ನಿಮ್ಮೊಂದಿಗೆ………
ಕು.ಸ.ಮಧುಸೂದನರಂಗೇನಹಳ್ಳಿ
ಪ್ರಿಯರೆ,
‘ಸಂಗಾತಿ’ ಡಿಜಿಟಲ್ ಕನ್ನಡ ಸಾಹಿತ್ಯ ಪತ್ರಿಕೆಯನ್ನು ನಿಮ್ಮ ಮುಂದಿಡಲು ಸಂತೋಷವಾಗುತ್ತಿದೆ.
ಇವತ್ತು ಮುದ್ರಣ ಮಾಧ್ಯಮದಿಂದ ಜನ ದೂರ ಸರಿಯುತ್ತಿದ್ದರೆ, ಅದಕ್ಕೆ ಕಾರಣ ವೇಗ ಹೆಚ್ಚಿಸಿಕೊಳ್ಳುತ್ತಿರುವ ಜನರ ಜೀವನ ಶೈಲಿ ಮತ್ತು ಅಗ್ಗದ ದರದಲ್ಲಿ ದೊರೆಯುತ್ತಿರುವ ಅಂತರ್ಜಾಲ ಸಂಪರ್ಕಗಳು,ಪ್ರತಿಯೊಬ್ಬರ ಕೈಲೂ ಇರುವ ಸ್ಮಾರ್ಟ್ ಪೋನುಗಳೇ ಕಾರಣ. ಇದರ ಜೊತೆಗೆ ದುಬಾರಿಯಾಗುತ್ತಿರುವ ಪುಸ್ತಕಗಳ ಬೆಲೆಯೂ ಒಂದು ಕಾರಣ!
ಮೊದಲಿನ ಹಾಗೆ ಪುಸ್ತಕವೊಂದನ್ನು ಕೈಲಿಹಿಡಿದು ಕೂತಲ್ಲೇ ಬೇರು ಬಿಟ್ಟು ಓದುವ ಪುರಸೊತ್ತು ಯಾರಿಗೂ ಇಲ್ಲ. ಆದರೆ ತಮ್ಮ ಟ್ಯಾಬು–ಫೋನುಗಳ ಮೂಲಕ,ಪ್ರಯಾಣ ಮಾಡುತ್ತಾ, ಮನೆಗೆಲಸ ಮಾಡುತ್ತಾ, ತಮ್ಮ ವೃತ್ತಿಯಲ್ಲಿತೊಡಗಿಸಿಕೊಂಡಿರುತ್ತಲೆ ಓದುವ ಅಭ್ಯಾಸಕ್ಕೆ ಜನ ಒಗ್ಗಿ ಹೋಗುತ್ತಿದ್ದಾರೆ.
ಇಂತಹ ಸನ್ನಿವೇಶದಲ್ಲಿ ಜನ ಮುದ್ರಿತ ಸಾಹಿತ್ಯವನ್ನೇ ಓದಬೇಕು, ಅದರಲ್ಲಿ ಸಿಗುವ ಓದಿನ ಸುಖವೇ ಬೇರೆ ಎಂಬ ಮಾತೂ ಹಳಹಳಿಕೆಯ ಮಾತು ಕೇಳಿಬರುತ್ತಿದೆಯಾದರೂ, ಜನರ ವೇಗದ ಬದುಕಿನಲ್ಲಿ ಡಿಜಿಟಲ್ ಪತ್ರಿಕೆಗಳು,ಇ–ಪುಸ್ತಕಗಳು ಸೇರಿ ಹೋಗುತ್ತಿವೆ.
ಜನರ ಇಂತಹ ಸಾಹಿತ್ಯದ ಓದಿನ ಅಗತ್ಯಕ್ಕಾಗಿಯೇ ಸಂಗಾತಿ ಪತ್ರಿಕೆಯನ್ನು ರೂಪಿಸಲಾಗಿದೆ. ಇದು ನಮ್ಮ ಮೊದಲ ಪ್ರಯತ್ನವಾಗಿದ್ದು ನಿಮಗಿಷ್ಟವಾಗಬಹುದೆಂದು ನಂಬಿದ್ದೇನೆ. ಈ ಮೊದಲ ಸಂಚಿಕೆಯಲ್ಲಿ ಆಗಿರಬಹುದಾದ ನ್ಯೂನತೆಗಳನ್ನು ಸರಿಪಡಿಸಿಕೊಂಡು ಮುನ್ನಡೆಯ ಬೇಕೆಂಬ ಅರಿವು ನನಗಿದೆ. ಈನಿಟ್ಟಿನಲ್ಲಿ ನಿಮ್ಮ ಸಲಹೆ ಸಹಕಾರಗಳು ಬೇಕಿವೆ.
ಸಂಗಾತಿಗೆ ಹಿರಿಯರು ಕಿರಿಯರು ಎಂಬ ಬೇಧವಿಲ್ಲ.ಇಲ್ಲಿಎಲ್ಲರ ಬರಹಗಳೂ ಸಮಾನವಾಗಿ ಪ್ರಕಟವಾಗುತ್ತವೆ. ಆದರೆ ಇಂತಹ ಹೊಸ ಪತ್ರಿಕೆಯಲ್ಲಿ ಬರೆಯುವ ಉಧಾರತೆಯನ್ನು ಪ್ರಸಿದ್ದಬರಹಗಾರರು ತೋರುತ್ತಾರೆಂದು ನಂಬಿಕೊಂಡಿದ್ದೇನೆ. ಈದಿಸೆಯಲ್ಲಿ ಹಿರಿಯ ಬರಹಗಾರರನ್ನು ಸಂಪರ್ಕಿಸಲಾಗುತ್ತಿದೆ…
ರಾಜ್ಯದ ಮಲೆನಾಡಿನ ಮೂಲೆಯ ಹಳ್ಲಿಯೊಂದರಲ್ಲಿ ಕೂತು ಇಂತಹ ಪತ್ರಿಕೆ ನಡೆಸುವುದು ಕಷ್ಟವೇ ಸರಿ. ದಿನದ ಬಹುತಾಸು ವಿದ್ಯುತ್ ನಿಲುಗಡೆಯಾಗುವ,ಆಗಾಗ ಮೊಬೈಲ್ ಟವರುಗಳು ಕೈ ಕೊಡುವ ಹಳ್ಲಿಯಲ್ಲಿ ಕೂತು ಪ್ರತಿದಿನ ಈ ಬ್ಲಾಗನ್ನು ಅಪ್ ಡೇಟ್ ಮಾಡುವುದು ಕಷ್ಟದ ಕೆಲಸ. ಹಾಗಾಗಿ ಮೊದಲ ಕೆಲವು ತಿಂಗಳುಗಳ ಕಾಲ ವಾರದಲ್ಲಿ ಒಂದು ದಿನ ಅಂದರೆ ಪ್ರತಿ ಶನಿವಾರ ಅಪ್ ಡೇಟ್ ಮಾಡಲಾಗುವುದು…….
ಇದೆಲ್ಲಕ್ಕೂ ಮುಖ್ಯವಾಗಿ ನಿಮ್ಮಲ್ಲಿ ಹೇಳಬೇಕಾಗಿರುವುದು ಕ್ಷಮಿಸಿ, ಕೇಳಬೇಕಾಗಿರುವುದು ಸಹೃದಯ ಓದುಗರಾಗಿ ಸಂಗಾತಿಯನ್ನು ಓದಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ. ಸೂಕ್ತ ಸಲಹೆಗಳನ್ನು ನೀಡಿ….
ನೀವುಗಳು ನಮ್ಮ ಜೊತೆಗಿರುತ್ತೀರೆಂಬ ನಂಬಿಕೆಯೇ ನಮ್ಮಿ ಪ್ರಯತ್ನದ ಹಿಂದಿರುವ ಪ್ರೇರಣೆ.