ಶಾಲಿನಿ ರುದ್ರಮುನಿ ಕವಿತೆ

ಕಾವ್ಯ ಸಂಗಾತಿ

ಗುರುವೆಂಬ ದಾಹ

ಶಾಲಿನಿ ರುದ್ರಮುನಿ

ಮನಬಂದಂತೆ ಸುರಿವ ಮಳೆಗೆ ಮನವು ಸಾಗಿರಲು/ಪ/
ನಿನ್ನಾಸರೆಯ ಹಾಡು ಹಾಡುತಿಹೆನು/ಅ ಪ/

ಜೀವ ಕಾನನದ ಚಿಂತೆಗಳ ಸುಳಿಯಲ್ಲಿ
ಕಣ್ಣು ಕಾಣದ ಗಾವಿಲ ನಾನಾಗಿಹೆನು/
ನಿನ್ನ ದರುಶನ ಮಾತ್ರದಿ ದೃಷ್ಟಿಯಲ್ಲಿ
ಸೃಷ್ಟಿಯ ಸೊಬಗ ಕಾಣುತಿಹೆನು//೧//

ಬಾಳ ಕಡಲ ಆಳದಗಲಗದ ಯಾತ್ರೆಯಲ್ಲಿ
ನಿನ್ನೊಂದು ಕರುಣದಲೆಯ ಸೋಕಿಹೆನು/
ದಿಕ್ಕು ತಪ್ಪಿದ ದಡವನು ಹುಡುಕುವಲ್ಲಿ
ಮತ್ತೆ ತಪ್ಪದಂತೆ ನಿನ್ನ ಅರಸುತಿಹೆನು//೨//

ಹಾದಿಯಿದೆ ಮಂಜು ಮುಸುಕಿನ ಎದೆಯಲ್ಲಿ
ಕೊಲ್ಮಿಂಚಿನ ನಿನ್ನಿರುವಲಿ ಕರಗುತಿಹೆನು/
ಅತುಲ ನೋವು ಗತಿಗೆಡಿಸುತಿರುವಲ್ಲಿ
ಶಮನದಲಿ ನಿನ್ನ ಬಳಿ ನಿಂತಿಹೆನು//೩//

ಪ್ರೀತಿ ಕಾಳಜಿ ಸೋತು ಸೊರಗುತಿಹುದಿಲ್ಲಿ
ಉಕ್ಕಿದೆದೆಗೆ ಹರಿಗೋಲು ನೂಕುತಿಹೆನು/
ಚಣದಿ ನಿನ್ನ ಕಾಣುವೆ ಅಂತರಂಗ ಧುನಿಯಲ್ಲಿ
ಮರೆತು ಚಿಂತೆಗಳ ಗೀತೆ ಹಾಡುತಿಹೆನು//೪//


Leave a Reply

Back To Top