ಉಸಿರು ಗಂಧವ ತಾಕಿ-

ಪುಸ್ತಕ ಪರಿಚಯ

ನೊಂದವರ ಪರ‌ನಿಲ್ಲುವ ಹೈಕು ಕಾವ್ಯ

ಮಕಾನದಾರರ “ಉಸಿರು ಗಂಧವ ತಾಕಿ

ಹೈಕು ಕನ್ನಡ ಕಾವ್ಯ ನಂದನದಲ್ಲಿ ಉಸಿರು ಗಂಧವ ತಾಕಿಸುತ್ತಿರುವ ಕಾವ್ಯ ಬಂಧ .ಕನಿಷ್ಟ ಪಕ್ಷ ನೂರಾರು ಜನ ಕವಿಗಳು ನಿತ್ಯವೂ ಹೈಕು ಹೊಸೆಯುತ್ತಿದ್ಸಾರೆ ‌.ಕಾವ್ಯ  ಕಟ್ಟುತ್ತಿದ್ದಾರೆ.ಮೂರೇ ಮೂರೇ ಸಾಲಿನ ಈ ಚಿಕ್ಕ ರಾಣಿ ಬಹಳ ಜನ ಕವಿಗಳ ಮನಸಲ್ಲಿ  ಬಿತ್ತುತಿರುವ ಮೋಹ ಕನ್ನಡಕ್ಕಂತೂ ಸಂಭ್ರಮ ತಂದ ಸಂಗತಿಯೇ ಸರಿ.ಜಪಾನಿ ಮೂಲದ ಟಂಕಾದ ಚಿಕ್ಕತಂಗಿಯಾದ ಈ ಕಾವ್ಯಕನ್ನಿಕೆ  ಬೇಲೂರಿನ ಶಿಲಾಬಾಲಿಕೆಯಂತೆ ಮೈತುಂಬ ಕುಸುರಿ ಮತ್ತು ಮಾಧುರ್ಯ ತುಂಬಿಕೊಂಡಾಕೆ .ಒಮ್ಮೆ ಈ ಕಾವ್ಯದ ಗುಂಗು ಹಿಡಿಸಿಕೊಂಡಿರೋ ಕಂಡಲ್ಲೆಲ್ಲ ನೀವು ಆಕೆಯ ಕಿರು ಬೆರಳು ಹಿಡಿದೇ ನಡೆಯುತ್ತಿರಿ‌. ಅಂತಹ ಬಿಟ್ಟೆನೆಂದರೂ ಬಿಡದ ಮಾಯೆ ಈ ಕಾವ್ಯ ಕನ್ನಿಕೆಯದು.ದಿನವೂ ಒಂದೆರಡಾದರೂ ಮಲ್ಲಿಗೆಯ ಎಸಳಿನಂತಹ ಪಕಳೆ ಕಟ್ಟದೆ ಮನಸು ಸಮಾಧಾನ ತಾಳದು.ಈಗಾಗಲೇ ಚಂದ್ರಕಾಂತ ಕುಸನೂರ, ಡಾ.ಕೆ.ಬಿ.ಬ್ಯಾಳಿ,ಜಂಬಣ್ಣ  ಅಮರಚಿಂತ ,ಎಚ್ ಎಸ್ ಶಿವಪ್ರಕಾಶ, ಅಂಕುರ್ ಬೆಟಗೇರಿ,ರವೀಂದ್ರನಾಥ  ಡಾ.ಸರಜೂ‌ಕಾಟ್ಕರ್ ,ಡಾ ಶಾರದಾ ಮುಳ್ಳೂರ್ ,ನೀ.ಶ್ರೀಶೈಲ,   ಸಿದ್ದರಾಮ ಹೊನಕಲ್ ,ಸಿದ್ದರಾಮ ಕೂಡ್ಲಿಗಿ,ಪ್ರೇಮಾ ಹೂಗಾರ, ಅರುಣಾ ನರೇಂದ್ರ , ಸಿ .ರವೀಂದ್ರನಾಥ  , ಸಿದ್ದಲಿಂಗಪ್ಪ ಬೀಳಗಿ,ಡಾ ಯ.ಮಾ.ಯಾಕೊಳ್ಳಿ ಡಾ.ಪ್ರಕಾಶ ಖಾಡೆ, ಇಂತಹ ಹಿರಿಯರೇ ಅಲ್ಲದೇ ರಮಜಾನ್ ಹೆಬಸೂರ್ , ಭಾರತಿ ರವೀಂದ್ರ ,ಚಕ್ಡಿ, ಮನೋಜ ಮಕರಂದ ಮುಂತಾದ ಯುವಕರ ಪಡೆಯೇ ಈ ಕಾವ್ಯಕೃಷಿಯನ್ನು ಗಂಭೀರವಾಗಿ ತಗೆದುಕೊಂಡಿದೆ.

ಕವಿ ಮಕಾನದಾರ ಅವರು ಇದೀಗ ಈ ಸಾಲಿಗೆ ಈ ಸೇರಿದ್ದಾರೆ. ಕಾವ್ಯ ಸೃಷ್ಟಿಯನ್ನು ಸದಾ ಗಂಭೀರವಾಗಿ ತೆಗೆದುಕೊಂಡ ಕವಿ ಗದುಗಿನ ಶ್ರೀ ಎ ಎ್ ಮಕಾನದಾರ ಅವರು. ಏನು ಮಾಡಿದರೂ ತುಂಬ ಚಂದದಿಂದ ಅದನ್ನು ಮಾಡಿ ಮುಗಿಸುವದು ಅವರ ವ್ಯಕ್ತಿತ್ವದ ಲಕ್ಷಣ .ಅದಕ್ಕೆ ಸಾಕ್ಷಿ ಈಚೆಗಷ್ಟೇ ಕನ್ನಡದಲ್ಲಿ ಸಂಚಲನ ಮೂಡಿಸಿದ್ದ ಅವರ ಕಿರು ಪದ್ಯಗಳ ಸಂಕಲನ ಪ್ಯಾರಿ ಪದ್ಯಗಳು ಎಂಬ ಕೃತಿ . ಈಗ ಅದಕ್ಕೆ ಹೊಸ ಸೇರ್ಪಡೆ ‘ಉಸಿರ ಗಂಧ ತಾಕಿ” ಎಂಬ ಅವರ ೨೧೬ ಹೈಕುಗಳ  ಸಂಕಲನ.

ನಾನಿಲ್ಲಿ  ಹೈಕು ಎಂಬುದರ ಅರ್ಥ ಸ್ವರೂಪ. ವ್ಯಾಪ್ತಿ ಕುರಿತು ಮಾತನಾಡಲು ಹೋಗಿಲ್ಲ.ಏಕೆಂದರೆ ಕವಿಯೆ ತಮ್ಮ ನುಡಿಯಲ್ಲಿ ಬಹಳ ಚಂದದಿಂದ ಅದನ್ನು ಬಿಡಿಸಿಟ್ಟಿದ್ದಾರೆ..ಅಲ್ಲದೇ ಸಿದ್ದರಾಮ ಹೊನ್ಕಲ್ ರ, ಸಿದ್ದರಾಮ ಕೂಡ್ಲಿಗಿ ಯವರ ಮತ್ತು ಡಾ.ವೈ .ಎಂ.ಯಾಕೊಳ್ಳಿ ((ನನ್ನ )ಲೇಖನಗಳೇ ಅಲ್ಲದೇ ಪ್ರತಿಯೊದೂ ಹೈಕು ಸಂಕಲನಕ್ಕು ಸಾಂದರ್ಬಿಕ ವಾಗಿ ಬರೆಯಲ್ಪಟ್ಟ ಅನೇಕರ ಮುನ್ನುಡಿ ,ಲೇಖಕರ ನುಡಿ  ಮಾತುಗಳಲ್ಲಿ ಸಾಕಷ್ಟು ವಿವರಗಳಿವೆ. . ಅಲ್ಲೆ ಸಿದ್ದಲಿಂಪ್ಪ ಬೀಳಗಿಯವರ  ‘ಸಾವಿರಾರು ಹಾಡುಗಳು’  ಹೈಕು ಸಂಕಲನಕ್ಕೆ ೫೫ ಜನ ವಿಮರ್ಶಕರು ಬರೆದ   ಲೇಖನಗಳ  ಸಂಕಲನ ‘ಚಿಪ್ಪಿನೊಳಗನ‌ ಮುತ್ತು’ ಎಂಬ ವಿಮರ್ಶಾ ಸಂಕಲನವನ್ನೇ ಹೊರತಂದಿದ್ದು ಅಲ್ಲಿಯೂ ವಿವರಗಳಿವೆ. .ಇರಲಿ ,ಹೈಕು‌ ಮೀಮಾಂಸೆ  ಮತ್ತೆ ಬೇರೆ‌ ಕಡೆ ಮಾತಾಡುವ ಅವಕಾಶವಿದೆ.

ಪ್ರಸ್ತುತ ಶ್ರೀ ಎ.ಎಸ್.ಮಕಾನದಾರ ಅವರ ಹೈಕುಗಳ ಕುರಿತು ಒಂದು ಪರಿಚಯ ನೀಡಬೇಕಾಗಿದೆ.ಇವು ೫/೭/೫ ಅಕ್ಷರಾಂಶಗಳ ನಿಯಮವನ್ನು ಕಡ್ಡಾಯವಾಗಿ ಪಾಲಿಸಿದ ರಚನೆಗಳು .ಯಾವುದೆ ಕವಿಗೂ ಹೀಗೆ ಅಕ್ಷರಗಳನ್ನು ಕತ್ತರಿಸಿಟ್ಟು ಕವಿತೆ ಮಾಡುವಾಗ ೨೦೦ ರಷ್ಟುಗಳು ಹೈಕು ಏಕಪ್ರಕಾರವಾದ ಕಾವ್ಯವಾಗಲು ಅಸಾಧ್ಯವೆನ್ನುವದು ಒಬ್ಬ ಕವಿಯಾಗಿ ನಾನೂ ಎದುರಿಸಿದ ಸಮಸ್ಯೆಯೇ.ಹಾಗಾಗಿ ಇಂತಹ ಹೈಕುಗಳಲ್ಲಿ ಕೆಲವೊಂದಾದರೂ ಕೃತಕವೆನಿಸುತ್ತವೆ ಎಂಬುದನ್ನು  ಗಮನಿಸಲೇ ಬೇಕು.ಆದರೆ ಬಹುತೇಕ ಹೈಕುಗಳಲ್ಲಿ ಕವಿತೆ ಮತ್ತು ೧೭ ಅಕ್ಷಾರಾಂಶಗಳ ನಿಯಮ ಅಚ್ಚುಕಟ್ಟಾಗಿ ಪಾಲನೆಯಾಗಿದೆ.ಹೀಗಾಗಿ ಇಲ್ಲಿನ ಹೈಕುಗಳು ಯಶಸ್ವೀ ರಚನೆಗಳು ಎನ್ನಲು ಯಾವುದೇ ತಕರಾರಿಲ್ಲ.

ಕವಿತಾ ಬರವಣಿಗೆಯನ್ನು  ಜನರ ಮನೋಭಾವ ತಿದ್ದುವ ,ಸಮಾಜದಲ್ಲಿ ಸಮತೆ ತರುವ ಕಾರ್ಯಕ್ಕೆ ಅಸ್ತ್ರ ವಾಗಿ ಬಳಸಿದ ಕವಿ ಮಕಾನದಾರ ಅವರು,  ಕಾವ್ಯದಿಂದ ಒಂದಿಷ್ಟಾದರೂ ಬೆಳಕು ಮೂಡೀತು ಎಂಬುದು ಅವರ ಗಟ್ಟಿ ನಂಬಿಕೆ ಅವರದು. ಕವನ ಇರಲಿ,ಲೇಖನ ಇರಲಿ ಅಥವಾ ಚುಟುಕು ಇರಲಿ ಅವರ ಕಾವ್ಯ ತುಡಿಯುವದು ಸಮಾಜದಲ್ಲಿ ಸಾಮರಸ್ಯ ತುಂಬುವ ಕಾಯಕದತ್ತಲೇ.ಅದು ಈ ಸಂಕಲನದಲ್ಲಿಯೂ ನಿಂತಿಲ್ಲ.

ಇಲ್ಲಿ ಪ್ರದಾನವಾಗಿ ಇರುವದು ಸಾಮಾಜಿಕ ದೃಷ್ಟಿಕೋನವೇ .ನಮ್ಮನಡುವೆ ಮಾಯವಾಗಿರುವ ಪ್ರೀತಿ ಬಾಂಧವ್ಯ ಇವು ಅವರ ಇತರ ಕಾವ್ಯಗಳಲ್ಲಿ ಕವಿಯನ್ನು ಕಾಡಿದಂತೆ ಇಲ್ಲಿಯೂ‌ ಕಾಡಿವೆ. ಬಹಳ ಮುಖ್ಯವಾದ ಮಾತೆಂದರೆ ಹೈಕು ಸಾಮಾನ್ಯವಾಗಿ ನಲ್ಲ ನಲ್ಲೆ ಯರ ಪ್ರೇಮದತ್ತಲೇ ತಿರುಗಿರುವದು ಹೆಚ್ಚು. ಆದರೆ‌ ಮಕಾನನದಾರ ಅವರ ಆ ಮಿತಿಯನ್ನು ಮೀರಿ ಹೈಕು ಕವಿತೆಯನ್ನು  ಸಾಮಾಜಿಕ ದೃಷ್ಟಿಕೋನದತ್ತ ಹೊರಳಿಸಿವೆ.

ಧರ್ಮ ಧರ್ಮಗಳು ತಮ್ಮದೇ ಅಹಮ್ಮಿನಲಿ ಮುಳುಗಿ ಸಾಮಾಜಿಕ ಸಾಮರಸ್ಯವನ್ನು‌ ಕದಡುವ ಕಾರ್ಯ‌ ಮಾಡುತ್ತಿರುವದು ಕವಿಗೆ ವಿಷಾದ, ದುಃಖ ಎಲ್ಲವನ್ನೂ ಮೂಡಿಸಿವೆ.ಇದನ್ನೇ ಕವಿ

ನರಳುತಿವೆ

ಧರ್ಮಗಳು ಹೆಚ್ಚೆಂಬ

 ಅಹಮ್ಮಿನಲಿ

ಇಲ್ಲಿ‌ ಕವಿ ಯಾವುದೇ ಒಂದು  ಧರ್ಮದ ಪರ ವಕೀಲಿ ಮಾಡುತ್ತಿಲ್ಲ.ಎಲ್ಲ ಧರ್ಮಗಳ ಹಣೆಬರಹವೂ ಅದೇ ಆಗಿದೆ. ನಾ ಹೆಚ್ಚು ನೀ ಹೆಚ್ಚು ಎಂಬ ಅಹಮ್ಮು ಧರ್ಮಗಳನ್ಹು ಇಂದು ಸುಡುವ ಕಾಲ ಕೆಳಗಿನ ಬೆಂಕಿಯನ್ನಾಗಿಸಿದೆ.ಜಗತ್ತಿನ ಪ್ರಮುಖ ಚಿಂತಕ ಬರ್ನಾರ್ಡ ಶಾ ಹೇಳಿದ್ದರೆಂದು ಓದಿದ ನೆನಪು.  Every Riligion is good.but those have worst followers .ಎಂತಹ ಅದ್ಭುತ ಮಾತಲ್ಲವೇ ? ಇಂದು ಯಾವ ಧರ್ಮ ಈ ಬಗೆಯ ಅಹಮ್ನಿನಿಂದ ಪಾರಾಗಿದೆ? ಉತ್ತರವೂ ಕಷ್ಟ. ಕೇಳುವದೂ ಕಷ್ಟ. ಇದರೊಂದೊಗೆ ಜಾತಿ ಜಂಜಡವೂ ಸೇರಿದೆ.

ಕುದಿಯುತಿರೆ

ಜಾತಿಯ ದೊಂದಿ ಎಲ್ಲಿ

 ಸದ್ಧರ್ಮ ನೀತಿ

ಧರ್ಮ ಧರ್ಮಗಳು ಮಾತ್ರವಲ್ಲ ಜಾತಿ ಜಾತಿಗಳು ಬೇರೆ ಬೇರೆ‌ಕಾರಣಕ್ಕೆ ಸಹನೆಕಳೆದುಕೊಂಡು ಯುದ್ಧಕ್ಕೆ ನಿಂತರೆ ಸಹನೆ ಶಾಂತಿ ಎಲ್ಲಿಂದ ತರುವುದು!ಅದನ್ನೆ ಕವಿ ಕೇಳುವ ಪ್ರಶ್ನೆ –

ಶತಮಾನದ

ನಂಜು ಯಾವ  ನದೀಲಿ

ತೊಳೆಯಬೇಕು?

ಹೌದು ಇಂದು ಒಂದೇ ದಿನದ ಪ್ರಶ್ನೆ, ಅಲ್ಲ ಶತಮಾನಗ ಳಿಂದ ನಡೆದುಕೊಂಡು ಬಂದ ಹಣೆಬರಹ ವೇ. ಕವಿಯ‌ ಮಾತನ್ನೇ ಉಲ್ಲೇಖಿಸುವ ದಾದರೆ ” ಸಾಮಾಜಿಕ ಸ್ವಾಸ್ಥ್ಯ ಹದಗೆಡುತ್ತಿರುವ  ಪ್ರಸಕ್ತ ಸನ್ನಿವೇಶದಲ್ಲಿ ಉಸಿರ ಗಂಧದ ಜಾಡು ಹಿಡಿದ ದರ್ವೇಶಿಗೆ ದೊರೆತದ್ದೇನೋ? ದಕ್ಕಬೇಕಾದದ್ದು ಇನ್ನೇನೋ ಇದೆ ” ಎನ್ನುವ ಕವಿ ಕಾವ್ಯ ಇಂತಹ ದುರಿತ ಕಾಲದಲ್ಲಿ ಭರವಸೆ ತುಂಬಬಹುದು ಎಂದು ನಂಬಿದವರು. ಅದಕ್ಕೆ ಕಾವ್ಯದ ಮೂಲಕ ಅವರು ಮಾಡುವ ಪ್ರಯತ್ನ ಅದೇ ಆಗಿದೆ.

ಆದರೆ ಇಲ್ಲಿಗೆ  ನಿಂತಿದ್ದರೆ ಕವಿತೆ ಜಗತ್ತಿಗೆ ಬೇಕಾಗಿರ ಲಿಲ್ಲ. ಕವಿ ಜಗತ್ತಿನ ನೋವಿಗೆ ಔಷದಿ ಕಂಡು ಹಿಡಿಯುವ ವೈದ್ಯ .ಇಲ್ಲಿ ಮಕಾನದಾರ ಈ ರೋಗಕ್ಕೆ ಮದ್ದೂ ಹುಡುಕುತ್ತಾರೆ. ಹಾಗಾದರೆ  ಏನು‌ ಮಾಡಬೇಕು? ಇಂತಹ ಅಸಾಮರಸ್ಯದ ಕಾಲದಲ್ಲಿ ಹೊಂದಿಕೊಂಡು ಹೋಗುವದೊಂದೇ ಪರಿಹಾರ ಎನ್ನುತ್ತಾರೆ.ಅಹಮಿಕೆ ಬಿಟ್ಟು ಹೊಂದಿಕೆಯ ಸೂತ್ರ ಹಿಡಿದರೆ ಇಲ್ಲಿ ಸಮರಸ ಉಂಟಾಗುತ್ತದೆ.

ಕಂಗಳ ಹನಿ

ಪೆನ್ನಿನ ಶಾಹಿ ಆದ್ರೆ

ಸಾರ್ಥಕಭಾವ

ಹಚ್ಚು ಎಂದೆಂದೂ

ಭರವಸೆಯ ದೀಪ

ಸೋತ ಬಾಳಲಿ

ಎನ್ನುವ ಹೈಕುಗಳಲ್ಲಿ ಇದರ ಸೂಕ್ಷ್ಮ ನಿವೇದನೆ ಇದೆ. ಅಂದರೆ ಕವಿತೆಯಂದರೆ ಬರಿ ಬರಹವಲ್ಲ ,ಅದು ನೊಂದವರ ಕಣ್ಣಿರು ಒರೆಸುವ ಸಾಂತ್ವನವಾಗಬೇಕು ಎಂಬ ನಂಬಿಕೆ ಇಲ್ಲಿದೆ.ಜೊತೆಯಾಗಿ ಸಾಗುವದನ್ನು‌ ಕಲಿಯಲು ನಮಗೆ ಚಪ್ಪಲಿಯೂ ಉದಾಹರಣೆ ಯಾಗಿದೆ ಎನ್ನುತ್ತಾರೆ.

ಇಂದು ದೇಶದಲ್ಲಿ ರೈತ ಅನಾಥವಾಗುತ್ತಿರುವ ರೀತಿ ಕವಿಯ‌ ಮನಸ್ಸನ್ನು ಹಿಂಡಿದೆ. ತಾನು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಅವನು ಬಳತ್ತಿದ್ದರೆ, ಇನ್ನೊಂದೆಡೆ  ಅವನ ಮಾಲನ್ನು ಖರಿದಿಸಿ ಮರು ಮಾರಾಟ ಮಾಡುವ ದಲ್ಲಾಳಿ ಗಾರ ಕುಬೇರ ನಾಗಿದ್ದಾನೆ.

ಮೇಟಿ ಹಿಡಿದ

 ಕೈಸೋತಿತು,ದಲ್ಲಾಳಿ

ಕೋಟಿ ಒಡೆಯ

ತುಂಬ ಅದ್ಭುತವಾದ ಹೈಕು ಇದು.ನಿಜಕ್ಕು ಕವಿ‌ ಮಕಾನದಾರರು  ನಮ್ಮ ಇಷ್ಟದ ಕವಿಯಾಗುವದು ಇಲ್ಲಿಯೇ.

ನಿತ್ಯವೂ ಮನುಷ್ಯನ ಆಹಾರವಾಗಿ ಸಾಯುವ ಪ್ರಾಣಿಗಳ ದುರಂತ ಬದುಕು ಕವಿ ಮನಸ್ಸು ಹಿಂಸಿಸಿದೆ.

ಬೆಸ್ತನೊಬ್ಬನ

ಸ್ವತ್ತಾದ ಬಲೆಯಲಿ

ಮೀನು‌ ಮಸಣ

ಇದು‌ ಮೀನು ಮೊದಲಾದ ಜೀವಗಳ ನೋವು.ಜಗತ್ತಿನ ಇತಿಹಾಸದಲ್ಲಿ‌ಮಹಿಳೆಯ‌ ಮೇಲೆ ಸದಾ ಶೋಷಣೆ ತಪ್ಪಿಲ್ಲದಿರುವದು ಸೂಕ್ಷ್ಮ ದೃಷ್ಟಿಗೆ ಬಿದ್ದಿದೆ. ದೇಶಕ್ಕೆ ಸ್ವಾತಂತ್ರ್ಯವೇನೋ ಬಂದಿತು! ಆದರೆ ಸ್ತ್ರೀ ಸಂಕುಲಕ್ಕೆ ದೊರಕಿದೆಯೆ ? ಎಂಬ ಪ್ರಶ್ನೆ ಕವಿಯದು?

ದೇಶ ಆಜಾದಿ

ಸ್ತ್ರೀಗೆ ಎಂದೂ‌ ಮೂಡದ

ಸ್ವಾತಂತ್ರ್ಯ ಸೂರ್ಯ

ಕೆಂಪು ದೀಪದ ಕೆಳಗೆ ನಿತ್ಯವೂ ನೂರಾರು ಯುವತಿಯರ ಮಾನ ವ್ಯಾಪಾರಕ್ಕೊಳಗಾಗುವ ದುರಂತವನ್ನು ಕವಿ

ವಠಾರದಲಿ

ವಿರಹವೂ ಮಾರಾಟ

ಕಾಂಚಾಣದಿಂದ

ಎನ್ನುವ ಸಾಲುಗಳಲ್ಲಿ ಸಂಕೇತಿಸುವಂತಿದೆ. ಹೀಗೆ ಮಕಾನದಾರರ ಹೈಕುಗಳು ಸದಾ ನೊಂದವರ ಪರ ನಿಲ್ಲುತ್ತವೆ.

ಕವಿ ನಮ್ಮ ಬದುಕು ಸುಂದರವಾಗಲು ಹೆಣೆದ ಸೂತ್ರಗಳೂ ಅತ್ಯಂತ ಚೇತೊಹಾರಿಯಾಗಿವೆ.ನಮ್ಮ ಬದುಕು ಸುಂದರವಾಗಿರಲು  ನಾಕ ನರಕದ ಚಿಂತೆ ಬೇಡ ಕಾಯಕ ಸಾಕು ಎನ್ನು ವ ಹೈಕು

*ಮಾಡದಿರು ನೀ

ನರಕ ನಾಕ ಚಿಂತೆ

ಮಾಡು ಕಾಯಕ *

ಎನ್ನುವದು ಅಂತಹ ಒಂದು‌ ಹೈಕು. ಹಾಗೆಯೆ ಮನುಷ್ಯನಿಗೆ ವಯಸ್ಸಾದಂತೆ ಕೂದಲು ಬಿಳಿ ಯಾಗುವದು ಚರ್ಮ ಸುಕ್ಕುಗಟ್ಟುವದು ಸಹಜ ಎನ್ನುವ ತಾತ್ವಿಕ ಚಿಂತನೆ

ನೆರೆಗೂದಲು

ಸುಕ್ಕುಗಟ್ಟಿದ ಚರ್ಮ

ಕಾಲ ಕನ್ನಡಿ

ಎಂದು ಹೈಕು ರೂಪದಾಳಿದೆ.ಮಕಾನದಾರರ ಹೈಕುಗಳ ವಸ್ತು ವ್ಯಾಪಕವಾದದ್ದು ಎನ್ನುವದಕ್ಕೆ ಇವು ಉದಾಹರಣೆಯಾಗಬಹುದು.

ಕವಿತೆಗೆ ಪ್ರೇಮ,ಪ್ರೀತಿಯ ವಸ್ತು  ಬಿಟ್ಟು ಇರಲಾದೀತೆ? ಅದರಲ್ಲಿಯೂ ಹೈಕು ಕಾವ್ಯಪ್ರಕಾರಕ್ಕೆ ಅದು ಸಾಧ್ಯವೇ ಇಲ್ಲ. ಈ ಮಾತಿಗೆ  ಉದಾಹರಣೆಯಾಗುವ ಕೆಲವು ರಚನೆಗಳು ಇಲ್ಲಿವೆ.ಅಲ್ಲಿ ಪ್ರೀತಿಯ ಭಾವವೇ ಒಸರಿದೆ.

ಸದಾಕಾಲವೂ

ಚಂದ ಬಾಳು ಒಲವ

 ಪ್ರೀತಿ ಬನದಿ

ತುಟಿಗೆ ತುಟಿ

ಸೋಕಲು ಕಣ್ಣುಗಳೇ

ತಾನೆ ತೊಟ್ಟಿಲು

ಚೂರಾದ ದಿಲ್

ಯಾವ ಇಲಾಜೂ ಇಲ್ಲ

ದುವಾ ಬೇಡು ಬಾ

ಹೀಗೆ ಅಲ್ಲಲ್ಲಿ ಪ್ರೀತಿ,ವಿರಹ ಎರಡೂ ಸುಳಿದಿವೆ.ಒಂದಿಷ್ಟು ತುಂಟತನ ನುಸುಳಿ ಓದುಗನ ಮನದೊಳಗು ಒಲವ ಪಸೆ ಒಸರುವಂತೆ ಮಾಡುತ್ತವೆ.

ಮಕಾನದಾರರ ಈ ಸಂಕಲನದ ಎಲ್ಲ ಹೈಕುಗಳೂ ಶ್ರೇಷ್ಠ ರಚನೆಗಳೇ ಆಗಿವೆ ಎನ್ನುವ ವಿಚಾರ ನನ್ನದೇನೂ ಆಗಿಲ್ಲ. ಏಕೆಂದರೆ ಒಂದು ಸಂಕಲನವೆಂದ ಮೇಲೆ ಕೆಲವು ಪೇಲವ ರಚನೆಗಳು ಸಾಮಾನ್ಯವೇ?

ಕವಿತೆ ಯೋನಿ

ಭೂಮಿ ಆಕಾಶ ನದಿ

ಹುಟ್ಟುವದೆಲ್ಲಿ?

ಇಲ್ಕಿ ಕಾವ್ಯಕ್ಕೆ ಏನು ವ್ಯಾಖ್ಯಾನ ಕೊಡಲು ಕವಿ ಹೊರಟಿದ್ದಾರೆ.ಒಂದಕ್ಕೊಂದು ಅರ್ಥ ಸಾಂಗತ್ಯ ಹೊರಡಿಸುವಲ್ಲಿ ಕವಿ ಬಳಸಿದ  ರೂಪಕಗಳು ಅಸಮರ್ಥವಾಗಿವೆ ಎನಿಸದಿರದು.ಹಾಗೆಯೇ

ನಿರ್ಮೊಹಿ ತುಟಿ

ಮೋಹದ ಕೊಳಲಿರೆ

ಸದಾ ವಿರಾಗಿ

ನಿರ್ಮೋಹ,ವಿರಾಗ ಸರಿ ಮೋಹದ ಕೊಳಲು ಏನು? ಮೋಹದ ಕೊಳಲಿದ್ದರೂ ಆತ ಸದಾ ವಿರಾಗಿಯೇ? ಅರ್ಥ ಹುಡುಕಲು ನಾವು‌ ಪರದಾಡಬೇಕಾಗುತ್ತದೆ. ಅಂತಹದೇ ಇನ್ನೊಂದು ರಚನೆ ಇದು.

ತುಂಗ – ಭದ್ರೆಯು

ನನ್ನೊಳು ಹರಿದರೂ

ಕಾವೇರಿ ಶಾಂತ.

ಕವಿ‌ ಮನದಲ್ಲಿ ಎರಡು ಭಾವ ಹರಿದರೂ ಮನವೆಂಬ ಕಾವೇರಿ ಶಾಂತವೇ? ಕವಿಯ ಭಾವ ಏನು? ಅರಿಯಲು ಪರದಾಡಬೇಕಾಗುತ್ತದೆ. ಇಂತಹ ಕೆಲವು ಹೈಕುಗಳಲ್ಲಿ ಅರ್ಥ ಸುಸಾಂಗತ್ಯ ಹುಡುಕುವದು ಕಷ್ಟ. ಕವಿ ಏನನ್ನು ಹೇಳಲು ಹೊರಟಿದ್ದಾನೆ ಎಂಬ ಅರ್ಥ ತಿಳಿಯಲು ಗುಡ್ಡ ಹುಡುಕಿ ಸಂಜೀವಿನಿ ತಂದಂತಾಗುತ್ತದೆ. ಇದರೊಂದಿಗೆ ೫/೭/೫ ಅಕ್ಷರಗಳು ಹೊಂದಾಣಿಕೆಗಾಗಿ ಅರ್ಥಕಷ್ಟ ರಚನೆಗಳೂ ಅಲ್ಲೊಂದು ಇಲ್ಲೊಂದು ಕಂಡರೆ ಏನೂ‌ ಮಾಡಲಾಗದು.

ಧ್ಯಾನದ ದೀಕ್ಷೆ

ಪಡೆಯ ಬೇಕೆಂದರೆ

ನೀಲ ನಕ್ಷೇಕೆ

ಈ ಹೈಕುವಿನಲ್ಲಿ ಐದೇ ಅಕ್ಷರಕ್ಕೆ ಪದ ಇಳಿಸುವ ಅನಿವಾರ್ಯತೆಗೆ  ಬಿದ್ದ ಕವಿ ‘ ನೀಲ ನಕ್ಷೆಯೇಕೆ’  ಎಂಬ ಪದವನ್ನು ಹೃಸ್ವಗೊಳಿಸಿ ‘ನೀಲನಕ್ಷೇಕೆ’ ಎಂಬ ಐದೇ ಅಕ್ಷರಕ್ಕಿಳಿಸ ಹೋಗಿದ್ದಾನೆ.ಇದು ಐದು ಅಕ್ಷರಗಳಲ್ಲಿ ಕವಿತೆ ನಿಲ್ಲಿಸುವ ಕಷ್ಟ.ಅರ್ಥಕಷ್ಟ ಪದಗಳ ಸೃಷ್ಟಿ ಯಾಗುವದರಿಂದ ತಪ್ಪಿಸಿಕೊಳ್ಳುವ ಅನಿವಾರ್ಯತೆ ಇರುತ್ತದೆ.ಇಂತಹ ಒಂದೆರಡು ರಚನೆಗಳು ಯಾವುದೇ  ಸಂಕಲನದಲ್ಲಿ ದೊರಕುವದು ಸಹಜವೇ ಆಗಿದೆ.

ಇವೆಲ್ಲ ಮಾತು ಬದಿಗಿರಿಸಿ,ಒಟ್ಟಾರೆ ಹೈಕು ಸಂಕಲನ ಗಮನಿಸಿದಾಗ ಹೈಕು ಕಾವ್ಯ ಗಜಲ್ ಕಾವ್ಯದಂತೆ ತನ್ನ‌ ಪಥ ಹೊರಳಿಸುತ್ತಿರುವದಕ್ಕೆ ಮಕಾನದಾರ ಅವರ ಸಂಕಲನ ಸ್ಪಷ್ಟ ಸಾಕ್ಷಿಯಾಗಿದೆ.ಸುತ್ತಲಿನ ಸಮಾಜ  , ಅಲ್ಲಿ ನ ಸಾಮಾಜಿಕ ನೋವು, ಸಂಕಟಗಳು,  ಇವನ್ನೆಲ್ಲ ಕಿತ್ತು ಹಾಕಲು ಕವಿ ಮಾಡಬೇಕಾದ ಪ್ರಯತ್ನ ಇವು ಇಲ್ಲಿ ಮುನ್ನೆಲೆಯಲ್ಲಿವೆ. ಕವಿ ತನ್ನ ಮಾತಿನಲ್ಲಿ ಸ್ಪಷ್ಟಪಡಿಸಿದ ಪಾಬ್ಲೋ ನರೋಡನ ಮಾತು ” ಸಮಷ್ಟಿಯ ಹಿತಕ್ಕಾಗಿ ಮಿಡಿಯದ ಕಾವ್ಯ ಹಾಡುವದಿಲ್ಲ” ಎಂಬ ಮಾತಿಗೆ ಬದ್ದರಾಗಿದ್ದಾರೆ.

ಬಿತ್ತಬೇಕಿದೆ

ಪ್ರೇಮದೊಲವ ಬೀಜ

ದ್ವೇಷ ನೀಗಿಸಿ.

ಎಂಬ ಅವರ ನಿಲುವಿಗೆ ಸಾಕ್ಷಿಯಾಗಿ ನಿಲ್ಲುವ ರಚನೆಗಳು  ಸಂಕಲನದುದ್ದಕ್ಕೂ ಕಾಣಸಿಗುತ್ತವೆ. ಇಂತಹದೊಂದು ಸ್ಪಷ್ಟತೆಯಿಂದ ಹೊರಟಿರುವ ರಚನೆಗಳಿಗಾಗಿ ಕವಿ‌ ಎ .ಎಸ್. ಮಕಾನದಾರ ಅವರು ನಮ್ಮ‌ ಕೃತಜ್ಞತೆಗೆ ಪಾತ್ರರಾಗುತ್ತಾರೆ.ವರ್ಷಕ್ಕೊಂದು ಹೊಸ ಪ್ರಯೋಗ ಮಾಡಿ ಓದುಗರನ್ನು ಅಚ್ಚರಿಗೊಳಿಸುವ ಮಕಾನದಾರ ಅವರ  ಸೃಷ್ಟಿಶೀಲತೆಗೆ  ನಾನು ಅಚ್ಚರಿಗೊಂಡಿದ್ದೇನೆ . ಅವರ ಈ  ಕಾವ್ಯ ಕಾವೇರಿ ,ತುಂಗ-ಭದ್ರೆಯರು ನಿರಂತರವಾಗಿ ಹರಿಯಲೆಂದು ಹಾರೈಸುತ್ತೇನೆ.


ಡಾ.ಯ.ಮಾ.ಯಾಕೊಳ್ಳಿ

Leave a Reply

Back To Top