ಕಾವ್ಯ ಸಂಗಾತಿ
ಲೇಖನಿ ಎಂದರೆ
ವಾಣಿ ಯಡಹಳ್ಳಿಮಠ
ಲೇಖನಿ ಎಂದರೆ ನನಗೆ ,
ಅಳುವ ನನ್ನ ಬಿಗಿದಪ್ಪಿ ಮುದ್ದಿಸುವ ಅಮ್ಮಳಂತೆ
ಬಿದ್ದಾಗ ಎಬ್ಬಿಸಿ ಎದೆಗಪ್ಪುವ ಅಪ್ಪನಂತೆ
ಅನುನಯಿಸಿ ಆಸರೆಯಾಗುವ ಅಕ್ಕರೆಯ ಅಕ್ಕಳಂತೆ
ಕಣ್ಣೊರೆಸಿ ಕೈ ಹಿಡಿದು ನೇವರಿಸುವ ನಲ್ಲನಂತೆ
ಗಾಯಕೆ ಮದ್ದಾಗುವ ಗೆಳತಿಯಂತೆ
ಬೆನ್ನು ತಟ್ಟಿ ಬೆಳಕಾಗುವ ಗುರುವಿನಂತೆ
ಲೇಖನಿ ಎಂದರೆ ,
ಪುಳಕಗೊಳಿಸಿದ ಪ್ರಥಮ ಪ್ರೇಮ
ಸಂತಸ ತರುವ ಸಾಂತ್ವನ
ಬಿಕ್ಕಳಿಕೆ ತರುವ ನೆನಪು
ನೋವು ಕರಗಿಸುವ ಕಂಬನಿ
ನಾಚಲೊಂದು ನೆಪ
ಸಂಭ್ರಮಿಸಲೊಂದು ಸ್ಪರ್ಶ
ಆಯಾಸಗೊಂಡ ಹಗಲಿಗೊಂದು ವಿರಾಮ
ನಿದ್ದೆಗೆಟ್ಟ ಇರುಳಿಗೊಂದು ಇಂಚರ
ಹಳಸಿದ ಹುಸಿ ನಗುವಿಗೊಂದು ಆಸರೆ
ಬದುಕ ಬೇಸರಕೊಂದು ಹೂನಗೆ
ಆಶೀರ್ವದಿಸಿ ಅನುಗ್ರಹಿಸಿದ ದೈವ
ಎದೆಭಾರವಿಳಿಸುವ ಲೇಖನಿಯಿದು
ನನ್ನೊಲವಿನ ನಲ್ಮೆಯ ಲೇಖನಿಯಿದು …