ಕಾವ್ಯಸಂಗಾತಿ
ಗಜಲ್
ಜಯಂತಿ ಸುನಿಲ್
ಅವಳೆಂದರೆ ಬಣ್ಣಗಳ ಸಹಜ ಸಮಾಗಮದಲ್ಲಿ ಮಿಂದೇಳುವ ಕಾಮನಬಿಲ್ಲಿನಂತೆ..
ಅವಳ ನೆನಪೆಂದರೆ ನಿತ್ಯ ಕ್ರಿಯೆಯಲ್ಲಿ ಹಾದುಹೋಗುವ ಕರ್ಮಪದದಂತೆ..!!
ಮಾತು ಮೀರಿದ ಮೌನ ಅವಳು
ಉರಿವ ಧಗೆಯ ಒಡಲಲಿ ಧರಿಸಿದರೂ ವಾತ್ಸಲ್ಯ ತುಂಬಿದ ಮನ ಉಕ್ಕುವ ಕಡಲತೆರೆಗಳಂತೆ..!!
ಬದುಕಿನ ಬವಣೆಗೆ ಮೈಯೆಲ್ಲಾ ಬೆವರನಿಯಲ್ಲಿ ತೊಯ್ದರೂ..
ನಿಲುವೆತ್ತಿನ ತಾಯ್ತೆನವೆತ್ತ ಅವಳು ಸದಾ ತೊನೆವ ಅಂತಃಕರಣವಿದ್ದಂತೆ..!!
ಜೀವನದ ಸಾರ್ಥಕತೆಯನ್ನು ನಮ್ಮೊಳಗೆ ಹುಡುಕಿದವಳು…
ಸ್ವಚ್ಛ ಮನಸ್ಸಿನ ಅಪರೂಪದ ಜೀವಸೆಲೆ ಹೊರೆವ ಭೂಮಿಯಂತೆ..!!
ಅವಳ ಹೆಜ್ಜೆಗಳ ಸಪ್ಪಳ ಸದಾ ನನ್ನೆದೆಯಲಿ ಮಾರ್ದನಿಸುತ್ತಿದೆ..
ದೇಹದ ಕಣ ಕಣದಲ್ಲಿ ಸದ್ದಿಲ್ಲದೇ ನೀರವವಾಗಿ ಅನುರುಣಿಸುವ ಗುಪ್ತಗಾಮಿನಿಯಂತೆ..!!
ಮೌನವಾದಷ್ಟು ಮನಸ್ಸಿಗಿಳಿಯುವ ಶಬ್ಧಗಳ ಮಧ್ಯದ ಪದ ಅವಳು..
ಅವಳ ಮೊಗದ ಮೇಲೆ ಮೂಡಿದ ಒಂದೊಂದು ನೆರಿಗೆ ನುಡಿವ ಒಂದೊಂದು ಕಥೆಯಿದ್ದಂತೆ..!!
ನಟನೆಗೆ ಅವಕಾಶ ಇಲ್ಲದ ಹೃದಯ ನನ್ನಮ್ಮನದು…
ಬದುಕು ಜಯಿಸುವುದ ಕಲಿಸಿದವಳ ಮಡಿಲ ಸುಖಕ್ಕೆ ಸ್ವರ್ಗವೂ ನಾಚಿ ಕರವ ಜೋಡಿಸುವುದಂತೇ..!!
#ಈ ಕವಿತೆ ಎಲ್ಲಾ ಅಮ್ಮಂದಿರಿಗೂ ಸಮರ್ಪಣೆ
ತುಂಬಾ ಸ್ವಾರಸ್ಕರವಾಗಿದೆ
ಧನ್ಯವಾದಗಳು ಸರ್