ಕಥಾ ಸಂಗಾತಿ
ಕಾವ್ಯಮಾರ್ಗ!
ಕೆ.ಬಿ.ವೀರಲಿಂಗನಗೌಡ್ರ
ಆ
ಅನುದಾನಿತ ಸಾಲ್ಯಾಗ ಕಾರಕೂನ ಹುದ್ದೆ ಖಾಲಿ ಇತ್ತು ಹೀಗಾಗಿ ಕಚೇರಿಯ ಎಲ್ಲಾ ಕೆಲಸ ಪರಪ್ಪನ್ನೊ ಹೆಡ್ಮಾಸ್ತರ್ಗೆ ಅಮರ್ಕೊಂಡು ದೊಡ್ಡ ತಲಿಬ್ಯಾನಿ ಎಬ್ಬಿಸಿದ್ದವು. ಹೊಲಿಗೆ ಮಾಸ್ತಾರೊಬ್ಬ ಹೆಚ್ವುವರಿಯಾಗಿ ಸಾಲಿಗೆ ಬಂದಾಕ್ಷಣ ಪರಪ್ಪ ಒಳಗೊಳಗ ‘ದೇವರ ಬಂದ್ಹಂಗ ಬಂದಿ ಬಾ ಮಾರಾಯ’ ಅಂದಕೊಂಡ.
ಹೊಲಿಗೆ ಕಲ್ಸೊ ಸಂಗಪ್ಪ ಮಾಸ್ತರ ವರ್ಗದ ಕೋಣೆಯೊಳಗಿನ ವರ್ಣಬೇದ, ವರ್ಗಬೇದ, ಜಾತಿಬೇದ ಹೀಗೆ ಹಲವು ಬೇದಗಳನ್ನೊ ಬಟ್ಟೆಗಳನ್ನೆಲ್ಲಾ ಒಟ್ಟುಮಾಡಿಕೊಂಡು ಒಂದಿಷ್ಟು ಅಲ್ಲಲ್ಲಿ ಕತ್ತರಿಸಿ, ಎಲ್ಲವನ್ನೂ ಕೂಡಿಸಿ ಸೌಹಾರ್ಧತೆಯ ದಾರದಿಂದ ಹೊಲಿದು ಮಕ್ಕಳ ಪಾಲಿಗೆ ಆಪ್ತನಾಗಿದ್ದ. ಸಂಗಪ್ಪನ್ನ ಮೆಲ್ಲಕ ಹೊಲಿಯೊ ಕೆಲ್ಸ ಬಿಡಿಸಿ, ಪರಪ್ಪ ತನ್ನ ಕೈ ಕೆಳಗ ಕಾರಕೂನ ಕೆಲಸ ಮಾಡ್ಸಾಕ ಸುರುಹಚ್ಗೊಂಡಬಿಟ್ಟ. ಅದೊಂದು ದಿನ ‘ಸಂಗಪ್ಪ ಸರ್ ಬರ್ರಿ’ ಅಂತಾ ತಾಲೂಕಾ ಅನುದಾನಿತ ಶಿಕ್ಷಕರ ಸಭೆಗೆ ಕರ್ಕೊಂಡ ಹೋದ್ರು, ಸಭೆ ಆಗಲೇ ಆರಂಭಾಗಿತ್ತು, ಓರ್ವ ಹಿರಿಯ ಶಿಕ್ಷಕರು ಮೈಕ್ ಹಿಡಕೊಂಡು “ಶಿಕ್ಷಕ ಅಂದ್ರೆ ಯಾರು? ಹೇಗಿರಬೇಕು? ಅನ್ನೊ ಕುರಿತು ಬಲ್ಲಂಗ್ ಉಪದೇಶಕ್ಕಿಳಿದಿದ್ದರು. “ಮಕ್ಕಳು ನಮ್ಮನ್ನು ನೋಡ್ತಾರೆ ನಾವು ಅವರ ಕಣ್ಣಾಗ ತಪ್ಪಾಗಿ ಉಳಿಬಾರದು, ಅನ್ನ ನೀಡೊ ಸಂಸ್ಥೆಗೆ ಅನ್ಯಾಯ ಮಾಡಬಾರದು” ನೀತಿ ನಿಯತ್ತು ನೈತಿಕತೆ ಹೀಗೆ ಏನೇಲ್ಲಾ ಹೇಳಿ ಕಡೆಗೆ ಮಾತು ಮುಗಿಸಿದರು.
ಸಭೆಯಲ್ಲಿ ಸಂಗಪ್ಪ ಮಾಸ್ತರ ಪಕ್ಕದಲ್ಲಿ ಕೂತಿದ್ದ ಪರಿಚಿತರೊಬ್ಬರು “ಸರ್, ಬರ್ರಿ ಒಂದರ್ದ ಕಪ್ಪ ಚಾ ಕುಡ್ದ ಬರುವಾ” ಅಂತಾ ಹೊರಗ ಕರ್ಕೊಂಡ ಹೋಗಿ “ಇಷ್ಟೊತನ ಮೈಕ್ ಹಿಡ್ಕೊಂಡು ಏನೇನೆಲ್ಲಾ ಬೊಗಳಿದ್ನಲ್ಲ ಆ ಮನಷ್ಯಾ ಬರೀ ತೊಳ್ಸೊ ಕೆಲ್ಸಾನೇ ಮಾಡೊದು. ‘ಹೇಳೊದು ಶಾಸ್ತ್ರ ತಿನ್ನೊದು ಬದ್ನೆಕಾಯಿ’ ಥೊ ಭಾಳಂದ್ರ ಭಾಳಾ ಹಲ್ಕಟ್ ಅದಾನ್ರಿ ಅವನೌನ್. ಅವರಪ್ಪನೂ ಹಿಂದ ಮಾಸ್ತರಾಗಿದ್ದ, ಮದುವೆಯಾಗಿ ಮಕ್ಕಳುಮರಿ ಆದ ಮ್ಯಾಲೆ ತನ್ನಗೂಡ ನೌಕರಿ ಮಾಡತಿದ್ದ ಶಿಕ್ಷಕಿ ಜೊತೆ ಸಂಬಂಧ ಇಟಕ್ಕೊಂಡು ಆಕಿಗೂ ಮಕ್ಕಳುಮರಿ ಕರುಣಿಸಿದ್ದ. ಇಂತಹ ಪುಣ್ಯಾತ್ಮನ ಮಗ ನಮಗಿಂದು ನೈತಿಕತೆಯ ಕುರಿತು ಉಪದೇಶ ಮಾಡಾಕ್ಹತ್ಯಾನ. ಅಲ್ರಿ ಇನ್ನೊಬ್ರಕಡೆ ಬೊಟ್ಟಮಾಡಿ ತೋರ್ಸೊ ಮುನ್ನ, ತನ್ನಕಡೆ ಎಷ್ಟದವಂತ ನೋಡ್ಕೊಬೇಕಲ್ಲ, ಯಾಕಂದ್ರ ನಾಕಮಕ್ಳಗೆ ಪಾಠ ಮಾಡವರಿವರು. ಇನ್ನೊಂದ ದುರಂತ ಹೇಳ್ತಿನಿ ಕೇಳ್ರಿ ಅವ ಹೆಡ್‍ಮಾಸ್ತಾರಾಗಿ ಹ್ಯಾಂಗ್ ಬಡ್ತಿ ಪಡ್ಕೊಂಡಾನಂದ್ರ, ನಮ್ಮ ಇಲಾಖಾ ನೇಮದ ಪ್ರಕಾರ ಪಾಪ ಒಬ್ಬ ದಲಿತ ಸಮುದಾಯದ ಶಿಕ್ಷಕ ಹೆಡ್ಮಾಸ್ತರಾಗಬೇಕಿತ್ತು, ಅವನನ್ನ ಹೆದರ್ಸಿ ಬಡ್ತಿ ನಿರಾಕರಣೆಯ ಪತ್ರಕ ಸಹಿ ತಗೊಂಡು ತಾಬಡತುಬ್ಡ ತಾ ಹೆಡ್‍ಮಾಸ್ತರನ್ನೊ ಬಡ್ತಿ ಹೊಡ್ಕೊಂಡಾನ್ರಿ. ಅಲ್ರಿ ನಮ್ದ ನಮಗ ಉಳಿವಲ್ದು, ಇನ್ನೊಬ್ರ ಪಾಲಿಗೆ ಮಿಸಲಾಗಿದ್ದಿದ್ದನ್ನ ಇವ ಮೋಸಮಾಡಿ ಕಸ್ಗೊಂಡ ತಿಂತಾನಂದ್ರ ದಕ್ಕತೈತೆನ್ರಿ? ನೋಡ್ರಿಬೇಕಾರ ಎಲ್ಲಾ ಇಲ್ಲೇ ಕಕ್ಕಿ ಹೊಕ್ಕಾನ.
ಮಕ್ಕಳಿಗೆ ಪಾಠ ಮಾಡತಾನನ್ನೊ ಕಾರಣಕ್ಕನ ಅವ್ನಗೆ ಸರಕಾರ ಕೈತುಂಬ ಸಂಬಳ ಕೊಡತೈತಿ. ಸರಕಾರಿ ಅನ್ನ ತಿನ್ತಾ, ತನಗ ದುಡ್ಡ ತಗೊಂಡು ನೌಕರಿ ಕೊಟ್ಟಿರೊ ಖಾಸಗಿ ಸಂಸ್ಥೆಯ ಅನ್ನ ತಿನ್ನುತ್ತಿರುವೆ ಅಂತಾನಂದ್ರ ಅವ್ನ ಬಾಯಾಗ ನಾಲಗೆ ಐತಂತಿರಾ? ಥೂ ಎರಡತಲಿ ಹಾವಿನಂತಹವನ ಹಡಬೆ ದಂದೆ ಹಗಲು ರಾತ್ರಿ ಕುಂತ ಹೇಳಿದರೂ ಅದೇನು ತೀರುವಂತದ್ದಲ್ಲ ಬಿಡ್ರಿ.” ತಾಸಗಂಟ್ಲೆ ಭಾಷಣ ಬಿಗಿದವನ ಇತಿಹಾಸವನ್ನೆಲ್ಲಾ ಪರಿಚಿತರಿಂದ ಕೇಳಿದ್ಮೇಲೆ ಸಂಗಪ್ಪ ಮಾಸ್ತರಗ ಬಸವಣ್ಣ ಬರೆದ “ವಿಪ್ರರು ನುಡಿದಂತೆ ನಡೆಯರು, ತಮಗೊಂದು ಬಟ್ಟೆ ಶಾಸ್ತ್ರಕ್ಕೊಂದು ಬಟ್ಟೆ” ಅನ್ನೊ ವಚನದ ಸಾಲುಗಳು ಕಣ್ಣಮುಂದೆ ಬಂದವು.
ಹೀಗೆ
ಆಗಾಗ ಪರಪ್ಪ ಸಂಗಪ್ಪನನ್ನ ಸಭೆ ಸಮಾರಂಭಕ್ಕಂತ ಕರ್ಕೊಂಡು ಹೋಗಿದ್ದರ ಪರಿಣಾಮ ಅವರಿಗೆ ಹತ್ತು ಹಲವು ಮುಖವಾಡಗಳ ಪರಿಚಯವಾಯ್ತು. ಜಾತಿ ಧರ್ಮ ಸಂಪ್ರದಾಯ ಸ್ವ-ಪ್ರತಿಷ್ಠೆಯ ಚೌಕಟ್ಟಿನಡಿಯಲ್ಲಿ ಸಿಲುಕಿಕೊಂಡಿರುವ, ಮೇಲುರಿಮೆಯ ಭ್ರಮೆಯಲ್ಲಿರುವ, ಎಡಬಿಡಂಗಿ, ಬಕೇಟ್ ಹಿಡಿವ, ಬೂಟು ನೆಕ್ಕುವ, ಅಡ್ನೇಡಿ, ಚಾಡಿಕೊರ, ಗುಲಾಮಿ ಶಿಕ್ಷಕರೇ ಇಂದಿನ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಯ್ಕೆಯಾಗುತ್ತಿರುವ, ಬಡ್ತಿ ಪಡೆಯುತ್ತಿರುವ ಪ್ರಸಂಗಗಳನ್ನು ನೋಡಿದಮ್ಯಾಗ ಸಂಗಪ್ಪ ಮಾಸ್ತರ ಸಣ್ಣಕ ಕತಿ ಕವಿತೆ ಅಂತ ಏನೇನೊ ಬರ್ಕೊಂಡು ತನ್ನ ಪಾಡಿಗೆ ತಾ ತಣ್ಣಗದಾನ. ಮಾಸ್ತರಾಕಿ ಬಿಡಿಸಿ ಕಾರಕೂನಕಿ ಕೆಲಸಕ್ಹಚ್ಚಿರೊ ಹೆಡ್‍ಮಾಸ್ತರನನ್ನೇ ಬಂಡಾಯ ಕವಿತೆಯನ್ನಾಗಿಸಿ, ಕಾರಕೂನ ಕವಿಯಾಗ್ಯಾನ, ಒಟ್ಟಿನಮ್ಯಾಗ ಕಾಲ ಕವಿಯ ಚಿವುಟಿ ಕವಿತೆಯ ಚಿಗುರಿಸುತ್ತಿದೆ. ವರ್ಗದ ಕೋಣೆಯಿಂದ ಹೊರಗುಳಿಸಿದರೂ ಸಂಗಪ್ಪ ಕಾವ್ಯಮಾರ್ಗದ ಮೂಲಕ ಮತ್ತೆ ಮಕ್ಕಳೆದೆಗೆ ಇಳಿದು ಹೊಲಿಯುತ್ತಿದ್ದಾನೆ.
–ಕೆ.ಬಿ.ವೀರಲಿಂಗನಗೌಡ್ರ.
(ಇದೊಂದು ಕಾಲ್ಪನಿಕ ಕಥೆ)
ಕತೆ ಇಲಾಖೆಯೊಳಗಿನ ನಡೆದಿರಬಹುದಾದ ವಾಸ್ತವ ಅಂಶವನ್ನು ವಿತ್ರಿಸಿದೆ.