ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ಅಸ್ಥಿರ ಕಾಲುಗಳ ಅಕ್ಷಣಾವಳಿ


(ರೆಸ್ಟ್ಲೆಸ್ ಲೆಗ್ಸ್ ಸಿಂಡ್ರೋಮ್)

ಡಾ. ಅರಕಲಗೂಡು ನೀಲಕಂಠ ಮೂರ್ತಿ

ಬಹುಶಃ ಅನೇಕರಿಗೆ ಅರಿವಿರದ ಇದೊಂದು ಅಸಾಧಾರಣ ತೊಂದರೆ.

ಅಸ್ಥಿರ (ಸ್ತಿಮಿತವಿಲ್ಲದ) ಕಾಲುಗಳ ಲಕ್ಷಣಾವಳಿ (ಕಾಲುಗಳನ್ನು ಅಲ್ಲಾಡಿಸುವ ಲಕ್ಷಣಗಳ ಸಮೂಹ ಎಂದರೂ ಆದೀತು) ಅಥವ ರೆಸ್ಟ್ಲೆಸ್ ಲೆಗ್ಸ್ ಸಿಂಡ್ರೋಮ್ (ಆರ್ ಎಲ್ ಎಸ್) ಎಂದರೆ ಒಂದು ರೀತಿಯ ಸಹಿಸಲಾಗದ ಅನುಭವದ  ಒತ್ತಡದಿಂದಾಗಿ ಕಾಲುಗಳನ್ನು ಅಲ್ಲಾಡಿಸುವಂತೆ ಮಾಡುವ ಸ್ಥಿತಿ. ಸಾಮಾನ್ಯವಾಗಿ ಅದು ಸಂಜೆ ಅಥವ ರಾತ್ರಿ ವೇಳೆ, ಕುಳಿತಿದ್ದಾಗ ಅಥವ ಮಲಗಿ ವಿರಮಿಸುತ್ತಿದ್ದಾಗ ಅನುಭವವಾಗುತ್ತದೆ. ಹಾಗೆ ಕಾಲುಗಳನ್ನು ಅಲ್ಲಾಡಿಸಿದಾಗ ತಾತ್ಕಾಲಿಕ ಹಿತವೆನಿಸುತ್ತದೆ.

ಈ ರೋಗ ಯಾವ ವಯಸ್ಸಿನಲ್ಲಾದರೂ ಆರಂಭವಾಗಬಹುದು ಮತ್ತು ವಯಸ್ಸಾದ ಹಾಗೆ ಹೆಚ್ಚಾಗುತ್ತಾ ಹೋಗುತ್ತದೆ. ನಿದ್ರೆಗೆ ತೊಂದರೆ ಮಾಡುವುದರಿಂದ, ದೈನಂದಿನ ಚಟುವಟಿಕೆ ಕಷ್ಟಸಾಧ್ಯ.

ಈ ವ್ಯಾಧಿಯ ಮುಖ್ಯ ಲಕ್ಷಣಗಳೆಂದರೆ (symptoms):

•••ಕಾಲು ಅಲ್ಲಾಡಿಸುವ ಅನಿಸಿಕೆಯು ಮುಖ್ಯವಾಗಿ ಬಹಳ ಸಮಯದವರೆಗೆ ಕುಳಿತಿದ್ದ ಅಥವ ವಿರಮಿಸಿದ್ದ ನಂತರ ಆರಂಭವಾಗುತ್ತದೆ; ಉದಾಹರಣೆಗೆ ಕಾರು ಅಥವ ವಿಮಾನದಲ್ಲಿ ಪ್ರಯಾಣ ಮಾಡುವಾಗ, ಸಿನಿಮಾ ಮಂದಿರದಲ್ಲಿ ಕುಳಿತಿದ್ದಾಗ.

•••ಕಾಲಿನ ಚಲನೆಯಿಂದ ತಾತ್ಕಾಲಿಕ ಪರಿಹಾರವಾಗುವುದು; ಕಾಲು ಚಾಚುವುದು, ಅತ್ತಿತ್ತ ಹೆಜ್ಜೆ ಹಾಕುವುದು ಅಥವ ನಡೆಯುವುದು ಮತ್ತು ಅಲ್ಲಾಡಿಸುವುದರಿಂದ.

•••ಸಂಜೆ ಅಥವ ರಾತ್ರಿಯ ವೇಳೆ ಹೆಚ್ಚಾಗುವ ಲಕ್ಷ್ಮಣಗಳು.

•••ರಾತ್ರಿ ನಿದ್ದೆ ಹೊತ್ತಿನಲ್ಲಿ ಸಾಮಾನ್ಯವಾಗಿ ನಿಯಮಿತವಾಗಿ ಮರುಕಳಿಸುವ ಕಾಲಿನ ಚಲನೆಯಿಂದ ಸೆಳೆತ, ತಿವಿತ ಮುಂತಾಗಿ, ಬಹುತೇಕ ಇಡೀ ರಾತ್ರಿಯ ನಿದ್ದೆಯಲ್ಲಾಗಬಹುದು.

ಇದನ್ನು ಅನುಭವಿಸುವವರು ಇದರ ಲಕ್ಷ್ಮಣಗಳನ್ನು ಒತ್ತಾಯಪೂರ್ವಕವಾಗಿ ತಮ್ಮ ಕಾಲು ಅಥವ ಪಾದಗಳಲ್ಲಿ ಆಗುವ ಸಂವೇದನೆ ಎನ್ನತ್ತಾರೆ. ಸಾಮಾನ್ಯವಾಗಿ ಅದು ದೇಹದ ಎರಡೂ ಭಾಗದಲ್ಲಿ ಉಂಟಾಗುವುದು. ವಿರಳವಾಗಿ ತೋಳುಗಳಲ್ಲೂ ಸಂಭವಿಸಬಹುದು. ಅಲ್ಲದೆ ಈ ರೀತಿಯ ಅನುಭವ  ಚರ್ಮದ ಮೇಲಿನ ಬದಲು, ಕಾಲುಗಳ ಒಳಗೆ ಒಂದು ರೀತಿ ಹರಿದಾಡಿದಂತೆ, ಎಳೆದಂತೆ, ತೆವಳಿದಂತೆ, ನೋವಿನಂತೆ, ತುರಿಯಂತೆ ಅಥವ ತುಡಿತದಂತೆ ಇನ್ನೂ ಮುಂತಾಗಿ ಆಗುವುದೆಂದು ವಿವರಿಸುವರು. ಕೆಲವು ಸಲ ಆ ಸಂವೇದನೆಯನ್ನು ವಿವರಿಸಿ ಹೇಳುವುದೂ ಕಷ್ಟ. ಸ್ನಾಯು ಸೆಳೆತ ಅಥವ ಜೋಮು ಎನ್ನುವುದರ ಬದಲಿಗೆ ಎಲ್ಲರೂ ಸಾಮಾನ್ಯವಾಗಿ ಕಾಲುಗಳನ್ನು ಅಲ್ಲಾಡಿಸುವ ಅಪೇಕ್ಷೆಯಾಗುವುದಾಗಿ ಹೇಳುವರು. ಈ ಲಕ್ಷಣಗಳು ಕೆಲವೊಮ್ಮೆ ಸಂಪೂರ್ಣ ಇಲ್ಲದಂತಾಗಿ ಮತ್ತೆ ಮರುಕಳಿಸುವುದೂ ಇದೆ.  ಈ ಕಾಯಿಲೆ ಇರುವವರು, ತಮ್ಮನ್ನು ನಿರ್ಲಕ್ಷ್ಯ ಮಾಡುವ ಸಾಧ್ಯತೆಗೆ ಅಥವ ನಗೆಪಾಟಲಿಗೆ ಹೆದರಿ, ಸಾಧಾರಣವಾಗಿ

ಕಗ್ಗತ್ತಲೆಯ ವೈದ್ಯರಲ್ಲಿ ಹೋಗದಿರುವ ಸಂಭವವೇ ಹೆಚ್ಚು. ಆದರೆ ಇಂಥ ಲಕ್ಷ್ಮಣಗಳಿಂದ ನಿದ್ರಾಭಂಗವಾಗಿ, ಹಗಲಿನ ತೂಕಡಿಕೆಗೆ ಈಡಾಗಿ ಜೀವನದ ಗುಣಮಟ್ಟ ಕುಗ್ಗುವುದೂ ಸಾಮಾನ್ಯ.

ಈ ಕಾಯಿಲೆಯ ಕಾರಣಗಳು: ಅನೇಕ ಬಾರಿ ಇದಕ್ಕೆ ಕಾರಣ ಇರುವುದೆ ಇಲ್ಲ. ವಿಜ್ಞಾನಿಗಳು ಈ ಕಾಯಿಲೆಗೆ, ಸ್ನಾಯುಗಳ ಚಲನೆಯನ್ನು ನಿಯಂತ್ರಣ ಮಾಡುವ ಡೋಪಮೈನ್ ಎಂಬ ಮೆದುಳ ರಾಸಾಯನಿಕದ ಏರುಪೇರಿಂದ ಆಗಬಹುದು ಎಂದು ಅನುಮಾನಿಸತ್ತಾರೆ.

•••ಆರ್ ಎಲ್ ಎಸ್ ನಲವತ್ತು ವಯಸ್ಸಿನ ಒಳಗೆ ಆರಂಭವಾದರೆ ಆದು ಬಹುತೇಕ ಆನುವಂಶಿಕ.

•••ಕೆಲವು ಮಹಿಳೆಯರಲ್ಲಿ ಗರ್ಭಧಾರಣೆಯಾದಾಗ, ಅದರಲ್ಲೂ ಅಂತಿಮ ತ್ರೈಮಾಸಿಕದಲ್ಲಿ  ಈ ಕಾಯಿಲೆ ಕಾಣಿಸುವುದುಂಟು. ಆದರೆ, ಹೆರಿಗೆಯ ನಂತರ ಸಾಮಾನ್ಯ ಅದು ಅದೃಶ್ಯವಾಗುತ್ತದೆ.

ಇದು ಸಂಭವನೀಯ ಅಂಶಗಳು:

ಆರ್ ಎಲ್ ಎಸ್ ಯಾವುದೆ ವಯಸ್ಸಿನಲ್ಲೂ, ಬಾಲ್ಯದಲ್ಲಿ ಸಹ ಸಂಭವನೀಯ. ಆದರೆ ವಯಸ್ಸಿನ ಸಂಗಡ ಅದು ಹೆಚ್ಚಾಗುತ್ತ ಹೋಗುತ್ತದೆ; ಅಲ್ಲದೆ ಇದು ಪುರುಷರಿಗಿಂತ ಮಹಿಳೆಯರಲ್ಲಿ ಅಧಿಕ.

ಸಾಮಾನ್ಯವಾಗಿ ಬೇರಾವ ಗಂಭೀರ ರೋಗಗಳ ಜೊತೆ ಸಹ ಇದು ಕಾಣಿಸದು — ಈ ಕೆಲವು ಸಂದರ್ಭಗಳನ್ನುಳಿದು:

•••ಬಾಹ್ಯ ನರರೋಗ (ಪೆರಿಫೆರಲ್ ನ್ಯೂರೋಪತಿ). ಸಕ್ಕರೆ ಕಾಯಿಲೆ ಹಾಗು ಮದ್ಯವ್ಯಸನಿಗಳಲ್ಲಿ ಪಾದ ಮತ್ತು ಕೈಗಳ ನರಗಳು ಹಾನಿಯಾದಾಗ.

•••ರಕ್ತಹೀನತೆಯೇ ಆಗದೆ  ಕಬ್ಬಿಣದ ಕೊರತೆ ಉಂಟಾಗಬಹುದಾದಂಥ ಜಠರ ಅಥವ ಕರುಳಿನ ರಕ್ತಸ್ರಾವ, ಮುಟ್ಟಿನಲ್ಲಿ ಅತಿ ಹೆಚ್ಚಿನ ರಕ್ತಸ್ರಾವ, ಅಥವ ಆಗಾಗ ರಕ್ತವನ್ನು ದಾನಮಾಡುವಂಥ ಸನ್ನಿವೇಶಗಳಲ್ಲಿ.

•••ಮೂತ್ರಪಿಂಡ ವೈಫಲ್ಯದಿಂದ ರಕ್ತದಲ್ಲಿನ ಕಬ್ಬಿಣ ಭಂಡಾರದಲ್ಲಿ ಕೊರತೆಯಾಗಿ ರಕ್ತಹೀನತೆಯ ಜೊತೆಗೆ ಕಬ್ಬಿಣದಂಶ ಸಹ ಕಮ್ಮಿಯಾಗುವುದು.

ಹಾಗಾಗಿ ಈ ಕಾಯಿಲೆ ಕಾಣಿಸಬಹುದು ಅಥವ ಉಲ್ಬಣಿಸಬಹುದು.

•••ಪೆಟ್ಟಿನಿಂದ ಮೆದುಳಬಳ್ಳಿ ಹಾನಿಯಾದಾಗ. ಬೆನ್ನು ಹುರಿಗೆ ಕೊಡುವ ಅರಿವಳಿಕೆ ಕೂಡ ಈ ರೋಗಕ್ಕೆ ಕಾರಣ ಆಗಬಹುದು.

ಆರ್ ಎಲ್ ಎಸ್ ಗಂಭೀರ ಸ್ಥಿತಿಯತ್ತ ಹೊರಳದೆ ಇದ್ದರು ಸಹ, ಅದರ ಲಕ್ಷ್ಮಣಗಳು ಕೇವಲ ತ್ರಾಸದಾಯಕ ಪರಿಸ್ಥಿತಿಯಿಂದ, ಕೆಲವೊಮ್ಮೆ ಮಾತ್ರ ರೋಗಿಯನ್ನು ಸಂಪೂರ್ಣವಾಗಿ  ನಿಷ್ಕ್ರಿಯಗೊಳಿಸುವತ್ತ ತಿರುಗಲೂಬಹುದು. ಅಲ್ಲದೆ ನಿದ್ರಾಭಂಗ ಸಂಭವಿಸುವುದಲ್ಲದೆ ಹಗಲು ತೂಕಡಿಕೆ ಸಹ ಆಗುವುದು; ರೋಗ ತೀವ್ರವಾದಾಗ (severe) ಬದುಕಿನ ಗುಣಮಟ್ಟವನ್ನೆ ಕುಗ್ಗಿಸಿ ಖಿನ್ನತೆಗೂ ದೂಡಬಹುದು.

ರೋಗನಿರ್ಣಯ:

ಇದಕ್ಕಾಗಿ, ಮೊದಲೆ ತಿಳಿಸಿರುವ ಹಾಗೆ, ಕಾಲುಗಳನ್ನು ಅಲ್ಲಾಡಿಸುವಂತೆ ತಡೆಯಲಾರದ ಬಯಕೆಯಾಗುವುದು, ಆ ಲಕ್ಷಣಗಳು ಕೂತಿದ್ದಾಗ ಅಥವ ಮಲಗಿದ್ದಾಗ ಆರಂಭವಾಗುವುದು ಅಥವ ಹೆಚ್ಚಾಗುವುದು, ನಡೆದಾಗ ಅಥವ ಕಾಲು ಚಾಚಿದಾಗ ತಾತ್ಕಾಲಿಕ ಶಮನವಾಗುವುದು, ರಾತ್ರಿಯ ವೇಳೆ ಹೆಚ್ಚುವುದು ಹಾಗು ಈ ಥರದ ಲಕ್ಷಣಗಳನ್ನು ಬೇರಾವ ವೈದ್ಯಕೀಯ ಅಥವ ವರ್ತನೆಯ ರೀತಿಯಿಂದಲೂ ವಿವರಿಸಲಾಗದ್ದು ಮುಂತಾದುವುಗಳೆ ಅಲ್ಲದೆ, ವೈದ್ಯರು ರೋಗಿಯ ದೈಹಿಕ ಮತ್ತು ನರವೈಜ್ಞಾನಿಕ ಪರೀಕ್ಷೆ ಮಾಡುವರು. ಜೊತೆಗೆ ಕಬ್ದಿಣದಂಶದ ಕೊರತೆ, ಸಕ್ಕರೆ ಕಾಯಿಲೆ ಮುಂತಾಗಿ ತಿಳಿಯಪಡಿಸುವ ರಕ್ತ ಪರೀಕ್ಷೆ ಮಾಡಿಸುವರು.

ಇನ್ನು ಚಿಕಿತ್ಸೆಗಾಗಿ ಕೆಲವೊಮ್ಮೆ ಕಬ್ಬಿಣದ ಗುಳಿಗೆಗಳನ್ನು ಕೊಡುವುದರಿಂದ ಇದು ಶಮನವಾಗಬಹುದು. ಜೀವನ ಶೈಲಿಯ ಬದಲಾವಣೆ ಕೂಡ ಸಹಾಯ ಆಗುತ್ತದೆ. ಇದಾವುದರಿಂದಲೂ ಉತ್ತಮ ಆಗದಂತಾದಾಗ ವೈದ್ಯರು ಮೆದುಳಿನ ಡೋಪಮೈನ್ ಹೆಚ್ಚಿಸುವ ಔಶಧವನ್ನು ಸಹ ನೀಡಬಹುದು. ಅಲ್ಲದೆ ನಿದ್ದೆಗಾಗಿ ಅಥವ ಸ್ನಾಯು ಸಡಿಲಗೊಳಿಸುವಂಥ ಮಾತ್ರೆ ಕೂಡ ಕೊಡಬಹುದು.

ಜೀವನ ಶೈಲಿ ಮತ್ತು ಮನೆಮದ್ದುಗಳು:

ಸರಳ ಜೀವನ ಶೈಲಿ ಬದಲಾವಣೆ ಸಹಾಯಕ.

•••ಕಾಲುಗಳನ್ನು ಬಿಸಿನೀರಲ್ಲಿಡುವುದು ಮತ್ತು ಮಾಲೀಸು ಅಥವ ಮಸಾಜ್ ಮಾಡುವುದರಿಂದ ಸ್ನಾಯುಗಳು ಸಡಿಲಗೊಂಡು ಹಿತವಾಗುವುದು.

•••ಸರತಿಯಲ್ಲಿ ಬಿಸಿ ಹಾಗು ತಣ್ಣ ಬಟ್ಟೆ ಪ್ಯಾಕ್ ಮಾಡುವುದು.

•••ಉತ್ತಮ ನಿದ್ರಾಸ್ವಾಸ್ಥ್ಯ (good sleep hygiene) ಮತ್ತು ತಂಪಿನ, ನಿಶಬ್ದ ಹಾಗು ಹಿತಕರ ನಿದ್ರಾಪರಿಸರ ಕೂಡ ಸಹಾಯಕ. ನಿಖರ ಸಮಯಕ್ಕೆ ಮಲಗುವ ಎದ್ದೇಳುವ ಅಭ್ಯಾಸ ಮತ್ತು ಕನಿಷ್ಠ ಏಳು ಗಂಟೆಯ ನಿದ್ದೆಯ ಅವಶ್ಯ.

•••ನಿಯಮಿತ ವ್ಯಾಯಾಮ ಸಹಾಯಕ. ವ್ಯಾಯಾಮ ಹೆಚ್ಚಾದರೂ ರೋಗ ಲಕ್ಷಣ ಉಲ್ಬಣವಾಗಬಹುದು, ಎಚ್ಚರಿಕೆ ಇರಲಿ.


ಡಾ. ಅರಕಲಗೂಡು ನೀಲಕಂಠ ಮೂರ್ತಿ

Leave a Reply

Back To Top