು
ಆತ ಅದೆಲ್ಲಿಂದ ಬಂದನೋ…
ಇಷ್ಟರಲ್ಲೇ ಅದೆಲ್ಲಿಗೆ ಹೊರಟುಹೋದನೋ…?
ನನ್ನನ್ನು ಕಲ್ಲೋಲದಲ್ಲಿ ಮುಳುಗಿಸಿದ
ವಿಚಿತ್ರ ಮಾನವನವನು…
ಅಪರಿಚಿತನು…
ಅಂದಿನ ಅಗಲಿಕೆಯ ರಾತ್ರಿಯ ಒಂಟಿ ನಕ್ಷತ್ರವವನು…
ಅವನು ಯಾರೋ ಅಲ್ಲ…!
ನನ್ನ ಸಹ ಯಾತ್ರಿಕ
ಎಲ್ಲರೂ ಸದಾ ಪ್ರಿಯಾತಿ ಪ್ರಿಯವಾಗಿ ಜ್ಞಾಪಿಸಿಕೊಳ್ಳುವ ನನ್ನ ಷಾಯರ್!
ಆದರೆ… ಆದರೆ… ಹತವಿಧಿ…
ನಿನ್ನೆ ರಾತ್ರಿಯವನು ಸತ್ತುಹೋದನೆಂದು ತಿಳಿಯಿತು
ಈ ರಾತ್ರಿ ಇನ್ನು ಯಾವ ರಾಗವೂ ಇರದ ದಾರಿಹೋಕ
ನಿನ್ನ ಕವಿ… ನಿನ್ನ ಸಹಾಯಕ… ವಿಜೇತನೂ ಕೂಡ!

ಈಗಷ್ಟೇ ಈ ಬೀದಿಯ ತಿರುವಿನಲ್ಲಿ ನೋಡಿದೆ
ಇಷ್ಟರಲ್ಲೇ ಅದೆಲ್ಲಿ ಅದೃಶ್ಯನಾದನೋ ಅವನು?

ಕಡು ಗಾಢವಾದ ಪದಗಳ ಸೊಬಗನು ತೋರಿಸಿ
ಅಷ್ಟೇ ಸಿಹಿಯಾದ ಹಾಡನು ಕೇಳಿಸಿ
ಸಾಯಂಕಾಲದ ನಕ್ಷತ್ರವಾಗಿ ಬಂದವನು…
ಮತ್ತಷ್ಟು ನಜ್ಮಾಗಳು… ಗಜಲ್ಲುಗಳು ಕೊಡುವುದಾಗಿ ಭಾಷೆಕೊಟ್ಟವನು…
ನಮ್ಮನ್ನು ನಂಬಿಸಿ…
ಅಷ್ಟರಲ್ಲೇ ಒಂದು ಹಗಲುಗನಸಾಗಿ ಉಳಿದುಹೋದ!

ಈ ಉಲ್ಲಾಸವಾದ ರಾತ್ರಿ…
ಇಲ್ಲವೆ ವಿಷಾದವಾದ ಹಗಲು…
ಏನಾದರೇನಂತೆ…??
ಪ್ರತಿಕ್ಷಣ ಅವನನು ನನ್ನ ಕಂಗಳು ಹುಡುಕುತ್ತಲೇ ಇರುವವು
ಅವನೊಂದು ಹೂಗಳ ಪರಿಮಳವೋ
ಸಾಯಂಕಾಲದ ಹಾಡುಗಳ ಪ್ರವಾಹವೋ…
ಇನ್ನೇನಾದರೂ ಆಗಲಿ…
ನನ್ನೆದೆಯೊಳಗೆ ಇಂಗಿಹೋದ

ಅವನು ರಭಸವಾಗಿ ಜ್ಞಾಪಕಗಳುಕ್ಕುವ ನದಿಯ ನೆರೆಯಲ್ಲ
ಹಾಗೆಂದು…
ನಿಧಾನವಾಗಿ ಸುರಿವ ಮಳೆಗಾಲದ ಮಂಜಿನ ಬಿಂದುವೂ ಅಲ್ಲ
ಪ್ರತಿ ಕ್ಷಣ ನನ್ನೆದೆಯ ಗಾಯದ ಆಳದಲ್ಲಿ…
ನಿಂತು ನಿಂತು ಚುಚ್ಚುವ ನೋವಾಗಿ ತುಂಬಿಕೊಂಡವನು!

ನೀಲಿ ಮೇಘಗಳ ಜೊತೆಯಲಿ
ಬದಲಾಗುತ್ತಿರುವ ಬಾನಿನಂತೆ…
ಈಗೀಗಲೇ ಜೀವ ಚೇತರಿಸಿಕೊಳ್ಳುತಿರಲು..
ಭಾರವಾದ ರಾತ್ರಿಗಳು ಹಗುರವಾಗುತಿರಲು…
ಯಾವ ಹಗಲಿನಲಿ…
ಅವನು ಎಷ್ಟು ಯುಗಗಳಾಗಿ ಹಾಗೆ ನಿಂತುಬಿಟ್ಟಿದ್ದಾನೋ?
ಆದರೆ…
ಈಗ ಮಾತ್ರ ಸರಿದು ಹೋಗುತಿಹನು!
ಯಾರಾದರೂ ತಡೆಯಿರಿ…

ಅವನಿಗೆ ಎಂದೂ…
ಆಕಾಂಕ್ಷೆಗಳೊಂದಿಗೆ ತುಂಬಿಹೋದ ಗಮ್ಯವೊಂದು ಇದ್ದೇ ಇರುತ್ತದೆ
ಅದನು ಸೇರಲು ಸಾವಿರದೊಂದು ಹೃದಯದ್ವಾರಗಳು ಇದ್ದೇ ಇರುತ್ತವೆ
ಇದೇ ನನಗೂ… ಅವನಿಗೂ ಇರುವ ವೈರುಧ್ಯ!
ಕಾಲದೊಂದಿಗೆ…
ನಾನು ಕಳೆದುಹೋದೆ
ಅವನು ನಿಂತುಹೋದ!

ಆತನೊಟ್ಟಿಗೆ…
ಕಳೆದ ಉತ್ಸಾಹಭರಿತ ದಿನಗಳನು ಮರೆತು
ಒಡೆದು ಚೂರಾಗಿ ದಾರಿ ಮಧ್ಯೆದಲಿ ನಿಂತುಹೋದೆ ನಾನು
ಈ ಯಾನದಲಿ…
ನನ್ನ ಸಹ ಯಾತ್ರಿ
ಪಯಣದ ಬಳಲಿಕೆ ರವೆಯಷ್ಟೂ ಇಲ್ಲದೆ
ಸಾಗಿಹೋದನವನು

ಅವನು ಸತ್ತುಹೋದನೆ…?
ನಿಜವೇ… ಅವನು ಸತ್ತುಹೋದ!
ನನ್ನ ನೆತ್ತರೆಲ್ಲಾ ನೀರು ನೀರಾದರೂ…
ಪ್ರಿಯವಾದವರ ಕಣ್ರೆಪ್ಪೆಗಳಾದರೂ ತೇವವಾಗಲಿಲ್ಲ
ರಾತ್ರಿಯಿಡೀ ಹೃದಯದಲಿ ಕಂಬನಿಯ ಕಟ್ಟೆಯೊಡೆದರೂ…
ಯಾಕೋ ಆಸಕ್ತಿ ತೋರದೆ…
ನಿಲ್ಲದೆ ಹೊರಟುಹೋದನವನು

ಮತ್ತಿನಲ್ಲಿ ತೂಗುವ ಪಾನಶಾಲೆಗಳನು…
ರಾತ್ರಿಯಲಿ ನಿದ್ದೆ ಬಿಡಿಸುವವನಿಗೆ ಏನಾಯಿತು ಇಂದು…
ಏನು ಅನಿಸಿತೋ ಇಂದು??
ಸಂಜೆಯಾದೊಡನೆ ಮನೆಗೆ ಹೊರಟುಹೋದ!

ಯಾರ ಎದೆಯ ಮೇಲೆ
ನಿರುಮ್ಮಳವಾಗಿ ಕೈಗಳಿಟ್ಟು ಗಮ್ಯದತ್ತ ಸಾಗಿದೆನೋ…
ಆ ರಹದಾರಿಯಿಂದಲೇ ಯಾಕೋ ಇಂದು
ಗೆಳೆಯ, ತಲೆ ತಗ್ಗಿಸಿಕೊಂಡು ಹೊರಟುಹೋದನಿಂದು
ಕಳೆದುಹೋದ ದಿನಗಳ ಗುರುತುಗಳನು ಹೊತ್ತುಕೊಂಡು
ಅವನು ಅದೆಲ್ಲಿಂದ ಬಂದನೋ…
ಇಷ್ಟರಲ್ಲೇ ಅದೆಲ್ಲಿಗೆ ಹೊರಟುಹೋದನೋ…
ಎಷ್ಟೆಷ್ಟು ಆಸೆಗಳ ಆಣೆಯಿಟ್ಟು ನಂಬಿಸಿ
ಅಷ್ಟರಲ್ಲೇ ಹಗಲುಗನಸಾಗಿ ಉಳಿದುಹೋದ…
ನಿನ್ನೆಯೇ…
ಬೀದಿಯ ತಿರುವಿನಲ್ಲಿ ಕಾಣಿಸಿದ
ಈ ದಿನ ಮಾಯವಾಗಿಹೋದ….!


ಉರ್ದು ಮೂಲ : ನಾಸೀರ್
ತೆಲುಗು ಅನುವಾದ : ಗೀತಾಂಜಲಿ (ಡಾ|| ಭಾರತಿ)
ಕನ್ನಡಾನುವಾದ : ಧನಪಾಲ‌ ನಾಗರಾಜಪ್ಪ

3 thoughts on “ಅನುವಾದ ಸಂಗಾತಿ-ಉರ್ದು ಕವಿತೆ,ಎಲ್ಲಿಂದ ಬಂದನೋ…

Leave a Reply

Back To Top