ಪುಸ್ತಕ ಪರಿಚಯ- “ಮಾದಕ ದೊರೆ”.

ಪುಸ್ತಕ ಸಂಗಾತಿ

“ಮಾದಕ ದೊರೆ”

ಅನುಸೂಯ ಯತೀಶ್

“ಬರಹ ನನಗೆ ಹಸಿವು ಅಲ್ಲ, ಅನ್ನವು ಅಲ್ಲ, ಅದೊಂದು ಅಕ್ಷರ ತಪಸ್ಸು” ಎನ್ನುವ ಸಂತೋಷ್ ಕುಮಾರ್ ಮೆಹಂದಳೆಯವರು. ಕನ್ನಡ ಸಾರಸ್ವತ ಲೋಕದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸುತ್ತ ಅದರಲ್ಲೂ ಗದ್ಯ ಸಾಹಿತ್ಯ ಕ್ಷೇತ್ರದಲ್ಲಿ ಬದ್ಧತೆಯ ಮತ್ತು ಪ್ರಬುದ್ಧತೆಯ ಗಾಳಿ ಬೀಸಿದ ಮಾರ್ಗ ಇವರದಾಗಿದೆ. ಕಾದಂಬರಿ ಎಂಬ ಬಹುದೊಡ್ಡ ಕ್ಯಾನ್ವಾಸ್ ಮೇಲೆ ಜೀವಮಾನವೆಲ್ಲ ತೀರಿಸಲಾಗದ ಅಕ್ಷರ ಋಣಕ್ಕೆ ಬದ್ಧರಾಗಿ ಬರಹದ ಗಟ್ಟಿತನವನ್ನು ಒದಗಿಸುವ ದಿಟ್ಟ ಹೆಜ್ಜೆ ಇಟ್ಟು ಸಾಹಿತ್ಯವೆಂಬ ನೌಕೆಯನೇರಿ ಗಮ್ಯದೆಡೆಗೆ ಯಶಸ್ವಿಯಾಗಿ ಪಯಣಿಸುತ್ತಿರುವ ಲೇಖಕ ಶ್ರೀ ಸಂತೋಷ್ ಕುಮಾರ್ ಮೆಹಂದಳೆಯವರು.

ಬೆನಾಲಿಮ್, ಕೆಂಪು ಚಕ್ರಗಳು, ಅಗೋರಿಗಳ ಲೋಕದಲ್ಲಿ, ಮಹಾ ಪತನ, ಮಂಗಳಮುಖಿಯರ ಸಂಗದಲ್ಲಿ, ಅಬೌಟಾಬಾದ್,  Untold story of ಕಶ್ಮೀರ್, ಯಾವ ಪ್ರೀತಿಯು ಅನೈತಿಕವಲ್ಲ, ಎಂಟೆಬೆ ಮುಂತಾದ ಅದ್ಭುತವಾದ ರೋಚಕ ಕಾದಂಬರಿಗಳನ್ನು ಕನ್ನಡಕ್ಕೆ ನೀಡಿ ನಿರಂತರ ಸಾಹಿತ್ಯ ರಚನೆ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತನಗೊಂದು ನೆಲೆ ಕಂಡುಕೊಂಡು ಅದೇ ಮಾರ್ಗದಲ್ಲಿ ಸಾಗುತ್ತಿರುವ ಲೇಖಕರಿವರು.

ಇಂದು ಇಡೀ ಜಗತ್ತನ್ನು ಕಾಡುವ ಅತಿ ಭಯಾನಕ ಸಮಸ್ಯೆ ಎಂದರೆ ಅದು ಮಾದಕ ವಸ್ತುಗಳ ಉತ್ಪಾದನೆ ಮತ್ತು ಸರಬರಾಜು. ಇದು ಯುವ ಜನಾಂಗದ ಪತನಕ್ಕೆ ಮೂಲಾಧಾರವಾಗಿದೆ. ಇಂತಹ ಒಂದು ವಿಷಯವನ್ನು ತನ್ನ ಕಾದಂಬರಿಗೆ ವಸ್ತುವಾಗಿಸಿಕೊಂಡು ಡ್ರಗ್ಸ್ ಮಾಫಿಯಾದ ಮಾದಕ ಜಗತ್ತಿನ ಎಳೆ ಎಳೆಯನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ.

ಕೊಲಂಬಿಯ ಮತ್ತು ಅಮೇರಿಕಗಳಲ್ಲಿ ನಡೆಯುತ್ತಿದ್ದ ಡ್ರಗ್ಸ್ ಮಾಫಿಯ ಕುರಿತಾದ ಅಂತರಾಷ್ಟ್ರೀಯ ವಿಚಾರ ಒಂದನ್ನು, ನೈಜವಾದ ಘಟನೆಗಳನ್ನು ಆಧರಿಸಿ ತನ್ನದೇ ಆದ ವಿಭಿನ್ನ ಶೈಲಿಯ ಸಾಹಿತ್ಯ ರಚನೆಯ ಮೂಲಕ ಮಾದಕ ದೊರೆ ಎಂಬ ಸುಧೀರ್ಘ ಕಾದಂಬರಿ ಒಂದನ್ನು ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಈ ಪ್ರಪಂಚದಲ್ಲಿ ಜರುಗುತಿರುವ ವಿಸ್ಮಯಗಳು, ಬಾಳಿ ಬದುಕಿದ ವಿಸ್ಮಯಕಾರಿ ವ್ಯಕ್ತಿಗಳು, ವ್ಯಕ್ತಿತ್ವಗಳು ಅಸಂಖ್ಯಾತ. ಇಂತಹವುಗಳಲ್ಲಿ ಎಷ್ಟೋ ವಿಚಾರಗಳು ನಮ್ಮ ಗಮನಕ್ಕೆ ಬಾರದೆ ಭೂಗತವಾಗುತ್ತವೆ. ಅಂತಹ ವಿಚಾರಗಳು ಓದುಗರ ಕೈ ಸೇರಬೇಕಾದರೆ ಬರಹಗಾರರು ಇಂತಹ ವಿಚಾರಗಳನ್ನು ಹೆಕ್ಕಿ ತಂದು ಸಾಹಿತ್ಯಕ ಭಾಷೆಯಲ್ಲಿ ಓದುಗರಿಗೆ ಉಣಬಡಿಸಬೇಕು. ಅಂತಹ ಕಾರ್ಯ ಮಾಡುವ ಪಣತೊಟ್ಟ ಮೆಹಂದಿಳೆಯವರು ನಾಯಕರನ್ನಷ್ಟೇ ಅಲ್ಲ ಖಳನಾಯಕನ ವಿಶ್ವರೂಪವನ್ನು ಈ ಮಾದಕ ದೊರೆಯಲ್ಲಿ ಮಾಡಿಸಿದ್ದಾರೆ.

 ಯಾವುದೋ ಕಲ್ಪನೆಯನ್ನಾಧರಿಸಿ ಕಾದಂಬರಿ ರಚಿಸುವಲ್ಲಿ ವಿಫಲ ಅವಕಾಶಗಳು, ಆಯಾಮಗಳು ದೊರೆಯುತ್ತವೆ. ಆದರೆ ಇಂತಹ ಸಂಶೋಧನಾತ್ಮಕ ಕೃತಿಗಳ ರಚನೆಯಲ್ಲಿ ನಿಖರತೆ, ಸ್ಪಷ್ಟತೆ, ನೈಜತೆ ,ದಾಖಲೆಗಳು, ಅನ್ವೇಷಣಾ ಕೌಶಲ, ತೀರ್ಮಾನಿಸುವ ಸಾಮರ್ಥ್ಯ, ಹುಡುಕಾಟ, ಅರ್ಥೈಸುವಿಕೆ ಬಹಳ ಪ್ರಮುಖವಾಗಿರಬೇಕು. ಇವೆಲ್ಲವನ್ನೂ ಮೈಗೂಡಿಸಿಕೊಂಡ ಮೆಹಂದಳೆಯವರ ಕಲಾತ್ಮಕತೆ ಹಾಗೂ ವಸ್ತು ವಿಷಯದ ಆಯ್ಕೆ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುವುದರಲ್ಲಿ ಎರಡು ಮಾತಿಲ್ಲ. ನಮ್ಮ ಕಣ್ಣ ಮುಂದೆ ಕಾಣುವ ನಮ್ಮ ಅನುಭವಕ್ಕೆ ನಿಲುಕುವ ವಿಚಾರಗಳನ್ನು, ವಿಷಯಗಳನ್ನು ಕಾದಂಬರಿಯಾಗಿಸುವುದು ಸರ್ವೇಸಾಮಾನ್ಯ. ಆದರೆ ಮೆಹಂದಳೆಯವರು ಈ ಮಾರ್ಗದಲ್ಲಿ ಸಾಗದೆ ಅಸಾಮಾನ್ಯ ವಿಷಯಗಳನ್ನು, ಅಸಾಧಾರಣ ವ್ಯಕ್ತಿತ್ವಗಳನ್ನು ಹುಡುಕಿ  ಅದನ್ನು ಕನ್ನಡಿಗರಿಗೆ ಪರಿಚಯಿಸುವುದನ್ನು ರೂಡಿಸಿಕೊಂಡು ಯಶಸ್ವಿಯಾಗಿ ಸಾಗುತ್ತಿದ್ದಾರೆ.

ಮೆಹಂದಳಯವರ ಕಾದಂಬರಿಯ ವಸ್ತುವಿನ ಆಯ್ಕೆಯಲ್ಲಿ ವೈವಿಧ್ಯತೆ ಇದ್ದರೆ, ಬರಹದ ಶೈಲಿಯಲ್ಲಿ ತನ್ನದೇ ಆದ ಸ್ವಂತಿಕೆಯ ವಿಶಿಷ್ಟ ದಾರಿಯನ್ನು ಕಂಡುಕೊಂಡು, ಶಿಷ್ಟಾಚಾರ ಮಡಿವಂತಿಕೆ ಎಂಬ ಯಾವುದೇ ಮುಲಾಜಿಗೆ ಒಳಗಾಗದೆ, ನಿರ್ಭೀತಿಯಿಂದ ವಿಶಿಷ್ಟರೂಪದ ಬರಹದ ಮೂಲಕ ಓದುಗರನ್ನು ತಲುಪುವ ದೃಢ ಸಂಕಲ್ಪ ಮೆಹೆಂದಡೆಯವರದು .ಒಬ್ಬ ಓದುಗ ಬಯಸುವ ಎಲ್ಲ ರಸಭಾವಗಳನ್ನು ಒಂದೇ ಕಾದಂಬರಿಯಲ್ಲಿ ಉಣಪಡಿಸುವ ಕಲೆಯನ್ನು ಕರಗತ ಮಾಡಿಕೊಂಡ ಲೇಖಕರು ಎಂದರೆ ಉತ್ಪ್ರೇಕ್ಷೆಯಾಗಲಾರದು.

ಮೆಹಂದಳೆಯವರ ಕಾದಂಬರಿಯ ವಿಷಯ ನವ ನವೋನ್ಮೇಶ ಶಾಲಿನಿಯಾಗಿ ಹೊಸತನಕ್ಕೆ ನಾಂದಿ ಹಾಡುತ್ತವೆ. ಜಾಗೃತಿಕ ಮಟ್ಟದಲ್ಲಿ ಸದ್ದು ಮಾಡಿದ ವಿಷಯವನ್ನು, ಭೂಗತವಾಗಿ ಇತಿಹಾಸ ಸೇರುವ ಮುನ್ನ ಅಂತರ ರಾಷ್ಟ್ರೀಯ ಖಳನಾಯಕನೊಬ್ಬನ ಭಯಾನಕ ಜಗತ್ತನ್ನು ಕನ್ನಡಿಗರ ಮುಂದೆ ತೆರೆದಿಡುವ ಮೂಲಕ ಓದುಗನಲ್ಲಿ ಕುತೂಹಲ ಮೂಡಿಸಿ ಓದುವ ಹಂಬಲ ಹೆಚ್ಚಿಸಿದ್ದಾರೆ.

ಜಗತ್ತಿನ ನಕಾಶೆಯಲ್ಲಿ ನಶೆ ಹಂಚಿದ ಕೊಲಂಬಿಯ ಮೆಡಲಿನ್ ರಾಜಕೀಯವಾಗಿ, ಸಾಮಾಜಿಕವಾಗಿ, ಅರಾಜಕತೆ ಹೊಂದಿದ್ದ ದೇಶ. ಪ್ರತಿ ದೇಶದಲ್ಲೂ ಡಾನ್ ಗಳಿರುವಂತೆ ಇಲ್ಲೊಬ್ಬ ಡಾನ್ ಇದ್ದ. ಅವನು ಜಗತ್ತಿನ ಪೀಳಿಗೆಗೆ ನಶೆ ಹಂಚಿ ಹೋದ ಕಥನವಿದು. ಈ ಮಾದಕ ದೊರೆ ಕಾದಂಬರಿ ಓದಿದ ಪ್ರತಿಯೊಬ್ಬರಿಗೂ ಮೊದಲು ಅರ್ಥವಾಗುವುದು ಮೆಹಂದಿಯವರ ಬರಹದ ಬದ್ಧತೆ, ಅಧ್ಯಯನಶೀಲತೆ, ಮಾಹಿತಿ ಸಂಗ್ರಹಣೆ, ತಂತ್ರಜ್ಞಾನದ ಅರಿವು, ಕ್ರಮಬದ್ಧ ಜೋಡಣೆ, ಮನಸೆಳೆವ ನಿರೂಪಣೆ, ವಿಶ್ಲೇಷಣಾ ಸಾಮರ್ಥ್ಯ ಮುಂತಾದವುಗಳು.

ಸಸ್ಪೆನ್ಸ್, ಹಾರರ್, ಥ್ರಿಲ್ಲರ್, ಕಾಮ, ಭೀವತ್ಸ ಎಲ್ಲವನ್ನು ಒಂದೆ ಕಾದಂಬರಿಯ ಚೌಕಟ್ಟಿನೊಳಗೆ ತಂದು ಅದು ಎಲ್ಲೂ ಓದುಗನಿಗೆ ಬೇಸರಿಸದಂತೆ ಕೊನೆಯವರೆಗೂ ಯಾವೊಬ್ಬ ಓದುಗನು ಕಥೆಯನ್ನು  ಊಹಿಸದಂತಹ ತಿರುವುಗಳನ್ನು ನೀಡುವ ಮೂಲಕ ರಚಿಸಿದ ಸೃಜನಶೀಲ ಕೃತಿಯೆ ಮಾದಕ ದೊರೆ.

ಮಾದಕ ದೊರೆ ಕಾದಂಬರಿ ಜಗತ್ತು ಕಂಡು ಕೇಳರಿಯದ ಭೂಗತ ಲೋಕದ ಅತ್ಯಂತ ಶ್ರೀಮಂತ ಪಾತಕಿ ಒಬ್ಬನ ಭಯಾನಕ ಕಥಾನಕ. ಅವನೇ ಪ್ರಾಬ್ಲೋ ಎಮಿಲಿಯೋ ಎಸ್ಕೋಬಾರ್ ಗಾವೇರಿಯಾ.  ಕೊಲಂಬಿಯಾ ಮತ್ತು ಅಮೇರಿಕ ಗಳಲ್ಲಿ ಭೂಗತ ಜಗತ್ತಿನಾಳಿದ ಡ್ರಗ್ಸ್ ಮಾಫಿಯಾದ ಡಾನ್ ಇವನು.

ಸಾಮಾನ್ಯ ಜನರ ಊಹೆಗೂ ನಿಲುಕದ ವಿಭಿನ್ನ ತಿರುವುಗಳನ್ನು ಪಡೆದುಕೊಂಡು ಆದಿಯಿಂದ ಅಂತ್ಯದವರೆಗೂ ಎಲ್ಲು ನಿಲುಗಡೆಗೆ ಅವಕಾಶ ನೀಡದೆ ಸಾಗುವ ಅದ್ಭುತ ನಿರೂಪಣಾ ಶೈಲಿ ಮತ್ತು ಭಾಷಾ ಬಳಕೆಯ ಹಿಡಿತ, ಭಾಷಾ ಪ್ರಬುದ್ಧತೆ ಎಲ್ಲರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ಇವರ ಕಾದಂಬರಿಯನ್ನು ಓದುತ್ತಿದ್ದಾಗ ರವಿ ಬೆಳಗೆರೆಯವರ  ಬರಹದ ಶೈಲಿ ಇವರ ಬರಹದಲ್ಲೂ ವಿಫುಲವಾಗಿ ಕಾಣುತ್ತದೆ. ರೋಚಕ ಸಂಗತಿಗಳನ್ನು ನಾವಿನ್ಯಪೂರ್ಣವಾಗಿ ತೆರೆದಿಡುವ ಮೂಲಕ ಓದುಗನೆದೆ ಹೊಕ್ಕುವ ಬರಹ ಈ ಮಾದಕ ದೊರೆಯ ಹೈಲೈಟ್ ಆಗಿದೆ.

ಕೊಲಂಬಿಯಾ ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ತುಂಬಾ ಜರ್ಜರಿತವಾದ ದೇಶವಾಗಿದೆ. ಕೊಲಂಬಿಯಾದ ಬದುಕೆಂದರೆ ಪಡಖಾನೆ, ಕೊಲಂಬಿಯಾ‌ ಎಂದರೆ ತ್ಯಾಜ್ಯ ವಸ್ತುಗಳ ಡಂಪ್ ಯಾರ್ಡ್ ಆಗಿತ್ತು. ಅಲ್ಲಿನ ಬಡತನ ನಿರುದ್ಯೋಗ  ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡು ಜಗತ್ತಿನ ಕಸವನ್ನೆಲ್ಲ ಇಲ್ಲಿ ತಂದು ಸುರಿಯುತ್ತಿದ್ದರು. ಅದಕ್ಕಾಗಿ ಅಲ್ಲೊಂದು ಕಸದ ಮಾಫಿಯಾ ಹೇಗೆ ತಲೆಯೆತ್ತಿತು ಜನರು ತಾವು ನಿಲ್ಲುವ ಜಾಗವನ್ನು ಬಾಡಿಗೆಗೆ ಕೊಟ್ಟು ಬೀದಿಯಲ್ಲಿ ಬಂದು ವಾಸಿಸುವಂತಹ ದಹನೀಯ ಸ್ಥಿತಿ ಉಂಟಾದ ಪರಿ ಹೇಗೆ? ಹೆಂಗಸರು ತಮ್ಮ ದೇಹವನ್ನೇ ಬಂಡವಾಳ ಮಾಡಿಕೊಂಡು ತನ್ನ ಕುಟುಂಬ ಸಾಕಬೇಕಾದಂತಹ ಅಸಹನೀಯ ಪರಿಸ್ಥಿತಿ ಹೇಗೆ ತಲೆದೂರಿತು ಇವೆಲ್ಲವನ್ನೂ ಮಾದಕ ದೊರೆ ಕಥನ ರೂಪದಲ್ಲಿ ಕಟ್ಟಿಕೊಟ್ಟಿದೆ. ಕೊಲಂಬಿಯಾ ಎನ್ನುತ್ತಿದ್ದಾಗ ಅಲ್ಲಿ ಸ್ವೇಚ್ಛಾಚಾರದ ಲೈಂಗಿಕ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತವೆ. ಬಹುತೇಕ ಜನರ ಜೀವನೋಪಾಯದ ಮಾರ್ಗವಾಗಿ ಹೇಗೆಲ್ಲಾ ಆ ಜಗತ್ತು ಇತ್ತು ಎಂಬುದರ ಒಂದು ವಿಚಾರಗಳನ್ನು ಅಮಾನವಿಯ ಕೃತ್ಯಗಳನ್ನು ಎಳೆಎಳೆಯಾಗಿ ಮಾದಕ ದೊರೆ ಕಾದಂಬರಿ ಬಿಡಿಸಿಡುತ್ತದೆ . ಇಲ್ಲಿ ಕಾಮದ ವಿಚಾರಗಳನ್ನು ಚರ್ಚಿಸುವಾಗ ಕೆಲವೊಮ್ಮೆ ಅತಿರೇಖದ ಮಿತಿಮೀರಿದ ವರ್ಣನೆ ಎನಿಸಿದರೂ ಇವರು ಅದಾವುದಕ್ಕೂ ಮುಜುಗರ  ಮಾಡಿಕೊಳ್ಳದೆ ತಾನು ಬರೆದಿರುವುದರಲ್ಲಿ ಯಾವುದು ಉತ್ಪ್ರೆಕ್ಷೆಯಿಲ್ಲ. ಎಲ್ಲವೂ ಸಾದಾ ಸಾಚಾ ವಿಷಯ ಎನ್ನುವ ಇವರು ಬರವಣಿಗೆ ಎಂದು ಬಂದಾಗ ಲಜ್ಜೆ ತೋರದೆ ನಿರಾತಂಕವಾಗಿ ತನ್ನ ಮನೋಗತವನ್ನು ಅಭಿವ್ಯಕ್ತಪಡಿಸುತ್ತಾರೆ. ಇದು ಓದುಗರಲ್ಲಿ ಮುಜುಗರ  ಉಂಟುಮಾಡುತ್ತದೆ ಎನ್ನುವುದಕ್ಕಿಂತ ಇದು ಜೀವನದ ಸಹಜ ವಿಷಯ ಎಂಬ ಖಡಕ್ ಮನೋಭಾವದಲ್ಲಿ ಬರಹ ಮೂಡಿಬಂದಿದೆ.

ದಿ ಕಿಂಗ್ ಆಫ್ ಕೊಕೆನ್, ದಿ ಕ್ರಾಕ್, ದಿ ಫಸ್ಟ್ ಬ್ಯಾರೆನ್, ಕಿಂಗ್ ಆಫ್ ವರ್ಲ್ಡ್ ಡ್ರಗ್ಸ್  ಮಾಫಿಯಾ ಎಂಬೆಲ್ಲಾ ಹೆಸರುಗಳಲ್ಲಿ ಜಗತ್ತಿನ ಡ್ರಗ್ಸ್ ಮಾಫಿಯಾ ಲೋಕದಲ್ಲಿ ಗುರುತಿಸಿಕೊಂಡ ಪ್ರಾಬ್ಲೋ ಎಸ್ಕೋಬಾರ್ ಗಾವೇರಿಯಾ ಎಂಬ ಖಳನಾಯಕನ ವಿರಾಟ ದರ್ಶನ ಮಾಡಿಸುವ ಕಾದಂಬರಿಯೇ ಈ ಮಾದಕ ದೊರೆ‌. 1949 ಡಿಸೆಂಬರ್ 1 ರಂದು ಜನಿಸಿದ ಇವನು ಎಷ್ಟು ಪಾತಕಿಯಾಗಿದ್ದ ಎಂಬುದಕ್ಕೆ ಮೆಹಂದಳಿಯವರ ಕೆಲವು ಸಾಲುಗಳನ್ನು ಉದಾಹರಣೆಸುವುದಾದರೆ

 “ಅಪ್ಪ ರೈತನಾದರೆ ಮಗ ದೈತ್ಯನಾಗಿದ್ದ,ಅಮ್ಮ ಟೀಚರಾಗಿದ್ದರೆ ಮಗ ವ್ಯಸನಿಗಳಿಗೆ ಗುರುವಾಗಿದ್ದ,ಅಪ್ಪ ಅಸಹಾಯಕ ಸಾಮಾನ್ಯ ಪ್ರಜೆಯಾದರೆ ಮಗ ರಾಜ್ಯವನ್ನೇ ಆಳಿದ ಪ್ರಜೆಗಳದ್ದೇ ಗೋಡೆ ಕಟ್ಟಿಕೊಂಡಿದ್ದ,ಅಪ್ಪ ಉಳುಮೆ ಮಾಡುತ್ತಿದ್ದರೆ ಮಗ  ನೆಲವನ್ನೇ ಕೊಂಡುಕೊಂಡಿದ್ದ, ಅಮ್ಮ ಅಕ್ಷರ ಕಲಿಸುತ್ತಿದ್ದರೆ ಮಗ ಲೆಚ್ಚರ್ಗಳನ್ನೇ ಕೊಂಡುಕೊಂಡ”

 ಈ ಸಾಲುಗಳಲ್ಲಿ ನಾವು ಡಾನ್ ನ ಪರಿಚಯದ ಜೊತೆಗೆ ಮೆಹಂದಳೆಯವರ ಅದ್ಬುತ ಬರಹದ ಪ್ರಾಬಲ್ಯವನ್ನು ಗುರುತಿಸಬಹುದು. ಇಲ್ಲಿ ಇಡಿಯಲ್ಲಿ ಸಮಷ್ಠಿಯನ್ನು ತುಂಬುವ, ಸಮಷ್ಠಿಯನ್ನು ಇಡಿಯಾಗಿಸುವ ಎರಡು ಚಾಣಾಕ್ಷತೆ ಇವರಿಗೆ ಕರಗತವಾಗಿದೆ.

ಸಾಮಾನ್ಯ ರೈತ ಕುಟುಂಬ ಒಂದರಲ್ಲಿ ಜನಿಸಿದ ಪ್ರಾಬ್ಲೋ ಮಾದಕ ಜಗತ್ತಿನಲ್ಲಿ ಬೃಹದಾಕಾರವಾಗಿ ಬೆಳೆದು ಜಗತ್ತಿನ ತುಂಬಾ ತನ್ನ ಜಾಲವನ್ನು ಬೀಸಿ ಸ್ವತಃ ಕೊಲಂಬಿಯಾ ಸರ್ಕಾರವೇ ಅವನ ಮುಂದೆ ಮಂಡಿಯೂರಿ ಶರಣಾಗತಿಯಾಗಲು ಕೋರಿದೆ ಎಂದರೆ ಅವನು ಅದೆಂತಹ ಅದ್ಭುತ ಸುರಕ್ಷಾ ಕೋಟೆಯನ್ನು ತನ್ನ ಸುತ್ತಾ ಕಟ್ಟಿಕೊಂಡಿದ್ದ ಎಂಬುದನ್ನು ಒಮ್ಮೆ ಎಲ್ಲರೂ ಓದಲೆಬೇಕು.

 ಇವರ ಕಾದಂಬರಿಯಲ್ಲಿ ಹೆಣ್ಣನ್ನು ಕೇವಲ ಲೈಂಗಿಕವಾಗಿ ಮಾತ್ರ ಬಳಸಿಕೊಳ್ಳದೆ ಅವಳ ಅವಯವಗಳಿಗೆ ಬೇರೆ ರೀತಿಯ ಕೋಟಿಗಟ್ಟಲೆ ಹಣ ಸಂಪಾದನೆ ಮಾಡುವ ಸಾಮರ್ಥ್ಯವಿದೆ ಎಂಬ ಮಾಹಿತಿ ಹೊತ್ತು ತಂದಿರುವುದು ಆತಂಕಕಾರಿಯಾಗಿದೆ. ಹೆಣ್ಣಿನ ಖಾಸಗಿ ಅಂಗಗಳಲ್ಲಿ ಡ್ರಗ್ಸ್ ಇಟ್ಟು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲೀಲಾಜಾಲವಾಗಿ ವ್ಯವಹಾರ ಮಾಡಿ ಕೋಟಿಗಟ್ಟಲೆ ಹಣ ಸಂಗ್ರಹಿಸುತ್ತಾ ಸರ್ಕಾರಕ್ಕೆ ಸೆಡ್ಡು ಹೊಡೆದು ಮಾದಕ ದ್ರವ್ಯವನ್ನು ಜಗತ್ತಿಗೆ ಹಂಚುತ್ತಿದ್ದ ಮಾದಕ ಲೋಕದ ಅನಾವರಣ ಓದತೊಡಗಿದರೆ , ಅತಿ ನಿಗೂಢ ಜಗತ್ತಿನ ಕರ್ಮಕಾಂಡಗಳು ನಮ್ಮೆದುರು ಬಂದು ನಿಲ್ಲುತ್ತವೆ. ಅರೆಬರೆ ಕಾಲೇಜು ಓದಿದ ಫ್ಯಾಷನಬಲ್ ಹುಡುಗಿಯರನ್ನು ಈ ದಂಧೆಯೊಳಗೆ ಸಿಲುಕಿಸಿಕೊಂಡು, ದೇಹದ ಅಳತೆಗಳಿಗೆ ಅನುಗುಣವಾಗಿ ಬಟ್ಟೆ ಸಜ್ಜು ಮಾಡಿ, ಅದರೊಳಗೆ ಪದರುಗಳನ್ನು ನಿರ್ಮಿಸಿ ಘನೀಕೃತ ಕೊಕೆನ್ ಪುಡಿಯ ಮಿಶ್ರಣವನ್ನು ಅಮೆರಿಕ ಮಾರುಕಟ್ಟೆಯಲ್ಲಿ ಮಾರುತಿದ್ದಂತಹ ವಿಚಾರಗಳ ಇಂಚಿಂಚು ಮಾಹಿತಿಯನ್ನು ಇಲ್ಲಿ ನಾವು ನೋಡಬಹುದು.ಇದು ಪೋಷಕರಿಗೆ ತಮ್ಮ ಮಕ್ಕಳು ಈ ದಂಧೆಯಲ್ಲಿ ಸಿಲುಕದಂತೆ ಜಾಗ್ರತೆ ವಹಿಸಲು ಎಚ್ಚರಿಕೆಯಾಗಿದೆ.

ರಾಷ್ಟ್ರ ರಾಷ್ಟ್ರಗಳ ನಡುವೆ ಪರಮಾಧಿಕಾರಕ್ಕಾಗಿ, ಭೂ ಪ್ರದೇಶಕ್ಕಾಗಿ ಅಥವಾ ಇತರ ಕಾರಣಗಳಿಗಾಗಿ ಹೋರಾಟ ನಡೆದು ಯುದ್ಧಗಳು ಸಂಭವಿಸುವುದನ್ನು ನೋಡಿದ್ದೇವೆ. ಆದರೆ ಡ್ರಗ್ಸ್ ವ್ಯವಹಾರಕ್ಕಾಗಿ ಹಿಡಿತ ಸಾಧಿಸಲು ನಡೆದಂತಹ ಮಿಯಾಮಿ ಡ್ರಗ್ ವಾರ್ ಅಂತರಾಷ್ಟ್ರೀಯ ಮಟ್ಟದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಯುದ್ದ. ಇದು ನಡೆಯಲು ಕಾರಣವೇನು? ಇದರ ಹಿಂದೆ ಇದ್ದ ನಾಯಕ ಯಾರು? ಇಂತಹ ಘಟನೆಗಳಿಗೆ ಹೊಣೆ ಯಾರು? ಅಂತರಾಷ್ಟ್ರೀಯ ಡ್ರಗ್ ವಾರ್ ನಡೆಯುತ್ತಿದ್ದರೂ ಅಮೆರಿಕ ಮತ್ತು ಕೊಲಂಬಿಯಾ ಸರ್ಕಾರಗಳು ತಾವು ಮಟ್ಟ ಹಾಕಲು ಹೆಣಕಾಡುತ್ತಿರುವಾಗ ಅವರೆ ಒಡೆದಾಡಿ ಸಾಯಲಿ ಎಂದು ಹೇಗೆಲ್ಲಾ  ತಂತ್ರ ರೂಪಿಸಿದ್ದು ಈ ಡ್ರಗ್ ವಾರ್ ತೀವ್ರ ಸ್ವರೂಪ ಪಡೆಯಲು ನಾಂದಿಯಾಯಿತು ಎಂಬುದರ ಜೊತೆಗೆ ಈ ವಾರ್ ನ ತೆರೆ ಹಿಂದೆ ನಿಂತು ಆಟವಾಡುವ ಮೂಲಕ ಭೂಗತ ಜಗತ್ತಿನಲ್ಲಿ ತನ್ನ ಅಸ್ತಿತ್ವ ಸ್ಥಾಪಿಸಿಕೊಳ್ಳಲು ಬೇಕಾದ ಅಡಿಪಾಯ ಹಾಕಿಕೊಂಡ ಪಾಬ್ಲೋ ಘಟನೆ ಮೈ ನವಿರೆಳಿಸುವಂಥದ್ದು‌.

ಇದನ್ನೆಲ್ಲ ಬಿಚ್ಚಿಡುವ ಮೂಲಕ ಸಮಾಜವಾಗಲಿ ವ್ಯವಸ್ಥೆಯಾಗಲಿ ದುಷ್ಕೃತ್ಯಗಳಿಗೆ ಬೆಂಬಲ ನೀಡುವುದಿಲ್ಲ ಎನ್ನುವ ಸಂದೇಶ ದೊಂದಿಗೆ ಅದರ ಸುಳಿಯೊಳಗೆ ಸಿಲುಕಿದರೆ ಅನುಭವಿಸಬೇಕಾದ  ಸವಾಲುಗಳನ್ನು ವ್ಯಸನಿಗಳ ಮುಂದಿಡುತ್ತದೆ.

ಈ ಡ್ರಗ್ ಮಾಫಿಯಾದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಪಾತ್ರಧಾರಿಗಳಾದಂತವರು ಜಾನ್ ಕ್ಯಾಪ್ರಿಯೋ, ವಾಲ್ಟೇರ್ ಡಿ ಕ್ರೂಸ್, (ಡೀ) ಫ್ಯಾಬೀಯಾನ, ಸೆರ್ಗೋ, ಮಾರಿಯ ವಿಕ್ಟೋರಿಯಾ ಹನಾವೋ,  ವರ್ಜಿನಿಯಾ ವ್ಯಾಲೇಜೋ,ಗ್ರೆಗೋರಿಯೋ,

ಗ್ರಿಸಿಲ್ಡಾ ಬ್ಲಾಂಕೊ, ಆಲ್ಬರ್ಟ್ ಬ್ರಾವೋ,ಮೈಕೆಲ್‌ ಮರೇಝು,ಡಿಯಾಗೋ ಎಚ್ಕೇರ್, ರಾಬರ್ಟ್ ರೋಡಿಗ್ರಸ್,ರಿವಿ ಆಯ್ಲಾ,  ಪೆನ್ಯಾ,ರೋಡ್ರಿಗೋ, ಲೂಯಿಸ್ ಮೊರನೋ, ಹಸಿಂಡಾ ನಪಲ್ಸ್, ಎಂ.ನೈಂಟೀನ್ ಸೇರಿದಂತೆ ಬಹಳಷ್ಟು ವ್ಯಕ್ತಿಗಳು ಕಾದಂಬರಿಯಲ್ಲಿ ಸ್ಥಾನ ಪಡೆದ ಇವರೆಲ್ಲರ ಸುತ್ತ ಹೆಣೆದುಕೊಂಡಂತಹ ಕಥೆಯನ್ನು ಸಿಬಿರು ಸಿಬಿರಾಗಿ ಬಿಡಿಸಿರುವ ಪರಿ ಓದಿದಾಗ ನಿಜಕ್ಕೂ ತೆರೆಮರೆಯಲ್ಲಿ ಕಾನೂನು ವ್ಯವಸ್ಥೆ ಎಲ್ಲವನ್ನು ಬದಿಗಿರಿಸಿ ಇಷ್ಟೆಲ್ಲ ಚಟುವಟಿಕೆಗಳು ನಡೆಯುತ್ತವೆಯೆ ಎಂಬ ಪ್ರಶ್ನೆ ಮನದಲೊಮ್ಮೆ ಮೂಡುತ್ತದೆ.

ನಮ್ಮ ನಡುವೆಯು ಇಂತಹ ದುಷ್ಟ ಶಕ್ತಿಗಳ ಪ್ರಭಾವಳಿ ಇರಬಹುದೆಂಬ

ಕಹಿ ಸತ್ಯವನ್ನು ತೋರಿಸುತ್ತದೆ.

ಡ್ರಗ್ಸ್ ಮಾಫಿಯಾದ ಸಿಂಡಿಕೇಟ್ ಗಳು ಹೇಗೆಲ್ಲ ವ್ಯವಹಾರ ಮಾಡುತ್ತವೆ ? ಡ್ರಗ್ಸ್ ಉತ್ಪಾದನೆ ಮತ್ತು ಮಾರಾಟ ಜಾಲವನ್ನು ವಿಸ್ತರಿಸುವ ಕುರಿತು ಸಮಗ್ರ ಚಿತ್ರಣವನ್ನು ಬಗೆದಿಡುವ ಮೂಲಕ ಜನತೆಗೆ ಎಚ್ಚರಿಕೆ ರವಾನಿಸುತ್ತಾರೆ.

ಅರಿಯದ ವಯಸ್ಸಿನಲ್ಲಿ ಈ ಚಟಕ್ಕೆ ಸಿಲುಕಿ ನರಳದಂತೆ ಯುವ ಜನಾಂಗವನ್ನು ರಕ್ಷಿಸಬೇಕಾದ ಅನಿವಾರ್ಯತೆಯನ್ನು ಇದು ಬಿಂಬಿಸುತ್ತದೆ.

ಈ ಡ್ರಗ್ಸ್ ಮಾಫಿಯಾವನ್ನು ನಡೆಸಲು ಪಾಬ್ಲೋ ಮೊದಲಿದ್ದ ಎಲ್ಲ ಸಿಂಡಿಕೇಟ್ಗಳನ್ನು ರದ್ದುಪಡಿಸಿ ಮೆಡಲಿನ್ ಕಾರ್ಟೆಲ್ ರಚಿಸಿ ಆ ಮೂಲಕ ತನ್ನ ಚಕ್ರಾಧಿಪತ್ಯ ಸ್ಥಾಪಿಸಿಕೊಂಡು ಅದರಲ್ಲಿ ಬಂದ ಹಣದಲ್ಲಿ ಸರ್ಕಾರಕ್ಕೆ, ಸಾಮಾನ್ಯ ಜನಕ್ಕೂ ಪಾಲು ನೀಡುತ್ತಿದ್ದ ರೋಚಕ ವಿಚಾರಗಳು ಬೆರಗು ಮೂಡಿಸುತ್ತವೆ.

ಈ ಮಾದಕ ಜಗತ್ತಿನಲ್ಲಿ ಯಾವೆಲ್ಲ ದೇಶಗಳು ರಾಜ್ಯಗಳು ಹೇಗೆಲ್ಲಾ ಪಾಲು ಪಡೆದಿದ್ದವು ಎನ್ನುವುದರ ಜೊತೆಗೆ ಅದನ್ನ ಮಟ್ಟ ಹಾಕುವಲ್ಲಿ ವ್ಯವಸ್ಥೆ ಎಸ್ಟರ ಮಟ್ಟಿಗೆ ತಿಣುಕಾಡಿದವು ಎಂಬ ವಿಚಾರಗಳು ನಿಜಕ್ಕೂ ಅವಮಾನಕಾರಿಯಾಗಿವೆ.

ಕೊಲಂಬಿಯಾದ ಕಸದ ಮಾಫಿಯಾದಲ್ಲಿ ಡ್ರಗ್ಸ್ ಸಿಂಡಿಕೇಟ್ ಗಳ ಅನಭಿಶಕ್ತ ದೊರೆಯನ್ನು, ಡ್ರಗ್ಸ್ ಮಾಫಿಯಾದ ಸೂತ್ರದಾರನನ್ನು ಮಟ್ಟ ಹಾಕುವಲ್ಲಿ ವಾಲ್ಟೇರ್ ಡೀ ಕ್ರೂಸ್ ನ ಚಾಣಾಕ್ಷತನವನ್ನು ನಾವು ಪುಸ್ತಕ ಓದದೆ ಊಹಿಸಲು ಕಷ್ಟ ಅಂತ ರೋಚಕ ತಂತ್ರಗಳನ್ನು ಡೀ ಎಣೆಯುತ್ತಾ ಸಾಗಿದ್ದಾನೆ.

ದಿ ಬ್ಲಾಕ್ ವಿಡೋ, ಮದರ್ ಆಫ್ ಮರಿಜುವನ, ಲೇಡಿ ಆಫ್ ಸ್ಮೋಕ್, ಲೇಡಿ ಡ್ರಗ್ ಲಾರ್ಡ್, ಕ್ವೀನ್ ಆಫ್ ಕಾರ್ಟೆಲ್ಸ್, ದಿ ಬೆಡ್  ಟೈಗ್ರೀಸ್ ಇಂತಹ ಅಭಿಧಾನಗಳಿಗೆ ಹೆಣ್ಣೊಬ್ಬಳು ಬಾಜಿತಳಾಗಿದ್ದಾಳೆಂದರೆ ಅವಳ ಭೂಗತ ಲೋಕದ ಚಟುವಟಿಕೆಗಳು ಇನ್ನೆಷ್ಟು ಭಯಾನಕವಾಗಿರಬಹುದು ಊಹಿಸಲು ಕಷ್ಟ. ಅವಳೇ ಮಾದಕ ದೊರೆಯ ಡ್ರಗ್ಸ್ ಮಾಫಿಯಾದ ಲೇಡಿ ಡಾನ್ ಗ್ರಿಸಿಲ್ದಾ ಬ್ಲಾಂಕೊ. ಇವಳ ಇತಿಹಾಸವನ್ನೆಲ್ಲ ಎಳೆ ಎಳೆಯಾಗಿ ಬಿಡಿಸಿರುವ ಕುತೂಹಲಕಾರಿಯಾದ, ಭಯಾನಕವಾದ ವಿದ್ವಂಸಕ ಕೃತ್ಯಗಳು ಓದುಗರ ಹುಬ್ಬೇರಿಸುತ್ತವೆ‌. ಪ್ರೀತಿ ವಾತ್ಸಲ್ಯ ಮಮತೆಗಳ ಆಗರವಾಗಿರುವ ಸ್ತ್ರೀಯ ನಿರ್ಧಾಕ್ಷಿಣ್ಯ ನಡವಳಿಕೆ ಖೇದವೆನಿಸುತ್ತದೆ. ನೂರಾರು ಪುರುಷರನ್ನು ಅಮಾನವೀಯವಾಗಿ, ಕ್ರೂರವಾಗಿ ಅವರ ಪುರುಷತ್ವ ನಾಶ ಮಾಡಿ ಕೊಂದ ಘಟನೆಗಳು ನಿಜಕ್ಕೂ ನಂಬಲು ಕಷ್ಟವೆನಿಸುತ್ತವೆ. ತನ್ನ ದಾರಿಗೆ ಅಡ್ಡ ಬಂದ ಗಂಡಸರನ್ನು ಎಡೆಮುರಿ ಕಟ್ಟುತ್ತಿದ್ದ ಅವಳ ಬಂಡತನಕ್ಕೆ  ಇಡಿ ಮಾಫಿಯಾ ಜಗತ್ತು ತಲ್ಲಣಗೊಂಡಿತು ಎಂದರೆ ಅವಳು ಹೇಳಿದ್ದಕ್ಕೆಲ್ಲ ಮರು ಮಾತಾಡದೆ ಒಪ್ಪುತ್ತಿದ್ದರು ಎಂಬುದನ್ನು ಓದಿದಾಗ ಮಹಿಳೆ ಒಂದು ಸಮಾಜದ ಕಣ್ಣು ಆಗಬಲ್ಲಳು ಹುಣ್ಣು ಆಗಬಲ್ಲಳು ಎಂಬುದನ್ನು

ನಾವು ನಂಬಲೆಬೇಕಾಗುತ್ತದೆ.

ಮಾದಕ ದೊರೆ ಪಾಬ್ಲೋ ಜನರ ದೃಷ್ಟಿಯಲ್ಲಿ ಲಿವಿಂಗ್ ಪಾಬ್ಲೋ ಆದ ಪರಿಯನ್ನು, ಸರ್ಕಾರಗಳೇ ಜನರಿಗೆ ಮೂಲಭೂತ ಅಗತ್ಯಗಳನ್ನು ಒದಗಿಸುವಲ್ಲಿ ಅಸಹಾಯಕರಾದಾಗ ಹಣವನ್ನು ತರಗೆಲೆಗಳಂತೆ ಹಂಚಿ, ಕೆಲಸವಿಲ್ಲದವರಿಗೆ ನ್ಯಾಯಯುತವಲ್ಲದಿದ್ದರೂ, ಬದುಕು ಕಟ್ಟಿಕೊಳ್ಳಲು ಕೆಲಸವನ್ನು ನೀಡಿ ತನ್ನ ಸುತ್ತಲೂ ಒಂದು ಸುರಕ್ಷಾ ಕೋಟೆಯನ್ನು ಕಟ್ಟಿಕೊಂಡಂತಹ ಚಾಣಾಕ್ಷ ಪತಾಕಿ ಪಾಬ್ಲೋ. ಇವನು ಸಾಮಾನ್ಯ ಜನರನ್ನು ಹೇಗೆ ತನ್ನ ಒಂದು ಪ್ರೀತಿಯ ಬಂಧನದಲ್ಲಿ ಸಿಲುಕಿಸಿಕೊಂಡು ಅವರಿಂದಲೇ ತಾನು ರಕ್ಷಣೆಯನ್ನು ಪಡೆಯುತ್ತಾ ಹೋದನೆಂಬ ವಿಚಾರಗಳನ್ನು ನೋಡಿದಾಗ ವ್ಯವಸ್ಥೆ ಈ ಮೂಲಭೂತ ಅಗತ್ಯಗಳನ್ನು ಸರಿಯಾಗಿ ಒದಗಿಸಿದರೆ ಕೆಲವೊಂದು ಅಪರಾಧಗಳನ್ನು ತಡೆಯಬಹುದೇನೊ ಎಂಬ ಭಾವ ಕಾಡುತ್ತದೆ.

ಕ್ರಿಮಿನಲ್ ಗಳನ್ನು ಜೈಲಿನಲ್ಲಿಟ್ಟ ಸರ್ಕಾರಗಳನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಪಾಬ್ಲೋ ತನ್ನದೇ ಜಾಗದಲ್ಲಿ ತಾನೇ ಸ್ವಂತಕ್ಕೊಂದು ಜೈಲು ನಿರ್ಮಿಸಿಕೊಂಡು ನೈಟ್ ಕ್ಲಬ್, ಜಲಪಾತ, ಆಟದ ಫೀಲ್ಡ್, ಸ್ವಿಮ್ಮಿಂಗ್ ಪೂಲ್, ರನ್ನಿಂಗ್ ಟ್ರ್ಯಾಕ್, ಆಫೀಸ್

ನಿರ್ಮಿಸಿಕೊಂಡು ಕೊಲಂಬಿಯಾ

ಎಂದರೆ ಕಲ್ಪನೆಗೂ ನಿಲುಕದ ಘಟನೆ ಎಲ್ಲ ಜನ ಇಂಥ ಒಂದು ವಿಚಾರವನ್ನು ಹಿಕ್ಕಿ ತೆಗೆದ ಮೆಹಂದಳಯವರ ಒಂದು ಕಾರ್ಯ ಶ್ಲಾಘನೀಯ.

ಈ ಮಾದಕ ದೊರೆ ಕಾದಂಬರಿಯಲ್ಲಿ ಬಂದ ಅನೇಕ ಪಾತ್ರಗಳು ಪಾಬ್ಲೋ ಹೆಂಡತಿ, ಮಕ್ಕಳು, ಗೆಳತಿಯರು, ಅವನಿಗೆ ಮೋಸ ಮಾಡಿ  ಅವನನ್ನು ಸಿಕ್ಕಿಸಿದವಳು ಇಂದಿಗೂ ಜೀವಂತ ಸಾಕ್ಷಿಗಳಾಗಿ ಉಳಿದಿದ್ದಾರೆ. ಅವರೆಲ್ಲರ ಮಾಹಿತಿಯನ್ನು ಕಲೆ ಹಾಕಿ ಬರೆದ ಸಂಶೋಧನಾತ್ಮಕ ಹೊತ್ತಿಗೆ ಇದು ಎನ್ನಬಹುದು. ಅವರೆಲ್ಲರ ವಿಚಾರ ತಿಳಿಯಲು ನೀವೆಲ್ಲ ಒಮ್ಮೆ ಕಾದಂಬರಿಯನ್ನು ಓದಲೇಬೇಕು.

ಡಾನ್ ಒಬ್ಬಾತ, ಭೂಗತ ಪಾತಕಿಯೊಬ್ಬ ಅನುಭವಿಸಬಹುದಾದ ಕೊನೆಯನ್ನು ಪಾಬ್ಲೋ ಎಸ್ಕೋಬಾರ್ ಕೂಡ ಅನುಭವಿಸಿದ. ಪೊಲೀಸ್ ಏಟಿಗೆ ಸಿಕ್ಕು ಕೊನೆಯಾಗುವ ಗ್ಯಾಂಗ್ ಸ್ಟಾರ್ ಗಳು ಬಡಿದಾಟದಲ್ಲಿ ಸತ್ತು ಹೋಗುವಂತೆ ಕೊಲಂಬಿಯಾ ಪೊಲೀಸ್ ಮತ್ತು ಅಮೆರಿಕ ಸೈನ್ಯದ ಜಂಟಿ ಕಾರ್ಯತಚರಣೆಗೆ ಸಿಕ್ಕಿ ಪಾಬ್ಲೋ ಸತ್ತ. ಎಂಬ ಕ್ಲೈಮ್ಯಾಕ್ಸ್ ಕ್ರೈಂ ಸ್ಟೋರಿಗೆ ಎಂದು ಜಗತ್ತಿನಲ್ಲಿ ನೆಲೆ ಇಲ್ಲ ಎಂಬುದನ್ನು ಲೇಖಕರಿಲ್ಲಿ‌ ನಿರೂಪಿಸುತ್ತಾರೆ. ಅಪರಾಧಕ್ಕೆ ಅಪರಾಧಿಗೆ ಎಂದು ದೀರ್ಘಕಾಲ ಬಾಳಲು ಅವಕಾಶವಿಲ್ಲ, ಇರುವಷ್ಟು ದಿನ ಸಮಾಜಕ್ಕೆ ಉಪಯುಕ್ತವಾಗಿ ಬದುಕಬೇಕು ಎಂಬ ನಿದರ್ಶನವಾಗಿ

ಪಾಬ್ಲೋ ಎಲ್ಲರ ಮುಂದೆ ನಿಲ್ಲುತ್ತಾನೆ.

ಒಟ್ಟಾರೆ “ಮಾದಕ ದೊರೆ” ಯನ್ನು ಓದಿದ ಪ್ರತಿಯೊಬ್ಬರಿಗೂ ಓದಿನ ನಶೆ

ಏರುವುದಂತೂ ಸತ್ಯ. ಇಂತಹ ಹೊಸ ಜಗತ್ತಿನ ಭಯಂಕರ ಕ್ರೌರ್ಯಗಳ ಅನಾವರಣ ಮಾಡಿದ ಶ್ರೀ. ಸಂತೋಷ್ ಕುಮಾರ್ ಮೆಹಂದಳೆಯವರಿಗೆ ಅಭಿನಂದನೆಗಳು.


ಅನುಸೂಯ ಯತೀಶ್

Leave a Reply

Back To Top