ಹೆಣ್ಣನ್ನು ಸೃಷ್ಟಿ ದೇವತೆ ಎಂದರೆ ತಪ್ಪಾಗಲಾರದು

ಅನಿಸಿಕೆ

ಹೆಣ್ಣನ್ನು ಸೃಷ್ಟಿ ದೇವತೆ ಎಂದರೆ ತಪ್ಪಾಗಲಾರದು

ಹೆಣ್ಣನ್ನು ಸೃಷ್ಟಿ ದೇವತೆ ಎಂದರೆ ತಪ್ಪಾಗಲಾರದು. ತಾಯ್ತನ ಹೆಣ್ಣಿನ ಜೀವನದ ಪರಿಪಕ್ವತೆ ಎಂದೂ ವ್ಯಾಖ್ಯಾನಿಸಿದ್ದಾರೆ.

ಈ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣನ್ನು ಭೋಗವಸ್ತುವೆಂದು ಪರಿಗಣಿಸುವ ಮನೋಭಾವ ಯುವ ಪೀಳಿಗೆಯಲ್ಲಿ ಹೆಚ್ಚಾಗುತ್ತಿರುವ ಇಂದಿನ ಪ್ರಸ್ತುತ ಸಮಯದಲ್ಲಿ, ಹೆಣ್ಣಿನ ತಾಯ್ತನದ ಮಹತ್ವ, ಹೆಣ್ಣು ತಾನು ತಾಯಿ ಆಗಲೇಬೇಕೆಂಬ ಆಕಾಂಕ್ಷೆ ಹೊತ್ತ ಹೃದಯ, ಅದಾಗದಿದ್ದಲ್ಲಿ ಸಮಾಜದಿಂದ/ಕುಟುಂಬದವರಿಂದ ಬರುವ ಟೀಕೆ, ಆದೆನೆಂಬ ಆಸೆಯಲ್ಲಿರುವಾಗ ಗರ್ಭಪಾತವಾದರೆ, ಅನುಭವಿಸುವ ನೋವು/ಸಂಕಟ, ಅಂತಿಮವಾಗಿ  ತಾನು ತಾಯಿ ಆಗಲಾರೆ ಎಂಬ ಸ್ಥಿತಿಯಲ್ಲಿ ತೆಗದು ಕೊಳ್ಳ ಬಹುದಾದ ತೀರ್ಮಾನ ಇವೆಲ್ಲಾ ನೈಜವಾಗಿ ನಿಜ ಜೀವನದಿ ಅನುಭವಿಸಿರುವ ಒಬ್ಬ ಹೆಣ್ಣು, ಆಕೆಯ ಕರಳೊಳಗಿನ ಭಾವನೆಗಳನ್ನೆಲ್ಲಾ ಎಳೆ ಎಳೆಯಾಗಿ ವೇದಿಕೆಯ ಮೇಲೆ ಏಕ ವ್ಯಕ್ತಿ  ಪ್ರದರ್ಶನವಾಗಿ 80-85 ನಿಮಿಷದ ಸುದೀರ್ಘ ಅವಧಿಯಲ್ಲಿ  ನಿರಂತರ ಅನಾವರಣ ಗೊಳಿಸಿದ್ದು, “ತಾಯಿಯಾಗುವುದೆಂದರೆ” ಎಂಬ ಕರಳ ತಂತಿಯ ಮಮಕಾರದ, ಪೂಜಾ ರಘುನಂದನ್ ಅಭಿವ್ಯಕ್ತಗೊಳಿಸಿದ “ಏಕ ವ್ಯಕ್ತಿ, ಏಕಾಂಕ” ನಾಟಕ.

ಇದಕ್ಕೆ ಪೂರಕವಾಗಿ ಸಂದರ್ಭಕೆ ತಕ್ಕಂತ ಬೆಳಕಿನ ವಿನ್ಯಾಸ, ಪ್ರಸಿದ್ಧ ಕವಿಗಳ ಸಾಲುಗಳ ಹಾಡು, ಆದಿ ಶಂಕರರ ” ಪುನರಪಿ ಜನನಂ ಪುನರಪಿ ಮರಣಂ, ಪುನರಪಿ ಜನನೀ ಜಠರೇ ಶಯನಂ” ಶ್ಲೋಕ ಪೂಜಾರವರ ಅದ್ಭುತ ಅಭಿನಯ ಸೇರಿ, ಇಡೀ ಪ್ರೇಕ್ಷಕರನು ನಿಶ್ಯಬ್ಧದ ಸಾಗರದಿ ಮುಳುಗಿಸಿತು.

ಮಹಿಳೆಯರ ದಿನಾಚರಣೆಯ ಒಂದು ಪ್ರಬಂಧ ದಿಂದ ಪ್ರೇರಿತವಾಗಿ ಪೂಜಾರವರ ನಿಜ ಜೀವನದ ಘಟನೆಗಳ ಹೂಹಾರದಂತೆ ಪೋಣಿಸಿ,ರಂಗರೂಪ,ವಿನ್ಯಾಸ, ಸಂಗೀತ,ಮತ್ತು ನಿರ್ದೇಶನ ಮಾಡಿರುವ ಕೃಷ್ಣಮೂರ್ತಿ ಕವತ್ತಾರ್ ಅವರೂ ಅಭಿನಂದನಾರ್ಹರು.

ಪ್ರತಿ ತಿಂಗಳ ಎರಡನೇ ಶನಿವಾರದ ದಾಸೋಹ ಸಹಿತ ಉಚಿತ ನಾಟಕ ಪ್ರದರ್ಶನದಲ್ಲಿ 63 ನೇ ರಂಗಮಾಲೆಯಾಗಿ ಕಾರ್ಯಕ್ರಮ ಆಯೋಜಿಸಿದ ” ಜನಪದರು” ಸಾಂಸ್ಕೃತಿಕ ಸಂಘದವರ ಯತ್ನ ಸಫಲವಾಯಿತು.

ಇದೇ ಸಂದರ್ಭದಲ್ಲಿ ಜಾನಪದ ಅಕಾಡಮಿಯಿಂದ ಈ ಸಾಲಿನ ರಾಜ್ಯ ಪ್ರಶಸ್ತಿ ವಿಜೇತ ಜನಪದ ಗಾಯಕ ಶ್ರೀ  ರಾಜಪ್ಪ ರವರನ್ನು ಸನ್ಮಾನಿಸಿದ್ದು ಕಳೆಕಟ್ಟಿತು.

ಪ್ತಿತಿ ತಿಂಗಳು ತಪ್ಪದೇ ಕಾರ್ಯಕ್ರಮ ಅಯೋಜಿಸುವ “ಜನಪದರು” ತಂಡಕ್ಕೆ ವಂದನೆಗಳು


ಬಾಗೇಪಲ್ಲಿ ಕೃಷ್ಣಮೂರ್ತಿ

Leave a Reply

Back To Top