ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ಮಹಿಳಾ ಸಮಲೀಕರಣ ಮತ್ತು ಮೀಸಲಾತಿ

ಶಿವಲೀಲಾ ಹುಣಸಗಿ

         ಸ್ತ್ರೀ

ಆಕಾಶದ ನೀಲಿಯಲ್ಲಿ

ಚಂದ್ರ ತಾರೆ ತೊಟ್ಟಿಲಲ್ಲಿ

ಬೆಳಕನಿಟ್ಟು ತೂಗಿದಾಕೆ

ನಿನಗೆ ಬೇರೆ ಹೆಸರು ಬೇಕೆ

ಸ್ತ್ರೀ ಅಂದರೆ ಅಷ್ಟೆ ಸಾಕೆ

ಹಸಿರ ಉಟ್ಟ ಬೆಟ್ಟಗಳಲಿ

ಮೊಲೆ ಹಾಲಿನ ಹೊಳೆಯ ಇಳಿಸಿ

ಬಯಲ ಹಸಿರ ನಗಿಸಿದಾಕೆ

ನಿನಗೆ ಬೇರೆ ಹೆಸರು ಬೇಕೆ

ಸ್ತ್ರೀ ಅಂದರೆ ಅಷ್ಟೆ ಸಾಕೆ

                                  ಡಾ.ಜಿ.ಎಸ್.ಶಿವರುದ್ರಪ್ಪ.

ಸ್ತ್ರೀ ಅಥವಾ ಮಹಿಳೆ ಪದವು ಸಂಸ್ಕೃತದ್ದು, ಕನ್ನಡದಲ್ಲಿ ಈ ಪದಕ್ಕೆ ‘ಹೆಣ್ಣು’ ಎಂಬ ಅರ್ಥವಿದೆ. ಇದು ನಾಗರಿಕ ಗೌರವದ ಮತ್ತು ಪುರುಷ ಪದದ ಸಮಾನ ಪದವಾಗಿದ್ದು ವಯಸ್ಕ ಹೆಣ್ಣನ್ನು ಸೂಚಿಸಲು ಉಪಯೋಗಿಸಲಾಗುತ್ತದೆ. ಆದಿಯಿಂದಲೂ ಸೃಷ್ಟಿಯ ಮೂಲ ಸ್ತ್ರೀಯಾಗಿದ್ದಾಳೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಗೆ ಅವಳದೇ ಆದ ಗೌರವ, ಸ್ಥಾನಮಾನಗಳಿರುವುದನ್ನು ಗುರುತಿಸಬಹುದಾಗಿದೆ. ಸ್ತ್ರೀಅವಿನಾಶಿ, ಸಂಜೀವಿನಿ. ಹೆಣ್ಣು ವಿಶಿಷ್ಟ ಶಕ್ತಿಗಳ ಸಂಗಮ. ಮಮತೆ, ಕರುಣೆ, ವಾತ್ಸಲ್ಯ, ಅಕ್ಕರೆ ಮತ್ತು ಭೂಮಿತೂಕದ ತಾಳ್ಮೆಯುಳ್ಳ ಸ್ತ್ರೀ ಒಂದು ಪ್ರಬಲ ಶಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಮಹಿಳೆಯ ಜಾಯಮಾನ ಪುರುಷನ ಜಾಯಮಾನಕ್ಕಿಂತ ಭಿನ್ನವಾದದ್ದು. ಮಹಿಳೆಯನ್ನು ಹಿಂದಿನಿಂದಲೂ ಅಬಲೆಯೆಂದೇ ಕಡೆಗಣಿಸಲಾಗುತ್ತಿತ್ತು. ಮಾನವರಲ್ಲಿ ಗಂಡು ಅಥವಾ ಹೆಣ್ಣು ಎಂಬ, ನಿಸರ್ಗಬದ್ಧವಾಗಿ ಅಂಗಾಂಗ ವಿನ್ಯಾಸದಲ್ಲಿ ಭಿನ್ನತೆಯ ದೇಹಧಾರಣೆಯಾಗುತ್ತದೆ. ಹೆಣ್ಣು ಮತ್ತು ಗಂಡು ಎಂಬ ಜೈವಿಕ ಲಕ್ಷಣಗಳು ವ್ಯಕ್ತಿಯ ಹುಟ್ಟಿನಿಂದಲೇ ನಿರ್ಧರವಾಗುತ್ತದೆ. 

ಸಮಾನ ಉದ್ಯೋಗ, ವೇತನ, ಸಾಮಾಜಿಕ ಮತ್ತು ರಾಜಕೀಯ ಅವಕಾಶಗಳನ್ನು ನೀಡುವುದೇ ಮಹಿಳಾ ಸಬಲೀಕರಣ ಎನ್ನುವ ವಾದ ಬೆಳೆದುಬಂದಿದೆ. ವಿಪರ್ಯಾಸವೆಂದರೆ ಪುರುಷರ ಪ್ರಜ್ಞೆ ಮತ್ತು ಆಲೋಚನಾ ಕ್ರಮಗಳಲ್ಲಿ ಮೂಲ ಬದಲಾವಣೆ ಆದಾಗ ಮಾತ್ರ ಮಹಿಳಾ ಸಬಲೀಕರಣ ಪರಿಕಲ್ಪನೆಗೆ ಅರ್ಥ ಬರುತ್ತದೆ.

“ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಹ” ಎಲ್ಲಿ ಮಹಿಳೆಗೆ ಗೌರವ ಸಿಗುತ್ತದೆಯೋ ಅಲ್ಲಿ ದೇವತೆಗಳು ವಾಸವಾಗಿರುತ್ತಾರೆಂಬ ಪ್ರತೀತಿ.ಅದನು ಅರಿತರು ಅವಳಿಗೆ ಸಿಗಬೇಕಾದ ಅವಕಾಶ,ನ್ಯಾಯಗಳಿಂದ ವಂಚಿತರನ್ನಾಗಿ ಮಾಡುವ ಸ್ಥಿತಿಗಳು ಒದಗಿರುವುದು ದುರಂತವೆಂದರೆ ತಪ್ಪಾಗದು.ಮಹಿಳೆಯೆಂದರೆ ಶಕ್ತಿ. ಇಳೆಯಷ್ಟು ತಾಳ್ಮೆಯನ್ನು ಹೊಂದಿರುವ ಮನಸ್ಥಿತಿ ಹೊಂದಿದವಳು ಎಂದರ್ಥ.ಕುಟುಂಬ ವ್ಯವಸ್ಥೆ, ಉದ್ಯೋಗ ವಲಯ, ಸಬಲೀಕರಣ, ಸಾರ್ವಜನಿಕ ಜೀವನ ಸೇರಿದಂತೆ ಮಹಿಳೆಯರಿಗೆ ಹಂಗಿಲ್ಲದ ಆತ್ಮವಿಶ್ವಾಸದ ಬದುಕು ಕಲ್ಪಿಸಿದಾಗ ಮಾತ್ರ ಮಹಿಳಾ ಸಬಲೀಕರಣ ಎಂಬುದಕ್ಕೆ ಪುಷ್ಟಿ ಸಿಗುತ್ತದೆ. ಇಲ್ಲದಿದ್ದಲ್ಲಿ ಪರಿಸ್ಥಿತಿಯ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅನಿವಾರ್ಯತೆ ಸಿಲುಕಿ ಮಹಿಳೆಗೆ ನೀಡಲಾಗುತ್ತಿರುವ ಸ್ಥಾನಮಾನ ಆಕೆಯನ್ನು ದ್ವಿತೀಯ ದರ್ಜೆಯನ್ನಾಗಿ ನೋಡುವುದಕ್ಕೆ ಸೀಮಿತವಾಗಿಸಿದೆ. ಆದ್ದರಿಂದ ಪುರುಷ ಪ್ರಧಾನ ಸಮಾಜದಲ್ಲಿ ಸವಲತ್ತುಗಳು, ಕೊಡುಗೆಗಳಿಂತಲೂ ಹೆಣ್ಣಿಗೆ ಸ್ವಂತಿಕೆ, ಸಮಾನತೆ, ಆತ್ಮಗೌರವದ ಬಾಳ್ವೆಗೆ ಅವಕಾಶ ಕಲ್ಪಿಸುವತ್ತ ಗಂಭೀರ ಪ್ರಯತ್ನಗಳಾಗಬೇಕು.

ಸ್ತ್ರೀಯರ ದೈಹಿಕ ಅಸಹಾಯಕತೆ ಮತ್ತು ಮಾನಸಿಕ ಗಟ್ಟಿತನ ಒಪ್ಪಿಕೊಂಡು ಬೌದ್ದಿಕ ಹಾಗೂ ಭಾವನಾತ್ಮಕ ಅರಿವನ್ನು ಪುರುಷರು ಬೆಳೆಸಿಕೊಂಡಾಗ ಪ್ರಸ್ತುತ ಹೆಣ್ಣು-ಗಂಡುಗಳ ನಡುವೆ ಇರುವ ಲಿಂಗ ತಾರತಮ್ಯ, ಅಸಮಾನತೆಗಳಿಗೆ ಅಂಕುಶ ತೊಡಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳಾ ಸಬಲೀಕರಣ ಎನ್ನುವುದು ಕೇವಲ ಮಹಿಳೆಯರಿಂದಲೇ ಏಕಮುಖವಾಗಿ ಆಗುವ ಕೆಲಸವಲ್ಲವಾದ್ದರಿಂದ ಪುರುಷರಲ್ಲಿ ಸಹಜ ಹೃದಯವಂತಿಕೆ, ಸಹಭಾಗಿತ್ವದಿಂದ ಮಾತ್ರ ಮಹಿಳಾ ಸಬಲೀಕರಣ ಕಲ್ಪನೆಗೆ ಅರ್ಥ ಬರುವುದಲ್ಲದೇ ಮಹಿಳಾ ದಿನಾಚರಣೆಯ ಉದ್ದೇಶ ಈಡೆರುತ್ತದೆ.

 ಮಹಿಳೆಯರು ಇಂದು ಎಲ್ಲ ರಂಗಗಳಲ್ಲೂ ಮುಂಚೂಣಿಯಲ್ಲಿರುವಾಗ ರಾಜಕೀಯವಾಗಿ ಮಾತ್ರ ಮೀಸಲು ನೀಡುವಂತೆ ಕೇಳದೆ ಸ್ವತಃ ಪಡೆದುಕೊಳ್ಳಲು ಮುಂದೆ ಬರಬೇಕಾಗಿದೆ. ಸಮಾಜದಲ್ಲಿ ಮಹಿಳೆಗೆ ಮನೆಯ ಸ್ವಾಸ್ಥ್ಯದ ಜತೆಗೆ ಸಮಾಜದ ಸ್ವಾಸ್ಥ್ಯ ಕಾಪಾಡುವ ಜವಾಬ್ದಾರಿಯಿದೆ. ಮನೆಯಲ್ಲಿ ಕೆಲಸ ಮಾಡುವುದಷ್ಟೆ ಮಹಿಳೆಯರ ಕೆಲಸವಲ್ಲ ಎಂಬ ಆಲೋಚನಾ ಲಹರಿಯನ್ನು ಮಹಿಳೆ ಬೆಳೆಸಿಕೊಂಡಾಗ ಮಾತ್ರ ಸ್ವಾವಲಂಬಿ ಮತ್ತು ಸ್ವಾಭಿಮಾನದಿಂದ ಬದುಕಬೇಕು.

ಮಹಿಳಾ ಸಬಲೀಕರಣ

ಮಹಿಯರಲ್ಲಿ ಬೌದ್ಧಿಕ, ರಾಜಕೀಯ,ಸಾಮಾಜಿಕ , ಆರ್ಥಿಕ ಬಲವನ್ನು ಹೆಚ್ಚಿಸುವುದಕ್ಕೆ ಮಹಿಳಾ ಸಬಲೀಕರಣ, ಸಶಕ್ತತೆ ಎನ್ನುತ್ತಾರೆ.ಸಬಲೀಕರಣ ಶಕ್ತತೆ ಎನ್ನುವುದು ಸಾಮಾನ್ಯವಾಗಿ ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಬೆಳೆಯಿಸಿ,ಅವರ ಸಾಮರ್ಥ್ಯವನ್ನು ಹೆಚ್ಚಿಸುವುದೇ ಆಗಿರುತ್ತದೆ. ಸಬಲೀಕರಣ ಸಶಕ್ತತೆ ಎಂದರೆ, ಕೆಳಗೆ ಕಾಣಿಸಿದ ಅಂಶಗಳಲ್ಲಿ ಒಟ್ಟಾರೆಯಾಗಿ ಅವರ ಅರ್ಹತೆ ಸಾಮರ್ಥ್ಯವನ್ನು ಹೆಚ್ಚಿಸುವುದು.

ಮಹಿಳಾ ಸಬಲೀಕರಣವನ್ನು ಹಲವಾರು ವಿಧಗಳಲ್ಲಿ ವ್ಯಾಖ್ಯಾನಿಸಬಹುದು, ಮಹಿಳೆಯರ ದೃಷ್ಟಿಕೋನಗಳನ್ನು ಒಪ್ಪಿಕೊಳ್ಳುವುದು ಅಥವಾ ಅವುಗಳನ್ನು ಹುಡುಕುವ ಪ್ರಯತ್ನವನ್ನು ಮಾಡುವುದು, ಶಿಕ್ಷಣ , ಅರಿವು , ಸಾಕ್ಷರತೆ ಮತ್ತು ತರಬೇತಿಯ ಮೂಲಕ ಮಹಿಳೆಯರ ಸ್ಥಾನಮಾನವನ್ನು ಹೆಚ್ಚಿಸುವುದು.ಮಹಿಳಾ ಸಬಲೀಕರಣವು ಸಮಾಜದಲ್ಲಿನ ವಿಭಿನ್ನ ಸಮಸ್ಯೆಗಳ ಮೂಲಕ ಜೀವನವನ್ನು ನಿರ್ಧರಿಸುವ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಹಿಳೆಯರಿಗೆ ಅನುವು ಮಾಡಿಕೊಡುತ್ತದೆ.ಅವರು ಲಿಂಗ ಪಾತ್ರಗಳನ್ನು ಅಥವಾ ಅಂತಹ ಇತರ ಪಾತ್ರಗಳನ್ನು ಮರು ವ್ಯಾಖ್ಯಾನಿಸಲು ಅವಕಾಶವನ್ನು ಹೊಂದಿರಬಹುದು.

ಇದು ಅವರಿಗೆ ಅಪೇಕ್ಷಿತ ಗುರಿಗಳನ್ನು ಅನುಸರಿಸಲು ಹೆಚ್ಚಿನ ಸ್ವಾತಂತ್ರ್ಯವನ್ನು ನೀಡುತ್ತದೆ.ನಂತರ-ಪ್ರಥಮ ಮಹಿಳೆ ಮಿಚೆಲ್ ಒಬಾಮಾ ಅವರು ಮಾರ್ಚ್ 21, 2015 ರಂದು ಕಾಂಬೋಡಿಯಾದ ಸೀಮ್ ರೀಪ್‌ನಲ್ಲಿರುವ ಹುನ್ ಸುನ್ನಿ ಪ್ರಸಾತ್ ಬಕಾಂಗ್ ಹೈಸ್ಕೂಲ್‌ನಲ್ಲಿ ಲೆಟ್ ಗರ್ಲ್ಸ್ ಲರ್ನ್ ಉಪಕ್ರಮವನ್ನು ಬೆಂಬಲಿಸಲು ಕಾಂಬೋಡಿಯಾದ ಪ್ರಥಮ ಮಹಿಳೆ ಬನ್ ರಾನಿ ಅವರೊಂದಿಗೆ ರೂಮ್ ಟು ರೀಡ್ ಈವೆಂಟ್‌ನಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು .

ಮಹಿಳಾ ಸಬಲೀಕರಣವು ಅಭಿವೃದ್ಧಿ ಮತ್ತು ಅರ್ಥಶಾಸ್ತ್ರದಲ್ಲಿ ಮಹತ್ವದ ಚರ್ಚೆಯ ವಿಷಯವಾಗಿದೆ.ಆರ್ಥಿಕ ಸಬಲೀಕರಣವು ಮಹಿಳೆಯರಿಗೆ ಸಂಪನ್ಮೂಲಗಳು, ಸ್ವತ್ತುಗಳು ಮತ್ತು ಆದಾಯವನ್ನು ನಿಯಂತ್ರಿಸಲು ಮತ್ತು ಲಾಭ ಪಡೆಯಲು ಅನುಮತಿಸುತ್ತದೆ . ಇದು ಅಪಾಯವನ್ನು ನಿರ್ವಹಿಸುವ ಸಾಮರ್ಥ್ಯ ಮತ್ತು ಮಹಿಳೆಯರ ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಒಂದು ನಿರ್ದಿಷ್ಟ ರಾಜಕೀಯ ಅಥವಾ ಸಾಮಾಜಿಕ ಸಂದರ್ಭದಲ್ಲಿ ಕ್ಷುಲ್ಲಕ ಲಿಂಗಗಳನ್ನು ಬೆಂಬಲಿಸುವ ವಿಧಾನಗಳಿಗೆ ಕಾರಣವಾಗಬಹುದು .ಸಾಮಾನ್ಯವಾಗಿ ಪರಸ್ಪರ ಬದಲಿಯಾಗಿ ಬಳಸುವಾಗ, ಲಿಂಗ ಸಬಲೀಕರಣದ ಹೆಚ್ಚು ಸಮಗ್ರ ಪರಿಕಲ್ಪನೆಯು ಯಾವುದೇ ಲಿಂಗದ ಜನರಿಗೆ ಸಂಬಂಧಿಸಿದೆ, ಜೈವಿಕ ಮತ್ತು ಲಿಂಗದ ನಡುವಿನ ವ್ಯತ್ಯಾಸವನ್ನು ಒಂದು ಪಾತ್ರವಾಗಿ ಒತ್ತಿಹೇಳುತ್ತದೆ.. ಮಹಿಳಾ ಸಬಲೀಕರಣವು ಸಾಕ್ಷರತೆ, ಶಿಕ್ಷಣ, ತರಬೇತಿ ಮತ್ತು ಜಾಗೃತಿ ಮೂಡಿಸುವ ಮೂಲಕ ಮಹಿಳೆಯರ ಸ್ಥಾನಮಾನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಮಹಿಳಾ ಸಬಲೀಕರಣವು ಹಿಂದೆ ನಿರಾಕರಿಸಲ್ಪಟ್ಟಿದ್ದ ಆಯಕಟ್ಟಿನ ಜೀವನ ಆಯ್ಕೆಗಳನ್ನು ಮಾಡುವ ಮಹಿಳೆಯರ ಸಾಮರ್ಥ್ಯವನ್ನು ಸೂಚಿಸುತ್ತದೆ.

ರಾಷ್ಟ್ರಗಳು, ವ್ಯವಹಾರಗಳು, ಸಮುದಾಯಗಳು ಮತ್ತು ಗುಂಪುಗಳು ಸ್ತ್ರೀ ಸಬಲೀಕರಣದ ಕಲ್ಪನೆಯನ್ನು ಅಳವಡಿಸಿಕೊಳ್ಳುವ ಕಾರ್ಯಕ್ರಮಗಳು ಮತ್ತು ನೀತಿಗಳ ಅನುಷ್ಠಾನದಿಂದ ಪ್ರಯೋಜನ ಪಡೆಯಬಹುದು. ಮಹಿಳೆಯರ ಸಬಲೀಕರಣವು ಅಭಿವೃದ್ಧಿಗೆ ಲಭ್ಯವಿರುವ ಮಾನವ ಸಂಪನ್ಮೂಲಗಳ ಗುಣಮಟ್ಟ ಮತ್ತು ಪ್ರಮಾಣವನ್ನು ಹೆಚ್ಚಿಸುತ್ತದೆ.ಮಾನವ ಹಕ್ಕುಗಳು ಮತ್ತು ಅಭಿವೃದ್ಧಿಯನ್ನು ತಿಳಿಸುವಾಗ ಸಬಲೀಕರಣವು ಮುಖ್ಯ ಕಾರ್ಯವಿಧಾನದ ಕಾಳಜಿಗಳಲ್ಲಿ ಒಂದಾಗಿದೆ .

ಸ್ವಯಂ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದುವುದು.ಮಾಹಿತಿ ಮತ್ತು ಸಂಪನ್ಮೂಲಗಳ ಬಗ್ಗೆ ತಿಳಿದುಕೊಳ್ಳುವ ಹಾಗೂ ಅವುಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದುವುದು.

ಅವರ ಇಚ್ಛೆಗೆ ಅನುಸಾರವಾಗಿ ಆಯ್ಕೆ ಮಾಡುವ ಅವಕಾಶಗಳನ್ನು ಹೊಂದುವುದು.( ಬರಿ ಹೌದು/ಇಲ್ಲ,ಎರಡರಲ್ಲಿ/ ಅಥವ) ಎನ್ನದಿರುವುದುಒಟ್ಟಿಗೇ ಅಥವಾ ಗುಂಪು ನಿರ್ಣಯ ತೆಗೆದುಕೊಳ್ಳುವುದರಲ್ಲಿ ವಿಶ್ವಾಸದಿಂದ ಧೃಡಪಡಿಸುವ ಸಾಮರ್ಥ್ಯವನ್ನು ಹೊಂದುವುದು.

ಬದಲಾವಣೆಯನ್ನು ಮಾಡುವುದರಲ್ಲಿ ಧನಾತ್ಮಕ ಭಾವನೆಯನ್ನು ಹೊಂದುವುದು.ಸ್ವಯಂ ಮತ್ತು ಗುಂಪು ಪ್ರಾಬಲ್ಯವನ್ನು ಹೆಚ್ಚಿಸಲು ವಿವಿಧ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದು.ಪ್ರಜಾ ಪ್ರಭುತ್ವದ ಮಾರ್ಗದಲ್ಲಿ ಇತರರ ಗ್ರಹಿಕೆ ಶಕ್ತಿಯನ್ನು ಬದಲಾಯಿಸುವಂತೆ ಮಾಡುವುದು.ಸ್ವಯಂ ಪ್ರೇರೇಪಿತರಾಗಿ ನಿರಂತರ ಬದಲಾವಣೆಯ ಬೆಳವಣಿಗೆ ಪ್ರಕ್ರಿಯೆಯಲ್ಲಿ ಭಾಗವಹಿಸುವುದು.ಆತ್ಮಾಭಿಮಾನ ಹೆಚ್ಚು ಮಾಡುವುದರಲ್ಲಿ ಹಾಗೂ ಕಳಂಕದಿಂದ ಪಾರಾಗುವುದರಲ್ಲಿ ತೊಡಗಿಕೊಳ್ಳುವುದು.

ಇತ್ತೀಚೆಗೆ ಭಾರತದಲ್ಲಿ ಮಹಿಳೆಯರು ಶಿಕ್ಷಣ, ರಾಜಕೀಯ, ಮಾಧ್ಯಮ, ಕಲೆ, ಸಾಂಸ್ಕೃತಿಕ, ಸೇವಾ ವಿಭಾಗಗಳು, ವಿಜ್ಞಾನ ಮತ್ತು ತಾಂತ್ರಿಕ ಇತ್ಯಾದಿ ಕ್ಷೇತ್ರಗಳಲ್ಲಿ ಭಾಗವಹಿಸುತ್ತಿದ್ದಾರೆ.

ಭಾರತೀಯ ಸಂವಿಧಾನವು ಮಹಿಳೆಯರೆಲ್ಲರಿಗೂ ಸಮಾನತೆ (ಅನುಚ್ಛೇದ ೧೪) ರಾಜ್ಯದಿಂದ ತಾರತಮ್ಯವಿರಕೂಡದು (ಅನುಚ್ಛೇದ-೩೯) ಸಮಾನ ಅವಕಾಶ (ಅನುಚ್ಛೇದ-೩೯ಡಿ) ಇತ್ಯಾದಿಗಳನ್ನು ಖಾತ್ರಿಗೊಳಿಸಿದೆ. ಇಷ್ಟಲ್ಲದೆ ರಾಜ್ಯಗಳು ಮಹಿಳೆಯರು ಮತ್ತು ಮಕ್ಕಳ ಪರವಾಗಿ ಹಲವು ಸವಲತ್ತುಗಳನ್ನು ಒದಗಿಸಿದೆ. (ಅನುಚ್ಛೇದ-೧೫(೩), ಮಹಿಳೆಯರಿಗೆ ಸೂಕ್ತವಾದ ಮತ್ತು ಮಾನವೀಯತೆಯಿಂದ ಕೂಡಿದ ಕೆಲಸದ ವಾತಾವರಣ ಮತ್ತು ಮಾತೃತ್ವದ ಸವಲತ್ತುಗಳನ್ನು, ಭದ್ರತೆ ನೀಡುವಂತಹ ಅವಕಾಶಗಳನ್ನು ಕಲ್ಪಿಸಿದೆ (ಅನುಚ್ಛೇದ೪೨).

 ೧೯೭೦ನೇ ಇಸವಿಯಿಂದ ಸ್ತ್ರೀವಾದವು ಶೀಘ್ರಗತಿಯಲ್ಲಿ ಮೊದಲಾಯಿತು. ರಾಷ್ಟ್ರಮಟ್ಟದಲ್ಲಿ ಮಹಿಳಾಗುಂಪುಗಳು ಮೊಟ್ಟ ಮೊದಲನೆಯದಾಗಿ ಕೈಗೆತ್ತಿಕೊಂಡ ವಿಷಯವೇನೆಂದರೆ; ಮಧುರೆಯಲ್ಲಿ ನಡೆದ ಬಲಾತ್ಕಾರ ಪ್ರಕರಣ. ಮಧುರೆಯಲ್ಲಿ ಹದಿ ಹರೆಯದ ವಯಸ್ಸಿನ ಹೆಂಡತಿಯನ್ನು ಬಲಾತ್ಕಾರವಾಗಿ ಮಾನಭಂಗ ಮಾಡಿದ ಪೊಲೀಸ್ ಪೇದೆಯನ್ನು ನಿರಪರಾಧಿ ಎಂದು ಘೋಷಿಸಿದ್ದ೧೯೭೯-೧೯೮೦ರಲ್ಲಿ ದೊಡ್ಡ ಪ್ರಮಾಣದಲ್ಲಿ ವಿರೋಧವನ್ನು ವ್ಯಕ್ತಪಡಿಸಲು ಕಾರಣವಾಯಿತು.ಸ್ತ್ರೀವಾದಿಗಳು ಮಹಿಳೆಯರ ಕುರಿತು ಇರುವ ವಿವಾದಗಳಾದ ಹೆಣ್ಣುಮಗುವಿನ ಭ್ರೂಣಹತ್ಯೆ, ಲಿಂಗಭೇಧ, ಮಹಿಳೆಯರ ಆರೋಗ್ಯ, ಮತ್ತು ಸಾಕ್ಷರತೆಗಾಗಿ ಒಗ್ಗಟ್ಟಾಗಿ ಕೆಲಸಮಾಡಿದರು. ಭಾರತದಲ್ಲಿ ಕುಡಿತವು ಮಹಿಳೆಯ ಮೇಲಿನ ದೌರ್ಜನ್ಯಕ್ಕೆ ಕಾರಣವಾಗಿರುವುದರಿಂದ ಮಹಿಳಾ ಗುಂಪುಗಳು ಕುಡಿತದ ವಿರುದ್ಧ ಆಂದೋಲನಗಳನ್ನು ಆಂಧ್ರಪ್ರದೇಶ, ಹರಿಯಾಣ, ಒರಿಸ್ಸಾ, ಮಧ್ಯಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಆರಂಭಿಸಿದವು. ಬಹು ಮಂದಿ ಮುಸ್ಲಿಂ ಮಹಿಳೆಯರು, ಮುಸ್ಲಿಂ ಮೂಲದ ನಾಯಕರುಗಳು ಶೆರಿಯತ್ ಕಾನೂನಿನಲ್ಲಿ ಮಹಿಳೆಯರ ಹಕ್ಕುಗಳ ಅರ್ಥವಿವರಣೆ ಹಾಗೂ ಮೂರು ಬಾರಿ ತಲಾಖ್ ಹೇಳುವ ಪದ್ಧತಿಯ ಕುರಿತು ಟೀಕೆ ಮಾಡಿದ್ದಾರೆ. ೧೯೯೦ನೇ ಇಸವಿಯಲ್ಲಿ ವಿದೇಶೀ ದಾನಿ ಸಂಸ್ಥೆಗಳು ನೀಡಿದ ಅನುದಾನ ಹಣದ ಸಹಾಯದಿಂದ ಮಹಿಳಾ ವಿಕಸನ ಕುರಿತಾದ ಸರ್ಕಾರೇತರ ಸಂಸ್ಥೆಗಳನ್ನು ಸ್ಥಾಪಿಸಲು ಸಹಕಾರಿಯಾಯಿತು. ಸ್ವ-ಸಹಾಯ ಸಂಘಗಳು, ಸ್ವಯಂ ಉದ್ಯೋಗಿಗಳ ಸಂಘ (SEWA) ದಂತಹ ಸರ್ಕಾರೇತರ ಸಂಘಟನೆಗಳು ಮಹಿಳೆಯರ ಹಕ್ಕುಗಳ ಬಗ್ಗೆ ಪ್ರಮುಖವಾದ ಪಾತ್ರವನ್ನು ವಹಿಸಿವೆ. ಬಹಳ ಮಹಿಳೆಯರು ಸ್ಥಳೀಯ ಚಳುವಳಿಗಳ ಮುಖಾಂತರ ನಾಯಕಿಯರಾಗಿ ಮುಂದೆ ಬಂದಿದ್ದಾರೆ. ಉದಾ:- ನರ್ಮದಾ ಬಚಾವೋ (ನರ್ಮದಾ ಉಳಿಸಿ) ಆಂದೋಲನದ ಮೇಧಾ ಪಾಟ್ಕರ್‌ರಂತವರು.ಭಾರತ ಸರ್ಕಾರವು ೨೦೦೧ನೇ ವರ್ಷವನ್ನು ಮಹಿಳಾ ಸಬಲೀಕರಣ ವರ್ಷ ಎಂದು ಘೋಷಿಸಿತ್ತು. ರಾಷ್ಟ್ರೀಯ ಮಹಿಳಾ ಸಬಲೀಕರಣ ರಾಜ್ಯನೀತಿಯು ೨೦೦೧ರಲ್ಲಿ ಜಾರಿಗೆ ಬಂದಿತು.

ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಮಹಿಳೆಯರ ಪ್ರತಿನಿಧಿಸುವಿಕೆ ಹೇಳಿಕೊಳ್ಳುವಂತಹ ಪ್ರಗತಿ ಕಂಡಿಲ್ಲ ಎಂಬುದನ್ನು ಅಂಕಿಅಂಶಗಳು ದೃಢಪಡಿಸಿವೆ. ಪ್ರಸ್ತುತ ಲೋಕಸಭೆಯ ಒಟ್ಟು 543 ಸಂಸದರ ಪೈಕಿ ಮಹಿಳೆಯರಿರುವುದು ಕೇವಲ 62. ಅಂದರೆ, ಶೇ11ರಷ್ಟು ಮಾತ್ರ. ದೇಶದ ಒಟ್ಟು ಜನಸಂಖ್ಯೆಯ ಪೈಕಿ ಮಹಿಳೆಯರ ಪ್ರಮಾಣ ಶೇ49 ಎನ್ನುತ್ತದೆ ಚುನಾವಣಾ ಆಯೋಗ.

ಇತ್ತೀಚಿನ ಅಂಕಿಅಂಶಗಳ ಪ್ರಕಾರ, 1957ರಿಂದ 2015ರ ನಡುವಣ ಅವಧಿಯಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದ ಮಹಿಳೆಯರ ಸಂಖ್ಯೆ 45ರಿಂದ 668ಕ್ಕೆ ಹೆಚ್ಚಳವಾಗಿದೆ. ಅಂದರೆ, ಸುಮಾರು 15 ಪಟ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಪುರುಷ ಸ್ಪರ್ಧಿಗಳ ಸಂಖ್ಯೆ 1,474ರಿಂದ 7,583ಕ್ಕೆ ಅಂದರೆ, ಐದು ಪಟ್ಟು ಏರಿಕೆಯಾಗಿದೆ.

ಚುನಾವಣೆಯಲ್ಲಿ ಸ್ಪರ್ಧಿಸಿ ಯಶಸ್ವಿಯಾಗಿರುವ ಪ್ರಮಾಣ ಪುರುಷರಿಗಿಂತಲೂ ಮಹಿಳೆಯರದ್ದೇ ಹೆಚ್ಚಿದೆ. ಆಯಾ ವಿಭಾಗದಲ್ಲಿನ ಒಟ್ಟು ಸ್ಪರ್ಧಿಗಳ ವಿರುದ್ಧ ಜಯ ಗಳಿಸಿದವರ ಸಂಖ್ಯೆಯ ಆಧಾರದಲ್ಲಿ ಇದನ್ನು ಲೆಕ್ಕ ಹಾಕಲಾಗಿದೆ. 1971ರಲ್ಲಿ ಪುರುಷ ಸ್ಪರ್ಧಿಗಳ ಯಶಸ್ಸಿನ ಪ್ರಮಾಣ ಶೇ18ರಷ್ಟಿದ್ದರೆ, ಮಹಿಳೆಯರದ್ದು ಶೇ34ರಷ್ಟಿತ್ತು. ಪ್ರಸಕ್ತ ಲೋಕಸಭೆಯಲ್ಲಿ ಪುರುಷರ ಯಶಸ್ಸಿನ ಪ್ರಮಾಣ ಶೇ6.4ರಷ್ಟಿದ್ದರೆ, ಮಹಿಳೆಯರದ್ದು ಶೇ9.3. ಇದು ಮಹಿಳೆಯರಿಗೆ ಟಿಕೆಟ್‌ ನೀಡಿ ಕಣಕ್ಕಿಳಿಸಿದರೆ ಅವರು ಗೆಲ್ಲುವ ಸಾಧ್ಯತೆ ಹೆಚ್ಚು ಎಂಬುದನ್ನು ತೋರಿಸಿಕೊಟ್ಟಿದೆ ಎಂದು ‘ಫ್ಯಾಕ್ಟ್‌ಲಿ ಡಾಟ್ ಇನ್’ ಜಾಲತಾಣ ಅಭಿಪ್ರಾಯಪಟ್ಟಿದೆ.

ಮಹಿಳಾ ಮೀಸಲು ಮಸೂದೆ

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿ ಕಲ್ಪಿಸಿಕೊಡುವುದಕ್ಕೆ ಸಂಬಂಧಿಸಿದ ಈ ಮಸೂದೆ ಮೊದಲ ಬಾರಿ ಮಂಡನೆಯಾದದ್ದು 1996ರಲ್ಲಿ. ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡರು ಪ್ರಧಾನ ಮಂತ್ರಿಗಳಾಗಿದ್ದಾಗ ಮಹಿಳಾ ಮೀಸಲು ಮಸೂದೆ ಮಂಡಿಸಲಾಗಿತ್ತು. ನಂತರ ಅದನ್ನು ಜಂಟಿ ಸಂಸದೀಯ ಸಮಿತಿಯ ಪರಾಮರ್ಶೆಗೆ ಒಪ್ಪಿಸಲಾಗಿತ್ತು. ಅಷ್ಟರಲ್ಲಿ ಲೋಕಸಭೆ ವಿಸರ್ಜನೆಯಾಗುವುದರೊಂದಿಗೆ ಮಸೂದೆ ಮೂಲೆಗುಂಪಾಯಿತು. 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಸರ್ಕಾರ ಮತ್ತೆ ಮಸೂದೆ ಮಂಡಿಸಿತು. ಆಗಲೂ ಅನುಮೋದನೆ ಪಡೆಯುವುದು ಸಾಧ್ಯವಾಗಲಿಲ್ಲ. 2008ರಲ್ಲಿ ಯುಪಿಎ ಸರ್ಕಾರ ಮಸೂದೆಗೆ ಅನುಮೋದನೆ ಪಡೆಯಲು ನಡೆಸಿದ ಪ್ರಯತ್ನವೂ ವಿಫಲವಾಗಿತ್ತು.

ಕೊನೆಗೂ ರಾಜ್ಯಸಭೆಯಲ್ಲಿ ಅನುಮೋದನೆ ಪಡೆದಿದ್ದ ಯುಪಿಎ 2010ರ ಮಾರ್ಚ್ 9ರಂದು ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯಸಭೆಯಲ್ಲಿ ಬಿಜೆಪಿ ಹಾಗೂ ಎಡ ಪಕ್ಷಗಳ ಸಹಮತದೊಂದಿಗೆ ಮಹಿಳಾ ಮೀಸಲು ಮಸೂದೆಗೆ ಅನುಮೋದನೆ ಪಡೆದು ಹೊಸ ಇತಿಹಾಸವನ್ನೇ ನಿರ್ಮಿಸಿತು. ಆದರೂ ಲೋಕಸಭೆಯಲ್ಲಿ ಅನುಮೋದನೆ ಪಡೆಯುವುದು ಸಾಧ್ಯವಾಗಲಿಲ್ಲ. ಹೀಗಾಗಿ ಮಸೂದೆ ಮತ್ತೆ ನನೆಗುದಿಗೆ ಬಿದ್ದಿತು.ಈ ಮಸೂದೆಯಲ್ಲಿದ್ದ ವಿಷಯವಾದರೂ ಏನು?

* ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿ

* ಮೀಸಲು ಸ್ಥಾನಗಳನ್ನು ಸಂಸತ್ ಸೂಚಿಸಿದ ಪ್ರಾಧಿಕಾರವೊಂದು ನಿರ್ಧರಿಸಬೇಕು

* ಮಹಿಳೆಯರಿಗೆ ಮೀಸಲಿರಿಸಿದ ಸ್ಥಾನಗಳಲ್ಲಿ ಮೂರನೇ ಒಂದನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗಾಗಿ ಮೀಸಲಿಡಬೇಕು

* ಮೀಸಲಿರಿಸಿದ ಸ್ಥಾನಗಳನ್ನು ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಯ ವಿವಿಧ ಕ್ಷೇತ್ರಗಳಿಗೆ ರೊಟೇಶನ್ ಆಧಾರದಲ್ಲಿ ಹಂಚಿಕೆ ಮಾಡಬೇಕು

* ಕಾನೂನಾಗಿ ರೂಪುಗೊಂಡ 15 ವರ್ಷಗಳ ಬಳಿಕ ಮೀಸಲು ಮಸೂದೆ ಅಸ್ತಿತ್ವ ಕಳೆದುಕೊಳ್ಳಬೇಕು

ಮಸೂದೆಗೆ ಇರುವ ವಿರೋಧಗಳು

ಮಹಿಳಾ ಮೀಸಲು ಮಸೂದೆಯಿಂದ ಪ್ರಜಾಪ್ರಭುತ್ವದಲ್ಲಿ ಸ್ತ್ರೀಯರ ಪ್ರಾತಿನಿಧ್ಯ ಹೆಚ್ಚಿಸಬಹುದು ಎಂಬುದು ಮಸೂದೆಯ ಪರವಾದ ಪ್ರಮುಖ ಅಂಶ. ಅದೇ ರೀತಿ, ಮಸೂದೆಯ ವಿರುದ್ಧವಾದ ಹಲವು ಅಂಶಗಳೂ ಇವೆ. ಮಸೂದೆ ಬಗ್ಗೆ ಆಕ್ಷೇಪಿಸುವವರು ಮಂಡಿಸುವ ವಾದ ಹೀಗಿದೆ:

* ನಿರ್ದಿಷ್ಟ ಕ್ಷೇತ್ರವೊಂದನ್ನು ಮಹಿಳೆಯರಿಗೆಂದು ಮೀಸಲಿರಿಸಿದಲ್ಲಿ ಆ ಕ್ಷೇತ್ರದಲ್ಲಿ ಪುರುಷರು ಸ್ಪರ್ಧೆಯಿಂದ ದೂರವುಳಿಯುವುದು ಅನಿವಾರ್ಯವಾಗುತ್ತದೆ. ಇದು ಒಬ್ಬರ ಪ್ರಜಾಸತ್ತಾತ್ಮಕ ಹಕ್ಕನ್ನು ಲಿಂಗದ ಆಧಾರದಲ್ಲಿ ನಿರಾಕರಿಸಿದಂತೆ

* ಮತದಾರ ಆಯ್ಕೆಯನ್ನು ಸೀಮಿತಗೊಳಿಸುತ್ತದೆ. ಪುರುಷ ಅಭ್ಯರ್ಥಿಗೆ ಮತನಾದ ಮಾಡಬೇಕು ಎಂದುಕೊಂಡಿರುವ ಮತದಾರನ ಆಯ್ಕೆಯ ಹಕ್ಕನ್ನು ಕಸಿದಂತಾಗಲಿದೆ

* 543 ಲೋಕಸಭಾ ಕ್ಷೇತ್ರಗಳಲ್ಲಿ 131 ಸ್ಥಾನಗಳನ್ನು ಈಗಾಗಲೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳವರಿಗಾಗಿ ಮೀಸಲಿಡಲಾಗಿದೆ. ಹೀಗಾಗಿ ಇನ್ನೂ ಶೇಕಡಾ 33ರಷ್ಟು ಮೀಸಲಾತಿ ನೀಡುವುದು ಜನರ ಆಶಯಕ್ಕೆ ವಿರುದ್ಧವಾಗಿದ್ದರೂ ಇರಬಹುದು

* ಸಂಸತ್‌ನಲ್ಲಿ ಕಡಿಮೆ ಸಂಖ್ಯೆಯ ಮಹಿಳಾ ಪ್ರತಿನಿಧಿಗಳಿರುವುದಕ್ಕೆ ಕಾರಣವೇನು ಎಂಬುದು ಮಸೂದೆಯಲ್ಲಿ ಅಡಕವಾಗಿಲ್ಲ. ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವಂತೆ ಮಹಿಳೆಯರಿಗೆ ಪ್ರೋತ್ಸಾಹ ನೀಡುವುದು, ರಾಜಕೀಯ ಪಕ್ಷಗಳ ಕಾರ್ಯಕಾರಿ ಸಮಿತಿಗಳಲ್ಲಿ ಅವರನ್ನು ಆಂತರಿಕ ಸದಸ್ಯೆಯರನ್ನಾಗಿ ನೇಮಕ ಮಾಡಿಕೊಳ್ಳುವ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವ ಮೂಲಕ ಮಹಿಳಾ ಪ್ರತಿನಿಧಿಗಳ ಸಂಖ್ಯೆ ಹೆಚ್ಚಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಬಹುದು

* 15 ವರ್ಷಗಳ ನಂತರ ಮಸೂದೆ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಪ್ರಸ್ತಾವಿತ ಕಾನೂನಿನಲ್ಲಿದೆ. ಆದರೆ, ಹಿಂದಿನ ಮತ್ತು ಈಗಿನ ರಾಜಕಾರಣವನ್ನು ಗಮನಿಸಿದರೆ ಒಮ್ಮ ಅಸ್ತಿತ್ವಕ್ಕೆ ಬಂದ ಮೀಸಲಾತಿಯನ್ನು ಯಾವುದೇ ಆಡಳಿತ ಪಕ್ಷವೂ ಹಿಂತೆಗೆಯುವ ಧೈರ್ಯ ತೋರುವುದಿಲ್ಲ.

ರಾಜ್ಯಸಭೆಯಲ್ಲಿ ಮಸೂದೆಗೆ ಅನುಮೋದನೆ ಪಡೆದಿದ್ದ ಯುಪಿಎ (II) ಸರ್ಕಾರ ಲೋಕಸಭೆಯಲ್ಲಿಯೂ ಅದನ್ನು ಮಂಡಿಸಲು ಮುಂದಾಗಿತ್ತು. ಆದರೆ, ಪ್ರಾದೇಶಿಕ ಪಕ್ಷಗಳಾದ ರಾಷ್ಟ್ರೀಯ ಜನತಾ ದಳ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಮತ್ತು ತೃಣಮೂಲ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸಿದ್ದವು. ವಿಶೇಷವೆಂದರೆ, ಆಗ ವಿರೋಧ ವ್ಯಕ್ತಪಡಿಸಿದ್ದ ಪಕ್ಷಗಳೆಲ್ಲ ಈಗ ಕಾಂಗ್ರೆಸ್‌ ಮಿತ್ರಪಕ್ಷಗಳಾಗಿವೆ.

ಮಹಿಳಾ ಪ್ರಾತಿನಿಧ್ಯದಲ್ಲಿ ನಮ್ಮ ದೇದ ಹಿಂದಿದೆ

ವಿಶ್ವಸಂಸ್ಥೆಯಲ್ಲಿ ಕಳೆದ ವರ್ಷ ನಡೆದಿದ್ದ ಮಹಿಳೆಯರ ಸ್ಥಾನಮಾನ ಕುರಿತ ಚರ್ಚೆ ವೇಳೆ ಅಂತರ್–ಸಂಸದೀಯ ಒಕ್ಕೂಟ (ಐಪಿಯು) ‘ರಾಜಕೀಯದಲ್ಲಿ ಮಹಿಳೆಯರು’ ಎಂಬ ಮಾಹಿತಿಯನ್ನು ಪ್ರಸ್ತುತಪಡಿಸಿತ್ತು. ಇದರ ಪ್ರಕಾರ, ಸಂಸತ್ತಿನಲ್ಲಿ ಮಹಿಳೆಯರ ಪ್ರಾತಿನಿಧ್ಯ (2017ರ ಜನವರಿ ವರೆಗಿನ ಲೆಕ್ಕಾಚಾರದ ಪ್ರಕಾರ) ವಿಚಾರದಲ್ಲಿ ಭಾರತವು 193 ದೇಶಗಳ ಪಟ್ಟಿಯಲ್ಲಿ 148ನೇ ಸ್ಥಾನ ಪಡೆದಿದೆ. ಸಚಿವ ಸ್ಥಾನದಲ್ಲಿ ಮಹಿಳೆಯರ ಪ್ರಾತಿನಿಧ್ಯ (2017ರ ಜನವರಿ ವರೆಗಿನ ಲೆಕ್ಕಾಚಾರದ ಪ್ರಕಾರ) ವಿಚಾರದಲ್ಲಿ ಭಾರತವು 186 ದೇಶಗಳ ಪೈಕಿ 88ನೇ ಸ್ಥಾನದಲ್ಲಿದೆ.

ಒಟ್ಟಾರೆ ಹೇಳುವುದಾದರೆ ಮಹಿಳೆಯೆನ್ನುವ ಶಕ್ತಿಯನ್ನು ಹತ್ತಿಕ್ಕಲು ಹವಣಿಸುವ ಸಮಾಜದ ವಿರುದ್ಧ ಮಹಿಳೆ ಭೂಮಿಯಷ್ಟು ತಾಳ್ಮೆಯನ್ನು ಹೊಂದಿ ತನ್ನ ನಿಲುವಿಗೆ ಹಾಗೂ ತನ್ನ ಅಸ್ತಿತ್ವಕ್ಕೆ ಹೋರಾಟ ಮಾಡುತ್ತಲೇ ಬಂದಿರುವುದು ಎಲ್ಲರಿಗೂ ತಿಳಿದ ವಿಚಾರ.ಮಹಿಳೆಯ ಬಗ್ಗೆ ಸಮಯ ಬದಲಾದರೂ ಮನಸ್ಥಿತಿ ಇನ್ನು ಹಾಗೆ ಇದೆ.ಅದಕಾಗಿ ನಮ್ಮ ಹಕ್ಕನ್ನು ನಾವು ಪಡೆದುಕೊಳ್ಳುವುದನ್ನು ಯಾರು ತಡೆಯಲು ಸಾಧ್ಯವಿಲ್ಲ.ಪುರುಷ ಪ್ರಧಾನ ಸಮಾಜದ ದೃಷ್ಟಿಕೋನ ಬದಲಾಗಬೇಕು.ಆ ನಿಟ್ಟಿನಲ್ಲಿ ಬದಲಾವಣೆಯ ಹೆಜ್ಜೆ ಇಡಲಾಗಿದ್ದು ಸಕಾರಾತ್ಮಕ ಚಿಂತನೆಗೆ ಅವಕಾಶ ನೀಡಿದಂತೆ.ಆದರೂ ಮಹಿಳೆಯರು ಶೈಕ್ಷಣಿಕವಾಗಿ ಮಾನಸಿಕವಾಗಿ,ಆರ್ಥಿಕವಾಗಿ,ಬೌದ್ಧಿಕವಾಗಿ,ಆಧ್ಯಾತ್ಮಿಕವಾಗಿ, ಸಬಲರಾಗಬೇಕಾಗಿರುವುದು ಹಿಂದಿಗಿಂತ ಇಂದು ಅನಿವಾರ್ಯವೆಂದರೆ ತಪ್ಪಾಗದು.


ಶಿವಲೀಲಾ ಹುಣಸಗಿ

2 thoughts on “

  1. ತುಂಬಾ ಉತ್ತಮ ಲೇಖನ.ಪ್ರತಿ ಸಾಲುಗಳೂ ಅಕ್ಷರಶ: ಸತ್ಯ….ಎಲ್ಲಾ ಮುಖಗಳನ್ನು ತುಂಬಾ ಚೆನ್ನಾಗಿ ಬರೆದಿದ್ದೀರಿ.ನಿಮಗೆ ನೀವೇ ಸಾಟೀ ಕಣ್ರೀ.

Leave a Reply

Back To Top