ಪುಸ್ತಕ ಸಂಗಾತಿ
ಗಜಲ್
ಜಯಶ್ರೀ ಭ ಭಂಡಾರಿ
ಹಿಂಗಾರು ಮಳೆಗೂ ಕೊಡೆಯ ಹಿಡಿದು ನಡೆದೆಯಾ ನೀನು.
ಬಂಗಾರಿ ಚಳಿಗೆ ನಡುಗಿ ಗುಡುಗಿನ ಸಪ್ಪಳ ತಡೆದೆಯಾ ನೀನು.
ವರ್ಷದಿಂದ ವರ್ಷಕ್ಕೆ ಮಳೆ ಅತಿಯಾಗಿ ಕಾಡುತಿದೆಯಲ್ಲವೇ
ಹರ್ಷದಿ ಓಡಾಡುವ ಜನಕೆ ಕಳೆ ಇಲ್ಲದಂತೆ ಮಾಡಿದೆಯಾ ನೀನು
ಮುಂಗಾರು ಮುದ್ದಾಗಿ ಬಂದು ಬೆಳೆಗೆ ಹಿಗ್ಗಿನಿಂದ ಮುತ್ತಿಡುವುದು.
ಹಂಗಾಮಿ ವರ್ಷಧಾರೆ ಮೊದ್ದಾಗಿ ಸದ್ದಿನಿಂದ ಕಳೆ ತೀಡಿದಿಯಾ ನೀನು
ಮರುಕ ತೋರಿಸದೆ ಮಾರುತ ಬೀಸಿ ಬೀಸಿ ಹೊಡೆಯುವುದು
ತಿರುಕನ ತಾರಸಿಯಲ್ಲಿ ಸೋರುತ ಪಟ ಪಟ ಮಿಡಿದೆಯಾ ನೀನು
ಹನಿಗಳ ಲೀಲೆಯಲಿ ಛತ್ರಿ ಹಿಡಿದು ಜಯಾ ಹಾಯಾಗಿಹಳು.
ಮಣಿಗಳಂತೆ ಉದುರುವ ಆಲೆಕಲ್ಲುಗಳ ಕುಡಿದು ಹಾಡಿದೆಯಾ ನೀನು.