ಕಾವ್ಯ ಸಂಗಾತಿ
ನಾನು...
ಹಮೀದಾ ಬೇಗಂ ದೇಸಾಯಿ
ಕಂಡ ಕಂಡವರಿಗೆ ಕೈ ಮುಗಿವ
ಜಾಯಮಾನ ನನ್ನದಲ್ಲ
ಉಂಡ ಮನೆಯ ಗಳ ಎಣಿಸೋ
ದುರ್ಬುದ್ಧಿಯೂ ನನಗಿಲ್ಲ
ಹೊಗಳಿಕೆಗೆ ಬೀಗುವದಿಲ್ಲ ನಾನು
ತೆಗಳಿಕೆಯ ಝಾಡಿಸಿ ಒಗೆವವಳು ನಾನು..
ತೆರೆದ ಮನದಿ ಬಿಚ್ಚು ಮಾತುಗಳ
ದಿಟವಾದ ದಿಟ್ಟ ನುಡಿಗಳ
ಹೇಳಲೇಕೆ ಹಿಂಜರಿಕೆ…?
ಕಂಡುಂಡ ಬದುಕಿನ ಗಳಿಗೆಗಳಿಗೆ
ಆತ್ಮಸಾಕ್ಷಿಯು ಪ್ರಮಾಣವಾಗಿರೆ
ಹೆದರಿ ಮರೆಮಾಚಲೇಕೆ…?
ಸೋಗು ಮಾಡುವವರ ನೋಡಿ
ನಕ್ಕು ಮುಂದೆ ನಡೆವವಳು ನಾನು
ಗುದ್ದಿ ತಿದ್ದಿ ಬೆನ್ನು ತಟ್ಟುವವರ ಎದುರು
ಶಿರಬಾಗಿ ವಂದಿಸುವವಳು ನಾನು
ನಂಬುಗೆಯ ನಡೆಗಳಿಗೆ
ಜೀವಕ್ಕೂ ಮಿಗಿಲು ಪ್ರೀತಿಸುವವಳು ನಾನು…
ಗುರಿಯ ಮುಟ್ಟಲೆಂದೂ
ಮರಳ ಹೆಜ್ಜೆಗಳ ಇಡಲಿಲ್ಲ ನಾನು
ಪರಿಶ್ರಮದ ಸುಟ್ಟ ಇಟ್ಟಿಗೆಯ
ಮೆಟ್ಟಿಲು ಹತ್ತಿ ಮೇಲೆ ಬಂದವಳು ನಾನು
ಸೋಲುಗಳ ಹಾವು ಏಣಿಯಾಟದಿ
ನೊಂದು ನರಳಲಿಲ್ಲ ನಾನು
ಹಿಂದಿಕ್ಕಿ ಅವುಗಳ ತಿರುಗಿ ನೋಡದೆ
ಛಲದಿ ಹೊಸ ಬೆಳಕಿನೆಡೆಗೆ
ಸಾಗಿಹೆನು, ಸಾಗುವೆನು ನಾನು….
ತುಂಬಾ ಚಂದದ ಕವನ ಮೇಡಂ
ತುಂಬ ಚೆಂದನೆಯ ಕವನ.ನನ್ನದೇ ಏನೋ ಎನ್ನುವಷ್ಟು ಆಪ್ತವಾಯಿತು.
ಆಪ್ತವಾಗುವ ಪರಿಣಾಮಕಾರಿ ಕವಿತೆ
ಮೆಚ್ಚುಗೆಗೆ ಧನ್ಯವಾದಗಳು ಎಲ್ಲರಿಗೂ.
ಬದುಕಬೇಕು ಹೀಗೆ ಎನ್ನುವ ನಂಬಿಕೆ ಹುಟ್ಟಿಸುವ ಹಾಗಿದೆ ಕವನ.