ಅಂಕಣ ಸಂಗಾತಿ

ಒಲವ ಧಾರೆ

ಅಲೆಮಾರಿಗಳ ಬದುಕು ಆತಂಕದಲ್ಲಿ ಬೇಯದಿರಲಿ…

ಹಿಂಡು  ಹಿಂಡಾಗಿ ಕುರಿಗಳನ್ನು ಹೊಡೆದುಕೊಂಡು ಒಂದು ಊರಿನಿಂದ ಇನ್ನೊಂದು ಊರಿನ ಹೊಲಗಳಿಗೆ ಹೋಗುವ ಕುರಿ ಮಂದಿಯನ್ನು ನಾವು ಕಾಣುತ್ತೇವೆ. ಮತ್ತೊಂದಡೆ ಬೈಲ್  ಕಮ್ಮಾರಿಕೆಯನ್ನು ಮಾಡುತ್ತಾ, ಊರಿನವರು ಅವರಿಗೆ ಕೊಟ್ಟಷ್ಟು ಕಾಳು ಕಡಿಗಳನ್ನು ತೆಗೆದುಕೊಂಡು ಬದುಕನ್ನು ಮಾಡುವ ಜನಸಮುದಾಯಗಳನ್ನು ಅಲ್ಲಲ್ಲಿ ಕಾಣುತ್ತೇವೆ. ತಮ್ಮ ದೇಹವನ್ನು ದಂಡಿಸುತ್ತಾ,ವಿವಿಧ ಕಸರತ್ತುಗಳನ್ನು ಮಾಡುತ್ತಲೇ, ಚಿಕ್ಕ ಮಕ್ಕಳನ್ನು ಕೂಡ ತಮ್ಮ ವೃತ್ತಿಗೆ ಬಳಸಿಕೊಂಡು ಹೊಟ್ಟೆ ಹೊರೆಯುವುದಕ್ಕಾಗಿ ಸರ್ಕಸ್ ಇಲ್ಲವೇ ದೊಂಬರಾಟವೆಂದು ನಾವು ಅದನ್ನು ಕರೆಯುತ್ತೇವೆ. ಅದನ್ನು ಮಾಡುವ ಜನಾಂಗವು ಅಲೆಮಾರಿಯಾಗಿದೆ.  ಇವುಗಳಲ್ಲದೆ ಇನ್ನೂ ಅನೇಕ ಅಲೆಮಾರಿ ಸಮುದಾಯಗಳನ್ನು ನಾವು ಕಾಣುತ್ತೇವೆ.

ಅಲೆಮಾರಿಗಳೆಂದರೆ.. ‘ತಮ್ಮ ಬದುಕನ್ನು ಕಟ್ಟಿಕೊಳ್ಳುವ ಸಲುವಾಗಿ ಮಕ್ಕಳು, ವೃದ್ಧರನ್ನು, ಮನೆಯ ಎಲ್ಲರೊಂದಿಗೆ ಸಾಮಾನು ಸರಂಜಾಮಗಳನ್ನು ದನಕರಗಳನ್ನು ಹೊಡೆದುಕೊಂಡು ಒಂದು ಊರಿನಿಂದ ಇನ್ನೊಂದು ಊರಿನಲ್ಲಿ ತಾತ್ಕಲಿಕ ಟೆಂಟ್ ಇಲ್ಲವೇ ಶಡ್ ಗಳಲ್ಲಿ ನೆಲೆಸುತ್ತಾ, ಖಾಯಂ ಮನೆಯಿಲ್ಲದ, ನೆಲೆಯಿಲ್ಲದ ಜನಸಮುದಾಯಗಳನ್ನು ಅಲೆಮಾರಿ ಸಮುದಾಯಗಳೆಂದು ನಾವು ಕರೆಯುತ್ತೇವೆ’.

ಕುರಿ ಮಂದೆ ಹೊಂದಿರುವ ಕುರುಬರು, ಬೇಟೆಯಾಡುವ ಬೇಟೆಗಾರರು, ಚೆಂಚರು,  ಬೈಲು ಕಮ್ಮಾರರು, ಲಮಾಣಿಗಳು, ಕಾಡು ಸಿದ್ದರು, ಹಗಲು ವೇಷಗಾರರು, ಸಿಂದೋಳ್ಳಿಯವರು,ದುರುಗುಮುರುಗಿಯವರು, ಗೊಂದಲಿಗರು,  ಹಿಂಡು ಹಿಂಡು ದನಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಗಳಿಗೆ ಮೇಯಿಸುವ ಗೊಲ್ಲರು, ಒಂದೇ ಎರಡೇ ಅನೇಕಾನೇಕ ಅಲೆಮಾರಿ ಜನಸಮುದಾಯಗಳು ಈ ನಾಡಿನಲ್ಲಿ ಜೀವಿಸುತ್ತಿದ್ದಾರೆ. ಒಂದು ಊರಿನಲ್ಲಿ ಖಾಯಾಂ ಆಗಿ ನೆಲೆ ನಿಲ್ಲದೆ ಬದುಕನ್ನು ಕಟ್ಟಿಕೊಳ್ಳುವ ಸಲುವಾಗಿ ಒಂದು ಊರಿನಲ್ಲಿ ಹದಿನೈದು ದಿನವೋ ಇಲ್ಲವೇ ಒಂದು ತಿಂಗಳಿಗೋ ತಾತ್ಕಾಲಿಕವಾಗಿ ನೆಲೆ ನಿಂತು, ಮತ್ತೆ ಮತ್ತೆ ಬದುಕಿಗೆ ಆಸರವನ್ನು ಹುಡುಕುತ್ತಾ  ಅಲೆಯುವುದಾಗಿದೆ.

ಸಾಮಾನ್ಯವಾಗಿ ದನ ಕರುಗಳನ್ನು, ಕುರಿಗಳನ್ನು, ಚಿಕ್ಕ ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ಪ್ರಾಣಿಗಳನ್ನು ಹೊಡೆದುಕೊಂಡು ಅಡವಿಗಳಲ್ಲಿ, ಗುಡ್ಡ – ಬೆಟ್ಟಗಳಲ್ಲಿ ತಿರುಗಾಡುವಾಗ ಮಳೆ, ಚಳಿ, ಗಾಳಿ, ಬಿಸಿಲುಗಳಿಗೆ ಮೈಯೊಡ್ಡಿ ಪ್ರಕೃತಿಗೆ ಜಗ್ಗದೆ ಬದಕನ್ನು ಕಟ್ಟಿಕೊಳ್ಳುವ ಸಲುವಾಗಿ ಸದಾ ಹೆಣಗುತ್ತಲೇ ಇರುತ್ತಾರೆ ಈ ಅಲೆಮಾರಿಗಳು.

ಬಾಲ್ಯದಲ್ಲಿರುವ ಮಕ್ಕಳಿಗೆ ಶಿಕ್ಷಣ ಕೊಡುವುದಾಗಲಿ, ಕೊಡಿಸುವುದಾಗಲಿ, ಮುಂದೆ ಅವರ ಬದುಕಿಗೆ ದಾರಿ ಹಚ್ಚುವುದಾಗಲಿ ಇದಾವುದರ ಬಗ್ಗೆ ತಲೆಕೆಡಿಸಿಕೊಳ್ಳದೆ, ಗೊತ್ತು ಗುರಿಯಿಲ್ಲದೆ ಬದುಕಿನ ಹೊಟ್ಟೆ ಹೊರೆಯುವುದಕ್ಕಾಗಿ ಹೋರಾಟ ನೆಡೆಸುತ್ತಾರೆ. 

ಕುರಿ ಕಾಯುವ ಮಂದಿಯಂತೂ ಹಿಂಡು ಹಿಂಡು ಕುರಿಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆ ಹಟ್ಟಿಯಲ್ಲಿ ನೆಲೆ ನಿಲ್ಲಿಸಿ ಅವುಗಳನ್ನು ಕಾಡು ಪ್ರಾಣಿಗಳು ತೋಳ ನರಿ ಮುಂತಾದ ಕ್ರೂರ ಪ್ರಾಣಿಗಳಿಂದ ಹಗಲು ರಾತ್ರಿ ಎನ್ನದೆ ಸಂರಕ್ಷಣೆಗೆ ಕಾಯುತ್ತಿರುತ್ತಾರೆ. ಮುಂಜಾನೆಯಾದರೆ ಮೇಯಿಸಲು ಗುಡ್ಡಗಾಡುಗಳಿಗೆ ತೆರಳುತ್ತಾರೆ. ಇಲ್ಲವೇ ಬೆಳಗಿನ ಜಾವು ತಾವು ಮಾಡುವ ಅನ್ನ – ಜೋಳದ ಸಂಗಟಿ ಕುರಿಯ ಹಾಲಿನೊಂದಿಗೆ ಅದನ್ನೇ ಅಮೃತದಂತೆ ಹೊಟ್ಟೆ ತುಂಬಾ ಉಣುತ್ತಾ ಮತ್ತೆ ಕುರಿ ಕಾಯಲು ಅಣಿಯಾಗುತ್ತಾರೆ. ಅವರಿಗೆ ಹೊಲಗದ್ದೆಗಳಲ್ಲಿ ಇಲ್ಲವೇ ಕೆರೆಯಲ್ಲಿ ಸಿಗುವ ನೀರೇ ಅವರಿಗೆ ಆಧಾರವಾಗಿರುತ್ತದೆ.

ಬೇಟೆಯಾಡುವ ಬೇಟೆಗಾರರು ಸಿಗುವ ಪ್ರಾಣಿಗಾಗಿ ಕಾಯುತ್ತಾ ಕುಳಿತಿರುತ್ತಾರೆ, ಸರಕಾರದ ನೂರಾರು ಕಾನೂನುಗಳು ಅವರನ್ನು ಇತ್ತೀಚಿಗೆ ಕಂಗೆಡಿಸುವೆ. ಹಾಗಾಗಿ ಬೇಟೆಗಾರರ ಸಂಖ್ಯೆಯು ಕ್ಷಣಿಸಿದೆ.

ಇನ್ನೂ ಆಕಳುಗಳನ್ನು, ಎಮ್ಮೆಗಳನ್ನು ಹಿಂಡು ಹಿಂಡಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಮೇಯಿಸಿಕೊಂಡು ಹೋಗುತ್ತಾರೆ. ಹೀಗೆ ಹೋಗುವಾಗ ಗೊಲ್ಲರನ್ನು ಕಾಡುವ ಪ್ರಾಣಿಗಳ ಕಾಟವಂತೂ ಹೇಳತೀರದು. ಹಾಗೆಯೇ ದನಗಳನ್ನು ಕಳವು ಮಾಡುವ ಕಳ್ಳರ ಸಂಖ್ಯೆಗೂ ಕಡಿಮೆಯಿಲ್ಲ. ಇವೆಲ್ಲವನ್ನೂ ಎಚ್ಚರಿಕೆಯಿಂದಲೇ ಗಮನಿಸುತ್ತಾ, ಅವುಗಳನ್ನು ಕಾಯುತ್ತಾ ಬದುಕನ್ನು ಸವೆಸಬೇಕಾಗಿದೆ. ಇನ್ನು ಇಂತಹ ಗೊಲ್ಲರನ್ನು ಕಂಡರೆ ಹೊಲದ ಮಾಲೀಕರು ಕೋಪಗೊಳ್ಳುತ್ತಾರೆ. ಯಾಕೆಂದರೆ ಎಲ್ಲಿ ದನಕರಗಳು ಹೊಲವನ್ನು ನಾಶ ಮಾಡಿ ಬೆಳೆಗಳನ್ನು ಹಾಳುಮಾಡಿ ಬಿಡುತ್ತೇವೆಯೋ ಎನ್ನುವ ಅಂಜಿಕೆ ರೈತರಲ್ಲಿರುತ್ತದೆ.

 ಬೇಟೆಯಾಡುವ ಚಂಚರು ತಮ್ಮ  ಬೇಟೆಯನ್ನು ಹುಡುಕುತ್ತಲೇ, ಬೇಟೆಯಾಡುತ್ತಲೇ ನೂರಾರು ಸಮಸ್ಯೆಗಳನ್ನು ಎದುರಿಸುತ್ತಾರೆ. ಇನ್ನು ಗೊಂದಲಿಗರ ಬದುಕು ಅಸಹನೀಯವಾಗಿದೆ. ಬೆಟ್ಟದಿಂದ ಕಟ್ಟಿಗೆಯ ಹೊರೆಯನ್ನು ತಂದು ಇಲ್ಲವೇ ಕವಳೆ ಹಣ್ಣುಗಳನ್ನು ತಂದು ಮಾರುತ್ತಿದ್ದ ಲಮಾಣಿ ಜನಾಂಗವು ಕೂಡ ಅನೇಕ ತೊಂದರೆಗಳನ್ನು ಎದುರಿಸುತ್ತಲೇ, ಇತ್ತೀಚಿಗೆ ಅಲೆಮಾರಿ ಜೀವನದಿಂದ ವಿಮುಖರಾಗಿ ಒಂದು ಕಡೆ ನೆಲೆ ನಿಲ್ಲಲು ಪ್ರಯತ್ನಿಸುತ್ತಿದ್ದಾರೆ.

ಇವರಲ್ಲದೆ ಕಾಡಸಿದ್ದರು ಸಮಾಜದಿಂದ ಮುಖ್ಯ ವಾಹಿನಿಯಲ್ಲಿ ಬರಬೇಕಾಗಿದೆ. ಒಂದು ಊರಿನಿಂದ ಇನ್ನೊಂದು ಊರಿಗೆ ಅಲೆಯುತ್ತಾ  ಭಿಕ್ಷಾಟನೆ ಮಾಡುವುದನ್ನು ನಾವು ಕಾಣುತ್ತೇವೆ. ಸುಡುಗಾಡಿನಲ್ಲಿ ತಮ್ಮ ಕಾಯಕವನ್ನು ಮಾಡುತ್ತಲೇ ತಮ್ಮ ಬದುಕ ಕಟ್ಟಿಕೊಳ್ಳುವುದನ್ನು ಇಂದಿನ ಆಧುನಿಕ ಯುಗದಲ್ಲಿಯೂ ನಾವು ಕಾಣುವುದು ತುಂಬಾ ವಿಷಾದಕರವೆಂದು ಹೇಳಬಹುದು.

ಇನ್ನೂ  ನಾಗರಿಕ ಜೀವನದಿಂದ ದೂರವಿರುವ ಸಿಂಧೋಳ್ಳಿ ಅಥವಾ ದುರ್ಗಮುರುಗಿಯರು ಎಂದು ಕರೆಯುವ ಜನಾಂಗವು ಮಾತೆ ದುರ್ಗಾದೇವಿಯ ಮೂರ್ತಿಯನ್ನು ಹೊತ್ತುಕೊಂಡು ತಮ್ಮ ದೇಹವನ್ನು ದಂಡಿಸುತ್ತಾ ಸಮಾಜದಲ್ಲಿ ಭಿಕ್ಷಾಟನೆ ಮಾಡುವುದನ್ನು ಗುರುತಿಸಲ್ಪಡುತ್ತೇವೆ. ಈ ಜನಾಂಗವು ಕೂಡ ಮುಖ್ಯ ವಾಹಿನಿಗೆ ಬರುವುದು ತುಂಬಾ ಅಗತ್ಯವಿದೆ.

ಅಲೆಮಾರಿಗಳ ಬದುಕು ತುಂಬಾ ವಿಶಿಷ್ಟ ಪೂರ್ಣವಾಗಿರುತ್ತದೆ. ತಮ್ಮದೇ ಆಚಾರ ವಿಚಾರಗಳನ್ನು ಹೊಂದಿರುತ್ತಾರೆ. ಜನ್ಮ, ಮದುವೆ, ಸಾವು,ಹಬ್ಬಹರಿದಿನಗಳಲ್ಲಿ, ಅಲ್ಲದೆ  ಹಿರಿಯರಿಗೆ ಗೌರವ ಕೊಡುವ, ಚಿಕ್ಕ ಮಕ್ಕಳನ್ನು ಆದರದಿಂದ ಕಾಣುವ, ತಮ್ಮದೇ ಆದ ಕುಲದೇವತೆಯನ್ನು ಆರಾಧಿಸುವ, ಊಟ ಉಪಚಾರಗಳಲ್ಲಿಯೂ ಅನೇಕ ಸಾಂಪ್ರದಾಯಗಳನ್ನು ಪಾಲಿಸುವ ಸಂಪ್ರದಾಯ ಹೊಂದಿರುತ್ತವೆ ಈ ಅಲೆಮಾರಿ ಜನಾಂಗಗಳು. ಅಲೆಮಾರಿ ಜನಾಂಗಗಳು ತಮ್ಮೊಳಗೆ ಬಗೆಹರಿಯಲಾರದ ಅನೇಕ ಜಗಳಗಳನ್ನು ತಮ್ಮ ಹಿರಿಯರ ಮುಂದೆ ಅವರು ಬಗೆಹರಿಸಿಕೊಳ್ಳುತ್ತಾರೆ.  ತಮ್ಮ ಸಮುದಾಯದ ಹಿರಿಯರು  ನೀಡುವ ನ್ಯಾಯ ನಿರ್ಣಯಕ್ಕೆ ಬದ್ಧರಾಗಿ ನಡೆದುಕೊಳ್ಳುತ್ತಾರೆ. ಇಂದಿಗೂ ಕೂಡ ಕೆಲವು ಅಲೆಮಾರಿ ಜನಾಂಗದವರು ಯಾವುದೇ ಪೊಲೀಸ್ ಕಚೇರಿಗಳನ್ನು ತುಳಿಯುವಂತಿಲ್ಲ, ಒಂದು ವೇಳೆ ಅಲೆಮಾರಿ ಜನಸಮುದಾಯದ ಹಿರಿಯರ ಮಾತನ್ನು ಇಲ್ಲವೇ ನ್ಯಾಯ ನಿರ್ಣಯವನ್ನು ಧಿಕ್ಕರಿಸಿ ಮುಂದುವರಿದರೆ ಅವರನ್ನು ಜನಸಮುದಾಯದಿಂದಲೇ ತಿರಸ್ಕಾರ ಮತ್ತು ಬಹಿಷ್ಕಾರದಂತ ಶಿಕ್ಷೆಗೆ ಒಳಪಡಿಸುತ್ತಾರೆ. ಮುಂದೆ ಹಿರಿಯರಿಗೆ ಇಂತಿಷ್ಟು ದಂಡವನ್ನು ಕಟ್ಟಿ ಪು:ನ ಜನಸಮುದಾಯಕ್ಕೆ ಸೇರಿಕೊಳ್ಳುತ್ತಾರೆ.

ಅಲೆಮಾರಿ ಸಮುದಾಯಗಳಿಗೆ ಸರ್ಕಾರಗಳು ಅನೇಕ ಯೋಜನೆಗಳನ್ನು ನಿಗದಿತವಾಗಿ ಜಾರಿಗೆ ತಂದಿವೆ. ಆದರೆ ಅವುಗಳು ಮಧ್ಯಸ್ಥಗಾರರಿಂದಾಗಿಅವರಿಗೆ  ಸರಿಯಾಗಿ ತಲುಪುತ್ತಿಲ್ಲ ಎನ್ನುವ ಮಾತು ಕೇಳಿ ಬರುತ್ತದೆ. ಸರ್ಕಾರದ ಯೋಜನೆಗಳು ಅಲೆಮಾರಿ ಜನಾಂಗದ  ಜನರಿಗೆ ತಲುಪುವಂತಾಗಬೇಕು ಎನ್ನುವುದು ವಾಸ್ತವಿಕ ಸತ್ಯ.  ಈ ನಿಟ್ಟಿನಲ್ಲಿ ಪ್ರಜಾಸತ್ತಾತ್ಮಕ ಸರ್ಕಾರಗಳು ಮತ್ತು ನಾಗರಿಕ ಸಮಾಜಗಳು ಅಲೆಮಾರಿ ಜನಾಂಗದವರ ಬದುಕನ್ನು ಬೇಯದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲೆ ಇದೆ.  ಅವರ ಬದುಕು ಕೂಡ ನಮ್ಮ ಬದುಕಿನಂತೆ ಮುಖ್ಯ ವಾಹಿನಿಗೆ ಬರಲೆಂದು ನಾವೆಲ್ಲರೂ ಆಶಿಸೋಣ.


ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ
ಕವನ ಲೇಖನಗಳ ಪ್ರಕಟ.

Leave a Reply

Back To Top