ಗೊಂಬೆಯಾಗಿಸಿ ಬಿಡು ನನ್ನ

ಕಾವ್ಯ ಸಂಗಾತಿ

ಹನಿಬಿಂದು

ಗೊಂಬೆಯಾಗಿಸಿ ಬಿಡು ನನ್ನ

ಕೆಟ್ಟದಾಗಿ ಆಡುವವರ ಜೊತೆಯಲಿ
ಪರರ ದೂಷಿಸುವ ಜನರ ನಡುವಲಿ
ಇತರರಿಗೆ ಬೇಡದ ಬಯಸುವವರ ಸಂಗದಲಿ
ಗೊಂಬೆಯಾಗಿಸಿ ಬಿಡು ನನ್ನ ಗುರುವೇ…

ಅಳುತಿಹ ಬಾಳಲಿ ಅಸಹಾಯಕ ಪರಿಸ್ಥಿತಿಯಲಿ
ನಗುವನು ತರಲು ಆಗದ ಸಮಯದಲಿ
ಹಲವರ ನೋವಿಗೆ ಸ್ಪಂದಿಸಲು ಅವಕಾಶ ಇಲ್ಲದ ಸ್ಥಳದಿ
ಗೊಂಬೆಯಾಗಿಸಿ ಬಿಡು ನನ್ನ ಗುರುವೇ…

ನೋವಿನ ಕ್ಷಣದಲಿ ನೋವನು ಹಂಚುವಲಿ
ನಲಿವೇ ಕಾಣದ ಬಾಳಿನ ಎದುರಲಿ
ಕಣ್ಣೀರ ಧಾರೆ ಇಳಿಯುವ ಕ್ಷಣದಲಿ
ಗೊಂಬೆಯಾಗಿಸಿ ಬಿಡು ನನ್ನ ಗುರುವೇ…

ಮೋಸ ವಂಚನೆಗಳ ನೋಡಿ ಸಹಿಸುವಲಿ
ಲಂಪಟರ ಧನಿಕರ ಸುಳ್ಳಿನ ಎದುರಾಳಿ
ಕಾಮುಕರ ನೇರ ದೃಷ್ಟಿಯ ಸಹಿಸುವಲಿ
ಗೊಂಬೆಯಾಗಿಸಿ ಬಿಡು ನನ್ನ ಗುರುವೇ…

ಜಾತಿ ಮತಗಳ ದೊಂಬಿ ಗಲಾಟೆಯಲಿ
ಹಣವ ಗಳಿಸುತ ಮಾನವತೆ ಮರೆವಲ್ಲಿ
ದುಡ್ಡೇ ದೊಡ್ಡಪ್ಪ ಎನ್ನುವ ಲೋಕದಲಿ
ಗೊಂಬೆಯಾಗಿಸಿ ಬಿಡು ನನ್ನ ಗುರುವೇ…

ನ್ಯಾಯ ನೀತಿಗೆ ಬೆಲೆ ಇರದಿರುವೆಡೆಯಲಿ
ಕಾಯಕದ ಕಷ್ಟ  ದುಡಿಮೆಯು ಸಾಲದಿರುವಲ್ಲಿ
ಸಾಲದ ಬಲೆಯಲಿ ಬೀಳುವ ಬದುಕಿನಲಿ
ಗೊಂಬೆಯಾಗಿಸಿ ಬಿಡು ನನ್ನ ಗುರುವೇ…
——————

Leave a Reply

Back To Top