ಕಾಂತಾರ-ನೆಲದ ಮಣ್ಣಿನ ಘಮಲು

ಅಂಕಣ ಸಂಗಾತಿ

ಸಿನಿ ಸಂಗಾತಿ

ಕುಸುಮ ಮಂಜುನಾಥ್

ಕಾಂತಾರ-ನೆಲದ ಮಣ್ಣಿನ ಘಮಲು

ಆಗ ತಾನೇ ಬಿದ್ದ ಮಳೆಗೆ ಏಳುವ ಮಣ್ಣಿನ ವಾಸನೆಯ ಘಮಲು ಅವರ್ಣನೀಯ . ಇಂತದ್ದೇ ಮಣ್ಣಿನ ವಾಸನೆಯನ್ನು ಕರಾವಳಿ ಸಂಸ್ಕೃತಿಯ ಪರಿಮಳವನ್ನು ಆಹ್ಲಾದಕರವಾಗಿ ಕಟ್ಟಿ ಕೊಡುವ ಸಿನಿಮಾ “ಕಾಂತಾರ(“ಒಂದು ದಂತಕಥೆ ) ಈ ವಿಮರ್ಶೆ ಬರೆಯುವ ವೇಳೆಗಾಗಲೇ ಕನ್ನಡ ಸಿನಿಮಾ “ಕಾಂತಾರ “ಎಲ್ಲೆಡೆ ಮನೆ ಮಾತಾಗಿದೆ .ಸಿನಿಮಾ ವೀಕ್ಷಕರಿಗೆ ರಸದೌತಣವನ್ನು ನೀಡಿ ಅಬ್ಬರಿಸುತ್ತಿದೆ.

      ಈ ಅಪ್ರತಿಮ ಯಶಸ್ಸಿನ ಹಿನ್ನೆಲೆಯನ್ನು ಗಮನಿಸಿದಾಗ ಅಲ್ಲಿ ಕಾಣುವುದು ಹಲವು ಅಂಶಗಳು .ಕರಾವಳಿ ಸಂಸ್ಕೃತಿಯ ಜೀವಾಳವಾದ ಭೂತಾರಾಧನೆ, ಭೂತಕೋಲ, ಕಂಬಳದೋಟ ಇವೆಲ್ಲವನ್ನು ಅಚ್ಚುಕಟ್ಟಾಗಿ  ಚಿತ್ರೀಕರಿಸಿ ಚಿತ್ರದ ಕಥೆಯೊಂದಿಗೆ ಮಿಳಿತಗೊಳಿಸಿರುವುದು ಚಿತ್ರದ ಮುಖ್ಯ ಆಕರ್ಷಣೆಯಾಗಿದೆ. ಕರಾವಳಿಯ ಆಚರಣೆಗಳ ರಸಭರಿತ ಚಿತ್ರಣ ಕಾಡಿನ ನಿಗೂಢತೆಗಳ ಸೆರೆ ಚಿತ್ರಕಥೆಯಲ್ಲಿನ ಹೊಸತನ ಈ ಚಿತ್ರವನ್ನು ಗೆಲ್ಲಿಸಿದೆ.

            ಮಿರಿ ಮಿರಿ ಮಿಂಚುವ ಆಧುನಿಕ ಸೆಟ್ ಗಳಿಲ್ಲದೆ ಐಟಂ ಸಾಂಗ್ ಇಲ್ಲದೆ ಇಮೇಜನ್ನು ಹೊಂದಿರುವ ಹೀರೋ ಇಲ್ಲದೆ ಗ್ಲಾಮರ್ ಬೊಂಬೆಯಂತಹ ನಾಯಕಿ ಇಲ್ಲದೆ  ಚಿತ್ರ ಗೆದ್ದಿರುವುದು ಮತ್ತೊಂದು ಗರಿ.

        ಕಾಂತಾರ – ದಟ್ಟ ಅರಣ್ಯ, ಆ ದಟ್ಟ ಅರಣ್ಯದ ಅಂಚಿನಲ್ಲಿ ವಾಸಿಸುವ ಮುಗ್ಧ ಜನ ಭೂತಾರಾಧನೆಯನ್ನು ಮಾಡುವವರು, ಅವರಿಗೊಬ್ಬ ನಾಯಕ ಶಿವ ( ರಿಷಬ್ ಶೆಟ್ಟಿ ) ಭೂತ ಕಟ್ಟುವ ಗುಂಪಿಗೆ ಸೇರಿದ ಶಿವ ರೆಬೆಲ್. ಅವರಿಗೆಲ್ಲ ಒಬ್ಬ ಶ್ರೀಮಂತ ಒಡೆಯ ದೇವೇಂದ್ರ (ಅಚ್ಚುತ್ ಕುಮಾರ್ ), ಅಲ್ಲಿನ ಅರಣ್ಯವನ್ನು ಕಾಯುವ ಅರಣ್ಯ ಅಧಿಕಾರಿಯಾಗಿ ಶಿಸ್ತುಬದ್ಧ ಅಧಿಕಾರಿ ಮುರಳಿಧರ್ (ಕಿಶೋರ್) ಈ ಮೂರು  ಮುಖ್ಯಪಾತ್ರಗಳೊಂದಿಗೆ ಕಥೆ ಕಟ್ಟಿದ್ದಾರೆ.

       ಕಾಡಿನಂಚಿನಲ್ಲಿ ವಾಸಿಸುವ ಮುಗ್ಧ ಜನ ಬಡವರು ವಿದ್ಯೆ ಇಲ್ಲದವರು ಕಾಡಿನೊಂದಿಗೆ  ಅವರ ಬದುಕು ತಳುಕು ಹಾಕಿಕೊಂಡಿದೆ. ಕಾಡನ್ನು ಕಡಿಯದೆ ಜತನವಾಗಿ ಕಾಪಾಡಬೇಕೆಂಬ ಉದ್ದೇಶದ ಅರಣ್ಯ ಅಧಿಕಾರಿ ಮತ್ತೊಂದೆಡೆ ಇವರ ಜೊತೆಗೆ ಲಾಲಸೆಯ ಬುದ್ಧಿಯ ಜಮೀನ್ದಾರನಿಗೆ ತನ್ನ ಪೂರ್ವಜರಿಂದ ಬಳುವಳಿಯಾಗಿ ಕಾಡು ಮಕ್ಕಳಿಗೆ ದಾನವಾಗಿ ದೊರೆತ ಭೂಮಿಯನ್ನು ಹೇಗಾದರೂ ಹಿಂದೆ ಪಡೆಯಬೇಕೆಂಬ ಹುನ್ನಾರ .ತನ್ನೊಳಗೆ ವಿಷವನ್ನು ತುಂಬಿಕೊಂಡ ಭೂ ಒಡೆಯ ದೇವೇಂದ್ರನ ಮುಖವಾಡ ಅರಿವಿಗೆ ಬರುವ ವೇಳೆಗೆ ಮುಗ್ಧ ನಾಯಕ ಶಿವ ಅಸಹಾಯಕ . ಅವನು ಹೆಮ್ಮರದಂತೆ ಬೆಳೆದ ಈ ವಿಷ ವೃಕ್ಷ ಒಡೆಯನನ್ನು ಬಗ್ಗು ಬಡೆಯಲು ಮೊರೆ ಹೋಗುವುದು ದೈವವನ್ನು , ದೈವದ ಮೂಲಕ ದುಷ್ಟ ಶಿಕ್ಷೆ ಮಾಡಿ ಮುಗ್ಧ ಜನರ ರಕ್ಷಣೆ ಮಾಡುವ ತಂತ್ರಗಾರಿಕೆಯನ್ನು ಇಲ್ಲಿ ಮೆರೆದಿದ್ದಾರೆ ನಟನಿರ್ದೇಶಕ ರಿಷಬ್ ಶೆಟ್ಟಿ ಯವರು.

        ಆ ಹಳ್ಳಿಯ ಮುಗ್ಧ ಜನರಿಗೂ ದೈವಕ್ಕೂ ಚಿತ್ರದ ಕಥೆಗೂ ಸಂಬಂಧವೇನು ಎಂಬುದನ್ನು ಚಿತ್ರವನ್ನು ನೋಡಿ ತಿಳಿಯಬೇಕು.

ಮೂರು ಶತಮಾನಗಳ ಹಿಂದಿನ ರಾಜನ ಕಥೆಯೊಂದಿಗೆ ಆರಂಭಗೊಂಡು ವರ್ತಮಾನದಲ್ಲಿ 70ರ ದಶಕದಲ್ಲಿ ನಡೆಯುವ ಈ ಕಥೆ ನಮ್ಮನ್ನು ಒಂದು ಹೊಸ ಲೋಕಕ್ಕೆ ಕರೆದೊಯ್ಯುತ್ತದೆ, ಪ್ರಾರಂಭದಿಂದ ಅಂತ್ಯದವರೆಗೂ ಕುರ್ಚಿಯ ತುದಿಯಲ್ಲಿ ಕುಳಿತು ಚಿತ್ರ ನೋಡುವಂತೆ ಮಾಡಿರುವುದು ಉತ್ಪ್ರೇಕ್ಷೆಯಲ್ಲ.!!

    ಕರಾವಳಿಯ ಆಡು ಭಾಷೆಯನ್ನು ಚಿತ್ರದಲ್ಲಿ ಬಳಸಿದ್ದಾರೆ. ಕರಾವಳಿಯ ಭಾಗದಲ್ಲಿ ದೇವರಿಗಿಂತ ದೈವಗಳ ಆರಾಧನೆ ಹೆಚ್ಚು . ತುಳು ಸಂಸ್ಕೃತಿಯ ಈ ಆಚರಣೆಗೆ ಚ್ಯುತಿ ಬಾರದಂತೆ ತೆರೆಯ ಮೇಲೆ ತಂದಿರುವ ರಿಷಭ್ ಅವರ ಪ್ರಯತ್ನ ಉಲ್ಲೇಖಾರ್ಹ. ರಿಷಬ್ ಇಲ್ಲಿ ಕರಾವಳಿಯ ಸಂಸ್ಕೃತಿ ಆಚರಣೆಯ ಆಳಕ್ಕಿಳಿದು ಈಜಿದ್ದಾರೆ, ಇದನ್ನು ವ್ರತವಾಗಿ ನಿಭಾಯಿಸಿರುವುದು ತೆರೆಯ ಮೇಲೆ ಸ್ಪಷ್ಟವಾಗಿ ಕಾಣುತ್ತದೆ .ಪ್ರಕೃತಿಗೂ ಅದರೊಳಗಿರುವ ಮನುಷ್ಯನಿಗೂ ಇರುವ ಸಂಬಂಧ , ಭೂತಾರಾಧನೆ ಹೇಗೆ ಮಹತ್ವ ಪಡೆದಿದೆ ಎಂಬುದನ್ನು ವಿವರಿಸುತ್ತಾ ಪ್ರಸಕ್ತ ಸಮಾಜದಲ್ಲಿ ದುರಾಸೆ ಕಾಡನ್ನು ದೋಚುತ್ತಿರುವ ಪರಿ ಅದರ ಪರಿಣಾಮವನ್ನು ಚಿತ್ರ ತೋರಿಸುತ್ತದೆ . ಇದರಲ್ಲಿ ಅಸ್ಪೃಶ್ಯತೆಯನ್ನು ಸ್ಥೂಲವಾಗಿ ಚಿತ್ರಿಸಿದ್ದಾರೆ..

     ಒಮ್ಮೊಮ್ಮೆ ನಿರ್ದೇಶಕರಾಗಿ, ಒಮ್ಮೊಮ್ಮೆ ನಟರಾಗಿ ರಿಷಬ್ ಶೆಟ್ಟಿ ಮೇಲುಗೈ ಸಾಧಿಸುತ್ತಾರೆ. ಕೆಲವೊಮ್ಮೆ ಇವರಿಬ್ಬರ ನಡುವೆ ಸ್ಪರ್ಧೆಗೆ ಬಿದ್ದಂತೆ ಕಾಣುತ್ತಾರೆ . ಚಿತ್ರದ ಕೊನೆಯ 20 ನಿಮಿಷದ ಕ್ಲೈಮ್ಯಾಕ್ಸ್ ನಲ್ಲಿ ರಿಷಬ್ ಅವರ ಅಭಿನಯ ಎಲ್ಲರನ್ನು ಮಂತ್ರಮುಗ್ಧರನ್ನಾಗಿಸುತ್ತದೆ . ದೈವದ ಆವಾಹನೆ ಮಾಡಿಕೊಂಡಂತೆ ಕಾಣುತ್ತಾರೆ ರಿಷಬ್ ಶೆಟ್ಟಿ.

       ರಿಷಬ್ ಗೆ ನಾಯಕಿಯಾಗಿ ಅರಣ್ಯ ರಕ್ಷಣೆಯ ಗಾರ್ಡ್ ಪತ್ರದಲ್ಲಿ ಸಪ್ತಮಿ ಗೌಡರದು ಸಹಜ ಅಭಿನಯ ,ಕಿಶೋರ್ ಎಂದಿನಂತೆ ತಮ್ಮ ಪಾತ್ರದಲ್ಲಿ ಲೀನವಾಗಿ ಅಭಿನಯಿಸಿದ್ದಾರೆ ಅಚ್ಚುತ್ ಕುಮಾರ್ ತಣ್ಣನೆ ಕ್ರೌರ್ಯಪ್ರದರ್ಶಿಸಿ ಅದ್ಭುತ ನಟನೆಯನ್ನು ನೀಡಿದ್ದಾರೆ , ಸದಾ ಬೈಗುಳಗಳ ಮಳೆ ಸುರಿಸುತ್ತಾ ಅಂತರಂಗದಲ್ಲಿ ಮೃದು ಹೃದಯಿ ತಾಯಿ ಪಾತ್ರದಲ್ಲಿ ಮಾನಸಿ ಸುಧೀರ್ ಅಭಿನಯಿಸಿದ್ದಾರೆ . ಆಗಾಗ ಒನ್ ಲೈನರ್ ಪಂಚಿಂಗ್ ಡೈಲಾಗ್ ಗಳ ಮೂಲಕ ಪ್ರಕಾಶ್ ತುಮ್ಮಿನಾಡು ಇಷ್ಟವಾಗುತ್ತಾರೆ. ಪ್ರಮೋದ್ ಶೆಟ್ಟಿ ಮುಖ್ಯ ಪಾತ್ರ ಒಂದರಲ್ಲಿ ಮನಸಳೆಯುತ್ತಾರೆ.

         “ಸಿಂಗಾರ ಸಿರಿಯೇ” ಹಾಗೂ “ವರಾಹ ರೂಪಂ””ಹಾಡುಗಳ ಚಿತ್ರೀಕರಣ ಚೆನ್ನಾಗಿದ್ದು ಕೇಳಲು ಇಂಪಾಗಿವೆ. ಚಿತ್ರಕ್ಕೆ ಉತ್ತಮ ಸಂಗೀತ ನಿರ್ದೇಶನ ನೀಡಿರುವವರು ಅಜನೀಶ್ ಲೋಕನಾಥ್. ಕಾಡಿನ ರೋಚಕತೆ ಭೂತ ಕೋಲಿನ ರಮ್ಯತೆಯನ್ನ ಸೆರೆಹಿಡಿದಿರುವವರು ಅರವಿಂದ್ ಕಶ್ಯಪ್ ರವರು.

     ಪ್ರಾರಂಭದಿಂದ ಖಳನಂತೆ  ಗೋಚರಿಸದ ದೇವೇಂದ್ರ (ಅಚ್ಚುತ್ )ತನ್ನ ಮಗನಿಗೆ ತನ್ನ ಹಿಂದಿನ ಪೀಳಿಗೆಯ ಕಥೆಯನ್ನು ಹೇಳುವ ಮೂಲಕ ಅವನ ಖಳತನವನ್ನು ಹೊರತಂದಿರುವ ದೃಶ್ಯ ಹೊಸ ಬಗೆಯದ್ದಾಗಿದೆ. ಚಿತ್ರದಲ್ಲಿ ಹಾಸ್ಯ ಪಾತ್ರಗಳು ದೃಶ್ಯಗಳು ಪ್ರತ್ಯೇಕವಾಗಿಲ್ಲ ಕಥೆಯ ಪಾತ್ರಧಾರಿಗಳೇ ಪಂಚಿಂಗ್ ಡೈಲಾಗ್ ಗಳು ಮೂಲಕ ನಗೆ ತರಿಸುತ್ತಾರೆ , ಅಚ್ಯುತ್ ಕುಮಾರ್ ಅವರ ಶ್ರೀಮತಿಯ ಪಾತ್ರದ ಪೋಷಣೆ ವಿಶೇಷವಾಗಿದೆ .ತನ್ನ ಗಂಡನ ತೆವಲುಗಳು ದೌರ್ಬಲ್ಯಗಳು ವ್ಯವಹಾರಗಳನ್ನೆಲ್ಲ ಆಕೆ ತಿಳಿದಿದ್ದರು ಮಾತಿನಲ್ಲೆಲ್ಲೂ ಅಭಿವ್ಯಕ್ತಿಸುವುದಿಲ್ಲ. ಆದರೆ ಆಕೆಗೆ ಗೊತ್ತಿರುವ ವಿಷಯಗಳು ವೀಕ್ಷಕರಿಗೂ ತಲುಪುವಂತೆ ಚತ್ರಿಸಿರುವುದು ವಿಶೇಷ .ದೇವೇಂದ್ರ ದಂಪತಿಗಳು ಅಂಗವಿಕಲ ಮಗನನ್ನು ಪಡೆದಿರುವುದು ಅವನ ಪಾಪ ಕೃತ್ಯಕ್ಕೆ ಪ್ರತಿಫಲವೆಂಬಂತೆ ಬಿಂಬಿಸಲೇನೋ ಎಂದು ಅನಿಸದಿರದು.

       ಚಿತ್ರದ ಕೊನೆಯ ದೃಶ್ಯವೊಂದರಲ್ಲಿ ದೇವೇಂದ್ರ ಪುಟ್ಟ ಮಗುವನ್ನು ಶೂಟ್ ಮಾಡುವುದಕ್ಕೆ ಪ್ರಮೋದ್ ಆಕ್ಷೇಪಿಸುತ್ತಾರೆ , ಆ ಮಗುವನ್ನು ಕೊಲ್ಲದಿದ್ದರೆ ಅದೂ ಮುಂದೆ ಭೂಮಿಯ ಪಾಲು ಕೇಳಲು ಬರುತ್ತದೆ ಎಂದು ದೇವೇಂದ್ರ ಹೇಳುವ ದೃಶ್ಯ ಮನುಷ್ಯನ ಕ್ರೌರ್ಯದ ಲೋಭದ ಪರಿಚಯ ಮಾಡಿಸುತ್ತದೆ.

     ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ-  ಪರಿಸರ, ಮನುಷ್ಯ ಎಲ್ಲರೂ ಸಹಬಾಳ್ವೆ ನಡೆಸಿದರೆ ಚೆನ್ನ ಎಂಬುದನ್ನು ಸೂಚಿಸುತ್ತದೆ.

   ಕಥೆ – ಚಿತ್ರಕಥೆ ,ನಿರ್ದೇಶನ, ಕಲಾವಿದರ ಅಭಿನಯ, ಧ್ವನಿ ಗ್ರಹಣ ,ಛಾಯಾಗ್ರಹಣ ಒಂದಕ್ಕೊಂದು ಪೂರಕವಾಗಿ ಹೆಣೆಯಲ್ಪಟ್ಟಿದ್ದು ಚಿತ್ರವೊಂದು ಸುಂದರ ಕೃತಿಯಾಗಿ ಹೊರಹೊಮ್ಮಲು ಕಾರಣವಾಗಿದೆ. ಚಿತ್ರದ ನೈಜತೆ ನೇಟಿವಿಟಿ ಯಶಸ್ಸಿಗೆ ಪೂರಕವಾಗಿದೆ.

ಒಂದು ದಂತ ಕಥೆಯನ್ನು ಇರಿಸಿಕೊಂಡು ಪಾತ್ರಗಳಿಗೆ ಕಸುವು ತುಂಬಿ ಎಲ್ಲ ವಿಭಾಗಗಳಲ್ಲೂ ಅಚ್ಚುಕಟ್ಟುತನವಿದ್ದಾಗ ಹೊರ ಹೊಮ್ಮಿದ ಪರಿಪಕ್ವ ಪಾಕ ಕಾಂತಾರ.

ತಾರಾಗಣ – ರಿಷಬ್ ಶೆಟ್ಟಿ ,ಸಪ್ತಮಿ ಗೌಡ ,ಅಚ್ಚುತ್ ಕುಮಾರ್ ,ಕಿಶೋರ್ ,ಮಾನಸಿ ಸುಧೀರ್, ಪ್ರಮೋದ್ ಶೆಟ್ಟಿ ಇತರರು.

ನಿರ್ದೇಶನ –  ರಿಷಬ್ ಶೆಟ್ಟಿ

ನಿರ್ಮಾಪಕರು -ವಿಜಯ್ ಕಿರಗಂದೂರು

ಸಂಗೀತ -ಅಜನೀಶ್ ಲೋಕನಾಥ

  ಛಾಯಾಗ್ರಹಣ- ಅರವಿಂದ್ ಕಶ್ಯಪ್


ಕುಸುಮ ಮಂಜುನಾಥ್

ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕುಸುಮಾ ಮಂಜುನಾಥ್ ರವರು ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿ ಯನ್ನು ಹೊಂದಿದ್ದಾರೆ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ “ಸಾಧನ ವಿದ್ಯಾ” ಮಾಸ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ನಾಲ್ಕೈದು ವರ್ಷಗಳು ಕೆಲಸ ಮಾಡಿದ ಅನುಭವವಿದೆ. ರೋಟರಿ ಸಹಯೋಗದಲ್ಲಿ ಸಾಕ್ಷರತಾ ಮಿಷನ್ ಕಾರ್ಯಕ್ರಮದಡಿ ಕೂಲಿ ಕಾರ್ಮಿಕರಿಗೆ ಅಕ್ಷರ ಕಲಿಸುವ ಸೇವೆ ಮಾಡಿದ್ದಾರೆ. ಕಥೆ ,ಕವನ, ಲೇಖನ ಬರೆಯುವುದು ಇವರ ಹವ್ಯಾಸ. ಹಲವು ಬ್ಲಾಗ್ ಗಳಲ್ಲಿ ,ನಿಯತ ಕಾಲಿಕೆಗಳಲ್ಲಿ ಇವರ ಲೇಖನ ಪ್ರಕಟವಾಗಿದೆ. ಸಂಗೀತ ಕೇಳುವುದು ,ಪತ್ರಿಕೆ ಓದುವುದು ಇವರ ಇತರೆ ಹವ್ಯಾಸ.

Leave a Reply

Back To Top