
ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ
ಅನಿರೀಕ್ಷಿತ
ಅರುಣಾ ರಾವ್

ಆ ಕಡ್ಯಾಗ ಮಣ್ಣದೆ, ಜಾರ್ವದೂ, ಸ್ವಲ್ಪು ಜ್ಯಾಪಾನ! ಎಚ್ಚರಿಸಿದಳು ಶಿವಮ್ಮ. ಅವಳ ಮೂರು ವರ್ಷದ ಗಂಡುಡುಗ ಪಾಯ ತೆಗೆದಿದ್ದ ಗುಳಿ ಪಕ್ಕದಲ್ಲಿ ಕುಳಿತು, ಮೊನ್ನೆ ಪಾಯ ಅಗೆಯುತ್ತಿರುವಾಗ ಸಿಕ್ಕ ಮುರುಕಲು ಕಾರೊಂದನ್ನು ನೆಲಕ್ಕೆ ಉಜ್ಜುತ್ತಾ ಆಟವಾಡುತ್ತಿದ್ದ. ತಲೆಯ ಮೇಲೆ ಮಡ್ಡಿ ತುಂಬಿದ ಭಾರವಾದ ಬಾಣಲೆಯನ್ನು ಹೊತ್ತು ಸಾಗುತ್ತಿದ್ದ ಆಕೆ, ಕೂಗಿದಾಗ, ತಾಯಿಯ ಧ್ವನಿ ಕಿವಿಗೆ ಬೀಳುತ್ತಲೂ ತಲೆಯೆತ್ತಿ ನೋಡಿದ ಮಾಲತೇಶ ಕಿರು ನಗೆಯನ್ನು ಸೂಸಿ, ಆಟವನ್ನು ಮುಂದುವರೆಸಿದ. ಅವಳ ಗಂಡ ದೇವಪ್ಪ, ತಲೆ ತಗ್ಗಿಸಿಕೊಂಡು ಸಿಮೆಂಟು, ಮರಳು, ಜಲ್ಲಿ ಮಿಶ್ರಿತ ಕಾಂಕ್ರೀಟನ್ನು ಕಲಿಸುವುದರಲ್ಲಿ ನಿರತನಾಗಿದ್ದ. ದೂರದಲ್ಲಿ ನಿಂತು ಸಿಗರೇಟನ್ನು ಸೇದುತ್ತಿದ್ದ ಮೇಸ್ತ್ರಿಯ ಮೊಬೈಲ್ ರಿಂಗಾದಾಗ, “ಹಲೋ, ಹ್ಞಾ, ಹ್ಞಾ ……………ಹೌದಾ……… ಎಂದವನೇ, ಈ ಕರೋನಾದಿಂದ ನಮಗೆ ಉಳಿಗಾಲವಿಲ್ಲ ತತ್” ಎಂದು ಹೇಳಿ ಫೋನಿಟ್ಟ. ದೇವಪ್ಪ, ಶಂಕ್ರಣ್ಣ …ನೋಡ್ರೋ. ನಾಳೆಯಿಂದ ಲಾಕ್ ಡೌನಂತೆ. ಯಾರೂ ಕೆಲಸ ಮಾಡಂಗಿಲ್ಲಂತೆ. ಇವತ್ತೇ ಕಡೆ ಕಣ್ರೋ, ಇನ್ನು ಹದಿನೈದು ದಿನ ಇಡೀ ದೇಶದಲ್ಲಿ ಯಾರೂ ಎಲ್ಲೂ ಕೆಲಸ ಮಾಡಂಗಿಲ್ಲ. ಮೋದಿ ಈಗಷ್ಟೇ ಟಿ ವಿಯಲ್ಲಿ ಹೇಳಿದ್ರಂತೆ ಎಂದಾಗ, ಕೆಲಸಗಾರರೆಲ್ಲರೂ ಮುಖ ಮುಖ ನೋಡಿಕೊಂಡರು. ಅಲ್ಲೇ ಇದ್ದ ಗಾರೆ ಕೆಲಸದ ಶಂಕ್ರ, ಹೌದು ಸರ್, ಕೊರೋನಾ ಸಕತ್ ಕಾಯಲೆಯಂತೆ………… ನೆನ್ನೆ ನ್ಯೂಸ್ನಾಗೆ ತೋರುಸ್ತಾ ಇದ್ರು, ಏನ್ ರೋಗ್ವೋ ಏನೋ, ಬೇರೆ ದೇಶದಾಗೆಲ್ಲಾ ಜನ ನೊಣ ಸಾಯಂಗೆ ಸಾಯ್ತವರಂತೆ, ಮೊನ್ನೆ ನಮ್ ಕಲ್ಬುರ್ಗಿಲೀ ಕೂಡ ಸಾವಾಗಿದ್ಯಲ್ಲ……… ಆಗಿಂದ ನಮ್ಮನೇವರೆಲ್ಲಾ ಒಂದೇ ಫೋನು. ಮನೇಗ್ಬದ್ವಿಡು ಬಂದ್ಬಿಡು ಅಂತ”ಎಂದನು.
ಅಷ್ಟರಲ್ಲಿ ಬಿಳಿ ಬಣ್ಣದ ಐ10 ಕಾರೊಂದು ಬಂದು ನಿಂತಿತು. ಅದು ಈ ಮನೆ ಮಾಲೀಕರ ಕಾರೆಂದು ಕೆಲಸರಾರರಿಗೆಲ್ಲಾ ಚಿರಪರಿಚಿತವಾಗಿತ್ತು. ಕಾರಿಳಿದವರು ನೇರವಾಗಿ ಮೇಸ್ತ್ರಿ ಯ ಬಳಿ ಬಂದು, “ಏನು ಹೀಗಾಗೋಯ್ತಲ್ಲಾ, ರಮೇಶ್, ಈಗ ಕೆಲಸ ನಿಲ್ಲಿಸಲೇ ಬೇಕಾಗುತ್ತೆ. ಎಲ್ಲಾ ಲಾಸಾಯ್ತು…… ಮುಂದಿನ ಅಕ್ಟೋಬರ್ನಲ್ಲಿ ಗೃಹಪ್ರವೇಶ ಇಟ್ಟು ಕೊಳ್ಳೋಣ ಅಂತಿದ್ದೆ. ಈಗ ಈ ಲಾಕ್ ಡೌನ್ ಎಷ್ಟು ದಿನ ಮುಂದುವರೆಯುತ್ತೋ ಗೊತ್ತಾಗ್ತಾ ಇಲ್ಲ” ಎಂದು ಪೇಚಾಡಿಕೊಂಡರು.
“ಊನ್ ಸರ್, ರಜಾ ಅಂದ ಕೂಡ್ಲೆ ಇವರೆಲ್ಲಾ ಊರುಗಳಿಗೆ ಹೋಗಿ ಕೂತ್ಕೊಂಡು ಬಿಡ್ತಾರೆ, ಆಮೇಲೆ ಕೆಲಸ ಶುರು ಮಾಡೋದೇ ಕಷ್ಟ ಆಗ್ ಬಿಡುತ್ತೆ” ಎಂದ ಮೇಸ್ತ್ರಿ ಮಾತಿಗೆ ತಲೆದೂಗಿದರು. “ಏನು ಮಾಡೋದು, ಎಲ್ಲರಿಗಾದದ್ದು ನಮಗೂ ಆಗುತ್ತೆ, ಸದ್ಯ ಜೀವ ಇದ್ರೆ ಜೀವನ ಪ್ರಾಣ ಉಳಿದ್ರೆ ಸಾಕು ಅನ್ನುವಂತ ಪರಿಸ್ಥಿತಿ. ಈವತ್ತಿನ ಕೂಲಿ ಕೊಟ್ಟು ಕಳಿಸಿ ಬಿಡಿ” ಎಂದು ಜೇಬಿನಿಂದ ಹಣ ತೆಗಡದು ಕೊಟ್ಟರು. ಕಾರ್ ಚಲಿಸಿತು
ತಾವು ಮಾಡುತ್ತಿದ್ದ ಕೆಲಸವನ್ನು ಬೇಗಬೇಗನೆ ಮುಗಿಸಿ, ಕೂಲಿಪಡೆದು ಎಲ್ಲರೂ ಮನೆಗಳಿಗೆ ತೆರಳಿದರು. ಆ ಕಟ್ಟಡದಲ್ಲೇ ವಾಚ್ಮನ್ ಆಗಿದ್ದ ದೇವಪ್ಪ, ಶಿವಮ್ಮ ಮತ್ತು ಅವರ ಮಗ ಮಾತ್ರ ಅಲ್ಲೇ ಉಳಿದುಕೊಂಡರು. “ನಾವೂ ಊರಿಗಿ ಹೋಗೋಣು….. ಇಲ್ಲಿ ನಮ್ಮವರು ಅಂತ ಯಾರಿದ್ದಾರು? ಅಲ್ಲಾದ್ರೆ ನಮ್ಮ ಮಂದಿ ಇರುರ್ತಾರು…… ಇಲ್ಲಿದ್ದು ಏನು ಮಾಡೋಣು….” ಎಂದ ಶಿವಮ್ಮನ ಮಾತಿಗೆ, ” ಮಾಲೀಕರು ಹೇಳಿಲ್ವಾ, ಲಾಕ್ ಡೌನ್ ಇರೋದರಿಂದ ನಾನೂ ಇಲ್ಲಿಗೆ ಬರಕ್ಕಾಗಲ್ಲಾ, ಮನೆ ಕಡೆ ಜೋಪಾನಾ ಅಂತಾ….. ನಾವು ಹೇಳ್ದೆ ಕೇಳ್ದೆ ಹೊಂಟ್ರೆ ಹ್ಯಾಂಗಾತದು?” ಎಂದನು. ಆದರೂ ನಾವು ಊರಿಗೆ ಹೊರಟು ಹೋಗೋಣ ಎಂದು ಅವನಿಗೂ ಅನ್ನಿಸತೊಡಗಿತು. ಗಂಡನಮಾತಿಗೆ ಮರು ಮಾತಾಡದೆ ಜೋಳದ ರೊಟ್ಟಿ ಬಡಿಯತೊಡಗಿದಳು ಶಿವಮ್ಮ.
ಎರಡು ದಿನ ಕಳೆಯುವುದರೊಳಗಾಗಿ ತವರು ಮನೆಯಿಂದ, ಗಂಡನ ಮನೆಯಿಂದ ಹತ್ತಾರು ಫೋನುಗಳು ಬರತೊಡಗಿದವು. ಊರಿಗಿ ಬಂದುಬಿಡ್ರೀ, ಬೆಂಗಳೂರಾಗೆ ಕರೊನಾ ಜಾಸ್ತಿ ಅದಾವಂತೆ, ಜೀವ ಇದ್ರೀ ಗಂಜಿ ಕುಡದಾದ್ರೂ ಬದಕೊಬೋದು……….ಬ್ಯಾಗ ಹೊಂಡ್ರಿ……..ಎಂದು ಪದೇಪದೇ ಹೇಳತೊಡಗಿದಾಗ ದೇವಪ್ಪನಿಗೂ ಅದೇ ಸರಿ ಕಂಡು, ಮಾಲೀಕರಿಗೆ ಫೋನ್ ಹಚ್ಚಿದ. ““ನಾನು ಇರಂಗಿಲ್ರಿ, ಊರಿಗೆ ಹೋತೀನ್ರಿ ಅಂದಾಗ, ನೀನಿ ಹೀಗಂದ್ರೆ ಹ್ಯಾಗೆ? ಸಿಮೆಂಟ್ ಚೀಲಗಳು, ಕಂಬಿಗಳೆಲ್ಲಾ ಇವೆ. ಯಾರಾದ್ರೂ ತಗೊಂಡು ಹೋದ್ರೆ ಯಾರು ಹೊಣೆ. ನೀನು ಅಲ್ಲೇ ಇರು, ಏನಾಗಲ್ಲಾ, ತಿಳೀತಾ……..ಅವರಿನ್ನೂ ಮಾತನಾಡುತ್ತಲೇ ಇದ್ದರು. ಶಿವಮ್ಮ ಫೋನನ್ನು ಕಟ್ ಮಾಡಿ, ಅವರಿಗೇನು ಹೇಳ್ತಾರೆ, ಜೀವ ಹೋದ್ರೆ ಯಾರು ತರಾವಲ್ರು…ಎನ್ನುತ್ತಾ ಮಾಲತೇಶನ ಬಟ್ಟೆ, ತನ್ನ ಬಟ್ಟೆಗಳನ್ನು ಮೂಟೆ ಕಟ್ಟತೊಡಗಿದಳು. ಮೂರು ನಾಲ್ಕು ಪಾತ್ರೆಗಳನ್ನು ಒಂದರೊಳಗೊಂದು ಹಾಕಿ ಚೀಲದಲ್ಲಿಟ್ಟ ದೇವಪ್ಪನಿಗೆ ಇಲ್ಲಿದ್ದರೆ ತಾವು ಬದುಕುವುದು ಅನುಮಾನ ಎನ್ನಿಸತೊಡಗಿತು. ಕಟ್ಟಿದ ಮೂಟೆಗಳನ್ನು ಹೊತ್ತು ತಾವಿದ್ದ ಶಡ್ಡಿಗೆ ಬೀಗ ಜಡಿದು ಅದನ್ನು ಅರ್ಧಂಬರ್ಧ ಕಟ್ಟಿದ್ದ ಕಟ್ಟಡದ ದೇವರ ಮನೆಯಲ್ಲಿಟ್ಟು, ಅದರ ಮೇಲೊಂದು ಕಲ್ಲನ್ನಿಟ್ಟು ಹೊರಟರು.
ಹೆಗಲ ಮೇಲೆ ಮಾಲತೇಶನನ್ನು ಕುಳ್ಳರಿಸಿ ಕೊಂಡು ಕೈಯಲ್ಲೊಂದು ಚೀಲವನ್ನು ಹಿಡಿದಿದ್ದ ದೇವಪ್ಪನ ಪಕ್ಕದಲ್ಲಿ ನಿಂತಿದ್ದ ಶಿವಮ್ಮನ ಕಂಕುಳಲ್ಲಿ ಬಟ್ಟೆಗಳ ಗಂಟಿತ್ತು. ರಾಯಚೂರಿಗೆ ಹೋಗುವ ಹೆದ್ದಾರಿಯ ರಸ್ತೆಯ ಬದಿಯಲ್ಲಿ ನಾಲ್ಕ್ಯೆದು ಗಂಟೆಗಳಿಂದ ಕಾದಿದ್ದರೂ ಒಂದೂ ವಾಹನ ಬರಲಿಲ್ಲ. ಕಾದೂ ಕಾದೂ ಬೇಸತ್ತ ಶಿವಮ್ಮ ಅಲ್ಲೆ ಇದ್ದ ಕಲ್ಲಿನ ಮೇಲೆ ಕುಳಿತಳು. ಮಾಲತೇಶ ತಂದೆಯ ಹೆಗಲಿನಿಂದಿಳಿದು ಅಮ್ಮನ ಮುಂಭಾಗದಲ್ಲಿ ಕುಳಿತು ಮಣ್ಣಿನಲ್ಲಿ ಆಡತೊಡಗಿದ .
ಬೆಳಗಿನಿಂದ ಕಾದಿದ್ದರೂ ನೇಸರ ಪಡುವಣದ ಹಾದಿ ಹಿಡಿಯುವಸಮಯದಲ್ಲಿ ಸರಕು ಸಾಗಾಣಿಕಾ ಲಾರಿಯೊಂದು ಬರುತ್ತಿರುವುದನ್ನು ಕಂಡ ದೇವಪ್ಪ ಕೈ ತೋರಿಸುತ್ತಾ ನಿಲ್ಲಿಸುವಂತೆ ಕೂಗತೊಡಗಿದ. ವಾಹನ ಸ್ವಲ್ಪ ಮುಂದೆ ಹೋಗಿ ನಿಂತಿತು. ಇದೂ ನಿಲ್ಲುತ್ತೋ ಇಲ್ಲವೋ ಎಂಬ ಅನುಮಾನದಿಂದಲೆ ಕೈತೋರಿಸುತ್ತಿದ್ದ ದೇವಪ್ಪ, ಲಗುಬಗೆಯಿಂದ ಅದರ ಬಳಿಗೋಡಿದನು. “ರಾಯಚೂರಿಗೆ ಹೋಗಬೇಕಿತ್ತು ಕಣಣ್ಣ, ಬೆಳಗ್ ನಿಂದ ನಿಂದ್ರಿದ್ರೂ ಒಂದೂ ವಾಹನ ಬರವಲ್ದು, ನೀ ಅತ್ತ ಕಡಿ ಹೊಂಟಿಯಂದ್ರ ನಮ್ಮನ್ನ ಕರೆದೊಯ್ಯಿ”, ಎಂದಾಗ ಚಾಲಕ, ʼಒಬ್ಬನೆನಾ?ʼ ಕೇಳಿದ. ಇಲ್ಲಪ್ಪೋ, ನಮ್ಮನಿಯವ್ರು, ಮಗನ್ ಕೂಡ……ಎಂದಾಗ ಚಾಲಕ ತನ್ನ ತಲೆ ಹೊರಗಿಟ್ಟು ಬಗ್ಗಿ ನೋಡಿದ. ಅವನ ರೂಪ ಭಯ ಹುಟ್ಟಿಸುವಂತಿತ್ತು. ಕೆಂಪಾದ ಕಣ್ಣು ಗುಡ್ಡೆಗಳು, ದಪ್ಪ ಮೀಸೆ ಅವನ ಕರೀ ಮುಖವನ್ನು ಭಯಂಕರವನ್ನಾಗಿಸಿದ್ದವು. ಕತ್ತಿಗೆ ಕಟ್ಟಿಕೊಂಡಿದ್ದ ಬಿಳೀ ಕರವಸ್ತ್ರ ಮಣ್ಣು ರಸ್ತೆಯ ಬಣ್ಣಕ್ಕೆ ತಿರುಗಿತ್ತು. ತೊಟ್ಟ ಅಂಗಿಯಿಂದ ಬರುತ್ತಿದ್ದ ವಾಸನೆ ತಡೆಯಲಸಾಧ್ಯವಾಗಿತ್ತು. “ನಮ್ಮನ್ನ ಕರೆದೊಯ್ಯಂಗಿದ್ರೆ ಹೇಳ್ರಲ್ಲಾ………” ದೇವಪ್ಪ ಮತ್ತೊಮ್ಮೆ ಕೇಳಿದಾಗ ‘ʼಒಕೆ’ಎಂದಂದು ನಕ್ಕಾಗ ಪಾನ್ ಪರಾಗ್ ತಿಂದು ಕೆಂಬಣ್ಣಕ್ಕೆ ತಿರುಗಿದ್ದ ಹಲ್ಲುಗಳ ದರ್ಶನವಾಯಿತು. ಲಾರಿ ಹೆದ್ದಾರಿಯಲ್ಲಿ ಮಂದಗತಿಯಲ್ಲಿ ಸಾಗತೊಡಗಿತು.
ರಸ್ತೆಗೆಲ್ಲಾ ಇವರದೊಂದೇ ವಾಹನ, ಸುತ್ತಲೂ ಕಾರ್ಗತ್ತಲು. ಚಾಲಕನ ಪಕ್ಕದಲ್ಲಿ ದೇವಪ್ಪ, ಅವನ ಪಕ್ಕದಲ್ಲೇ ತಲೆಯ ಮೇಲೆ ಸೆರಗೊದ್ದು ಕುಳಿತಿದ್ದ ಶಿವಮ್ಮ ನ ಮಡಿಲಲ್ಲಿ ಕುಳಿತಿದ್ದ ಮಾಲತೇಶ ನಿದ್ರೆಗೆ ಜಾರಿದ್ದ. ಲಾರಿ ಯಾವುದ್ಯಾವುದೋ ಹಳ್ಳಿಗಳನ್ನು, ಪಟ್ಟಣಗಳನ್ನು ದಾಟಿ ಮುಂದೆ ಚಲಿಸುತ್ತಿದ್ದ ರೂ ಲಾಕ್ ಡೌನಿನ ಪರಿಣಾಮವಾಗಿ
ಅವೆಲ್ಲವೂ ನಿರ್ಮಾನುಷವಾಗಿತ್ತು. ಬೆಳಗಿನ ಜಾವಕ್ಕೆ ಹೊರಟಿದ್ದರಿಂದ ನಿನ್ನೆ ತಿಂದು ಉಳಿದಿದ್ದ ಐದಾರು ಜೋಳದ ರೊಟ್ಡಿಗಳನ್ನು ಬುತ್ತಿ ಕಟ್ಡಿಕೊಂಡಿದ್ದಳಾದರೂ ಮಧ್ಯಾನ್ಹದ ವೇಳೆಗೆ ಮೂರು ರೊಟ್ಟಿಗಳನ್ನು ತಿಂದಾಗಿತ್ತು. ಈಗ ಉಳಿದಿರುವ ಎರಡೇ ಎರಡು ಯಾರಿಗೂ ಸಾಲುವಂತಿರಲ್ಲಿಲ್ಲ “ಈ ಕರೋನ ಬಡವರ ಹೊಟ್ಟೀ ಮ್ಯಾಲೆ ಹೊಡ್ದಿದ್ರೀ… ಎನ್ನುತ್ತಾ ಮಾತಿಗಾರಂಭಿಸಿದ ದೇವಪ್ಪ. ಅವನು ಹುಟ್ಟು ಮಾತುಗಾರ. ಕಲ್ಲನಾದರೂ ಮಾತನಾಡಿಸದೆ ಬಿಡುತ್ತಿರಲಿಲ್ಲ. ಈಗ ಅವನಾಡುವ ಮಾತಿನ ನಡುವೆ ತಮ್ಮ ಪರಿಸ್ಥಿತಿಯೂ ನುಸುಳಿ, ಶಿವಮ್ಮನ ಒತ್ತಾಯ ಮತ್ತು ಒತ್ತಾಸೆಯ ಬಗ್ಗೆ ವಿವರಿಸುವಾಗ ಅವನು ತನ್ನ ಸೀಟಿನಿಂದ ಬಗ್ಗಿ ಅವಳ ಕಡೆ ನೋಡಿ ನಕ್ಕನು. ಇದರಿಂದಾಗಿ ಅವಳಿಗೆ ಸ್ವಲ್ಪ ಕಸಿವಿಸಿಯಾಯಿತು. ತನ್ನ ಸೆರಗನ್ನು ಸರಿಪಡಿಸಿಕೊಳ್ಳುತ್ತಾ ಗಂಡನ ಕಡೆಗೆ ನೋಡಿದಳು. ಅವನು ಮಾತಿನಲ್ಲಿ ತಲ್ಲೀನನಾಗಿದ್ದನು. ಚಾಲಕನ ದೃಷ್ಟಿ ಆಗಾಗ ಶಿವಮ್ಮನ ಕಡೆಗೆ ಹರಿಸುತ್ತಿದ್ದದ್ದು ಅವಳ ಮನದಲ್ಲಿ ಕಾಣದ ಭೀತಿನಿದ್ದೆಯಿಂದ ಎದ್ದ ಮಾಲತೇಶ ಹಸಿವು ಎನ್ನುತ್ತಾ ಅಳತೊಡಗಿದ . ಅವನನ್ನು ಸಮಾಧಾನ ಪಡಿಸುತ್ತಿರುವಾಗ ಅಳಬೇಡ ಮರೀ ಊಟ ಮಜಬೂತಾಗೇ ಸಿಗುತ್ತೆ ಎಂದಂದು ಶಿವಮ್ಮನ ಕಡೆಗೆ ಒಂದು ತರಾ ನೋಡಿ ವೇಗವನ್ನುಹೆಚ್ಚಿಸಿದ.ಕೆಲವೇನಿಮಿಷಗಳಲ್ಲಿ ಲಾರಿಯು ಮನೆಯೊಂದರ ಮುಂದೆ ನಿಂತಿತ್ತು. ಲಾರಿ ನಿಲ್ಲಿಸಿ ತಾನು ಕೆಳಗಿಳಿದು ಅವರಿಗೂ ಇಳಿಯಲು ಸೂಚಿಸಿದ. ಮನೆಯೊಳಗಿನ ವಿದ್ಯುತ್ ದೀಪಗಳು ಮಂದವಾಗಿ ಉರಿಯುತ್ತಿದ್ದವು. ಮನೆಯ ಹಿಂಭಾಗದಲ್ಲಿ ಬಹಳ ದೂರದವರೆಗೂ ಎತ್ತರವಾದ ನೀಲಗಿರಿ ಮರಗಳು ಯಾವುದೋ ರಹಸ್ಯವನ್ನು ಹಿಡಿದಿಟ್ಟಿರುವಂತೆ ಕಾಣುತ್ತಿದ್ದವು. ಜೀರುಂಡೆಗಳ ಸದ್ದನ್ನುಳಿದು ಅಲ್ಲಿ ಇನ್ನಾವ ಸದ್ದೂ ಇರಲಿಲ್ಲ. ಬಾಲಕನ ಹಿಂದೆ ತಾನೂ ಕೆಳಗಿಳಿದ ದೇವಪ್ಪ ಹೆಂಡತಿಗೆ ಇಳಿ ಎಂದಂದು, ಮಾಲತೇಶನ ಕಡೆಗೆ ಕೈ ಚಾಚಿದನು. ಅವನನ್ನು ಗಕ್ಕನೆ ಎದೆಗೊತ್ತಿಕೊಂಡ ಅವಳು ಆತಂಕದಿಂದ ಅವನೆಡೆಗೆ ನೋಡಿಇಳಿಯುವುದಿಲ್ಲವೆಂದು ತಲೆಯಾಡಿಸಿದಳು. ದೇವಪ್ಪನಿಗೆ ಅವಳ ಮನದಿಂಗಿತ ಅರಿವಾಯಿತು. ಅವನು ಚಾಲಕನ ಕಡೆ ತಿರುಗಿ, “ಅಣ್ಣ, ನಮ್ಮಕೂಡೆ ಜ್ವಾಳದ ರೊಟ್ಟಿ ಆದಾವ್ರಿ ನಮಗಷ್ಟೇ ಸಾಕ್ರೀ. ನೀವು ಹೋಗಿ ಉಂಡು ಬರ್ರಿ” ಎಂದನು.
ಚಾಲಕ ಅವನ ಕಡೆಗೊಮ್ಮೆ ಶಿವಮ್ಮನ ಕಡೆಗೊಮ್ಮೆ ನೋಡಿ, ಮರುಮಾತಿಲ್ಲದೆ ನಡೆದು ಮನೆಯ ಬಾಗಿಲನ್ನು ಎರಡು ಬಾರಿ ಬಡಿದ ತಕ್ಷಣ ಬಾಗಿಲು ತೆರೆದುಕೊಂಡಿತು. ಅವನು ಒಳಹೊಕ್ಕ ತಕ್ಷಣ ಮತ್ತೆ ಕದ ಹಾಕಲಾಯಿತು. ಅವನು ಕಣ್ಮರೆಯಾಗುವವರೆಗೂ ಕಾದಿದ್ದ ಶಿವಮ್ಮ, “ನಂಗ್ಯಾಕೋ ಭಯ ಆಗ್ಲಿಕ್ ಹತ್ಯದ. ಇಲ್ಲಿ ಕರೆದ್ರೂ ಓ ಅನ್ನೋಕೂ ಮಂದಿ ಇದ್ದಂಗಿಲ್ರಿ. ಅವನ ನಡಾವಳಿಕಿ ನಂಗೆ ಚಲೋ ಕಾಣವಲ್ದು, ನಾವು ಅವ್ನು ಬರೋದ್ರೊಳ್ಗ ಎಲ್ಲಾರೂ ಹೊಂಟೋಗೋಣು”ಎಂದಳು. “ಅದೆಲ್ಲಾ ಏನೂ ಇರಂಗಿಲ್ಲ. ನೀ ಚಿಂತಿ ಮಾಡಬ್ಯಾಡ. ಅವ ಊಟ ಮಾಡಿ ಬಂದು ನಮ್ಮನ್ನ ಊರು ಸೇರಸ್ತಾನ……. ಕರೆ ಹೇಳ್ತೇನೆ ಕೇಳ, ಹೆಂಗಸರಿಗಿ ಅನುಮಾನ ಬಾಳ” ಎಂದು ನಕ್ಕು, “ಎಲ್ಲಿ ಆ ರೊಟ್ಟಿಗಳು ತಾ, ಮಾಲತೇಶಂಗೆ ತಿನ್ನಿಸಿ ನಾವೂ ಚೂರೋ ಪಾರೋ ತಿನ್ನೋಣು “ಎಂದನು. ಈ ಗಂಡಸರ್ ನಮ್ ಮಾತೇ ಕೇಳ್ವಲ್ರು, ಮಾದೇಸ ಕಾಪಾಡೋ ನಮ್ಮಪ್ಪ ಎನ್ನುತ್ತಾ ಬುತ್ತಿಯ ಗಂಟನ್ನು ಬಿಚ್ಚಿದಳು., ಒಣಗಿ ಹೋಗಿದ್ದ ಕಡಕ್ ರೊಟ್ಟಿಯ ಚೂರೊಂದನ್ನು ಮಗನ ಕೈಗೆ ನೀಡಿ, ಗಂಡನಿಗೆರಡು ರೊಟ್ಟಿ ಕೊಟ್ಟಳು. “ನೀ ತಿನ್ನಾಂಗಿಲ್ಲೇನು?” ಎಂದು ತಾನೇ ಒಂದು ತುತ್ತನ್ನು ಅವಳ ಬಾಯ ಬಳಿ ಹಿಡಿದರೂ ಅವಳು ಬಾಯಿ ತೆರೆಯದೆ, ನೀ ತಿನ್ನ, ನಂಗೆ ಹಸಿವಿಲ್ಲ ಎಂದಳು. ಸಮಯ ನಿಧಾನವಾಗಿ ಚಲಿಸುತ್ತಿತ್ತು. ಹೊಟ್ಟೆಗೆ ಸ್ವಲ್ಪ ಬಿದ್ದ ನಂತರ ಮಾಲತೇಶ ಮತ್ತೆ ತಾಯಿಯ ತೊಡೆಯ ಮೇಲೆ ರೊಟ್ಟಿಯ ಚೂರೊಂದನ್ನು ಹಿಡಿದೇ ನಿದ್ರೆಗೆ ಜಾರಿದ. ಬುತ್ತಿ ತಿಂದ ದೇವಪ್ಪ ತಾನು ಮೂತ್ರ ವಿಸರ್ಜನೆ ಮಾಡಲು ಹೋಗುವೆನೆಂದು ತಿಳಿಸಿ ಅವಳ ಒಪ್ಪೊಗೆಗೂ ಕಾಯದೆ ಕತ್ತಲಲ್ಲಿ ನಡೆದು ಮರೆಯಾದ.
ಸುತ್ತಲೂ ಕಗ್ಗತ್ತಲು, ಒಂಟಿ ಮನೆ, ಉರಿಯುತ್ತಿದ್ದ ಮಂದವಾದ ಬೆಳಕು, ಅವಳ ಹೆದರಿದ ಮನಸ್ಸಿಗೆ ಮತ್ತಷ್ಟು ಹೆದರಿಕೆಯನ್ನುಂಟು ಮಾಡಿ, ಆ ತಂಪಾದ ಹೊತ್ತಿನಲ್ಲೂ ಬೆವರಿದಳು ಶಿವಮ್ಮ. ಮಡಿಲಲ್ಲಿ ಮಲಗಿದ್ದ ಪೋರ ಮಗ್ಗಲು ಬದಲಿಸಿದ. ತುಟಿಯಿಂದ ಇಳಿಯುತ್ತಿದ್ದ ಜೊಲ್ಲನ್ನು ಒರೆಸಿ, ಮುಂಗುರುಳನ್ನು ಸವರಿ, ಹಣೆಗೊಂದು ಮುತ್ತನ್ನಿಟ್ಟಳು. ಅಷ್ಟರಲ್ಲಿ ಲಾರಿ ಚಾಲಕ ಮನೆಯಿಂದ ಹೊರಬಿದ್ದು ನೇರವಾಗಿ ಲಾರಿ ಬಳಿ ಬಂದು, ತನ್ನ ಜಾಗದ ಬಾಗಿಲನ್ನು ತೆರೆದು ಒಳಗೆ ಹತ್ತಿ ಕುಳಿತು ಢಬಾರ್ ಎಂದು ಬಾಗಿಲನ್ನು ಹಾಕಿದ. ಆ ಶಬ್ದಕ್ಕೆ ಮಗು ಬೆಚ್ಚಿ ಬಿತ್ತು. ಒಮ್ಮೆ ಅವಳತ್ತ ತುಂಟ ನೋಟವನ್ನು ಬೀರಿ, ‘ಹೊರಡೋಣವೇ’ ಎಂದಾಗ ಬೆಚ್ಚಿಬಿದ್ದ ಶಿವಮ್ಮ ದೇವಪ್ಪನಿಗಾಗಿ ಸುತ್ತಲೂ ನೋಡಿದಳು.
“ನಿನ್ನ ಗಂಡನಿಗಾಗಿ ಹುಡುಕುತ್ತಿದ್ದೀಯಾ” ಎಂದಾಗ ಮತ್ತಷ್ಟು ಗಾಬರಿಯಾದಳು. “ಅವರು ಬರಲಿ……” ಧೈರ್ಯ ತಂದು ಕೊಂಡು ನುಡಿದಳು. “ಅವನಿನ್ನೆಲ್ಲಿ ಬಂದಾನು..,.?” ಎನ್ನುತ್ತಾ ಗಾಡಿಯ ಕೀಲಿ ತಿರುಗಿಸಿದ. ಅವನಿಗಿ ಏನೂ ಆಗದಿರಲಿ ದೇವರೇ….. ಅವನು ಬೇಗ ಬಂದು ಬಿಡಲಿ…..ಗಾಡಿ ಬೇಗ ಸ್ಟಾರ್ಟ್ ಆಗದಿರಲಿ…. ಮಾಲತೇಶ….ಕಾಪಾಡು….. ಎಂದುಕೊಳ್ಳುತ್ತಾ ದೇವಪ್ಪನಿಗಾಗಿ ಸುತ್ತಲೂ ಕಣ್ಣಾಡಿಸತೊಡಗಿದಳು. ಆದರೆ ಅಷ್ಟರಲ್ಲಾಗಲೇ ಲಾರಿ ಸ್ಟಾರ್ಟ್ ಆಗೇ ಹೋಯಿತು.
ಶಿವಮ್ಮನ ಎದೆ ಢವಢವ ಬಡಿದುಕೊಳ್ಳಲಾರಂಭಿಸಿತು. ಹಣೆಯ ತುಂಬ ಮುತ್ತಿನ ಹನಿಗಳಂತೆ ಬೆವರು ಸಾಲುಗಟ್ಟಿ ನಿಂತಿತು. ಲಾರಿಯ ಹೆಡ್ ಲೈಟಿನ ಬೆಳಕಿನಲ್ಲಿ ಲಾರಿಯ ಮುಂಭಾಗದಲ್ಲೇ ಕಚ್ಚೆ ಕಟ್ಟಿಕೊಂಡು ಬರುತ್ತಿರುವ ದೇವಪ್ಪ ಕಣ್ಣಿಗೆ ಬಿದ್ದನು. ಸದ್ಯ…… ನೆಮ್ಮದಿಯ ನಿಟ್ಟುಸಿರೊಂದು ಹೊರಹಾಕಿದಳು ಶಿವಮ್ಮ. ಗಾಡಿ ಸ್ಟಾರ್ಟ್ ಆಗಿದ್ದನ್ನು ಗಮನಿಸಿದ ದೇವಪ್ಪ, ಬಂದೇ…… ಬಂದೇ ..ತಡಿಯರ್ಲಾ… ಎನ್ನುತ್ತಾ, ಲಾರಿಯ ಕಡೆಗೆ ಓಡಿ ಬರುತ್ತಿದ್ದಂತೆ ಅದು ಶರವೇಗದಲ್ಲಿ ಮುಂದಕ್ಕೆ ಚಲಿಸಲಾರಂಭಿಸಿತು. ಅವನು ನೇರವಾಗಿ ದೇವಪ್ಪನಿದ್ದಲ್ಲಿಗೆ ವೇಗವಾಗಿ ಗಾಡಿ ಚಲಾಯಿಸತೊಡಗಿದ, ತಕ್ಷಣ ಅವನ ಪಕ್ಕದ ಸೀಟಿನಿಂದ ದೂರ ಕುಳಿತಿದ್ದ ಶಿವಮ್ಮ, ಅವನ ಮನದಿಂಗಿತವನ್ನರಿತವಳಂತೆ ಅವನ ಕಡೆಗೆ ವಾಲಿ, “ಅಯ್ಯೋ……. ನಿಲ್ಲಿಸ್ರಿ… ನಿಲ್ಲಿಸ್ರಿ…….. ನನ್ನ ಗಂಡನ್ನ ಕೊಲ್ಲಬ್ಯಾಡ್ರಿ…….”. . ಎಂದು ಜೋರಾಗಿ ಕೂಗುತ್ತಾ ಅವನ ಎದೆ ಕೈ ಮುಖಗಳಿಗೆ ಹೊಡೆಯಲಾರಂಭಿಸಿದಳು. ಆದರೆ ಅವನು ಗಹಗಹಿಸಿ ನಗುತ್ತಾ ಅಕ್ಸಿಲೇಟರ್ ಜೋರಾಗಿ ಒತ್ತಿ, ವೇಗವನ್ನು ಹೆಚ್ಚಿಸಿದ. ಈ ಗಲಾಟೆಯಲ್ಲಿ ತಾಯಿಯ ತೊಡೆಯಿಂದ ಜಾರಿ ಕೆಳಗೆ ಬಿದ್ದ ಮಾಲತೇಶ ಜೋರಾಗಿ ಅಳಲಾರಂಭಿಸಿದ. . ರೀ…..ಲಗೂನ ಈಕಡಿಗೆ ಬನ್ರೀ…….ಲಗೂನ ಬನ್ರೀ…….. ಎಂದು ಅಸಹಾಯಕತೆಯಿಂದ ಅರುಚುತ್ತಾ ಮತ್ತೆ ಮತ್ತೆ ಚಾಲಕನನ್ನು ಹೊಡೆಯತೊಡಗಿದಳು . ಆದರೆ ಅವನು “ನಿನ್ನ ಏಟು ಯಾವ ಮೂಲೆಗೆ?” ಎಂಬಂತೆ ಅವಳೆಡೆಗೆ ಕ್ರೂರವಾಗಿ ನೋಡುತ್ತಾ ಗಹಗಹಿಸಿ ನಗತೊಡಗಿದಾಗ, ಶಿವಮ್ಮನಿಗೆ ಏನೂ ತೋಚದಾಗಿ, ಕಡೆಯ ಪ್ರಯತ್ನವೆಂಬಂತೆ ಅವನ ಎಡಗೈಯನ್ನು ಬಲವಾಗಿ ಕಚ್ಚಿ ಬಿಟ್ಟಳು.
“ಅಯ್ಯೋ…. ಇದ್ಯಕ್ ಹಿಂಗ್ ಕಚ್ಚಿಯೇ…….. ಏಯ್ ಶಿವೀ…… ಏಳೇ…..ಶಿವಿ… ಎಚ್ಚರಿಕಿ ಮಾಡಕ್ಯಾ…..”. ಎನ್ನುತ್ತಾ ದೇವಪ್ಪ ಅವಳನ್ನು ತಿವಿದು ಎಬ್ಬಿಸಿದಾಗ ಗಾಬರಿಯಾಗಿ ಕಣ್ಣು ಬಿಟ್ಟಶಿವಮ್ಮ ಅವನೆಲ್ಲಿ ಹೋದಾನ, ಅವನಿಗಿ ತಕ್ಕ ಶಾಸ್ತಿ ಮಾಡದೆ ನಾ ಬಿಡಂಗಿಲ್ಲ ಎನ್ನುತ್ತಾ ಸುತ್ತಲೂ ನೋಡಿದಳು. ಆಗಲೇ ಅವಳಿಗೆ ತಾನು ಇಲ್ಲಿಯವರೆಗೆ ಕಂಡದ್ದೆಲ್ಲಾ ಕನಸು ಎಂಬ ಅರಿವಾಯಿತು. ” ನಿದ್ದೀನಾಗ ಮಾತಾಡೋ ನಿನ್ ಅಭ್ಯಾಸದಿಂದ ನಂಗ್ ನಿದ್ದಿ ಇಲ್ಲ ನೋಡು… ಈಗ ಕಚ್ಚಾಕೂ ಹೊಡಿಯಾಕೂ ಬ್ಯಾರೆ ಶೂರು ಮಾಡೀಯೇನು ಎಂದ ದೇವಪ್ಪನ ಮಾತಿಗೆ ನಾಚಿಕೆಯಾಗಿ ಗೋಡೆಯ ಕಡೆಗೆ ತಿರುಗಿ ಮಲಗಿದಳು. ಬೆಳಗಿನ ಜಾವಕ್ಕ ಎದ್ದು ಊರಿಗೆ ಬೇರೆ ಹೊಂಡಬೇಕು ಈಗ ನಿದ್ದಿ ಮಾಡು ಮೂರೊತ್ತೂ ಕನಸು ಕಾಣಬ್ಯಾಡಲೇ.” ಎಂದಾಗ ʼಹೂʼ ಎಂದಳು. ಅಲ್ಲಿಯವರೆಗೆ ಕಚ್ಚಿದ ನೋವಿನಿಂದಾಗಿ ಅವಳ ಮೇಲೆ ಕೋಪಗೊಂಡಿದ್ದ ಅವನಿಗೆ, ಬಾಳ ಕೆಟ್ಟ ಕನಸಿರಬೇಕು., ಹೆದರಿಬಿಟ್ಯಾಳ ಎನ್ನಿಸಿ, ಪಕ್ಕದಲ್ಲೇ ಇದ್ದ ಮಡಿಕೆಯೊಳಗೊಂದು ಲೋಟ ಮೊಗೆದು, ಕುಡಿ ಏಳು ಎಂದನು.
.
ಗಟಗಟನೆ ಕುಡಿದಿ ಮುಗಿಸಿದವಳನ್ನು ಕುರಿತು “ಏನಾತು?” ಮೈಗೆ ಆರಾಮಿಲ್ಲೋ ಎನ್ನುತ್ತಾ ಹಣೆಯ ಮೇಲೆ ಕೈಯಿಟ್ಟನು. “ಮತ್ತೆ…. ಮತ್ತೆ….. ನಾಳಿ ನಾವು ಊರಿಗೆ ಹೋಗೋದು ಬ್ಯಾಡರಿ……. ಇಲ್ಲೇ ಇರೋಣು……..”,ಅಚ್ಚರಿಯಿಂದ ನೋಡಿದ ದೇವಪ್ಪ. “ಹಿಂಗ್ ಯಾಕ್ ಆಡೀ……ನೆನ್ನಿ ನೋಡಿದ್ರ ಊರಿಗ್ ಹೋಗೋಣು ಅಂತ ಹಠ ಹಿಡಿದಿ….. ಈಗ ಹೊಂಡಿರುವಾಗ ಹಿಂಗೆ ಹೇಳ್ತಿ….,”ಗೊಣಗಿದ.
“ಹಂಗಲ್ಲ…. ,” ತಡವರಿಸಿಸಳು. ” ಹಂಗಲ್ಲ…. ಹಿಂಗಲ್ಲ….. ಅಂತ ರಾಗ ತೆಗೀಬ್ಯಾಡ……. ಅದೇನಂತ ಹೇಳ್ಲೇ?” ಎಂದಾಗ “ನಾಳಿ ಊರಿಗ್ ಹೋಗೋಣಂತ ನಾನು ಹಠ ಹಿಡಿದದ್ದೇನೋ ಖರೆ. ಆದರಿ ಈಗ ಬ್ಯಾಡ ಅನ್ನಸಲಿಕ್ಕೆ ಹತ್ತದೆ. ನೀ ನನ್ನ ಮಾತ ಕೇಳ್ತೀಯಲ್ಲ…..” ಎನ್ನುತ್ತಾ ದೇವಪ್ಪನ ಎರಡೂ ಕೈಗಳನ್ನು ತನ್ಬ ಕೈಗಳಲ್ಲಿ ಹಿಡಿದು ಮೃದುವಾಗಿ ಅಮುಕಿದಳು. “ನಾನು ನಿನ್ನ ಮಾತ ಯಾವತ್ತು ಇಲ್ಲ ಅಂದೀನಿ….. ಆದ್ರೆ ಈಗ ಅಚಾನಕ್ ಬ್ಯಾಡ ಅನ್ನೋಕೆ ಕಾರಣ ಇರಬೇಕಲ್ಲ?” ಎಂದದ್ದಕ್ಕೆ, “ನನಗ ಭಯಾನಕ್ ಕನಸ ಬಿತ್ತು… ಅದರಲ್ಲಿ ನಾವು ಊರಿಗೆ ಹೊಂಟು ಕಷ್ಟಕ್ಕೆ ಸಿಕ್ಕಿ ಹಾಕಿ ಕೊಂಡೀವಂತ…….”.ಎಂದಳು ಬಿಕ್ಕುತ್ತಾ, . “ಹುಚ್ಚಿ…. ಕನಸ ಎಲ್ಲಾದ್ರೂ ನಿಜ ಅಗುತ್ತೇನು?” ನಕ್ಕು ನುಡಿದ ದೇವಪ್ಪ.
“ಅದೆಲ್ಲಾ ನನಗೆ ತಿಳೀವಲ್ದು……. ಮೂರು ದಿನದಿಂದ ನೋಡತಿದ್ದೀವಲ್ಲ… ಹೇಗಿದ್ರೂ ದಿನಾ ನಮ್ಮಂತ ಬಡವರಿಗಿ ಯ್ಯಾರ್ಯಾರೋ ಮಹಾನುಭಾವರು ಊಟ ತಂದು ಕೊಡುತ್ತಿದ್ದಾರ…. ಇರಕ್ಕೆ ಮನೆ ಇದಿ……… ಜೀವನ ನಡೆಸಲಿಕ್ಕೆ ಏನೂ ತೊಂದಿರಿ ಆಗವಲ್ದು. ನಾವು ಇಲ್ಲೇ ಇರೋಣು…..ಮುಂದೆ ಏನಾರ ಕಷ್ಟ ಬಂದ್ರೆ ಆಗ ನೋಡೋಣು. ಅವ್ವಂಗೆ ನಾಳೇನೆ ಪೋನ್ ಹಚ್ಚಿ, ನಾವ್ ಬರಂಗಿಲ್ಲ ಅಂತ ಹೇಳತೀನಿ…..”.ಮತ್ತೊಮ್ಮೆ ಒತ್ತಿ ಹೇಳಿದಳು ಶಿವಮ್ಮ.
“ಸರಿ ಮಹರಾಯತಿ…..ನೀನು ಊರಿಗೆ ಹೋಗೋಣು ಅಂತ ಹಠ ಹಿಡಿದಿದ್ದಕ್ಕೆ ನಾನೂ ‘ಹ್ಞೂ’ ಅಂದಿದ್ದೆ. ಈಗ ನೀನೇ ಒಲ್ಲೆ ಅಂದ ಮ್ಯಾಲೆ ನಂಗೇನು? ಈಗ ಮಲಕ್ಕ……ಮತ್ತೆ ನನ್ನ ಕಚ್ಚ ಬ್ಯಾಡಲೇ…. “,ಎನ್ನುತ್ತಾ ತುಂಟ ನೋಟ ಬೀರಿದಾಗ ಶಿವಮ್ಮ ನಾಚಿ ನೀರಾದಳು. ಇದೇನೂ ಅರಿಯದ ಮಾಲತೇಶ ನಿದ್ರೆಯಲ್ಲಿ ಏನೋ ನೆನಸಿಕೊಳ್ಳುತ್ತಾ ನಗುತ್ತಿದ್ದ.
————————————-
ಅರುಣಾ ರಾವ್
