ಅಂಕಣ ಸಂಗಾತಿ

ಒಲವ ಧಾರೆ

ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರ ಅಂಕಣ

ದೇವರೆಂದರೇ…ಒಲವೆಂಬ ಒಡೆಯ

..

“ದಯವೇ ಧರ್ಮದ ಮೂಲವಯ್ಯ, ದಯವಿರಬೇಕು ಸಕಲ ಪ್ರಾಣಿಗಳಲ್ಲಿ” ಎನ್ನುವ ಬಸವಣ್ಣನವರ ಚಿಂತನೆಯನ್ನು ಅವಲೋಕಿಸಿದಾಗ… ದೇವರು ಅಂದರೆ ಯಾರು? ದೇವರೆಲ್ಲಿದ್ದಾನೆ..? ದೇವರು ಇರುವುದು ನಿಜವೇ..? 

ದೇವರನ್ನು ನಂಬುವವರನ್ನು ಆಸ್ತಿಕರೆಂದು, ದೇವರನ್ನು ನಂಬದವರನ್ನು ನಾಸ್ತಿಕರೆಂದು ನಾವು ಕರೆಯುತ್ತೇವೆ. ದೇವರ ಬಗ್ಗೆ ನಾವು ಎಷ್ಟೇ ಚರ್ಚೆಯನ್ನು ಮಾಡಿದರೂ ದೇವರಿದ್ದಾನೋ ಇಲ್ಲವೋ ಎನ್ನುವ ತಾರ್ಕಿಕ ವಾದಗಳಿಗಿಂತಲೂ ವಾಸ್ತವಿಕ ಮತ್ತು ವೈಚಾರಿಕ, ವೈಜ್ಞಾನಿಕವಾಗಿ ಆಲೋಚಿಸಬೇಕಾಗಿದ್ದು ತುಂಬಾ ಅಗತ್ಯವಿದೆ. ದೇವರನ್ನು ನಂಬುವುದು ಅವರವರ ಅಭಿಪ್ರಾಯ ಆದರೆ ದೇವರನ್ನು ನಂಬುವವರು ಅದು ಖಾಸಗಿಯಾಗಿ ಇರಬೇಕೆಂದು ಬಯಸುವುದರ ಜೊತೆಗೆ ದೇವರ ಹೆಸರಿನಲ್ಲಿ ಶೋಷಣೆ ಮಾಡುವುದು ಸಲ್ಲದು ಎಂಬ ಮಾತಿಗೆ ಬೆಲೆ ನೀಡಬೇಕು.

ಕವಿ ಕುವೆಂಪುರವರ ಪ್ರಕಾರ, “ದೇವರಂದರೆ ಪ್ರಕೃತಿ : ಪ್ರಕೃತಿಯೇ ದೇವರು”

 ಇಡೀ ಚರಾಚರ ವಸ್ತುಗಳಲ್ಲಿ ಪಂಚಭೂತಗಳಲ್ಲಿ ಇರುವ ಶಕ್ತಿಯಿಂದಲೇ ಎಲ್ಲಾ ಜೀವಿಗಳು ಬದುಕುತ್ತವೆ ಎನ್ನುವುದು ನಿರ್ವಿವಾದ.

 ಗಾಳಿ,ಬೆಂಕಿ,ಮಳೆ, ಆಹಾರ, ನೀರು ಎಂಬ ಚರಾಚರ ಜೀವಿಗಳು ಅಲ್ಲದೆ ಯಾವ ಪ್ರಾಣಿಯೂ ಜೀವಿಸಲಾರದು.

ಪುರಾತನ ಕಾಲದಲ್ಲಿ ನಮ್ಮ ಹಿರಿಯರು ಪ್ರಕೃತಿಯನ್ನು ಪೂಜಿಸುತ್ತಿದ್ದರು. ಪ್ರಕೃತಿಯಲ್ಲಿರುವ ಗಿಡ- ಮರ,ಸೂರ್ಯ -ಚಂದ್ರ, ನೀರು,ಬೆಂಕಿ, ಗಾಳಿ,ಗುಡುಗು, ಸಿಡಿಲು ಇವೆಲ್ಲವನ್ನೂ ಅವರು ಆರಾಧಿಸುತ್ತಿದ್ದರು. ಅಂದರೆ ಮನುಷ್ಯರು ಅವುಗಳ ಅಗಾಧವಾದ ಶಕ್ತಿಯ  ಉಪಯೋಗದಿಂದಲೋ ಇಲ್ಲವೇ ಅವುಗಳು ಹರಡುವ ಭಯಂಕರವಾದ ಅಪಾಯದಿಂದಲೋ ಒಟ್ಟಾರೆ ಭಯಮಿಶ್ರಿತವಾದ ಭಾವದ ಒಲವಿನಿಂದ  ಪ್ರಕೃತಿಯನ್ನು ಪೂಜಿಸುತ್ತಿದ್ದರು. ಇವುಗಳನ್ನು

ತಮ್ಮ ಎದೆಯೊಳಗಿಟ್ಟುಕೊಂಡು  ಎಲ್ಲದಕ್ಕೂ ಅವರು ಸ್ಮರಿಸುತ್ತಿದ್ದರು. 

ಹೀಗೆ ಕ್ರಮೇಣವಾಗಿ ಪ್ರಕೃತಿಯನ್ನು ಆರಾಧಿಸುವ ಅಸ್ತಿತ್ವದಿಂದ ನಾಗರಿಕತೆಯ ಅಸ್ತಿತ್ವವು ಬೆಳೆದಂತೆ ದೇವರು ವಿವಿಧ ಆಕಾರಗಳನ್ನು ಪಡೆದುಕೊಂಡನು.

ಮನುಷ್ಯನ ಅನುಭವಕ್ಕೆ ದಕ್ಕಿದ ಆಕಾರವನ್ನು, ವಸ್ತುಗಳನ್ನು, ಸಂಗೀತವನ್ನು,  ಮುಂತಾದ ಪರಿಕರಗಳನ್ನು ದೇವರಿಗೆ ಕೊಟ್ಟು ದೇವರಿಗೆ ಒಂದು ಸ್ವರೂಪವನ್ನು ತಮ್ಮ  ಅನುಭವದ ಮೂಸೆಯಲ್ಲಿ ಬಂಧನದಲ್ಲಿ ಬಂಧಿಸಲ್ಪಟ್ಟನು. ಹೀಗೆ ವಿವಿಧ ದೇವರುಗಳಿಗೆ ವಿವಿಧ ಪರಿಕರಗಳನ್ನು ನೀಡಿ, ಆತನನ್ನು ಪೂಜಿಸಲ್ಪಡುವ ಸಾಂಪ್ರದಾಯ ಬೆಳೆದು ಬಂದಿತು‌. ಅದೇನೆ ಇರಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರು ಈ ವಿಚಾರವಾಗಿಯೇ, “ನಮ್ಮ ಅಳತೆಯನ್ನು ಮೀರಲಾರದ ದೇವರು” ಎಂದು ಕರೆದಿದ್ದಾರೆ.

ದೇವರೆಂದರೆ ಒಲವು. ಯಾವ ಧರ್ಮವೇಯಾಗಲಿ, ಯಾವ ಧರ್ಮದ ದೇವರೇಯಾಗಲಿ ಪ್ರೀತಿ ಹಂಚುವುದನ್ನು ಹೇಳಿಕೊಡುತ್ತದೆ. ಪರಸ್ಪರ ಒಬ್ಬರನ್ನೊಬ್ಬರನ್ನು ಅರಿತುಕೊಂಡು ಸಮಾಜದಲ್ಲಿ ಬದುಕುವ ಸಾಮರಸ್ಯದ ಪಾಠವನ್ನು ದೇವರು ಮತ್ತು ಧರ್ಮಗಳು ಕಲಿಸುತ್ತವೆಯೇ ಹೊರತು ದ್ವೇಷವನ್ನಲ್ಲ. ತಮ್ಮ ತಮ್ಮ ಸ್ವಾರ್ಥಕ್ಕೋಸ್ಕರ ದ್ವೇಷವನ್ನು ಬಿತ್ತುವ ಧುರುಳರು ಸಾಮರಸ್ಯವನ್ನು ಹದಗೆಡಿಸುವ ಕೆಟ್ಟ ಆಲೋಚನೆಗಳನ್ನು  ಧರ್ಮದ ಹೆಸರಿನಲ್ಲಿ, ದೇವರ ಹೆಸರಿನಲ್ಲಿ ನೆಡೆಯುತ್ತಿರುವುದು ಯಾವ ದೇವರು ಇಚ್ಛಿಸುವುದಿಲ್ಲ.

 ಅಂಧ -ಅನಾಥರು, ಸಮಾಜದಿಂದ ಅನ್ಯಾಯ ಕ್ಕೊಳಗಾದವರು, ಬಡತನದಿಂದ ಬಳಲಿದವರು, ಬದುಕಿನಲ್ಲಿ ನೋವುಂಡವರು… ಇಂಥವರ ಕಣ್ಣೀರನ್ನು ಒರೆಸೆಂದು ಪ್ರತಿಯೊಂದು ಧರ್ಮವು ಮತ್ತು  ಪ್ರತಿಯೊಬ್ಬ ದೇವರು ಹೇಳಿಕೊಡುತ್ತಾನೆ. ಅದೇ ನಿಜವಾದ “ದಯವೇ ಧರ್ಮದ ಮೂಲ” ಬಸವಣ್ಣನವರ ಮೇಲಿನ ಮಾತು ನಮಗೆ ಯಾವಾಗಲೂ ಮನದೊಳಗೆ ಇರಬೇಕು.

“ಪರೋಪಕಾರವೇ ಇದಂ ಧರ್ಮಂ” ಎನ್ನುವ ಮಾತಿನಂತೆ ಮನುಷ್ಯನಿಗೆ ಮನುಷ್ಯನೇ ಉಪಕಾರಿಯಾಗಬೇಕು. ಮನುಷ್ಯ ಇತರ ಪ್ರಾಣಿಗಳಿಗೂ ಮಾದರಿಯಾಗಿ ಅವುಗಳ ಲಾಲನೆ ಪಾಲನೆ ಮಾಡಬೇಕು. ಮನುಷ್ಯ ವಿವೇಚನೆಯುಳ್ಳ ವ್ಯಕ್ತಿ. ಮನುಷ್ಯ ಆಲೋಚಿಸುವ ವ್ಯಕ್ತಿ. ಮನುಷ್ಯ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎನ್ನುವ ಆಲೋಚನೆಗೆ ಒಳಗಾಗಬೇಕು. ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯನ್ನಾಗಲಿ, ಸಮಾಜವನ್ನಾಗಲಿ ಬಳಸಿಕೊಳ್ಳಬಾರದು. ಒಂದು ವೇಳೆ ಆತ ಪ್ರಕೃತಿಯನ್ನು, ಸಮಾಜವನ್ನು ಕೆಟ್ಟದ್ದಾಗಿ ಬಳಸಿಕೊಂಡರೆ ತಾನು ನಂಬಿರುವ ದೇವರಿಗೆ ದ್ರೋಹ ಬಗೆದಂತೆ, ತಾನಿರುವ ಧರ್ಮಕ್ಕೆ ದ್ರೋಹ ಬಗೆದಂತೆ.

 ಅಗಾಗಿ ದೇವರು ಒಳಿತಿನ ಸಂಕೇತವಾಗಬೇಕು. ದೇವರು ಕರುಣೆಯ ಮೂರ್ತಿಯಾಗಬೇಕು.

ದೇವರ ಹೆಸರಿನಲ್ಲಿ ಬಲಿಕೊಡುವ, ದೇವರ ಹೆಸರಿನಲ್ಲಿ ಕೊಲ್ಲುವ, ದೇವರ ಹೆಸರಿನಲ್ಲಿ ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸವಾಗಬಾರದು. ಯಾವುದೇ ಧರ್ಮವೂ ಬರ್ಚಿ, ತ್ರಿಶೂಲ, ಖಡ್ಗ, ತಲ್ವಾರಗಳನ್ನು ಬಳಸಲು ಹೇಳುವುದಿಲ್ಲ.

ಒಲವಧಾರೆಯನ್ನು ಪ್ರಕೃತಿಯು ನಮಗೆ ಕೊಟ್ಟಂತೆ. ನಾವು ಸಮಾಜಕ್ಕೆ ಒಲವನ್ನೇ ಕೊಡಬೇಕು. ಪ್ರೀತಿಯನ್ನೇ ಹಂಚಬೇಕು. ಒಬ್ಬರಿಗೊಬ್ಬರು ಅರಿತುಕೊಳ್ಳುವ, ಒಬ್ಬರಿಗೊಬ್ಬರು ತಿಳಿದುಕೊಳ್ಳುವ, ವಿಶಾಲ ಮನೋಭಾವ ನಮ್ಮದಾಗಬೇಕು. ಜಾತಿ, ಧರ್ಮ, ದೇಶ, ಪ್ರದೇಶ, ಗಡಿ, ರಾಜಕೀಯ, ಇವೇಲ್ಲವನ್ನೂ ಮೀರಿ ಮನುಷ್ಯ ಬೆಳೆಯಬೇಕಾಗಿದೆ. ಮನುಷ್ಯ ವಿಷಮಾನವನಾಗದೆ, ವಿಶ್ವಮಾನವನಾಗಬೇಕಾಗಿದೆ. ನಾವು ಅಡ್ಡ ಗೋಡೆಗಳನ್ನು ನಮ್ಮೊಳಗೆ ನಿರ್ಮಿಸಿಕೊಳ್ಳದೆ, ಬಯಲ ಮಂಟಪದಲ್ಲಿ ವಿಶಾಲವಾಗಿ ಬೆರೆಯಬೇಕಾಗಿದೆ. ಹೀಗೆ ಬದುಕುವದರಿಂದ ದೇವರಿಗೂ ಪೂಜೆ ಸಲ್ಲಿಸಿದಂತಾಗುತ್ತದೆ. ದೇವರು ಒಲವಿನ ಒಡೆಯ. ದೇವರು ಪ್ರೀತಿಯ ಸಂಜೀವಿನಿ. ಹಾಗಾಗಿ ನಾವೇಲ್ಲ ಪ್ರೀತಿಯನ್ನು ಹಂಚೋಣ. ಜಗದ ತುಂಬಾ ಮಾನವೀಯ ಮೌಲ್ಯಗಳನ್ನು ಬಿತ್ತುತ್ತಲೇ ಮನುಷ್ಯತ್ವದ “ಮಾನವ ಧರ್ಮವನ್ನು” ಬೆಳೆಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳೋಣ. ಜಗದ ತುಂಬಾ ನಗು ತುಂಬಲು ದೇವರನ್ನು ಒಲವಿನ ಒಡೆಯನನ್ನಾಗಿ ನಮ್ಮೆದೆಯೊಳಗೆ ತುಂಬಿಕೊಳ್ಳೋಣವೆಂದು ನಾವು ಬಯಸೋಣ.

——————————-

ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ 
ಕವನ ಲೇಖನಗಳ ಪ್ರಕಟ.

Leave a Reply

Back To Top