ಸಂ ಕಷ್ಟಹರನ ಮೆನಿ ಕಷ್ಟ! 

ಸಂ ಕಷ್ಟಹರನ ಮೆನಿ ಕಷ್ಟ!

ರೂಪ ಮಂಜುನಾಥ

ಹದ್ನೈದು ದಿನವಾದ್ರೂ ಗಣಪ್ಪನ್ನ ನೋಡೋಕೆ ಹೋಗೋಕಾಗ್ಲೇ ಇಲ್ಲ. ಒಂದಲ್ಲಾ ಒಂದು ಕೆಲಸ,ಕಾರ್ಯ, ತಾಪತ್ರಯ!ಅಲ್ಲಾ ಮೂರು ಮತ್ತೊಂದ್ ಜನರ ನಿಗಾ ಮಾಡೋಕೇ ನಮ್ಗೆ ಇಷ್ಟೆಲ್ಲಾ ಮುಗಿಯದ ಪಾಡು!ಹೀಗಿದ್ದಾಗ,ಲೋಕವೆಲ್ಲಾ ಕಾಯೋ ಸರ್ವೇಶ್ವರನಿಗೆ ಅದೆಷ್ಟು ಕೆಲಸಾ…ಕಾರ್ಯಾ …..ತಾಪತ್ರಯವೋ?????ಅದೆಲ್ಲಾ ಅದ್ ಹ್ಯಾಗ್ ನಿಭಾಯಿಸ್ತಾನೋ, ಅದ್ಯಾವ್ ಮ್ಯಾನೇಜ್ಮೆಂಟ್ ವಿಶ್ವವಿದ್ಯಾಲಯಕ್ಕೆ ಹೋಗಿ ಡಿಸ್ಟಿಂಗ್ಷನ್ ನಾಗೆ ಪಾಸಾಗಿ ಬಂದೌನೋ, ಏನೋ, ಆ ಭಗವಂತನಿಗೇ ಗೊತ್ತು!ಪ್ರತಿದಿನ ಗಣಪನ ಹೋಗಿ ಮಾತಾಡಿಸೋಣವೆಂದು  ಮನಸ್ಸು ತುಡೀತಾ ಇತ್ತಾ,

ಅಂತೂ ಇಂತೂ ಕೊನೆಗೆ ಈ ದಿನ ಸಂಜೆ ಸೊಲ್ಪೊತ್ತಾದ್ರೂ ಪೆಂಡಾಲಿಗ್ ಹೋಗಿ, ಗಣಪ್ಪನ್ ಜೊತೇಲಿ ಇದ್ದು ಮಾತಾಡ್ ಬರೋಣಾಂತ ನಿರ್ಧಾರ ಮಾಡಿದೋಳೇ, ಹೇಗೋ ಹೋದೆ. ಗಣಪನ ಮುಂದೆ ಹೋಗಿ, ನಗುತ್ತಾ ಕೈ ಅಲ್ಲಾಡಿಸಿದೆ.ನನ್ನ ನೋಡುತ್ತಲೇ ದೂರ್ವಪ್ರಿಯ ಗಜಾನನ, ದುರ್ದಾನ ತೆಗೆದುಕೊಂಡಂತೆ ತನ್ನ ಕತ್ತನ್ನ ಪಕ್ಕಕ್ಕೆ ತಿರುಗಿಸಿಯೇಬಿಟ್ಟ!ನನ್ ಮುಖಕ್ಕೆ ತಣ್ಣೀರೆರಚಿದಂತಾಯಿತು.ಆದರೂ,ಮುದ್ದು ಗಣಪ ಮುಖ ಊದಿಸಿಕೊಂಡ ಕಾರಣವಾದ್ರೂ ಕೇಳೋಣ, ನನ್ ತಪ್ಪಿದ್ರೆ ಸಾರಿ ಕೇಳ್ಕೊಂಡು ಸರಿ ಪಡಿಸಿಕೊಳ್ಳೋಣ, ಅದ್ರಲ್ಲೇನ್ ತಪ್ಪೂ….., ಅಂತ ಅವನು ಮುಖ ತಿರುಗಿಸಿದ ಕಡೆಗೇ ಹೋಗಿ ಮತ್ತೊಮ್ಮೆ ಅವನನ್ನೇ ನೋಡುತ್ತಾ ನಿಂತೆ.ದೃಷ್ಟಿ ಬೇರೆ ಕಡೆ ಬದಲಿಸಿದ.ಯಾಕೋ ಶೂರ್ಪಕರ್ಣನ ಮುಖವೆಲ್ಲಾ ವಿವರ್ಣವಾಗಿ, ಕಣ್ಣುಗಳೆಲ್ಲಾ ಬಾತುಕೊಂಡಂತೆ, ಕೆಂಪಗಾಗಿ ಹೋಗಿದ್ದವು. ಅವನ ಅವಸ್ಥೆ ನೋಡಿ, ನನಗೆ ಮನಸಿಗಾದ ನೋವು ,ಅವಮಾನ ಮರೆತೇ ಹೋಗಿ, ಪಾಪ, ಅವನನ್ನ ಕಂಡು ಸಂಕಟವಾಯಿತು. ಹತ್ತಿರ ಹೋಗಿ,”ಯಾಕೋ ಗಣಪ್ಪಾ, ಯಾಕೋ ಹಿಂಗಿದ್ದೀಯಾ?”, ಅಂದೆ, ಆ….ಬಿಗಿಯಾದ ಮುಖವೇನೂ ಸಡಿಲವಾಗಲಿಲ್ಲ. “ಅಲ್ಲ ಕಣೋ ಗಣಪ್ಪಾ,ಅಕ್ಕಾ ಅಕ್ಕಾ ಅಂತೀಯಾ, ನಿನ್ ಪ್ರಾಬ್ಲಮ್ ನನ್ ಹತ್ರ ಹೇಳ್ಕೋಬಾರ್ದೇನಯ್ಯಾ?”,ಅಂತ ಕಕ್ಕುಲಾತಿಯಿಂದ ಕೇಳಿದೆ.ಅದಕ್ಕೆ ಕುಂಬಳಕಾಯಿ ಮುಖ ಮಾಡಿಕೊಂಡ ಗಣಪ,”ನೀನ್ ಮಾತ್ರ ಏನಕ್ಕಾ ,ತಮ್ಮಾ ತಮ್ಮಾಅಂತೀಯಾ? ಬರಬೇಕೂಂತ ಮನ್ಸು ಮಾಡುದ್ರೆ ಎಷ್ಟೊತ್ತೂ?  ಐದಾರು ನಿಮ್ಷ ಹೆಜ್ಜೆ ಹಾಕುದ್ರೆ, ಪೆಂಡಾಲ್ ಸಿಗುತ್ತೆ. ಹದ್ನೈದ್ ದಿನ ಆಗ್ಬೇಕಾ? ಈ ಕಡೆ ಬರಕ್ಕೇ?ನನ್ ಮಾತಾಡ್ಸೋಕೇ”,ಅಂತ ಮೂತೀನ ಬೋರಲು ಹಾಕಿಕೊಂಡ ಚೌತಿ ಚಂದ್ರನಂತೆ ಶೇಪು ಮಾಡಿದ. ನಾನು,”ಏನ್ಮಾಡ್ಲೋ ಯಪ್ಪಾ,   ದಿನಾ ದಿನಾ ಏನೇನೋ ಎಂಗೇಜ್ಮೆಂಟ್ಸು. ಸಂಸಾರದಲ್ಲಿನ ಕೆಲಸ ಬೊಗ್ಸೆ, ಇದ್ರ ಮಧ್ಯೆ ನವ್ರಾತ್ರಿ,ಪೂಜೆ, ದೇವಿ ಮಹಾತ್ಮೆ ಇದೆಲ್ಲಾ ಓದೋದಿರುತ್ತಲ್ಲಾ. ಸಂಜೆ ಮೇಲೆ ಅಮ್ನೋರ್ ಗುಡೀಗ್ ನಡೀ, ಅಂತ ಹೀಗೇ…..ಏನೋ ಒಂದು.

ಲೈಫಲ್ಲಿ ಸ್ಟ್ರಕ್ಕಾಗ್ಬಿಟೀದೀನೋ ಮಾರಾಯಾ! ಯಾವಾಗ ಎಲ್ಲಾ ರೆಸ್ಪಾನ್ಸಿಬಿಲಿಟಿಯಿಂದ ರಿಟೈರ್ಮೆಂಟ್ ಸಿಗುತ್ತೋ.ಯಾವಾಗ್ ಆರಾಮಾಗ್ ನಿಮ್ಗುಳ್ ಜೊತೆ ಕಾಲ ಕಳಿಯೋ ಸಮಯ ಬರುತ್ತೋ ಕಾಣೆ ಕಣಪ್ಪ.ಮೋದಕ ಪ್ರಿಯಾ. ಯಾವ್ದಕ್ಕೂ ಉತ್ಸಾಹವೇ ಇಲ್ದಂಗಾಗೋಗಿದೆಯಯ್ಯಾ….”, ಅಂತ ಟೈಯರ್ಡ್ ಆದ ಭಾವನೆಯಲ್ಲಿ ಹೇಳಿಕೊಳ್ಳುತ್ತಿದ್ದೋಳು,”ಅಯ್ಯೋ ಬಿಡು, ಈ ನರಮಾನವಳಿಗೆ ಬವಣೆ ಇದ್ದಿದ್ದೇ. ನಿನ್ಗೆಂಥ ಅನುಭವಿಸೋ ಬವಣೆಯೋ ಬೆನಕಪ್ಪಾ?”, ಅಂದೆ.

ಗಣಪನ ಕಣ್ಣಿಂದ ಬಳಬಳನೇ ನೀರು ಸುರಿಯತೊಡಗಿತು.”ಇದೇನಿದೂ, ವಿಘ್‌ನೇಷಾ, ನಿನಗ್ಯಾಕೆ ಇಂಥ ಭಾವಾವೇಶ? ನೀನು ಅಳೋದಾ? ನಾನ್ ನಂಬಕ್ಕಾಗ್ತಿಲ್ಲಾ!! ಇದೇನ್ ಸತ್ಯಾನೋ, ಕನ್ಸೋ?  ಏನಪ್ಪಾ ನಿನ್ ಪ್ರಾಬ್ಲಮೂ?ಅಪ್ಪ, ಅಮ್ಮನ್ನ ನೋಡೋ ಹಂಗಾಗಿದೆಯಾ? ತಮ್ಮಂದಿರನ್ನ ಮಿಸ್ ಮಾಡ್ತಿದೀಯಾ? ಕೈಲಾಸಕ್ಕೆ ಹೋಗ್ಬೇಕಾ? ಹೋಮ್ ಸಿಕ್ಕಾ ವಿನಾಯಕಾ…..ಯಾಕಯ್ಯಾ ಈ ಶೋಕಾ?”, ಅಂತ ಶಾಕಾಗಿ ಮತ್ತೊಮ್ಮೆ ಪ್ರಶ್ನೆ ಮೇಲ್ ಪ್ರಶ್ನೆ ಹಾಕಿ ಕಂಟಿನೂಯಸ್ ಕಾಳಜಿ ತೋರ್ಸಿ  ಕೇಳಿದೆ.ಗಣೇಶ ಎಲ್ಲದಕ್ಕೂ ತಲೆ ಅಡ್ಡಡ್ಡ ಆಡಿಸಿ,”ಅಕ್ಕಾ, ಅರೆತಲೆ ನೋವಕ್ಕಾ ತಡ್ಕೊಳಕ್ಕಾಗ್ತಿಲ್ಲ”, ಅಂತ ಮುಖ ಹಿಂಡಿ ಹೇಳಿದ. ನಾನೂ,”ಏನೂ, ಮೈಗ್ರೇನಾ? ನಿಂಗ್ಯಾಕ್ ಬಂತೋ ದೇವಾ ಈ ತೊಂದ್ರೆ?”, ಅಂದೆ.ಅದಕ್ಕೆ,”ಅಕ್ಕಾ, ದಿನಾ ಪೆಂಡಾಲ್ ನಲ್ಲಿ ನನ್ ಬಲ್ಗಡೆಗೆ ಹಾಕಿರೋ ಸ್ಟೇಜ್ ಮೇಲೆ ನಡ್ಯೋ ಕಾರ್ಯಕ್ರಮದ ಸೌಂಡು  ಕೇಳೀ ಕೇಳೀ   ರೈಟ್ ಸೈಡ್ ಹೆಡ್ಡು ಸಿಡಸಿಡಾಂತ ಸಿಡ್ದೋಗ್ತಾ ಇದೆ ಕಣಕ್ಕಾ.”ಅಂದ. ನಾನು,”ಅಯ್ಯೋ……ಹೌದೇನಪ್ಪಾ? ನಿನ್ ಎಂಟರ್ಟೇನ್ಮೆಂಟಿಗೇಂತ, ನಿನ್ಗೆ ಕುಶ್ಕುಶಿಯಾಗಿ ಇಡಬೇಕೂಂತಾ ಪಾಪ ಮಂಡಲಿಯೋರು ಎಲ್ಲೆಲ್ಲಿಂದ್ಲೋ ಕಲಾಕಾರರನ್ನ  ಕರ್ಸಿ, ಸಾವ್ರಾರು ರೂಪಾಯಿ ಸುರ್ದು, ಅವ್ರ ಕೆಲ್ಸ ಕಾರ್ಯಗಳ್ನೆಲ್ಲಾ ಬಿಟ್ ಬಂದು, ನಿನ್ಗೋಸ್ಕರ ಟೈಮ್ ಕೊಟ್ಟು, ಪ್ರೋಗ್ರಾಮಗುಳ್ನ ಅರೇಂಜ್ ಮಾಡಿದಾರೆ. ನೀನೇನ್ ಅವ್ರ ಶ್ರಮಕ್ಕೆ ಮೆಚ್ಚಿಕೆ ಸೂಚಿಸೋದ್ ಬಿಟ್ಟು ಹಿಂಗ್ ವಕ್ರ ಮಾತಾಡ್ತಿದೀಯೋ ವಕ್ರತುಂಡಾ?”, ಅಂದೇ. ಅದಕ್ಕೆ ಗಣಪ,”ಅಯ್ಯಯ್ಯೋ ನಿಮ್ ದಮ್ಮಯ್ಯಾ! ನಾನ್ ಯಾವಾಗ್ ಕೇಳ್ಕಂಡಿದೀನಕ್ಕಾ ಈ ಪ್ರೋಗ್ರಾಮ್ಗುಳ್ನಾ? ಸ್ವಾಮಿ ಕಾರ್ಯಾಂತ ಹೇಳಿ, ನೀವ್ಗುಳ್ ಬೇಜಾನ್ ಮಜಾ ಮಾಡಿ, ಸ್ವಕಾರ್ಯ ಪೊರೈಸಿಕೊಳ್ತಿದೀರೀ. ಐ ಆಮ್ ನಾಟ್ ಅಟಾಲ್ ಹ್ಯಾಪಿ.ದಿಸ್ ಪ್ರೋಗ್ರಾಮ್ಸ್‌ ಆರ್ ರೈಸಿಂಗ್ ಮೈ ಬಿಪಿ”, ಅಂದು,”ಏನಕ್ಕಾ, ವಾರುಕ್ ನಾಕ್ ನಾಕ್ ಆರ್ಕೇಸ್ಟ್ರಾ ಮತ್ತೆ ಕುಣಿತದ್ ಪ್ರೋಗ್ರಾಮೂ!ಅಬ್ಬಬ್ಬಬ್ಬಬ್ಬಾ, ಆ ಬೀಟ್ಸೂ, ಆ ನಾಯ್ಸೂ,ಆ ವಾಯ್ಸ್ ಗೆ, ನನ್ ಪುಣ್ಯ, ಇನ್ನೂ ಕಿವಿ ತೂತ್ ಬಿದ್ದಿಲ್ಲ.ಇದ್ರ ಜೊತ್ಗೆ ಅದೇನ್ ಸ್ಟೇಜ್ ಅದುರೋ ಹಂಗೆ ಹುಚ್ಚುಚ್ಚು ಕುಣಿತಾ,ಆ ಚಿತ್ರ ವಿಚಿತ್ರ ಉಪೇಂದ್ರನ ವೇಷ  ಮೀರ್ಸೋ ಕಾಸ್ಟೂಮ್ಸೂ!ಅಲ್ಲ ಕಣಕ್ಕಾ, ನಾನು ಬ್ರಹ್ಮಚಾರೀಂತ ಗೊತ್ತಿದ್ದೂ, ಅದೇನ್ ಹೆಣ್ಮಕ್ಕಳು ಎಂತೆಂಥವೋ ತುಂಡುಡುಗೆ ಹಾಕೊಂಡ್ , ಗಂಡು ಮಕ್ಕಳು ಚಿತ್ರವಿಚಿತ್ರವಾಗಿ ಬಾಲಿವುಡ್ಡು, ಹಾಲಿವುಡ್ಡು, ಸ್ಯಾಂಡಲ್ವುಡ್ಡು, ಕಾಲಿವುಡ್ಡೂ, ಟಾಲಿವುಡ್ಡೂ ಎಲ್ಲಾ ವುಡ್ಡುಗಳ ಟಪಾಂಗುಚ್ಚಿ, ಐಟಮ್ ಸಾಂಗುಗಳಿಗೆ ನನ್ನ ಮುಂದೆ  ನುಲಿಯುವುದೂ, ಕುಣಿಯುವುದೂ…….ಅಬ್ಬಬ್ಬಬ್ಬಬ್ಬಾ, ಇದೆಲ್ಲಾ ನೋಡ್ಲಾರ್ದೆ, ನಾನೇ ಹೋಗಿ ಹೊಳೆಗೆ ಹಾರ್ಕೊಂಬಿಡೋಣಾಂತ ಎಷ್ಟೋ ಸಾರಿ ಅನ್ಸುತ್ತೆ.ಏನೋ ಇದ್ರ ಮಧ್ಯ ಅಲ್ಲಿ ಇಲ್ಲಿ ಒಂದೊಂದಿನ ಹರಿಕಥೆ, ಭಕ್ತಿಗೀತೆ, ಭರತನಾಟ್ಯ, ಯಕ್ಷಗಾನ ಇಂಥವು ನನ್ ತಲೆ ನೋವಿಗೆ ಸ್ವಲ್ಪ ಮುಲಾಮು ಹಚ್ದಂತೆ ಹಾಯನ್ಸುತ್ತೆ ಅಷ್ಟೇ”, ಅಂದ. ಅದಕ್ಕೆ ನಾನು,”ಅಷ್ಟು ದೊಡ್ಡದಾಗಿ ಮೊರದಗಲ ಕರ್ಣಗಳಿದೆ ಸುಮ್ನೆ ಅವುಗಳ್ನ ಮುಚ್ಕೊಂಡು ಶಿವಾ….ಂತ  ಕೂತ್ಬಿಡೋದಲ್ವೇನಪ್ಪಾ ಗಜಕರ್ಣಾ? “ಅಂದೆ. ಅದಕ್ಕೆ ಈ ಶೂರ್ಪಕರ್ಣ ತನ್  ಕೆಂಪಗಾದ ಕಣ್ಬಿಟ್ಟು,”ಏನಕ್ಕಾ ನಿನ್ಗೆ ತಮಾಷೆ ಮಾಡೋಕೆ ಟೈಮ್ ಸೆನ್ಸೂ ಇಲ್ವಾ?ನಾನ್ ಪಡ್ತಿರೋ ಪಾಡ್ನ ಹೇಳ್ಕೊಂಡ್ರೆ, ನಿನ್ಗೆ ನಿನ್ದೇ ಕಾಮಿಡಿ, ಏ……ಹೋಗಕ್ಕಾ ನೀನೊಂದು ”, ಅಂತ ಉಗ್ರನಾಗಿ ಬೈದೇಬಿಟ್ನಾ…!  ನನಗಿದು ಬೇಕಿತ್ತೇ? ಅಂತ ನಾನೇ ಸಮಾಧಾನ ಮಾಡಿಕೊಂಡು,”ನಿನ್ ಮನ್ಸಿಗೆ ನೋವಾಗಿದ್ರೆ ಕ್ಷಮಿಸಪ್ಪಾ,ಬುದ್ದಿ ಇಲ್ದೆ ಮಾತಾಡ್ದೆ ಕಣೋ ಸಿದ್ದಿ ವಿನಾಯಕ”, ಅಂದು ಎರಡು ಕಪಾಳಕ್ಕೆ ನಾನೇ ಹೊಡೆದುಕೊಂಡೆ.” ಹೋಗ್ಲಿ ಬಿಡಕ್ಕಾ, ನಾನೂ ಸದರದಲ್ಲಿ ಬೈದೇ”, ಅಂತ, ಸಮಾಧಾನ ಮಾಡಿಕೊಂಡು ಮತ್ತೆ ತನ್ನ  ಅಸಮಾಧಾನ ತೋಡಿಕೊಳ್ಳೋಕೆ ಶುರುಮಾಡಿಕೊಂಡ.”ಅದ್ ಹೋಗ್ಲೀಂದ್ರೆ, ಇವ್ರ ಕುಣಿತವೆಲ್ಲ ಮುಗಿದು,ಅಷ್ಟು ಸ್ಟೇಜೆಲ್ಲಾ ಅದ್ರಿ ಹೋಗುವಂತೆ  ಕುಣಿದಿದ್ದಕ್ಕೆ ಅವರಿಗೆ ಹಾರ ,ತುರಾಯಿ, ಹಣ್ಣು ಕಾಯಿಯೊಂದಿಗೆ ಆನರ್ ಮಾಡಿ, ಎಲ್ಲರನ್ನ ಮನೆಗೆ ಕಳಿಸಿ, ನನಗೆ ತೆರೆ ಎಳೆಯುವ ಹೊತ್ತಿಗೆ ಮಧ್ಯರಾತ್ರಿ ದಾಟ್ಹೋಗುತ್ತೆ.

ನಿನ್ ಹತ್ರ ನಿಜ ಹೇಳ್ತೀನಕ್ಕಾ, ಕಣ್ ತುಂಬ ನಿದ್ದೆ ಮಾಡಿ ಎರಡ್ ವಾರದ್ ಮೇಲಾಯ್ತು. ಏನೋ ಕಣಕ್ಕಾ ಈ ಪಿರಿಪಿರಿ ನನ್ಗೆ ಸರಿ ಹೋಗ್ತಲೇ ಇಲ್ಲ.”ಅಂದ ನೊಂದು ನುಡಿದ ಕರಿವದನ!

 ನಾನು,”ನಿಜ ಕಣೋ, ನಾನೂ ಇಲ್ಲಿಗೆ ಬಂದ್ ನಿನ್ ಮಾತಾಡ್ಸದೇ ಇರೋಕೆ, ಅದೂ ಒಂದ್ ಕಾರ್ಣ! ಆರ್ಕೇಸ್ಟ್ರಾ ಶುರ್ವಾಗ ಅರ್ಧ ಗಂಟೆ ಮುಂಚಿಂದ್ಲೇ ಅರ್ಧ ಮುಕ್ಕಾಲ್ ಊರ್ ಜನಾ ಎಲ್ಲಾ ಇಲ್ಲೇ ಸೇರ್ಕೊಂಡು, ಒಂದು ಗುಂಡ್ ಸೂಜೀನೂ ನುಸ್ಳೋಕೆ ಆಗ್ದಿರುವಷ್ಟು ಜನಜಾತ್ರೆ. ಆ ಜಾತ್ರೆ ಸಂದೀಲ್ ಬಂದು, ನಾನ್ ನಿನ್ನ ಹತ್ರ  ಮಾತಾಡೋದಾದ್ರೂ ಹಂಗೇಳೋ ಗೌರೀಪುತ್ರಾ? “, ಅಂದೆ. ಅದಕ್ಕೆ,”ಅದೂ ಸರೀನೇ.ಹೋಗ್ಲಿ ಬಿಡಕ್ಕಾ. ನಂಗಂತೂ ಅನುಭವಿಸ್ದೆ ಬೇರೆ ದಾರಿ ಇಲ್ಲ. ನೀನಾದ್ರೂ ಮನೇಲಿ ನೆಮ್ದೀಲಿರು”, ಅಂದ.ನಾನು,”ಅಯ್ಯೋ ಮನೇ ಹತ್ರ ಮಾತ್ರುಕ್ಕೆ ಏ…..ನ್ ನೆಮ್ದಿ ಬಿಡು. ಸೋ ಕಾಲ್ಡ್ ನಿನ್ ಭಕ್ತರ್ ಟಾರ್ಚರ್ ತಡ್ಕೊಳಕ್ಕಾಗ್ತಿಲ್ಲ ಕಣಪ್ಪಾ. ನಾನು ರೋಸೋಗ್ಬಿಟಿದೀನೋ ಲಂಬೋದರಾ…”, ಅಂದೆ. ಅದಕ್ಕೆ ಗಣಪ,”ಯಾಕಕ್ಕಾ ನನ್ ಭಕ್ತರಿಂದ  ನಿಂಗೇನಂಥ ಪ್ರಾಬ್ಲಮ್?”, ಅಂದ.

ಅದಕ್ಕೆ,”ಅಲ್ವೋ ಮರೀ, ದಿನ್ದಿನಾ ನಿನ್ ಹೆಸ್ರೇಳ್ಕೊಂಡು ಒಳ್ಳೆ ರೌಡಿಗಳ ಥರ ಹಫ಼್ತಾ ವಸೂಲಿ ಮಾಡೋ ರೀತೀಲಿ  ಮನೆಯೊಳಗೆ ನುಗ್ಗೋ ಹಂಗೇ ಬರ್ತಾರೆ ಕಣೋ. ಅವ್ರನ್ನ ನೋಡಿದ್ರೆ,ನಿನ್ ಭಕ್ತರೂಂತ ಹೇಳ್ಕೊಳಕ್ಕೆ ನಿನ್ಗೂ ನಾಚ್ಗೆ ಆಗೋಗುತ್ತೆ ಗ್ಯಾರಂಟಿ.ಹಿಂಗೆ ಮೊನ್ನೆ ನಾಕ್ ಜನ ಹುಡುಗ್ರು ಜೋರಾಗಿ ಗೇಟ್ ತೆಗ್ದು, ಬಂದು,ಲಾಂ….ಗು ಕಾಲಿಂಗ್ ಬೆಲ್ಲು ಹೊಡುದ್ರು.ಮಹಡಿ ಮೇಲಿದ್ದೋಳು ಒಂದೇ ಉಸ್ರಿಗೆ ದಡದಡ ಕೆಳಗೋಡಿ ಬಂದು ಬಾಗಿಲು ತೆಗ್ದೆ. “ಮೇಡಾ…….ಮ್ ಹೌಸಿಂಗ್ ಬೋರ್ಡಿನಲ್ಲಿ ಗಣಪನ್ನ  ಕೂರ್ಸಿದೀವ್ರೀ. ಟೂ…ಮಚ್ಚೇನ್ ಬೇ..ಡಾ,

ಎರಡು ಸಾವಿರ ಕಾಣಿಕೆ ಕೊಡಿ, ರಸೀತಿ ಬರ್ದು, ನಿಮ್ ಹೆಸ್ರಲ್ಲಿ ಪೂಜೆ ಮಾಡ್ಸಿ, ಭಕ್ತಮಹಾಶಯರಿಗೆ ಪ್ರಸಾದ ಹಂಚೀ, ಹಾಗೆ ನಿಮ್ಗೆ ಪ್ರಸಾದಾನೂ ಮನೆ ಬಾಗ್ಲಿಗೇ ತಂದ್ ಕೊಡ್ತೀವೀ”, ಅಂತ ಪೂರಾ ಪ್ಯಾಕೇಜ್ ರೇಟ್ನ ತುಂಬಾ ನೀಯತ್ತಾಗ್ ಹೇಳಿ, ಬಡಾ…… ಮನ್ಸು ತೋರ್ಸುದ್ರು. ನಾನು,”ಊರಿನ ದೊಡ್ಡ ಗಣಪತಿಗೆ ನಾವು ಪೂಜೆ ಮಾಡುಸ್ತೀವಲ್ಲಾಪ್ಪಾ, ನಮ್ಗೆ ಅದೇ ಸಾಕು. ನೀವೂ ಕೂಡಾ ನಿಮ್ ಸೇವೆ ಏನಿದೆಯೋ ಅದನ್ನ ಆ ಗಣಪತಿಗೇ ಮಾಡಬಹುದಲ್ಲಾ”, ಅಂದೆ.ಹಂಗಂದಿದ್ದೇ ತಡ,ಇದ್ಕಿದಂಗೆ ಮುಖದ್ ಶೇಪೇ ಚೇಂಜ್ ಆಗೋದೇ??? ಮುಸುಡೀನ ಒಂಥರಾ ಸೀರಿಯಸ್ಸಾಗ್ ಮಾಡ್ಕೊಂಡು,ಕೆಕ್ಕರಿಸಿ ನೋಡುತ್ತಾ,

ದುರ್ದಾನ ತೆಗೆದುಕೊಂಡವರಂತೆ, ಸಿರ್ ಎಂದು ಬಾಡೀನ ಹಂಗೇ….ರಿವರ್ಸ್ ತಿರುಗಿಸ್ಕೊಂಡು ಗೇಟನ್ನ ದಢಾರ್ ಅಂತ ಹಾಕಿ, ತಮ್ಮ ಜರ್ದಾ ತುಂಬಿದ ಬಾಯಲ್ಲಿ,”ತೂ ಇವ್ರ್ ಮುಕಾ ಮುಚ್ಚಾ….. ನೋಡಕ್ಕೆ ಅಷ್ಟ್ ದೊಡ್ಡ ಮನೇಲಿದಾರೆ, ದೇವುರ್ಗೆ ಖರ್ಚು ಮಾಡಿ  ಅಂದ್ರೂನೂವಾ, ಕಾಸು ಬಿಚ್ಚ ಯೋಗ್ತಿ ಇಲ್ದಿರಾ ವೇಸ್ಟ್ ಬಿಕನಾಸಿಗುಳೂ”, ಅಂತ ಜರ್ದಾ ತುಂಬಿದ್ ಬಾಯಿಂದ ನಿನ್ಗೆ ಪೂಜೆ ಮಾಡುಸ್ದೇ ಇದ್ ಕೋಪುಕ್ಕೆ ನನ್ಗೆ ಸಖತ್ತಾಗ್ ಪೂಜೆ ಮಾಡಿ ತುಪುಕ್ ಅಂತ ಉಗಿದು ಹೋಗಬೇಕೇ? ಎಂಥಾ ಭಕ್ತರೋ ಗಣೇಶ?

ಈ ಪೋಕ್ರಿಗುಳ್ ಹತ್ರ ನಮ್ಗೆ ದಿನ ದಿನಾ ಅಷ್ಟೋತ್ತರ, ಶತನಾಮಾವಳಿ, ಮಹಾ ಮಂಗಳಾರತಿ!ಬೇಕಾ  ಗಣೇಶಾ? ಅದ್ರೂ, ಸಾವಿರಗಳಿಗೆ ಬೆಲೆನೇ     ಇಲ್ವೇನಪ್ಪಾ? ಪ್ರತಿ ದಿನ ಬೀದಿ ಬೀದಿಗಳಲ್ಲಿ ಗಣಪತಿ   ಇಟ್ಟೋರು   ವಸೂಲಿಗೆ ಬರ್ತಿದ್ರೆ,ಕುಡಿಕೆ ಹೊನ್ನಿದ್ರೂ ಸಾಲ್ದು ಕಣಯ್ಯಾ.ಹಿಂಗಿದ್ದಾಗ,ನಮ್ ಹೋಮ್ ಗೇ ಬಂದು ನಮ್ಗೆ  ಉಗ್ದೋಗೋದು ಯಾವ್  ನ್ಯಾಯ್ವೋ ಮಹರಾಯಾ?ಇವ್ರು ಕೇಳ್ ಕೇಳ್ದಷ್ಟು ದುಡ್ ಕೊಡಕ್ಕೆ ನಮ್ ಮನೇಲ್ ಏನ್ ಮನಿ ಗಾಡೆಸ್ ಲೆಗ್ ಫ್ರಾಕ್ಚರ್ ಮಾಡ್ಕೊಂಡು ಕೂತಿದ್ದಾಳ್ಯೇ??? ನಮ್ ಕಷ್ಟ ನಮ್ಗೇ,ಯಾರಿಗ್ ಹೇಳೋದೋ ಮಾತಂಗವದನಾ?

”,ಅಂತ ನನ್ನ ಅಸಮಾಧಾನವನ್ನ ತೋಡ್ಕೊಂಡೆ. ಅದಕ್ಕೆ ಗಣಪ ತಾನೇ ಏನೂಂತ ಮಾಡ್ತಾನೇ? ಅಸಹಾಯಕ! ,”ಯಾಕೋ ಇತ್ತೀಚೆಗೆ ನನ್ ಹಬ್ಬ ಬಂದ್ರೆ ಯಾವ್ ಥ್ರಿಲ್ಲೂ ಆಗಲ್ಲ ಕಣಕ್ಕ. ಏನೋ, ಶಾಸ್ತ್ರಕ್ಕೆ ಬಂದಾ ಪುಟ್ಟಾ, ಇದ್ದಾ ಪುಟ್ಟಾ,ಹೋದಾ ಪುಟ್ಟಾ , ಅನ್ನೋ ಹಂಗಾಗಿದೆ. ಯಾವಾಗಿಂದ್ಲೋ  ನಡುಸ್ಕೊಂಬಂದಿರೋ ಪದ್ದತಿ ಬಿಡ್ಬಾರ್ದಲ್ಲಾ ಅಂದ್ಕೊಂಡ್ ಬರ್ಬೇಕು, ಬರ್ತೀನಷ್ಟೇ”, ಅಂತ ಮುಖ ಸಣ್ಣಗೆ ಮಾಡಿಕೊಂಡು,”ಇನ್ನೊಂದ್ ವಿಷ್ಯ ಕಣಕ್ಕಾ, ಅಲ್ಲಾ ಬೀದಿಬೀದಿ ಗಣೇಶರನ್ನ ಉತ್ಸವ ಕರಕೋಂಡ್ ಹೋಗ್ತಾ,ಅದೇನಕ್ಕಾ ಹೆಂಗುಸ್ರು, ಉತ್ಸವಕ್ಕಾದ್ರೂ ಅಟ್ಲೀಸ್ಟ್ ಅಚ್ಕಟ್ಟಾಗ್ ಸೀರೆ ಉಟ್ಕೊಂಬರ್ಬಾರ್ದೇನಕ್ಕಾ? ಕೊನೆ ಪಕ್ಷ ಚೂಡೀ! ಅದೂ ಬೇಡ ಮಿಡಿ, ಮ್ಯಾಕ್ಸಿ, ಜೀನ್ಸೂ????

ಶಿವ ಶಿವಾ…..!ಅಯ್ಯೋ…..ಸಾರಿ,ಸಾರಿ, ಹೆಂಗ್ಸರ ಸಾರಿ  ವಿಷ್ಯ ಅಲ್ವೇ, ಇಲ್ಲಿ ನಮ್ಮ್ ಡ್ಯಾಡೀನ್ ಯಾಕ್ ನೆನೆಸ್ಕೋಬೇಕೂ?

ಓ ಮೈ ಗ್ರೇ..ಟ್ ಮಮ್ಮೀ……ಏನಕ್ಕಾ ಇವ್ರ ವೇಷಾ?

ಹೆಂಗುಸ್ರು ನೈಟಿ ಮೇಲೊಂದ್ ಟವಲ್ಲು, ಗಂಡುಸ್ರು ನೈನ್ಟಿ ಮೇಲ್ ನೈಂಟಿ ಮೇಲ್ ಮತ್ತೊಂದ್ ನೈಂಟಿ ಸುರ್ಕೊಂಡು ಪ್ರೊಸೆಷನ್ ನಲ್ಲಿ ನನ್ ಮುಂದೆ ಗುಡ್ಡೆ ಹಾಕೊಂಡ್ ತೂರಾಡ್ಕೊಂಡ್ ಹೋಗ್ತಾ ಇದ್ರೆ, ನನ್ ಕಣ್ಣ್ ಹಂಗೇ…..ಇಂಗೋಗದ್ ಒಂದೇ ಬಾಕಿ ಕಣಕ್ಕಾ!ಆನ್ ರೋಡ್ ಮೊಬೈಲ್ ಗಡಂಗು, ಪಬ್ಬು, ಬಾರ್ ನೋಡ್ದಂಗೆ ಫೀಲ್ ಆಗುತ್ತಲ್ಲಕ್ಕಾ! ಗಬ್ಬೋ…. ಗಬ್ಬೂ!”ಅಂತ ಮುಖ ಸಿಂಡರಿಸಿದ ಗಜವದನ. ಅದಕ್ಕೆ ಏನಾದ್ರೂ ಸರಿ, ನಮ್ಮವ್ರನ್ನ ನಾನೇ ಬಿಟ್ಕೊಡೋದಾದ್ರೂ ಹೆಂಗೇಂತ,”ಏ……ಸುಮ್ನಿರಪ್ಪ ನೀನು ಎಲ್ಲಾದುಕ್ಕೂ ಕ್ಯಾತೆ ತೆಗೀಬೇಡ. ಅಲ್ಲ ಕಣೋ ಗಣೇಶ ನಿನ್ಗೆ ಉತ್ಸವ ಮಾಡೋದೇ ನೈಟು. ಆಗ ನೈಟಿ, ನೈನ್ಟಿ ಹಾಕೋದ್ರಲ್ಲಿ ಏನ್ ತಪ್ಪಿದೇಂತ ಹಿಂಗೇ ಸುಮ್ಸುಮ್ನೆ ತಪ್ ಹುಡುಕ್ತೀಯಾ?”, ಅಂದೆ. ಉ……ಫ್ ಅಂತ ಜೋರಾಗಿ ತನ್ನ ಹೊಟ್ಟೆಯೆಲ್ಲಾ ಅದ್ರುವಂಗೆ ಉಸ್ರು ಬಿಟ್ಟು, ಕಣ್ಣನ್ನ ಮೇಲಕ್ಕೆ ತೇಲಿಸಿದ ಈಶ ಪುತ್ರ,”ಅಕ್ಕಾ ಅದೇನ್ ಹುಟ್ತಾ ಹುಟ್ತಾನೇ ಕೊಂಕಿನ್ ಮಾತ್ನ ಸ್ವಂತುಕ್ಕೇ ತಗೊಂಡು ಬಂದ್ಬಿಟಿದೀಯಾಂತ ಕಾಣುತ್ತೆ.ನೀನೂ ನನ್ ಹೆಡ್ಡೇಕಿಗೆ ಇನ್ನೊಂದು ರೀಸನ್ ಆಗ್ದೆ, ಸುಮ್ನೆ ಜಾಗ ಖಾಲಿ ಮಾಡು.ಏನ್ ಗ್ರೇ…..ಟ್  ಸಪೋರ್ಟ್ ಸಿಸ್ಟಮ್ ಅಪ್ಪಾ…..ನಿಂದೂ”, ಅಂತ ಹಣೆಹಣೇನ ಚಚ್ಕೊಂಡೇಬಿಟ್ಟು, ಮತ್ ಏನೋ ನೆನೆಸಿಕೊಂಡೋನಂತೆ ತನ್ ಸಂಕಷ್ಟ ಹೇಳೋಕೆ ಕಂಟಿನ್ಯೂ ಮಾಡ್ದ ನಮ್ಮ ಶ್ರೀಕಂಠಸುತ.

“ಇನ್ನು ಪಪ್ಪಾ ಪಪ್ಪಾ……..ಎಂಥ ಗಟ್ಟಿ ಗುಂಡಿಗೇನೂ ಗಡಗಡಗಡಾಂತ ನಡುಗಿಸೋ ಡಿಜೇ! ಹಾರ್ಟು ವೀಕಾಗಿರೋ ಜನ್ರಿಗೆ,ಆ ಸದ್ದು ಕೇಳಿ, ಹೃದಯ ಡಬಲ್ ಸ್ಪೀಡಲ್ಲಿ ಬಡ್ಕೊಂಡು,ಗಂಟೆಗಟ್ಟಲೆ ಸುಧಾರಿಸಿಕೊಳ್ಳೋ ದುಸ್ಥಿತಿ! ಇನ್ ಕೆಲ್ವರಿಗಂತೂ ಸೀದಾ ಆಸ್ಪತ್ರೆಗೋಗ ಹೀನಸ್ಥಿತಿ!ನಿಂಗೊತ್ತಾಕ್ಕಾ? ಕೆಲವ್ರ ಮನೆ ಕಿಟ್ಕಿ ಗಾಜೆಲ್ಲಾ ಫಳ್ ಅಂತ ಸೀಳೋಗವಂತೆ! ಇನ್ ನಾಯಿ, ಬೆಕ್ಕುಗುಳು ಈ ಡರಡರ ಸದ್ಗೆ ಚಳಿ ಜ್ವರ ಬಂದಂಗೆ ಮನೇಲಿರೋ ಸೋಫಾ ಸಂದೀ ಸೇರ್ಕೊಂಡು ಗಡಗಡ ನಡುಗ್ತಾ ಕುಂತಿರ್ತವಂತೆ! ಎಲ್ಲ್ರುಗೂ ತೊಂದ್ರೆ ಆಗೋ

ಈ ಕರ್ಮಕಾಂಡವೆಲ್ಲಾ ನನ್ಗೆ ಪ್ರೀತೀ ಅಂತ ಯಾವ ಪುರಾಣದಲ್ಲಿ ಉಲ್ಲೇಖವಾಗಿದೆ ಪ್ಲೀಸ್ ನೀನಾದ್ರೂ ತಿಳ್ಸಕ್ಕಾ! ಉತ್ಸವ ಮುಗಿಸಿ ನನ್ ನೀರಲ್ಲಿ ಮುಳುಗ್ಸಿ ಬರೋ ಹೊತ್ಗೆ, ಈ ಪೀವರ್ಟು ಮಹಾಶಯರೂ ನಶೆಯಲ್ಲಿ ಮುಳುಗಿ ರಸ್ತೆ ರಸ್ತೆಯಲ್ಲಿ ಪ್ರಜ್ಞೆ ಇಲ್ದೇ ಬಿದ್ ಒದ್ದಾಡ್ತಿರೋದು ನೋಡುದ್ರೆ, ಅಕಟಕಟಾ……ಯಾವ್ ಶೋಕಿಯಕ್ಕಾ ಈ ಜನ್ರುದೂ? ಅಲ್ಲಾ ಈ ಜನ್ರಿಗೆ ಒಂದ್ ಸಂಭ್ರಮವನ್ನು ಆಚರಿಸೋಕೆ ಒಂದು ರೀತೀ ರಿವಾಜ಼ು ಬೇಡ್ವಾ? ಒಂದು ಮೌಲ್ಯ ಬೇಡ್ವಾ? ಒಂದು ಸಂಸ್ಕಾರ ಬೇಡ್ವಾ? ಇನ್ನು ಮೆರವಣಿಗೇಲಿ ಉದ್ದುಕ್ಕೂ ಪಟಾಕಿ ಹೊಡ್ಕೋತಾ ಬೇರೆ ಹೋಗ್ತಾರಾ? ಹೊಗೆ ನನ್ ಮೂಗಿಗೇ ಬಡ್ದು, ಉಸ್ರಾಡೋಕೇ ಕಷ್ಟವಾಗುತ್ತೆ. ಆ ಡಮಾರ್ ಡಮಾರ್ ಸದ್ ಕೇಳೀ ಕೇಳೀ ಕಿವಿ ತಮ್ಟೆಯೆಲ್ಲಾ ನೋಯ್ತಾ ಅವೆ ಕಣಕ್ಕೋ!

ಇದೆಲ್ಲಾ ಸಾಲ್ದೂಂತ ಈಗ ಹೊಸ್ದಾಗಿ ಬೀದಿಯುದ್ಕೂ ಲೇಸರ್ ಲೈಟು ಬೇರೆ ಬಿಟ್ಕೊಂಡ್ ಹೋಗೋದು ಇನ್ನೊಂದು ಸ್ಟೈಲಾಗೋಗಿದೆ. ನನ್ ಕಡೆಗೆ ಲೈಟು ಫೋಕಸ್ ಮಾಡೀ ಮಾಡೀ, ನನ್ ಕಣ್ಣೆಲ್ಲಾ ಆ ಬ್ರೈಟ್  ಲೈಟಿಗೆ  ಚುಚ್ಚೀಚುಚ್ಚೀ, ಅದ್ರ ಪೇನ್ ಒಂದ್ ಕಡೆ.ನನ್ ಭಕ್ತರೂಂತ ಇರೋರು ಈ ಕೆಲ್ಸಗಳ್ನ ಮಾಡ್ತಿದ್ರೆ, ನಾನು ಯಾರಿಗೇಳ್ಕೊಳ್ಳೋಕೂ ಅವಮಾನ ಅಲ್ವೇನಕ್ಕಾ? ಈ ಕರ್ಮಕಾಂಡವೆಲ್ಲಾ ನೋಡೀ ನೋಡೀ,”ಎನ್ನ ಕಿವುಡನ ಮಾಡಯ್ಯಾ ತಂದೆ, ಎನ್ನ ಮೂಗನ ಮಾಡಯ್ಯ ತಂದೆ, ಎನ್ನ ಕುರುಡನ ಮಾಡಯ್ಯಾ ತಂದೆ”, ಅಂತ ದಿನಾ ಶಿವಪ್ಪನ ಬೇಡ್ಕೊಳ್ಳೋದೇ ಆಗೋಗಿದೆ. ನೀವುಗುಳು ನನ್ ಹಬ್ಬಾಂತ ಸ್ಪೆಷಲ್ಲಾಗಿ ಏನೂ ಮಾಡೋದೂ ಬೇಡ, ಈ ವಿಪರೀತಗಳ್ನ ನಾನು ನೋಡೋದೂ ಬೇಡ ಕಣಕ್ಕಾ. ಸಾಕಪ್ಪಾ ಸಾಕು ಈ ಘೋರಾ”,

, ಅಂತ ನನ್ ಭುಜದ ಮೇಲೆ ತಲೆ ಇಟ್ಟು ಬಿಕ್ಕಿಬಿಕ್ಕಿ ಅಳೋಕೇ ಶುರುಮಾಡಿದ ಧೂಮ್ರವರ್ಣ.ನಾನು,”ಬೇಡ್ವೋ ಬಂಗಾರ. ಕಂಟ್ರೋಲ್ ಮಾಡ್ಕೋಪ್ಪಾ!   ಏನೂ ಮಾಡಕ್ಕಾಗಲ್ಲ ಕಣೋ,ಅದೇನೋ ಹೇಳ್ತಾರಲ್ಲಾ, ಬೆತ್ತಲೆ ಸಾಮ್ರಾಜ್ಯದಲ್ಲಿ ಬಟ್ಟೆ ಹಾಕೊಂಡೋನೇ ಮೂರ್ಖ, ಅನ್ನೋಹಂಗೆ, ಜನ್ರ ಅಭಿರುಚಿ ಬದಲಾಗ್ತಾ ಇದ್ದ್ ಹಾಗೇ, ನಾವೂ ಗೋ ವಿತ್ ದ ವಿಂಡ್ ಅಂದ್ಕೋತಾ , ಗುಂಪ್ನಲ್ಲಿ ಗೋವಿಂದಾ ಅಂದ್ಕೊಂ……ಡ್ ಹೋಗ್ಬೇಕಯ್ಯಾ!ಬೇರೆ ಏನಿದೆ ಚಾಯ್ಸು ಹೇಳೂ?ಏನಾದ್ರಾಗಲಿ, ನಿನ್ ಮಾತಲ್ಲಿ ಎಳ್ಳಷ್ಟೂ ಉತ್ಪ್ರೇಕ್ಷೆ ಇಲ್ಲ. ನಮ್ಮಂಥೋರಿಗೆ ಇದೆಲ್ಲಾ ನೋಡೋಕೆ ಕಷ್ಟವಾದ್ರೆ, ಪಾಪ, ನಿನ್ ಪರಿಸ್ಥಿತಿ ನನ್ಗರ್ಥವಾಗ್ತಿದೆ. ನಿನ್ ಫಜೀತಿ ನೋಡಿ ಅಳು ಬರ್ತಿದೆ ಗಣಪತೀ”

”ಅಂತ ಸಿದ್ದಿಬುದ್ದಿ ವಿನಾಯಕನಿಗೆ ಬಿಟ್ಟಿ ಉಪದೇಶ ಕೊಟ್ಟು ಕೃತಾರ್ಥಳಾದೆ. ಗಣಪನ ನೋವಿಗೆ ನನಗೂ ಫೀಲ್ ಆದರೂ, ಏನೂ ಮಾಡಲಾರದ ನಿಸ್ಸಹಾಯಕಳಾಗಿ ಎರಡು ತೊಟ್ಟು ಟಪಕ್ ಟಪಕ್ ಅಂತ ಕಣ್ಣೀರು ಹಾಕಿ ನೊಂದು ನುಡಿದೆ.”ಇನ್ನು ನನ್ಗೆ ಇಲ್ಲ ಸಲ್ಲದ್ ಹಾಳು ರಾಸಾಯನಿಕ ಬಣ್ಣಗಳ್ನೆಲ್ಲಾ  ನನ್ ಬಾಡೀಗ್ ಬಳ್ದು, ನನ್ನ ನ್ಯಾಚುರಲ್ ಬ್ಯೂಟಿಯನ್ನ ಹಾಳ್ ಮಾಡೋದಲ್ದೇ, ನನ್ ಅದೇ ಅವ್ತಾರ್ದಲ್ಲಿ ನೀರಿಗ್ ಬಿಟ್ಟು ಪರಿಸರಾನೂ ಹಾಳ್ ಮಾಡಿ, ನಿಮ್ ಅವ್ನತೀನೂ ನೀವೇ ತಂದ್ಕೋತಿರೋದು ನೋಡುದ್ರೇ, ನೀವೆಷ್ಟು ಅತಿ ಬುದ್ದಿವಂತ್ರೂಂತ ನನ್ ಮನ್ಸಿಗೇ ಖೇದವಾಗುತ್ತೆ! ಯಾವ್ ಕೇಡ್ಗಾಲುಕ್ಕೆ ಹಿಂಗೆಲ್ಲಾ ಆಡ್ತೀರೋ, ಅಷ್ಟು ಮಾತ್ರ ಕಾಮನ್ ಸೆನ್ಸಿಲ್ಲದಿರೋ ವಿಪರೀತ ಬುದ್ದಿಯೋರು, ನೀವು ನರಮಾನವರು”, ಅಂತ ಸ್ವಲ್ಪ ಖಾರವಾಗೇ ಮಾತಾಡಿ ಸರ್ಯಾಗೇ ಕ್ಲಾಸು ತಗೊಂಡ ಹೇರಂಭ!ಯಾಕೋ ಈ ದಿನ ಬೆಳಗ್ಗೆ ಯಾವ ಕಡೆ ಎದ್ನೋ? ಹಾಗೇ ಸಾವಾರಿಸ್ಕೊಂಡು,”ಅದ್ಕೇ ಕಣಪ್ಪಾ ಈಗೀಗ ಇಕೋ ಫ್ರೆಂಡ್ಲಿ ಗಣಪ, ಸೀಡ್ ಗಣಪ, ಟರ್ಮರಿಕ್ ಗಣಪನ್ನ ಮಾಡೋಕೆ ಶುರು ಮಾಡಿದ್ದೀವಲ್ಲಪ್ಪಾ!ಇವುಗಳಿಗೀಗ ಹೊಸ ಅಡಿಷನ್ನೂಂತ ಚಾಕಲೇಟ್ ಗಣಪ ಎಂಟ್ರಿ ಕೊಟ್ಟಿದಾನೆ. ಇನ್ನು ಬೆಲ್ಲದ ಗಣಪಾನೂ ಶುರು ಮಾಡಿದಾರೆ ಆಲೆಮನೆ ಮಂದಿ. ಮುಂದುಕ್ಕೆ ಸಕ್ಕರೆ ಗಣಪ, ಆರ್ಗ್ಯಾನಿಕ್ ಬೆಲ್ಲದ ಗಣಪ, ತಾಟಿ ಬೆಲ್ಲದ ಗಣಪ,ತಂಬಿಟ್ಟಿನ್ ಗಣಪ, ಪ್ರೋಟೀನ್ ಗಣಪ, ಮಿಲೆಟ್ ಗಣಪ ಅಂತ ಇನ್ ಯಾವ್ಯಾವ್ ರೂಪ್ದಲ್ಲಿ ನಿನ್ನ ಸೃಷ್ಟಿಸಿ ನಮ್ ಹೊಟ್ಯೆಗೇ ನಿನ್ ಸೇರ್ಸಿಕೊಳ್ತೀವೋ ……ಏನೋ……ಗೊತ್ತಿಲ್ಲ ಕಣಯ್ಯ ಲಂಬೋದರ”,ಅಂದೆ.ಅದಕ್ಕೆ ಗಣಪಯ್ಯ ವ್ಯಂಗ್ಯವಾಗಿ ನಕ್ಕು,”ಹೂ ಹೂ ಮಾಡ್ತೀರಿ ಬಿಡಿ. ನೀವುಗಳು ನರಮನುಷ್ಯರೇನು ಸಾಮಾನ್ಯವೇ?ಬಿಟ್ರೆ ನಿಮ್ನೆಲ್ಲಾ ಸೃಷ್ಟಿ ಮಾಡಿರೋ ಬ್ರಹ್ಮ ಅಂಕಲ್ ನೇ ಮರುಸೃಷ್ಟಿ ಮಾಡಿಬಿಡ್ತೀರೀ.

ಹೋಗ್ಲಿ ಬಿಡಿ. ನಿಮ್ಗೆ ಕೆಟ್ಮೇಲಾದ್ರೂ ಬುದ್ದಿ ಬಂತಲ್ಲಾ”, ಅಂತಂದ.ಆಗ ನಾನು ಮನಸ್ಸಿನಲ್ಲೇ ಅಂದ್ಕೊಂಡೆ,ಬುದ್ದಿ ಬಂದಿರೋದು ಸ್ವಲ್ಪ ಜನುಕ್ಕೆ ಕಣಪ್ಪಾ.ಇನ್ನೂ ಕಲಿಬೇಕಾದೋರು ಶಾನೆ ಜನ ಇದಾರೆ. ಅದ್ಕೆ ಕೆಲವರ ಪ್ರಯತ್ನ ಮಾತ್ರದಿಂದ, ನಮ್ ದೇಶ್ದಲ್ಲಿ ಏನ್ ಮಾಡುದ್ರೂ ನೀರ್ನಲ್ಲಿ ಹೋಮ ಮಾಡ್ದಂಗೆ, ಅಂತ.

           ಆದ್ರೂ ಗಣಪಯ್ಯನಿಗೆ ನಮ್ ಕಾಲದ ಕಥೆಯಾದ್ರೂ ಹೇಳಿ ಮುಖದಲ್ಲಿ ಮಂದಹಾಸ ತರಿಸೋಣವೆಂದು ಯೋಚಿಸಿ,

 ”ಒಂದ್ ಕಾಲ್ದಲ್ಲಿ ನಾವ್ ಚಿಕ್ಕೋರಿದ್ದಾಗ ಎಂತಾ ಕಾಲವಯ್ಯಾ ಅದೂ. ನಿನ್ ಹಬ್ಬ ಬಂತೂಂದ್ರೆ ಬೆಳಗ್ಗೆ ಆರು ಗಂಟೆಗೆಲ್ಲಾ,ಪಿ.ಬಿ. ಶ್ರೀನಿವಾಸ್ ರವರ ಮಧುರ ಸಿರಿ ಕಂಠದಿಂದ ಹಾಡಿದ,”ಶರಣು ಶರಣಯ್ಯಾ ಶರಣು ಬೆನಕಾ, ನೀಡಯ್ಯಾ ಬಾಳೆಲ್ಲ ಬೆಳಗುವಾ ಬೆಳಕಾ”, ಅಂತ ಇಂಪಾದ ಧ್ವನಿ ಕೇಳ್ತಾ ಎದ್ರೆ, ಮನಸ್ಸಿಗೆಷ್ಟು ಹಿತವಾಗಿರ್ತಿತ್ತು! ಈಗ ಆ ಹಾಡುಗಳೆಲ್ಲೀ ಕಳ್ದೇಹೋದವೋ  ಕಾಣೆ ಕಣಪ್ಪಾ!”, ಅಂದೆ.ಹೂ…..ಅಂತ ಜೋರಾಗಿ ನಿಟ್ಟುಸಿರು ಬಿಟ್ಟ ಗಣಪ, ಬಲಗಡೆ ಹಣೆಯನ್ನ ಒತ್ತೀ ಒತ್ತೀ  ನೀವಿಕೊಂಡು,”ಇನ್ನು ಇವತ್ತು ಯಾರ್ ಬರ್ತಾರೋ, ಈ ಜೂನಿಯರ್ ಮುಕ್ಕಣ್ಣನನ್ನ ಮುಂದೆ ಕುಣ್ದು ರಂಜೀಸೋಕೆ,ನನ್ ಕಣ್ಣನ್ನ ಹಿಂಗಿಸೋಕೆ”, ಅಂದ.ಗಣಪನ ಅರೆತಲೆ ನೋವಿನ ಒದ್ದಾಟ ನೋಡಲಾಗದೇ,”ಸ್ವಲ್ಪ ಅಮೃತಾಂಜನ ತಿಕ್ಕಿ ಕೊಡ್ಲೇನೋ ಮಗಾ? ತಲೆ ನೋವು ಸ್ವಲ್ಪ ಕಡಿಮೆ ಆಗ್ಬೋದು”,ಅಂದೆ.ಅದಕ್ಕೆ ಸಪ್ಪೆಯಾಗಿ ನಕ್ಕ ಗಣೇಶ,”ಓ……ಏನಕ್ಕಾ ಸೂರ್ಯುಂಗೇ ಟಾರ್ಚಾ?ನಿಮ್ಮ ಬಾಧೆಗಳ್ನ ತೀರ್ಸೋಕ್ ಬಂದವನ ಬಾಧೆನಾ ನೀನ್ ತೀರುಸ್ತೀಯಾ? ಅಷ್ಟು ಕಾನ್ಫಿಡೆನ್‌ಸಾ…….?”ಅಂತ ಮೊನಚಾಗಿ ಅಂದ ಆ ಸಿದ್ದಿಬುದ್ದಿಗಳೊಡೆಯನ ಸವಾಲಿಗೆ ಪೆದ್ದುಪೆದ್ದಾಗಿ ಪಿಳಿಪಿಳಿ ಕಣ್ಬಿಟ್ಟು ತೆಪ್ಪಗೆ ಬಾಯಿ ಮುಚ್ಕೊಂಡೇ, …..ಅಂದ್ಕೊಂಡೇ. ಆದ್ರೆ ಗಣಪ್ಪನ ನೋವಿನ ಮಾತುಗಳಿಗೆ, ತಡೆ ಇರದ ನಾನ್ ಸ್ಟಾಪ್ ಬಸ್ಸುಗಳು ಓಡುವಂತೆ ಏನೇನೋ ಆಲೋಚನೆಗಳು ಮೆದುಳಿನಲ್ಲಿ ಬಂದು,ಬಂದ ಆಲೋಚನೆಗೆ ತಡೆ ಹಾಕಿ,ಮಾತು ಶುರು ಮಾಡಿಯೇ ಬಿಟ್ಟೆ!

“ ಅಲ್ಲಯ್ಯಾ ಮೂಷಿಕವಾಹನಾ! ನಮ್ಮೂರಲ್ಲಿ ಒಂದ್ ತಿಂಗ್ಳು ಇರೋಕೆ ನೀನೇ ಹಿಂಗಂದ್ರೆ, ನಿನ್ ಅಂಶದವನು ತಿಪಟೂರಲ್ಲಿದಾನಲ್ಲಾ ಅವನು ಮೂರು ತಿಂಗಳ ಮೇಲೆ ಪೆಂಡಾಲ್ ನಲ್ಲೇ ಭದ್ರವಾಗಿ ಅಲ್ಲಾಡ್ದೇ ಕೂತಿರ್ಬೇಕಲ್ಲಾ! ಅವ್ನ ಕತೇ, ಓ ಮೈ ದೇವ್ರೇ……..,ಆ ನಿಮ್ ಡ್ಯಾಡೀನೇ ಗತೀ”, ಅಂದೆ. ಅದಕ್ಕೆ,”ಏನೋ ಕಣಕ್ಕಾ,ಸಂಭ್ರಮದಲ್ಲಿ ಸ್ವಾಗತಿಸಿ, ಕೂರಿಸಿ,

ನಮ್ಗೀರೀತಿ ಶಿಕ್ಷೆ ಕೊಡೋದ್ ಯಾವ್ ನ್ಯಾಯವಕ್ಕಾ?”,ಅಂದ.ನಾನು,”ಏನ್ಮಾಡೋದೋ ಗಣಪಾ, ನನ್ಗೆ ನಿನ್ಗೆ ಇಷ್ಟವಾಗೋ ಹರಿಕಥೆ, ಗಮಕ, ಆಧ್ಯಾತ್ಮ,,ಪುರಾಣ ಅಂತ ಕಾರ್ಯಕ್ರಮ ಇಟ್ಕೊಂಡ್ರೆ, ಆ ಕಾರ್ಯಕ್ರಮಕ್ಕೇ, ಅದನ್ನ ನಡೆಸಿ ಕೊಡೋರಿಗೇ  ಅವಮಾನ ಆಗಬೇಕು ಹಾಗೆ ಮೂರು ಮತ್ತೊಂದು ಜನರೂ ಸೇರೋಲ್ಲ. ಪಾಪ, ಹೊಟ್ಟೆಹೊರೆಯೋಕ್ಕೆ ನಾಲ್ಕು ಕಾಸು ಸಿಗುತ್ತೇಂತ ಹಾರ್ಮೋನಿಯಮ್, ತಬಲಾದವರು ಎಡಬಲಕ್ಕೆ ಕಾರ್ಯಕ್ರಮದ ಬಲತೋರಿಸೋಕೆ ಕೂತಿರ್ತಾರೆ. ಇನ್ನು ಮೈಕ್ ಸೆಟ್ಟನ್ನ ನಿರ್ವಹಿಸೋನೊಬ್ಬ, ಇನ್ನು ಜಮಖಾನ,,ಕುರ್ಚಿಗಳ್ನ ತೆಗೆಯೋನೊಬ್ಬ ಕಾರ್ಯಕ್ರಮ ಮುಗಿಯೋದೇ ಕಾಯ್ಕೊಂಡು ತೂಕಡಿಸ್ಕೋಂಡ್   ಕೂತಿರ್ತಾರೆ. ಸಧ್ಯ ಮುಗ್ಸುದ್ರೆ ಜಮ್ಖಾನ ತೆಗೆದ್ ಹೋಗ್ಬೋದೂಂತ!ಏ….ಏನ್ ಹೇಳೋದೇಳು,ಇಂಥ ಕಾರ್ಯಕ್ರಮ ಇದ್ರೆ ಈಗಿನ್ ಮಾಡ್ರನ್ ಸೀನಿಯರ್ ಸಿಟಿಜ಼ನ್ಗುಳೂ ತಲೆ ಹಾಕಲ್ಲಾಂತೀನೀ. ಎಲ್ಲಾ ವರ್ಷಾನುಗಟ್ಟಲೆಯಿಂದ ಬರ್ತಾ ಇರೋ ಮೆಗಾ…….ಸೀರಿಯಲ್ಲುಗಳಲ್ಲಿ ತಾವೇ ಪಾತ್ರಗಳಾಗಿ ಭಾವಿಸಿಕೊಂಡು ವ್ಯೂ ಮಾಡ್ತಿರ್ತಾರೆ.ಅವರೇನಾದ್ರೂ ಒಂದ್ ಎಪಿಸೋಡು ಮಿಸ್ ಮಾಡ್ಕೊಂಡ್ರೂ,ಒಳ್ಳೆ ಎರೆಹುಳ ಒದ್ದಾಡ್ದಂಗಾಡ್ತಿರ್ತಾರೆ. ಇನ್ ಎಲ್ಲೋ ಕೆಲವ್ರಿಗೆ  ಬಂದು ಕೇಳೋ ಇಷ್ಟವಿದ್ರೂ, ಅವ್ರನ್ನ ಪಿಕಪ್, ಡ್ರಾಪೂ ಮಾಡ ಪುರ್ಸೊತ್ತು ಯಾರ್ಗಿರುತ್ತೋ ಮಹರಾಯಾ?  ಎಲ್ರದ್ದೂ ಬಿಸಿಬಿಸಿ ಜೀವ್ನಾ!  ಈಗೀಗ ಎಲ್ಲರ ಟೇಸ್ಟೂ,  ಲೈಫ್ ಸ್ಟೈಲೇ ಚೇಂಜಾಗ್ಬಿಟ್ಟಿದೆಯಪ್ಪಾ ಬಪ್ಪಾ!”, ಅಂದೆ. 

“ಎಲ್ರ ಟೇಸ್ಟೂ ಬದ್ಲಾಗಿ ಹೋಗಿ, ಈಗೆಲ್ಲಾ ನಮ್ ಟೇಸ್ಟು ಯಾರ್ಗಿಷ್ಟ ಆಗದೇ ವೇಸ್ಟಾಗೋಗ್ತಿದೆ ಕಣಕ್ಕಾ!”,ಅಂದ. “ನಾವು ಹುಡುಗರಿದ್ದಾಗ, ತಿಪಟೂರಿನ ಸತ್ಯ ಗಣಪತಿ ಪೆಂಡಾಲಿಗೆ ಕಾರ್ಯಕ್ರಮ ಕೊಡೋಕೆ ಎಂತೆಂಥ ಕಲಾವಿದರನ್ನ ಕರುಸ್ತಿದ್ರು ನಿನ್ಗೂ ಗೊತ್ತಲ್ವಾ ಗಣಪಾ! ಎಂ.ಎಸ್.ಸುಬ್ಬುಲಕ್ಷ್ಮಿ, ಪ್ರಭಾತ್ ಕಲಾವಿದರು, ಮಂಜು ಭಾರ್ಗವಿ, ಕುನ್ನೈಕ್ಕುಡಿ ವೈದ್ಯನಾಥನ್,ಶ್ಯಾಮಲಾ ಭಾವೆ, ಜಮಖಂಡಿ ಕಲಾವಿದರು,ಖ್ಯಾತ ವಿದ್ವಾಂಸರಿಂದ ವೀಣಾ ವಾದನ, ಗಾಯನ, ಜುಗಲ್ ಬಂದಿಗಳು, ಹಾಸ್ಯೋತ್ಸವಗಳು, 

ಹೀಗೆ ಹೇಳ್ಕೋತಾ ಹೋದ್ರೆ,    ಒಂದೋ ಎರಡೋ?ನಾನಂತೂ ಸ್ಕೂಲಿಂದ ಬಂದೋಳೇ, ನೀನಿರುವಷ್ಟ್ ದಿನ್ವೂ ಚಕಚಕಾಂತ ಹೋಮ್ ವರ್ಕು ಮುಗ್ಸಿ, ರೆಡಿಯಾಗಿ ಏಳೂವರೆ ಹೊತ್ಗೆ ಪೆಂಡಾಲ್ಗೆ ಹಾಜರ್.

ಕಾರ್ಯಕ್ರಮ ಪ್ರಾರಂಭ ಆಗೋಕೆ ಮುಂಚೆ ಅಚ್ಕಟ್ಟಾಗಿ ಚಕ್ಕಂಬಕ್ಕಳ ಹಾಕಿ ಜಮಖಾನದ್ ಮೇಲೆ ಕೂತ್ಬಿಟ್ರೆ, ಪ್ರೋಗ್ರಾಮ್ ಮುಗ್ಸಿ, ಮನೆಗ್ ಹೋಗ್ರೀ, ಅಂತ ಹೇಳಿ, ನಮಸ್ಕಾರ ಹಾಕೋವರ್ಗೂ ಅಲ್ಲಾಡ್ತಿರ್ಲಿಲ್ಲ.ಎಂತೆಂಥ ಕಲಾಕಾರರನ್ನ ನೋಡೋ ಅವಕಾಶ ಸಿಕ್ತೋ  ವಿನಾಯಕಾ! ಅವರುಗಳ ಕಾರ್ಯಕ್ರಮ ನೋಡೋಕೆ ರವೀಂದ್ರ ಕಲಾಕ್ಷೇತ್ರಕ್ಕೋ, ಮತ್ತೆಲ್ಲಿಗಾದರೂ ಹೋಗಬೇಕಿದ್ರೆ ಸಾವಿರಾರು ರೂಪಾಯಿಗಳನ್ನ ಸುರಿಯಬೇಕಾಗ್ತಿತ್ತು.ಅಂಥದ್ದನ್ನೆಲ್ಲಾ ದಿನದಿನ ನೋಡಿ ಆನಂದಿಸಿದೀವೀಂದ್ರೇ, ಅದು ನಿನ್ ದೆಸೆಯಿಂದ್ಲೇ ಕಣಪ್ಪಾ ಗಣಪತಿ ಬಪ್ಪಾ! ಅದ್ಕೇ ನಿನ್ ಕಂಡ್ರೆ ನನಗೊಂದ್ ಥರ ಅಟ್ಯಾಚ್ಮೆಂಟು.ನೀನು ಒಂಥರಾ ಫೇವರೇಟು! ನಿನಗೂ ಲಲಿತ ಕಲೆಗಳಿಗೂ ಏನೋ ಬಿಡಿಸಲಾರದ ಅನುಬಂಧ!ಇಷ್ಟು ಸಾಲ್ದೂಂತ, ಜೊತೆಗೆ ಕೊನೆಕೊನೆಯಲ್ಲಿ ಪೆಂಡಾಲಿನ ವತಿಯಿಂದ ರಂಗೋಲೆ ಸ್ಪರ್ದೆ,ಹೂ ಕಟ್ಟೋ ಸ್ಪರ್ಧೆ, ಮಕ್ಕಳಿಗೆ ನೃತ್ಯ ಸ್ಪರ್ಧೆ, ಜನಪದ ಗೀತೆಗಳ ಸ್ಪರ್ಧೆ ಅದೂ ಇದೂಂತ ಮಾಡಿ, ಅವರಿಗೆಲ್ಲಾ ಬಹುಮಾನ ಕೊಡೋರು.ಆಮೇಲಾಮೇಲೆ, ಕೆಲವು ಶಾಲೆಯ ವಾರ್ಷಿಕೋತ್ಸವವನ್ನ ಕೂಡಾ ಪೆಂಡಾಲಿನಲ್ಲೇ ನಡೆಸ್ತಿದ್ರು. ಇದೊಂದ್ ತರ ಡಬಲ್ ಬೆನಿಫಿಟ್ ಸ್ಕೀಮಿದ್ದಂಗೆ.ಸ್ಕೂಲಿನೋರಿಗೆ ಫ್ರೀ ಸ್ಟೇಜು, ಮೈಕು, ಅರೇಂಜ್ಮೆಂಟು ಎಲ್ಲಾ! ಇನ್ನು ಮಂಡಲಿಯವರಿಗೆ ಒಂದು ದಿನ ಫ್ರೀ ಎಂಟರ್ಟೇನ್ಮೆಂಟ್ ಪ್ರೋಗ್ರಾಮ್. ಇಬ್ರಿಗೂ ಕಾಸ್ ಮಿಕ್ತು. ಹೂ……..ಅದೆಲ್ಲಾ ನಮ್ ಕಾಲಕ್ಕಾಯ್ತು.

ಈಗಿನ್ ಮಕ್ಳಿಗೆ ಅದ್ರ ಮಜಾ ಏನೂ ಅಂತ ಯೋಚ್ನೆ ಮಾಡೋ ಕೆಪಾಸಿಟೀನೂ ಇಲ್ಲ, ಇವರಿಗೆ ಆ ಅದೃಷ್ಟವೂ ಇಲ್ಲ. ಪೂ…..ರ್ ಗಯ್ಸ್”, ಅಂದು,

“ನಿಜ ಹೇಳ್ಬೇಕೂಂದ್ರೆ ನೀನು ಕೈಲಾಸಕ್ಕೆ ಹೊರಟ್ಮೇಲಂತೂ ಸ್ವಲ್ಪ ದಿನ ಏನೋ ಕಳಕೊಂಡಂತೆ ಸಂಜೆ ಆಯ್ತೂಂದ್ರೆ ಬಿಕೋ…….ಅನ್ಸೋದು. ಏನ್ ಚಂದಾ ಏನ್ ಚಂದಾ,ಆ ಕಳ್ದೋದ್ ಆ ದಿನ್ಗುಳು,  ನೆನಸಿಕೊಳ್ಳೋದೇ ಆನಂದ ಕಣಯ್ಯಾ ಗೌರೀಕಂದಾ….ಬಿಡು,ಕಾಲವನ್ನು ತಡೆಯೋರು ಮಾತ್ರ ಯಾರೂ ಇಲ್ಲ. ಅದು ನಿಮ್ಗೂ ಸಾಧ್ಯವಿಲ್ವೇನೋ? ಸಧ್ಯ ಸಾಧ್ಯವಿದ್ರೂ ದಯಮಾಡಿ ಅದೊಂದು ತಡೀಬೇಡಪ್ಪಾ. ಆ ವರಾನೂ ಏನಾದ್ರೂ ಮನುಷ್ಯನಿಗೆ ಸಿಕ್ಕೆಬಿಟ್ರೆ, ನಿನ್ನೂ ಸೇರುಸ್ಕೊಂಡು ಏನ್ ಸಿಕ್ಕುದ್ರೂ ಮುಕ್ಕಿಬಿಡ್ತಾನೆ.ಈ ಸ್ವಾರ್ಥಿ ಮಾನವಾ! ನೋಡ್ದಾ ಮಾತು ಮನೆ ಕೆಡುಸ್ತು, ತೂತು ಒಲೆ ಕೆಡುಸ್ತೂಂತ, ಎಲ್ಲಿ ಶುರ್ವಾದ್ ಮಾತು, ಎಲ್ಲಿಲ್ಲಿಗೆಲ್ಲಾ ನಿನ್ ಬೆಲ್ಟ್ ಸರ್ಪೆಂಟ್ ತರ ಹರ್ದಾಡಿ ಕಂಟ್ರೋಲಿಗಿಲ್ದಂಗ್   ಹೋಯ್ತು.ಬರ್ತೀನಪ್ಪಾ, ಮನೇಲಿ  ಬೇಕಾದಷ್ಟು ಕೆಲಸ ಬಿಟ್ ಬಂದಿದೀನಿ.ನಿನ್ಗೆ ಇಲ್ಲಿರೋಕೆ ಅಷ್ಟು ಕಷ್ಟವಾದ್ರೆ ಸುಮ್ನೆ ನಮ್ ಮನೆಗ್ ಬಂದ್ಬಿಡಯ್ಯಾ! ಗಣಪತಿ ರಾಯ”, ಅಂತ ಕಾರ್ಡಿಯಲ್ ಇನ್ವಿಟೇಷನ್ ಕೊಟ್ಟೆ. ಅದಕ್ಕೆ ಗಣಪ,”ತುಂಬಾ ಥ್ಯಾಂಕ್ಸ್ ಕಣಕ್ಕಾ.ಆದ್ರೆ ಹಾಗಾಗಲ್ಲಕ್ಕ. ನಾನು ಬಂದ್ ಮೇಲೆ ಪುರೋಹಿತರು ಮಂತ್ರ ಹೇಳಿ,ನನ್ ಪ್ರಾಣ ಪ್ರತಿಷ್ಠೆ ಮಾಡಿ ಕೂರ್ಸಿರ್ತಾರಲ್ಲಾ! ನಾನು ಅಲ್ಲಾಡ ಮಾತೇ ಇಲ್ಲ. ಇರ್ಲಿ……ನೋಡೋಣ.ಜನ್ರು ಮತ್ತೆ ಬದ್ಲಾಗೋ ಕಾಲ ಬರುತ್ತೇಂತಲೇ ಪ್ರತಿವರ್ಷವೂ ಬಂದು ಕಾಯ್ತೀನಿ. “ಕಾಯುವಿಕೆಗಿಂತ ತಪವು ಇಲ್ಲಾಂತ”, ದಾಸರು ಹೇಳಿದಾರಲ್ಲಕ್ಕಾ! ನಾನು ತಾಳ್ಮೆ ವಹಿಸ್ತೀನಿ ನೋಡೋಣ. ಒಳ್ಳೆಯ ಬದಲಾವಣೆಯ  ದಿನ್ಗಳಿಗಾಗಿ ಕಾಯ್ತೀನೀ. ಉಫ್……..”, ಅಂತ ನಿಟ್ಟುಸಿರು ಬಿಟ್ಟ.

           ಗಣಪ ಹಾಗೇ ಮಂಕಾಗಿ,”ಇನ್ನೂ ಎರಡ್ ಮೂರ್ ವಾರದ ಮೇಲೆ ಇಲ್ಲೇ ಇರಬೇಕಲ್ಲಕ್ಕಾ. ಅಷ್ಟರಲ್ಲಿ ಅರ್ದ ತಲೆ ನೋವು ಹೋಗಿ ಪೂರ್ತಿ ತಲ್ನೋವೇ ಬಂದ್ಬಿಡುತ್ತೆ”, ಅಂದು,”ಅಕ್ಕಾ ಏನಾದ್ರೂ ತಿನ್ನೋಕ್ ತಂದಿದಿಯಾ?”, ಅಂದ. ನನಗ್ಯಾಕೋ ತುಂಬಾ ಬೇಜಾರಾಯ್ತು.”ಯಾಕಪ್ಪಾ ನಿನ್ಗೆ ಇಲ್ಲಿ ಮಾಡೋ ನೈವೇದ್ಯ ಸಮಾಧಾನ ಆಗ್ತಿಲ್ವಾ?”ಅಂದೆ.ಅದಕ್ಕೆ,”ಅಯ್ಯೋ ಎಲ್ಲೋದ್ರೂ ದಿನಾ ಅದೇ ಪ್ರಸಾದ, ಅದೇ    ಮೋದಕ,ಹೋಗಕ್ಕ ಬೇಜಾರು. ಆದ್ರೂ ಈ ಪೆಂಡಾಲ್ ಆಡಳಿತ ಮಂಡಲಿಯೋರು, ಕಾರ್ಯಕ್ರಮಗಳ್ನ ನೋಡ್ತಾ ನೋಡ್ತಾ, ನನ್ ಎದ್ರುಗ್ ಕೂತ್ಕೊಂಡು ಬಿಸಿ ಬಿಸಿ ಕಳ್ಳೇಕಾಯಿ,ಚುರುಮುರಿ, ಬಜ್ಜಿ, ಬೋಂಡಾ, ಪಕೋಡಾಂತ ತಿಂದ್ಕೋತಾ ನನ್ ಹೊಟ್ಟೆ ಬೇರೆ ಉರುಸ್ತರಕ್ಕಾ.ಒಂದ್ ದಿನಾ ಕೂಡಾ ಫಾರ್ಮಾಲಿಟಿಗಾದರೂ ಸರಿ, ಆಫರ್ ಮಾಡಲ್ಲ.ಅಲ್ಲಾ,ಹಣ್ಣುಕಾಯಿ,ಅನ್ನ ಪ್ರಸಾದ ಅಂತ ನೈವೇದ್ಯ ಮಾಡ್ತಾರಲ್ಲಾ, ಹಾಗೆ ಸ್ವಲ್ಪ ಖಾರ್ಖಾರ್ವಾಗಿ,ವೆರೈಟಿ ತಿಂಡಿ ನನ್ಗೂ ಇಡ್ಬೋದಲ್ವಾ?”, ಅಂದ ಗಣಪ.” ಅರೇ,ಇದೆಲ್ಲಾ ಪದ್ದತಿ ಅದ್ಯಾರ್ ಮಾಡುದ್ರೋ,  ಅದೇನೋ, ನಿಂಗ್ ಅದ್ ಇಷ್ಟ್ವೋ, ಕಷ್ಟ್ವೋ,      ಗೊತ್ತಿಲ್ಲ.ಒಟ್ನಲ್ಲಿ ದೊಡ್ಡೋರು ಏನ್       ಹೇಳುದ್ರೋ ಅದ್ನ  ನಡುಸ್ಕೊಂಡು ಬರ್ತಾ ಇದೀವಿ”, ಅಂದೆ.ಅದಕ್ಕೆ     ಗಣಪ,”ಆಹಾ ದೊಡ್ಡೋರ್ ಮಾತ್ಗೆ  ಏನ್   ಮಹಾ ಮರ್ಯಾದೆ ನೀವು ಕೊಡೋದ್ ನಾನ್ ಕಂಡಿಲ್ವಾ?  ಅನ್ಕೂಲ ಸಿಂಧುಗಳು. ಬೇಕಿದ್ದುಕ್ಕಾದ್ರೆ, ಯಾರ್ಗೂ ಕೇರ್ಲೆಸ್ಸು.ಬೇಡ್ದಿದ್ದುಕ್ಕಾದ್ರೆ ದೊಡ್ಡೋರು, ರೀಸನ್ನು.ಅಲ್ಲಾ ಕಣ್ರಮ್ಮಾ ನನ್ಗಿಷ್ಟ್ವೋ ಕಷ್ಟ್ವೋ ಕೂಡಾ  ಕೇಳ್ದೇ ನನ್ನ  ಹಾಳು ಪಬ್ಜಿ ಗಣೇಶ, ಡಿಜಿಟಲ್  ಗಣೇಶ,ಸ್ಪೈಡರ್ ಮ್ಯಾನ್ ಗಣೇಶ ಅಂತ ನಿಮಗ್ ಬೇಕಿದ್ದೆಲ್ಲಾ ವೇಷ ನನ್ಗೆ ಹಾಕುವಾಗ,ನಿಮ್ಗೆ ದೊಡ್ಡೋರ್ ಯಾರ್ ಬಂದ್ ಹೇಳಿದ್ರೂ? ಇದ್ಯಾಕಕ್ಕಾ ಈ ಎಕ್ಸ್ಟ್ರಾಗುಳೆಲ್ಲಾ?

ನನ್ಗೆ ನಿಮ್ಮಿಂದ ಬೇಕಿರೋದು ಕೇವಲ ಶ್ರದ್ದೆ, ಭಕ್ತಿ, ಶರಣಾಗತಿ! ಬೇಕಿರೋದು ಬಿಟ್ಟು ಮಿಕ್ಕಿದ್ದೆಲ್ಲಾ ಮಾಡ್ತಿದೀರ.ಅದ್ಯಾರ್ ಖುಷೀಗೋ ನಾನ್ ಬೇರೆ ಕಾಣೆ. ಏನೋಕ್ಕಾ ಇತ್ತೀಚ್ಗಂತೂ ನಿಮ್ಗುಳ್ ಬುದ್ದಿ ನಂಗ್ ಚೂರೂ ಇಷ್ಟ್ವಾಗ್ತಾ ಇಲ್ಲ.”, ಅಂದ.ನನ್ನನ್ನೂ ಸೇರಿಸ್ಕೊಂಡು ಬೈದಿದ್ದಕ್ಕೆ ನನಗೂ ಚೂರು ಬೇಜಾರಾಯ್ತು. ಅವನು ಹೇಳಿದ್ರಲ್ಲಿ ತಪ್ಪೇನೂ ಇರ್ಲಿಲ್ಲ. ಆದೂ ಅಪ್ರಿಯವಾದ ಸತ್ಯಗಳು ಯಾರಿಗ್ ಇಷ್ಟವಾಗತ್ತೆ ಹೇಳಿ?ಆದ್ರೂ ಗಣಪ ನೊಂದಿ ಮಾತಾಡ್ತಿದ್ದ ಪ್ರತಿಯೊಂದು ವಿಷಯವೂ ನನಗೇ ಅನ್ವಯಿಸಿ ಹೇಳುವಂತೆ ಮನಸ್ಸಿಗೆ ಚುಚ್ಚಿ ನೋವು ಮಾಡ್ತಾ ಇತ್ತು.

       ಗಣಪನ ಮಾತಲ್ಲಿ ಎಷ್ಟು ನೋವಿದೆ,ಏನು ಸಂಕಟವಿದೇ? ಹೋಗ್ಲಿ,ನಾವು ನಡೆಸುತ್ತಿರೋ ಈ ಆಚರಣೆಯಲ್ಲಿ ಏನು ಅರ್ಥವಿದೇ? ಗಣಪತಿ ಹಬ್ಬವನ್ನು ಸಾರ್ವಜನಿಕವಾಗಿ ಮಾಡುವ ಲೋಕಮಾನ್ಯರ ಉದ್ದೇಶವನ್ನ ಗಾಳಿಗೆ ತೂರಿ,  ಅದೇನೋ ಗಾದೆ ಹೇಳ್ತಾರಲ್ಲಾ,”ಮುಟ್ ಬಾರೋ ಮಾರಾಯಾ ಅಂದ್ರೆ ಸುಟ್ಬಂದ್ನಂತೆ”, ಅನ್ನುವಂತಾಗಿದೆ,ನಾವು ನಡೆದುಕೊಳ್ಳುವ ರೀತಿ.”ತಿನ್ರೀ, ಕುಡೀರೀ, ಕುಣೀರಿ, ಮಜಾ ಉಡಾಯ್ಸ್ರೀ, ಬೇಡಾನ್ನೋಕ್ ಗಣಪ ಯಾರೂ? ನಾನ್ ಯಾರೂ? ಆದ್ರೆ ಅದಕ್ಕೇಂತ ಒಂದ್ ಜಾಗ ಇದೆಯಲ್ವಾ? ಅಲ್ಲಿಗೆ ಹೋಗಿ ಏನ್ ಬೇಕಾದ್ರೂ ಮಾಡಿ. ನಿಮ್ನ ಈ ರೀತಿ  ಯಾವ ದೇವ್ರೂ ದಿಂಡ್ರೂ ನೋಡೋಕೆ ಇಷ್ಟ ಪಡ್ತಾರೆ ಹೇಳೀ?”, ಅಂತ ಬುದ್ದಿ ಹೇಳುವ ಮನಸ್ಸಾದ್ರೂ, ಹಾಗೆ ಹೇಳುವ ಬುದ್ದಿ ಮಾತನ್ನ ಕೇಳುವ ಮನಸ್ಥಿತಿಯನ್ನೂ ಮೀರಿ ಸಮಾಜ ದಾಪುಗಾಲು ಹಾಕುತ್ತಾ ಮುನ್ನೆಡೆಯುತ್ತಿದೆ.ಏನ್ಮಾಡೋದ್ ಹೇಳೀ?

          ಯಾಕೋ ಸಂಕಷ್ಟಹರನಿಗೊದಗಿದ ಸಂಕಷ್ಟ ಅವನ ಬಾಯಿಂದಲೇ ಕೇಳಿ ಮನಸ್ಸು ಬಹಳ ಕೆಟ್ಟೇ ಹೋಯಿತು. ಎರಡು ದಿನವಾದರೂ ರಾತ್ರಿ ಕಣ್ಣು ಮುಚ್ಚಿದರೆ ಸಾಕು, ಕರಿವದನನ ಕಳೆಗುಂದಿದ ಮ್ಲಾನ ವದನವೇ ಕಣ್ಣಮುಂದೆ ಬಂದಂತಾಗಿ ಬಹಳವೇ ನೋವು ಅನುಭವಿಸಿದೆ. ಹೌದಲ್ವೇನ್ರೀ, ಅತಿಥಿ ದೇವೋಭವ ಎಂದು ನಮ್ಮ ಮನೆಗೆ ಯಾರೇ ಬಂದರೂ ಅವರನ್ನ ದೇವರ ಸ್ವರೂಪದಲ್ಲಿ ಸೇವಿಸಿ ಧನ್ಯರಾಗುವ ಸತ್ ಸಂಸ್ಕೃತಿ ನಮ್ಮದು. ಆದರೆ, ದೈವವೇ ಅತಿಥಿಯಾಗಿ ನಮ್ಮ ಲೋಕಕ್ಕೆ ಬಂದಾಗ, ಆತನನ್ನ ಸಂತೋಷಪಡಿಸಿ, ವಾಪಸ್ಸು ಕಳಿಸುವುದು ನಮ್ಮ ಸಂಸ್ಕಾರ. ಆದರೆ, ನಾವು ಮಾಡುತ್ತಿರುವುದು ನಮಗೇ ಪ್ರಿಯವಾಗುತ್ತಿಲ್ಲವೆಂದರೆ, ಇನ್ನು ದೇವರಿಗೆ ನಿಜಕ್ಕೂ ಒಪ್ಪಿಗೆಯಾಗುವುದೇ? ನಿಜಕ್ಕೂ ಆಲೋಚಿಸಬೇಕಾದ ವಿಷಯ. ಮತ್ತೆಮತ್ತೆ ಹೋಗಿ ಗಣಪನ ಸೋತ ಮುಖ ನೋಡಲು ಇಷ್ಟವಾಗದೇ ಪೆಂಡಾಲಿನ ಕಡೆ ತಲೆಯೇ ಹಾಕಲು ಮನಸ್ಸಾಗಲೇ ಇಲ್ಲ. ದಿನಗಳು ಓಡ್ತಾ ಗಣಪತಿ ಉತ್ಸವದ ದಿನ ಬಂದೇ ಬಂತು.ಡೊಳ್ಳು, ಡೋಲು, ಕೀಲುಕುದುರೆ,ವೀರಗಾಸೆ,ಪೂಜಾ ಕುಣಿತ,ನಾದಸ್ವರ,ಡಿಜೆ,ಡಿಸ್ಕೋ, ಬ್ರೇಕು ಡಾನ್ಸುಗಳ ಜೊತೆ ಗಣಪನನ್ನ ಹಲವಾರು ಪುಷ್ಪ, ಪತ್ರೆ ಹಾರಗಳು,ಅಲಂಕಾರಗಳೊಂದಿಗೆ ವಿಜೃಂಬಣೆಯಿಂದ ಎತ್ತರದ ಆಸನದಲ್ಲಿ ಕೂರಿಸಿ, ಊರಿನ ರಾಜ ಬೀದಿಗಳಲ್ಲಿ ಉತ್ಸವ ಹೊರಡಿಸಿ,ಅವನನ್ನು ಬೈ ವಾಟರ್ ಅವನೂರು ಕೈಲಾಸಕ್ಕೆ ಕಳಿಸಿಕೊಡಲು ಊರೆಲ್ಲಾ ಅಲಂಕಾರಗೊಂಡು ಸಂತೋಷದಿಂದ ಸಂಭ್ರಮಿಸುತ್ತಿತ್ತು. ಉತ್ಸವ ನಮ್ಮ ಮನೆಯ ಬೀದಿಗೆ ಬಂದಾಗ ನಾನು ಅವನ ಈ ವರುಷದ ಕೊನೆಯ ದರ್ಶನ ಮಾಡಿ ನಮಸ್ಕಾರ ಹಾಕಿ ಬೈ ಹೇಳಿ ಬರೋಣವೆಂದು ಆಚೆ ಬಂದೆ.

ಗಣಪನ ಮುಖದಲ್ಲಿ ತನ್ನೂರಿಗೆ ಹಿಂತಿರುಗಿ ಹೋಗುತ್ತಿರುವುದಕ್ಕೆ ಬಹಳ ಕಾತುರತೆ ಹಾಗೂ ಸಂತೋಷವಾದಂತೆ ಕಾಣಿಸುತ್ತಿತ್ತು.  ರಾಜಗಾಂಭೀರ್ಯದಲ್ಲಿ ಕೂತಿದ್ದ ಅವನು  ತನ್ನ ಸಂಸಾರವನ್ನು ಕೂಡಿಕೊಳಲು  ಪ್ರಸನ್ನ ವದನನಾಗಿ ಹೊರಟಿರುವಂತೆ ತೋರುತ್ತಿತ್ತು.ಗಣಪನ ಆನಂದವಾದ ಮುಖ ಕಂಡು ನನಗೂ ಸಮಾಧಾನವಾಯಿತು.ಕೈ ಮುಗಿದು ಶಿರಬಾಗಿ ವಂದಿಸಿದೆ. ಗಣಪ ಪ್ರಶಾಂತವಾಗಿ  ನನ್ನ ನೋಡಿ ನಕ್ಕು,ಟಾಟಾ ಮಾಡಿ,”ಮಂದಿನ್ ವರ್ಷ ಬರ್ತೀನಕ್ಕಾ! ಆ ಸಮಯಕ್ಕಾದ್ರೂ ನಿಮಗೆಲ್ಲಾ ನನ್ ವಿಷಯವಾಗಿ,ನಮ್ ಸಂಸ್ಕೃತಿಯ ವಿಷಯವಾಗಿ, ಪರಿಸರದ ವಿಷಯವಾಗಿ ಜಾಗೃತಿ ತಿಳಿಯೋ  ಬುದ್ದಿ ಬರ್ಲಿ”, ಎಂದು ಹರಸಿದಂತೆ ಭಾಸವಾಯಿತು.ಗಣಪನನ್ನು ನೋಯಿಸಿ ಕಳಿಸುತ್ತಿರುವುದಕ್ಕೆ ಮನಸ್ಸು ಬಹಳವೇ ಭಾರವಾಗಿತ್ತು.

      ಗಣಪ ಹೇಳಿದಂತೆ,ಒಳ್ಳೆಯ ದಿನಗಳು ಬರಲು ತಾಳ್ಮೆಯಿಂದ ಪ್ರಯತ್ನಿಸೋಣ. ಕಣ್ಣೀರು ಹರಿಸುತ್ತಿರುವ ಗಣಪನ ಮೊಗದಲ್ಲಿ ಹೂನಗೆ ಮೂಡಿಸುವ ಕರ್ತವ್ಯ ನಮ್ಮ ಮೇಲಿದೆ! ವಂದನೆಗಳು. ನಮಸ್ಕಾರ!

ಈ ಲೇಖನ ಬರೆಯುವಾಗ ನಮ್ಮ ಏರಿಯಾದ ಬನಶಂಕರಿ ಗೆಳೆಯರ ಬಳಗದ ಗಣಪತಿಯ ವಿಸರ್ಜಿಸುವ ದಿನ ಬಂತು. ಸಂಜೆ ನಾಲ್ಕರಿಂದಲೂ ಒಂದೇ ಭರ್ಜರಿ  ಅನೌನ್‌ಸ್‌ಮೆಂಟು,”ಭಕ್ತ ಮಹಾಜನಗಳೇ,ಈ ಬಾರೀ ಗಣಪತೀ ಉತ್ಸವಕ್ಕೆ ಪ್ರಖ್ಯಾತ ಡಿಜೆ …….ಕರೆಸುತ್ತಾ ಇದ್ದೇವೆ.”ಅಂತ. ಪ್ರತೀ ಬಾರಿಯ ಉತ್ಸವದಲ್ಲೂ ಕೆಲವಾರು ಜನಪದ ಕಲಾವಿದರನ್ನ ಕರೆಸಿ ರಂಜಿಸುತ್ತಿದ್ದವರು, ಈ ಬಾರಿ ಬರೀ ಡಿಜೆ ಒಂದೇೇೇೇೇ! ಈ ಡಿಜೆಯ ಆರ್ಭಟ, ಅಬ್ಬರ,ಬೊಬ್ಬಿರುವಿಕೆಯ ಮುಂದೆ ಬರುಬರುತ್ತಾ ಎಲ್ಲಾ ಜನಪದ ಕಲೆಗಳೂ ಹೇಳಹೆಸರಿಲ್ಲದಂತೆ ತೆರೆಯ ಹಿಂದಕ್ಕೆ ಮೆತ್ತಗೆ ಮರೆಯಾಗುವ ದಿನಗಳೇನೂ ದೂರವಿಲ್ಲವೆಂದೇ ನನ್ನ ಅನಿಸಿಕೆ.ಈಗಲೇ ಮಕ್ಕಳಿಗೆ ಆ ಕಲೆಗಳ ಪರಿಚಯವಿಲ್ಲದೇ ಹೋಗಿದೆ. ಇನ್ನು ಮುಂದೆ ನಮಗೂ ಅವುಗಳನ್ನು ಕಣ್ಣಾರೆ ನೋಡುವ ಅವಕಾಶವಿದೆಯೋ ಇಲ್ಲವೋ ತಿಳಿಯದಂತಾಗಿದೆ. ಆತ್ಮೀಯರೇ,ಗಣಪನ ಸಂಕಷ್ಟದ ಜೊತೆಗೆ ನಮ್ಮ ಜನಪದ ಕಲಾಕಾರರನ್ನೂ ನಾವು ಸಂಕಷ್ಟಕ್ಕೆ ಸಿಲುಕಿಸಿರುವ ವಿಷಯವಾಗಿ ನಿಮಗೇನು ಅನ್ನಿಸುತ್ತಿದೆ? ಖಂಡಿತ ತಿಳಿಸಿ. ವಂದನೆಗಳು. ಕ್ಷಮಿಸಿ, ಇನ್ನೊಂದು ಮುಖ್ಯ ವಿಚಾರ ಹೇಳುವುದು ಮರೆತೆ. ಈ ಲೇಖನವನ್ನು ಯಾವ ವಿಭಾಗಕ್ಕೆ ಸೇರಿಸುವುದು? ಎಂಬ ಗೊಂದಲ ಕೂಡಾ ಉಂಟಾಗಿದೆ. ದಯಮಾಡಿ, ಸಲಹೆ ನೀಡಿ ಸಹಾಯ ಮಾಡಿ.


ರೂಪ ಮಂಜುನಾಥ

Leave a Reply

Back To Top