ಗಝಲ್.(ನುಡಿ ನಮನ) ಜಯಶ್ರೀ.ಭ.ಭಂಡಾರಿ.

ಕಾವ್ಯಸಂಗಾತಿ

ಗಝಲ್.(ನುಡಿ ನಮನ)

ಜಯಶ್ರೀ.ಭ.ಭಂಡಾರಿ.

ಅಕ್ಷರಗಳ ಬಿತ್ತಿ ಬೆಳೆಯುವ ತೋಟದಿ ಅವಿರತ ಶ್ರಮದಿ ಅಗಿದಿರಿ ನೀವು
ಸಾಕ್ಷರರು ಅತ್ತಿತ್ತ ಸಾಗಿ ಸೆಳೆಯುವ ಮಾಟದಿ ನಿರಂತರ ಬೀಗಿದಿರಿ ನೀವು.

ಗುಹೆಗಳ ಶಿಲೆಗಳಲಿ ಶಿರವ ತಾಗಿಸಿ ಅನುದಿನವು ಓದುತ ಬೆರತಿರಲ್ಲವೇ.
ಮಹಿಮೆಗಳ ಪ್ರತಿಮೆಗಳಲಿ ಕರವ ಬಾಗಿಸಿ ನಿತ್ಯವು ತನುವ ಮಾಗಿದಿರಿ ನೀವು.

ಮೇಣ ಬಸದಿಗಳ ಅಂಗಳದಿ ಶಿಲ್ಪ ಶಾಸ್ತ್ರವನು ಆಲಿಸಿ ತಿಂಗಳನಂತೆ ಬೆಳಗಿದಿರಿ.
ಕ್ರಮೇಣ ವಿದೇಶಿಗರ ಕಂಗಳದಿ ಚಾಲುಕ್ಯ ವಾಸ್ತುಶೈಲಿ  ರುಚಿ ನೀಗಿದಿರಿ ನೀವು 

ಪರಂಪರೆಯ ತೊಟ್ಟಿಲು ದೇಗುಲಗಳ ಸಂಶೋಧನೆಯ ನಿಟ್ಟಿನಲಿ ನಿಂತಿರಿ
ಅಪರಂಪಾರವಾಗಿ ನಿಂದ ವಾತಾಪಿಯ ನಾಮವನ್ನು ಲೋಕದಿ ಕೂಗಿದಿರಿ ನೀವು.

ಶಾಸನಗಳ ಜೊತೆ ಹಾಡುತ ಹರುಷದಿ ತನ್ಮಯತೆಯಲಿಬೆರೆತು ಇತಿಹಾಸವಾದಿರಿ
ಮಾಸದ ಕತೆಗಳ ಹೇಳುತ ಬಾದಾಮಿ ಐತಿಹಾಸಿಕ ದಿವ್ಯ ದರ್ಶನ ತೂಗಿದಿರಿ ನೀವು.

ಸಾಹಿತ್ಯ ಸೇವೆಯಲಿ ನಾಡಿನಾದ್ಯಂತ ಪಯಣಿಸುತ ಪಸರಿಸಿದಿರಿ ಪುಲಿಕೇಶಿ ಘಮ
ಮಾಹಿತಿಯ ನಿಘಂಟು ತಜ್ಞ ಭರವಸೆಯ ಆಲೋಕದಿ ಸಂಚರಿಸಿ ಏಗಿದಿರಿ ನೀವು.

ಸುಳಿವು ನೀಡದೆ ಎದ್ದು ನಡೆದಿರಿ ಅವಸರಿಸಿ ಶಿಷ್ಯ ಬಳಗವನೆಲ್ಲ ಅನಾಥರಾಗಿಸಿ
ಅಳಿವು ಯಾರಿಗಿಲ್ಲ ಮಾನಸ ಪುತ್ರಿ ಶ್ರೀ ಜಗದ ನಿಯಮ ಮೀರದೆ ಸಾಗಿದಿರಿ ನೀವು


One thought on “ಗಝಲ್.(ನುಡಿ ನಮನ) ಜಯಶ್ರೀ.ಭ.ಭಂಡಾರಿ.

  1. ಅಗಲಿದ ಮಹಾಚೇತನ, ಇತಿಹಾಸ ಸ೦ಶೋಧಕ ಡಾ.ಶೀಲಾಕಾ೦ತ ಸರ್ ಕುರಿತಾಗಿ ಸಲ್ಲಿಸಿದ ನುಡಿನಮನ ಕವಿತೆ ತುಂಬಾ ಅಥ೯ಪೂಣ೯ವಾಗಿದೆ ಮೇಡ೦….ಅಭಿನ೦ದನೆಗಳು…..

Leave a Reply

Back To Top