ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ಕುಟುಂಬ ಪರಿಕಲ್ಪನೆಯ ಮರುವಾಖ್ಯಾನ ಅಗತ್ಯವೇ?

ಡಾ.ದಾನಮ್ಮ ಝಳಕಿ

ಕುಟುಂಬ ಪರಿಕಲ್ಪನೆಯ ಮರುವಾಖ್ಯಾನ ಅಗತ್ಯವೇ?

ಕುಟುಂಬ ಒಂದು ಸಾರ್ವತ್ರಿಕ ಸಂಸ್ಥೆಯಾಗಿದೆ ಅದು ಅತ್ಯಂತ ಸರಳವಾದ ಹಾಗೂ ಸೂಕ್ಷ್ಮವಾದ ಸಮಾಜವಿದ್ದಂತೆ. ಕುಟುಂಬವಿಲ್ಲದೇ ಸಮಾಜವಿಲ್ಲ. ಅದು ಮಾನವ ಸಮಾಜಿಕ ತಳಹದಿಯಾಗಿದೆ ಕುಟುಂಬವೇ ಮಗುವಿನ ಪ್ರಪ್ರಥಮ ಸಾಮಾಜಿಕ ಪರಿಸರ ಹಾಗೂ ಸಮೂಹವಾಗಿದೆ. ಕುಟುಂಬದ ಬೇರುಗಳು ಸಾಮಾಜಿಕ ವ್ಯವಸ್ಥೆಯಲ್ಲಿ ಅಷ್ಟೊಂದು ಆಳವಾಗಿ ಸೇರಿಹೋಗಿವೆ. ನಮ್ಮ ಸಾಮಾಜಿಕ ಜೀವನಕ್ಕೆ ಒಂದು ನೆಲೆಯನ್ನು ಮತ್ತು ಸ್ಥಿರತೆಯನ್ನು ಕೊಡುವುದು ಕುಟುಂಬವೇ ಆಗಿದೆ.ಅಲ್ಲದೇ ಅದು ಉಳಿದೆಲ್ಲಾಸಂಸ್ಥೆಗಳಿಗಿಂತ ಅದು ಹೆಚ್ಚು ಶಾಶ್ವತವೂ ಪ್ರಭಾವಿಯೂ ಆಗಿದೆ. ರಾಬರ್ಟ ಬೈರ್‌ಸ್ಟಡ್ ಹೇಳುವಂತೆ ನಾವು ಇತರ ಸಂಘ ಸಮೂಹಗಳನ್ನು ನಮ್ಮ ಜೀವಿತದ ಅವಧಿಯ ಬೇರೆ ಬೇರೆ ಹಂತಗಳಲ್ಲಿ ಬೇರೆ ಬೇರೆ ಕಾರಣಗಳಿಂದಾಗಿ ಸೇರಿಕೊಳ್ಳಬಹುದಾದರೂ ಕುಟುಂಬವು ಮಾತ್ರ ನಮ್ಮ ಜೀವಿತದುದ್ದಕ್ಕೂ ಇರುವುದು.  ನಾವು ಅದರೊಂದಿಗೆ ಇರುವೆವು ಎಂದಿದ್ದಾರೆ.

            ಕುಟುಂಬದ ಪ್ರಕಾರ ಯಾವುದಿದ್ದರೂ ಉದಾಹರಣೆಗೆ ಅದು ನಾಗರಿಕ-ಅನಾಗರಿಕ, ಸುಸಂಸ್ಕೃತ-ಅಸಂಸ್ಕೃತ, ಮುಂದುವರಿದ-ಹಿಂದುಳಿದ, ಆದಿವಾಸಿ-ಆಧುನಿಕ, ಎಂಬ ಬೇಧವಿಲ್ಲದೇ ಎಲ್ಲಾ ಸಮಾಜಗಳಲ್ಲಿಯೂ ಕಾಣಬರುವುದು. ಮಾನವನ ಮೂರು ಅತೀ ಮುಖ್ಯವಾದ ಅಗತ್ಯಗಳಾದ ಲೈಂಗಿಕ ತೃಪ್ತಿ, ಸಂತಾನಾಭಿಲಾಶೆ ಮತ್ತು ಆರ್ಥಿಕ ಬಯಕೆಗಳೇ ಕುಟುಂಬದ ಸಾರ್ವತ್ರಿಕ ಕಾರಣ ಎನ್ನಬಹುದು. ”ಕುಟುಂಬ” ದಂತಹ ಗಹನವಾದ ವಿಷಯದ ಕುರಿತಾದ ಸಮಗ್ರ ಸಮಾಜಶಾಸ್ತ್ರೀಯ ಅಧ್ಯಯನ ದೃಷ್ಟಿಯಿಂದ ಆರಂಭವಾದ ಸಮಾಜಶಾಸ್ತ್ರದ ಹೊಸ ಶಾಖೆಯಾದ ಕುಟುಂಬ ಸಮಾಜಶಾಸ್ತ್ರವು ಇಂದು ಭರದಿಂದ ಬೆಳೆಯುತ್ತಿದೆ.

            ಈ ಮೇಲೆ ಚರ್ಚಿಸಿದಂತೆ ಕುಟುಂಬ ಎಂಬುದು ಸರ್ವಕಾಲಿಕ ಹಾಗೂ ಸಾರ್ವತ್ರಿಕವಾಗಿದೆ ಎಂಬುದು ನಿರ್ವಿವಾದವಾಗಿದೆ. ಕುಟುಂಬದ ವಾಖ್ಯೆಗಳನ್ನು ಸಮಾಜಶಾಸ್ತ್ರೀಯ ದೃಷ್ಟಿಕೋನದಲ್ಲಿ ನೋಡಿದಾಗ ಸಮ್ನರ್‌ ಮತ್ತು ಕೆಲ್ಲರ ಅವರು ಹೇಳುವಂತೆ “ರಕ್ತ ಸಂಬಂಧಿಗಳಿಂದ ಕೂಡಿದ ಮತ್ತು ಕನಿಷ್ಠ ಎರಡು ತಲೆಮಾರಗಳನ್ನು ಒಳಗೊಂಡಿರುವ ಅತಿ ಸೂಕ್ಷ್ಮ ಸಾಮಾಜಿಕ ಸಂಘಟನೆಯೇ ಕುಟುಂಬ” ಇಲಿಯಟ್‌ ಮತ್ತು ಮೆರಿಲ್‌ ಅವರ ಪ್ರಕಾರ “ಗಂಡ ಹೆಂಡತಿ ಮತ್ತು ಮಕ್ಕಳನ್ನೊಳಗೊಂಡಿರುವ ಜೈವಿಕ ಸಾಮಾಜಿಕ ಘಟಕವೇ ಕುಟುಂಬ”

                        ಈ ಮೇಲಿನ ವಾಕ್ಯಗಳನ್ನು ಮುಖಾಮುಖಿಯಾಗಿಸುತ್ತಾ ಇಂದಿನ ಬದಲಾವಣೆಯಾದ ಕುಟುಂಬ ವ್ಯವಸ್ಥೆಯ ಬಗ್ಗೆ ಮಕ್ಕಳ ಪ್ರಶ್ನೆಗಳನ್ನು ಗಂಭೀರವಾಗಿ ಚಿಂತಿಸುವ ಅಗತ್ಯತೆ ಇದೆ. ಈ ಹಿನ್ನಲೆಯಲ್ಲಿ ತರಗತಿಯ ಒಂದು ಸನ್ನಿವೇಶವನ್ನು ಉದಾಹರಣೆಗೆ ತೆಗೆದುಕೊಂಡು ಚರ್ಚಿಸುವುದು ಅಗತ್ಯ ಎನಿಸುತ್ತದೆ

            ಉಷಾ ಎಂಬ ಶಿಕ್ಷಕಿ ಅತ್ಯಂತ ಉತ್ಸಾಹದಿಂದ ತರಗತಿಯನ್ನು ಪ್ರವೇಶಿಸುತ್ತಾಳೆ. ತರಗತಿಯ ಮಕ್ಕಳು ಸಹ ಅಷ್ಟೇ ಉತ್ಸಾಹದಿಂದ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗುತ್ತಾರೆ. ಇತ್ತೀಚಿಗೆ ಶಾಲಾ ಶಿಕ್ಷಣದಲ್ಲಿ ಬಂದ ಅನುಕೂಲಿಸುವಿಕೆ ವಿಧಾನ ಮಕ್ಕಳಿಗೆ ಸಾಕಷ್ಟು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಭಾಗವಹಿಸುವಿಕೆಗೆ ಅವಕಾಶ ಕೊಟ್ಟಿದ್ದು ಮಕ್ಕಳಿಗೆ ಕಲಿಕೆಯಲ್ಲಿ ವರಪ್ರಧಾನವಾದ ಅಂಶವಾಗಿದೆ ಎನ್ನಬಹುದು. ಇದರಿಂದ ಮಕ್ಕಳು ಭಾಗವಹಿಸುವಿಕೆಯ ಮೂಲಕ ತಮ್ಮ ಅನೇಕ ಸಂದೇಹಗಳನ್ನು  ತೆರೆದಿಡುತ್ತಿದ್ದಾರೆ. ಅಂದು ಉಷಾ ಶಿಕ್ಷಕಿ ತನ್ನ ತರಗತಿಯಲ್ಲಿ ಕುಟುಂಬ ಎಂಬ ಪರಿಕಲ್ಪನೆಯನ್ನು ಅರ್ಥೈಸುವ ಕಾರ್ಯದಲ್ಲಿ ತೊಡಗಿರುತ್ತಾಳೆ. ಅವಳು ಚರ್ಚಿಸುತ್ತಾ ಕುಟುಂಬ ಎಂದರೇನು? ಅದರ ಗುಣಲಕ್ಷಣಗಳು ಹಾಗೂ ಕಾರ್ಯಗಳ ಬಗ್ಗೆ ವಿವರಿಸುತ್ತಿರುವಾಗ ಒಬ್ಬ ವಿದ್ಯಾರ್ಥಿ ಟೀಚರ್‌ ಎಂದು ಕರೆಯುತ್ತಾ ನನಗೆ ಒಂದು ಸಂದೇಹವಿದೆ ತಾವು ಪರಿಹರಿಸುವಿರಾ ಎನ್ನುತ್ತದೆ.ಆಗ ಶಿಕ್ಷಕಿ ಏನು ಹೇಳು  ಮಗು ಎಂದಾಗ ವಿದ್ಯಾರ್ಥಿ “ ತಾವು ಹೇಳಿದಂತೆ ಕುಟುಂಬದಲ್ಲಿ ತಂದೆ ತಾಯಿ ಇರಬೇಕು ಆದರೆ ನಾನು ದೇವದಾಸಿಯ ಮಗು ನನಗೆ ತಂದೆ ಗೊತ್ತಿಲ್ಲ. ನಾನು ತಾಯಿಯೊಂದಿಗೆ ಇದ್ದೇನೆ. ನಾನು ಮತ್ತು ನನ್ನ ತಾಯಿ ನನ್ನ ಕುಟುಂಬ ಎನ್ನಬಹುದೇ ? ಎಂದು ಕೇಳಿ ಮೌನವಾಗುತ್ತಾಳೆ.

            ತದನಂತರದಲ್ಲಿ ಮತ್ತೊಂದು ಮಗು ಎದ್ದುನಿಂತು, ಬಾಡಿಗೆ ತಾಯಿಂದ ಹುಟ್ಟಿದ ಮಗುವಿಗೆ ತನ್ನ ಕುಟುಂಬದಲ್ಲಿ ಬಾಡಿಗೆ ತಾಯಿಯನ್ನು ಸೇರಿಸಿಕೊಳ್ಳಬಹುದೇ ಎಂಬ ಪ್ರಶ್ನೆಯನ್ನು ಮಾಡಿ  ಕುಳಿತುಕೊಳ್ಳುತ್ತಾನೆ. ನಂತರದಲ್ಲಿ ಕೊನೆಯ ಬೆಂಚ್‌  ಮೇಲೆ ಕುಳಿತ ಮಗು ಹಗುರವಾಗಿ ಎದ್ದು ನಿಂತು ನಾನು ಅನಾಥ ಆಶ್ರಮದ ಮಗು ನನ್ನನ್ನು ಮಹೇಶ ಅಂಕಲ್‌ ಸಾಕುತ್ತಿದ್ದಾರೆ ಅವರಿಗೆ ವಿವಾಹ ಆಗಿಲ್ಲ ನಾನು ನನ್ನ ಕುಟುಂಬ ಎಂದರೆ ನಾನು ಮತ್ತು ಮಹೇಶ ಅಂಕಲ್‌ ಎನ್ನಬಹುದೇ ಎಂಬ ಪ್ರಶ್ನೆಯನ್ನು ಕೇಳುತ್ತದೆ.

            ಅದೇ ತಾನೇ ಬೆಂಗಳೂರಿನಿಂದ ಬಂದ ರಾಧಿಕಾ ಎದ್ದು ನಿಂತು ಇತ್ತೀಚಿಗೆ ಲಿವಿಂಗ್‌ ಟುಗೇದರ್‌ ಎಂಬ ಪರಿಕಲ್ಪನೆ ಬಂದಿದೆ ಅದು ಕುಟುಂಬವೇ ಎಂಬ ಪ್ರಶ್ನೆಯನ್ನು ಹಾಕಿದಾಗ ಶಿಕ್ಷಕಿ ಆಲೋಚನೆಯಲ್ಲಿ ಮುಳುಗಿ ಹೋಗುತ್ತಾಳೆ.

            ಮತ್ತೋರ್ವ ಮಗು ಟೀಚರ್‌ ನಾನು ಪೇಪರ್‌ ದಲ್ಲಿ ಓದಿದ್ದೆ, ಪುರುಷ ಪುರಷನನ್ನು ಹಾಗೂ ಮಹಿಳೆ ಮಹಿಳೆಯನ್ನು ವಿವಾಹವಾಗುತ್ತಿದ್ದಾರೆ ಇದು ನಮ್ಮ ಭಾರತದಲ್ಲಿ ಮಹಾನಗರಗಳಲ್ಲಿಯೂ  ಸಹ ಕಂಡುಬರುತ್ತಿದೆಯಂತೆ ಹಾಗಾದರೆ ಅದು ಕುಟುಂಬ ವ್ಯವಸ್ಥೆಯ ಚೌಕಟ್ಟಿನಲ್ಲಿ ಬರುತ್ತದೆಯೇ ಎಂದು ಕೇಳಿತು.

            ಅಲ್ಲಿಯೇ ಇದ್ದ ಸಿಪಾಯಿ ಇದನ್ನೆಲ್ಲಾ ಕೇಳಿ, ತಾನೇ ಮನದಲ್ಲಿ ಚಿಂತಿಸುತ್ತಾ ತನಗೆ ಯಾರೂ ಇಲ್ಲ. ತನ್ನ ತಂದೆ ತಾಯಿ ತೀರಿಹೋಗಿ ಇಪ್ಪತ್ತು ವರ್ಷ ಆಯಿತು. ತಾನು ವಿವಾಹವೂ ಆಗಿಲ್ಲ ಹಾಗಾದರೆ ತಾನು ಒಬ್ಬಂಟಿಗನಾಗಿದ್ದು ತನ್ನದು ಕುಟುಂಬವೇ ಎಂಬ ಆಲೋಚನೆಯಲ್ಲಿ ಮುಳುಗಿಹೋದ.

ಮಕ್ಕಳು ಕೇಳಿದ ಪ್ರಶ್ನೆಗಳು ಹಾಗೂ ಸಿಪಾಯಿಯ ಮನದಲ್ಲಿಯ ಆಲೋಚನೆಗಳು  ನಿಜವಾಗಿಯೂ ಆಧುನಿಕ ಕಾಲದ ಕುಟುಂಬದ ಬಗ್ಗೆ ನಮ್ಮನ್ನು ಅತ್ಯಂತ ಆಳವಾಗಿ ಚಿಂತಿಸುವಂತೆ ಹಾಗೂ ಕುಟುಂಬದ ಮರುವಾಕ್ಯಾನದ ಅವಶ್ಯಕತೆಯ ಬಗ್ಗೆ ಆಲೋಚಿಸುವಂತೆ ಮಾಡುತ್ತದೆ. ಏಕೆಂದರೆ ಕುಟುಂಬದ ಬಗ್ಗೆ ಮೇಲಿನ ವಾಕ್ಯಗಳನ್ನು ಗಮನಿಸಿದಾಗ ಕುಂಟುಂಬದಲ್ಲಿ ರಕ್ತ ಸಂಬಂಧ ಇರುಬೇಕು, ಗಂಡ ಹೆಂಡತಿ ಇರಬೇಕು. ಆದರೆ ಮಕ್ಕಳು ಆಧುನಿಕ ಕಾಲದಲ್ಲಿ ಅನೇಕ ಸಂಗತಿಗಳನ್ನು ಗಮನಿಸಿ ಅವುಗಳನ್ನು ಅನ್ವಯಿಸಿ ತಾಳೆ ಹಾಕುತ್ತಾರೆ. ಸಮಾಜದ ಪ್ರತಿಯೊಂದು ವ್ಯಕ್ತಿ ಸ್ವಪ್ರಶ್ನೆಯನ್ನು ಹಾಕಿಕೊಳ್ಳುತ್ತಾರೆ. ನಾವು ಯಾವುದೋ ಕಾಲದಲ್ಲಿಯ ಕುಟುಂಬ ವ್ಯವಸ್ಥೆಯ ಬಗ್ಗೆ ಇಂದು ಮಕ್ಕಳಿಗೆ ತಿಳಿಹೇಳುವುದು ಎಷ್ಟರ ಮಟ್ಟಿಗೆ ಸೂಕ್ತ. ಹಿಂದಿನ ಕಾಲದಲ್ಲಿ ಕುಟುಂಬ ಎಂದರೆ ಈ ರೀತಿ ಇತ್ತು ಇಂದು ಬದಲಾದ ಪರಿಸ್ಥಿತಿಯಲ್ಲಿ ಹೇಗೆ ಇದೆ ಎಂಬ ವಿಷಯದ ಅನಾವರಣ ಅಗತ್ಯ ಎಂಬುದು ಅರಿಯಬೇಕಾಗಿದೆ

            ಒಟ್ಟಾರೆಯಾಗಿ ಇಂದು ಕುಟುಂಬ ಎಂಬ ಪರಿಕಲ್ಪನೆಯನ್ನು ಆಧುನಿಕ ಕಾಲದ ದೃಷ್ಟಿಯಿಂದ ಆಲೋಚಿಸಬೇಕಾಗಿದೆ. ವಿಭಿನ್ನವಾದ ಆಯಾಮಗಳಲ್ಲಿ ವಿಮರ್ಶಿಸಬೇಕಿದೆ.  ಮೇಲಿನ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡಕಬೇಕಾಗಿದೆ. ಸಮಾಜಶಾಸ್ತ್ರೀಯ ದೃಷ್ಠಿಕೋನದಿಂದ ಮರುಚಿಂತನೆಗೆ ಒಳಪಡಿಸಿ, ಮಕ್ಕಳಿಗೆ ಸಮರ್ಥವಾಗಿ ಉತ್ತರಿಸುವ ಕಾಲ ಬಂದಿದೆ.

ಹಾಗಾದರೆ ಮರು ಚಿಂತನೆಗೆ ಒಳಪಡಿಸುವವರು ಯಾರು? ಸಮಾಜಶಾಸ್ತ್ರಜ್ಞರೇ? ಬುದ್ಧಿಜೀವಿಗಳೇ? ಶಿಕ್ಷಣ ತಜ್ಞರೇ? Policy Makers ಗಳೇ? ಸರಕಾರವೇ? ಶಾಸಕಾಂಗವೇ? ನ್ಯಾಯಾಂಗವೇ? ಹೌದು ಈ ಮೇಲಿನ ಎಲ್ಲರೂ ಕೂಡಿ ಆಲೋಚಿಸಬೇಕಿದೆ. ನಿರ್ಧರಿಸಬೇಕಿದೆ


ಡಾ.ದಾನಮ್ಮ ಝಳಕಿ

Leave a Reply

Back To Top