ಕಾವ್ಯ ಸಂಗಾತಿ
ಗಜಲ್
ನಯನ. ಜಿ. ಎಸ್
ಹಾಡು ಹಕ್ಕಿಗೆ ರಾಗ ತಪ್ಪುತಲಿದೆ ಕಾರಣವನೇನು ಬಲ್ಲೆ
ಪ್ರಾಂಜಲತೆಗೆ ಸ್ವೇಚ್ಛೆ ದಕ್ಕುತಲಿದೆ ಕಾರಣವನೇನು ಬಲ್ಲೆ
ಋತುವು ಜಾರಿ ರಮ್ಯತೆ ಬಿರಿದಂತೆ ಹಿಗ್ಗುವುದು ಮನ
ತುಷ್ಟಿಭಾವಕೆ ಸಂಚು ಮುತ್ತುತಲಿದೆ ಕಾರಣವನೇನು ಬಲ್ಲೆ
ಹಾಸಿದ ಬಲೆಗೆ ಓಲೈಸಿ ನೆಚ್ಚುವುದು ಜಗದ ನಿಯಮ
ಹಚ್ಚ ಸಿರಿ ಭಾವ ಕೃಶವಾಗುತಲಿದೆ ಕಾರಣವನೇನು ಬಲ್ಲೆ
ಜಿನುಗು ಬಾಷ್ಪಕೆ ಸಾಚಾ ನೆಂಟರಿಲ್ಲ ಕಾಪಟ್ಯ ಮೆರೆದಿದೆ
ಚೊಕ್ಕ ಚೆಲ್ವದು ರಾಡಿಯಾಗುತಲಿದೆ ಕಾರಣವನೇನು ಬಲ್ಲೆ
ನಿಡಿದಾದ ಬಾಳ್ವೆ ದಿಕ್ತಪ್ಪಿದರೆ ಗಮ್ಯ ಸೊರಗೀತು ನಯನ
ಕಟುಸತ್ಯ ಈಗೀಗ ಸಿಹಿಯಾಗುತಲಿದೆ ಕಾರಣವನೇನು ಬಲ್ಲೆ.
ಬಾಳಿನ ಕಟು ಸತ್ಯ