ಡಾ. ಅರಕಲಗೂಡು ನೀಲಕಂಠ ಮೂರ್ತಿ-ಕವಿತೆ

ಕಾವ್ಯ ಸಂಗಾತಿ

ಡಾ. ಅರಕಲಗೂಡು ನೀಲಕಂಠ ಮೂರ್ತಿ

ಅವಳು ಬಂದಳು…
ಮೇ ಹೂಗಳ ತುಂಬು ಬಸಿರು
ಹೊತ್ತು ಚಲುವಾದಂತೆ
ಮೈಸೂರು
ಮತ್ತು ನಕ್ಕಳು…
ಹಾದಿಬೀದಿಗಳಲೆಲ್ಲ ತುಳುಕಿದ
‘ಕೆಂಪು’ ಬ್ರಾಂದಿಯ
ಹ್ಯಾಂಗ್ ಓವರ್
ಕೊಂಬೆರೆಂಬೆಗಳಲೆಲ್ಲ
ಓಲಾಡಿ ನೇತಾಡಿದಂತೆ;
ಹೋಗಿ ಬಿಟ್ಟಳು –
ಬಸಿರಿಳಿದ ಕಿಬ್ಬೊಟ್ಟೆ ಮೇಲೆ
ಸಿಡುಬಿನಂಥ ಕಪ್ಪು ಕಲೆ
ಯಥೇಚ್ಛ ಬಿತ್ತಿ …

ಅವಳು ಬಂದಳು…
ತೆವಲು ತಿವಿದಾಗ
ಅಟ್ಟ ಹತ್ತಿ ಬೀಡಿಹಚ್ಚಿ
ಎದೆ ತುಂಬ ದಟ್ಟ ಹೊಗೆ
ತುಂಬಿಕೊಂಡಂತೆ;
ಮಾತಾಡಿದಳು
ಮಾದಕ ಹೊಗೆ
ಮೆದುಳ ಕಚ್ಚಿ
ಸಣ್ಣಗೆ ತಲೆ ಸುತ್ತಿಸಿದಂತೆ
ಮತ್ತು ನರಗಳಿಗೆ
ಕರಂಟು ಹರಿಸಿದಂತೆ;
ಹೋಗಿಯೇ ಬಿಟ್ಟಳು…
ಪುಪ್ಫಸದ ಜಮೀನಿಗೆಲ್ಲ
ಏಡಿ ಹುಣ್ಣಿನ ಹೈಬ್ರಿಡ್
ಬೀಜ ಯಥೇಚ್ಛ ಬಿತ್ತಿ
ತಿಪ್ಪೆಯ ಗೊಬ್ಬರ ಹರಡಿ…


2 thoughts on “ಡಾ. ಅರಕಲಗೂಡು ನೀಲಕಂಠ ಮೂರ್ತಿ-ಕವಿತೆ

  1. “ಅವಳು ಬಂದಳು may ಹೂವು ಹೊತ್ತು
    ಚೆಲುವಾದಂತೆ’
    ಸುಂದರ ಸಾಲುಗಳು -ಚೆಂದಿದೆ ನಿಮ್ಮ ಕವನ!

Leave a Reply

Back To Top