ಈ ಹೂಗಳೇನು ಅಪರಾಧ ಮಾಡಿದವು ಹೇಳು?-ತೆಲುಗು ಕವಿತೆ

ಅನುವಾದ ಸಂಗಾತಿ

ಈ ಹೂಗಳೇನು ಅಪರಾಧ ಮಾಡಿದವು ಹೇಳು?

ತೆಲುಗು ಮೂಲ : ಗೀತಾಂಜಲಿ (ಡಾ||ಭಾರತಿ)

ಕನ್ನಡಾನುವಾದ : ಧನಪಾಲ‌ ನಾಗರಾಜಪ್ಪ

ಈ ಹೂಗಳು ಹೀಗೆ ಕೈಗಳಲ್ಲಿದ್ದರೆ ಸಾಕು
ಮೈ ಎಲ್ಲಾ…
ಸುವಾಸನೆಯ ಗಿಡವಾಗಿಹೋಗದೆ ಇನ್ನೇನಾಗುವುದು?!
ಈ ಹೂಗಳಿಗೆಷ್ಟು ಹೆಸರುಗಳು – ಊರುಗಳು
ಅಂದ ಚೆಂದಗಳು – ಅನುಬಂಧಗಳು
ವರ್ಣಗಳು – ವಾಸನೆಗಳು!
ಈ ಹೂಗಳಿಗೆಷ್ಟು ಶಾಯರಿಗಳು – ಗಜಲ್ಲುಗಳು
ಕತೆಗಳು-ಕವಿತೆಗಳು, ಮಾತುಗಳು – ಮೌನಗಳು!
ಈ ಹೂಗಳಿಗೆಷ್ಟು ದೇಶಗಳು – ಭೂಮಿಗಳು
ಮನೆಗಳು – ಮಸಣಗಳು
ಈ ಹೂಗಳಿಗೆಷ್ಟು ತೋಟಗಳು – ಮರುಭೂಮಿಗಳು!

ಅವೆಲ್ಲಾ ಸರಿ… ಇದು ನೋಡಿ
ಈ ಹೂಗಳಿಗೆಷ್ಟು ಸಮಾನತೆ! ಎಷ್ಟು ಲೌಕಕಿತೆ!
ಕುಲವೂ ಇಲ್ಲ ಮತವೂ ಇಲ್ಲ
ಕದಲುವ ಮನುಷ್ಯರ ಮೇಲೆ
ಕದಲದ ಶವಗಳ ಮೇಲೆ
ಎಲ್ಲರ ಮಸಣಗಳಲ್ಲೂ ಸಮಾಧಿಗಳ ಮೇಲೆ
ಮಂದಿರ, ಮಸೀದಿ, ಚರ್ಚುಗಳಲ್ಲಿ
ಒಂದಾಗಿ ಒಂದು ಮಾಲೆಯಾಗಿ ತೂಗುತ್ತವಲ್ಲಾ!
ಒಂದೇ ರೀತಿ ಸುವಾಸೆಗಳನು ಸೂಸುವವಲ್ಲಾ!
ರಾಮ, ಖುದಾ, ಜೀಸಸ್…
ಯಾರನ್ನಾದರೂ ಒಂದೇ ತರಹ ಮಾತನಾಡಿಸುವವು
ನೀರುಣಿಸಿದ ತೋಟದ ಮಾಲಿಯನು
ಮಾಲೆಗಳನು ಕಟ್ಟುವ ಕರಗಳನು
ನಿಮ್ಮ ವರ್ಣ, ವರ್ಗ…
ಏನೆಂದು ಏನಾದರೂ ಅಸಲು ಕೇಳುವವೆ?

ಈ ಹೂಗಳಿಗೆಷ್ಟು ಎಳೆಮನಸು!
ಈ ಹೂಗಳಿಗೆಷ್ಟು ಪರಿಪಕ್ವ ವೃದ್ಧಾಪ್ಯದ ಸೊಗಸು!
ಈ ಹೂಗಳು ಹೀಗೆ ಕೈಗಳಲ್ಲಿದ್ದರೆ
ಮೊಗವು ತನ್ನಷ್ಟಕ್ಕೆ ತಾನೇ ಅರಳುವುದು
ಕಂಗಳಲಿ ಹುಣ್ಣುಮೆಯ ಕಾಂತಿ ತುಂಬುವ
ಮಹಿಮೆ ಈ ಹೂಗಳದೇ ಅಲ್ಲವಾ!
ಈ ಹೂಗಳು ಹೀಗೆ ಕೈಗಳಲ್ಲಿದ್ದರೆ ಸಾಕು
ಹೃದಯವು ಹೀಗೆ…
ಸುಗಂಧದಿಂದ ತುಂಬಿಹೋಗದೆ ಇನ್ನೇನಾಗುವುದು?
ಅಸಲು ಈ ಹೂಗಳಿಗಿಷ್ಟು ಕ್ಷಮಾ ಗುಣವೆಲ್ಲಿಯದು?!
ಬಾಡಿದ ಸುಮಗಳನು…
ಪೂರಕೆಯಿಂದ ಗುಡಿಸಿ ಬಿಸಾಡುವ ಧೂರ್ತರು!
ನೆಲದ ಮೇಲೆ ಬಾಡಿದ ಕುಸುಮಗಳ
ಕಳೇಬರಗಳನು ಕಂಡು ದುಃಖಿಸದೆ
ಮರುಕ್ಷಣವೇ ತಾಜಾ ಮಾಲೆಗಳಾಗಿ
ನಿನ್ನ ಕೈಗಳಲ್ಲೋ… ಜಡೆಗಳಲ್ಲೋ…
ನಿನ್ನ ಮನೆಯ ಬಾಗಿಲ ತೋರಣದಲ್ಲೋ
ಉಯ್ಯಾಲೆಯಾಡುತ ಆನಂದವಾಗಿ
ಕಿಲಕಿಲ ನಗುವವಲ್ಲಾ!
ಥೇಟ್ ಅಮ್ಮನ ದಯಾಗುಣದಂತೆ!
ಈ ಹೂಗಳಿಗೆಷ್ಟು ಔದಾರ್ಯವೋ!
ಯಾವ ಬಂಧವೂ ಇರದ
ಮನುಷ್ಯರ ಮೃತಶಯ್ಯೆಯ ಮೇಲೆ ಕೂತು
ಮೃತ್ಯುವಿಗೂ ಕೂಡ ಅತ್ತರನು ಚೆಲ್ಲುವವು
ನಿನ್ನ ದುಃಖವಾಗಿ ಅವೂ ಕೂಡ ದಿಗಿಲಾಗಿ ಮುಕುಳಿಸುವವು
ಈ ಹೂಗಳಿಗೆಷ್ಟು ವಿನಮ್ರತೆ!
ಅಹಂನಿಂದ ಹಾರಾಡುವ
ಮನುಷ್ಯನೆದುರೂ ಕೂಡ ವಿನಯದಿಂದ ತಲೆಬಾಗುವವು!

ಈ ಹೂಗಳು…
ಬರೀ ಸುಕುಮಾರವನ್ನಷ್ಟೇ ಅಲ್ಲ;
ಕಠಿಣವಾದ ಮುಳ್ಳುಗಳಾಗಿ ಚುಚ್ಚುತ
ನಿನ್ನನು ದಾರಿ ತಪ್ಪದಂತೆ ಎಚ್ಚರಿಸುವವು
ಅದಕ್ಕೇ ಹೂಗಳು…
ನೆಲದ ಮೇಲೆ ಮೂಡುವ ದಿಗ್ದದರ್ಶನಗಳು!
ಹೂಗಳು ತೆಳುವಾದ ದಳಗಳಂತೆಯೇ ಇರುವುದಿಲ್ಲ
ಮರುಭೂಮಿಯ ಹೂಗಳಂತೆ ರೌದ್ರವಾಗಿಯೂ ಇರುವವು!
ನಿನಗೆ…
ಮರುಭೂಮಿಯ ದಾಹ ತಣಿಸಿಕೊಳುವ
ಜೀವನಸಾರ ಬೋಧಿಸುವವು
ಅದಕ್ಕೇ ಹೂಗಳು ಪಾಠ ಮಾಡುವ ಗುರುಗಳು!
ಇಷ್ಟಕ್ಕೂ ಹೂಗಳು…
ರಾತ್ರಿಗೆಲ್ಲಾ ಬಾಡಿಹೋಗಿ ಉದುರಿಹೋಗುವವು ಎಂದುಕೊಂಡಿಯಾ
ಅವು ನಿಶ್ಶಬ್ದವಾಗಿ ಭೂಮಿಯೊಳಗೆ
ನಾಳೆಯ ಬೀಜಗಳನು ನಾಟುವ ರೈತರಾಗುವವು

ಕ್ರೂರಿಗಳ ಸಾವನೂ ಕೂಡ ಸಾದರವಾಗಿ ಸಾಗುಹಾಕುವವು
ಇಷ್ಟು ಕಾರುಣ್ಯಭರಿತ ಹೂಗಳನು
ಪ್ರೀತಿಸದಿರಲು ಹೇಗೆ ಸಾಧ್ಯ?
ಗಿಡದಿಂದೆಷ್ಟೇ ಕಿತ್ತರೂ
ಜೊಂಪಾಗಿ ಅರಳುವ ಈ ಹೂಗಳು
ನೀನು ದಿನವೂ ಕೊಲ್ಲುವ ಹೂಗಳೇ ಅಲ್ಲವೆ?!
ನಿನ್ನ ತುಟಿಗಳೊಳಗೆ ನಿನ್ನ ಕಣ್ಣುಗಳೊಳಗೆ
ನಿನ್ನ ಉಸಿರಿನೊಳಗೆ ಜೀವನ ಲಾಲಸೆಯನು ತುಂಬುವವು
ನಿನ್ನ ಮನೆಯನು, ನಿನ್ನ ತೋಟವನು
ನಿನ್ನ ಆಕಾಶದ ಕತ್ತಲನು, ಮೇಘಗಳನು
ಸೂರ್ಯ-ಚಂದ್ರರನು
ಎಡೆಬಿಡೆದ ಬೇಸರ ತುಂಬಿದ ನಿನ್ನ ಹಗಲನು
ನಿದ್ದೆಬಾರದ ರಾತ್ರಿಗಳನು
ನಿನ್ನ ಕಲ್ಲೋಲ ಅಸಂಪೂರ್ಣ ಕನಸುಗಳನು
ಮಾರ್ಮಿಕವಾದ ಸಂದೇಶಗಳಿಂದ ಸುವಾಸಿತವಾಗಿಸುವವು!
ನಿನ್ನ ಏಕಾಂತದ ದುಃಖಗಳನು
ಬಚ್ಚಿಡಲಾಗದ, ಹೊರಲೂ ಆಗದ
ಭಾರವಾಗಿಹೋದ ನಿನ್ನ ರಹಸ್ಯ ಪ್ರೀತಿಯನು ಸಾಂತ್ವನಿಸುವವು!
ಈ ಹೂಗಳನು ಹೀಗೆ ಕೈಗಳಲಿ
ಹಿಡಿದುಕೊಂಡರೆ ಏನು ಬರುವುದು ಹೇಳು?
ನಿನಗೆ ಚೂರು ಆಸೆ ನೀಡುತ
ಸ್ವಲ್ಪವಾದರೂ ಆಸರೆಯಾಗಿರುವವಲ್ಲಾ!
ಮಳೆಯಲಿ… ಬಿಸಿಲಲಿ…
ಬೆಳದಿಂಗಳಲಿ… ಕಾರಿರುಳಲಿ…
ಚಳಿಯಲಿ… ಗಾಳಿಯಲಿ…
ಸಮಸ್ತ ಋತುಗಳಲಿ ನಿನಗಾಗಿ ಅರಳುವ ಹೂಗಳು
ಮಣ್ಣಿನಗಂಧಕೆ ಜುಗಲ್ಬಂದಿಯಾಡುವ ಹೂಗಳು
ಪ್ರೀತಿಯಲ್ಲಿದ್ದಾಗಿನ ನಿನ್ನದೆಯಂತೆ ನಾಟ್ಯವಾಡುವ ಹೂಗಳು
ಪ್ರೇಯಸಿಯನು ಕಂಡಕ್ಷಣದ ಬೆಳದಿಂಗಳು ಕುಡಿದ ತಾರೆಗಳಂತೆ
ಹೊಳೆಯುವ ನಿನ್ನ ಕಂಗಳಂತಹ ಹೂಗಳು
ಅವಳು ನಗುವಿನಂತಹ ಹೂಗಳಲ್ಲವೆ!

ಈ ಹೂಗಳಿಗೆಷ್ಟು ಮಾಧುರ್ಯ!
ಸಿಹಿಯಾದ ಜೇನು ತುಂಬಿಕೊಳುವ ಹೂಗಳು
ಜೀವನವಿಡೀ ನಿನ್ನೊಡನೆ ನಡೆಯುವ ಹೂಗಳು
ಸತ್ತ ಮೇಲೂ ಸುವಾಸನೆ ಸೂಸುವ ಹೂಗಳು
ನಿನ್ನನು ಏನು ಮಾಡಿದವೆಂದು ಅರೆಕ್ಷಣದಲಿ ಕಿತ್ತುಬಿಡುವೆ?!
ಹೂಗಳಿಗಿಂತ ನೀನ್ಹೇಗೆ ಮಿಗಿಲು ಹೇಳು?!
ಇಷ್ಟು ಭಿನ್ನವಾದ ಬಣ್ಣದ ಹೂಗಳನು ಸಹಿಸಲಾರೆಯೇನೋ?
ಕಾಷಾಯದ ಬಣ್ಣವೊಂದೇ ಸಾಕೇನೋ ನಿನಗೆ?!
ಸುಟ್ಟಬಿಡುವೆಯಾ ತೋಟಗಳನು?
ಕತ್ತರಿಸಿಬಿಡುವೆಯಾ ಹೂ ಗಿಡಗಳು?
ಹೂಗಳ ತೋಟಗಳಲಿ ತ್ರಿಶೂಲಗಳನು ನೆಡುವೆಯೇನು?
ಪರಿಮಳಿಸುವ ಪುಷ್ಪಗಳನು ಕತ್ತಲ ಕೋಟೆಗಳಲಿ ಬಂಧಿಸುವೆಯೇನು?
ಬಹುಶಃ…
ಪಶುಗಳ ತರಹ…
ಪುಷ್ಪಕೊಂದು ಕುಲವನು
ಪರಿಮಳಕೊಂದು ಮತವನು
ಇನ್ನು ಪ್ರಕಟಿಸುವೆಯೇನು?
ಏನು ಮಾಡುವೆ ಹೇಳು?
ಮನುಷ್ಯರನು ಬಿಡು…
ಈ ಹೂಗಳೇನು ಅಪರಾಧ ಮಾಡಿದವು ಹೇಳು?!


ತೆಲುಗು ಮೂಲ : ಗೀತಾಂಜಲಿ (ಡಾ||ಭಾರತಿ)
ಕನ್ನಡಾನುವಾದ : ಧನಪಾಲ‌ ನಾಗರಾಜಪ್ಪ

One thought on “ಈ ಹೂಗಳೇನು ಅಪರಾಧ ಮಾಡಿದವು ಹೇಳು?-ತೆಲುಗು ಕವಿತೆ

Leave a Reply

Back To Top